ದಕ್ಷಿಣ ಆಫ್ರಿಕಾದ ಪ್ರತಿಭಟನಾ ದಂಗೆಗಳು: ಹೇಳ ಹೊರಟಿರುವ ವಿಚಾರಗಳು
ದಕ್ಷಿಣ ಆಫ್ರಿಕಾದ ಇಂದಿನ ಪರಿಸ್ಥಿತಿಗೆ ಮೂಲ ಕಾರಣರಾಗಿರುವ ಜಾಗತಿಕ ಭಾರೀ ಕಾರ್ಪೊರೇಟ್‌ಗಳು ಮತ್ತವರ ಬೆಂಬಲಿಗರು ಅಲ್ಲಿನ ಅಲ್ಪಸಂಖ್ಯಾತರಾಗಿರುವ ಇಂಡಿಯಾ ಮೂಲದವರ ಮೇಲೆ ಮೂಲನಿವಾಸಿಗಳ ಆಕ್ರೋಶಗಳನ್ನು ತಿರುಗಿಸಿ ತಾವು ಅದರ ಗುರಿಯಾಗದಂತೆ ತಪ್ಪಿಸಿಕೊಳ್ಳಲು ಮಾಡುತ್ತಿರುವ ಕುತಂತ್ರಗಳ ಬಗ್ಗೆ, ಅದಕ್ಕೆ ಹೆಚ್ಚು ಗಮನ ಹರಿಸಬೇಕಾದ ಅಗತ್ಯ ಇಂದು ದಕ್ಷಿಣ ಆಫ್ರಿಕಾ, ಇಂಡಿಯಾ ಸೇರಿದಂತೆ ಜಗತ್ತಿನ ಬಹುಪಾಲು ರಾಷ್ಟ್ರಗಳ ದಲಿತ ದಮನಿತ ಬಡವರ್ಗ ಮತ್ತು ಮಧ್ಯಮ ವರ್ಗದ ಜನಸಾಮಾನ್ಯರ ಮುಂದಿದೆ.
ದಕ್ಷಿಣ ಆಫ್ರಿಕಾ ದೇಶದ ಹಲವು ಭಾಗಗಳಲ್ಲಿ ಇದೇ ಕಳೆದ ಜುಲೈ ತಿಂಗಳಿನಲ್ಲಿ ಭಾರೀ ಹಿಂಸಾತ್ಮಕ ಪ್ರತಿಭಟನಾ ದಂಗೆಗಳು ನಡೆದು ಮುನ್ನೂರಕ್ಕೂ ಹೆಚ್ಚು ಜನರು ಬಲಿಯಾದರು. ಸಾವಿರಾರು ಜನರು ಕಾರಾಗೃಹ ಪಾಲಾದರು. ಆದರೆ ವಾಸ್ತವದಲ್ಲಿ ಸಾವುಗಳ ಪ್ರಮಾಣ ಇನ್ನೂ ಹೆಚ್ಚು ಆಗಿವೆ ಎಂಬ ವರದಿಗಳೂ ಇವೆ. ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ವ್ಯಾಪಾರ-ವ್ಯವಹಾರಗಳು ಹಾನಿಗೊಳಗಾಗಿವೆ ಎನ್ನಲಾಗಿದೆ.
ಪದಚ್ಯುತ ಅಧ್ಯಕ್ಷ ಜಾಕೊಬ್ ಝುಮಾ
ಹಿಂದಿನ ಅಧ್ಯಕ್ಷ ಜಾಕೊಬ್ ಝುಮಾ ಎರಡು ವರುಷಗಳ ಹಿಂದೆ ಪದಚ್ಯುತರಾಗಿದ್ದರು. ಅವರ ಮೇಲಿನ ಆಪಾದನೆಗಳಾದ ಅಧಿಕಾರ ದುರುಪಯೋಗ, ಭ್ರಷ್ಟಾಚಾರ ಹಾಗೂ ಹಣಕಾಸು ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸುತ್ತಿದ್ದ ವಿಚಾರಣಾ ಆಯೋಗದ ಮುಂದೆ ಹಾಜರಾಗದೇ ಇದ್ದುದು ನ್ಯಾಯಾಂಗ ನಿಂದನೆಯಾಗಿದೆ ಎಂದು ಝುಮಾರಿಗೆ ಇದೇ ಜುಲೈ 17ರಂದು 15 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದ್ದರ ನೆಪದಲ್ಲಿ ಈ ಪ್ರತಿಭಟನೆಗಳು ಸ್ಫೋಟಗೊಂಡವು. ಈ ಪ್ರತಿಭಟನೆಗಳು ಪ್ರಧಾನವಾಗಿ ಅಲ್ಲಿರುವ ಇಂಡಿಯಾ ಮೂಲದ ಆಸ್ತಿವಂತರ ವಿರುದ್ಧ ತಿರುಗಿದ್ದವು. ಅವರ ವ್ಯಾಪಾರ ವ್ಯವಹಾರಗಳನ್ನು ಗುರಿ ಮಾಡಲಾಗಿತ್ತು. ದೊಂಬಿ, ಲೂಟಿ, ಬೆಂಕಿಯಿಡುವಿಕೆಗಳಲ್ಲಿ ಸಾವಿರಾರು ಕೋಟಿ ಮೌಲ್ಯದ ಸಂಪತ್ತುಗಳು ನಾಶವಾದವು. ಅದಕ್ಕೆ ಪ್ರಧಾನ ಕಾರಣ ಭಾರೀ ಹಣಕಾಸು ಅವ್ಯವಹಾರ ಹಾಗೂ ಭ್ರಷ್ಟಾಚಾರ ಮಾಡಿ ಝುಮಾರಿಗೆ ಶಿಕ್ಷೆಯಾಗಲು ಪ್ರಧಾನ ಕಾರಣಕರ್ತರಾಗಿದ್ದ ಬೃಹತ್ ಉದ್ಯಮ ಸಮೂಹದ ಗುಪ್ತ ಸಹೋದರರು ಇಂಡಿಯಾ ಮೂಲದವರು. ಗುಪ್ತ ಸಹೋದರರು ಕೂಡ ಈ ಅವ್ಯವಹಾರ ಹಾಗೂ ಭ್ರಷ್ಟಾಚಾರ ಪ್ರಕರಣಗಳ ಆರೋಪಿಗಳಾಗಿದ್ದರೂ ಅವರ ಬಂಧನ ನಡೆಯದೆ ಕೇವಲ ಝುಮಾರನ್ನು ಕಾರಾಗೃಹಕ್ಕೆ ಕಳುಹಿಸಿದ್ದು ಕೂಡ ಆಫ್ರಿಕಾದ ಮೂಲನಿವಾಸಿಗಳ ಸಿಟ್ಟಿಗೆ ಕಾರಣವಾಗಿತ್ತು. ಇದೇ ವೇಳೆಯಲ್ಲಿ ಗುಪ್ತ ಸಹೋದರರು ದೇಶ ತೊರೆದು ದುಬೈಗೆ ಓಡಿರುವುದು, ಅದಕ್ಕೆ ಅವಕಾಶ ಕೊಟ್ಟಿರುವ ಸರಕಾರಿ ವ್ಯವಸ್ಥೆಯ ವಿರುದ್ಧವೂ ಮೂಲನಿವಾಸಿಗಳ ಸಿಟ್ಟು ಆಕ್ರೋಶಗಳು ದೇಶಾದ್ಯಂತ ಭಾರೀ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಕ್ವಾಜುಲು ನಟಲ್ ಪ್ರದೇಶದ ಇಂಡಿಯನ್ ಟೌನ್‌ಶಿಪ್ ಫೀನಿಕ್ಸ್ ಮತ್ತದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ತೀವ್ರವಾಗಿದ್ದವು. ಇಲ್ಲಿನ ಭಾರತೀಯ ಗುಜರಾತ್ ಮೂಲದ ನರೋತ್ತಮ್ ಜೀನಾ (ಮೂಲ ಹೆಸರು ಮೋತಿರಾಮ್ ಆಮ್ತ) ಒಡೆತನದ ಪಂಜೀವನ್ ಉದ್ಯಮ ಸಮೂಹದ ಸುಮಾರು ಸಾವಿರ ಕೋಟಿಗಳಿಗೂ ಹೆಚ್ಚಿನ ಸಂಪತ್ತು ನಾಶವಾಗಿದೆ. ದರ್ಬಾನ್‌ನಲ್ಲಿ ಸರಕಾರಿ ಅಧೀನದಲ್ಲಿದ್ದ ಸುಮಾರು ಒಂದೂವರೆ ದಶಲಕ್ಷಗಳಷ್ಟು ಮದ್ದುಗುಂಡುಗಳನ್ನು ಲೂಟಿ ಮಾಡಿಕೊಂಡು ಹೋಗಲಾಗಿದೆ ಎಂಬ ವರದಿಗಳಿವೆ.
ಸರಕಾರಿ ವ್ಯವಸ್ಥೆ ಸಂಪೂರ್ಣ ವಿಫಲವಾಗಿ ಜನರು ತಮ್ಮನ್ನು ಹಾಗೂ ತಮ್ಮ ಆಸ್ತಿಗಳ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ರೈಫಲ್‌ಧಾರಿಗಳಾಗಿ ಗುಂಪುಗಳು ಬೀದಿಯಲ್ಲಿ ಕಾದಾಟಗಳಲ್ಲಿ ತೊಡಗಿದ್ದವು. ಇಂಡಿಯಾ ಮೂಲದ ಬೀದಿ ಕಾದಾಟಗಾರರಲ್ಲಿ ಹಲವರು ದಕ್ಷಿಣ ಅಮೆರಿಕ ಹಾಗೂ ಇಂಡಿಯಾಗಳಲ್ಲಿ ಮಿಲಿಯಾಂತರ ಡಾಲರ್‌ಗಳ ವ್ಯವಹಾರಗಳನ್ನೂ ಹಾಗೂ ವ್ಯಾಪಾರಿ ಸಂಸ್ಥೆಗಳನ್ನು ಹೊಂದಿದವರಾಗಿದ್ದರು. ದಕ್ಷಿಣ ಆಫ್ರಿಕಾದ ಸುಮಾರು ಹದಿಮೂರು ಲಕ್ಷದಷ್ಟಿರುವ ಇಂಡಿಯಾ ಮೂಲದವರಲ್ಲಿ ಕೇವಲ ಶೇಕಡಾ ಒಂದರಷ್ಟು ಜನರು ಮಾತ್ರ ಉದ್ಯಮಪತಿಗಳೋ, ದೊಡ್ಡ ಆಸ್ತಿವಂತರೋ ಆಗಿದ್ದಾರೆ. ಉಳಿದವರು ಮಧ್ಯಮವರ್ಗ ಇಲ್ಲವೇ ಬಡಜನಸಾಮಾನ್ಯರೇ ಆಗಿದ್ದಾರೆ ಎನ್ನುವುದು ವಾಸ್ತವ ವಿಚಾರ. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಆಕ್ರೋಶಗಳನ್ನು ಹರಿಬಿಡಲಾಗಿತ್ತು. ಇದು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿತ್ತು. ಕ್ವಾಜುಲು ನಟಲ್ ಪ್ರಾಂತವೊಂದರಲ್ಲೇ ಇನ್ನೂರಕ್ಕೂ ಹೆಚ್ಚು ದೊಂಬಿ ಹಾಗೂ ಲೂಟಿಗಳಾಗಿ ಸುಮಾರು 5,000 ಕೋಟಿ ರೂ.ಗಳಿಗೂ ಹೆಚ್ಚು ಆಸ್ತಿಗಳು ನಷ್ಟವಾದವು ಎಂಬ ವರದಿಯೂ ಇದೆ. ಇಂಡಿಯಾ ಮೂಲದವರ ಒಡೆತನದ ಮಾಲ್‌ಗಳು, ಫ್ಯಾಕ್ಟರಿಗಳು, ವ್ಯಾಪಾರಿ ಸಂಸ್ಥೆಗಳು ಕೂಡ ದಾಳಿಗಳ ಗುರಿಯಾಗಿದ್ದವು.
ಲೂಟಿ ನಿರತ ಗುಂಪು
ಇಂಡಿಯಾ ಮೂಲದವರು ದಕ್ಷಿಣ ಆಫ್ರಿಕಾದ ಹಣಕಾಸು ಸಂಸ್ಥೆಗಳನ್ನು ನಿಯಂತ್ರಿಸುತ್ತಾ ಸರಕಾರದ ಅಧಿಕಾರದ ಅಂಗಗಳ ಮೇಲೆ ಪ್ರಭಾವ ಬೀರುತ್ತಾ ಮೂಲನಿವಾಸಿಗಳನ್ನು ಶೋಷಣೆ ಮಾಡುತ್ತಿದ್ದಾರೆ ಎಂಬ ಆಪಾದನೆಗಳೂ ಇವೆ. ಶಿಕ್ಷೆಗೆ ಒಳಗಾದ ಜಾಕೊಬ್ ಝುಮಾ ದಕ್ಷಿಣ ಆಫ್ರಿಕಾದ ಅತೀ ದೊಡ್ಡ ಮೂಲನಿವಾಸಿ ಸಮುದಾಯವಾದ ಜುಲು ಸಮುದಾಯಕ್ಕೆ ಸೇರಿದವರು. ಈ ಅಂಶವನ್ನು ಝುಮಾ ಬಹಳ ಸಮರ್ಥವಾಗಿ ತಮ್ಮ ಪರವಾಗಿ ಉಪಯೋಗಿಸುತ್ತಾ ಬಂದಿದ್ದರು. ರಾಜೀನಾಮೆ ನೀಡಲು ನಿರಾಕರಿಸುತ್ತಲೇ ಬಂದಿದ್ದ ಅವರನ್ನು ಭ್ರಷ್ಟಾಚಾರದ ಆರೋಪಗಳ ಮೇಲೆಯೇ ಪದಚ್ಯುತಗೊಳಿಸಿ ಉಪಾಧ್ಯಕ್ಷರಾಗಿದ್ದ ಸಿರಿಲ್ ರಾಮಫೋಸರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಇದು ಆಳುವ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಲ್ಲೇ ತೀವ್ರ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿತ್ತು. ಕಮ್ಯುನಿಸ್ಟ್ ಹಿನ್ನೆಲೆಯವರು ಎಂದು ಬಿಂಬಿತವಾಗಿರುವ ಹಾಲಿ ಅಧ್ಯಕ್ಷ ಸಿರಿಲ್ ರಾಮಫೋಸರಿಗೆ 450 ದಶಲಕ್ಷ ಅಮೆರಿಕನ್ ಡಾಲರ್‌ಗಳಿಗೂ ಹೆಚ್ಚು ಆಸ್ತಿ ಸಂಪತ್ತುಗಳಿವೆ. ಜಾಕೊಬ್ ಝುಮಾರೊಂದಿಗೆ ಹತ್ತಿರದ ಸಂಬಂಧ ಇಟ್ಟುಕೊಂಡಿದ್ದವರು ಮಾಡಿರುವ ಭ್ರಷ್ಟಾಚಾರಗಳು ಹಾಗೂ ಅವ್ಯವಹಾರಗಳನ್ನು ಝುಮಾರ ತಲೆಗೆ ಕಟ್ಟಿ ಕಾರಾಗೃಹಕ್ಕೆ ಕಳಿಸುವಲ್ಲಿ ಇಂಡಿಯಾ ಮೂಲದ ಭಾರೀ ಉದ್ಯಮ ವಲಯದ ಪಾತ್ರ ಅಲ್ಲಿನ ಮೂಲ ನಿವಾಸಿ ಸಮುದಾಯಗಳ ಆಕ್ರೋಶಗಳಿಗೆ ಒಂದು ಮುಖ್ಯ ಕಾರಣ ಎನ್ನಲಾಗುತ್ತಿದೆ.
ಬೆಂಕಿ ಹಚ್ಚಿ ದೊಂಬಿನಿರತ ಸಮೂಹ
ಈ ಅಂಶವನ್ನು ತಳ್ಳಿ ಹಾಕಲು ಆಗುವುದಿಲ್ಲವಾದರೂ ಜಾಕೊಬ್ ಝುಮಾರ ಪಾತ್ರ ಇವುಗಳಲ್ಲಿ ಇಲ್ಲವೆನ್ನಲೂ ಹೇಳಲಾಗದು. ಆದರೆ ಈ ಎಲ್ಲಾ ಭ್ರಷ್ಟಾಚಾರ, ಹಣಕಾಸು ಅವ್ಯವಹಾರಗಳ ಪ್ರಧಾನ ಪಾತ್ರಧಾರಿಗಳು ಜಾಗತಿಕ ಭಾರೀ ಉದ್ಯಮವಲಯಗಳೇ ಆಗಿವೆ. ಅಧ್ಯಕ್ಷ ಝುಮಾರನ್ನು ಅದಕ್ಕಾಗಿ ಬಳಸಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾದ ವಿಚಾರ. ಜಾಕೊಬ್ ಝುಮಾರ ಮೇಲೆ ನಾನೂರಕ್ಕೂ ಹೆಚ್ಚು ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಹಾಗೂ ಹಣಕಾಸು ಅವ್ಯವಹಾರಗಳ ಆರೋಪಗಳಿವೆ. ಭಾರೀ ಉದ್ಯಮವಲಯ ಹಾಗೂ ರಾಜಕೀಯ ಅಧಿಕಾರದ ಅಂಗಗಳ ನಡುವಿನ ಇಂತಹ ಕಳ್ಳಾಟಗಳ ಕಾರಣದಿಂದಾಗಿ ದಕ್ಷಿಣ ಆಫ್ರಿಕಾದ ಬಹುಸಂಖ್ಯಾತ ಜನಸಮೂಹ ತೀವ್ರ ಬಡತನ, ಭೀಕರ ನಿರುದ್ಯೋಗ, ಇನ್ನಿಲ್ಲದ ಸಾಮಾಜಿಕ ಅಭದ್ರತೆಗಳಿಗೆ ಈಡಾಗಿರುವುದಂತೂ ಸತ್ಯ.
1960ರಲ್ಲಿ ಅಲ್ಲಿನ ಜನಾಂಗೀಯವಾದಿ ಸರಕಾರಿ ಪಡೆಗಳು ಶಾರ್ಪೆವಿಲ್ಲೆಯಲ್ಲಿ ನಡೆಸಿದ ಎಪ್ಪತ್ತರಷ್ಟು ಮೂಲನಿವಾಸಿ ಕರಿಯ ಜನಾಂಗದವರ ನರಮೇಧ ಹಾಗೂ ಆಕ್ರಮಣದ ನಂತರ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಸಶಸ್ತ್ರ ಹೋರಾಟ ಆರಂಭಿಸಿತ್ತು. ಅಲ್ಲಿನ ಸರಕಾರ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್‌ನ ಮೇಲೆ ನಿಷೇಧ ಹೇರಿತ್ತು. ಅಮೆರಿಕ ಸೇರಿದಂತೆ ಹಲವು ಮುಂದುವರಿದವುಗಳೆಂದು ಗುರುತಿಸಿಕೊಂಡ ರಾಷ್ಟ್ರಗಳು ಕೂಡ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್‌ನ ಮೇಲೆ ನಿಷೇಧ ಹೇರಿದ್ದವು. ವಸಾಹತುವಾದ ಮತ್ತು ಜನಾಂಗೀಯವಾದದ ವಿರುದ್ಧ ಸುಮಾರು ಮೂವತ್ತು ವರ್ಷಗಳ ಕಾಲ ಸಶಸ್ತ್ರ ಸಂಗ್ರಾಮ ಹೂಡಿದ್ದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ನಂತರ ಸಶಸ್ತ್ರ ಹೋರಾಟವನ್ನು ಬಿಟ್ಟು ಸಂಸದೀಯ ಮಾರ್ಗವನ್ನು ಅನುಸರಿಸಿತ್ತು. ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್‌ನ ನಾಯಕತ್ವದಲ್ಲಿದ್ದ ನೆಲ್ಸನ್ ಮಂಡೇಲಾರನ್ನು ಇಪ್ಪತ್ತೇಳು ವರ್ಷಗಳ ಸೆರಮನೆವಾಸದಿಂದ 1990ರಲ್ಲಿ ಬಿಡುಗಡೆಗೊಳಿಸಿದ ವಸಾಹತು ಹಾಗೂ ಜನಾಂಗೀಯವಾದದ ಪರ ಆಡಳಿತ ಎಎನ್‌ಸಿಯ ಮೇಲಿನ ನಿಷೇಧವನ್ನು ರದ್ದುಗೊಳಿಸಿ ತನ್ನ ಆಳ್ವಿಕೆಯನ್ನು ಬಿಟ್ಟುಕೊಟ್ಟಿತ್ತು. ಅದರಂತೆ 1994ರಲ್ಲಿ ನೆಲ್ಸನ್ ಮಂಡೆಲಾ ದಕ್ಷಿಣ ಆಫ್ರಿಕಾದ ಮೊದಲ ಚುನಾಯಿತ ಅಧ್ಯಕ್ಷರಾದರು.
ನೆಲ್ಸನ್ ಮಂಡೇಲಾ
1948ರಿಂದ 1994ರ ವರೆಗೆ ದಕ್ಷಿಣ ಆಫ್ರಿಕಾದ ಆಡಳಿತ ಅಲ್ಪಸಂಖ್ಯಾತ ಬಿಳಿಜನಾಂಗೀಯವಾದ ಆಫ್ರಿಕಾನೆರ್ ರಾಷ್ಟ್ರೀಯತೆಯ ಹೆಸರಿನಲ್ಲಿ ಹಿಡಿತ ಸಾಧಿಸಿದ್ದರೆ ನಂತರ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್‌ನ ಹಿಡಿತವಿದೆ. ಆದರೆ ಈಗ ದಕ್ಷಿಣ ಆಫ್ರಿಕಾದ 18ರಿಂದ 34ರ ಒಳಗಿನವರ ನಿರುದ್ಯೋಗ ಪ್ರಮಾಣ ಶೇಕಡಾ 60ಕ್ಕೂ ಹೆಚ್ಚಿದೆ. ಕೊರೋನದಿಂದಾಗಿ ಹೇರಿದ ಲಾಕ್‌ಡೌನ್ ಕಾರಣದಿಂದಾಗಿ ಸಣ್ಣ ಪುಟ್ಟ ಉದ್ಯಮಗಳು ನೆಲಕಚ್ಚಿ ಅದರಲ್ಲಿ ತೊಡಗಿರುವವರು ದಿವಾಳಿಯೆದ್ದು ಹೋಗಿದ್ದಾರೆ. ಜಾಗತಿಕ ಭಾರೀ ಕಾರ್ಪೊರೇಟ್‌ಗಳ ನಿರಂತರ ಲೂಟಿಗಳಿಂದಾಗಿ ಆರ್ಥಿಕ ಅಸಮಾನತೆಗಳು ಹೆಚ್ಚಿ ಬೀದಿ ತುಂಬ ಹಸಿದ ಹೊಟ್ಟೆಗಳು ತುಂಬಿಕೊಂಡಿವೆ. 2019ರ ಆಕ್ಸ್ ಫಾಮ್ ವರದಿಯ ಪ್ರಕಾರ ಒಟ್ಟು ಜನಸಂಖ್ಯೆಯ ಶೇ. 50 (650 ದಶಲಕ್ಷ)ರಷ್ಟು ತಳಪಾಯದ ಜನರ ಒಟ್ಟು ಆಸ್ತಿ 22.98 ಬಿಲಿಯನ್ ಅಮೆರಿಕ ಡಾಲರುಗಳು ಆಗಿದ್ದರೆ ಕೇವಲ ಮೂರು ಬಿಲಿಯಾಧಿಪತಿಗಳ ಆಸ್ತಿ 28.8 ಬಿಲಿಯನ್ ಅಮೆರಿಕ ಡಾಲರುಗಳಾಗಿವೆ. ಕೇವಲ ಶೇಕಡಾ 1ರಷ್ಟು ಜನರು ದೇಶದ ಅರ್ಧಕ್ಕಿಂತಲೂ ಹೆಚ್ಚಿನ ಆಸ್ತಿ ಸಂಪತ್ತಿನ ಮೇಲೆ ಹಿಡಿತ ಸಾಧಿಸಿದ್ದರೆ ಶೇ.10ರಷ್ಟಿರುವ ಶ್ರೀಮಂತರು ದೇಶದ ಶೇ. 90ರಿಂದ 95ರಷ್ಟು ಆಸ್ತಿ ಸಂಪತ್ತಿನ ಮೇಲೆ ಹಿಡಿತ ಸಾಧಿಸಿದ್ದಾರೆ. ಕೊರೋನ ಹೆಸರಿನ ಬಿಕ್ಕಟ್ಟುಗಳಿಗೂ ಮುಂಚೆಯೇ ದಕ್ಷಿಣ ಆಫ್ರಿಕಾದ ಆರ್ಥಿಕತೆ ಹಾಗೂ ಜನಸಾಮಾನ್ಯರ ಬದುಕು ತೀವ್ರವಾಗಿ ಹದಗೆಟ್ಟಿತ್ತು. ದಕ್ಷಿಣ ಆಫ್ರಿಕಾದ ರ್ಯಾಂಡ್ ಕರೆನ್ಸಿಯು ತೀವ್ರವಾಗಿ ಕುಸಿಯುತ್ತಾ ಸಾಗುತ್ತಿದೆ. ಸರಕಾರಿ ಸಾಲವು ದೇಶದ ಒಟ್ಟು ಜಿಡಿಪಿಯ ಶೇ. 60ಕ್ಕೂ ಹೆಚ್ಚಿದೆ. ಅದು ಶೀಘ್ರದಲ್ಲೇ ಶೇ. 70 ಮುಟ್ಟುವ ಹಂತ ತಲುಪುತ್ತಿದೆ. 2019ರ ಜಿಡಿಪಿ ಬೆಳವಣಿಗೆ ಕೇವಲ ಶೇ. 0.5 ಮಾತ್ರ. ಅದೂ ಇಳಿಯ ತೊಡಗಿದೆ. ಶೇ. 72ರಷ್ಟು ಮನೆಗಳ ಆದಾಯ ಸಾಲಗಳಿಗಾಗಿಯೇ ವ್ಯಯವಾಗುತ್ತಿದೆ.
ಬಂಡವಾಳಶಾಹಿ ಜಗತ್ತಿನ ಮಹಾ ಬಿಕ್ಕಟ್ಟುಗಳ ಕಾರಣದಿಂದಾಗಿ ಜಾಗತಿಕ ಭಾರೀ ಕಾರ್ಪೊರೇಟ್‌ಗಳು ಆಫ್ರಿಕಾದಲ್ಲಿನ ತಮ್ಮ ಗಣಿ ಇತ್ಯಾದಿ ಕಂಪೆನಿಗಳಲ್ಲಿ ರಿಟ್ರೆಂಚ್‌ಮೆಂಟ್ ಹೆಸರಿನಲ್ಲಿ ಕಾರ್ಮಿಕರ ಸಂಖ್ಯೆಗಳನ್ನು ದೊಡ್ಡ ಮಟ್ಟದಲ್ಲಿ ಕಡಿತಗೊಳಿಸುತ್ತಿವೆ. ಇದು ಕಾರ್ಮಿಕ ವಲಯದಲ್ಲಿ ಅಲ್ಲೋಲಕಲ್ಲೋಲಗಳ ಹೆಚ್ಚಳಕ್ಕೆ ಕಾರಣವಾಗಿದೆ.
ಈ ಮಟ್ಟದ ಆರ್ಥಿಕ ಅಸಮಾನತೆ ಈಗ ದಕ್ಷಿಣ ಆಫ್ರಿಕಾದಲ್ಲಿ ಇದೆ ಎಂದರೆ ಅದಕ್ಕೆ ಮೂಲ ಕಾರಣ ಅಲ್ಲಿ ನಿರಂತರವಾಗಿ ಆಳುತ್ತಾ ಬಂದಿರುವ ಆಫ್ರಿಕನ್ ನ್ಯಾಷನಲ್ ಪಕ್ಷ, ಅಲ್ಲಿನ ಕಮ್ಯುನಿಸ್ಟ್ ಪಕ್ಷ, ಸೌತ್ ಆಫ್ರಿಕ ಕಾರ್ಮಿಕ ಸಂಘಟನೆಗಳ ಒಕ್ಕೂಟದ್ದಾಗಿದೆ. ಅಧ್ಯಕ್ಷರಾಗಿ ಚುನಾಯಿತರಾಗುವ ಮುಂಚೆ ನೆಲ್ಸನ್ ಮಂಡೇಲಾ ಘೋಷಿಸಿದ್ದ ಭೂ ಸುಧಾರಣೆ, ಬ್ಯಾಂಕ್ ಹಾಗೂ ಗಣಿಗಾರಿಕೆಗಳ ರಾಷ್ಟ್ರೀಕರಣ ಸೇರಿದಂತೆ ಹಲವಾರು ಜನಸಾಮಾನ್ಯಪರ ಕಾರ್ಯಕ್ರಮಗಳು ಅಧಿಕಾರಕ್ಕೇರಿದ ನಂತರ ಜಾರಿಗೊಳಿಸಲಿಲ್ಲ. ಭೂಸುಧಾರಣೆ ಕುರಿತಾದ ಕಾನೂನು ಮಾಡಿದ್ದರೂ ಅದು ವಾಸ್ತವದಲ್ಲಿ ಜಾರಿ ಮಾಡಲೇ ಇಲ್ಲ. ಹಾಗಾಗಿ ದೇಶದ ಮೇಲಿನ ಜಾಗತಿಕ ಕಾರ್ಪೊರೇಟ್ ಕಂಪೆನಿಗಳ ಹಿಡಿತಗಳಲ್ಲಿ ಮೂಲಭೂತ ಬದಲಾವಣೆ ಬರಲಿಲ್ಲ. ಅಷ್ಟೇ ಆಗಿರದೇ ಅವರಿಗೆ ಆರ್ಥಿಕ ರಿಯಾಯಿತಿ, ವಿಶೇಷ ಸೌಲಭ್ಯ, ತೆರಿಗೆ ರಿಯಾಯಿತಿಗಳನ್ನು ಒದಗಿಸಲಾಯಿತು.
ಜನಸಾಮಾನ್ಯರು ವಸಾಹತುಶಾಹಿ ಹಾಗೂ ಜನಾಂಗೀಯವಾದಿ ಆಡಳಿತಗಳ ವಿರುದ್ಧ ಏನೆಲ್ಲಾ ಆಶೋತ್ತರಗಳೊಂದಿಗೆ ಹಲವು ದಶಕಗಳ ಕಾಲ ಹೋರಾಡುತ್ತಾ ಬಂದಿದ್ದರೋ ಅವುಗಳು ಈಗಲೂ ಜನಸಾಮಾನ್ಯರ ಪಾಲಿಗೆ ಮರೀಚಿಕೆಗಳಾಗಿಯೇ ಉಳಿದುಬಿಟ್ಟಿವೆ. 2021ರ ಜನವರಿ ವೇಳೆಗೆ ಶೇ. 39ರಷ್ಟು ಮನೆಗಳಲ್ಲಿ ಆಹಾರ ಖರೀದಿಸಲು ಕೂಡ ಹಣವಿಲ್ಲದೇ ಹೋಗಿತ್ತು. ಕೊರೋನ ನೆರವು ಎಂದೆಲ್ಲಾ ಸರಕಾರ ಘೋಷಿಸಿದ್ದರೂ ಅವುಗಳು ಕಾರ್ಯ ರೂಪದಲ್ಲಿ ಜನರಿಗೆ ಕಾಣದೆ ಹೋಗಿತ್ತು. ಮತ್ತೊಂದು ಕಡೆ ಮಿತವ್ಯಯದ ಹೆಸರಿನಲ್ಲಿ ಜನರಿಗೆ ಕನಿಷ್ಠ ಮಟ್ಟದಲ್ಲಾದರೂ ಸಿಗುತ್ತಿದ್ದುದನ್ನು ಕೂಡ ಕಸಿಯಲಾಗಿತ್ತು. 1990ರಿಂದ ಇಲ್ಲಿಯವರೆಗಿನ ದಕ್ಷಿಣ ಆಫ್ರಿಕಾದ ಆಡಳಿತ ಸಾಗಿ ಬಂದಿರುವ ಹಾದಿ ಹಿಂದಿನ ಬಿಳಿಯರ ಆಳ್ವಿಕೆಯ ಮುಂದುವರಿದ ಅಧ್ಯಾಯವಾಗಿಯೇ ಕಾಣುತ್ತದೆ.
ಹಾಲಿ ಅಧ್ಯಕ್ಷ ಸಿರಿಲ್ ರಾಮಫೋಸ
ಆದರೆ ಕೇವಲ ಶೇ. ಒಂದರಷ್ಟಿರುವ ಇಂಡಿಯಾ ಮೂಲದ ಆಸ್ತಿವಂತರ ಕೃತ್ಯಗಳಿಂದಾಗಿ ಇತರ ಜನಸಾಮಾನ್ಯ ಇಂಡಿಯಾದವರು ಆಫ್ರಿಕಾದ ಮೂಲನಿವಾಸಿಗಳ ಆಕ್ರೋಶಗಳಿಗೆ ಗುರಿಯಾಗುವಂತಾಗುತ್ತಿದೆ ಎಂಬ ವಾದ ಮುನ್ನೆಲೆಗೆ ಬಂದಿದೆ. ಅದು ಒಂದು ವಾಸ್ತವ ಕೂಡ ಹೌದು. ಆದರೆ ಇಲ್ಲಿ ಮತ್ತೊಂದು ಪ್ರಧಾನ ವಿಚಾರವಿದೆ. ಅದೇನೆಂದರೆ ದಕ್ಷಿಣ ಆಫ್ರಿಕಾದ ಇಂದಿನ ಪರಿಸ್ಥಿತಿಗೆ ಮೂಲ ಕಾರಣರಾಗಿರುವ ಜಾಗತಿಕ ಭಾರೀ ಕಾರ್ಪೊರೇಟ್‌ಗಳು ಮತ್ತವರ ಬೆಂಬಲಿಗರು ಅಲ್ಲಿನ ಅಲ್ಪಸಂಖ್ಯಾತರಾಗಿರುವ ಇಂಡಿಯಾ ಮೂಲದವರ ಮೇಲೆ ಮೂಲನಿವಾಸಿಗಳ ಆಕ್ರೋಶಗಳನ್ನು ತಿರುಗಿಸಿ ತಾವು ಅದರ ಗುರಿಯಾಗದಂತೆ ತಪ್ಪಿಸಿಕೊಳ್ಳಲು ಮಾಡುತ್ತಿರುವ ಕುತಂತ್ರಗಳ ಬಗ್ಗೆ, ಅದಕ್ಕೆ ಹೆಚ್ಚು ಗಮನ ಹರಿಸಬೇಕಾದ ಅಗತ್ಯ ಇಂದು ದಕ್ಷಿಣ ಆಫ್ರಿಕಾ, ಇಂಡಿಯಾ ಸೇರಿದಂತೆ ಜಗತ್ತಿನ ಬಹುಪಾಲು ರಾಷ್ಟ್ರಗಳ ದಲಿತ ದಮನಿತ ಬಡವರ್ಗ ಮತ್ತು ಮಧ್ಯಮ ವರ್ಗದ ಜನಸಾಮಾನ್ಯರ ಮುಂದಿದೆ.
ಮಿಂಚಂಚೆ: nandakumarnandana67@gmail.com