ಕೋವಿಡ್ ನಿಂದ ಮೃತ ವೈದ್ಯಕೀಯ ಸಿಬ್ಬಂದಿಗಳ ಕುಟುಂಬಸ್ಥರಿಗೆ ಅರ್ಧ ಮಿಲಿಯನ್ ರಿಯಾಲ್ ಪರಿಹಾರ: ಸೌದಿ ಅರೇಬಿಯಾ ಘೋಷಣೆ
ರಿಯಾದ್, ಆ.8: ಕೋವಿಡ್ ಸೋಂಕಿನ ವಿರುದ್ಧದ ಹೋರಾಟದ ಸಂದರ್ಭ ಮೃತರಾದ ವೈದ್ಯಕೀಯ ಸಿಬ್ಬಂದಿಗಳ ಕುಟುಂಬದವರಿಗೆ ಅರ್ಧ ಮಿಲಿಯನ್ ರಿಯಾಲ್(133,000 ಡಾಲರ್) ಪರಿಹಾರ ನೀಡುವುದಾಗಿ ಸೌದಿ ಅರೇಬಿಯಾ ಘೋಷಿಸಿದೆ.
ಸೌದಿ ಪ್ರಜೆಗಳಲ್ಲದವರು, ಖಾಸಗಿ ಕ್ಷೇತ್ರದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರ ಸಹಿತ , ಸೋಂಕಿನ ಕಾರಣದಿಂದ ಮೃತರಾದ ಎಲ್ಲ ಆರೋಗ್ಯಕಾರ್ಯಕರ್ತರಿಗೂ ಈ ಆರ್ಥಿಕ ನೆರವು ಲಭ್ಯವಾಗಲಿದೆ ಎಂದು ಸರಕಾರ ಹೇಳಿದೆ. ಆದರೆ, ಸೌದಿಯಲ್ಲಿ ಕೊರೋನ ಸೋಂಕಿನಿಂದ ಮೃತರಾದ 8,320 ಮಂದಿಯಲ್ಲಿ ಎಷ್ಟು ಮಂದಿ ಆರೋಗ್ಯಕಾರ್ಯಕರ್ತರು ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ.
30 ಮಿಲಿಯನ್ ಜನಸಂಖ್ಯೆ ಇರುವ ಸೌದಿಯಲ್ಲಿ ಬಹುತೇಕ ಎಲ್ಲರಿಗೂ ಲಸಿಕೆ ಹಾಕಲಾಗಿದೆ. ಈಗ ಸೌದಿಯಲ್ಲಿ ದಾಖಲಾಗುವ ದೈನಂದಿನ ಸೋಂಕಿನ ಪ್ರಕರಣಗಳ ಸಂಖ್ಯೆ 1000ಕ್ಕೂ ಕಡಿಮೆಯಾಗಿದೆ. ದೇಶದಲ್ಲಿ ಕೊರೋನ ಸೋಂಕಿತರ ಚಿಕಿತ್ಸೆಯ ವೆಚ್ಚವನ್ನು ಸರಕಾರವೇ ಭರಿಸಬೇಕು ಎಂದು ದೊರೆ ಸಲ್ಮಾನ್ ಬಿನ್ ಅಬ್ದುಲ್ಲಝೀಝ್ ಆದೇಶಿಸಿದ್ದರು. ಸೌದಿ ಅರೇಬಿಯಾ ದಲ್ಲಿ ಸುಮಾರು 5,33,000 ಸೋಂಕು ಪ್ರಕರಣ ದಾಖಲಾಗಿದ್ದು , ಈಗ ಸುಮಾರು 1,400 ಗಂಭೀರ ಪ್ರಕರಣಗಳಿವೆ ಎಂದು ಸರಕಾರದ ಮೂಲಗಳು ಹೇಳಿವೆ