varthabharthi


ಪ್ರಚಲಿತ

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ದುರವಸ್ಥೆ

ವಾರ್ತಾ ಭಾರತಿ : 26 Jul, 2021
ಸನತ್ ಕುಮಾರ್ ಬೆಳಗಲಿ

ಕೊರೋನ ಒಂದು ಮತ್ತು ಎರಡನೇ ಅಲೆಯಿಂದ ಭಾರತ ತತ್ತರಿಸಿ ಹೋಗಿದೆ.ಸಾವಿರಾರು ಮಂದಿ ಸಾವಿಗೀಡಾಗಿದ್ದಾರೆ. ಆಮ್ಲಜನಕ ಇಲ್ಲದೇ ಸಾವುಗಳು ಸಂಭವಿಸಿವೆ. ಗಂಗಾನದಿಯಲ್ಲಿ ಹೆಣಗಳು ತೇಲಿ ಬಂದಿವೆ. ಸುಮಾರು 60 ಕೋಟಿ ಮಂದಿ ಆದಾಯದ ಮೂಲವನ್ನೇ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಕ್ಕಳ ವಿದ್ಯಾಭ್ಯಾಸ ನಿಂತು ಹೋಗಿದೆ. ಒಟ್ಟಾರೆ ಆರ್ಥಿಕತೆ ಕುಸಿದು ಪಾತಾಳಕ್ಕೆ ಹೋಗಿದೆ. ಇಂತಹ ಸಂಕಟದ ಸನ್ನಿವೇಶದಲ್ಲಿ ಸರಕಾರ ಎಚ್ಚರದ ಹೆಜ್ಜೆಯನ್ನು ಇಡಬೇಕು. ಮತ್ತೆ ಕೋವಿಡ್ ಬರದಂತೆ ಎಲ್ಲರಿಗೂ ಲಸಿಕೆ ಕೊಡಲು ಮೊದಲ ಆದ್ಯತೆ ನೀಡಬೇಕು.

 ಕೋವಿಡ್-19 ಸಾಂಕ್ರಾಮಿಕದಿಂದ ದೇಶವೇ ಸೂತಕದ ಮನೆಯಂತೆ ಆಗಿರುವುದು ಎಲ್ಲರಿಗೂ ತಿಳಿದ ಸಂಗತಿ. ಇದರ ಮೊದಲ ಮತ್ತು ಎರಡನೇ ಅಲೆಯಲ್ಲಿ ಕೊಚ್ಚಿ ಹೋದವರ ಕುಟುಂಬಗಳು ಬೀದಿಗೆ ಬಿದ್ದಿವೆ. ಇದು ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಅವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಆದರೆ, ಅಧಿಕಾರದಲ್ಲಿ ಇರುವವರ ಅಂತರಾತ್ಮಕ್ಕೆ ಈ ಯಾತನೆಯ ಆಕ್ರಂದನ ಇನ್ನೂ ತಲುಪಿಲ್ಲ. ದೇಹದ ಪಂಚೇದ್ರಿಯಗಳು ನಿರ್ಜೀವವಾದಾಗ ಹೀಗಾಗುತ್ತದೆ.
  ಕೋವಿಡ್ ಎರಡನೇ ಅಲೆ ಮಾರ್ಚ್ ಕೊನೆ ಮತ್ತು ಎಪ್ರಿಲ್ ತಿಂಗಳಲ್ಲಿ ಅಪ್ಪಳಿಸಿ ಜೂನ್ ಕೊನೆಯವರೆಗೂ ಭಯಾನಕ ರೂಪ ತಾಳಿತು. ಆ ಸಂಕಟದ ಸನ್ನಿವೇಶದಲ್ಲಿ ಆಮ್ಲಜನಕ ಮತ್ತು ವೆಂಟಿಲೇಟರ್ ಇಲ್ಲದೇ ಅನೇಕ ಸಾವುಗಳು ಸಂಭವಿಸಿದವು. ಆದರೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಪ್ರವೀಣ್ ಪವಾರ್ ಅವರ ಪ್ರಕಾರ, ‘ಆಮ್ಲಜನಕ ಕೊರತೆಯ ಕಾರಣದಿಂದ ರೋಗಿಗಳು ಸಾವಿಗೀಡಾಗಿರುವ ಬಗ್ಗೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ನಿರ್ದಿಷ್ಟ ವರದಿ ಬಂದಿಲ್ಲ, ಹೀಗಾಗಿ ಆಮ್ಲಜನಕ ಕೊರತೆಯಿಂದ ಜನರು ಮೃತಪಟ್ಟಿಲ್ಲ’. ಇದು ಸಂಸತ್ತಿನಲ್ಲಿ ಸಚಿವರು ನೀಡಿದ ಉತ್ತರವಾಗಿತ್ತು. ಯಾವ ಉತ್ತರ ನೀಡಿದರೂ ನಡೆಯುತ್ತದೆ. ದೇವರು, ಧರ್ಮ, ಜಾತಿ, ಮತದ ಮೇಲೆ ಜನ ಮತ್ತೆ ಗೆಲ್ಲಿಸುತ್ತಾರೆ ಎಂಬ ಅಹಂಭಾವ ಇದ್ದಾಗ ಮಾತ್ರ ಇಂತಹ ಉತ್ತರ ಅಧಿಕಾರದಲ್ಲಿ ಇರುವವರಿಂದ ಬರುತ್ತದೆ.

ಆಮ್ಲಜನಕದ ಕೊರತೆಯಿಂದ ಸಾವು ಸಂಭವಿಸಿಲ್ಲ ಎಂದು ಅತಿ ಜಾಣತನದಿಂದ ವೈದ್ಯಕೀಯ ದಾಖಲೆಗಳಲ್ಲಿ ಮರಣ ಪ್ರಮಾಣ ಪತ್ರಗಳಲ್ಲಿ ದಾಖಲಿಸದೇ ಇರಬಹುದು. ಆದರೆ, ಹಾಡಹಗಲೇ ಕಣ್ಣೆದುರೇ ಸಂಭವಿಸಿದ ಸಾವುಗಳಿಗೆ ದಾಖಲೆಗಳ ನೆಪ ತೋರಿಸಿ ದೇಶದಲ್ಲಿ ಆಮ್ಲಜನಕದ ಕೊರತೆ ಇಲ್ಲವೆಂದು ಸರಕಾರ ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಳ್ಳಬಹುದೇ? ಇಂತಹ ಹೇಳಿಕೆ ನೀಡುವವರಿಗೆ ಮನಸ್ಸಾಕ್ಷಿ ಎಂಬುದಾದರೂ ಇರಬಾರದೇ? ದೂರವೇಕೆ, ನಮ್ಮ ರಾಜ್ಯದ ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ 34ಕ್ಕೂ ಹೆಚ್ಚು ಸಾವುಗಳು ಸಂಭವಿಸಿದವು. ಅಲ್ಲಿ ಮಾತ್ರವಲ್ಲ ಕಲಬುರಗಿ, ಬೆಳಗಾವಿ, ವಿಜಯಪುರಗಳಲ್ಲೂ ಇಂತಹ ಸಾವುಗಳು ಸಂಭವಿಸಿವೆ.ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?

ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿಲ್ಲ ಎಂದಾದರೆ ಕರ್ನಾಟಕದ ಬಿಜೆಪಿ ಸರಕಾರ ತನ್ನದೇ ಕೇಂದ್ರ ಸರಕಾರದಿಂದ ಆಮ್ಲಜನಕ ಕೊಡಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದೇಕೆ? ಕೇಂದ್ರ ಸರಕಾರ ಇದಕ್ಕೆ ಸುಪ್ರೀಂ ಕೋರ್ಟಿನಿಂದಲೇ ತಡೆಯಾಜ್ಞೆ ತರಲು ಯತ್ನಿಸಿದ್ದೇಕೆ?
ಕಳೆದ ವರ್ಷ ಕೊರೋನ ಮೊದಲ ಅಲೆ ಅಪ್ಪಳಿಸಿದಾಗ ಖಾಸಗಿ ಆಸ್ಪತ್ರೆಗಳು ಸಂಪೂರ್ಣ ಕೈ ಚೆಲ್ಲಿದವು. ಆಗ ಸರಕಾರಿ ಆಸ್ಪತ್ರೆಗಳೇ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಅನೇಕರನ್ನು ಬದುಕಿಸಿದವು. ಸಾವಿರಾರು ಸರಕಾರಿ ವೈದ್ಯರು, ದಾದಿಯರು ಮತ್ತು ವೈದ್ಯಕೀಯ ಸಿಬ್ಬಂದಿ ತಮ್ಮ ಮನೆ ಮಂದಿಯನ್ನೇ ಮರೆತು ಹಗಲೂ ರಾತ್ರಿ ದುಡಿದರು.

ಕೊರೋನ ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ಸಾವಿರಾರು ಜನ ಆಸ್ಪತ್ರೆಗಳಿಗೆ ದಾಖಲಾದರು. ಕರ್ನಾಟಕ ಮಾತ್ರವಲ್ಲ ದೇಶದ ಬಹುತೇಕ ರಾಜ್ಯಗಳಲ್ಲಿ ಆಮ್ಲಜನಕದ ಕೊರತೆ ತೀವ್ರವಾಗಿತ್ತು. ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡುವಂತೆ ಅನೇಕ ಆಸ್ಪತ್ರೆಗಳು ಸರಕಾರಕ್ಕೆ ದುಂಬಾಲು ಬಿದ್ದಿದ್ದವು. ಆಮ್ಲಜನಕ ಇಲ್ಲದೇ ಅನೇಕರು ಸಾವಿಗೀಡಾದರು. ರೋಗಿಗಳ ಕುಟುಂಬಗಳ ಸದಸ್ಯರು ಆಮ್ಲಜನಕದ ಸಲುವಾಗಿ ಸಾಮಾಜಿಕ ಜಾಲತಾಣದ ಮೂಲಕ ಪದೇ ಪದೇ ಮನವಿ ಮಾಡಿಕೊಳ್ಳುತ್ತಿದ್ದರು. ಹಲವಾರು ಸಂಘ-ಸಂಸ್ಥೆಗಳು, ಸ್ವಯಂ ಸೇವಾ ಸಂಘಟನೆಗಳು ಆಮ್ಲಜನಕ ಪೂರೈಸಲು ಪರದಾಡಿದವು. ವಾಸ್ತವಾಂಶ ಹೀಗಿರುವಾಗ ಆಮ್ಲಜನಕದ ಕೊರತೆಯಿಂದ ಜನ ಸಾವಿಗೀಡಾಗಿಲ್ಲ ಎಂದು ಹೇಳುವುದು ಆತ್ಮವಂಚನೆ ಮಾತ್ರವಲ್ಲ, ಜನ ದ್ರೋಹವಾಗುತ್ತದೆ.

ಕೊರೋನ ಸಾಂಕ್ರಾಮಿಕದ ಸಾವುಗಳ ಹೊಣೆಯಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಪ್ಪಿಸಿಕೊಳ್ಳುವಂತಿಲ್ಲ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬಗ್ಗೆ ಸರಕಾರಗಳ ಪ್ರಜ್ಞಾಪೂರ್ವಕ ನಿರ್ಲಕ್ಷವೇ ಪ್ರಜೆಗಳ ಸಾವಿಗೆ ಕಾರಣ. ದೇಶದಲ್ಲಿ ಜಾಗತೀಕರಣದ ಕರಾಳ ಶಕೆ ಆರಂಭವಾದ ನಂತರ ಮುಂಚೆ ಸೇವೆಯಾಗಿದ್ದ ವೈದ್ಯಕೀಯ ಎಂಬುದು ವ್ಯಾಪಾರದ ರೂಪ ತಾಳಿತು. ಮಲ್ಟಿಸ್ಪೆಶಾಲಿಟಿ ಕಾರ್ಪೊರೇಟ್ ಆಸ್ಪತ್ರೆಗಳು ತಲೆ ಎತ್ತಿದವು. ಸಾರ್ವಜನಿಕ ಅಂದರೆ ಸರಕಾರಿ ಆಸ್ಪತ್ರೆಗಳು ಸಂಪೂರ್ಣ ನಿರ್ಲಕ್ಷಿಸಲ್ಪಟ್ಟವು. ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಸರಕಾರ ಬಜೆಟ್‌ನಲ್ಲಿ ಒದಗಿಸುತ್ತಿದ್ದ ಅನುದಾನವನ್ನು ಕಡಿತ ಮಾಡುತ್ತಾ ಬಂತು. ಅದರ ದುಷ್ಪರಿಣಾಮವನ್ನು ಕೋವಿಡ್ ಸಾಂಕ್ರಾಮಿಕದಿಂದ ಕಂಗಾಲಾದ ಜನ ಅನುಭವಿಸಬೇಕಾಯಿತು.
ಸರಕಾರಿ ಆಸ್ಪತ್ರೆಗಳು ಸುಸಜ್ಜಿತವಾಗಿದ್ದರೆ ಜನರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿರಲಿಲ್ಲ. ಸರಕಾರ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸುಸಜ್ಜಿತ ಗೊಳಿಸಲು ಇನ್ನಾದರೂ ಗಮನ ಹರಿಸಬೇಕು.

ಕೊರೋನ ಎರಡನೇ ಅಲೆ ಅಪ್ಪಳಿಸಿದಾಗ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಿದರೂ ಅವುಗಳು ಮಾಡಿದ ಲಕ್ಷಾಂತರ ರೂ. ಬಿಲ್ಲುಗಳಿಂದ ಅನೇಕ ಮಧ್ಯಮ ವರ್ಗದ ಜನ ಮನೆ ಮಾರು ಮಾರಿಕೊಳ್ಳಬೇಕಾಯಿತು. ಕಲಬುರಗಿ, ಹುಬ್ಬಳ್ಳಿ, ಬೆಂಗಳೂರು, ದಾವಣಗೆರೆ, ಮಂಗಳೂರು ಮುಂತಾದ ಜಿಲ್ಲಾ ಕೇಂದ್ರಗಳಲ್ಲಿ ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಯೊಬ್ಬನ ಎರಡು ವಾರಗಳ ದಾಖಲಾತಿಗೆ ಐದಾರು ಲಕ್ಷ ರೂ. ವಸೂಲಿ ಮಾಡಿದ ಉದಾಹರಣೆಗಳಿವೆ. ಸರಕಾರಿ ಆಸ್ಪತ್ರೆಗಳ ಸಣ್ಣಪುಟ್ಟ ಲೋಪದೋಷಗಳನ್ನು ದೊಡ್ಡದು ಮಾಡುವ ಮಾಧ್ಯಮಗಳು ಮತ್ತು ಪತ್ರಕರ್ತರು ಖಾಸಗಿ ಆಸ್ಪತ್ರೆಗಳ ಸುಲಿಗೆಯ ಬಗ್ಗೆ ಮೌನ ತಾಳಲು ಕಾರಣವೇನು ಎಂಬುದನ್ನು ಅವರೇ ಹೇಳಬೇಕು.

ಕರ್ನಾಟಕದ ಉದಾಹರಣೆ ತೆಗೆದುಕೊಂಡರೆ ಅನೇಕ ಜಿಲ್ಲಾ ಮತ್ತು ತಾಲೂಕು ಮಟ್ಟದ ಸರಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳಿದ್ದರೂ ಅವುಗಳನ್ನು ಉಪಯೋಗಿಸುವ ಪರಿಣಿತ ಸಿಬ್ಬಂದಿಯ ನೇಮಕವಾಗಿಲ್ಲ. ಇದರ ಪರಿಣಾಮವಾಗಿ ಅವುಗಳು ಅನೇಕ ಕಡೆ ತುಕ್ಕು ಹಿಡಿದು ಕೆಟ್ಟು ಹೋಗಿವೆ. ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳದಿರುವುದಕ್ಕೆ ಸಂಪನ್ಮೂಲಗಳ ಕೊರತೆ ಅಲ್ಲದೆ ಬೇರೇನೂ ಅಲ್ಲ. ಜನಸಂಖ್ಯೆಗೆ ಅನುಗುಣವಾಗಿ ಕೋವಿಡ್ ಪರೀಕ್ಷೆ ಗಳು ನಡೆಯದಿರುವುದೇ ಪರಿಸ್ಥಿತಿ ಉಲ್ಬಣವಾಗಲು ಕಾರಣವಾಯಿತು.

ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಎಂದೂ ಸಂಪನ್ಮೂಲಗಳ ಕೊರತೆ ಆಗಬಾರದು. ಆರೋಗ್ಯ ಕಾರ್ಯಕರ್ತರನ್ನು ಪ್ರೋತ್ಸಾಹಿಸಬೇಕು. ಅವರಿಗೆ ಸಕಲ ಸಂಪನ್ಮೂಲಗಳನ್ನು ಒದಗಿಸಬೇಕು. ಇದಕ್ಕೆ ಕೇರಳ ಮಾದರಿಯಾಗಿದೆ.

ಸಂಸತ್ತಿನಲ್ಲಿ ಹೇಳಿಕೆ ನೀಡಿ ಕೈ ತೊಳೆದುಕೊಳ್ಳುವುದರಿಂದ ಆಮ್ಲಜನಕ ಕೊರತೆಯಿಂದಾದ ಸಾವುಗಳನ್ನು, ಗಂಗಾನದಿಯಲ್ಲಿ ತೇಲಿ ಬರುತ್ತಿದ್ದ ಮೃತದೇಹಗಳನ್ನು ಮುಚ್ಚಿಡಲು ಆಗುವುದಿಲ್ಲ. ಸತ್ಯ ಬಯಲಿಗೆಳೆದುದಕ್ಕೆ ‘ದೈನಿಕ್ ಭಾಸ್ಕರ್’ ಪತ್ರಿಕೆ ಮತ್ತು ‘ಭಾರತ್ ಸಮಾಚಾರ್’ ಸುದ್ದಿ ವಾಹಿನಿಗಳನ್ನು ನಡೆಸುತ್ತಿರುವ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ದಾಳಿ ಮಾಡಿಸಿ ಸತ್ಯವನ್ನು ಬಚ್ಚಿಡಲು ಸಾಧ್ಯವಿಲ್ಲ ಎಂಬುದನ್ನು ಅಧಿಕಾರದಲ್ಲಿರುವವರು ಅರಿತುಕೊಂಡರೆ ಕ್ಷೇಮ.

ಕೇಂದ್ರ ಆರೋಗ್ಯ ಮಂತ್ರಿಗಳು ಈ ಲೋಪಗಳನ್ನು ಮುಚ್ಚಿಟ್ಟು ಆಮ್ಲಜನಕ ಕೊರತೆಯಿಂದ ಕೋವಿಡ್ ರೋಗಿಗಳು ಸಾವಿಗೀಡಾಗಿಲ್ಲ ಎಂದು ಹೇಳಿ ಕೈ ತೊಳೆದುಕೊಂಡರು. ಕೋವಿಡ್ ಸಾಂಕ್ರಾಮಿಕದಂತಹ ಸೂಕ್ಷ್ಮ ವಿಷಯಗಳಲ್ಲಿ ಸರಕಾರ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಸರಕಾರ ನೀಡುವ ಮಾಹಿತಿಯ ಸತ್ಯಾಸತ್ಯತೆಯ ಬಗ್ಗೆ ಜನರಲ್ಲಿ ಸಂದೇಹ ಉಂಟಾಗುವುದು ಒಳ್ಳೆಯ ಬೆಳವಣಿಗೆ ಅಲ್ಲ. ಕೋವಿಡ್ ಮೊದಲ ಅಲೆಯ ಕಾಲದಿಂದಲೂ ಸರಕಾರದ ಬಳಿ ಖಚಿತ ಮಾಹಿತಿ ದಾಖಲಾಗಿಲ್ಲ.

ಉದಾಹರಣೆಗೆ, ಆಮ್ಲಜನಕವಿಲ್ಲದೆ ಸಾವಿಗೀಡಾದ ಘಟನೆ ವರದಿಯಾಗಿಲ್ಲ ಎಂದು ಸರಕಾರ ಜಾರಿಕೊಳ್ಳುವುದು ಸರಿಯಲ್ಲ.
‘ಒಂದೇ ರಾಷ್ಟ್ರ, ಒಂದೇ ಕಾನೂನು, ಒಂದೇ ಪಡಿತರ ಚೀಟಿ’ಎಂದೆಲ್ಲಾ ಹೇಳುವ ಕೇಂದ್ರದ ಬಿಜೆಪಿ ಸರಕಾರ ತೆರಿಗೆ ವಸೂಲಿಯಲ್ಲಿ ಮಾತ್ರ ಇದನ್ನು ಅನ್ವಯಿಸುತ್ತದೆ.ಉಳಿದಂತೆ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸುವಲ್ಲಿ ವಿಫಲಗೊಂಡಿದೆ. ಉದಾಹರಣೆಗೆ ಲಸಿಕೆ ನೀಡುವಲ್ಲೂ ತನ್ನ ತಪ್ಪನ್ನು ಮುಚ್ಚಿಟ್ಟು ರಾಜ್ಯಗಳನ್ನು ದೂಷಿಸುತ್ತಿದೆ. ಲಭ್ಯ ಲಸಿಕೆ ಹಂಚಿಕೆಯಲ್ಲೂ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಬಗ್ಗೆ ಪಕ್ಷಪಾತದ ಧೋರಣೆಯನ್ನು ಅನುಸರಿಸುತ್ತಿದೆ.

ಕೊರೋನ ಒಂದು ಮತ್ತು ಎರಡನೇ ಅಲೆಯಿಂದ ಭಾರತ ತತ್ತರಿಸಿ ಹೋಗಿದೆ.ಸಾವಿರಾರು ಮಂದಿ ಸಾವಿಗೀಡಾಗಿದ್ದಾರೆ. ಆಮ್ಲಜನಕ ಇಲ್ಲದೇ ಸಾವುಗಳು ಸಂಭವಿಸಿವೆ. ಗಂಗಾನದಿಯಲ್ಲಿ ಹೆಣಗಳು ತೇಲಿ ಬಂದಿವೆ. ಸುಮಾರು 60 ಕೋಟಿ ಮಂದಿ ಆದಾಯದ ಮೂಲವನ್ನೇ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಕ್ಕಳ ವಿದ್ಯಾಭ್ಯಾಸ ನಿಂತು ಹೋಗಿದೆ. ಒಟ್ಟಾರೆ ಆರ್ಥಿಕತೆ ಕುಸಿದು ಪಾತಾಳಕ್ಕೆ ಹೋಗಿದೆ. ಇಂತಹ ಸಂಕಟದ ಸನ್ನಿವೇಶದಲ್ಲಿ ಸರಕಾರ ಎಚ್ಚರದ ಹೆಜ್ಜೆಯನ್ನು ಇಡಬೇಕು. ಮತ್ತೆ ಕೋವಿಡ್ ಬರದಂತೆ ಎಲ್ಲರಿಗೂ ಲಸಿಕೆ ಕೊಡಲು ಮೊದಲ ಆದ್ಯತೆ ನೀಡಬೇಕು. ಇದರ ಜೊತೆಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಬೇಕು. ಆಮ್ಲಜನಕವಿಲ್ಲದೆ ಸಾವು ಸಂಭವಿಸಿಲ್ಲ ಎಂದು ಹಸಿ ಸುಳ್ಳು ಹೇಳುವ ಬದಲಾಗಿ ದೇಶದ ಎಲ್ಲ ಆಸ್ಪತ್ರೆಗಳಲ್ಲಿ ಮುಖ್ಯವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಮತ್ತು ವೆಂಟಿಲೇಟರ್ ಸೌಲಭ್ಯವನ್ನು ಒದಗಿಸಬೇಕು. ಆವಾಗ ಮಾತ್ರ ಜನ ನೆಮ್ಮದಿಯಿಂದ ಉಸಿರಾಡಲು ಸಾಧ್ಯವಾಗುತ್ತದೆ.

ದೊಡ್ಡ ನಗರಗಳಲ್ಲಿ ಕೋವಿಡ್-19 ಎರಡೂ ಅಲೆಗಳ ಸಂದರ್ಭದಲ್ಲಿ ಹೇಗೋ ನಿಭಾಯಿಸಲಾಯಿತು. ಆದರೆ, ಯಾವುದೇ ಸಾರ್ವಜನಿಕ ಆರೋಗ್ಯ ಸೌಕರ್ಯವಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸಾವು-ನೋವಿನ ಪ್ರಕರಣಗಳು ದಾಖಲಾಗಲೇ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೂ ಅಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಅಲ್ಲಿ ವರ್ಗಾವಣೆಯಾಗಿ ಹೋಗಲು ಸರಕಾರಿ ವೈದ್ಯರು ನಿರಾಕರಿಸುತ್ತಿರುವುದು ಆತಂಕದ ಸಂಗತಿಯಾಗಿದೆ. ಇದಕ್ಕೆ ಕಾರಣವೂ ಇದೆ.ಹಳ್ಳಿಗಾಡಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲ. ಅಲ್ಲದೆ ಸ್ಥಳೀಯ ಪುಡಾರಿಗಳ ದಾದಾಗಿರಿ ಕೂಡ ಸರಕಾರಿ ವೈದ್ಯರು ಅಲ್ಲಿಗೆ ಹೋಗಲು ನಿರಾಕರಿಸುವುದಕ್ಕೆ ಕಾರಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು