ಕೆಂಪುಪಟ್ಟಿಯಲ್ಲಿರುವ ದೇಶಗಳಿಗೆ ಭೇಟಿ ನೀಡಿದವರ ಮೇಲೆ 3 ವರ್ಷ ಪ್ರಯಾಣ ನಿಷೇಧ: ಸೌದಿ ಅರೇಬಿಯಾ
ರಿಯಾದ್, ಜು.27: ಕೊರೋನ ಸೋಂಕು ಹಾಗೂ ಅದರ ರೂಪಾಂತರಿತ ಪ್ರಬೇಧದ ಹರಡುವಿಕೆಯನ್ನು ನಿಯಂತ್ರಿಸುವ ಪ್ರಯತ್ನವಾಗಿ, ಕೆಂಪುಪಟ್ಟಿಯಲ್ಲಿರುವ ದೇಶಗಳಿಗೆ ಭೇಟಿ ನೀಡುವ ಪ್ರಜೆಗಳಿಗೆ 3 ವರ್ಷದ ಪ್ರಯಾಣ ನಿಷೇಧ ವಿಧಿಸಲು ಸೌದಿ ಅರೇಬಿಯಾ ನಿರ್ಧರಿಸಿರುವುದಾಗಿ ಅಲ್ಲಿನ ಸರಕಾರಿ ಸುದ್ಧಿಸಂಸ್ಥೆ ವರದಿ ಮಾಡಿದೆ.
2020ರ ಮಾರ್ಚ್ ನ ಬಳಿಕ ಪ್ರಥಮ ಬಾರಿ, ಕಳೆದ ಮೇ ತಿಂಗಳಿನಲ್ಲಿ ಕೆಲವು ಸೌದಿ ಪ್ರಜೆಗಳಿಗೆ ಅಧಿಕಾರಿಗಳ ಪೂರ್ವಾನುಮತಿ ಪಡೆಯದೆ ವಿದೇಶ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು. ಅವರು ಪ್ರಯಾಣ ನಿರ್ಬಂಧವನ್ನು ಉಲ್ಲಂಸಿದ್ದಾರೆ. ಈ ರೀತಿಯ ಕೃತ್ಯದಲ್ಲಿ ತೊಡಗಿರುವುದು ಸಾಬೀತಾದರೆ ಅವರ ವಿರುದ್ಧ ಕಾನೂನುಕ್ರಮ ಜರಗಿಸಿ ಭಾರೀ ದಂಡ ವಿಧಿಸುವುದರ ಜೊತೆಗೆ, 3 ವರ್ಷ ಪ್ರಯಾಣ ನಿಷೇಧ ವಿಧಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಪಘಾನಿಸ್ತಾನ, ಅರ್ಜೆಂಟೀನಾ, ಬ್ರೆಝಿಲ್, ಈಜಿಪ್ಟ್, ಇಥಿಯೋಪಿಯಾ, ಭಾರತ, ಇಂಡೋನೇಶಿಯಾ, ಲೆಬನಾನ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಟರ್ಕಿ, ವಿಯೆಟ್ನಾಂ, ಯುಎಇ ದೇಶಗಳಿಗೆ ವಿಮಾನಸಂಚಾರವನ್ನು ಸೌದಿ ಅರೇಬಿಯಾ ನಿರ್ಬಂಧಿಸಿದೆ. ಕೊರೋನ ಸಾಂಕ್ರಾಮಿಕ ಇನ್ನೂ ಹತೋಟಿಗೆ ಬಂದಿಲ್ಲದ ಅಥವಾ ಹೊಸ ರೂಪಾಂತರಿತ ಸೋಂಕಿನ ಸಮಸ್ಯೆ ಇರುವ , ಕೆಂಪು ಪಟ್ಟಿಯಲ್ಲಿರುವ ದೇಶಗಳಿಗೆ ನೇರವಾಗಿ ಅಥವಾ ಇನ್ನೊಂದು ದೇಶಗಳ ಮೂಲಕವಾಗಿ ಪ್ರಯಾಣಿಸುವುದಕ್ಕೆ ಇದ್ದ ನಿಷೇಧ ಇನ್ನೂ ಮುಂದುವರಿದಿದೆ ಎಂದು ಒಳಾಡಳಿತ ಸಚಿವಾಲಯ ಒತ್ತಿಹೇಳಿದೆ.
ಗಲ್ಫ್ ರಾಷ್ಟ್ರಗಳಲ್ಲಿ ಅತ್ಯಂತ ದೊಡ್ಡ ದೇಶವಾಗಿರುವ, ಸುಮಾರು 30 ಮಿಲಿಯನ್ ಜನಸಂಖ್ಯೆಯಿರುವ ಸೌದಿ ಅರೇಬಿಯಾದಲ್ಲಿ ಮಂಗಳವಾರ 1,379 ಹೊಸ ಸೋಂಕು ಪ್ರಕರಣ ದಾಖಲಾಗಿದೆ. ಇದರೊಂದಿಗೆ ಒಟ್ಟು ಕೊರೋನ ಪ್ರಕರಣಗಳ ಸಂಖ್ಯೆ 5,20,774ಕ್ಕೇರಿದ್ದು ಸೋಂಕಿನಿಂದ ಒಟ್ಟು 8,189 ಮರಣ ಸಂಭವಿಸಿದೆ ಎಂದು ಸರಕಾರಿ ಮೂಲಗಳು ಹೇಳಿವೆ.