varthabharthi


ರಾಷ್ಟ್ರೀಯ

ಭೂ ವ್ಯಾಜ್ಯ ಪ್ರಕರಣ: ಸುಪ್ರೀಂಕೋರ್ಟ್ ವಿಚಾರಣೆಗೆ ಮುನ್ನ ಪ್ರಾಣ ಬಿಟ್ಟ ಶತಾಯುಷಿ

ವಾರ್ತಾ ಭಾರತಿ : 22 Jul, 2021

ಹೊಸದಿಲ್ಲಿ: ಭೂ ವ್ಯಾಜ್ಯ ಪ್ರಕರಣವೊಂದರಲ್ಲಿ 1968ರಿಂದಲೂ ನ್ಯಾಯಕ್ಕಾಗಿ ಹೋರಾಡುತ್ತಿದ್ದ ವ್ಯಕ್ತಿಯ ಮನವಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಆಂಗೀಕರಿಸಿದೆ. ಆದರೆ ಇದಕ್ಕೂ ಮುನ್ನವೇ 108ರ ವೃದ್ಧ ಪ್ರಾಣ ಬಿಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

27 ವರ್ಷಗಳ ಕಾಲ ಮುಂಬೈ ಹೈಕೋರ್ಟ್‌ನಲ್ಲಿ ಬಾಕಿ ಇದ್ದ ಪ್ರಕರಣವನ್ನು ವಜಾಗೊಳಿಸಲಾಗಿತ್ತು. ಈ ತೀರ್ಪಿನ ವಿರುದ್ಧ ವಿಳಂಬವಾಗಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಜುಲೈ 12ರಂದು ಆಂಗೀಕರಿಸಿತ್ತು. ಅರ್ಜಿದಾರ ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದು, ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮುಂಬೈ ಹೈಕೋರ್ಟ್‌ನ ತೀರ್ಪಿನ ಬಗ್ಗೆ ಕಕ್ಷಿದಾರರಿಗೆ ತೀರಾ ವಿಳಂಬವಾಗಿ ತಿಳಿಯಿತು ಎಂದು ಸೋಪನ್ ನರ್ಸಿಂಗ ಗಾಯಕ್ವಾಡ್ ಅವರ ಪರ ವಕೀಲರು ಮಂಡಿಸಿದ್ದ ವಾದವನ್ನು ಮಾನ್ಯ ಮಾಡಿದ ಸುಪ್ರೀಂಕೋರ್ಟ್, ಮೇಲ್ಮನವಿಯನ್ನು ವಿಚಾರಣೆಗೆ ಆಂಗೀಕರಿಸಿತ್ತು.

"ದುರಾದೃಷ್ಟವಶಾತ್ ವಿಚಾರಣಾ ನ್ಯಾಯಾಲಯದಿಂದ ಸುಪ್ರೀಂಕೋರ್ಟ್‌ವರೆಗೂ ಈ ನ್ಯಾಯದ ಹೋರಾಟ ನಡೆಸುತ್ತಾ ಬಂದ ವ್ಯಕ್ತಿ, ತನ್ನ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಆಂಗೀಕರಿಸಿದೆ ಎಂಬ ಸುದ್ದಿ ತಿಳಿಯಲು ಬದುಕಿ ಉಳಿದಿಲ್ಲ" ಎಂದು ಅರ್ಜಿದಾರರ ವಕೀಲ ವಿರಾಜ್ ಕದಂ ಹೇಳಿದರು.

"ಜುಲೈ 12ರಂದು ಇವರ ಅರ್ಜಿಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳುವ ಮುನ್ನವೇ ಅವರು ಮೃತಪಟ್ಟಿದ್ದಾರೆ. ಆದರೆ ಗ್ರಾಮೀಣ ಪ್ರದೇಶದವರಾದ ಅವರು ಮೃತಪಟ್ಟ ಮಾಹಿತಿ ವಿಚಾರಣೆಯ ಬಳಿಕ ತಿಳಿದುಬಂತು. ಇದೀಗ ಅವರ ಕಾನೂನಾತ್ಮಕ ಉತ್ತರಾಧಿಕಾರಿ ಪ್ರಕರಣ ವನ್ನು ಮುಂದುವರಿಸಲಿದ್ದಾರೆ" ಎಂದು ತಿಳಿಸಿದರು.

ಗಾಯಕ್ವಾಡ್ ಅವರ ಅರ್ಜಿಗಳ ಬಗ್ಗೆ ಮುಂಬೈ ಹೈಕೋರ್ಟ್ 2015ರ ಅಕ್ಟೋಬರ್ 23 ಮತ್ತು 2019ರ ಫೆಬ್ರುವರಿ 13ರಂದು ತೀರ್ಪು ನೀಡಿತ್ತು. ಆದರೆ ಸುಪ್ರೀಂಕೋರ್ಟ್‌ನಲ್ಲಿ ಕ್ರಮವಾಗಿ 1467 ದಿನ ಹಾಗೂ 267 ದಿನ ವಿಳಂಬವಾಗಿ ಅರ್ಜಿ ಸಲ್ಲಿಸಿರುವುದನ್ನು ಮನ್ನಿಸುವಂತೆ ಕೋರಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಹರಿಕೇಶ ರಾಯ್ ಅವರನ್ನೊಳಗೊಂಡ ಪೀಠ ನೋಟಿಸ್ ಜಾರಿ ಮಾಡಿದೆ. ಪ್ರತಿವಾದಿಗಳು ಎಂಟು ವಾರಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)