ಯುಎಇ ಶಾಲೆಯ ವಿದ್ಯಾರ್ಥಿನಿಯ ಪುಸ್ತಕ ಪ್ರೇಮ : ತಮಿಳುನಾಡಿನ ಶಾಲೆಗೆ ಲೈಬ್ರೆರಿ ಸೌಲಭ್ಯ ಕಲ್ಪಿಸಿದ ಬಾಲಕಿ
photo : khaleejtimes.com
ದುಬೈ, ಆ.12: ದುಬೈಯ ಕಿಂಗ್ಸ್ ಸ್ಕೂಲ್ ನಡ್ ಅಲ್ ಶೆಬಾದ ವಿದ್ಯಾರ್ಥಿನಿ, ಯುಎಇಯ ತನ್ನ ಸ್ನೇಹಿತರ ದೇಣಿಗೆ ಪಡೆದು ತಮಿಳುನಾಡಿನ ಕಾರೈಕುಡಿಯ ಗ್ರಾಮವೊಂದರ ಸಣ್ಣ ಶಾಲೆಯಲ್ಲಿ 200 ಪುಸ್ತಕಗಳುಳ್ಳ ಲೈಬ್ರೆರಿ ಆರಂಭಿಸುವ ಮೂಲಕ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಆಚರಿಸಲಿದ್ದಾಳೆ.
ಇಷಾ ರಾಜೀವ್ ನಾಯರ್ ಎಂಬ ವಿದ್ಯಾರ್ಥಿನಿ ಎಳೆಯ ಪ್ರಾಯದಲ್ಲೇ ಸಮಾಜ ಸೇವೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದು, 2020ರಲ್ಲಿ ಕೊರೋನ ಸೋಂಕಿನ ಸಮಸ್ಯೆಯಿಂದ ಶಾಲೆಗಳು ಆನ್ಲೈನ್ ಕಲಿಕಾ ವಿಧಾನವನ್ನು ಬಳಸುವ ಅನಿವಾರ್ಯತೆಗೆ ಸಿಲುಕಿದಾಗ ಬಡ ಕುಟುಂಬದ ಮಕ್ಕಳಿಗೆ ತನ್ನಿಂದಾಗುವ ನೆರವು ಒದಗಿಸಲು ನಿರ್ಧರಿಸಿದ್ದಳು. ಅದರಂತೆ ಆನ್ಲೈನ್ ಮೂಲಕ ಬಡ ಮಕ್ಕಳಿಗೆ ಪಾಠ, ಕತೆ, ಕವಿತೆ ಹೇಳತೊಡಗಿದ್ದಳು. ‘ಭಾರತ ಮೂಲದ ಸ್ಟೋರಿಟೈಮ್ ಎಂಬ ಎನ್ಜಿಒ ನೆರವಿನಿಂದ ಇಶಾ ‘ ಫ್ರಂ ಒನ್ ಚೈಲ್ಡ್ ಟು ಎನದರ್ ಚೈಲ್ಡ್- ಎವ್ರಿ ಬುಕ್ ಮ್ಯಾಟರ್ಸ್’ ಎಂಬ ಆಭಿಯಾನ ಆರಂಭಿಸಿ ಸಹಾಯದ ಅಗತ್ಯವಿರುವ ಶಾಲೆಗಳನ್ನು ಸಂಪರ್ಕಿಸಿದಳು. ಈ ಅಭಿಯಾನದ ಮೂಲಕ 4ರಿಂದ 14 ವರ್ಷದ ಮಕ್ಕಳಿಗೆ ಸೂಕ್ತವಾದ ಕತೆಪುಸ್ತಕ ಸಂಗ್ರಹವಾಗಿದೆ. ಹಲವರು ನೆರವಾಗಿದ್ದು ಇದರಲ್ಲಿ ಕಿಂಗ್ಸ್ ಶಾಲೆಯ ವಿದ್ಯಾರ್ಥಿಗಳ ಕೊಡುಗೆ ದೊಡ್ಡದಿದೆ. ಇವನ್ನು ಸ್ಯಾನಿಟೈಸ್ ಮಾಡಿ ಭಾರತಕ್ಕೆ ರವಾನಿಸಲಾಗಿದ್ದು ಕಾರೈಕುಡಿಯ ಗ್ರಾಮವೊಂದರ ಸಣ್ಣ ಶಾಲೆಯಲ್ಲಿ 200 ಪುಸ್ತಕಗಳ ಲೈಬ್ರೆರಿ ಆರಂಭವಾಗಲಿದೆ. ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಈ ಲೈಬ್ರರಿಯನ್ನು ಅಧಿಕೃತವಾಗಿ ಉದ್ಘಾಟಿಸಲಾಗುವುದು’ ಎಂದು ಇಶಾಳ ತಂದೆ ರಾಜೀವ್ ನಾಯರ್ ಹೇಳಿರುವುದಾಗಿ ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.
ಕೊರೋನ ಸಮಸ್ಯೆ ಆರಂಭವಾಗುವ ಮುನ್ನವೇ ಇಶಾ ಆನ್ಲೈನ್ ಮೂಲಕ ಸಣ್ಣ ಮಕ್ಕಳಿಗೆ ಕತೆ ಓದಿ ಹೇಳುತ್ತಿದ್ದಳು. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಭಾರತದಲ್ಲಿ ಆನ್ಲೈನ್ ತರಗತಿ ಅನಿವಾರ್ಯವಾದಾಗ, ಕಡು ಬಡತನದ ಕುಟುಂಬದ ಮಕ್ಕಳಿಗೆ ನೆರವಾಗಲು ಮುಂದಾದ ಇಶಾ, ಆನ್ಲೈನ್ ಮೂಲಕ ಇಂಗ್ಲಿಷ್ ಕಲಿಸುವುದು, ಇಂಗ್ಲಿಷ್ ಕತೆಗಳನ್ನು ಓದಿ ಅದರ ಅರ್ಥವನ್ನು ಅವರ ಆಡುಭಾಷೆ(ತಮಿಳು)ಯಲ್ಲಿ ಹೇಳುವುದನ್ನು ಮಾಡುತಿ್ತದ್ದಳು ಎಂದು ರಾಜೀವ್ ಹೇಳಿದ್ದಾರೆ.
ತನ್ನ ಅಭಿಯಾನದ ಯಶಸ್ಸಿನಿಂದ ಪ್ರೇರಣೆಗೊಂಡಿರುವ ಇಶಾ, ಮುಂದಿನ ದಿನಗಳಲ್ಲಿ ಅಸ್ಸಾಂ ಮತ್ತು ದಾರ್ಜಿಲಿಂಗ್ನ ಕುಗ್ರಾಮಗಳಲ್ಲಿರುವ ಶಾಲೆಗಳಲ್ಲಿ 500 ಪುಸ್ತಕಗಳುಳ್ಳ ಲೈಬ್ರೆರಿ ಆರಂಭಿಸುವ ಯೋಜನೆ ರೂಪಿಸಿದ್ದಾಳೆ. ಆನ್ಲೈನ್ನ ಅಧಿಕೃತ ವೇದಿಕೆಗಳ ಮೂಲಕ ಹಣ ಸಂಗ್ರಹಿಸಿ ರಿಕ್ಷಾವೊಂದನ್ನು ಖರೀದಿಸಿ ಅದರ ಮೂಲಕ ಅಲ್ಲಿನ ವಿದ್ಯಾರ್ಥಿಗಳ ಮನೆಬಾಗಿಲಿಗೆ ಪುಸ್ತಕ ತಲುಪಿಸುವ ಮತೆ್ತೂಂದು ಯೋಜನೆಯೂ ರೂಪುಗೊಂಡಿದೆ.
ನನಗೆ ಓದುವುದೆಂದರೆ ಬಹಳ ಇಷ್ಟ. ಬಡತನದ ಕಾರಣದಿಂದ ಓದುವ ಅವಕಾಶದಿಂದ ವಂಚಿತರಾದವರ ಬಗ್ಗೆ ನೆನಪಿಸಿಕೊಂಡಾಗ ಬೇಸರವಾಗುತ್ತಿತ್ತು. ಜೊತೆಗೆ, ನಮ್ಮ ಅಚ್ಚುಮೆಚ್ಚಿನ, ಯುಎಇ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ಟೂಮ್ರು ಸದಾ ಹೇಳುವ ‘ ಎಳೆಯರಿಗೆ ಓದಲು ನೆರವಾದರೆ ದೇಶದ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಓದುವ ಪ್ರೀತಿ ಎಳವೆಯಿಂದಲೇ ಆರಂಭವಾಗುತ್ತದೆ ಮತ್ತು ಮುಂದೆ ಇದು ಹವ್ಯಾಸ, ಸಂಸ್ಕತಿಯಾಗಿ ಬೆಳೆದು ಜೀವನದ ಅವಿಭಾಜ್ಯ ಅಂಶವಾಗುತ್ತದೆ’ ಎಂಬ ಮಾತಿನಿಂದ ಪ್ರೇರಣೆಗೊಂಡು ಈ ಕಾರ್ಯಕ್ಕೆ ಮುಂದಾಗಿದ್ದೇನೆ ಎಂದು ಇಷಾ ಹೇಳಿದ್ದಾಳೆ.