varthabharthi


ಮುಂಬೈ ಸ್ವಗತ

ಮುಂಬೈ ಕನ್ನಡದ ‘ಕೋಟೆ’

ವಾರ್ತಾ ಭಾರತಿ : 23 Jul, 2021
ದಯಾನಂದ ಸಾಲ್ಯಾನ್

ಕೋಟೆ ಪರಿಸರದಲ್ಲಿ ತಮ್ಮ ವಾಸಸ್ಥಾನ ಹಾಗೂ ಕಚೇರಿ ಹೊಂದಿದ್ದ ಹೆಚ್ಚಿನ ತುಳು-ಕನ್ನಡಿಗರು ಅವುಗಳನ್ನು ಬಿಟ್ಟು ಉಪನಗರಗಳತ್ತ ಮುಖ ಮಾಡಿದರು. ಒಂದೊಮ್ಮೆ ಕನ್ನಡಿಗರ ರಾಜಧಾನಿ ಎನಿಸಿದ ಕೋಟೆ ಪರಿಸರ ಇಂದು ಕನ್ನಡಿಗರಿಲ್ಲದೆ ಕೇವಲ ಗತವನ್ನು ಬಿಟ್ಟು ಬಿಕೋ ಎನ್ನುತ್ತಿದೆ.


ಭಾರತದ ಹೆಬ್ಬಾಗಿಲು ಮುಂಬೈಯಾದರೆ, ‘ಕೋಟೆ ಪರಿಸರ’ ಮುಂಬೈಗೆ ಒಂದು ಮುಕುಟ ಮಣಿ ಇದ್ದಂತೆ. ಒಂದೊಮ್ಮೆ ಮುಂಬೈಯಲ್ಲಿ ಕನ್ನಡಿಗರ ಅಸ್ಮಿತೆಯನ್ನು ಎತ್ತಿ ತೋರಿಸುತ್ತಿದ್ದ ಸ್ಥಳ ಕೋಟೆ ಪರಿಸರ. ಸುಮಾರು 30-40ವರ್ಷಗಳ ಹಿಂದೆ ಇದ್ದ ಕನ್ನಡಿಗರೇ ಬಹುಸಂಖ್ಯಾತರಾಗಿದ್ದ ಸ್ಥಳ ಇಂದು ಕೇವಲ ಒಂದು ನೆನಪಾಗಿ ಉಳಿದಿದೆ.

ಅವಿಭಜಿತ ದಕ್ಷಿಣಕನ್ನಡ ಎಲ್ಲಾ ದಿಕ್ಕುಗಳಿಂದ ಹೊಡೆತಗಳನ್ನು ತಿನ್ನುತ್ತಿದ್ದ ಕಾಲ. ಅಲ್ಲಿ ನಮ್ಮ ಮಧ್ಯಮ ವರ್ಗದ ಜನ ಕಂಗೆಟ್ಟಿದ್ದಾಗ ಮುಂಬೈ ಹೊಸ ಬೆಳಕಾಗಿ ಕಾಣಿಸಿಕೊಂಡಿತ್ತು. ಅಲ್ಲಿಂದ ಬಂದು ಈ ಮಹಾನಗರದಲ್ಲಿ ನೆಲೆನಿಂತ ಅಂದಿನ ತುಳು-ಕನ್ನಡಿಗರು ಬ್ಯಾಂಕು, ಕ್ಯಾಂಟೀನ್, ಕಚೇರಿಗಳಲ್ಲಿ ಗುಮಾಸ್ತರಾಗಿ, ಕಾವಲುಗಾರರಾಗಿ, ಜವಾನರಾಗಿ ಈ ಮಹಾನಗರದಲ್ಲಿ ಬದುಕು ಕಟ್ಟಿಕೊಳ್ಳತೊಡಗಿದ್ದರು. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ದೇಶಭಕ್ತಿಯಿಂದ ಬೀದಿಗಿಳಿದು ಹಲವು ಚಳವಳಿಗಳ ಮುಖ್ಯಭೂಮಿಕೆಯಲ್ಲಿ ಪಾತ್ರವಹಿಸಿದವರು ಇವರು. ಕಚೇರಿ, ಕ್ಯಾಂಟೀನ್, ಬ್ಯಾಂಕುಗಳಲ್ಲಿ ದುಡಿಯುತ್ತಿದ್ದ ತುಳು-ಕನ್ನಡಿಗರ ಪರಿಶ್ರಮ ಹಾಗೂ ಪ್ರಾಮಾಣಿಕತೆಯ ಫಲವಾಗಿ ಮುಂಬೈಯ ಕೋಟೆಯಲ್ಲೇ ಬೇರುಬಿಡುವ ವಾತಾವರಣ ನಿರ್ಮಾಣವಾಯಿತು. ಹಗಲಲ್ಲಿ ದುಡಿಮೆಯ ಸ್ಥಳವೇ, ರಾತ್ರಿ ಆರಾಮವಾಗಿ ನಿದ್ರಿಸುವ ಸ್ಥಳವಾಯಿತು. ನಿಧಾನವಾಗಿ ಊರಿನಿಂದ ಸಂಬಂಧಿಕರು ಪ್ರವೇಶಿಸಿದರು. ಹೀಗೆ ಕೋಟೆ ಪರಿಸರದಲ್ಲಿ ತುಳು-ಕನ್ನಡಿಗರ ಪುಟ್ಟ ಸಾಮ್ರಾಜ್ಯವೊಂದು ಸದ್ದಿಲ್ಲದೆ ರೂಪುಗೊಂಡಿತ್ತು. ಹೊಟ್ಟೆಬಟ್ಟೆಗೆ ದಾರಿ ಹುಡುಕುತ್ತಾ ಬಂದ ಈ ಜನ ಪ್ರಾರಂಭದಲ್ಲಿ ಕೆಲಸದ ಹುಡುಕಾಟದಲ್ಲಿ ತೊಡಗಿದರು. ಇವರಲ್ಲಿ ಎಲ್ಲರಿಗೂ ರಾತ್ರಿ ಕಳೆಯಲು ಸರಿಯಾದ ತಾಣ ಸಿಗಲಿಲ್ಲ. ಕೆಲವರು ಕಟ್ಟಡಗಳ ಕೆಳಗೆ, ಮೆಟ್ಟಿಲುಗಳ ಕೆಳಗೆ ಹಾಗೂ ರಸ್ತೆಯ ಬದಿಗಳಲ್ಲಿ ಪೇಪರ್‌ಗಳನ್ನು ಹಾಸಿ ರಾತ್ರಿ ಪಾಳಿಯನ್ನು ಕಳೆದಿದ್ದಾರೆ. ಅಂತಹ ಕಠಿಣ ಪರಿಶ್ರಮಿಗಳು, ಛಲವಾದಿಗಳ ಬದುಕು ಮೆಲ್ಲನೆ ಅರಳಲು ಪ್ರಾರಂಭಗೊಂಡಿತು. ಆಗ ಮೊದಲು ಅವರಿಗೆ ಮುಖ್ಯ ಅನಿಸಿದ್ದು ರಾತ್ರಿಶಾಲೆ. ಕೆಲವರು ತಾವೇ ಶಿಕ್ಷಕರಾಗಿ ಅಕ್ಷರಶಃ ಭಿಕ್ಷೆ ಬೇಡಿ ಶಿಕ್ಷಣದ ಹರಿಕಾರರಾದರು. ಕಾಡಿಪಟ್ಣ ಚಂದ್ರ ಮಾಸ್ತರ್, ಬಿ. ಪಿ. ಕೂಳೂರ್‌ಕರ್, ಎ. ಪಿ. ಕಿರೋಡಿಯನ್, ಪ್ರೊ. ಎನ್. ಶೇಷಪ್ಪರಂತಹ ನೂರಾರು ಮಹನೀಯರ ಕನಸುಗಳು ನನಸಾದವು. ಕೋಟೆ ಪರಿಸರದಲ್ಲಿ ರಾತ್ರಿ ಶಾಲೆಗಳು ತಲೆ ಎತ್ತಿದವು.

ಈಗಿರುವ ವಾಂಖೆಡೆ ಸ್ಟೇಡಿಯಂನ ಜಾಗ ಮುಂಬೈಯ ತುಳು ಕನ್ನಡಿಗರ ಆಟದ ಕೇಂದ್ರ. ಪರಿವಾರ ಸಮೇತವಾಗಿ ಒಂದು ಜಾತ್ರೆಯಂತೆ ಸೇರಿಕೊಂಡು ಕ್ರೀಡೆಯನ್ನು ಸಂಭ್ರಮಿಸುತ್ತಿದ್ದರು. ಮುಂದೆ ಮಂಗಳೂರು ಮೈದಾನದತ್ತ ಈ ಜಾಗ ಸ್ಥಳಾಂತರಗೊಂಡಿತು. ಆದರೂ ಆಟಕ್ಕೆ ಕೂಟಕ್ಕೆ ಇಲ್ಲೂ ಜಾಗ ಕಡಿಮೆಯೇ. ರಜಾದಿನಗಳಲ್ಲಿ ಡಿಎನ್ ರೋಡಿನಿಂದ ಮೊದಲ್ಗೊಂಡು ಗಲ್ಲಿಗಲ್ಲಿಗಳೂ ಯುವಕರ ಆಟದ ಬಯಲಾಗಿ ಮಾರ್ಪಾಡುಗೊಳ್ಳುತ್ತಿತ್ತು. ನಮ್ಮವರು ಎಂದಮೇಲೆ ನಮ್ಮವರ ರುಚಿ ಶುಚಿಯ ಹೊಟೇಲುಗಳು ಇರಲೇಬೇಕಲ್ಲವೇ? ಕೆಲವೆಡೆ ಮನೆಯಲ್ಲಿಯೇ ಅಡುಗೆ ಮಾಡಿ ಖಾಯಂ ಗಿರಾಕಿಗಳಿಗೆ ಕೊಡುವ ವ್ಯವಸ್ಥೆ ಹುಟ್ಟಿಕೊಂಡಿತು. ಕೆಲವೊಂದು ಉಡುಪಿ ಹೊಟೇಲ್‌ಗಳೂ ಇದ್ದವು. ವೆಲ್ಕಮ್, ಲಲಿತ್, ಅಶೋಕ, ರಾಮ್‌ದೇವ್, ಗಾರ್ಡನ್ ಜೋಲಿ, ಅಪೂರ್ವ, ಮಾಡರ್ನ್ ಲಂಚ್ ಹೋಂ, ವಿಶ್ವಶಾಂತಿ, ಹಿತ ನಿಕೇತನ್, ಫೋರ್ಟ್ ಸೆಂಟ್ರಲ್, ಎಲ್ಲೈಸಿ ಕ್ಯಾಂಟೀನ್, ಫೌಂಟನ್ ಇನ್, ಮಹೇಶ್ ಲಂಚ್ ಹೋಂ, ಹರೀಶ್ ಲಂಚ್ ಹೋಂ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಚಿಕ್ಕ ಪುಟ್ಟ ಹೊಟೇಲ್‌ನಿಂದ ಹಿಡಿದು ದೊಡ್ಡ ಹೋಟೆಲ್‌ನ ವರೆಗೆ ನೂರಾರು ಹೋಟೆಲ್‌ಗಳು ಇಲ್ಲಿದ್ದವು. ಫೋರ್ಟ್ ಪರಿಸರದಲ್ಲಿ ನಮ್ಮವರದೇ ಆದ ಟೈಲರಿಂಗ್ ಅಂಗಡಿಗಳು ಹುಟ್ಟಿಕೊಂಡವು. ಇವುಗಳಲ್ಲಿ ಪ್ಯಾರಿಸ್, ಎಸ್.ಕೆ., ಹಿಮಾಲಯ ಕೆಲವೊಂದು ಉದಾಹರಣೆಗಳು. ಜೊತೆ ಜೊತೆಗೆ ಅಲ್ಲಲ್ಲಿ ಕಟ್ಟಡಗಳ ಮೆಟ್ಟಿಲುಗಳ ಎಡೆಯಲ್ಲಿ ಸಣ್ಣಪುಟ್ಟ ಇಸ್ತ್ರಿ ಅಂಗಡಿಗಳು ಹುಟ್ಟಿಕೊಂಡವು. ಡಾ. ಕಾಂಚನ್, ಡಾ. ಸಾಲ್ಯಾನ್ ಮೊದಲಾದವರ ಕ್ಲಿನಿಕ್‌ಗಳು ಕೈಗುಣಕ್ಕೆ, ಪ್ರಾಮಾಣಿಕತೆಗೆ ಹೆಸರಾದವು. ‘ಮರವೂರು ಹೌಸ್’ನಂತಹ ಸೌಧಗಳು ಕಣ್ಣು ತೆರೆದವು.

ಕೋಟೆ ಪರಿಸರದಲ್ಲಿ 8-9 ರಾತ್ರಿಶಾಲೆಗಳು ಜ್ಞಾನದ ದೀವಿಗೆಗಳಾದವು. ಆಗ ಅಲ್ಲಿ ನಮ್ಮದೇ ಬಯಲು, ನಮ್ಮದೇ ಆಟ. ಶನಿವಾರ, ರವಿವಾರ ಸಂಜೆ ಅಲ್ಲಿನ ಕೆಲವೊಂದು ಗಲ್ಲಿಗಳು ರಂಗಮಂದಿರಗಳಾಗಿ ಪರಿವರ್ತನೆಗೊಂಡು ರಾತ್ರಿಯಿಡೀ ಯಕ್ಷಗಾನ ಬಯಲಾಟ ಜರುಗುತ್ತಿತ್ತು. ತುಳು-ಕನ್ನಡಿಗರ ಮದುವೆ ಇತ್ಯಾದಿ ಕಾರ್ಯಕ್ರಮಗಳು, ಸಂಘ-ಸಂಸ್ಥೆಗಳ ವಾರ್ಷಿಕೋತ್ಸವಗಳು ಹೆಚ್ಚಾಗಿ ಜರುಗುತ್ತಿದ್ದುದು, ಕಾಮಾಹಾಲ್, ಪಾರ್ಕರ್ ಹಾಲ್ ಹಾಗೂ ಬಿರ್ಲಾ ಕ್ರೀಡಾ ಕೇಂದ್ರಗಳಲ್ಲಿ ಕನ್ನಡಿಗರಿಗೆ ವಿಶೇಷ ರಿಯಾಯಿತಿಯೊಂದಿಗೆ ನಾಟಕಗಳಿಗೆ ಸಭಾಗೃಹಗಳನ್ನು ನೀಡುತ್ತಿದ್ದವು. ರಜಾದಿನಗಳಲ್ಲಿ ಗೇಟ್‌ವೇ ಆಫ್ ಇಂಡಿಯಾ, ನರಿಮನ್ ಪಾಯಿಂಟ್ ಸುತ್ತಾಡಿಕೊಂಡು ಬರುವುದು, ಮಂಗಳೂರು ಮೈದಾನದಲ್ಲಿ ಕಾಲುಚಾಚಿ ಮಲಗಿಕೊಂಡು ಆಕಾಶದೆಡೆ ನೋಡಿ ಊರಿನ ಬಾಲ್ಯದಲ್ಲಿ ನಕ್ಷತ್ರಗಳನ್ನು ಎಣಿಸುತ್ತಿದ್ದ ದಿನಗಳನ್ನು ಮತ್ತೆ ಮತ್ತೆ ನೆನೆಯುವುದು, ಗೇಟ್ ವೇ ಆಫ್ ಇಂಡಿಯಾದ ಹತ್ತಿರ ಮೀನುಗಳಿಗೆ ಗಾಳ ಹಾಕಿ ಮೀನು ಹಿಡಿದು ಸಂಭ್ರಮಿಸುವುದು. ಹೀಗೆ ಆ ದಿನಗಳನ್ನು ಊರಿನ ನೆನಪಲ್ಲಿ ಬದುಕುತ್ತಿದ್ದರು ಅಂದಿನ ನಮ್ಮ ತುಳು-ಕನ್ನಡಿಗರು. ಸಂಜೆ ಅಕ್ಕಪಕ್ಕದ ಊರಿನ ಹೆಂಗಸರು ಒಂದಾಗಿ ಹರಟೆ ಹೊಡೆಯುತ್ತಾ ಆ ಪರಿಸರದಲ್ಲಿ ಒಂದು ಸುತ್ತುಹಾಕಿ ವಿದ್ಯಾನಿಧಿ ಬುಕ್ ಡಿಪೋಗೆ ಹೋಗಿ ಅಲ್ಲಿಂದ ಕನ್ನಡ ವಾರ ಪತ್ರಿಕೆಗಳನ್ನು ತರುತ್ತಿದ್ದ ಸಂಭ್ರಮವೇ ಬೇರೆ. ಸುಮಾರು ಹದಿನೆಂಟು ವರ್ಷ ಕೋಟೆ ಪರಿಸರದಲ್ಲಿದ್ದು ಈಗ ಸುಮಾರು 20-25 ವರ್ಷಗಳಿಂದ ಡೊಂಬಿವಿಲಿ ಪರಿಸರದಲ್ಲಿ ವಾಸಿಸುತ್ತಿರುವ ಶಾರದಾ ಶಾಂತರಾಮ ಕೋಟ್ಯಾನ್ ಅವರು ತಾವು ಅಂದು ಪತ್ರಿಕೆಗಳನ್ನು ಓದಿ ಆನಂದಿಸುತ್ತಿದ್ದ ಆ ದಿನಗಳನ್ನು ನೆನೆಯತ್ತಾರೆ. ಹೌದು ಈಗ ಕನ್ನಡಿಗರ ಕೋಟೆ ಇಂದು ಕನ್ನಡಿಗರದ್ದಾಗಿ ಉಳಿದಿಲ್ಲ. ಕೆಲವರು ಅಲ್ಲಿನ ತಮ್ಮ ವಾಸ್ತವ್ಯವನ್ನು ಮಾರಿ ಉಪನಗರಗಳಿಗೆ ಪಯಣಿಸಿದ್ದಾರೆ. ಕೋಟೆ ಪರಿಸರದಲ್ಲಿ ವಿದ್ಯಾರ್ಥಿಗಳು ಅಂದು ರಸ್ತೆದೀಪದಡಿಗಳಲ್ಲಿ ಟೌನ್‌ಹಾಲ್ ಮೆಟ್ಟಿಲುಗಳಲ್ಲಿ, ಹಾರ್ನಿಮನ್ ಸರ್ಕಲ್, ಮಂಗಳೂರು ಮೈದಾನ, ವಿಶ್ವವಿದ್ಯಾನಿಲಯದ ಆವರಣದಲ್ಲಿ ಓದುವುದಕ್ಕೆ ಕುಳಿತುಕೊಳ್ಳುತ್ತಿದ್ದರು. ಅಂತಹವರ ಬದುಕು ಅಲ್ಲಿಂದಲೇ ಬೆಳಗಿದೆ. ಅವರು ರಾಷ್ಟ್ರ ಗುರುತಿಸುವ ಹೆಮ್ಮೆಯ ನಾಗರಿಕರಾಗಿದ್ದಾರೆ. ಮುಂಬೈ ಸ್ಫೋಟ ಪ್ರಕರಣದ ನಂತರ ವಿದ್ಯಾರ್ಥಿಗಳಿಗೂ ಸಮಯಮಿತಿ ಬಂತು. ವಿಶ್ವವಿದ್ಯಾನಿಲಯದ ಆವರಣದಲ್ಲಿಯೂ ಕುಳಿತುಕೊಳ್ಳುವ ವ್ಯವಸ್ಥೆ ನಿಂತುಹೋಯಿತು.

ಬ್ರಿಟಿಷರು ಮುಂಬೈ ಬಿಟ್ಟು ಹೋಗುವ ಸಂದರ್ಭದಲ್ಲಿದ್ದ ಬಹಳಷ್ಟು ಕಟ್ಟಡಗಳು ಪ್ರಿಸೆಂಟ್ ಇನ್ಶೂರೆನ್ಸ್ ಕಂಪೆನಿ, ಬಾಂಬೆ ಪೋರ್ಟ್ ಟ್ರಸ್ಟ್, ಎನ್‌ಟಿಸಿ ಹಾಗೂ ಕೆಲವೊಂದು ಬ್ಯಾಂಕುಗಳ ಅಧೀನಕ್ಕೆ ಬಂದವು. ಆ ಕಟ್ಟಡಗಳಲ್ಲಿ ಕಡಿಮೆ ದರದಲ್ಲಿ ಕಚೇರಿ ಕೋಣೆಗಳು ಸಿಗತೊಡಗಿದವು. ಅದರ ಲಾಭಗಳನ್ನು ನಮ್ಮವರು ಕೆಲವರು ಪಡೆದುಕೊಂಡರು. ಉದಾಹರಣೆಗೆ ಪ್ರಿಸೆಂಟ್ ಇನ್ಶೂರೆನ್ಸ್ ಕಂಪೆನಿಯಲ್ಲಿದ್ದ, ನಂತರ ಎಲ್ಲೈಸಿ ಅಧೀನಕ್ಕೆ ಬಂದ ‘ಕ್ರಿಸೆಂಟ್ ಚೇಂಬರ್’ನಲ್ಲಿದ್ದ ಕಟ್ಟಡದಲ್ಲಿ ಕಚೇರಿ ಕೋಣೆಯೊಂದರ ಬಾಡಿಗೆ (ಕಳೆದ ಶತಮಾನದ 80-90ರ ದಶಕ) ರೂ.300-400 ಮಾತ್ರ. ಹೀಗೆ ಎಲ್ಲ ರೀತಿಗಳಿಂದ ಕನ್ನಡಿಗರಿಗೆ ಆಸರೆ ನೀಡಿದ್ದ ಕೋಟೆ ಪರಿಸರ ಇಂದು ಕನಸಿನಂತೆ ಕಾಣುತ್ತಿದೆ. ಅಲ್ಲಿ ಹೊಟೇಲ್‌ಗಳ ಅಕ್ಕಪಕ್ಕ ಕನ್ನಡಿಗರ ಬೀಡಿ ಅಂಗಡಿಗಳು, ಪಾನ್ ಬೀಡಾ ಶಾಪ್‌ಗಳು ತಲೆ ಎತ್ತಿದ್ದವು. ಕೆಲವೊಂದು ಕಟ್ಟಡಗಳ ಮೂಲೆಯಲ್ಲಿ ನಮ್ಮವರ ‘ಕಂಟ್ರಿ ಸಾರಾಯಿ’ ಪ್ರಾರಂಭವಾಯಿತು. ಜತೆಜತೆಗೆ ಮಟ್ಕಾ ದಂಧೆ ಕೂಡಾ ಶುರುವಾಯಿತು. ಬಹುಶಃ ಮುಂಬೈ ಭೂಗತ ಜಗತ್ತಿಗೂ ಕನ್ನಡಿಗರಿಗೂ ಅದರಲ್ಲೂ ತುಳುವರಿಗೆ ನಂಟು ಇಲ್ಲಿಂದಲೇ ಪ್ರಾರಂಭ ಎಂದು ಹೇಳಲಾಗುತ್ತಿದೆ. ನೂರಾರು ಝೆರಾಕ್ಸ್ ಅಂಗಡಿಗಳು ಕೋಟೆ ಪರಿಸರದಲ್ಲಿದ್ದು ನಮ್ಮವರದೇ ಆದ ಕುಸುಮ ಪ್ರಿಂಟರ್ಸ್, ಆರತಿ ಆರ್ಟ್ಸ್, ದೀಪಾವಳಿ ಆರ್ಟ್ ಪ್ರಿಂಟರ್ಸ್ ಮೊದಲಾದ ಅಚ್ಚು ಮನೆಗಳು ಸೊಗಸಾದ ಕನ್ನಡ ಕೃತಿಗಳನ್ನು ಅಚ್ಚುಮಾಡಿ ಕೊಡುತ್ತಿದ್ದವು. ಮದುವೆ, ನಾಟಕ, ಯಕ್ಷಗಾನ ಇತ್ಯಾದಿ ಎಲ್ಲಾ ರೀತಿಯ ಆಮಂತ್ರಣ ಪತ್ರಿಕೆಗಳು, ಕರಪತ್ರಗಳು ಇಲ್ಲಿ ಅಂದವಾಗಿ ಮುದ್ರಣಗೊಳ್ಳುತ್ತಿತ್ತು.

ಹೀಗೆ ಕಳೆದ ಶತಮಾನದ 80-90ರ ದಶಕದವರೆಗೆ ಕೋಟೆ ಪರಿಸರವು ಕನ್ನಡಿಗರ ಆಸರೆಯಾಗಿತ್ತೆಂದು ಇಂದು ಊಹಿಸುವುದೂ ಕಷ್ಟ ಸಾಧ್ಯ. ನಮ್ಮವರು ತಮ್ಮ ಕುಟುಂಬ ಬೆಳೆದಂತೆ ದೊಡ್ಡ ವಾಸದ ಅಗತ್ಯ ಕಂಡು ಬಂದಾಗ ಅನಿವಾರ್ಯವಾಗಿ ಇಲ್ಲಿಂದ ಉಪನಗರಗಳ ಆಚೆ ಪಯಣಿಸಿದರು. ಕೆಲವೊಂದು ಶಿಥಿಲಗೊಂಡ ಕಟ್ಟಡದಲ್ಲಿ ವಾಸಿಸುವುದು ಕಷ್ಟಸಾಧ್ಯ ಅನ್ನಿಸಿದಾಗ ಬೆಚ್ಚನೆಯ ಸುರಕ್ಷಿತ ಸ್ಥಳವನ್ನರಸುತ್ತ ನಡೆದರು. ಕೆಲವು ಕಟ್ಟಡದ ಮಾಲಕರು ಉಪನಗರಗಳಲ್ಲಿ ಅವರಿಗೆ ವ್ಯವಸ್ಥೆ ಮಾಡಿ ಕೊಟ್ಟರು. ಎಲ್ಲೈಸಿ, ಬ್ಯಾಂಕುಗಳು ಇದ್ದ ಬಾಡಿಗೆ ರೂ. 300-400ರ ಬದಲು ರೂ. 30-40 ಸಾವಿರ, ಮುಂದೆ ಲಕ್ಷದವರೆಗೆ ಬಾಡಿಗೆ ತೆರಬೇಕೆಂದು ಕೋರ್ಟ್‌ಗೆ ಎಳೆದರೆ ಅವರೇನು ಮಾಡಬೇಕು? ಈ ರೀತಿ ಕೋಟೆ ಪರಿಸರದಲ್ಲಿ ತಮ್ಮ ವಾಸಸ್ಥಾನ ಹಾಗೂ ಕಚೇರಿ ಹೊಂದಿದ್ದ ಹೆಚ್ಚಿನ ತುಳು-ಕನ್ನಡಿಗರು ಅವುಗಳನ್ನು ಬಿಟ್ಟು ಉಪನಗರಗಳತ್ತ ಮುಖ ಮಾಡಿದರು. ಹೀಗೆ ಒಂದೊಮ್ಮೆ ಕನ್ನಡಿಗರ ರಾಜಧಾನಿ ಎನಿಸಿದ ಕೋಟೆ ಪರಿಸರ ಇಂದು ಕನ್ನಡಿಗರಿಲ್ಲದೆ ಕೇವಲ ಗತವನ್ನು ಬಿಟ್ಟು ಬಿಕೋ ಎನ್ನುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)