ಪಶ್ಚಿಮಘಟ್ಟದೊಂದಿಗೇ ನಮ್ಮ ಸರ್ವನಾಶದ ಹಾದಿಯಲ್ಲಿ...
ಮಾನ್ಯರೇ,
ಈಗಾಗಲೇ ಪಶ್ಚಿಮಘಟ್ಟದ ಒಡಲಿನಲ್ಲಿ ಕಾರ್ಯಗತಗೊಂಡಿರುವ ಹಲವಾರು ಅವೈಜ್ಞಾನಿಕ ಬೃಹತ್, ಮಧ್ಯಮ ಮತ್ತು ಸಣ್ಣ ಪ್ರಮಾಣದ ಯೋಜನೆಗಳಿಂದಾಗಿ ಅಗಾಧ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದೆ. ಯೋಜನೆಗಳ ಅನುಷ್ಠಾನಕ್ಕೆ ದೊಡ್ಡ ಪ್ರಮಾಣದ ಯಂತ್ರಗಳ ಬಳಕೆಯಿಂದ, ವಾಹನಗಳ ಭರದ ಓಡಾಟದಿಂದ ಇಡೀ ಅರಣ್ಯ ಬುಡ ಮೇಲಾಗಿದೆ. ವನ್ಯಮೃಗಗಳ ಬದುಕು ಅಸ್ತವ್ಯಸ್ತವಾಗಿದೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಬೀಳುತ್ತಿರುವ ಮಳೆಯ ತೀವ್ರತೆಗೆ ಹಿಂದೆಂದೂ ಕಂಡು ಕೇಳರಿಯದಷ್ಟು ಅಪಾರ ಪ್ರಮಾಣದಲ್ಲಿ ಗುಡ್ಡ ಕುಸಿತ, ಭೂಕುಸಿತಗಳು ಉಂಟಾಗುತ್ತಿವೆ. ಇದೆಲ್ಲ ಅವಘಡಗಳಿಂದಾಗಿ ಅರಣ್ಯದಲ್ಲಿ ಸಹಜ ಬದುಕು ಸಾಗಿಸುತ್ತಿದ್ದ ಆನೆ, ಚಿರತೆ, ಮಂಗ, ನವಿಲು ಇನ್ನಿತರ ವನ್ಯಮೃಗಗಳು ದಿಕ್ಕು ಕಾಣದೆ ಕಾಡಿನ ಪಕ್ಕದ ಹಳ್ಳಿ-ಪಟ್ಟಣಗಳಿಗೆ ನುಗ್ಗಿ ಅವ್ಯಾಹತವಾಗಿ ಪ್ರಾಣಹಾನಿ ಹಾಗೂ ಬೆಳೆಹಾನಿ ಮಾಡಿವೆ. ಮಾಡುತ್ತಿವೆ. ತಮ್ಮ ರಕ್ಷಣೆಯ ಅನಿವಾರ್ಯತೆಗಾಗಿ, ಮನುಷ್ಯರಿಂದ ಪ್ರಾಣಿಗಳ ಕೊಲೆಯೂ ಅವ್ಯಾಹತವಾಗಿ ನಡೆದೇ ಇದೆ. ಪಶ್ಚಿಮಘಟ್ಟದ ಮತ್ತು ಸುತ್ತಮುತ್ತಲ ಜನರ ಬದುಕು ಇತ್ತೀಚಿನ ವರ್ಷಗಳಲ್ಲಿ ತೀರಾ ದುಸ್ತರವಾಗಿದೆ. ಜೊತೆಗೆ ಅಲ್ಲಿ ವಾಸಿಸುತ್ತಿರುವ ಪ್ರಾಣಿಗಳದ್ದು ಕೂಡ! ಆಡಳಿತಕ್ಕೆ ಕೂಡ ಇದೊಂದು ದಿನನಿತ್ಯದ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಆದರೆ ನಮ್ಮ ಜನಪ್ರತಿನಿಧಿಗಳು ಮಾತ್ರ ಇಂದಿಗೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ! ಸಂದರ್ಭಾನುಸಾರ ಒಂದಿಷ್ಟು ಪರಿಹಾರ ಮೊತ್ತ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಜನ-ಪ್ರಾಣಿ-ಅರಣ್ಯದ ಪುನರ್ವಸತಿ ಬಗೆಗೆ, ಸಮಸ್ಯೆಗೆ ಶಾಶ್ವತ ಪರಿಹಾರದ ಬಗೆಗೆ ಯೋಚಿಸುತ್ತಲೇ ಇಲ್ಲ. ಆದರೆ ಇದಿಷ್ಟೇ ಸಾಲದೆಂಬಂತೆ ಮತ್ತೆ ಪಶ್ಚಿಮಘಟ್ಟದ ಒಡಲೊಳಗೆ 1,400 ಚಿಕ್ಕ ಚಿಕ್ಕ ಡ್ಯಾಂಗಳ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದು, ಅದಕ್ಕೆ ನೆರವು ನೀಡುವಂತೆ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಚರ್ಚಿಸಿ, ಪ್ರಸ್ತಾವ ಸಲ್ಲಿಸಲಾಗಿದೆಯೆಂದು ರಾಜ್ಯದ ಸಣ್ಣ ನೀರಾವರಿ ಸಚಿವರು ನೀಡಿರುವ ಮಾಹಿತಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಅರಣ್ಯದಲ್ಲಿ ನಡೆಯುವ ಇಂತಹ ಯೋಜನೆಗಳಿಂದ ಶಾಶ್ವತ ಹಾನಿಗೀಡಾಗುವ ಒಟ್ಟು ಪರಿಸರ, ಅರಣ್ಯ, ಜನಜೀವನವನ್ನು ಕುರಿತು ಮೊದಲು ಸರಕಾರ ವಿಜ್ಞಾನಿಗಳು, ತಜ್ಞರೊಂದಿಗೆ ಚರ್ಚೆ ಮಾಡಲಿ. ಈಗಾಗಲೇ ಪ್ರಕೃತಿಯ ಮೇಲಿನ ಅವ್ಯಾಹತ ಪ್ರಹಾರದಿಂದ ಅವನತಿಯ ಹಾದಿ ಹಿಡಿದಿರುವ ಮನುಕುಲ, ವಿವೇಚನೆ ಇಲ್ಲದೆ ಮತ್ತಷ್ಟು ಇಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾದರೆ, ವಿಜ್ಞಾನಿಗಳು ಆತಂಕಿಸುತ್ತಿರುವ ಭೂಮಿಯ ಸರ್ವನಾಶ ಮತ್ತಷ್ಟು ಹತ್ತಿರವಾಗಬಹುದೆನಿಸುತ್ತದೆ!