varthabharthi


ನಿಮ್ಮ ಅಂಕಣ

ಇಂದು ಸಹಕಾರಿ ಪಿತಾಮಹನ ಜನ್ಮದಿನ

‘ಸಹಕಾರ ರಂಗದ ತ್ಯಾಗಮಯಿ’ ಮೊಳಹಳ್ಳಿ ಶಿವರಾವ್

ವಾರ್ತಾ ಭಾರತಿ : 4 Aug, 2021
ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ

‘ನಾನು ನಿನಗಾಗಿ, ನೀನು ನನಗಾಗಿ, ನಾವೆಲ್ಲರೂ ದೇಶಕ್ಕಾಗಿ’ ಎಂಬ ತಾತ್ವಿಕ ನೆಲೆಯಲ್ಲಿ ರೂಪುಗೊಂಡ ಸಹಕಾರ ಕ್ಷೇತ್ರ ಇಂದು ದೇಶ -ವಿದೇಶಗಳಲ್ಲೂ ತನ್ನದೇ ಛಾಪು ಮೂಡಿಸಿದ ಅಪೂರ್ವ ಕ್ಷೇತ್ರ. ಸಹಬಾಳ್ವೆಯ ತತ್ವ ಪ್ರತಿಪಾದಿಸುವ ಸಹಕಾರ ಕ್ಷೇತ್ರ ಸಾಮಾಜಿಕ ಪರಿವರ್ತನೆಗೆ ತನ್ನದೇ ಕೊಡುಗೆ ನೀಡಿದೆ. ಇಂತಹ ಮಹಾನ್ ಕ್ಷೇತ್ರವನ್ನು ಸಂಪನ್ನಗೊಳಿಸಿದವರು ಹಲವರು. ಅಂತಹ ಮಹಾನುಭಾವರಲ್ಲಿ ಇಂದು ಸ್ಮರಿಸಬೇಕಾದ ಹೆಸರು ಮೊಳಹಳ್ಳಿ ಶಿವರಾವ್ ಅವರದು.

 ದಿವಂಗತ ಮೊಳಹಳ್ಳಿ ಶಿವರಾವ್ ಸಹಕಾರ ಚಳವಳಿಯ ಹರಿಕಾರ. ಅವರೊಬ್ಬ ವ್ಯಕ್ತಿಯಲ್ಲ. ಒಂದು ಶಕ್ತಿ. ಅವರು ಕೈಗೊಂಡ ಸಹಕಾರ ಕ್ಷೇತ್ರದ ಕಾರ್ಯವೆಲ್ಲವೂ ಸಫಲವಾಗಿ ಸಾವಿರಾರು ಜನರ ಜೀವನಕ್ಕೆ ಆಸರೆಯಾಗಿದೆ. ಸಹಕಾರ ಕ್ಷೇತ್ರ ಅವರ ‘ಮಾನಸ ಸೃಷ್ಟಿ’. ಹಾಗಾಗಿ ಅವರು ಸಹಕಾರ ರಂಗದಲ್ಲಿ ಮರೆಯಲಾಗದ ವ್ಯಕ್ತಿ. ‘ಸಹಕಾರ ರಂಗದ ಪಿತಾಮಹ’ರಾಗಿ ಸಮಾಜಮುಖಿ ಸೇಮೊಂದಿಗೆ ಶಿವರಾವ್ ಗುರುತಿಸಿಕೊಂಡವರು. ‘ಸಹಕಾರ’ ತನ್ನ ಉಸಿರು ಎಂದು ಬದುಕಿನುದ್ದಕ್ಕೂ ಈ ಕ್ಷೇತ್ರದ ಏಳಿಗೆಗೆ ಶ್ರಮಿಸಿದ ಇವರು ಇಂದಿಗೂ ಸಹಕಾರಿಗಳೆಲ್ಲರ ಮನದಲ್ಲಿ ಬೇರೂರಿದ್ದಾರೆ.

1880ರ ಆಗಸ್ಟ್-4ರಂದು ಪುತ್ತೂರಿನಲ್ಲಿ ರಂಗಪ್ಪಯ್ಯ-ಮೂಕಾಂಬಿಕಾ ದಂಪತಿಯ ಮಗನಾಗಿ ಜನಿಸಿದ ಶಿವರಾವ್ ವೃತ್ತಿಯಲ್ಲಿ ವಕೀಲರಾದರೂ ಅವರು ಆರಿಸಿಕೊಂಡದ್ದು ಸಹಕಾರ ಕ್ಷೇತ್ರವನ್ನು. ಬಯಸಿದ್ದು ಬಡರೈತರ ಕ್ಷೇಮಾಭಿವೃದ್ಧಿಯನ್ನು. ಭಾರತದಲ್ಲಿ ಸಹಕಾರ ಆಂದೋಲನವು 1904ರ ಮಾರ್ಚ್ 23ರಂದು ಕಾಯ್ದೆ ರೂಪದಲ್ಲಿ ಜಾರಿಗೆ ಬಂದಾಗ ಇದರ ಪ್ರಭಾವ ದಕ್ಷಿಣ ಕನ್ನಡ ಜಿಲ್ಲೆಗೂ ಪಸರಿಸಿದ ಹೊತ್ತಿನಲ್ಲಿ ಶಿವರಾವ್‌ರವರು ಸಹಕಾರ ಸಂಘಗಳ ಸಂಘಟನೆಗೆ ಮುಂದಾದರು. 1909ರಲ್ಲಿ ತಮ್ಮ ಹುಟ್ಟೂರಾದ ಪುತ್ತೂರಿನಲ್ಲಿ ಸಹಕಾರಿ ಕ್ರೆಡಿಟ್ ಸೊಸೈಟಿ ಸ್ಥಾಪಿಸಿದರು. ಸಹಕಾರ ಚಳವಳಿ ಇನ್ನಷ್ಟು ಫಲಪ್ರದವನ್ನಾಗಿಸುವ ಉದ್ದೇಶದಿಂದ ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ‘ಸಹಕಾರ ತತ್ವ’ದ ಮಹತ್ವವನ್ನು ವಿವರಿಸಿ ಸಹಕಾರ ಸಂಘಗಳನ್ನು ಸ್ಥಾಪಿಸಿದರು.

ಎಸ್‌ಸಿಡಿಸಿಸಿ ಬ್ಯಾಂಕ್ ಸ್ಥಾಪನೆ
  ಹಳ್ಳಿಗಳಲ್ಲಿ ಸ್ಥಾಪನೆಗೊಂಡ ಸಹಕಾರ ಸಂಘಗಳಿಗೆ ಹಣಕಾಸಿನ ನೆರವು ಅಗತ್ಯ ಎನ್ನುವುದನ್ನು ಮನಗಂಡು, ಮಾತೃಸಂಸ್ಥೆಯಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್)ನ್ನು 1914ರಲ್ಲಿ ಪುತ್ತೂರಿನಲ್ಲಿ ಸ್ಥಾಪಿಸಿದರು. ಇವರಿಂದ ಸ್ಥಾಪನೆಗೊಂಡ ಈ ಬ್ಯಾಂಕ್ ಇಂದು 107 ವರ್ಷಗಳನ್ನು ಆದರ್ಶಯುತವಾಗಿ ಪೂರೈಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ. ಶಿವರಾವ್‌ರ ಆಶಯವನ್ನು ಜೀವಂತವಾಗಿರಿಸಿಕೊಂಡ ಈ ಬ್ಯಾಂಕ್‌ನ್ನು ಇಂದು ‘ಸಹಕಾರ ರತ್ನ’ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಸುಮಾರು 27 ವರ್ಷಗಳ ಕಾಲ ಅಧ್ಯಕ್ಷರಾಗಿರುವ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಎಸ್‌ಸಿಡಿಸಿಸಿ ಬ್ಯಾಂಕನ್ನು ವಾಣಿಜ್ಯ ಬ್ಯಾಂಕುಗಳಿಗೆ ಸರಿಸಮಾನವಾಗಿ ಬೆಳೆಸಿದ್ದಾರೆ. ಉತ್ಕೃಷ್ಟ ಬ್ಯಾಂಕಿಂಗ್ ಸೇಮೊಂದಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಇಂದು ಸಹಕಾರಿ ಕ್ಷೇತ್ರಕ್ಕೆ ಮಾದರಿಯಾಗಿ ಅಗ್ರಸ್ಥಾನದಲ್ಲಿದೆ.

ಸಹಕಾರಿ ಸಂಸ್ಥೆಗಳ ಸ್ಥಾಪನೆಯಲ್ಲಿ ವೈವಿಧ್ಯ
 ‘ತ್ಯಾಗಮಯ ಜೀವನವೇ ಸಹಕಾರಿಗಳ ಬಾಳ್ವೆ, ಪ್ರಾಮಾಣಿಕ ಸೇವೆಯೇ ಸಹಕಾರಿಗಳ ಗುರಿ’ ಎನ್ನುವ ಸಂದೇಶದ ಮೂಲಕ ಸಹಕಾರ ಕ್ಷೇತ್ರದಲ್ಲಿ ಪವಾಡ ಸದೃಶ ಕೆಲಸ ಮಾಡಿರುವ ಶಿವರಾವ್ ಶೋಷಣೆ ಮುಕ್ತ ಸಮಾಜ ನಿರ್ಮಾಣದ ಕನಸು ಕಂಡವರು. ಹಾಗಾಗಿ ಅವರ ನಾಯಕತ್ವದಲ್ಲಿ ಸ್ಥಾಪನೆಗೊಂಡ ಸಹಕಾರಿ ಸಂಸ್ಥೆಗಳಲ್ಲೂ ವೈವಿಧ್ಯ ಇತ್ತು. ಕೃಷಿಕರು ಉತ್ಪಾದಿಸಿದ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಇಲ್ಲದ ಸಂಕಷ್ಟ ಪರಿಸ್ಥಿತಿಯಲ್ಲಿ ಅವರು 1919ರಲ್ಲಿ ‘ಕೃಷಿಕರ ಸಹಕಾರಿ ಬಂಡಸಾಲೆ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಈ ಮೂಲಕ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರಕಿಸಿಕೊಟ್ಟರು. ಎರಡನೇ ಮಹಾಯುದ್ಧದ ಕಾಲದಲ್ಲಿ ಜಿಲ್ಲಾದ್ಯಂತ ತಲೆದೋರಿದ ಆಹಾರ ಧಾನ್ಯದ ಕೊರತೆಯಿಂದ ಜನ ಕಂಗಾಲಾಗಿದ್ದ ಸಂದರ್ಭದಲ್ಲಿ ಶಿವರಾವ್‌ರವರು ‘ದ.ಕ. ಜಿಲ್ಲಾ ಸೆಂಟ್ರಲ್ ಕೋ- ಆಪರೇಟಿವ್ ಹೋಲ್‌ಸೇಲ್ ಸ್ಟೋರ್ಸ್’ ಸಂಘವನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಡಿಪೊಗಳನ್ನು ತೆರೆದು ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಅದರ ಕ್ರಮಬದ್ಧ ವಿತರಣೆಗೆ ಅಹೋರಾತ್ರಿ ಶ್ರಮಿಸಿದ ಕರ್ಮಯೋಗಿ. ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಆಗಿನ ಮದ್ರಾಸ್ ಸರಕಾರ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. 1936ರಲ್ಲಿ ಪುತ್ತೂರು ಸಹಕಾರಿ ಭೂ ಅಭಿವೃದ್ಧಿ ಬ್ಯಾಂಕಿನ ಸ್ಥಾಪನೆಗೂ ಕಾರಣರಾಗಿದ್ದ ಶಿವರಾವ್ ಈ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದರು. ದ್ರಾವಿಡ ಬ್ರಾಹ್ಮಣ ಸಹಕಾರಿ ಹಾಸ್ಟೆಲ್, ಧಾನ್ಯದ ಬ್ಯಾಂಕ್, ಮಹಿಳೆಯರ ಕೈಗಾರಿಕಾ ಸಂಘ, ಬಿಲ್ಡಿಂಗ್ ಸೊಸೈಟಿ ಹೀಗೆ ಹಲವು ಸಹಕಾರಿ ಸಂಘಗಳನ್ನು ಅವರು ಸ್ಥಾಪಿಸಿದ್ದರು.

ಅಭಿವೃದ್ಧಿಯ ಚಿಂತಕ
 ಮೊಳಹಳ್ಳಿ ಶಿವರಾವ್ ರಚನಾತ್ಮಕ ಕಾರ್ಯಗಳಲ್ಲಿ ಸೋಲರಿಯದ ಛಲವಂತರು. ಅವರ ಪ್ರತಿಯೊಂದು ಕಾರ್ಯವೂ ಸಮಾಜದ ಅಭಿವ್ಯಕ್ತಿಗೆ ಪೂರಕವಾಗಿತ್ತು. ಇವರು ತಾಲೂಕು ಬೋರ್ಡ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಿದರು. 1916ರಲ್ಲಿ ಪುತ್ತೂರು ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿ ಹೈಸ್ಕೂಲ್ ಒಂದನ್ನು ಆರಂಭಿಸಿದರು. ಈ ಎಜುಕೇಶನ್ ಸೊಸೈಟಿ ಮುಂದೆ 1965ರಲ್ಲಿ ಪುತ್ತೂರಿನಲ್ಲಿ ವಿವೇಕಾನಂದ ಕಾಲೇಜಿನ ಸ್ಥಾಪನೆಗೆ ಕಾರಣವಾಯಿತು. ವಿಟ್ಲದಲ್ಲಿ 1917ರಲ್ಲಿ ಖಾಸಗಿ ಎಲಿಮೆಂಟರ್ ಶಾಲೆ ಹಾಗೂ ಗೌಡ ಸಮುದಾಯಗೋಸ್ಕರ ದ.ಕ. ಗೌಡ ಶಿಕ್ಷಣ ಸಂಘವನ್ನು ಸ್ಥಾಪಿಸಿದರು. ಶಿಕ್ಷಣದ ಮೂಲಕ ಸಾಮಾಜಿಕ ಪಿಡುಗುಗಳ ನಿವಾರಣೆಗೆ ಶಿವರಾವ್ ಪ್ರಯತ್ನಿಸಿದರು. ಅವರು ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಡಾ. ಶಿವರಾಮ ಕಾರಂತರೊಂದಿಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಿದ ಹೆಗ್ಗಳಿಕೆ ಇವರದ್ದು. ಪುತ್ತೂರಿನಲ್ಲಿ ದಸರಾ ಉತ್ಸವವನ್ನು ನಾಡಹಬ್ಬವನ್ನಾಗಿಸಿದ್ದು ಶಿವರಾವ್‌ರವರ ಕೊಡುಗೆಯಾಗಿದೆ.

ಸಹಕಾರ ಆಂದೋಲನದ ಪ್ರಮುಖ ರೂವಾರಿಯಾಗಿದ್ದ ಶಿವರಾವ್ ತಮ್ಮ 87 ವರ್ಷಗಳ ಜೀವಿತ ಅವಧಿಯಲ್ಲಿ 58 ವರ್ಷಗಳನ್ನು ಸಹಕಾರ ಕ್ಷೇತ್ರಕ್ಕೆ ಸಮರ್ಪಿಸಿದ ಧೀಮಂತ ಸಹಕಾರಿ. ಸಹಕಾರಿ ರಂಗವನ್ನು ತನ್ನ ನಿಸ್ವಾರ್ಥ ಸೇವೆಯಿಂದ ಹಾಗೂ ಅನುಭವ ಪೂರ್ಣ ವ್ಯವಹಾರ ಚಾತುರ್ಯದಿಂದ ಶಕ್ತಿಪೂರ್ಣವನ್ನಾಗಿ ಬೆಳೆಸಿದ್ದು ಶ್ಲಾಘನೀಯ ಹಾಗೂ ಅಪ್ರತಿಮವಾದುದು. ಜೀವನವಿಡೀ ‘ಸಹಕಾರ’ ಮಂತ್ರವನ್ನು ಪಠಿಸುತ್ತಾ ತನ್ನ ಸರ್ವಸ್ವವನ್ನು ಸಹಕಾರ ಕ್ಷೇತ್ರಕ್ಕೆ ಸಮರ್ಪಿಸಿದ ಶಿವರಾವ್ 1967ರ ಜುಲೈ4ರಂದು ನಿಧನ ಹೊಂದಿದರು. ಇವರ ಅವಿಸ್ಮರಣೀಯ ಅಪಾರ ನೆನಪುಗಳು ಮಾತ್ರ ಇಂದು ಉಳಿದುಕೊಂಡಿವೆ. ಇಂತಹ ಅಪೂರ್ವ ಮಹಾನುಭಾವರ ಜನ್ಮದಿನವಾದ ಇಂದು (ಆಗಸ್ಟ್ 4) ಸಹಕಾರಿಗಳೆಲ್ಲರೂ ಅವರನ್ನು ಸ್ಮರಿಸಿ, ಇಂದಿಗೂ ಭಾವಪೂರ್ಣವಾಗಿ ನಮಿಸುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)