ಮಹಾತ್ಮಾಗೆ ಅಪಮಾನ
ಚುನಾಯಿತ ಪ್ರಧಾನಿಯಾದ ಮೋದಿಯವರಿಗೆ ರಾಜಧಾನಿಯಲ್ಲಿ ಸಾರ್ವಜನಿಕ ಜಾಗದಲ್ಲಿ ಕೆಟ್ಟದಾದ ಹಾಗೂ ದುಬಾರಿಯಾದ ಕಟ್ಟಡಗಳನ್ನು, ಸ್ಮಾರಕಗಳನ್ನು ನಿರ್ಮಿಸಲು ಅಧಿಕಾರವಿದೆ. ಸಬರಮತಿ ಆಶ್ರಮದ ವಿಷಯ ಇದಕ್ಕಿಂತ ವಿಭಿನ್ನವಾದುದಾಗಿದೆ. ಸಬರಮತಿ ಆಶ್ರಮ ಹಾಗೂ ಗಾಂಧೀಜಿ ಅಹ್ಮದಾಬಾದ್‌ಗೆ ಮಾತ್ರವಲ್ಲ, ಗುಜರಾತ್‌ಗೆ ಮಾತ್ರವಲ್ಲ, ಅಷ್ಟೇ ಏಕೆ ಭಾರತಕ್ಕೆ ಮಾತ್ರವೇ ಸೇರಿದವರಲ್ಲ. ಅವರು ಹುಟ್ಟಿರುವ ಹಾಗೂ ಇನ್ನೂ ಹುಟ್ಟಲಿರುವಂತಹ ಪ್ರತಿಯೊಬ್ಬ ಮಾನವನಿಗೂ ಸೇರಿದವರಾಗಿದ್ದಾರೆ. ಜೀವಮಾನವಿಡೀ ಗಾಂಧೀಜಿಯವರ ಬದುಕಿಗೆ ವಿರೋಧಾಭಾಸದಿಂದ ಕೂಡಿದಂತಹ ಕೆಲಸವನ್ನು ಮಾಡುತ್ತಿರುವಂತಹ ರಾಜಕಾರಣಿ ಹಾಗೂ ಆ ರಾಜಕಾರಣಿಯ ಆತ್ಮೀಯನೆಂಬುದು ಪ್ರಧಾನ ಅರ್ಹತೆಯಾಗಿರುವ ವಾಸ್ತುಶಿಲ್ಪಿಗೆ ಮಹಾತ್ಮಾರಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ಸ್ಥಳದ ಆಸುಪಾಸನ್ನು ಅಸ್ತವ್ಯಸ್ತಗೊಳಿಸಲು ಯಾವುದೇ ಹಕ್ಕಿಲ್ಲ.
ನಾನು 1979ರಲ್ಲಿ ಮೊದಲ ಬಾರಿಗೆ ಅಹ್ಮದಾಬಾದ್‌ಗೆ ಭೇಟಿ ನೀಡಿದ್ದೆ. ಆನಂತರದ ದಶಕದಲ್ಲಿ ವೃತ್ತಿಪರ ಹಾಗೂ ವೈಯಕ್ತಿಕ ಕಾರಣಗಳೆರಡಕ್ಕೂ ಅಲ್ಲಿಗೆ ಹೋಗಿದ್ದೆ. 2002ರಲ್ಲಿ ನಾನು ಗಾಂಧಿ ಕುರಿತ ಸಂಶೋಧನೆಯನ್ನು ಆರಂಭಿಸಿದೆ. ಆನಂತರ ಆ ನಗರದ ಜೊತೆ ನನ್ನ ಬಾಂಧವ್ಯವು ಇನ್ನೂ ಹೆಚ್ಚು ಗಟ್ಟಿಯಾಗತೊಡಗಿತು. 2002ರಲ್ಲಿ ನಡೆದ ಭೀಕರ ಗಲಭೆಯ ಆನಂತರದ ನನ್ನ ಗುಜರಾತ್ ಪ್ರವಾಸವನ್ನು ಆ ವರ್ಷದ ಬೇಸಿಗೆಯಲ್ಲಿ ಕೈಗೊಂಡಿದ್ದೆ. ಸಹಜವಾಗಿಯೇ ನಾನು ಸಬರಮತಿ ಆಶ್ರಮಕ್ಕೆ ತೆರಳಿದ್ದು, ಅಲ್ಲಿ ಟ್ರಸ್ಟಿಗಳಲ್ಲೊಬ್ಬರ ಜೊತೆ ಸ್ವಲ್ಪ ಸಮಯ ಕಳೆದಿದ್ದೆ. ಶಾಂತ ಸ್ವಭಾವದ ಹಾಗೂ ಎಲೆಮರೆಕಾಯಿಯಂತಹ ವ್ಯಕ್ತಿತ್ವದ ಅವರು ಗಾಂಧೀಜಿ ಸೇವೆಯಲ್ಲಿಯೇ 30 ವರ್ಷಗಳನ್ನು ಕಳೆದಿದ್ದರು. ನಮ್ಮ ಮಾತಿನ ನಡುವೆ ಅವರು 2002ರ ಗುಜರಾತ್ ಗಲಭೆಯನ್ನು ಮಹಾತ್ಮಾ ಗಾಂಧೀಜಿಯವರ ‘ಎರಡನೇ ಹತ್ಯಾಕಾಂಡ’ ಎಂಬುದಾಗಿ ಬಣ್ಣಿಸಿದ್ದರು.
ಯಾರ ಕಣ್ಗಾವಲಿನಲ್ಲಿ ಗುಜರಾತ್ ಗಲಭೆ ನಡೆದುಹೋಯಿತೋ ಆ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಸಂಪೂರ್ಣವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಶಿಕ್ಷಣವನ್ನು ಪಡೆದವರಾಗಿದ್ದಾರೆ. ಆರೆಸ್ಸೆಸ್‌ನ ವರ್ಗೀಯವಾದಿ, ಜನಾಂಗೀಯ ದ್ವೇಷ ಸಿದ್ಧಾಂತವು ಗಾಂಧೀಜಿಯವರ ವಿಶಾಲವಾದ ಹಾಗೂ ಮುಕ್ತ ಮನಸ್ಸಿನ ಜಾಗತಿಕ ದೃಷ್ಟಿಕೋನಕ್ಕಿಂತ ಸಂಪೂರ್ಣ ವಿಭಿನ್ನವಾದುದಾಗಿದೆ. ಆರೆಸ್ಸೆಸ್‌ನ ಸರಸಂಘ ಚಾಲಕ ಎಂ. ಎಸ್. ಗೋಳ್ವಾಲ್ಕರ್‌ರನ್ನು ಆರಾಧಿಸುತ್ತಲೇ ಮೋದಿ ಬೆಳೆದರು. ಮಹಾತ್ಮಾ ಗಾಂಧೀಜಿಯವರ ಬಗ್ಗೆ ಗೋಳ್ವಾಲ್ಕರ್ ಬಹಿರಂಗವಾಗಿಯೇ ಅನಾದರ ತೋರುತ್ತಿದ್ದರು. 1947ರ ಡಿಸೆಂಬರ್‌ನಲ್ಲಿ ಗೋಳ್ವಾಲ್ಕರ್ ಅವರು ಭಾಷಣವೊಂದರಲ್ಲಿ ‘‘ಮಹಾತ್ಮಾ ಗಾಂಧೀಜಿಯವರು ಜನತೆಯನ್ನು ಇನ್ನು ಮುಂದೆ ತಪ್ಪುದಾರಿಗೆಳೆಯಲು ಸಾಧ್ಯವಿಲ್ಲ. ಇಂತಹ ವ್ಯಕ್ತಿಗಳನ್ನು ತಕ್ಷಣವೇ ವೌನವಾಗಿರಿಸಬಲ್ಲಂತಹ ದಾರಿಗಳು ನಮ್ಮಲ್ಲಿವೆ. ಆದರೆ ಹಿಂದೂಗಳೊಂದಿಗೆ ಹಗೆತನವನ್ನು ಬೆಳೆಸುವುದು ನಮ್ಮ ಪರಂಪರೆಯಲ್ಲ. ಆದರೆ ಅಂತಹ ಬಲವಂತದ ಸಂದರ್ಭ ಬಂದಲ್ಲಿ, ನಾವು ಆ ದಾರಿಯನ್ನು ಕೂಡಾ ಹಿಡಿಯಬೇಕಾದೀತು’’ ಎಂದು ಹೇಳಿದ್ದರು.
ಮೋದಿ ಪಾಲಿಗೆ ಗೋಳ್ವಾಲ್ಕರ್ ಅವರು ಪೂಜನೀಯ ಶ್ರೀ ಗುರೂಜಿ, ಅತ್ಯಂತ ಆದರಣೀಯ ಶಿಕ್ಷಕ ಹಾಗೂ ಯಜಮಾನರಾಗಿದ್ದರು. ತನ್ನ ಸಾರ್ವಜನಿಕ ಬದುಕಿನಲ್ಲಿ ಮೋದಿ ಯವರು ಗಾಂಧೀಜಿಯವರ ಬಗ್ಗೆ ಅತ್ಯಂತ ವಿರಳವಾಗಿ ಉಲ್ಲೇಖಿಸುತ್ತಾರಾದರೆ, ಗೋಳ್ವಾಲ್ಕರ್ ಬಗ್ಗೆ ಅಪಾರವಾದ ಗೌರವಾದರಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿಯವರು ಸಬರಮತಿ ಅಶ್ರಮಕ್ಕೆ ಭೇಟಿ ನೀಡುತ್ತಿದ್ದುದು ತೀರಾ ವಿರಳವಾಗಿತ್ತು. ಆದಾಗ್ಯೂ, ಪ್ರಧಾನಿಯಾದ ಆನಂತರ ಅವರು ಆ ಸ್ಥಳದ ಬಗ್ಗೆ ಅಪಾರವಾದ ಆಸಕ್ತಿಯನ್ನು ವಹಿಸಿದ್ದರು. ಅವರು ಜಪಾನ್ ಹಾಗೂ ಇಸ್ರೇಲ್ ಪ್ರಧಾನಿಗಳು, ಚೀನಾ ಮತ್ತು ಅಮೆರಿಕದ ಅಧ್ಯಕ್ಷರು ಮತ್ತಿತರರಿಗೆ ಜೊತೆಗಾರರಾಗಿ ಆಗಮಿಸಿದ್ದರು.
ಗಾಂಧೀಜಿಯವರ ಬದುಕಿನ ಬಗ್ಗೆ ಆಶ್ರಮದ ಹಲವಾರು ಟ್ರಸ್ಟಿಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಅಗಾಧವಾದ ಜ್ಞಾನವಿದೆ. ವಿದೇಶಿ ಗಣ್ಯರಿಗೆ ಸಬರಮತಿ ಆಶ್ರಮದ ಬಗ್ಗೆ ವಿವರಿಸುವಂತೆ ಈ ಪರಿಣಿತರನ್ನು ಕೇಳಿಕೊಳ್ಳುವ ಬದಲು ಗಾಂಧಿ ಟೀಕಾಕಾರರ ಹಾಗೂ ಗಾಂಧಿ ವಿರೋಧಿಗಳ ಗರಡಿಯಲ್ಲಿ ತರಬೇತಿ ಪಡೆದಿರುವ ಮೋದಿ, ತಾವೇ ಆ ಕೆಲಸ ಮಾಡುತ್ತಿದ್ದರು. ಫೋಟೊ ತೆಗೆಯುವಾಗ ಭಾರತದ ಪ್ರಧಾನಿ ಹಾಗೂ ಸಂದರ್ಶನಕ್ಕೆ ಆಗಮಿಸಿರುವ ವಿದೇಶಿ ವರಿಷ್ಠರು ಮಾತ್ರವೇ ಇರುವ ದೃಶ್ಯಗಳು ಮಾತ್ರವೇ ಕಾಣಿಸಿಕೊಳ್ಳುವಂತೆ ಛಾಯಾಗ್ರಾಹಕರಿಗೆ ಸೂಚನೆ ನೀಡಲಾಗುತ್ತದೆ. ಮಹಾತ್ಮಾ ಗಾಂಧೀಜಿ, ಅವರ ಬದುಕು ಹಾಗೂ ಸಂದೇಶದ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡುವ ಜತೆಗೆ ಮೋದಿಯವರು ಗಾಂಧಿ ವಾಸ್ತವ್ಯವಿದ್ದ ಗುಡಿಸಲು, ಅವರು ಪ್ರಾರ್ಥಿಸುತ್ತಿದ್ದ ಸ್ಥಳ, ಅವರ ಚರಕ ಹೀಗೆ ಆಶ್ರಮದಲ್ಲಿನ ಹೆಗ್ಗುರುತುಗಳೆಡೆಗೆೆ ತನ್ನ ಕೈಗಳನ್ನು ಚಾಚಿ ತೋರಿಸುವಂತಹ ಚಿತ್ರಗಳನ್ನು ತೆಗೆಯುವಂತೆ ನೋಡಿಕೊಳ್ಳಲಾಗುತ್ತದೆ. ಗಾಂಧೀಜಿಯವರ ಜೊತೆ ಬಹಿರಂಗವಾಗಿ ಗುರುತಿಸಿಕೊಳ್ಳುವ ಪ್ರಧಾನಿಯವರ ಹೊಸ ಹಂಬಲವನ್ನು ಹೇಗೆ ವಿವರಿಸಬಹುದು?. ವೈಯಕ್ತಿಕ ಪ್ರತಿಷ್ಠೆಗಾಗಿನ ಮೋದಿಯ ಆಕಾಂಕ್ಷೆಯು ಅವರ ಹಳೆಯ ರಾಜಕೀಯ ನಿಷ್ಠೆಗಳು ಹಾಗೂ ಸೈದ್ಧಾಂತಿಕ ಸಂಬಂಧಗಳನ್ನು ಮೀರಿ ನಿಂತಿದೆ. ಆರೆಸ್ಸೆಸ್‌ಗೆ ಈಗಲೂ ಗಾಂಧಿ ಕುರಿತು ದ್ವಂದ್ವ ನಿಲುವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಭಕ್ತರು ಗಾಂಧೀಜಿ ಬಗ್ಗೆ ನೇರವಾಗಿ ದ್ವೇಷವನ್ನು ತೋರ್ಪಡಿಸುತ್ತಾರೆ. ಆದರೆ ಮೋದಿಯವರಿಗೆ ಜಗತ್ತಿನಾದ್ಯಂತ ಅತ್ಯಂತ ಪ್ರಶಂಸನೀಯ ಹಾಗೂ ಎದ್ದುಕಾಣುವಂತಹ ಭಾರತೀಯ ‘ಬ್ರಾಂಡ್’ ಆಗಿರುವ ಗಾಂಧೀಜಿಯವರನ್ನು ವರ್ತಮಾನದಲ್ಲಿ ಹೇಗೆ ಬಳಸಿಕೊಳ್ಳಬೇಕೆಂಬುದು ಚೆನ್ನಾಗಿ ಗೊತ್ತಿದೆ. ಜಪಾನ್,ಚೀನಾ, ಇಸ್ರೇಲ್ ಅಥವಾ ಫ್ರಾನ್ಸ್ ಆಗಿರಲಿ, ಇಲ್ಲವೇ ಅಮೆರಿಕ, ರಶ್ಯ ಅಥವಾ ಜರ್ಮನಿ ಇರಲಿ, ಒಂದು ವೇಳೆ ಈ ದೇಶಗಳನ್ನು ಇಂಪ್ರೆಸ್ ಮಾಡಬೇಕೆಂದರೆ ಮೋದಿಯವರು ಸಿನಿಕತನದೊಂದಿಗೆ ಗಾಂಧೀಜಿಯವರನ್ನು ತನ್ನ ಪಕ್ಕದಲ್ಲಿರಿಸಿಕೊಳ್ಳುತ್ತಾರೆ.
ಪ್ರಧಾನಿಯಾದಾಗಿನಿಂದ ಸಬರಮತಿ ಆಶ್ರಮದ ಬಗ್ಗೆ ಮೋದಿಯವರ ಆಸಕ್ತಿ ಬೆಳೆದಿರುವ ಹೊರತಾಗಿಯೂ, ಅವರು ಹಾಗೂ ಗಾಂಧಿ ನಡುವಿನ ನೈತಿಕ ಹಾಗೂ ಸೈದ್ಧಾಂತಿಕ ಅಂತರವು ಎಂದೆಂದಿಗೂ ಜೊತೆಗೂಡುವಂತಹದ್ದಲ್ಲ.
ತನ್ನ 300ಕ್ಕೂ ಅಧಿಕ ಲೋಕಸಭಾ ಸದಸ್ಯರ ಪೈಕಿ ಒಬ್ಬನೇ ಒಬ್ಬ ಮುಸ್ಲಿಂ ಸಂಸದನನ್ನು ಹೊಂದಿರದಂತಹ ಪಕ್ಷದಿಂದ ಆಯ್ಕೆಯಾಗಿರುವ ಪ್ರಧಾನಿಯು, ಅಂತರ್‌ಧರ್ಮೀಯ ಸೌಹಾರ್ದದ ಪ್ರವಾದಿಯಾದ ಗಾಂಧೀಜಿಯವರು ತನ್ನ ಜೀವಮಾನದುದ್ದಕ್ಕೂ ವಿರೋಧಿಸುತ್ತಿದ್ದಂತಹ ಹಾಗೂ ಅಸಹ್ಯಪಡುತ್ತಿದ್ದಂತಹ ರೀತಿಯ ರಾಜಕೀಯವನ್ನು ಅನುಸರಿಸುತ್ತಿದ್ದಾರೆ. ಅವರ ಸರಕಾರವು ಮುಸ್ಲಿಮರಿಗೆ ತಾರತಮ್ಯವುಂಟು ಮಾಡುವಂತಹ ಶಾಸನವನ್ನು ಅಂಗೀಕರಿಸುತ್ತಿದೆ. ಆರ್ಥಿಕತೆ, ಆರೋಗ್ಯ ಹಾಗೂ ಎಲ್ಲಾ ವಿಷಯಗಳಲ್ಲಿನ ಅಂಕಿ-ಅಂಶಗಳನ್ನು ವ್ಯವಸ್ಥಿತವಾಗಿ ತಿರುಚುತ್ತಿದೆ. ಆ ಮೂಲಕ ‘ಸತ್ಯಮೇವ ಜಯತೇ’ ಎಂಬ ಪುರಾತನ ಸಂತವಾಣಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಬಿಜೆಪಿ ಆಡಳಿತದ ಗುರಿಯು ‘ಅಸತ್ಯಮೇವ ಜಯತೇ’ ಎಂಬುದಾಗಿರಬೇಕಿತ್ತು ಎಂದು ಬರಹಗಾರನಾಗಿ ನನಗಿಸುತ್ತದೆ.
ಗಾಂಧಿಯೆಂದರೆ ಸತ್ಯ, ಪಾರದರ್ಶಕತೆ ಹಾಗೂ ಧಾರ್ಮಿಕ ಬಹುತ್ವ ಆಗಿದೆ. ಮೋದಿ ಎಂದರೆ ವಂಚನೆ, ಗೌಪ್ಯತೆ ಹಾಗೂ ಬಹುಸಂಖ್ಯಾತಪರವಾದ ಆಗಿದೆ. ಹೀಗಾಗಿ ಗಾಂಧಿ ಜೊತೆ ಸ್ವಭಾವ ಸಾದೃಶ್ಯವನ್ನು ಸಾಧಿಸಲು ಮೋದಿಗೆ ಹೇಗೆ ಸಾಧ್ಯವಾದೀತು?. ತಾರ್ಕಿಕವಾಗಿ ಅದು ಸಾಧ್ಯವಾಗಲಾರದು. ಆದರೆ ಅಧಿಕಾರ ಹಾಗೂ ಮಹತ್ವಾಕಾಂಕ್ಷೆಯು ಹಾಗೆ ಮಾಡಲು ಅವರನ್ನು ಪ್ರೇರೇಪಿಸಿದೆ. ಗಾಂಧೀಜಿ ಜೊತೆ ಗುರುತಿಸಿಕೊಳ್ಳುವ ಮೂಲಕ ಮೋದಿಯ ಕರಾಳ ದಾಖಲೆಗಳನ್ನು ಮರೆಮಾಚುವ ವಿನೂತನ ಹಾಗೂ ಅತ್ಯಂತ ಉದಾತ್ತವಾದ ಪ್ರಯತ್ನವಾಗಿದೆ. ಇದೀಗ ಮಹಾತ್ಮಾ ಗಾಂಧೀಜಿಯವರ ಸಬರಮತಿ ಆಶ್ರಮವನ್ನು ವಿಶ್ವದರ್ಜೆಯ ಸ್ಮಾರಕವನ್ನಾಗಿಸುವ ನೆಪದಲ್ಲಿ ಭರ್ಜರಿ ಆರ್ಥಿಕ ನೆರವಿನ, ಸರಕಾರಿ ನಿರ್ದೇಶಿತ ಪ್ರಾಜೆಕ್ಟ್ ಮೂಲಕ ಅದಕ್ಕೆ ದೊಡ್ಡ ಮಟ್ಟದಲ್ಲಿ ಮರುರೂಪ ನೀಡಲು ಬುನಾದಿ ಹಾಕಲಾಗಿದೆ.
‘ನನ್ನ ಜೀವನವೊಂದು ಸಂದೇಶ’ ಎಂದು ಗಾಂಧಿ ಹೇಳಿದ್ದರು. ಮೋದಿಯವರ ಹಾಗಲ್ಲದೆ, ಅವರಿಗೆ ಕ್ರೀಡಾಂಗಣಕ್ಕೆ ತನ್ನ ಹೆಸರನ್ನಿಡಬೇಕಿಲ್ಲ ಅಥವಾ ಹಿಂದಿನ ಆಡಳಿತಗಾರರ ಗತ ಪ್ರತಿಷ್ಠೆಯನ್ನು ತೊಡೆದುಹಾಕಲು ಮತ್ತು ತನ್ನ ವರ್ಚಸ್ಸನ್ನು ಮೂಡಿಸುವುದಕ್ಕಾಗಿ ರಾಜಧಾನಿಯನ್ನು ವಿನ್ಯಾಸಗೊಳಿಸುವ ಅವಶ್ಯಕತೆ ಅವರಿಗಿರಲಿಲ್ಲ. ಈಗ ಇರುವ ಸಬರಮತಿ ಆಶ್ರಮವೇ ಗಾಂಧೀಜಿಯವರ ನೆನಪಿಗೆ ಅತ್ಯಂತ ಪರಿಪೂರ್ಣವಾದುದಾಗಿದೆ. ಗಾಂಧಿ ಕಾಲದಿಂದಲೇ ಅಸ್ತಿತ್ವದಲ್ಲಿರುವ ಮನೋಹರವಾದ ಪುಟ್ಟ ಕಟ್ಟಡಗಳು. ಅಲ್ಲಿನ ಮರಗಳು, ಹಕ್ಕಿಗಳ ಕಲರವ, ಮುಕ್ತ ಪ್ರವೇಶಕ್ಕೆ ಅವಕಾಶ, ಕಾವಲುಗಾರರಿಲ್ಲದಿರುವುದು ಹಾಗೂ ಪ್ರವೇಶ ಶುಲ್ಕವಿಲ್ಲದಿರುವುದು, ರೈಫಲ್ ಅಥವಾ ಲಾಠಿಗಳನ್ನು ಒಯ್ಯುತ್ತಿರುವ ಖಾಕಿಧಾರಿ ಪೊಲೀಸರ ಅನುಪಸ್ಥಿತಿ ಇವೆಲ್ಲವೂ ಆ ಸ್ಥಳಕ್ಕೆ ಭಾರತದಲ್ಲಿ ಇಂದು ಯಾವುದೇ ಸ್ಮಾರಕ ಅಥವಾ ಮ್ಯೂಸಿಯಂಗಳಲ್ಲಿ ಇಲ್ಲದಂತಹ ವಿಶಿಷ್ಟವಾದ, ಸ್ವಾಗತಾರ್ಹವಾದ ಗುಣಲಕ್ಷಣವನ್ನು ನೀಡಿದೆ.
ಗಾಂಧಿ ಅವರು ದಕ್ಷಿಣ ಆಫ್ರಿಕದಲ್ಲಿ ಎರಡು ಹಾಗೂ ಭಾರತದಲ್ಲಿ ಮೂರು ಆಶ್ರಮಗಳನ್ನು ಸ್ಥಾಪಿಸಿದ್ದು, ಅವುಗಳಲ್ಲಿ ಸಬರಮತಿಯು ಪ್ರಶ್ನಾತೀತವಾಗಿ ಅತ್ಯಂತ ಮಹತ್ವದ್ದಾಗಿದೆ. ಹಲವು ವರ್ಷಗಳಿಂದೀಚೆಗೆ ದೇಶಾದ್ಯಂತ ಲಕ್ಷಾಂತರ ಜನರು ಈ ಆಶ್ರಮಕ್ಕೆ ಭೇಟಿ ನೀಡುತ್ತಿದ್ದಾರೆ. ಇಲ್ಲಿನ ಪರಿಸರವು ಹೊಂದಿರುವ ಇತಿಹಾಸದ ಜೊತೆಗೆ ಅದರ ಸೌಂದರ್ಯ, ಸರಳತೆಗೆ ಮಾರುಹೋಗದವರು ಇರಲಾರರು.
ಕಲಾ ಸೌಂದರ್ಯದ ಮೇಲೆ ಬರ್ಬರ ಆಕ್ರಮಣ ಹಾಗೂ ಬೃಹತ್ ಸ್ಮಾರಕಗಳ ಕುರಿತ ಆಸಕ್ತಿಗಾಗಿ ಹೆಸರಾಗಿರುವ ಆಡಳಿತವು ಸಬರಮತಿ ಆಶ್ರಮದ ಜೊತೆ ವಿಶ್ವದರ್ಜೆ ಎಂಬ ಪದವನ್ನು ಬಳಸಹೊರಟಿರುವುದು ನಮ್ಮ ನರಗಳಲ್ಲಿ ಕಂಪನವನ್ನುಂಟು ಮಾಡಿದೆ. ಸಬರಮತಿ ಆಶ್ರಮವನ್ನು ಮೇಲ್ದರ್ಜೆಗೇರಿಸಲು ವಾಸ್ತುಶಿಲ್ಪಿಯಾಗಿ ಬಿಮಲ್ ಪಟೇಲ್ ಅವರನ್ನು ಆಯ್ಕೆ ಮಾಡಿರುವುದು ಇನ್ನಷ್ಟು ಹೆಚ್ಚು ದುಗುಡವನ್ನುಂಟು ಮಾಡಿದೆ. ಅವರು ವಿನ್ಯಾಸಗೊಳಿಸಿರುವ ಇತರ ಕಾಂಕ್ರಿಟ್ ಕಟ್ಟಡಗಳ ಮಾದರಿಗಳಿಗಿಂತ ಸಬರಮತಿ ಮತ್ತು ಸೇವಾ ಗ್ರಾಮದಲ್ಲಿರುವ ಗಾಂಧಿ ಆಶ್ರಮದಲ್ಲಿರುವ ಮನೆ ಹಾಗೂ ವಸತಿಗಳು ತೀರಾ ವಿಭಿನ್ನವಾದುದಾಗಿವೆ.
ಬಹುಶಃ ಬಿಮಲ್ ಪಟೇಲ್ ಅವರು ಪ್ರಧಾನಿಗೆ ಗೊತ್ತಿರುವಂತಹ ಏಕೈಕ ವಾಸ್ತುಶಿಲ್ಪಿಯಾಗಿದ್ದಾರೆ. ದಿಲ್ಲಿ, ವಾರಣಾಸಿ ಹಾಗೂ ಅಹ್ಮದಾಬಾದ್‌ನಲ್ಲಿರುವ ಇತರ ಸರಕಾರಿ ಯೋಜನೆಗಳ ಹಾಗೆ ಸಬರಮತಿ ಅಶ್ರಮದ ನವೀಕರಣವನ್ನು ಕೂಡಾ ಪಟೇಲ್‌ಗೆ ವಹಿಸಲಾಗಿದೆ. ಮೋದಿಯವರು ತನ್ನ ವಿಶ್ವಾಸದ ಕೆಲವು ಗುಜರಾತ್ ಸರಕಾರಿ ಅಧಿಕಾರಿಗಳನ್ನು ಈ ಯೋಜನೆಗೆ ನಿಯೋಜಿಸಿದ್ದಾರೆ. ಸಬರಮತಿ ಆಶ್ರಮದ ಪುನರ್‌ಅಭಿವೃದ್ಧಿ ಯೋಜನೆಯ ಕರಡನ್ನು ಮೋದಿಯವರ ಆಪ್ತವಲಯವು ಯಾವುದೇ ತಜ್ಞ ವಾಸ್ತುಶಿಲ್ಪಿಗಳು, ಪರಿಸರವಾದಿಗಳು, ಗಾಂಧಿವಾದಿಗಳು ಅಥವಾ ವಿದ್ವಾಂಸರ ಸಲಹೆಯನ್ನು ಪಡೆಯದೆ ರೂಪಿಸಿದೆೆ. ಸಬರಮತಿ ಆಶ್ರಮದ ಟ್ರಸ್ಟಿಗಳನ್ನು ಈ ಯೋಜನೆ ಹಾಗೂ ಅದರ ಅಂಶಗಳ ಬಗ್ಗೆ ಸಂಪೂರ್ಣ ಕತ್ತಲೆಯಲ್ಲಿಡಲಾಗಿದೆ. ಸಬರಮತಿ ಆಶ್ರಮದ ಕುರಿತ ಮೋದಿ ಯೋಜನೆಯು ಗೌಪ್ಯತೆ ಹಾಗೂ ಸರಕಾರ ಸ್ನೇಹಿ ಉದ್ಯಮಿಗಳ ಲಾಬಿಯಿಂದ ಕೂಡಿದೆ. 1960ರಲ್ಲಿ ಸಬರಮತಿ ಆಶ್ರಮದಲ್ಲಿ ಸಣ್ಣದೊಂದು ವಸ್ತುಸಂಗ್ರಹಾಲಯವನ್ನು ನಿರ್ಮಿಸಲು ಟ್ರಸ್ಟಿಗಳು ನಿರ್ಧರಿಸಿದ್ದರು. ಅದಕ್ಕೆ ವಾಸ್ತುಶಿಲ್ಪಿಯಾಗಿ ಅವರು ಗುಜರಾತಿಯನ್ನು ಆಯ್ಕೆ ಮಾಡಲಿಲ್ಲ. ಬದಲಿಗೆ ಅವರು ಮುಂಬೈನ ಚಾರ್ಲ್ಸ್ ಕೊರೆಯಾ ಅವರನ್ನು ನಿಯೋಜಿಸಿದ್ದರು.
ಗಾಂಧೀಜಿಯವರ ನಿಷ್ಪಕ್ಷಪಾತ ಧೋರಣೆಗೆ ಅನುಗುಣವಾಗಿ ವಿಭಿನ್ನ ಧರ್ಮದ ಹಾಗೂ ಭಾರತದ ಇನ್ನೊಂದು ಭಾಗದ ವಾಸ್ತುಶಿಲ್ಪಿಯನ್ನು ಅವರು ಈ ಕಾರ್ಯಕ್ಕೆ ನೇಮಿಸಿದ್ದರು. ಅಷ್ಟೇ ಅಲ್ಲದೆ ಕೊರೆಯಾ ಅವರ ವಾಸ್ತುಶಿಲ್ಪಗಳು ವ್ಯಾಪಕವಾಗಿ ಪ್ರಶಂಸೆಗೊಳಗಾಗಿದ್ದವು. ಸಾಮಾನ್ಯ ಗಾತ್ರದ ವಿಶಾಲ ಕಾರಿಡಾರ್‌ಗಳು, ಸ್ವಚ್ಛಂದವಾಗಿ ಹರಿದಾಡುವ ಗಾಳಿ ಹಾಗೂ ಸುತ್ತಮುತ್ತಲೂ ಮರಗಳಿಂದಾವೃತವಾದ ಈ ಮ್ಯೂಸಿಯಂನ್ನು ಗಾಂಧಿಯವರ ಕಾಲದ ಕಟ್ಟಡಗಳ ಜೊತೆ ಅತ್ಯಂತ ಸುಂದರವಾಗಿ ಸಮ್ಮಿಳಿತಗೊಳಿಸಿದ್ದರು.
ಅದೃಷ್ಟವಶಾತ್ ನಮ್ಮಲ್ಲಿ ಒಂದೇ ರಾಷ್ಟ್ರ, ಒಂದೇ ಪಕ್ಷ ಎಂಬ ವ್ಯವಸ್ಥೆ ಇಲ್ಲದೆ ಇರಬಹುದು. ಆದರೆ ನಾವು ಒಂದೇ ದೇಶ, ಒಂದೇ ವಾಸ್ತುಶಿಲ್ಪಿಯತ್ತ ಸಾಗುತ್ತಿದ್ದೇವೆ ಎಂದು ನನ್ನ ಅಮ್ದಾವಾಡಿಯ ಸಹದ್ಯೋಗಿಯೊಬ್ಬರು ಜೋಕ್ ಮಾಡಿದ್ದರು. ಒಂದು ವೇಳೆ ಶತಕೋಟ್ಯಧೀಶರೊಬ್ಬರು ತನ್ನ ಬೀಚ್ ಬಂಗಲೆ, ನಗರದ ವಸತಿಯನ್ನೋ ಅಥವಾ ಮರುಭೂಮಿಯ ಮನೆಯನ್ನೋ ತನ್ನ ಸ್ವಂತ ಖರ್ಚಿನಲ್ಲಿ ವಿನ್ಯಾಸಗೊಳಿಸಲು ಒಬ್ಬನೇ ವಾಸ್ತುಶಿಲ್ಪಿಯನ್ನು ನಿಯೋಜಿಸಿದಲ್ಲಿ ಅದನ್ನು ನೈತಿಕವಾಗಿ ಆಕ್ಷೇಪಿಸಲು ಸಾಧ್ಯವಿಲ್ಲ. ಆದರೆ ಒಂದು ವೇಳೆ ಒಬ್ಬನೇ ವಾಸ್ತುಶಿಲ್ಪಿಗೆ ಎಲ್ಲಾ ಪ್ರತಿಷ್ಠಿತ ಸರಕಾರಿ ಯೋಜನೆಗಳನ್ನು ನೀಡಿದಲ್ಲಿ ಆಗ ಖಂಡಿತವಾಗಿಯೂ ಸಮಸ್ಯೆಯಾಗಲಿದೆ. ಖಂಡಿತವಾಗಿಯೂ ಸರ್ವಾಧಿಕಾರಿ ಆಳ್ವಿಕೆಯ ದೇಶಗಳಲ್ಲಿ ನಿರ್ದಿಷ್ಟ ನಾಯಕರು ಅವರದೇ ಆದ ವಾಸ್ತುಶಿಲ್ಪಿಗಳನ್ನು ನೇಮಿಸಿಕೊಳ್ಳುತ್ತಾರೆ. ಇದೇ ವ್ಯಕ್ತಿಯು ಪುರಾತನ ದೇಗುಲ ನಗರವನ್ನು, ಆಧುನಿಕ ರಾಜಧಾನಿಯನ್ನು, ಗಾಂಧಿಯ ಆಶ್ರಮವನ್ನು ವಿನ್ಯಾಸಗೊಳಿಸಲು ವಿಶಿಷ್ಟವಾದ ಅರ್ಹತೆಯನ್ನು ಪಡೆದಿರುವುದು ಮೋದಿ ಆಡಳಿತದ ಸ್ವಜನ ಪಕ್ಷಪಾತ ಹಾಗೂ ಸರಕಾರಿ ಸ್ನೇಹಿ ಉದ್ಯಮಿಗಳ ಪರ ನಿಲುವಿನ ಸ್ಪಷ್ಟ ನಿದರ್ಶನವಾಗಿದೆ.
ವಿಷಾದಕರವೆಂದರೆ ಸಬರಮತಿ ಆಶ್ರಮವನ್ನು ನಡೆಸುತ್ತಿರುವ ಟ್ರಸ್ಟ್ ವಯೋವೃದ್ಧ ಪುರುಷರು ಹಾಗೂ ಮಹಿಳೆಯರಿಂದ ತುಂಬಿದ್ದು, ಅವರೆಲ್ಲರೂ ಗುಜರಾತ್‌ನಲ್ಲಿ ವಾಸಿಸುವವರಾಗಿದ್ದಾರೆ. ತನ್ನ ಸೇಡಿನ ನೀತಿಗೆ ಹೆಸರಾಗಿರುವ ಸರಕಾರದಿಂದ ತಾವು ಅಥವಾ ತಮ್ಮ ಕುಟುಂಬಿಕರು ತೊಂದರೆಗೆ ಸಿಲುಕಬಹುದೆಂಬ ಭಯದಿಂದ ಮಾತನಾಡಲು ಅವರು ಹೆದರುತ್ತಿದ್ದಾರೆ. ಹೀಗಾಗಿ ಮೋದಿ ಹಾಗೂ ಅವರ ಸ್ನೇಹಿತರು ರೂಪಿಸಿದ ಯೋಜನೆಗಳು ಅಬಾಧಿತವಾಗಿ ಮುಂದೆ ಸಾಗುತ್ತಿವೆ.
ಮೋದಿಯವರು ಸಬರಮತಿ ಆಶ್ರಮವನ್ನು ಪುನರಾಭಿವೃದ್ಧಿಗೆ ಮುಂದಾಗಿರುವುದು ಮಹಾತ್ಮಾ ಗಾಂಧೀಜಿಯವರ ಪ್ರೀತಿಯಿಂದಲ್ಲ. ಬದಲಿಗೆ ತನ್ನ ವರ್ಚಸ್ಸನ್ನು ಬೆಳೆಸಲು ಹಾಗೂ ತನ್ನ ಗತ ಚರಿತ್ರೆಯನ್ನು ಹೊಸತಾಗಿ ಬರೆಯುವ ಉದ್ದೇಶದಿಂದಾಗಿದೆ.
ಈಗ ನಡೆಯುತ್ತಿರುವ ಹೊಸದಿಲ್ಲಿಯ ಸೆಂಟ್ರಲ್ ವಿಸ್ತಾ ಯೋಜನೆಯು ವ್ಯಾಪಕವಾಗಿ ಟೀಕೆಗೊಳಗಾಗಿದೆ. ಆದಾಗ್ಯೂ, ನೈತಿಕ ದೃಷ್ಟಿಯಿಂದ ಸಬರಮತಿ ಅಶ್ರಮದ ಪುನರಾಭಿವೃದ್ಧಿಯು ಇನ್ನೂ ಹೆಚ್ಚು ಕಳವಳಕಾರಿಯಾಗಿದೆ. ಚುನಾಯಿತ ಪ್ರಧಾನಿಯಾದ ಮೋದಿಯವರಿಗೆ ರಾಜಧಾನಿಯಲ್ಲಿ ಸಾರ್ವಜನಿಕ ಜಾಗದಲ್ಲಿ ಕೆಟ್ಟದಾದ ಹಾಗೂ ದುಬಾರಿಯಾದ ಕಟ್ಟಡಗಳನ್ನು, ಸ್ಮಾರಕಗಳನ್ನು ನಿರ್ಮಿಸಲು ಅಧಿಕಾರವಿದೆ. ಸಬರಮತಿ ಆಶ್ರಮದ ವಿಷಯ ಇದಕ್ಕಿಂತ ವಿಭಿನ್ನವಾದುದಾಗಿದೆ. ಸಬರಮತಿ ಆಶ್ರಮ ಹಾಗೂ ಗಾಂಧೀಜಿ ಅಹ್ಮದಾಬಾದ್‌ಗೆ ಮಾತ್ರವಲ್ಲ, ಗುಜರಾತ್‌ಗೆ ಮಾತ್ರವಲ್ಲ, ಅಷ್ಟೇ ಏಕೆ ಭಾರತಕ್ಕೆ ಮಾತ್ರವೇ ಸೇರಿದವರಲ್ಲ. ಅವರು ಹುಟ್ಟಿರುವ ಹಾಗೂ ಇನ್ನೂ ಹುಟ್ಟಲಿರುವಂತಹ ಪ್ರತಿಯೊಬ್ಬ ಮಾನವನಿಗೂ ಸೇರಿದವರಾಗಿದ್ದಾರೆ. ಜೀವಮಾನವಿಡೀ ಗಾಂಧೀಜಿಯವರ ಬದುಕಿಗೆ ವಿರೋಧಾಭಾಸದಿಂದ ಕೂಡಿದಂತಹ ಕೆಲಸವನ್ನು ಮಾಡುತ್ತಿರುವಂತಹ ರಾಜಕಾರಣಿ ಹಾಗೂ ಆ ರಾಜಕಾರಣಿಯ ಆತ್ಮೀಯನೆಂಬುದು ಪ್ರಧಾನ ಅರ್ಹತೆಯಾಗಿರುವ ವಾಸ್ತುಶಿಲ್ಪಿಗೆ ಮಹಾತ್ಮಾರಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ಸ್ಥಳದ ಆಸುಪಾಸನ್ನು ಅಸ್ತವ್ಯಸ್ತಗೊಳಿಸಲು ಯಾವುದೇ ಹಕ್ಕಿಲ್ಲ.