ಒಲಿಂಪಿಕ್ಸ್: ಪದಕ ಖಚಿತಪಡಿಸಿದ ಭಾರತದ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್
ಟೋಕಿಯೊ: ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿ ಆಡುತ್ತಿರುವ ಭಾರತದ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಮಹಿಳಾ ಬಾಕ್ಸಿಂಗ್ ನ 69 ಕೆಜಿ ವಿಭಾಗದಲ್ಲಿ ಸೆಮಿ ಫೈನಲ್ ಪ್ರವೇಶಿಸುವ ಮೂಲಕ ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿದರು.
ಇದರೊಂದಿಗೆ ಭಾರತವು ಈಗ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಎರಡನೇ ಪದಕ ಗೆದ್ದ ಸಾಧನೆ ಮಾಡಿದೆ. ಈ ಮೊದಲು ಮೀರಾಬಾಯಿ ಚಾನು ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದರು.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ 23ರ ಹರೆಯದ ಅಸ್ಸಾಂ ಬಾಕ್ಸರ್ ಮಾಜಿ ವಿಶ್ವ ಚಾಂಪಿಯನ್ ಚೈನೀಸ್ ತೈಪೆಯ ನೀನ್ ಚಿನ್ ಚೆನ್ ಅವರನ್ನು 4-1 ಅಂತರದಿಂದ ಮಣಿಸಿದರು.
ಲವ್ಲೀನಾ ಕಳೆದ ವರ್ಷ ಕೋವಿಡ್ -19 ಸೋಂಕಿಗೆ ಒಳಗಾದ ಕಾರಣದಿಂದಾಗಿ ಯುರೋಪ್ಗೆ ತರಬೇತಿ ಪ್ರವಾಸದಿಂದ ವಂಚಿತರಾಗಿದ್ದರು.
ಈ ಹಿಂದೆ ಒಲಿಂಪಿಕ್ಸ್ ಗೇಮ್ಸ್ ನ ಬಾಕ್ಸಿಂಗ್ ಸ್ಪರ್ಧೆಯಲ್ಲಿ ವಿಜೇಂದರ್ ಸಿಂಗ್ (2008) ಹಾಗೂ ಎಂ. ಸಿ .ಮೇರಿ ಕೋಮ್ (2012) ಭಾರತಕ್ಕೆ ಪದಕ ಗೆದ್ದುಕೊಟ್ಟಿದ್ದರು. ಈ ಇಬ್ಬರೂ ಕಂಚಿನ ಪದಕಗಳನ್ನು ಗೆದ್ದಿದ್ದರು. ಬೊರ್ಗೊಹೈನ್ ಬೆಳ್ಳಿ ಇಲ್ಲವೇ ಚಿನ್ನ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ.