ಅರುಣಾ ಅಸಫ್ ಅಲಿ ಎಂಬ ಭಾರತ ರತ್ನ
ಅರುಣಾ ಅಸಫ್ ಅಲಿಯಂತಹವರು ಕಂಡ ಸಮಾನತೆಯ ಭಾರತದ ಕನಸು ಭಗ್ನಗೊಂಡಿದೆ. ದೇಶ ವಿದೇಶಗಳ ಬಹುರಾಷ್ಟ್ರೀಯ ಕಂಪೆನಿಗಳು ಭಾರತದ ಸಂಪತ್ತಿನ ಲೂಟಿ ಮಾಡುತ್ತಿವೆ. ಈಗ ಅಧಿಕಾರದಲ್ಲಿರುವವರು ತಮ್ಮ ನಿಲುವುಗಳನ್ನು ವಿರೋಧಿಸುವವರನ್ನೆಲ್ಲ ದೇಶದ್ರೋಹಿಗಳೆಂದು ಆರೋಪ ಹೊರಿಸಿ ಜೈಲಿಗೆ ತಳ್ಳುತ್ತಿದ್ದಾರೆ. ಭಾರತೀಯರ ಮನಸ್ಸುಗಳನ್ನು ಒಡೆದು ದ್ವೇಷದ ವಿಷಬೀಜ ಬಿತ್ತಲಾಗಿದೆ. ಇಂತಹ ಸಂಕಟದ ಸನ್ನಿವೇಶದಲ್ಲಿ ಅರುಣಾ ಅಸಫ್ ಅಲಿಯಂತಹವರ ನೆನಪು ನಿರಂತರ ಸ್ಫೂರ್ತಿದಾಯಕವಾಗಿದೆ.
ಇಂದಿನ ಪೀಳಿಗೆಯ ಬಹುತೇಕ ಯುವಕರಿಗೆ ಅರುಣಾ ಅಸಫ್ ಅಲಿ ಎಂಬ ಹೆಸರು ಗೊತ್ತಿಲ್ಲ. ಗೊತ್ತು ಮಾಡಿಕೊಳ್ಳುವ ಆಸಕ್ತಿಯೂ ಕಾಣುತ್ತಿಲ್ಲ. ತಿಳಿದವರು ಬರೆದರೂ ಓದುವ ವ್ಯವಧಾನವಿಲ್ಲ. ಆದರೆ ಸ್ವಾತಂತ್ರ ಚಳವಳಿಯ ಮತ್ತು ನಂತರದ ಭಾರತದ ಚರಿತ್ರೆಯ ಪುಟಗಳನ್ನು ತಿರುವುತ್ತಾ ಹೋದರೆ ಈ ಹೆಸರು ಅದೆಷ್ಟು ರೋಮಾಂಚನಕಾರಿ ಎಂಬುದು ಗೊತ್ತಾಗುತ್ತದೆ.
ಅದು 1942ನೇ ಇಸವಿ. ಆಗಸ್ಟ್ 8ನೇ ತಾರೀಕು. ಮುಂಬೈಯ ಸುಪ್ರಸಿದ್ಧ ಗೋವಾಲಿಯಾ ಕೆರೆ ಮೈದಾನದಲ್ಲಿ ಭಾರೀ ಜನಸ್ತೋಮ. ವೇದಿಕೆಯಲ್ಲಿ ಕಾಣಿಸಿಕೊಂಡ ಮಹಾತ್ಮಾ ಗಾಂಧೀಜಿ ಬ್ರಿಟಿಷರಿಗೆ ‘ಭಾರತ ಬಿಟ್ಟು ತೊಲಗಲು’(ಕ್ವಿಟ್ ಇಂಡಿಯಾ) ಕೊನೆಯ ಎಚ್ಚರಿಕೆ ನೀಡಿದರು. ಇದೇ ಸಭೆಯಲ್ಲಿ ‘ಮಾಡು ಇಲ್ಲವೇ ಮಡಿ’( ಡೂ ಆರ್ ಡೈ) ಎಂದು ಜನತೆಯನ್ನು ಸ್ವಾತಂತ್ರ ಹೋರಾಟಕ್ಕೆ ಹುರಿದುಂಬಿಸಿದರು. ಬಾಪು ನೀಡಿದ ಈ ಕರೆಯಿಂದ ಒಮ್ಮಿಂದೊಮ್ಮೆಲೇ ದೇಶದೆಲ್ಲೆಡೆ ವಿದ್ಯುತ್ ಸಂಚಾರವಾದಂತಾಯಿತು.
ಆಗಸ್ಟ್ 9ನೇ ತಾರೀಕು ಗಾಂಧಿ ಬಂಧನವಾಯಿತು. ಅದರ ಬೆನ್ನಲ್ಲೇ ಜವಾಹರಲಾಲ್ ನೆಹರೂ, ಮೌಲಾನಾ ಆಝಾದ್, ಸರ್ದಾರ್ ಪಟೇಲ್ ಮುಂತಾದವರ ದಸ್ತಗಿರಿ ನಡೆಯಿತು. ಆ ಸಭೆಯಲ್ಲಿ ಪಾಲ್ಗೊಂಡಿದ್ದ ನನ್ನ ದೊಡ್ಡಪ್ಪ ರಾಯಪ್ಪ ಬೆಳಗಲಿ ಅವರು ಅಂದಿನ ಘಟನೆಗಳನ್ನು ಆವೇಶದಿಂದ ವರ್ಣಿಸುತ್ತಿದ್ದುದನ್ನು ಕಿವಿಯಾರೆ ಕೇಳಿರುವೆ.
ಇದೆಲ್ಲ ಹಳೆಯ ಪೀಳಿಗೆಯ ಹಾಗೂ ಅಧ್ಯಯನಶೀಲರಾದ ಹೊಸ ಪೀಳಿಗೆಯ ಅನೇಕರಿಗೆ ಗೊತ್ತಿರುವ ಸಂಗತಿ. ಆದರೆ ಆಗ ಸಿಡಿಗುಂಡಿನಂತೆ ಹೊರ ಹೊಮ್ಮಿದ ಅರುಣಾ ಅಸಫ್ ಅಲಿ ಅವರ ಬಗ್ಗೆ ಅನೇಕರಿಗೆ ವಿವರವಾಗಿ ಗೊತ್ತಿಲ್ಲ. ಗಾಂಧಿ ಬಂಧನದ ನಂತರ ಅವರು ಭಾಷಣ ಮಾಡಿ ಹೋರಾಟಕ್ಕೆ ಕರೆ ನೀಡಿದ್ದ ಅದೇ ಗೋವಾಲಿಯಾ ಕೆರೆ ಮೈದಾನಕ್ಕೆ ನುಗ್ಗಿ ತ್ರಿವರ್ಣ ಧ್ವಜ ಹಾರಿಸಿದ ದಿಟ್ಟ ಮಹಿಳೆ ಅರುಣಾ ಅಸಫ್ ಅಲಿ. ನಾನು ಒಂದೂವರೆ ವರ್ಷದ ಹಿಂದೆ ಮುಂಬೈಗೆ ಹೋದಾಗ ಈ ಗೋವಾಲಿಯಾ ಮೈದಾನವನ್ನು ಕಣ್ಣಾರೆ ಕಂಡು ಬಂದೆ.
1942ರ ಆಗಸ್ಟ್‌ನಲ್ಲಿ ಗೋವಾಲಿಯಾ ಕೆರೆ ಮೈದಾನದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಭೂಗತರಾದ ಅರುಣಾ ಅಸಫ್ ಅಲಿ 1946ರವರೆಗೆ ಪೊಲೀಸರ ಕೈಗೆ ಸಿಗಲೇ ಇಲ್ಲ. ಪೊಲೀಸರು ಬಂಧನದ ಆದೇಶ ವಾಪಸ್ ಪಡೆದ ನಂತರವೇ ಹೊರಗೆ ಕಾಣಿಸಿಕೊಂಡರು.
ಅರುಣಾ ಅಸಫ್ ಅಲಿ ಎಂಬ ಈ ಹೆಸರೇ ಅನೇಕರಿಗೆ ಅಚ್ಚರಿಯನ್ನುಂಟು ಮಾಡಬಹುದು. ಆದರೆ ಅರುಣಾ ಇಷ್ಟಪಟ್ಟು ಅಸಫ್ ಅಲಿ ಎಂಬ ಸ್ವಾತಂತ್ರ ಹೋರಾಟಗಾರನನ್ನು ಮದುವೆಯಾದ ನಂತರ ಇದೇ ಹೆಸರು ಕೊನೆಯವರೆಗೂ ಅವರದಾಯಿತು.
ಯಾರೀಕೆ ಅರುಣಾ? ಈಕೆ ದೇಶದ ಮಹಾನ್ ಸ್ವಾತಂತ್ರ ಹೋರಾಟಗಾರ್ತಿ, ಸಮಾಜ ಸೇವಕಿ, ಶಿಕ್ಷಣ ತಜ್ಞೆ, ಪತ್ರಕರ್ತೆ. ಹೀಗೆ ಬಹುಮುಖ ವ್ಯಕ್ತಿತ್ವದ ಅರುಣಾ ಜನಿಸಿದ್ದು ಹರ್ಯಾಣದ ಕಲ್ಕಾ ಎಂಬಲ್ಲಿ, 1909ರ ಜುಲೈ 16ರಂದು. ಇವರ ತಂದೆ ಉಪೇಂದ್ರನಾಥ ಗಂಗೂಲಿ ಅಲ್ಲಿ ಜೀವನೋಪಾಯಕ್ಕಾಗಿ ಹೊಟೇಲ್ ನಡೆಸುತ್ತಿದ್ದರು. ಇವರು ಗುರುದೇವ ಎಂದೇ ಹೆಸರಾದ ಕವಿ ರವೀಂದ್ರನಾಥ ಟಾಗೋರ್‌ರ ದೂರದ ಸಂಬಂಧಿ. ಈ ಉಪೇಂದ್ರನಾಥ ಗಂಗೂಲಿಯ ಮಗಳು ಅರುಣಾ ಅಸಫ್ ಅಲಿ. ಲಾಹೋರ್, ನೈನಿತಾಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ ಅರುಣಾ ನಂತರ ಕೋಲ್ಕತಾದ ಗೋಖಲೆ ಸ್ಮಾರಕ ಸಂಸ್ಥೆಯ ಶಾಲೆಯಲ್ಲಿ ಶಿಕ್ಷಕಿಯಾಗಿ ನೌಕರಿಗೆ ಸೇರಿಕೊಂಡರು.
ಅಲಹಾಬಾದ್‌ನ ಸಭೆಯೊಂದರಲ್ಲಿ ಸ್ವಾತಂತ್ರ ಹೋರಾಟಗಾರ ಅಸಫ್ ಅಲಿ ಅವರ ಭಾಷಣ ಕೇಳಿ ಪ್ರಭಾವಿತರಾದ ಅರುಣಾ ತಮಗಿಂತ ಇಪ್ಪತ್ತು ವರ್ಷ ದೊಡ್ಡವರಾದ ಅವರನ್ನು ಪ್ರೀತಿಸಿದರು. ಎರಡೂ ಕುಟುಂಬಗಳ ಸಂಪ್ರದಾಯವಾದಿಗಳ ವಿರೋಧವನ್ನು ಎದುರಿಸಿ ವಿವಾಹ ಮಾಡಿಕೊಂಡರು. ನಂತರ ಗಂಡ, ಹೆಂಡತಿ ಇಬ್ಬರೂ ದುಮುಕಿದ್ದು ಸ್ವಾತಂತ್ರ ಹೋರಾಟ ಎಂಬ ಸಾಗರಕ್ಕೆ.
ಅರುಣಾ ಅವರನ್ನು ಹತ್ತೊಂಭತ್ತರ ಯುವತಿಯಾಗಿದ್ದಾಗಲೇ ನೋಡಿದ ಸಾಹಿತಿ ಕುಶ್ವಂತ್ ಸಿಂಗ್ ತಮ್ಮ ಲೇಖನವೊಂದರಲ್ಲಿ ಅವರ ಸೌಂದರ್ಯ ಹಾಗೂ ಸ್ವಾತಂತ್ರ ಹೋರಾಟದ ಬದ್ಧತೆಯನ್ನು ವರ್ಣಿಸಿದ್ದಾರೆ. ಅರುಣಾ ಅವರ ಸಂಗಾತಿ ಅಸಫ್ ಅಲಿ ಕುಟುಂಬದ ಪರಿಚಯ ಕೂಡ ಕುಶ್ವಂತ್ ಸಿಂಗರಿಗೆ ಇತ್ತು. ಹಳೆಯ ದಿಲ್ಲಿಯ ಧರಿಯಾಗಂಜನಲ್ಲಿದ್ದ ಅಸಫ್ ಅಲಿ ಅವರ ಅರಮನೆಯಂತಹ ಮನೆ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಮತ್ತು ಜೈನ ಸ್ನೇಹಿತರ ಸಂಗಮ ತಾಣವಾಗಿತ್ತು.
ಸ್ವಾತಂತ್ರ ಹೋರಾಟದಲ್ಲಿ ಗಂಡ, ಹೆಂಡತಿ ಇಬ್ಬರೂ ದುಮುಕಿದರೂ ಅಸಫ್ ಅಲಿಯವರಿಗಿಂತಹ ಅರುಣಾ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಂಡರು. ಅಸಫ್ ಅಲಿ ಅತ್ಯಂತ ಪ್ರಭಾವಿ ವಾಕ್ಪಟು. ಅರುಣಾ ಭಾಷಣಕಾರ್ತಿ ಮಾತ್ರವಲ್ಲ ಬೀದಿ ಹೋರಾಟಗಾರ್ತಿ. ಅನೇಕ ಸಲ ಮುಷ್ಕರ ಚಳವಳಿಯನ್ನು ಸಂಘಟಿಸಿ ಬಂಧನಕ್ಕೊಳಗಾದ ಅರುಣಾ ಅಸಫ್ ಅಲಿ ಗಾಂಧಿ ಕರೆಗೆ ಓಗೊಟ್ಟು ವಿದೇಶಿ ಬಟ್ಟೆ ಮತ್ತು ವಸ್ತುಗಳನ್ನು ಬೆಂಕಿಗೆ ಹಾಕಿ ಸುಟ್ಟು ಹಾಕುವ ಚಳವಳಿಯಲ್ಲೂ ಪಾಲ್ಗೊಂಡರು.
ದೇಶಕ್ಕೆ ಸ್ವಾತಂತ್ರ ಬಂದ ನಂತರ ಮೊದಲು ಕಾಂಗ್ರೆಸ್ ಸೋಷಲಿಸ್ಟ್ ಪಕ್ಷವನ್ನು ಸೇರಿದ ಅರುಣಾ ಅಸಫ್ ಅಲಿ ನಂತರ ಭಾರತ ಕಮ್ಯುನಿಸ್ಟ್ ಪಕ್ಷದ ಜೊತೆಗೆ ಗುರುತಿಸಿಕೊಂಡರು. ಕಮ್ಯುನಿಸ್ಟ್ ಪಕ್ಷದ ಮಹಿಳಾ ಸಂಘಟನೆಯಾದ ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟದ (ಎನ್‌ಎಫ್‌ಐಡಬ್ಲು) ಸ್ಥಾಪಕ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದರು. ಕೆಲ ಸಮಯ ಕಮ್ಯುನಿಸ್ಟ್ ಪಕ್ಷದಿಂದ ದೂರವಿದ್ದು ದಿಲ್ಲಿ ಮಹಾನಗರ ಪಾಲಿಕೆಯ ಮೇಯರ್ ಆಗಿ ರಾಜಧಾನಿಯ ಅಭಿವೃದ್ಧಿಗೆ ಶ್ರಮಿಸಿದರು.ಕಮ್ಯುನಿಸ್ಟ್ ಪಕ್ಷದಿಂದ ತಾಂತ್ರಿಕ ಕಾರಣಗಳಿಗಾಗಿ ಕೆಲ ಕಾಲ ಅಧಿಕೃತವಾಗಿ ಅಂತರ ಕಾಯ್ದುಕೊಂಡರೂ ಸೈದ್ಧಾಂತಿಕ ವಾಗಿ, ರಾಜಕೀಯವಾಗಿ ಅವರು ಸದಾ ಕಾಮ್ರೇಡ್ ಆಗಿದ್ದರು.
ಅರವತ್ತರ ದಶಕದಲ್ಲಿ ದೊಡ್ಡ ಪತ್ರಿಕಾ ಸಂಸ್ಥೆಯೊಂದನ್ನು ಸ್ಥಾಪಿಸಿ ‘ಪೆಟ್ರಿಯಟ್’ ಎಂಬ ದಿನಪತ್ರಿಕೆ ಹಾಗೂ ‘ಲಿಂಕ್’ ಎಂಬ ವಾರಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಇವೆರಡೂ ಎಂಭತ್ತರ ದಶಕದ ಕೊನೆಯವರೆಗೂ ಪ್ರಕಟವಾಗುತ್ತಿದ್ದವು. ನಾನು ಬೆಂಗಳೂರಿನಲ್ಲಿ ನೆಲೆಸಲು ಬಂದಾಗ ಮೆಜೆಸ್ಟಿಕ್‌ನಲ್ಲಿದ್ದ ಫೋರಮ್ ಬುಕ್ ಹೌಸ್‌ನಲ್ಲಿ ಇವೆರಡು ಪತ್ರಿಕೆಗಳನ್ನು ಕೊಂಡು ತಂದು ಓದುತ್ತಿದ್ದೆ. ತಾರುಣ್ಯದ ಆ ದಿನಗಳಲ್ಲಿ ನಮ್ಮ ಪೀಳಿಗೆಯ ಯುವಕರಿಗೆ ಒಂದಿಷ್ಟು ಜಾತ್ಯತೀತ, ಸೌಹಾರ್ದ ತಿಳುವಳಿಕೆ ಮೂಡಿದ್ದರೆ ಅದರ ಶ್ರೇಯಸ್ಸಿನ ಸಿಂಹಪಾಲು ಅರುಣಾ ಅಸಫ್ ಅಲಿ ಅವರ ಇವೆರಡು ಪತ್ರಿಕೆಗಳಿಗೆ ಸಿಗುತ್ತದೆ.
ಗಾಂಧೀಜಿಯ ಅಹಿಂಸಾತ್ಮಕ ಹೋರಾಟ, ಸುಭಾಶ್ಚಂದ್ರ ಭೋಸ್ ಅವರ ಆಝಾದ್ ಹಿಂದ್ ಸೇನೆಯ ಒತ್ತಡ, ಭಗತ್‌ಸಿಂಗ್ ಮುಂತಾದವರ ಬಲಿದಾನ, ಅರುಣಾ ಅಸಫ್ ಅಲಿ ಅಂತಹವರ ಸಮರ್ಪಣಾ ಮನೋಭಾವದ ಸಂಘರ್ಷ, ಇವುಗಳ ಜೊತೆ ಜೊತೆಗೆ ಬಾಬಾಸಾಹೇಬರ ಸಾಮಾಜಿಕ ಚಳವಳಿ, ಎಡಪಂಥೀಯರ ಉಗ್ರ ಚಟುವಟಿಕೆ ಹೀಗೆ ಸಾವಿರಾರು ತೊರೆಗಳು ಸೇರಿ ದೇಶ ಬ್ರಿಟಿಷ್ ಆಳ್ವಿಕೆಯಿಂದ ವಿಮೋಚನೆಗೊಂಡಿತು.
ಸ್ವಾತಂತ್ರಾನಂತರ ಈ ಹೋರಾಟದ ಇತಿಹಾಸವನ್ನು ಹೊಸ ಪೀಳಿಗೆಯ ಯುವಕರಿಗೆ ತಿಳಿಸಿ ಹೇಳಿದ್ದರೆ ಇಂದು ವಾಟ್ಸ್‌ಆ್ಯಪ್ ಯುನಿವರ್ಸಿಟಿಗಳ ವಿಷ ಪ್ರಕಾಶನಕ್ಕೆ ಅವರು ಬಲಿಯಾಗುತ್ತಿರಲಿಲ್ಲ.
ಅರುಣಾ ಅಸಫ್ ಅಲಿ ಅವರ ಸ್ವಾತಂತ್ರ ಹೋರಾಟವನ್ನು ದೇಶ ಮಾತ್ರವಲ್ಲ ವಿಶ್ವವೇ ಗುರುತಿಸಿದೆ. ಅಂತಲೇ 1991ರಲ್ಲಿ ಪ್ರತಿಷ್ಠಿತ ಅಂತರ್‌ರಾಷ್ಟ್ರೀಯ ಲೆನಿನ್ ಶಾಂತಿ ಪ್ರಶಸ್ತಿ, 1992ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ, 1997ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಗಳು ಅರುಣಾ ಅಸಫ್ ಅಲಿ ಅವರನ್ನು ಹುಡುಕಿಕೊಂಡು ಬಂದಿವೆ.
ಅರುಣಾ ಅಸಫ್ ಅಲಿ ಅಂಥವರು ತಮ್ಮ ಯೌವನದ ದಿನಗಳಲ್ಲಿ ಎಲ್ಲ ಸುಖ, ಸಂತೋಷಗಳನ್ನು ಬದಿಗೊತ್ತಿ ಸ್ವಾತಂತ್ರ ಹೋರಾಟಕ್ಕೆ ತಮ್ಮನ್ನು ತಾವು ಸಮರ್ಥಿಸಿಕೊಂಡವರು. ಅವರ ಹೋರಾಟ ಬರೀ ಬ್ರಿಟಿಷ್ ಆಡಳಿತವನ್ನು ತೊಲಗಿಸಲು ಮಾತ್ರವಾಗಿರಲಿಲ್ಲ. ಸ್ವಾತಂತ್ರದ ಜೊತೆ ಸಮಾನತೆ ಅವರ ಆಶಯವಾಗಿತ್ತು. ಸಂಪತ್ತಿನ ವಿಕೇಂದ್ರೀಕರಣ, ಜಾತಿ ತಾರತಮ್ಯಗಳಿಗೆ ಅವಕಾಶವಿಲ್ಲದ ಸಮಾಜ, ಸ್ತ್ರೀ ಪುರುಷರ ಸಮಾನತೆ, ಉಚಿತ ಆರೋಗ್ಯ, ಶಿಕ್ಷಣದ ಸೌಕರ್ಯ ಇರುವ ಬಹುತ್ವ ಭಾರತ ಅವರ ಕನಸಾಗಿತ್ತು. ಪ್ರೀತಿಸಿ ಮದುವೆಯಾಗಲು ಜಾತಿ, ಮತ ಅವರಿಗೆ ಅಡ್ಡಿಯಾಗಲಿಲ್ಲ. ಆ ಕಾಲದಲ್ಲಿ ಇಂತಹ ಅನೇಕ ಮಹಾ ನಾಯಕರಿದ್ದರು. ಭಾರತ ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕರಾಗಿದ್ದ ಎಂ.ಫಾರೂಕಿ ಅವರು ತಮ್ಮ ಪಕ್ಷದ ಸಂಗಾತಿ ವಿಮಲಾ ಅವರೊಂದಿಗೆ ಬದುಕನ್ನು ಹಂಚಿಕೊಂಡರು. ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರದಂತೂ ಸಂಪೂರ್ಣ ಸೆಕ್ಯುಲರ್ ಕುಟುಂಬ. ಮಗಳು ಇಂದಿರಾ ಗಾಂಧಿ ಅವರು ಪಾರ್ಸಿ ಕುಟುಂಬದ ಫಿರೋಝ್ ಗಾಂಧಿಯವರನ್ನು, ಇಂದಿರಾ ಅವರ ಪುತ್ರ ರಾಜೀವ್ ಗಾಂಧಿ ಇಟಲಿಯ ಸೋನಿಯಾರನ್ನು, ಸಂಜಯ್ ಗಾಂಧಿ ಸಿಖ್ ಧರ್ಮದ ಮನೇಕಾರನ್ನು ಪ್ರೀತಿಸಿ ವಿವಾಹವಾದರು. ನುಡಿದಂತೆ ನಡೆದರು, ಬರೆದಂತೆ ಬದುಕಿದರು.
ಸ್ವಾತಂತ್ರ ಹೋರಾಟದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದ ಅರುಣಾ ಅಸಫ್ ಅಲಿ ಅವರಂತಹ ಅನೇಕ ಹೋರಾಟಗಾರರು ಸ್ವಾತಂತ್ರಾ ನಂತರ ಸಮಾನತೆಯ ಸಮಾಜದ ಕನಸನ್ನು ನನಸಾಗಿಸಲು ಎಡಪಂಥೀಯ ಚಳವಳಿಯೊಂದಿಗೆ ಗುರುತಿಸಿಕೊಂಡರು. ನೇತಾಜಿ ಸುಭಾಶ್ಚಂದ್ರ ಭೋಸ್ ಅವರ ಆಝಾದ್ ಹಿಂದ್ ಫೌಝ್‌ನ ಮಹಿಳಾ ಬ್ರಿಗೇಡ್ ಕಮಾಂಡರ್ ಆಗಿದ್ದ ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್, ಭಗತ್ ಸಿಂಗ್ ಒಡನಾಡಿಗಳಾಗಿದ್ದ ಅಜಯ ಘೋಷ್, ಪೃಥ್ವಿಸಿಂಗ್ ಆಝಾದ್, ಮುಂತಾದವರು ಈ ಸಾಲಿನಲ್ಲಿ ಸೇರಿದ್ದಾರೆ.
ಅರುಣಾ ಅಸಫ್‌ಅಲಿಯಂತಹ ವರು ಕಂಡ ಸಮಾನತೆಯ ಭಾರತದ ಕನಸು ಭಗ್ನಗೊಂಡಿದೆ. ದೇಶ ವಿದೇಶಗಳ ಬಹುರಾಷ್ಟ್ರೀಯ ಕಂಪೆನಿಗಳು ಭಾರತದ ಸಂಪತ್ತಿನ ಲೂಟಿ ಮಾಡುತ್ತಿವೆ. ಈಗ ಅಧಿಕಾರದಲ್ಲಿರುವವರು ತಮ್ಮ ನಿಲುವುಗಳನ್ನು ವಿರೋಧಿಸುವವರನ್ನೆಲ್ಲ ದೇಶದ್ರೋಹಿಗಳೆಂದು ಆರೋಪ ಹೊರಿಸಿ ಜೈಲಿಗೆ ತಳ್ಳುತ್ತಿದ್ದಾರೆ. ಭಾರತೀಯರ ಮನಸ್ಸುಗಳನ್ನು ಒಡೆದು ದ್ವೇಷದ ವಿಷಬೀಜ ಬಿತ್ತಲಾಗಿದೆ. ಇಂತಹ ಸಂಕಟದ ಸನ್ನಿವೇಶದಲ್ಲಿ ಅರುಣಾ ಅಸಫ್ ಅಲಿಯಂತಹವರ ನೆನಪು ನಿರಂತರ ಸ್ಫೂರ್ತಿದಾಯಕವಾಗಿದೆ.