ಎಮಿರೇಟ್ಸ್ ಪ್ರಜೆ ಮನ್ಸೂರ್ ಆರೋಗ್ಯದ ಬಗ್ಗೆ ಮಾನವಹಕ್ಕು ಸಮಿತಿ ಆರೋಪಕ್ಕೆ ಯುಎಇ ಖಂಡನೆ
ಅಬುಧಾಬಿ, ಜು.22: ಎಮಿರೇಟ್ಸ್‌ನ ಪ್ರಜೆ ಅಹ್ಮದ್ ಮನ್ಸೂರ್‌ನ ಯೋಗಕ್ಷೇಮದ ಬಗ್ಗೆ ಆತಂಕವ್ಯಕ್ತಪಡಿಸಿ ಅಂತರಾಷ್ಟ್ರೀಯ ಮಾನವಹಕ್ಕು ಸಂಸ್ಥೆ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಮತ್ತು ಇಂತಹ ಆರೋಪ ಈ ಹಿಂದೆಯೂ ಹಲವು ಬಾರಿ ಸುಳ್ಳೆಂದು ಸಾಬೀತಾಗಿದೆ ಎಂದು ಯುಎಇಯ ವಿದೇಶ ವ್ಯವಹಾರ ಮತ್ತು ಅಂತರಾಷ್ಟ್ರೀಯ ಸಹಕಾರ ಇಲಾಖೆ ಹೇಳಿದೆ.
ಈ ರೀತಿಯ ಹೇಳಿಕೆ ಪರಿಶೀಲಿಸದ ಮೂಲಗಳಿಂದ ಸೃಷ್ಟಿಯಾದ ಆರೋಪದ ಪುನರಾವರ್ತನೆಯಾಗಿದೆ ಎಂದು ಇಲಾಖೆಯ ಮಾನವಹಕ್ಕು ವಿಭಾಗದ ನಿರ್ದೇಶಕ ಸಯೀದ್ ರಶೀದ್ ಅಲ್ ಹೆಬ್ಸಿ ಗುರುವಾರ ಪ್ರಕಟಿಸಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ದೇಶದ ಶಾಸನದಲ್ಲಿ ಮಂಡಿಸಿರುವಂತೆ ಮನವಹಕ್ಕುಗಳ ವಿಷಯದಲ್ಲಿ ಅಚಲವಾದ ಬದ್ಧತೆ ಮತ್ತು ಗೌರವವನ್ನು ಹೊಂದಿದ್ದು ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಸಂಸ್ಥೆಯ ನಿಲುವನ್ನು ಸದಾ ಬೆಂಬಲಿಸುತ್ತದೆ. ಮನ್ಸೂರ್ ವಿರುದ್ಧ ಆರೋಪಟ್ಟಿ ದಾಖಲಿಸುವುದರಿಂದ ಹಿಡಿದು ನ್ಯಾಯಾಲಯದ ಆದೇಶ ಹೊರಬೀಳುವವರೆಗೂ ಅವರ ಆರೋಗ್ಯಸ್ಥಿತಿಯ ಬಗ್ಗೆ ಸೂಕ್ತ ಗಮನ ವಹಿಸಲಾಗಿದ್ದು ಅವಶ್ಯಕ ವೈದ್ಯಕೀಯ ನೆರವು ಮತ್ತು ಚಿಕಿತ್ಸೆ ಒದಗಿಸಲಾಗಿದೆ ಎಂದು ಹೆಬ್ಸಿ ಹೇಳಿದ್ದಾರೆ.