ಎಂ.ಎನ್.ರಾಯ್ ಎಂಬ ಅಪರೂಪದ ಕ್ರಾಂತಿಕಾರಿ
ಭಾರತಕ್ಕೆ ಬಂದ ಎಂ.ಎನ್. ರಾಯ್ ದೇಶದ ತುಂಬ ತಮ್ಮ ಸಂಘಟನೆ ಕಟ್ಟಲು ಪ್ರವಾಸ ಕೈಗೊಂಡರು. ಆಗ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮುಂತಾದ ನಗರಗಳಲ್ಲಿ ಅವರ ಉಪನ್ಯಾಸ ಏರ್ಪಡಿಸಲಾಗಿತ್ತು. ಆಗ ಧಾರವಾಡದಲ್ಲಿ ವ್ಯಾಸಂಗ ಮಾಡುತ್ತಿದ್ದ ಕನ್ನಡದ ಹಿರಿಯ ಸಾಹಿತಿ ಶಾಂತಿನಾಥ ದೇಸಾಯಿ, ವಿಮರ್ಶಕ ಜಿ.ಎಸ್.ಆಮೂರ, ಎಸ್.ಆರ್.ಬೊಮ್ಮಾಯಿ ಹಾಗೂ ಹುಬ್ಬಳ್ಳಿಯ ಜಿ.ಸಿ.ವ. ಬೇವೂರ ಅವರು ರಾಯ್ ವಿಚಾರ ಧಾರೆಯಿಂದ ಪ್ರಭಾವಿತರಾಗಿ ಅವರ ಸಂಘಟನೆ ಕಟ್ಟಲು ಶ್ರಮಿಸಿದ್ದರು. ಎಸ್.ಆರ್.ಬೊಮ್ಮಾಯಿ, ಶಾಂತಿನಾಥ ದೇಸಾಯಿ ಮತ್ತು ಜಿ.ಎಸ್.ಆಮೂರ ಈ ಮೂವರು ಸಹಪಾಠಿಗಳಾಗಿದ್ದರು ಎಂಬುದು ಗಮನಾರ್ಹ.
ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದ ಮುಖ್ಯಮಂತ್ರಿ ಎಂದು ಆಯ್ಕೆಯಾದಾಗ ಅವರ ಹೆಸರಿನೊಂದಿಗೆ ಅವರ ತಂದೆ ಎಸ್. ಆರ್. ಬೊಮ್ಮಾಯಿ ಅವರ ಹೆಸರೂ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿತು. 1988ರಲ್ಲಿ ಎಂಟು ತಿಂಗಳು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬೊಮ್ಮಾಯಿ ಅವರನ್ನು ಎಂ.ಎನ್.ರಾಯ್ ಅವರ ಅನುಯಾಯಿ, ರಾಯಿಸ್ಟ್ ಎಂದೆಲ್ಲ ವರ್ಣಿ ಸಲಾಗಿತ್ತು. ಆದರೆ, ಈ ರಾಯ್ ಬಗ್ಗೆ ಹೊಸ ಪೀಳಿಗೆಗೆ ಅಷ್ಟಾಗಿ ಗೊತ್ತಿಲ್ಲ.
ಎಂ.ಎನ್.ರಾಯ್ ಎಂದೇ ಖ್ಯಾತರಾದ ಮಾನವೇಂದ್ರನಾಥರಾಯ್ ಕಳೆದ ಶತಮಾನದ ಅಂತರ್‌ರಾಷ್ಟ್ರೀಯ ಮಟ್ಟದ ಕಮ್ಯುನಿಸ್ಟ್ ನಾಯಕ. ಚಿಕ್ಕ ವಯಸ್ಸಿನಲ್ಲೇ ವಿದೇಶಕ್ಕೆ ಹೋಗಿ ಮೆಕ್ಸಿಕನ್ ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪಿಸಿದವರು. ಸೋವಿಯತ್ ಕ್ರಾಂತಿಯ ನಾಯಕ ಲೆನಿನ್‌ರ ಸಮಕಾಲೀನ ಕ್ರಾಂತಿಕಾರಿ.
ಮಾನವೇಂದ್ರನಾಥ ರಾಯ್ ಅವರ ಮೊದಲ ಹೆಸರು ನರೇಂದ್ರನಾಥ ಭಟ್ಟಾಚಾರ್ಯ. ಜನಿಸಿದ್ದು ಅವಿಭಜಿತ ಬಂಗಾಳದ 24 ಪರಗಣ ಜಿಲ್ಲೆಯ ಅರಬೇಲಿಯ ಎಂಬ ಹಳ್ಳಿಯಲ್ಲಿ. 1887, ಮಾರ್ಚ್ 23ರಂದು ಜನಿಸಿದ ಮಾನವೇಂದ್ರನಾಥ ರಾಯ್ ತಂದೆ ದೀನಬಂಧು ಭಟ್ಟಾಚಾರ್ಯ ಸಂಸ್ಕೃತ ಶಿಕ್ಷಕರು. ಜೊತೆಗೆ ಮಂದಿರವೊಂದರ ಪೂಜಾರಿಯಾಗಿದ್ದರು. ನರೇಂದ್ರನಾಥ ಅವರ ತಾಯಿಯ ಕಕ್ಕ ಶಿವನಾಥ ಶಾಸ್ತ್ರಿ ಯಜ್ಞೋಪನಿಷತ್ ಹರಿದೆಸೆದು ಅಂದಿನ ಸ್ವಾತಂತ್ರ ಹೋರಾಟದ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು.
ಭಾರತದ ಕಮ್ಯುನಿಸ್ಟ್ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಮಾನವೇಂದ್ರನಾಥ ರಾಯ್ ಅಸಾಮಾನ್ಯ ಬುದ್ಧಿವಂತ, ತತ್ವಶಾಸ್ತ್ರ ಪರಿಣಿತ, ಉತ್ತಮ ಬರಹಗಾರ, ಹೆಸರಾಂತ ವಾಕ್ಪಟು. ಇಷ್ಟೇ ಅಲ್ಲ ಮಹಾನ್ ಕ್ರಾಂತಿಕಾರಿ. ಇಂತಹ ರಾಯ್ ಅವರು ಆರಂಭದ ವರ್ಷಗಳಲ್ಲಿ ಮೆಕ್ಸಿಕೊ ನಂತರ ಸೋವಿಯತ್ ರಶ್ಯದಲ್ಲಿ ನೆಲೆಸಿದ್ದರು. ಲೆನಿನ್ ನಿಧನದ ನಂತರ ಸ್ವದೇಶಕ್ಕೆ ಬಂದ ರಾಯ್ ಭಾರತದ ಸ್ವಾತಂತ್ರ ಚಳವಳಿಯಲ್ಲಿ ಧುಮುಕಿದರು. ಪಂಡಿತ ಜವಾಹರಲಾಲ್ ನೆಹರೂ, ಚಿತ್ತರಂಜನದಾಸ್ ಮುಂತಾದವರ ಸಂಪರ್ಕ ಹೊಂದಿದ್ದ ರಾಯ್ ಭಾರತದ ಕಮ್ಯುನಿಸ್ಟ್ ಚಳವಳಿಯಲ್ಲಿ ಶೌಕತ್ ಉಸ್ಮಾನಿ, ಎಸ್.ಎ.ಡಾಂಗೆ, ಗುಲಾಮ್ ಹುಸೇನ್, ನಲೀನಿ ಗುಪ್ತಾ ಅವರೊಂದಿಗೆ ಪಾಲ್ಗೊಂಡರು. ಬ್ರಿಟಿಷ್ ಸರಕಾರ ಕಮ್ಯುನಿಸ್ಟ್ ಚಳವಳಿಯನ್ನು ಹತ್ತಿಕ್ಕಲು ಕಾನಪುರ ಪಿತೂರಿ ಖಟ್ಲೆಯನ್ನು ಇವರ ಮೇಲೆ ಹಾಕಿ ಜೈಲಿಗೆ ಕಳಿಸಿತು.
ಪ್ರಾಥಮಿಕ ವ್ಯಾಸಂಗ ಮಾಡುವಾಗಲೆ ಬಂಗಾಳದ ಕ್ರಾಂತಿಕಾರಿ ನಾಯಕ ಜತಿನ್ ಮುಖರ್ಜಿ ಜೊತೆ ಸೇರಿ ಉಗ್ರ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಮುಳುಗಿದ ರಾಯ್ ಅಷ್ಟು ಚಿಕ್ಕ ವಯಸ್ಸಿನಲ್ಲೇ ತಮ್ಮ ಕ್ರಾಂತಿಕಾರಿ ಹೋರಾಟಕ್ಕೆ ವಿದೇಶಿ ಬೆಂಬಲ ಪಡೆಯಲು ಜಪಾನ್ ಮತ್ತು ಚೀನಾಗಳಿಗೆ ಪ್ರಯಾಣ ಬೆಳೆಸಿದರು. ಸಶಸ್ತ್ರ ಹೋರಾಟದ ಮೂಲಕ ಮಾತ್ರ ಬ್ರಿಟಿಷ್ ಆಡಳಿತದಿಂದ ಭಾರತವನ್ನು ಮುಕ್ತ ಮಾಡಲು ಸಾಧ್ಯ ಎಂದು ನಂಬಿದ ರಾಯ್ ಅವರಿಗೆ ಅಮೆರಿಕಕ್ಕೆ ಹೋದಾಗ ಸ್ಟಾನ್ಫರ್ಡ್ ಯುನಿವರ್ಸಿಟಿಯಲ್ಲಿ ಓದುತ್ತಿದ್ದ ಕಮ್ಯುನಿಸ್ಟ್ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಸಂಪರ್ಕ ಬಂದು ಸಮತಾವಾದಿಯಾಗಿ ಬದಲಾದರು. ಅಲ್ಲೇ ಈವಲಿನ್ ಟ್ರೆಂಟ್ ಎಂಬ ಉಗ್ರ ಕ್ರಾಂತಿಕಾರಿ ಯುವತಿಯ ಪರಿಚಯವಾಗಿ ಮದುವೆಯಾದರು.
ಚೀನಾ ಸಮಾಜವಾದಿ ಕ್ರಾಂತಿಗೆ ಮಾರ್ಗದರ್ಶನ ಮಾಡಲು ಅಂದಿನ ಕಮ್ಯುನಿಸ್ಟ್ ಇಂಟರ್ ನ್ಯಾಷನಲ್ ಎಂ.ಎನ್.ರಾಯ್ ಅವರನ್ನು ಚೀನಾಕ್ಕೆ ಕಳಿಸಿದ್ದು, ಅವರನ್ನು ಕಳಿಸಿದವರು ಸೋವಿಯತ್ ನಾಯಕ ಸ್ಟಾಲಿನ್ ಮತ್ತು ಬುಖಾರಿನ್ ಎಂಬುದು ಚರಿತ್ರೆಯಲ್ಲಿ ಮರೆಯಲಾಗದ ಸಂಗತಿ.
ಯಾವುದೇ ದೇಶದಲ್ಲಿ ಸಮಾಜವಾದಿ ಕ್ರಾಂತಿ ಬರೀ ಕಾರ್ಮಿಕ ವರ್ಗದಿಂದ ಸಾಧ್ಯವಿಲ್ಲ, ವಿದ್ಯಾವಂತ ಮಧ್ಯಮವರ್ಗವೂ ಕ್ರಿಯಾಶೀಲವಾದರೆ ಮಾತ್ರ ಕ್ರಾಂತಿ ಯಶಸ್ವಿಯಾಗುತ್ತದೆ ಎಂದು ವಿನೂತನ ರಾಜಕೀಯ ನಿಲುವನ್ನು ಪ್ರತಿಪಾದಿಸಿದ ರಾಯ್ ಹಲವಾರು ಭಾಷೆಗಳಲ್ಲಿ ಮತ್ತು ವಿಷಯಗಳಲ್ಲಿ ಪಾಂಡಿತ್ಯ ಪಡೆದಿದ್ದರು.
ಆಗ ಮುಂಬೈಯಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಒಡನಾಟ ಹೊಂದಿದ್ದ ಮಾನವೇಂದ್ರನಾಥ ರಾಯ್ ಲೆನಿನ್ ಮತ್ತು ಸ್ಟಾಲಿನ್ ಜೊತೆಗಿನ ಕೆಲ ತಾತ್ವಿಕ ಭಿನ್ನಾಭಿಪ್ರಾಯಗಳ ಕಾರಣದಿಂದ ಕಮ್ಯುನಿಸ್ಟ್ ಪಕ್ಷದಿಂದ ದೂರ ಸರಿದು ತಮ್ಮದೇ ಆದ ರಾಡಿಕಲ್ ಡೆಮಾಕ್ರಟಿಕ್ ಪಾರ್ಟಿಯನ್ನು ಸ್ಥಾಪಿಸಿದರು.
ಭಾರತಕ್ಕೆ ಬಂದ ಮಾನವೇಂದ್ರ ನಾಥ ರಾಯ್ ದೇಶದ ತುಂಬಾ ತಮ್ಮ ಸಂಘಟನೆ ಕಟ್ಟಲು ಪ್ರವಾಸ ಕೈಗೊಂಡರು. ಆಗ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮುಂತಾದ ನಗರಗಳಲ್ಲಿ ಅವರ ಉಪನ್ಯಾಸ ಏರ್ಪಡಿಸಲಾಗಿತ್ತು. ಆಗ ಧಾರವಾಡದಲ್ಲಿ ವ್ಯಾಸಂಗ ಮಾಡುತ್ತಿದ್ದ ಕನ್ನಡದ ಹಿರಿಯ ಸಾಹಿತಿ ಶಾಂತಿನಾಥ ದೇಸಾಯಿ, ವಿಮರ್ಶಕ ಜಿ.ಎಸ್.ಆಮೂರ, ಎಸ್.ಆರ್.ಬೊಮ್ಮಾಯಿ ಹಾಗೂ ಹುಬ್ಬಳ್ಳಿಯ ಜಿ.ಸಿ.ವ. ಬೇವೂರ ಅವರು ರಾಯ್ ವಿಚಾರ ಧಾರೆಯಿಂದ ಪ್ರಭಾವಿತರಾಗಿ ಅವರ ಸಂಘಟನೆ ಕಟ್ಟಲು ಶ್ರಮಿಸಿದ್ದರು. ಬೊಮ್ಮಾಯಿ, ಶಾಂತಿನಾಥ ದೇಸಾಯಿ ಮತ್ತು ಜಿ.ಎಸ್.ಆಮೂರ ಈ ಮೂವರು ಸಹಪಾಠಿಗಳಾಗಿದ್ದರು ಎಂಬುದು ಗಮನಾರ್ಹ.
ನಾನು ಹುಬ್ಬಳ್ಳಿಯಲ್ಲಿ ಇದ್ದಾಗ ಎಸ್.ಆರ್.ಬೊಮ್ಮಾಯಿ ಅವರನ್ನು ಅನೇಕ ಸಲ ಭೇಟಿ ಮಾಡಿದ್ದೆ. ಎಂ.ಎನ್.ರಾಯ್ ಅವರ ಸಿದ್ಧಾಂತದ ಬಗ್ಗೆ ತಮಗೆ ಇರುವ ಒಲವನ್ನು ಅವರು ಅನೇಕ ಬಾರಿ ಹೇಳಿದ ನೆನಪು ನನಗಿದೆ. ಮುಂದೆ ಅಧಿಕಾರ ರಾಜಕಾರಣದಲ್ಲಿ ಮುಳುಗಿ ಜನತಾ ದಳ ಸರಕಾರದ ಮುಖ್ಯಮಂತ್ರಿಯಾದಾಗಲೂ ತಮ್ಮ ಹಿಂದಿನ ಸಂಗತಿಗಳನ್ನು ಬೊಮ್ಮಾಯಿ ಮರೆತಿರಲಿಲ್ಲ. ಎಸ್.ಆರ್.ಬೊಮ್ಮಾಯಿ ಅವರು ಮುಖ್ಯಮಂತ್ರಿ ಯಾಗಿದ್ದಾಗ ಮಾನವೇಂದ್ರನಾಥ ರಾಯ್ ಅವರ ನವ ಮಾನವತಾವಾದ ಪುಸ್ತಕವನ್ನು ಕನ್ನಡದಲ್ಲಿ ಭಾಷಾಂತರಿಸಿ ಪ್ರಕಟಿಸಿದ್ದರು ಹಾಗೂ ರಾಯ್ ಜನ್ಮದಿನದಂದು ವಿಶೇಷ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಏರ್ಪಡಿಸಿದ್ದರು.
ಆಗ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನೆಲೆಸಿದ್ದ ಶಾಂತಿನಾಥ ದೇಸಾಯಿ ಅವರನ್ನು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಯಾಗಲು ಒಪ್ಪಿಸಿ ನೇಮಕವಾಗುವಂತೆ ಮಾಡಿದ್ದರು. ಆಮೂರರಿಗೂ ಅಂತಹ ಅವಕಾಶ ಬಂದಿತ್ತು. ಆದರೆ ತಾನು ಸಾಹಿತ್ಯ ರಚನೆಯಲ್ಲಿ ತೊಡಗಿರುವುದರಿಂದ ಯಾವುದೇ ಹೊಣೆಗಾರಿಕೆ ವಹಿಸಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದರು.
ಲೆನಿನ್, ಮಾವೊ ತ್ಸೆ ತುಂಗ್ ಅವರಂತೆ ಜಾಗತಿಕ ಕಮ್ಯುನಿಸ್ಟ್ ಚಳವಳಿಯ ಆರಂಭದ ದಿನಗಳಲ್ಲಿ ಅಪಾರ ಕೊಡುಗೆ ನೀಡಿದ ಮಾನವೇಂದ್ರನಾಥ ರಾಯ್, 1954, ಜನವರಿ 25ರಂದು ಡೆಹ್ರಾಡೂನ್‌ನಲ್ಲಿ ಕೊನೆಯುಸಿರೆಳೆದರು.
ಮುಂದೆ ದೇಶದ ಹೆಸರಾಂತ ನ್ಯಾಯವಾದಿ, ಮಾನವ ಹಕ್ಕುಪರ ಹೋರಾಟಗಾರ ವಿ.ಎಂ.ತಾರ್ಕುಂಡೆ, ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ಮುಂತಾದ ಚಿಂತಕರು ಮಾನವೇಂದ್ರನಾಥ ರಾಯ್ ಅವರ ಚಿಂತನೆ ಗಳಿಂದ ಪ್ರಭಾವಿತರಾಗಿದ್ದರು. ಈಗಲೂ ರಾಡಿಕಲ್ ಹ್ಯುಮಾನಿಸ್ಟ್ ಎಂಬ ಮಾಸಿಕ ಪತ್ರಿಕೆ ಬರುತ್ತಿದೆ.
ಮಾನವೇಂದ್ರನಾಥ ರಾಯ್ ಅವರ ಅನೇಕ ವೈಚಾರಿಕ ಗ್ರಂಥಗಳು ಇಂದಿಗೂ ಪ್ರಸ್ತುತವಾಗಿವೆ. ಭಾರತದ ಸ್ವಾತಂತ್ರ ಚಳವಳಿಯಲ್ಲಿ ಹಾಗೂ ಇಪ್ಪತ್ತನೇ ಶತಮಾನದ ಅಂತರ್‌ರಾಷ್ಟ್ರೀಯ ಕಮ್ಯುನಿಸ್ಟ್ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಯ್ ಅಂತಹವರನ್ನು ಹೊಸ ಪೀಳಿಗೆಗೆ ಪರಿಚಯಿಸಬೇಕಾಗಿದೆ. ಜಾಗತೀಕರಣದ ಮಾರುಕಟ್ಟೆ ಆರ್ಥಿಕತೆಯ ಅಬ್ಬರದಲ್ಲಿ ಇಂತಹ ಅಪರೂಪದ ವ್ಯಕ್ತಿಗಳ ವಿಚಾರಗಳು ಕಳೆದು ಹೋಗುತ್ತಿರುವುದು ಭಾರತದ ಮಾತ್ರವಲ್ಲ ಜಗತ್ತಿನ ದುರಂತ.
ಸಮಾನತೆಯ ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ನಂಬಿಕೆ ಹೊಂದಿದ್ದರೂ ವ್ಯಕ್ತಿ ಸ್ವಾತಂತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಪ್ರತಿಪಾದಕರಾಗಿದ್ದ ಮಾನವೇಂದ್ರನಾಥ ರಾಯ್ ಸ್ಟಾಲಿನ್ ಕಾಲದಲ್ಲಿ ರಶ್ಯದಲ್ಲಿ ನಡೆದ ಅತಿರೇಕಗಳ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.