ಯುಎಇ: ಭಾರತ ಸೇರಿದಂತೆ 4 ದೇಶಗಳ ವಿಮಾನಸಂಚಾರ ನಿರ್ಬಂಧ ಜುಲೈ 28ರವರೆಗೆ ವಿಸ್ತರಣೆ
ದುಬೈ, ಜು.23: ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ಪ್ರಯಾಣಿಕರ ವಿಮಾನಗಳಿಗೆ ವಿಧಿಸಲಾಗಿರುವ ನಿರ್ಬಂಧವನ್ನು ಕನಿಷ್ಟ ಜುಲೈ 28ರವರೆಗೆ ವಿಸ್ತರಿಸಲಾಗಿದೆ ಎಂದು ಎಮಿರೇಟ್ಸ್ ಏರ್ಲೈನ್ಸ್ ಸಂಸ್ಥೆ ಹೇಳಿದೆ. ಕಳೆದ 14 ದಿನದಲ್ಲಿ ಈ ದೇಶಗಳೊಂದಿಗೆ ಸಂಪರ್ಕ ಹೊಂದಿದ್ದ ಇತರ ಯಾವುದೇ ದೇಶದ ಪ್ರಯಾಣಿಕರಿಗೂ ಯುಎಇ ಪ್ರವೇಶಿಸಲು ಆಸ್ಪದವಿಲ್ಲ ಎಂದು ಹೇಳಿಕೆ ತಿಳಿಸಿದೆ.
ಪರಿಸ್ಥಿತಿ ಯಾವುದೇ ಸಂದರ್ಭದಲ್ಲೂ ಬದಲಾಗಬಹುದು. ಆದ್ದರಿಂದ ಪ್ರಯಾಣಕ್ಕೆ ಸಂಬಂದಿಸಿದ ಪರಿಷ್ಕತ ಸೂಚನೆಗಳನ್ನು ನಿರಂತರ ಪರಿಶೀಲಿಸುವಂತೆ ಪ್ರಯಾಣಿಕರಿಗೆ ಟ್ವಿಟರ್ ಮೂಲಕ ಸಲಹೆ ನೀಡಲಾಗಿದೆ. ರಾಜತಾಂತ್ರಿಕರಿಗೆ, ಯುಎಇ ಪ್ರಜೆಗಳಿಗೆ ಅಥವಾ ಗ್ಲೋಬಲ್ ವೀಸಾ ಹೊಂದಿರುವವರಿಗೆ(ಕೋವಿಡ್ ನಿಯಮ ಪಾಲನೆ ಮಾಡಿ) ಇದರಿಂದ ವಿನಾಯಿತಿ ನೀಡಲಾಗಿದೆ.
ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ಪ್ರಯಾಣಿಕರ ವಿಮಾನಗಳಿಗೆ ವಿಧಿಸಲಾಗಿರುವ ನಿರ್ಬಂಧವನ್ನು ಜುಲೈ 31ರವರೆಗೆ ವಿಸ್ತರಿಸಿರುವುದಾಗಿ ಯುಎಇಯ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎತಿಹಾದ್ ಏರ್ವೇಸ್ ಈಗಾಗಲೇ ಘೋಷಿಸಿದೆ. ನಿರ್ಬಂಧ ಯಾವಾಗ ಅಂತ್ಯಗೊಳ್ಳಲಿದೆ ಎಂಬ ಬಗ್ಗೆ ಯುಎಇಯ ಜನರಲ್ ಏವಿಯೇಷನ್ ಅಥಾರಿಟಿ(ಜಿಸಿಎಎ) ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ.