ಸೌದಿಯತ್ತ ಹೌದಿ ಬಂಡುಕೋರರು ಉಡಾಯಿಸಿದ ಕ್ಷಿಪಣಿ ಧ್ವಂಸಗೊಳಿಸಿದ ಮೈತ್ರಿ ಪಡೆ
ರಿಯಾದ್, ಜು.28: ಯೆಮೆನ್ನ ಹೌದಿ ಬಂಡುಕೋರರು ಮಂಗಳವಾರ ಸೌದಿ ಅರೆಬಿಯಾದ ದಕ್ಷಿಣ ಪ್ರಾಂತ್ಯವನ್ನು ಗುರಿಯಾಗಿಸಿ ಉಡಾಯಿಸಿದ 4 ಪ್ರಕ್ಷೇಪಕ ಕ್ಷಿಪಣಿಗಳನ್ನು ಹಾಗೂ ಸ್ಫೋಟಕ ತುಂಬಿದ್ದ 2 ಡ್ರೋನ್ ಗಳನ್ನು ಅರಬ್ ಮೈತ್ರಿ ಪಡೆಗಳು ತಡೆದು ಧ್ವಂಸಗೊಳಿಸಿರುವುದಾಗಿ ಸೌದಿ ಅರೆಬಿಯಾದ ಸರಕಾರಿ ಟಿವಿ ವಾಹಿನಿ ವರದಿ ಮಾಡಿದೆ.
ಜಝಾನ್ ವಲಯದ ನಾಗರಿಕರನ್ನು ಮತ್ತು ಜನದಟ್ಟಣೆಯ ಪ್ರದೇಶಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆದಿದೆ. ದಾಳಿಯ ಮೂಲವನ್ನು ಗುರುತಿಸಿ ಅಂತರಾಷ್ಟ್ರೀಯ ನಿಯಮದಂತೆ ಪ್ರತಿದಾಳಿ ನಡೆಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅರಬ್ ಮೈತ್ರಿಪಡೆ ಹೇಳಿದೆ. ಈ ಮಧ್ಯೆ, ಇರಾನ್ ಬೆಂಬಲಿತ ಹೌದಿ ಬಂಡುಕೋರರು ಸೌದಿಯ ಮೇಲೆ ಇತ್ತೀಚೆಗೆ ನಡೆಸಿರುವ ದಾಳಿಯನ್ನು ಖಂಡಿಸಿರುವ ಅಮೆರಿಕ, ಸಶಸ್ತ್ರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ, ಯೆಮೆನ್ನಲ್ಲಿನ ಬಿಕ್ಕಟ್ಟನ್ನು ಕೊನೆಗೊಳಿಸುವ ಸಲುವಾಗಿ ಯುದ್ಧವಿರಾಮಕ್ಕೆ ಬದ್ಧವಾಗಿರುವಂತೆ ಕರೆ ನೀಡಿದೆ.
ಶನಿವಾರವೂ, ಹೌದಿ ಬಂಡುಕೋರರು ಸೌದಿಯ ದಕ್ಷಿಣ ಪ್ರಾಂತ್ಯವನ್ನು ಗುರಿಯಾಗಿಸಿ ಕ್ಷಿಪಣಿ ಉಡಾಯಿಸಿದ್ದು ಅದನ್ನು ಸೌದಿಯ ವಾಯುರಕ್ಷಣಾ ವಿಭಾಗ ತಡೆದು ಧ್ವಂಸಗೊಳಿಸಿದೆ ಎಂದು ವರದಿಯಾಗಿದೆ. ಈ ಕೃತ್ಯವನ್ನು ಅರಬ್ ಒಳಾಡಳಿತ ಸಚಿವರ ಸಮಿತಿ, ಅರಬ್ ಸಂಸತ್ತು, ಇಸ್ಲಾಮಿಕ್ ಸಹಕಾರ ಸಂಘಟನೆ ಹಾಗೂ ಅರಬ್ ದೇಶಗಳು ತೀವ್ರವಾಗಿ ಖಂಡಿಸಿವೆ.