ಲಸಿಕೆ ಪಡೆದ ವಿದೇಶೀಯರಿಗೆ ಉಮ್ರಾ ಯಾತ್ರೆಗೆ ಅವಕಾಶ : ಸೌದಿ ಅರೇಬಿಯಾ
photo :PTI
ರಿಯಾದ್, ಆ.8: ಕೊರೋನ ಸೋಂಕಿನ ವಿರುದ್ಧದ ಲಸಿಕೆ ಪಡೆದ ವಿದೇಶಿ ಯಾತ್ರಿಕರಿಗೆ ಉಮ್ರಾ ಯಾತ್ರೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ . ವಿದೇಶಿ ಯಾತ್ರಾರ್ಥಿಗಳನ್ನು ಸಂಘಟಿಸುವ ಇಲಾಖೆಯ ಅಧಿಕಾರಿಗಳು ಆಗಸ್ಟ್ 9ರಿಂದ ಉಮ್ರಾ ಯಾತ್ರೆಗೆ ಕೋರಿಕೆಯನ್ನು ಸ್ವೀಕರಿಸಲು ಪ್ರಾರಂಭಿಸುತ್ತಾರೆ ಎಂದು ಸೌದಿ ಅರೇಬಿಯಾ ಘೋಷಿಸಿದೆ.
ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವಿದೇಶಿಯರಿಗೆ ಪ್ರವೇಶಾವಕಾಶವನ್ನು ಸೌದಿ ಅರೇಬಿಯಾ ನಿಷೇಧಿಸಿದ 18 ತಿಂಗಳ ಬಳಿಕ ಸರಕಾರಿ ಮಾಧ್ಯಮದಲ್ಲಿ ಈ ಘೋಷಣೆ ಮಾಡಲಾಗಿದೆ. ವಿದೇಶಿ ಯಾತ್ರಿಗಳು ತಮ್ಮ ಅರ್ಜಿಯ ಜೊತೆಗೆ ಅಧಿಕೃತ ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಲಗತ್ತಿಸಬೇಕು. ಪ್ರವೇಶಾವಕಾಶವಿಲ್ಲದ ಪಟ್ಟಿಯಲ್ಲಿರುವ ದೇಶಗಳ ಪ್ರಜೆಗಳಿಗೆ ಸೌದಿ ಪ್ರವೇಶಿಸಿದ ಬಳಿಕ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿದೆ. ಪ್ರಾರಂಭದಲ್ಲಿ ತಿಂಗಳಿಗೆ 60,000 ಯಾತ್ರಿಗಳಿಗೆ ಪರವಾನಿಗೆ ನೀಡಲಾಗುವುದು, ಕ್ರಮೇಣ ಈ ಸಂಖ್ಯೆಯನ್ನು ತಿಂಗಳಿಗೆ 2 ಮಿಲಿಯದವರೆಗೆ ವಿಸ್ತರಿಸಲಾಗುವುದು ಎಂದು ವರದಿ ಹೇಳಿದೆ.
ಇಸ್ಲಾಮ್ ನ 2 ಪವಿತ್ರ ಸ್ಥಳಗಳಾಗಿರುವ ಮಕ್ಕಾ ಮತ್ತು ಮದೀನಾಕ್ಕೆ ಭೇಟಿ ನೀಡುವ ಉಮ್ರಾ ಯಾತ್ರೆಯನ್ನು ವರ್ಷದ ಯಾವುದೇ ಸಮಯದಲ್ಲೂ ಕೈಗೊಳ್ಳಬಹುದು. ವರ್ಷದಲ್ಲಿ ಒಂದು ಬಾರಿ ನಡೆಯುವ ಹಜ್ ಯಾತ್ರೆಗಿಂತ ಇದು ವಿಭಿನ್ನವಾಗಿದೆ. ಸಾಮಾನ್ಯವಾಗಿ ಉಮ್ರಾ ಮತ್ತು ಹಜ್ ಯಾತ್ರೆಯಿಂದ ಸೌದಿ ಅರೇಬಿಯಾಕ್ಕೆ ವಾರ್ಷಿಕ 12 ಬಿಲಿಯನ್ ಡಾಲರ್ ಆದಾಯ ಲಭಿಸುತ್ತದೆ. ಆದರೆ ಕೊರೋನ ಸೋಂಕಿನಿಂದಾಗಿ ಈ ಯಾತ್ರೆಗಳಿಗೆ ಅಡ್ಡಿಯಾಗಿದೆ.
ಲಸಿಕೆ ಪಡೆದ ದೇಶೀಯ ಯಾತ್ರಿಗಳಿಗೆ ಕಳೆದ ವರ್ಷದ ಅಕ್ಟೋಬರ್ ನಿಂದ ಉಮ್ರಾ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದೆ. ಕೊರೋನ ಸೋಂಕಿನಿಂದ ಅಸ್ತವ್ಯಸ್ತವಾಗಿರುವ ಪ್ರವಾಸೋದ್ಯಮ ಹಾಗೂ ಇತರ ಕ್ಷೇತ್ರಗಳಿಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ರಾಷ್ಟ್ರದಾದ್ಯಂತ ಲಸಿಕೀಕರಣ ಪ್ರಕ್ರಿಯೆಗೆ ವೇಗ ನೀಡಲಾಗಿದೆ. ದೇಶದಲ್ಲಿ ಖಾಸಗಿ ಅಥವಾ ಸರಕಾರಿ ಸಂಸ್ಥೆಗಳಲ್ಲಿ ಕೆಲಸ ಮುಂದುವರಿಸಬೇಕಿದ್ದರೆ ಉದ್ಯೋಗಿಗಳು ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ. ಅಲ್ಲದೆ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವವರೂ ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು ಎಂಬ ನಿಯಮವಿದೆ.