ಪುತ್ತೂರು : ದೇವಳದ ಉತ್ಸವಕ್ಕೆ ಅಕ್ಕಿಗಾಗಿ ತಮ್ಮ ಬೇಸಾಯದ ಗದ್ದೆ ಬಿಟ್ಟುಕೊಟ್ಟ ಅಬ್ಬಾಸ್, ಅಬೂಬಕ್ಕರ್, ಪುತ್ತು
ಪುತ್ತೂರು: ದೇವಳದ ಉತ್ಸವಕ್ಕೆ ಅಕ್ಕಿಗಾಗಿ ತಮ್ಮ ಬೇಸಾಯದ ಗದ್ದೆಯನ್ನು ಅಬ್ಬಾಸ್, ಅಬೂಬಕ್ಕರ್, ಪುತ್ತು ಎಂಬವರು ಬಿಟ್ಟುಕೊಟ್ಟು ಮಾದರಿಯಾದ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಎಲಿಯ ಎಂಬಲ್ಲಿ ನಡೆದಿದೆ.
ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವತಿಯಿಂದ 'ಎಲಿಯ ಗದ್ದೆ ಕೃಷಿ ಕ್ಷೇತ್ರ' ಎಂಬ ಹೆಸರಿನಲ್ಲಿ ನಡೆಯಲಿರುವ ಭತ್ತ ಕೃಷಿಗಾಗಿ ಇಲ್ಲಿನ ಮೂವರು ತಮ್ಮ ಸ್ವಂತ ಗದ್ದೆಯನ್ನು ಬಿಟ್ಟುಕೊಟ್ಟಿದ್ದಾರೆ.
ಇಲ್ಲಿನ ಮಜಲುಗದ್ದೆ ಪ್ರದೇಶದ ನಿವಾಸಿಗಳಾದ ಒಂದೇ ಕುಟುಂಬಸ್ಥರಾಗಿರುವ ಪುತ್ತು ಮಜಲುಗದ್ದೆ, ಅಬ್ಬಾಸ್ ಮಜಲುಗದ್ದೆ ಮತ್ತು ಕೂಡುರಸ್ತೆ ಅಬೂಬಕ್ಕರ್ ಮಜಲುಗದ್ದೆ ಅವರು ತಮ್ಮ ಬೇಸಾಯದ ಗದ್ದೆಯನ್ನು ಬಿಟ್ಟುಕೊಟ್ಟಿದ್ದು, ಈ ಮೂವರು ತಮ್ಮ ಎರಡೂವರೆ ಎಕ್ರೆಯಷ್ಟು ಬೇಸಾಯದ ಗದ್ದೆಯನ್ನು ತಮ್ಮೂರಿನ ದೇವಸ್ಥಾನಕ್ಕೆ ಬಿಟ್ಟುಕೊಟ್ಟಿದ್ದು ಈಗ ದೇವಳದ ವತಿಯಿಂದ ಗದ್ದೆ ಕೃಷಿ ಮಾಡಲಾಗುತ್ತಿದೆ.
ದೇವಳದ ಬ್ರಹ್ಮಕಲಶೋತ್ಸವಕ್ಕೆ ದೇವಳದ ವತಿಯಿಂದಲೇ ಬೇಸಾಯ ಮಾಡಿದ ಗದ್ದೆಯಲ್ಲಿ ಬೆಳೆದ ಭತ್ತದಿಂದ ಅನ್ನಸಂತರ್ಪಣೆ ಮಾಡುವ ದೇವಳದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿಯ ಮನವಿಗೆ ಸ್ಪಂದನೆ ನೀಡಿದ ಗ್ರಾಮದ ಅವರು ಸುಮಾರು ಮೂರು ಮುಡಿ ಗದ್ದೆ ಅಂದರೆ ಸುಮಾರು ಎರಡೂವರೆ ಎಕರೆ ಗದ್ದೆಯನ್ನು ಬಿಟ್ಟುಕೊಟ್ಟದ್ದು ಅಲ್ಲದೆ ಸ್ವತಃ ಗದ್ದೆಗಿಳಿದು ನೇಜಿ ನಾಟಿ ಮಾಡುವ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ದೇವಳದ ಉತ್ಸವಕ್ಕೆ ಬಳಸುವ ಅಕ್ಕಿ ತಯಾರಿಸಲು ತಮ್ಮ ಬೇಸಾಯದ ಗದ್ದೆಯನ್ನು ಬಿಟ್ಟುಕೊಟ್ಟಿದ್ದು ಇದೀಗ ಸಾಕಷ್ಟು ಸುದ್ದಿಯಾಗಿದೆ.
ಗದ್ದೆಯಿಂದಲೇ ಉತ್ಸವಕ್ಕೆ ಬೇಕಾದ ಅಕ್ಕಿ
ಗ್ರಾಮದ ಅತೀ ಪ್ರಾಚೀನ ದೇವಾಲಯವಾಗಿರುವ ಎಲಿಯ ಶ್ರೀ ವಿಷ್ಣುಮೂರ್ತಿ ದೇವಳದ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದು, ಮುಂದಿನ ವರ್ಷದ ಫೆಬ್ರವರಿಯಲ್ಲಿ ಬ್ರಹ್ಮಕಲಶೋತ್ಸವ ಮಾಡಲು ದೇವಳದ ವ್ಯವಸ್ಥಾಪನಾ ಸಮಿತಿ ನಿರ್ಧರಿಸಿದೆ. ಉತ್ಸವದ ಸಮಯದಲ್ಲಿ ಅನ್ನ ಸಂತರ್ಪಣೆಗೆ ಬೇಕಾದ ಅಕ್ಕಿಯನ್ನು ಸ್ವತಃ ಈ ಪರಿಸರದ ಗದ್ದೆಯಿಂದಲೇ ಬೆಳೆಸಬೇಕು ಎಂಬ ಜೀರ್ಣೋದ್ಧಾರ ಸಮಿತಿಯ ಚಿಂತನೆಗೆ ಸ್ಥಳೀಯರಾದ ವೆಂಕಪ್ಪ ನಾಯ್ಕ ಎಂಬವರು ಮೊದಲಿಗೆ ತಮ್ಮ ಹಡೀಲು ಬಿದ್ದ ಗದ್ದೆಯನ್ನು ಬಿಟ್ಟುಕೊಡುವುದಾಗಿ ತಿಳಿಸಿದರು. ಅದರಂತೆ ಸಮಿತಿಯವರು ಗದ್ದೆ ಕೃಷಿಗೆ ಮುಂದಾದರು. ಬಳಿಕ ಹೆಚ್ಚು ಗದ್ದೆ ಬೇಸಾಯದ ಅಗತ್ಯತೆಯ ಬಗ್ಗೆ ಅರಿತ ಮಜಲುಗದ್ದೆ ಪರಿಸರದ ಮೂವರು ತಮ್ಮ ಗದ್ದೆಯನ್ನು ಈ ಬಾರಿಯ ಬೆಳೆಗಾಗಿ ದೇವಳಕ್ಕೆ ಬಿಟ್ಟು ಕೊಡಲು ಮುಂದಾಗಿದ್ದಾರೆ. ಅದರಂತೆ ದೇವಳದ ವತಿಯಿಂದ ನಾಟಿ ಕಾರ್ಯ ನಡೆಸಲಾಗಿದೆ ಎಂದು ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು ತಿಳಿಸಿದ್ದಾರೆ.
ಅಣ್ಣ ತಮ್ಮಂದಿರಾದ ಅಬ್ಬಾಸ್ ಮತ್ತು ಅಬೂಬಕ್ಕರ್ ಅವರ ಗದ್ದೆ ಹಾಗೂ ಇವರ ಅಣ್ಣನ ಮಗನಾದ ಪುತ್ತು ಇವರ ಗದ್ದೆ ಅಕ್ಕಪಕ್ಕದಲ್ಲಿದೆ. ಒಟ್ಟು 2.5 ಎಕರೆ ಗದ್ದೆ ಇದೆ. ಪ್ರತಿ ವರ್ಷ ಇವರು ಮುಂಗಾರು ಬೇಸಾಯ ಮಾಡುತ್ತಿದ್ದಾರೆ. ಈ ಬಾರಿ ಮಾತ್ರ ಗದ್ದೆ ಬೇಸಾಯವನ್ನು ಎಲಿಯ ಶ್ರೀ ವಿಷ್ಣುಮೂರ್ತಿ ದೇವಳಕ್ಕಾಗಿ ಬಿಟ್ಟು ಕೊಟ್ಟಿದ್ದಾರೆ. ಗ್ರಾಮಸ್ಥರೆಲ್ಲ ಸೇರಿಕೊಂಡು ನೇಜಿ ನಾಟಿ ಮಾಡಿದ್ದಾರೆ. ಈ ಗದ್ದೆಯಲ್ಲಿ ಬೆಳೆದ ಅಕ್ಕಿ ದೇವಳದ ಉತ್ಸವಕ್ಕೆ ಬಳಕೆಯಾಗಲಿದೆ.
ದೇವಳಕ್ಕೆ ಭತ್ತ ಬೇಸಾಯ ಮಾಡಲು ನೀಡಿದ ಗದ್ದೆಯಲ್ಲಿ ನೇಜಿ ನಾಟಿ ನಡೆದಾಗ ಸ್ವತಃ ಅಬ್ಬಾಸ್, ಪುತ್ತು, ಸತ್ತಾರ್ ಕುಟುಂಬಸ್ಥರು ಗದ್ದೆಗಿಳಿದು ನೇಜಿ ನಾಟಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಳ್ತಂಗಡಿಯ ಕಳೆಂಜ ಗಿರೀಶ್ ಗೌಡ 800 ಸೂಡಿ ನೇಜಿ ಉಚಿತವಾಗಿ ನೀಡಿದ್ದಾರೆ. ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀಧರ ರಾವ್ ಕೆ.ನೇತೃತ್ವದಲ್ಲಿ ಉಚಿತ ನೇಜಿ ನಾಟಿ ಮಾಡಿದ್ದಾರೆ. ಇದಲ್ಲದೆ ಎಲಿಯ ಪರಿಸರದ 40 ಕ್ಕೂ ಅಧಿಕ ಗ್ರಾಮಸ್ಥರು ಜಾತಿ, ಧರ್ಮಗಳನ್ನು ಮೀರಿ ಗದ್ದೆಗಿಳಿದು ನೇಜಿ ನಾಟಿ ಕೆಲಸವನ್ನು ಪೂರ್ಣಗೊಳಿಸಿದ್ದಾರೆ.
ಸರ್ವೆ ಗ್ರಾಮವು ಪುಟ್ಟದಾದರೂ ಇಲ್ಲಿ ಕೋಮು ಸಾಮರಸ್ಯ ಬಹಳ ಹಿಂದಿನಿಂದಲೇ ಬೆಳೆದುಕೊಂಡು ಬಂದಿದೆ. ಇಲ್ಲಿನ ಯುವಕರು ಸೇರಿಕೊಂಡು ಸೌಹಾರ್ದ ವೇದಿಕೆ ಎಂಬ ಸಂಘಟನೆ ಕಟ್ಟಿಕೊಂಡಿದ್ದು ಈ ವೇದಿಕೆಯ ಮೂಲಕ ನಡೆಯುವ ಕ್ರೀಡಾ ಚಟುವಟಿಕೆಗೆ ಹಿಂದೂ ಮುಸ್ಲಿಂ, ಕ್ರೈಸ್ತ ಎಂಬ ಬೇಧ ಭಾವವಿಲ್ಲದೆ ಎಲ್ಲರೂ ಸಹಕಾರ ನೀಡುತ್ತಿರುವುದು ಈಗಾಗಲೇ ಎಲ್ಲರ ಮೆಚ್ಚುಗೆ ಗಳಿಸಿದೆ. ಗ್ರಾಮದಲ್ಲಿ ಇದುವರೆಗೆ ಯಾವುದೇ ಕೋಮು ಸಾಮರಸ್ಯ ಕದಡುವ ಘಟನೆಗಳು ನಡೆದಿಲ್ಲ ಎನ್ನುತ್ತಾರೆ ಸ್ಥಳೀಯರು.
''ನಮ್ಮ ಹಿರಿಯರಿಂದಲೇ ಬೇಸಾಯ ಮಾಡಿಕೊಂಡು ಬಂದಿದ್ದ ಗದ್ದೆ ಇದಾಗಿದೆ. ಕಳೆದ ವರ್ಷ ಬೇಸಾಯ ಮಾಡಿಲ್ಲ. ಪ್ರತಿ ವರ್ಷ ನಮಗೆ ಸುಮಾರು 7 ಕ್ವಿಂಟಾಲ್‍ನಷ್ಟು ಅಕ್ಕಿ ಉತ್ಪಾದನೆ ಆಗುತ್ತಿತ್ತು. ಈ ವರ್ಷ ನಮ್ಮೂರಿನ ದೇವಳಕ್ಕೆ ಗದ್ದೆಯನ್ನು ಬೇಸಾಯ ಮಾಡಲು ಬಿಟ್ಟುಕೊಟ್ಟಿದ್ದೇವೆ. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ''.
- ಪುತ್ತು ಮಜಲುಗದ್ದೆ, ಗದ್ದೆ ಬಿಟ್ಟುಕೊಟ್ಟವರು
''ನಮ್ಮೂರಿನ ದೇವಳಕ್ಕೆ ಗದ್ದೆ ಬೇಸಾಯಕ್ಕೆ ಬಿಟ್ಟುಕೊಟ್ಟಿರುವ ಬಗ್ಗೆ ಖುಷಿಯಿದೆ. ನನಗೆ ಪ್ರತಿವರ್ಷ 6 ಕ್ವಿಂಟಾಲ್‍ನಷ್ಟು ಅಕ್ಕಿ ಉತ್ಪಾದನೆಯಾಗುತ್ತಿತ್ತು. ಈ ವರ್ಷ ಬಿತ್ತನೆ ಮಾಡುವುದು ಎಂದು ನಿರ್ಧರಿಸಿದ್ದ ಸಮಯದಲ್ಲಿ ದೇವಳಕ್ಕೆ ಕೊಡುವ ಬಗ್ಗೆ ಪ್ರಸ್ತಾಪ ಬಂದಾಗ ಕೊಡಲು ಮನಸ್ಸು ಮಾಡಿದೆ. ನಮ್ಮಲ್ಲಿ ದೇವಸ್ಥಾನಕ್ಕೆ ಕೊಡಲು ಬೇರೆನೂ ಇಲ್ಲ ಆದ್ದರಿಂದ ಗದ್ದೆಯನ್ನೇ ಬೇಸಾಯಕ್ಕೆ ಬಿಟ್ಟುಕೊಟ್ಟಿದ್ದೇವೆ''.
- ಅಬ್ಬಾಸ್ ಮಜಲುಗದ್ದೆ, ಗದ್ದೆ ಬಿಟ್ಟುಕೊಟ್ಟವರು