varthabharthi


ಕರ್ನಾಟಕ

ಮಠಾಧೀಶರುಗಳು ನಡೆದಾಡುವ ರಾಜಕಾರಣಿಗಳಾಗಬಾರದು: ಬಿಎಸ್ ವೈ ಪರ ನಿಂತ ಸ್ವಾಮೀಜಿಗಳ ವಿರುದ್ಧ ಎಚ್.ವಿಶ್ವನಾಥ್ ಆಕ್ರೋಶ

ವಾರ್ತಾ ಭಾರತಿ : 22 Jul, 2021

ಮೈಸೂರು,ಜು.21: ಮಠಾಧೀಶರುಗಳು ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ರೀತಿ ನಡೆದಾಡುವ ದೇವರಾಗಬೇಕೆ ಹೊರತು ನಡೆದಾಡುವ ರಾಜಕಾರಣಿಗಳಾಗಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿರುವ ಮಠಾದಿಪತಿಗಳ ವಿರುದ್ಧ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಿಡಿಕಾರಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಠಾಧಿಪತಿಗಳು ಸರ್ವಧರ್ಮಗಳ ಪರ ಇರಬೇಕೆ ಹೊರತು ಜಾತಿ ಒಂದು ಪಕ್ಷ, ಓರ್ವ ವ್ಯಕ್ತಿಗಳ ಪರ ಅಲ್ಲ, ಯಡಿಯೂರಪ್ಪ ಮುಖ್ಯಮಂತ್ರಿಗಳಾಗುವ ವೇಳೆ  ಅವರ ಪರ ನಿಂತಿರುವ ಮಠಾಧೀಶರುಗಳ ಕೊಡುಗೆ ಏನು ಎಂದು ಪ್ರಶ್ನಿಸಿದರು. 

ಯಡಿಯೂರಪ್ಪ ಅವರನ್ನು ಪಕ್ಷ ಚೆನ್ನಾಗಿಯೇ ನಡೆಸಿಕೊಂಡಿದೆ.ಎಲ್ಲಾ ಜಾತಿಗಳಿಗೂ ಮಠಾಧೀಶರು ಇದ್ದಾರೆ. ನಮ್ಮ ಪರವಾಗಿ ಮಠಾಧೀಶರನ್ನು ಬೀದಿಗೆ ತಂದು ನಿಲ್ಲಿಸುವುದು ಶೋಭೆಯಲ್ಲ. ಮುಖ್ಯಮಂತ್ರಿ ಜಾತಿವಂತನಾಗಬಾರದು, ನೀತಿವಂತನಾಗಬೇಕು. ತಾವು ಯಾವ ಸಂದೇಶ ರವಾನೆ ಮಾಡುತ್ತಿದ್ದೀರಾ ಮಠಾಧೀಶರೇ.? ಬಸವ ಶ್ರೀ ಪ್ರಶಸ್ತಿ ಪಡೆದ ಮುರುಗಾ ಶ್ರೀಗಳು ಬೀದಿಗೆ ಬಂದು ನಿಂತು, ಜಾತಿ ಬಗ್ಗೆ ಮಾತನಾಡುತ್ತಿದ್ದಾರೆ. ನಿಮ್ಮ ಪ್ರಶಸ್ತಿಗೆ ಏನಾದ್ರೂ ಬೆಲೆ ಇದಿಯಾ, ಬಸವಣ್ಣ ಅವರು ಜಾತಿಗಿಂತ ನೀತಿ ಮುಖ್ಯ ಅಂತ ಹೇಳಿದ್ದರು. ಕೆಂಗಲ್ ಹನುಮಂತಯ್ಯ ಅವರು ಸರ್ಕಾರದ ಕೆಲಸ ದೇವರ ಕೆಲಸ ಅಂತ ವಿಧಾನಸೌದದ ಮುಂದೆ ಬರೆಸಿದ್ದರು. ಆದರೀಗ ಸರ್ಕಾರದ ಕೆಲಸ ಸ್ವಾಮಿಗಳ ಕೆಲಸ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದರು.

ಇಂದು ಯಡಿಯೂರಪ್ಪನ ಪರ ಬೀದಿಗೆ ಬಂದಿರುವ ಕಾಣಿಕೆ ಪಡೆಯುವ ಸ್ವಾಮೀಜಿಗಳು ಕೋವಿಡ್ ಸಂಕಷ್ಟದ ಸಮಯದಲ್ಲಿ ಎಲ್ಲಿ ಹೋಗಿದ್ದರು. ಮಠದಿಂದ ಹೊರ ಬರದೆ ಮಠಗಳ ಬಾಗಿಲುಗಳನ್ನು ಬಂದ್ ಮಾಡಿಕೊಂಡಿದ್ದರು. ಇದರ ನಡುವೆ ಸುತ್ತೂರು ಮಠದ ಶ್ರೀಗಳು ಬಡವರಿಗೆ ನೆರವಾಗಿ ಸಹಾಮಾಡಿದ್ದಾರೆ ಎಂದು ಹೇಳಿದರು.

ಧರ್ಮದಲ್ಲಿ ರಾಜಕಾರಣ ಇರಬಾರದು, ರಾಜಕಾರಣದಲ್ಲಿ ಧರ್ಮ ಇರಬೇಕು, ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದಲೇ ನಾವೆಲ್ಲರೂ ಇರುವುದು. ಸಂವಿಧಾನದ ಅಡಿಯಲ್ಲೇ ಎಲ್ಲಾ ರಂಗಗಳು ಕೆಲಸ ಮಾಡುತ್ತಿರುವುದು. ಯಾವ ಸ್ವಾಮೀಜಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವನ್ನು ಓದಿಕೊಂಡಿದ್ದೀರಾ? ಮಠ, ಧರ್ಮಾಧಿಕಾರಿಗಳು ಮೊದಲು ಸಂವಿಧಾನ ಓದಿಕೊಳ್ಳಬೇಕು, ಅದಕ್ಕಿಂತ ನಾನು ದೊಡ್ಡವನು ಅಂದುಕೊಳ್ಳಬಾರದು. ಈ ದೇಶದಲ್ಲಿ ಸಂವಿಧಾನವೇ ಸಾರ್ವಭೌಮವಾಗಿದೆ ಎಂದು ಹೇಳಿದರು.

ಧರ್ಮಾಧಿಕಾರಿಗಳು ಭ್ರಷ್ಟಾಚಾರಿಗಳ ಪರ ನಿಂತಿರುವುದು ಸರಿಯಲ್ಲ, ಧರ್ಮಾಧಿಕಾರಿಗಳನ್ನು ಬೀದಿಗೆ ಬರುವಂತೆ ಮಾಡಿ ಅವರ ಬೆಂಬಲ ಗಳಿಸಿಕೊಳ್ಳಲು ಪ್ರತ್ನಿಸುತ್ತಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಅವರು ಎರಡೂ ಬಾರಿಯೂ ಪರಿಸ್ಥಿತಿಯ ಶಿಶುವಾಗಿ ಮುಖ್ಯಮಂತ್ರಿ ಆದರು. ತಮ್ಮ ಕುಟುಂಬದವರ ಸ್ವಯಂಕೃತ ಅಪರಾಧದಿಂದ ಜೈಲು ಪಾಲಾದರು. ಬಿಜೆಪಿ ಯಡಿಯೂರಪ್ಪ ಅವರನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಿತ್ತು. ಆ ವೇಳೆ ಮಠಾಧೀಶರುಗಳು ಯಡಿಯೂರಪ್ಪ ಅವರ ಪರ ಏಕೆ ನಿಲ್ಲ? ಕೆಜೆಪಿ ಕಟ್ಟಿದಾಗಲೂ ಮಠಾಧೀಶರು ಇವರ ಪರ ಏಕೆ ಬರಲಿಲ್ಲ ಎಂದು ಪ್ರಶ್ನಿಸಿದರು.

ನಾವು 17 ಜನ ಬಿಜೆಪಿಗೆ ಬಂದೆವು, ನಾವ್ಯಾರು ಲಿಂಗಾಯಿರಲ್ಲ, ನಾವು ಯಡಿಯೂರಪ್ಪ ಅವರನ್ನು ಜಾತಿಯಿಂದ ನೋಡಲಿಲ್ಲ. ಅವರೊಬ್ಬ ಹೋರಾಟಗಾರ ಎಂದು ಪಕ್ಷಕ್ಕೆ ಬಂದೆವು. ಆದರೆ ಎರಡು ಬಾರಿ ಹೋರಾಟಗಾರನ ಕೈಗೆ ಅಧಿಕಾರ ಸಿಕ್ಕಿದಾಗ ಏನಾಯಿತು. ಜೈಲಿಗೆ ಯಾಕೆ ಹೋದರು. ನಾಲಿಗೆಗೆ ನಡೆಯೋ ನಾಯಕ ಯಾರಾದು ಇದ್ದರೆ ಯಡಿಯೂರಪ್ಪ ಅಂತ ಹೇಳುತ್ತಿದ್ದೆವು. ಆದರೆ ಇವತ್ತು ಯಡಿಯೂರಪ್ಪ ತಮ್ಮ ನಾಲಿಗೆ ಮತ್ತು ಎರಡು ಕೈಗಳನ್ನು ಮಗನಿಗೆ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳಾದರು, ಆದರೆ ಎರಡು ಬಾರಿಯೂ  ಬಹುಮತದಿಂದ ಅಧಿಕಾರಕ್ಕೆ ಬರಲಿಲ್ಲ, ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗಲೂ ನಿಮಗೆ ಗೌರವಯುತ ಬೀಳ್ಕೊಡುಗೆ ಸಿಗಲಿಲ್ಲ, ಆಗ ಯಾಕೆ ಸ್ವಾಮೀಜಿಗಳು ಯಡಿಯೂರಪ್ಪ ಪರ ನಿಲ್ಲಲಿಲ್ಲ? ಒಕ್ಕಲಿಗ, ಕುರುಬ ಸೇರಿದಂತೆ ಬೇರೆ ಸಮುದಾಯದ ಶಾಸಕರ ಸಹಕಾರದಿಂದ ಮುಖ್ಯಮಂತ್ರಿ ಆಗಿರುವುದು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಮಠಾಧೀಶರ ಕೊಡುಗೆ ಏನು ಎಂದು ಮಠಾಧೀಶರ ವಿರುದ್ಧ ವಾಗ್ದಾಳಿ ನಡೆಸಿದರು.

ಜನರ ಸರ್ಕಾರ ಮುಖ್ಯವೇ ಹೊರತು ಮಠಾಧೀಶರ ಸರ್ಕಾರವಲ್ಲ, ಜನರ ಸರ್ಕಾರ ದಾರಿ ತಪ್ಪಿದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಎಚ್ಚರ ವಹಿಸುತ್ತವೆ. ನಮ್ಮ ನಾಡಿನ ಧರ್ಮಾಧಿಕಾರಿಗಳು ಹೇಳಿಕೆ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ, ಸಂವಿಧಾನದ ಮುಂದೆ-ಹಿಂದೆ ರಾಜಕಾರಣಕ್ಕಿಂತ ಮೀರಿ ಮಠಾಧೀಶರು ಪಾತ್ರ ವಹಿಸುತ್ತಿದ್ದಾರೆ. ಮಠ ಮಾನ್ಯಗಳು ಎಲ್ಲಾ ಸಮಾಜಕ್ಕೂ ಇವೆ. ಮಠಗಳು ರಾಜಕೀಯ ಕೇಂದ್ರಗಳಲ್ಲ, ಮಠಗಳು ಸಮಾಜದ ಭಾಗವಾಗಬೇಕು, ರಾಜಕಾರಣ ಅಥವಾ ಅಧಿಕಾರದ ಭಾಗವಾಗಬಾರದು ಎಂದು ಹೇಳಿದರು.
ನಾನು ಇವತ್ತು ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇನೆ. ರಾಜ್ಯದ ಆಡಳಿತ ಅಭಿವೃದ್ಧಿ ದೃಷ್ಟಿಯಿಂದ, ಬಿಜೆಪಿ ಪಕ್ಷದ ಭವಿಷ್ಯದ ಹಿತದೃಷ್ಟಿಯಿಂದ ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿದ್ದ ಯಡಿಯೂರಪ್ಪ ಅವರ ಗೌರವಯುತ ನಿರ್ಗಮನಕ್ಕೆ ಹೈಕಮಾಂಡ್ ಸೂಚನೆ ಕೊಟ್ಟಿದೆ. ಈ ಪರಿಸ್ಥಿತಿಯನ್ನು ಮಠಾಧೀಶರು ಕ್ಲಿಷ್ಟ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ರಾಜ್ಯದಲ್ಲಿ ನಿಜಲಿಂಗಪ್ಪ, ದೇವರಾಜ ಅರಸು, ದೇವೇಗೌಡ, ಎಸ್.ಬಂಗಾರಪ್ಪ, ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಎಂಥಹವರು ಮುಖ್ಯಮಂತ್ರಿಳಾಗಿದ್ದರು. ಎರಡು ಬಾರಿಯೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾದರು, ಆದರೆ ಗೌರವಯುತ ನಿರ್ಗಮನ ಆಗುತ್ತಿಲ್ಲ, ರಾಜಕಾರನ ಸ್ವಾಮಿಗಳ ಕೈಗೆ ಹೋಗಬಾರದು. ಸ್ವಾಮಿಗಳು ಸರ್ಕಾರದ ಭಾಗ ಅಲ್ಲ ಎಂದು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)