varthabharthi


ಕರ್ನಾಟಕ

ಮಠಗಳಿಗೆ ಬರುವುದನ್ನು ಮೊದಲು ಬಿಡಿ: ಶಾಸಕ ಯತ್ನಾಳ್‍ಗೆ ಹಾಲಸ್ವಾಮಿ ಮಠದ ಸ್ವಾಮೀಜಿ ಸಲಹೆ

ವಾರ್ತಾ ಭಾರತಿ : 31 Jul, 2021

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (File Photo)

ವಿಜಯನಗರ, ಜು. 31: ಮಠಾಧೀಶರ ಕುರಿತು ಹಗುರವಾಗಿ ಮಾತನಾಡುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮೊದಲು ಮಠಗಳಿಗೆ ಬರುವುದನ್ನು ಬಿಡಬೇಕು. ಯತ್ನಾಳ್ ರಾಜ್ಯದಲ್ಲಿ ಎಲ್ಲ ಮಠಾಧೀಶರಿಗೆ ಅಪಮಾನ ಮಾಡಿದ್ದಾರೆ ಎಂದು ವಿಜಯನಗರ ಜಿಲ್ಲೆಯ ಹಿರೇಹಡಗಲಿಯ ಹಾಲಸ್ವಾಮಿ ಮಠದ ಹಾಲ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಮಠಾಧೀಶರು ಯಡಿಯೂರಪ್ಪನವರ ಚೇಲಾಗಳು ಎನ್ನುವ ಪದವನ್ನು ಯತ್ನಾಳ್ ಬಳಸಿದ್ದಾರೆ. ನಿಮ್ಮನ್ನು ಪಕ್ಷದಿಂದ ಹೊರ ಹಾಕಿದಾಗ ನೀವು ಯಡಿಯೂರಪ್ಪನವರ ಚೇಲಾ ಆಗಿರಲಿಲ್ಲವೇ? ನೀವು ಚೇಲಾ ಆಗಿದ್ದಕ್ಕೆ ನಿಮಗೆ ಆ ಪರಿಕಲ್ಪನೆ ಇದೆಯಲ್ಲವೇ? ಬಿಎಸ್‍ವೈ ಅವರನ್ನು ಒಂದು ಕಾಲಕ್ಕೆ ದೇವರೆಂದು ಪೂಜೆ ಮಾಡುತ್ತಿದ್ದ ನೀವು ಇದೀಗ ಅವರ ಬಗ್ಗೆ ಹಗುರವಾಗಿ ಮಾನಾಡುವುದು ಸರಿಯಲ್ಲ" ಎಂದು ವಾಗ್ದಾಳಿ ನಡೆಸಿದರು.

"ನಾವು ಬಿಎಸ್‍ವೈ ಅವರನ್ನು ಬೆಂಬಲಿಸಿದ್ದೇವೆ ಎಂಬುದಕ್ಕೆ ನೀವು ಮಠಾಧೀಶರ ಬಗ್ಗೆ ಹೀಗೆ ಮಾತನಾಡಿದ್ದೀರಿ. ಮಠಾಧೀಶರನ್ನು ಹಿಡಿದು ಮಂತ್ರಿಗಳು, ಮುಖ್ಯಮಂತ್ರಿಗಳಾಗುವ ಕಾಲ ಬಂತು ಅಂತೀರಿ. ಹಾಗಾದರೆ ನೀವು ಚುನಾವಣೆಗೆ ಸ್ಪರ್ಧೆ ಮಾಡಿದಾಗ ನಿಮಗೆ ಮಠಗಳು ಬೇಕು, ಈಗ ಬೇಡ್ವಾ? ಮತ ಕೇಳುವ ಸಮಯದಲ್ಲಿ ಮಠಗಳು ಬೇಕು, ಈಗ ಮಠಗಳು ರಾಜಕಾರಣ ಮಾಡುತ್ತಿವೆ ಎನ್ನುತ್ತಿದ್ದೀರಿ. ಮೊದಲು ನೀವು ಮಠಗಳಿಗೆ ಬರುವುದನ್ನು ಬಿಡಿ" ಎಂದು ಸ್ವಾಮೀಜಿ ಸಲಹೆ ನೀಡಿದರು.

"ಹೌದು ನಾವು ಬಿಎಸ್‍ವೈ ಅವರಿಂದ ಕಾಣಿಕೆ ತೆಗೆದುಕೊಂಡಿದ್ದೇವೆಂದು ನಾವು ರಾಜಾರೋಷವಾಗಿ ಹೇಳುತ್ತೇವೆ. ಶುದ್ಧ ಮನಸ್ಸಿನ ವ್ಯಕ್ತಿಯಿಂದ ನಾವು ಕಾಣಿಕೆ ಪಡೆದಿದ್ದೇವೆ ನಿಜ. ವಿಜಯಪುರ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿದಾಗ ನಿಮ್ಮ ಜಿಲ್ಲೆಯ ಮಠಾಧೀಶರು ಮನೆ ಮನೆಗೆ ಹೋಗಿ ಹಣ ಸಂಗ್ರಹ ಮಾಡಿ ಕೊಟ್ಟಿದ್ದು ಕಾಣಿಕೆ ಅಲ್ವಾ?" ಎಂದು ಸ್ವಾಮೀಜಿ ಇದೇ ವೇಳೆ ಯತ್ನಾಳ್‍ರನ್ನು ಪ್ರಶ್ನಿಸಿದರು.

"ಮತಾಂತರ, ಲವ್ ಜಿಹಾದ್ ಬಗ್ಗೆ ಮಠಗಳು ಮಾತನಾಡಲಿ ಅಂತಿದ್ದೀರಿ. ನಾವು ಹಿಂದೂ ಹುಲಿ ಅಂತ ಹೇಳಿಸಿಕೊಳ್ಳಲು ಮೈಕ್ ಮುಂದೆ ಮಾತನಾಡುವುದಿಲ್ಲ. ಮಠಗಳು ಮೊದಲಿನಿಂದಲೂ ಈ ವಿಷಯಗಳ ವಿರುದ್ಧ ಮಾತನಾಡುತ್ತಿವೆ. ಸಾವಿರಾರು ಕುಟುಂಬಗಳನ್ನು ಘರ್ ವಾಪಸಿ ಮಾಡಿದ್ದ ಪರಂಪರೆ ಮಠಗಳಿಗಿದೆ. ನೀವು ಬಹಿರಂಗ ಚರ್ಚೆಗೆ ಬಂದರೆ ನಾವು ಈ ಬಗ್ಗೆ ಉತ್ತರ ಕೊಡುತ್ತೇವೆ" ಎಂದು ಹಾಲ ಸ್ವಾಮೀಜಿ ಪಂಥಾಹ್ವಾನ ನೀಡಿದರು.

"ಗಡ್ಡ ಬಿಟ್ಟರೆ ಶಿವಾಜಿ, ಗಡ್ಡ ತೆಗೆದರೆ ಬಸವಣ್ಣ ಅಂತೀರಿ. ಈ ಹಿಂದೆ ನೀವು ಮಸೀದಿಗೆ ಹೋದಾಗ ಔರಂಗಜೇಬ್ ಆಗಿದ್ದೀರಾ? ನೀವು ಈಗಲೇ ಬದಲಾದರೆ ಸರಿ. ಇಲ್ಲವಾದರೆ ರಾಜ್ಯಾದ್ಯಂತ ನಾವು ನಿಮ್ಮ ಬಗ್ಗೆ ರಾಜ್ಯ ಹಾಗೂ ವಿಜಯಪುರ ನಗರ ಕ್ಷೇತ್ರದ ಜನರಿಗೆ ಏನು ಸಂದೇಶ ಕೊಡಬೇಕೋ ಅದನ್ನು ಕೊಡುತ್ತೇವೆ"
-ಹಾಲ ಸ್ವಾಮೀಜಿ, ಹಿರೇಹಡಗಲಿ ಹಾಲಸ್ವಾಮಿ ಮಠ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)