varthabharthi


ರಾಷ್ಟ್ರೀಯ

ಧನ್ ಬಾದ್ ನ್ಯಾಯಾಧೀಶ ಉತ್ತಮ್ ಆನಂದ್ ಕೊಲೆ ಪ್ರಕರಣ: ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್

ವಾರ್ತಾ ಭಾರತಿ : 30 Jul, 2021

ಹೊಸದಿಲ್ಲಿ: ಧನ್ ಬಾದ್ ನ್ಯಾಯಾಧೀಶ ಉತ್ತಮ್ ಆನಂದ್  ಅವರ ಕೊಲೆ ಪ್ರಕರಣವನ್ನು ಶುಕ್ರವಾರ  ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್  ಒಂದು ವಾರದೊಳಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ  ಪೊಲೀಸ್ ಮಹಾನಿರ್ದೇಶಕರಿಂದ ವರದಿ ಕೋರಿದೆ ಎಂದು NDTV ವರದಿ ಮಾಡಿದೆ.

"ಈ ಧನ್ ಬಾದ್ ಪ್ರಕರಣವು ವ್ಯಾಪಕವಾದ ಪರಿಣಾಮಗಳನ್ನು ಹೊಂದಿದೆ. ದೇಶಾದ್ಯಂತ ನ್ಯಾಯಾಂಗ ಅಧಿಕಾರಿಗಳ ಮೇಲೆ ಹಲ್ಲೆ ನಡೆಯುತ್ತಿದೆ ಎಂಬ ವರದಿಗಳು ನಮಗೆ ಬರುತ್ತಿವೆ. ಇದನ್ನು ಪರಿಶೀಲಿಸಲು ನಾವು ಉದ್ದೇಶಿಸಿದ್ದೇವೆ ಹಾಗೂ ಎಲ್ಲಾ ರಾಜ್ಯಗಳಿಂದ ವರದಿ ಪಡೆಯಬಹುದು" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದರು.

ಜಾರ್ಖಂಡ್‌ನ ಧನ್ ಬಾದ್‌ನಲ್ಲಿ ಬುಧವಾರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಉತ್ತಮ್ ಆನಂದ್ ಅವರ ಸಾವು ದೇಶಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿದೆ. ಆರಂಭದಲ್ಲಿ ಇದನ್ನು ಹಿಟ್ ಆ್ಯಂಡ್ ರನ್ ಪ್ರಕರಣದ ಎಂದು ನಂಬಲಾಗಿತ್ತು. ನಂತರ ಘಟನೆಯ ಸಿಸಿಟಿವಿ ದೃಶ್ಯಗಳು ಕೊಲೆ ನಡೆದಿದೆ ಎಂಬುದನ್ನು ಪುಷ್ಟೀಕರಿಸಿತ್ತು. 

ಅಪಘಾತದ ಸಿಸಿಟಿವಿ ದೃಶ್ಯಾವಳಿಯಲ್ಲಿ ಆಟೋ ರಿಕ್ಷಾವೊಂದು ಉತ್ತಮ್ ಆನಂದ್ ಅವರಿಗೆ ಉದ್ದೇಶಪೂರ್ವಕವಾಗಿ ಹಿಂದಿನಿಂದ ಢಿಕ್ಕಿ ಹೊಡೆದಿರುವುದು ದಾಖಲಾಗಿದೆ. ಆನಂದ್ ಅವರು ಗಾಲ್ಪ್ ಮೈದಾನದ ಸಮೀಪದ ನಿರ್ಜನ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿರುವಾಗ ಆಟೋ ರಿಕ್ಷಾ ಢಿಕ್ಕಿ ಹೊಡೆಸಲಾಗಿದೆ. ಹಿರಾಪುರದ ನ್ಯಾಯಾಧೀಶರ ಕಾಲನಿಯಲ್ಲಿರುವ ಅವರ ಮನೆಯಿಂದ 500 ಮೀಟರ್‌ಗಳ ದೂರದಲ್ಲಿ ಈ ಘಟನೆ ನಡೆದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)