varthabharthi


ಆರೋಗ್ಯ

ಅಂತರ್‌ರಾಷ್ಟ್ರೀಯ ಸ್ತನ್ಯಪಾನ ಸಪ್ತಾಹ

ಅರಿಯಬೇಕಿದೆ ಸ್ತನ್ಯಪಾನದ ಮಹತ್ವ

ವಾರ್ತಾ ಭಾರತಿ : 7 Aug, 2021
ರತ್ನ್ನಾ ಜಗನ್ನಾಥ ಡಾಂಗೆ, ಉಷಾ ಆರ್.ಜಿ.

ಲೋಕದಲ್ಲಿ ಬೆಲೆ ತೆತ್ತಲಾಗದ ವಸ್ತು/ವಿಷಯವೆಂದರೆ ಅದು ತಾಯಿ ಮಗುವಿನ ಸಂಬಂಧ. ಮಗುವಿನ ಹುಟ್ಟಿನಿಂದ ಹಿಡಿದು ದೊಡ್ಡವರಾಗುವವರೆಗೂ ತಾಯಿಯ ಆರೈಕೆಯೇ ಹಿರಿದಾಗಿರುತ್ತದೆ. ಯುಎನ್‌ಒ(UNO), ಯುನಿಸೆಫ್(UNICEF) ಪ್ರಕಾರ ಎದೆಹಾಲು ಉಣಿಸುವುದು ಎಂದರೆ ಮಗುವಿನ ಜೀವಿತಾವಧಿಯವರೆಗೂ ಅತ್ಯುತ್ತಮ ಆರೋಗ್ಯವನ್ನು ಕೊಡುಗೆಯಾಗಿ ನೀಡಿದ ಹಾಗೆ. ಪ್ರತೀ ವರ್ಷವೂ ಆಗಸ್ಟ್ ಮೊದಲನೇ ವಾರ ‘ಅಂತರ್‌ರಾಷ್ಟ್ರೀಯ ಸ್ತನ್ಯಪಾನ ದಿನಾಚರಣೆ’ಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಎದೆಹಾಲಿನ ಮಹತ್ವ ಹಾಗೂ ತಾಯಿ ಮಗುವಿನ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬೇಕಾದುದು ಮತ್ತು ತಿಳಿಸಬೇಕಾದುದು ಅತೀ ಅವಶ್ಯಕ. ಶಿಶುಗಳ ಜನನದ ಒಂದು ಗಂಟೆಯೊಳಗೆ ಸ್ತನ್ಯಪಾನ ಮಾಡಿಸುವುದು ಬಹಳ ಅವಶ್ಯಕವೆಂದು, ನಿರಂತರ ಆರು ತಿಂಗಳವರೆಗೆ ಮುಂದುವರಿಸಿ ನಂತರದಲ್ಲಿ ಮಗುವಿಗೆ ದ್ರವಪದಾರ್ಥ, ಅರ್ಧ/ಅರೆಘನ ಮತ್ತು ಘನಪದಾರ್ಥ, ಆಹಾರಗಳನ್ನು ನೀಡಬೇಕೆಂದು ಸೂಚಿಸಿದೆ.

ಅನುಕೂಲಗಳು: ತಾಯಿಯ ಹಾಲಿನಲ್ಲಿರುವ ಶಕ್ತಿ ಬೇರಾವುದೇ ಆಹಾರಗಳಲ್ಲಿಲ್ಲ. ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಲು; ಪ್ರೊಟೀನ್, ನ್ಯೂಟ್ರಿನ್ ಪೂರೈಕೆ ಹೆಚ್ಚಾಗಲು ಸ್ತನ್ಯಪಾನ ಅಗತ್ಯ. ಮಗುವಿಗೆ ಆರು ತಿಂಗಳ ಕಾಲ ಎದೆಹಾಲು ಉಣಿಸುವುದರಿಂದ ಶೀತ, ಕಿವಿನೋವು, ಗಂಟಲು ಸೋಂಕಿನಿಂದ ರಕ್ಷಿಸಿ ಆಗಾಗ ಆಸ್ಪತ್ರೆಗೆ ದಾಖಲಾಗುವುದನ್ನು ತಡೆಯಬಹುದು. ಸ್ತನ್ಯಪಾನದಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಜೊತೆಗೆ ಮಗುವನ್ನು ಸೋಂಕಿನಿಂದ, ಮಸೂರತೆ, ಕ್ಯಾನ್ಸರ್ ಕಾಯಿಲೆ, ಕರುಳಿನ ಸೋಂಕು, ಬೊಜ್ಜು (ಸ್ಥೂಲಕಾಯದ ಸಮಸ್ಯೆ)ನಿಂದ ಕಾಪಾಡುತ್ತದೆ. ಮೆದುಳಿನ ಪಕ್ವತೆ/ಬೆಳವಣಿಗೆಗೆ ಕಾರಣವಾಗುತ್ತದೆ. ಎದೆಹಾಲಿನಲ್ಲಿರುವ ಪ್ರೊಟೀನ್ ಮಗುವಿನ ಮೆದುಳು ಬೆಳವಣಿಗೆಗೆ ಸಹಕಾರಿ. ಇದರಲ್ಲಿನ ಕೊಬ್ಬಿನಾಂಶವು ಮಗುವಿನ ನರಮಂಡಲ ಅಭಿವೃದ್ಧಿಯಾಗಲು ಸಹಾಯಕ. ಭವಿಷ್ಯದಲ್ಲಿ ಶರೀರದಲ್ಲಿ ಉಂಟಾಗುವ ರಕ್ತನಾಳಕ್ಕೆ ಸಂಬಂಧಪಟ್ಟ ರೋಗಗಳ ವಿರುದ್ಧ ಹೋರಾಡಲು ಸಹಾಯಕ. ಕೊಬ್ಬಿನಾಂಶ ಕೊರತೆಯಿಂದುಂಟಾಗುವ ರಕ್ತಹೀನತೆ, ಕ್ಯಾಲ್ಸಿಯಂ ಕೊರತೆ, ಅಲರ್ಜಿ, ರಿಕೆಟ್ಸ್, ಭೇದಿ, ಉಸಿರಾಟ ಸಮಸ್ಯೆ, ಕಾಮಾಲೆ, ಅಧಿಕ ರಕ್ತದೊತ್ತಡ, ಹೃದ್ರೋಗ ಹಾಗೂ ಜಠರ ರೋಗಗಳನ್ನು ತಡೆಯಬಹುದು. ತಾಯಿಯ ಹಾಲನ್ನು ಹೆಚ್ಚು ಸೇವಿಸಿದ ಮಗುವಿನ ಬುದ್ಧಿಮಟ್ಟ ಹೆಚ್ಚಾಗಿರುತ್ತದೆ. ಎದೆಹಾಲಿನಲ್ಲಿ ಸೂಕ್ಷ್ಮಜೀವಾಣುಗಳ ವಿರುದ್ಧ ಹೋರಾಟ ನಡೆಸುವಂತಹ ಶಕ್ತಿಯಿದೆ. ಕಿವಿಸೋಂಕು, ಅತಿಸಾರ, ಮಲಬದ್ಧತೆ ಸೇರಿದಂತೆ ಅನೇಕ ಸಮಸ್ಯೆಗಳು ಬರುವುದಿಲ್ಲ.

ತಾಯಿಯ ಆರೋಗ್ಯಕ್ಕೂ ಪೂರಕ: ಸ್ತನ್ಯಪಾನವು ತಾಯಿ ಮತ್ತು ಮಗುವಿನ ಪರಿಣಾಮಕಾರಿ ಆರೋಗ್ಯ ಬೆಳವಣಿಗೆಗೆ ಸೂಕ್ತ ಸಹಾಯಕ ಎಂದು ಯುನಿಸೆಫ್ ಹೇಳಿದೆ. ಎದೆಹಾಲು ಉಣಿಸುವುದರಿಂದ ತಾಯಿಯ ಹೃದಯದ ಸಮಸ್ಯೆ ತಡೆಗಟ್ಟುತ್ತದೆ. ಸ್ತನಕ್ಯಾನ್ಸರ್ ಹಾಗೂ ಅಂಡಾಣುವಿನ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆ. ತಾಯಿಯಲ್ಲಿ ರಕ್ತಸ್ರಾವವಾಗುವುದನ್ನು ನಿಲ್ಲಿಸಬಹುದು. ಗರ್ಭಾವಸ್ಥೆಯ ಸಮಯದಲ್ಲಿ ತೂಕ ಹೆಚ್ಚಾಗಿರುತ್ತದೆ, ಹೆರಿಗೆ ನಂತರ ಎದೆಹಾಲನ್ನು ಕುಡಿಸುವುದರಿಂದ ತಾಯಿಯ ತೂಕ ಮೊದಲಿನ ತೂಕಕ್ಕೆ ಬರುತ್ತದೆ. ಹಾಲುಣಿಸುವುದರಿಂದ ತಾಯಿಯ ಶರೀರದ ಕೊಬ್ಬಿನಾಂಶ ಕರಗಿ ತಾಯಿಯ ಸೌಂದರ್ಯ ಹೆಚ್ಚಾಗುತ್ತದೆ. ಎದೆಹಾಲು ಉಣಿಸುವಾಗ ಪ್ರೊಲ್ಯಾಕ್ಟಿನ್‌ನಂತಹ ಹಾರ್ಮೋನ್‌ಗಳು ಬಿಡುಗಡೆಯಾಗುವುದು. ಇದು ಗರ್ಭಕೋಶದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ತಾಯಿಯ ಆಹಾರ ಕ್ರಮ: ತಾಯಿಯ ಮಧುರ, ಆಮ್ಲ, ಲವಣರಸಾತ್ಮಕ, ಅರೆಘನ ಇಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ಬೆಳ್ಳುಳ್ಳಿ, ಹಾಲು, ಹಾಲಿನ ಉತ್ಪನ್ನ, ತುಪ್ಪ, ಮೆಂತೆ ಬೀಜ, ಹಳದಿ ಬೀಜ, ಸೊಪ್ಪು, ತರಕಾರಿ, ಈರುಳ್ಳಿ, ಮೀನು ಮತ್ತು ಮಾಂಸ ಸೇವಿಸಬೇಕು. ‘ದಿ ಲಾನ್ಸೆಟ್’ ದತ್ತಾಂಶದ ಪ್ರಕಾರ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬಂಡವಾಳವನ್ನು ಅಂದರೆ 300 ಬಿಲಿಯನ್ ಡಾಲರ್ ಹೂಡುವುದರ ಮೂಲಕ ಪ್ರತೀ ವರ್ಷ 8,20,000 ಮಕ್ಕಳ ಸಾವಿನ ಪ್ರಮಾಣವನ್ನು ತಡೆಗಟ್ಟಲಾಗುತ್ತಿದೆ. ಜಾಗತಿಕ ಸಾಕ್ಷಿ ಆಧಾರಿತವಾಗಿ 25ಶೇ. ಮಕ್ಕಳಿಂದ 40ಶೇ. ಮಕ್ಕಳು ಎದೆಹಾಲನ್ನು ಪಡೆದುಕೊಳ್ಳುತ್ತಾರೆ. The World Alliance For Breastfeeding Action(WABA)ವನ್ನು 1991ರಲ್ಲಿ ಸ್ತನ್ಯಪಾ ನದ ಮಹತ್ವದ ಅರಿವನ್ನು ಮೂಡಿಸಲು ಸ್ಥಾಪಿಸಲಾಯಿತು.

ಪ್ರತೀವರ್ಷ ಆಗಸ್ಟ್ ಮೊದಲನೇ ವಾರವನ್ನು ‘‘ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆ ಅಥವಾ ವಾರ’’ವನ್ನು ಯುನಿಸೆಫ್‌ನ ಸಹಯೋಗದೊಂದಿಗೆ 1992ರಿಂದ ಆಚರಿಸಲಾಗುತ್ತದೆ. ವಿಶ್ವ ಸ್ತನ್ಯಪಾನ ವಾರದ ವಿಷಯವೆಂದರೆ-‘ಸ್ತನ್ಯಪಾನವನ್ನು ರಕ್ಷಿಸಿ: ಹಂಚಿಕೆಯ ಜವಾಬ್ದಾರಿ’. ಭಾರತವು 1992ರಲ್ಲಿ ಶಿಶು ಹಾಲಿನ ಬದಲಿ, ಆಹಾರ ಬಾಟಲಿಗಳು ಮತ್ತು ಶಿಶು ಆಹಾರ ಕಾಯ್ದೆಯನ್ನು ಕಠಿಣ ನಿಯಮಗಳೊಂದಿಗೆ ಜಾರಿಗೊಳಿಸಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5ರ ಪ್ರಕಾರ ಸಮೀಕ್ಷೆಗೊಳಪಡಿಸಿದ ಒಟ್ಟು 22 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, 12ರಲ್ಲಿ ಮಾತ್ರ ಸ್ತನ್ಯಪಾನದಲ್ಲಿ ಇಳಿಕೆ ಕಂಡುಬಂದಿದೆ ಆದರೆ ಸಾಂಸ್ಥಿಕ ಜನನಗಳು ಹೆಚ್ಚಾಗಿವೆ ಎಂದು ತಿಳಿದು ಬಂದಿದೆ.

ಪಿತೃತ್ವ ಮತ್ತು ಮಾತೃತ್ವ ರಜೆ: ಡಿಎಂಕೆ(ದ್ರಾವಿಡ ಮುನ್ನೇತ್ರ ಕಳಗಂ) ತಮಿಳನಾಡು ಸರಕಾರ ಮಾತೃತ್ವ ರಜೆಯನ್ನು 12 ತಿಂಗಳು ಘೋಷಿಸಿದೆ. ಪ್ರಸ್ತುತದಲ್ಲಿ ವಿಭಕ್ತಿ ಕುಟುಂಬ ಹೆಚ್ಚಾಗಿರುವ ಕಾರಣ ಮತ್ತು ಮಕ್ಕಳ ಹಾಗೂ ತಾಯಿಯ ಪೋಷಣೆಗೆ ಅನುಕೂಲವಾಗುವ ಉದ್ದೇಶದಿಂದ ಇದನ್ನು ಘೋಷಿಸಿದೆ. ಕರ್ನಾಟಕದಲ್ಲೂ ಜಾರಿಗೆ ತರುವ ಪ್ರಯತ್ನವಾಗಿ ಪಿತೃತ್ವ ರಜೆಯನ್ನು 15 ದಿನಗಳು ನೀಡಿದ್ದಾರೆ. (ಭಾರತೀಯ ಕಾನೂನು ಕೇವಲ 12-16 ವಾರಗಳು ಹೆಚ್ಚಿಸಬೇಕೆಂದು ಬೇಡಿಕೆಯನ್ನಿಟ್ಟಿದೆ.) ಭಾರತವು ಕನಿಷ್ಠ ಆದಾಯಗಳಿಕೆ ದೇಶವಾದರೂ ಕೂಡ, ಜಿಡಿಪಿಯು ಆರೋಗ್ಯದ ಆಧಾರದ ಮೇಲೆ ಅವಲಂಬಿಸಿದೆ.

ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳು ನಮ್ಮ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುತ್ತವೆ. ಸರಕಾರವು ನಿರ್ದಿಷ್ಟ ನಿಧಿಯನ್ನು ನಿಯೋಜಿಸಬೇಕು, ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಪೋಷಕರಿಗೆ ಶಿಕ್ಷಣ ನೀಡಲು, ಆರ್ಯೋಗ್ಯ ಕಾರ್ಯಕರ್ತರಿಗೆ ನಿಧಿಯನ್ನು ಹೂಡಬೇಕು ಮತ್ತು ನಾಗರಿಕ ಸಮಾಜ, ಸಂಘಟನೆಗಳು ಮತ್ತು ಮಾಧ್ಯಮವು ಜಾಗೃತಿ ಮೂಡಿಸುವಲ್ಲಿ ತೊಡಗಿಸಿಕೊಳ್ಳಬೇಕು. ಕೋವಿಡ್-19ರ ಪಿಡುಗಿನಿಂದಲೂ ಸ್ತನ್ಯಪಾನ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಕೇವಲ ಈ ಪ್ರಚಾರವನ್ನು ಈ ವಾರಕ್ಕೆ ಸೀಮಿತಗೊಳಿಸದೆ, ನಿರಂತರವಾಗಿ ಸ್ತನ್ಯಪಾನದ ಮಹತ್ವವನ್ನು ಪ್ರಚುರಪಡಿಸಬೇಕು. ಈ ನಿಟ್ಟಿನಲ್ಲಿ ಹೆಜ್ಜೆಯನ್ನಿಡೋಣ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)