varthabharthi


ಮುಂಬೈ ಸ್ವಗತ

ಮುಂಬೈಯಲ್ಲಿ ಮಿಂಚಿದ ಕನ್ನಡಿಗ ನ್ಯಾಯವಾದಿಗಳು

ವಾರ್ತಾ ಭಾರತಿ : 13 Aug, 2021
ದಯಾನಂದ ಸಾಲ್ಯಾನ್

‘‘ನಾವು ಒಂದು ಕೇಸ್ ತೆಗೆದುಕೊಂಡಾಗ ಅದರದ್ದೇ ಗುಂಗಿನಲ್ಲಿರುತ್ತೇವೆ. ಹಲವು ಒತ್ತಡಗಳು ಇರುತ್ತವೆ, ನಾವು ನ್ಯಾಯಾಲಯದಿಂದ ಹೊರಬಂದ ನಂತರ ಪ್ರಶಾಂತತೆಯನ್ನು ಬಯಸುತ್ತೇವೆ’’ ಎಂದು ರೋಹಿಣಿ ಸಾಲ್ಯಾನ್ ಹೇಳುವ ಮಾತುಗಳು ಅರ್ಥಪೂರ್ಣವಾಗಿವೆ. ಮುಂಬೈ ಕನ್ನಡಿಗ ವಕೀಲರು ಒಂದರ್ಥದಲ್ಲಿ ಕತ್ತಿಯ ನಡುವೆ ಬದುಕುತ್ತಿದ್ದಾರೆ. ಆದರೂ ಖಾಸಗಿ ಬದುಕಿನಲ್ಲಿ ತಮ್ಮಿಳಗೆ ತಾವೇ ಸಂವಾದ ನಡೆಸುತ್ತಾರೆ. ಆದ್ದರಿಂದಲೇ ಇವರನ್ನು ಮಾತನಾಡಿಸುವಾಗ ಇವರ ಆಂತರ್ಯದಲ್ಲಿ ಕನ್ನಡತನದ ಅಂತಃಕರಣವನ್ನು ನಾವು ಗುರುತಿಸಬಹುದು.


ಮುಂಬೈ ಕಂಡ ಅಪ್ರತಿಮ ನ್ಯಾಯವಾದಿ, ನ್ಯಾಯಾಧೀಶರಲ್ಲಿ ಮುಂಚೂಣಿಯಲ್ಲಿರುವ ಕನ್ನಡಿಗರಲ್ಲಿ ಸುರೇಶ್ ಹೊಸಬೆಟ್ಟು ಅವರ ಹೆಸರನ್ನು ಆದರ, ಅಭಿಮಾನದಿಂದ ನೆನೆಯಲಾಗುತ್ತದೆ. ಸುರೇಶ್ ಹೊಸಬೆಟ್ಟು ಅವರು ತಮ್ಮ ತೊಂಭತ್ತೊಂದನೇ ವಯಸ್ಸಿನಲ್ಲಿ (ಜೂನ್ 11, 2020) ಇಹಲೋಕ ತ್ಯಜಿಸಿದಾಗ ಇಲ್ಲಿನ ಪ್ರತಿಷ್ಠಿತ ದೈನಿಕಗಳಲ್ಲಿ ಒಂದಾದ ‘ಹಿಂದುಸ್ತಾನ್ ಟೈಮ್ಸ್’, ‘‘ಮುಂಬೈಯ ಗೌರವಾನ್ವಿತ ನ್ಯಾಯಾಧೀಶರಲ್ಲಿ ಓರ್ವರಾದ ಜಸ್ಟಿಸ್ ಎಚ್. ಸುರೇಶ್’’ ಎಂದು ಉಲ್ಲೇಖಿಸಿರುವುದನ್ನು ನಾವು ಗಮನಿಸಬೇಕು. ಪ್ರಾರಂಭದ ಹಂತದಲ್ಲಿ ಸಿವಿಲ್ ಲಾ ದಾವೆಗಳಲ್ಲಿ ಮುಂಚೂಣಿ ಯಲ್ಲಿದ್ದುದಲ್ಲದೆ, ಮಾನವ ಹಕ್ಕುಗಳ ಹೋರಾಟದಲ್ಲಿಯೂ ಸಕ್ರಿಯರಾಗಿದ್ದವರು. 1991ರಲ್ಲಿ ಬೆಂಗಳೂರಿನಲ್ಲಿ ಕಾವೇರಿ ನದಿ ನೀರಿನ ಹೋರಾಟ ಕಾವೇರಿದ ಸಂದರ್ಭದಲ್ಲಿ, ಆ ಘಟನೆಯ ಕುರಿತ ಮಾನವ ಹಕ್ಕು ಸಮಿತಿಯ ಮುಖ್ಯ ರೂವಾರಿ ಹೊಸಬೆಟ್ಟು. ಹಲವಾರು ಲಾ ಕಾಲೇಜುಗಳಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದ ಇವರು, 1991ರಲ್ಲಿ ನಿವೃತ್ತರಾಗುವಾಗ ಮುಂಬೈಯ ಪ್ರಮುಖ ನ್ಯಾಯಾಧೀಶರಾಗಿದ್ದರು.

1992ರ ಡಿಸೆಂಬರ್ ಹಾಗೂ 1993ರ ಜನವರಿ ಮುಂಬೈಯಲ್ಲಿ ಭುಗಿಲೆದ್ದ ದಂಗೆಯ ಹಿನ್ನೆಲೆಯಲ್ಲಿ ಸರಕಾರವು ನಿಯೋಗವೊಂದನ್ನು ನೇಮಿಸಿತ್ತು. ಏಕವ್ಯಕ್ತಿ ನಿಯೋಗದ ಆ ರೂವಾರಿ ಬಿ. ಎಂ. ಶ್ರೀಕೃಷ್ಣ ಅಚ್ಚ ಕನ್ನಡಿಗರು. ಮುಂದೆ ಆಂಧ್ರ ಮತ್ತು ತೆಲಂಗಾಣದ ವಿಭಜನೆಯ ಮೊದಲ ನಿಯೋಗದ ರೂವಾರಿಯೂ ಬಿ. ಎಂ. ಶ್ರೀಕೃಷ್ಣ. ಆರನೇ ವೇತನ ಆಯೋಗದ ಮುಖ್ಯಸ್ಥರಾಗಿ ಹೀಗೆ ಒಟ್ಟು ವಿವಿಧ ಹನ್ನೊಂದು ಆಯೋಗಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿರುವ ಹಿರಿಮೆ ಜಸ್ಟಿಸ್ ಶ್ರೀಕೃಷ್ಣ ಅವರದು.್ದ ಸಂಸ್ಕೃತ ಮೊದಲ್ಗೊಂಡು ಭಾರತದ ಹಲವಾರು ಭಾಷೆಗಳ ಜೊತೆಗೆ ಇಟಾಲಿಯನ್, ಸ್ಪ್ಯಾನಿಷ್ ಮೊದಲಾದ ಸುಮಾರು ಹತ್ತಕ್ಕಿಂತಲೂ ಹೆಚ್ಚು ಭಾಷೆಗಳನ್ನು ಬಲ್ಲವರು ಇವರು. ಆರಂಭದಲ್ಲಿ ಕಾರ್ಮಿಕ ಕಾನೂನುಗಳ ದಾವೆಗಳಲ್ಲಿ ಕ್ರಿಯಾಶೀಲರಾಗಿದ್ದವರು ಶ್ರೀಕೃಷ್ಣ. ಕೋರ್ಟ್ ನಿಂದ ನಿವೃತ್ತರಾದ ನಂತರವೂ ಸುಮಾರು ಆರು ಮುಖ್ಯ ನಿಯೋಗಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಯಾವುದೇ ಸರಕಾರ ಬಂದರೂ ಶ್ರೀಕೃಷ್ಣ ಅವರ ಸಹಾಯ ಸಲಹೆಗಳನ್ನು ಪಡೆಯುತ್ತ ಬಂದಿರುವುದು ಕಾನೂನು ಕ್ಷೇತ್ರದಲ್ಲಿ ಅವರು ಏರಿದ ಎತ್ತರವನ್ನು ಬಿತ್ತರಿಸುತ್ತದೆ. ಮುಂಬೈ ಮಾತ್ರವಲ್ಲ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗೆ ಪಾತ್ರರಾದ ಜಸ್ಟಿಸ್ ಬಿ. ಎಂ. ಶ್ರೀಕೃಷ್ಣ ಕನ್ನಡಿಗರೆನ್ನುವುದು ಹಲವರಿಗೆ ಗೊತ್ತಿಲ್ಲ. ಇಲ್ಲಿನ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಇವರು ಪ್ರತಿಷ್ಠಿತ ಎನ್‌ಕೆಇಎಸ್ ಶಾಲೆಯ ವಿದ್ಯಾರ್ಥಿ ಮಾತ್ರವಲ್ಲ, ಮುಂದೆ ಆ ಸಂಸ್ಥೆಯ ಪದಾಧಿಕಾರಿಯಾಗಿ ಹಲವು ರೀತಿಯಲ್ಲಿ ಆ ವಿದ್ಯಾಸಂಸ್ಥೆ ಪ್ರಗತಿ ಕಾಣಲು ಕಾರಣರಾಗಿದ್ದಾರೆ.

ಎ. ಆರ್. ಕುದ್ರೋಳಿ ಎಂದೇ ಖ್ಯಾತರಾದ ಅಬ್ದುಲ್ ರಶೀದ್ ಕುದ್ರೋಳಿ ಎಲ್ಲರ ಗೌರವಕ್ಕೆ ಪಾತ್ರರಾದ ಉನ್ನತ ವ್ಯಕ್ತಿತ್ವ ಹೊಂದಿದವರು. ಮುಂಬೈ ಕನ್ನಡಿಗರ ಆಟದ ಮೈದಾನ ಈಗಿರುವ ವಾಂಖೆಡೆ ಸ್ಟೇಡಿಯಂ ಜಾಗದಲ್ಲಿದ್ದು, ಅಲ್ಲಿ ಮೈದಾನವೊಂದು ತಲೆ ಎತ್ತಲಿದೆ ಎಂದಾಗ ಅದರ ವಿರುದ್ಧ ದನಿ ಎತ್ತಿ ಈಗಿರುವ ಕರ್ನಾಟಕ ಅಸೋಸಿಯೇಶನ್ ಮೈದಾನ ದೊರೆಯುವಂತೆ ಮಾಡಿದವರು ಎ. ಆರ್. ಕುದ್ರೋಳಿ. ಬಾರ್ ಕೌನ್ಸಿಲ್ ಅಧ್ಯಕ್ಷರಾಗಿದ್ದು ನ್ಯಾಯವಾದಿಗಳ ಯೋಗಕ್ಷೇಮಕ್ಕೆ ಕಟಿಬದ್ಧರಾಗಿ ದುಡಿದವರು ಕುದ್ರೋಳಿ. ಅವರ ನಿಧನಾನಂತರವೂ ಇಲ್ಲಿನ ಕನ್ನಡ ಸಂಘಟನೆಗಳು ಎಂದೂ ಅವರನ್ನು ಮರೆತಿಲ್ಲ. ಕರ್ನಾಟಕ ಸ್ಪೋರ್ಟಿಂಗ್ ಅಸೋಸಿಯೇಶನ್ ಅವರ ನೆನಪಲ್ಲಿ ‘ಎ. ಆರ್. ಕುದ್ರೋಳಿ ಸ್ಮಾರಕ ಫುಟ್ಬಾಲ್ ಕಪ್’ಗಾಗಿ ಫುಟ್ಬಾಲ್ ಟೂರ್ನಮೆಂಟನ್ನು ಹಮ್ಮಿಕೊಂಡು ಬಂದಿದೆ.

ಜಸ್ಟಿಸ್ ಜಹಗೀರ್‌ದಾರ್ ಕೂಡ ಓರ್ವ ಪ್ರತಿಷ್ಠಿತ ನ್ಯಾಯಾಧೀಶರಾಗಿ ಗುರುತಿಸಿಕೊಂಡವರು. ಇವರು ಕರ್ನಾಟಕ ಸಂಘಕ್ಕೆ ಹೊಸ ದಿಕ್ಕು ದೆಸೆ ತೋರಿಸಿದ್ದ ವರದರಾಜ ಆದ್ಯರ ತಮ್ಮ. ಹಲವು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ಎಸ್.ಟಿ ಮರವೂರು ಅವರೂ ಈ ರಂಗದಲ್ಲಿ ತಮ್ಮದೇ ಆದ ಛಾಪನ್ನು ಒತ್ತಿದ್ದಾರೆ. ನ್ಯಾಯವಾದಿ ಎಸ್.ಟಿ. ಮರವೂರು ಪ್ರತಿಷ್ಠಿತ ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷರಾಗಿಯೂ ಸಂಘದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದವರು. ಸದ್ಯ ಇವರ ಮಗ ರಾಜೇಶ್ ಮರವೂರು ತಂದೆಯ ಸ್ಥಾನವನ್ನು ತುಂಬುವಲ್ಲಿ ಪ್ರಯತ್ನಿಸುತ್ತಿದ್ದಾರೆ.
1968ರಲ್ಲಿ ಲಘು ನ್ಯಾಯಾಲಯದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ಬಿ. ಮೊಯ್ದಿನ್ ಮುನ್ಕೂರು ತಮ್ಮ ವೃತ್ತಿ ಬದುಕಿನಲ್ಲಿ ಸದಾ ಗೌರವಕ್ಕೆ ಪಾತ್ರರಾದವರು. ಪ್ರೊಗ್ರೆಸಿವ್ ಕನ್ನಡ ರಾತ್ರಿ ಶಾಲೆಯ ವಿದ್ಯಾರ್ಥಿಯಾಗಿದ್ದ ಮೊಯ್ದಿನ್ ಮುನ್ಕೂರು ಅವರ ಹೆಸರಿನಲ್ಲಿ ಎರಡು ತೀರ್ಪುಗಳು ಕಾನೂನುಗಳಾಗಿರುವುದು ಇವರ ವೃತ್ತಿಪರತೆಯನ್ನು ಎತ್ತಿ ತೋರಿಸುತ್ತದೆ. ಒಂದೊಮ್ಮೆ ಚೆಂಬೂರು ಕರ್ನಾಟಕ ಸಂಘವು ಅತಂತ್ರ ಸ್ಥಿತಿಯಲ್ಲಿದ್ದಾಗ ಸಂಘದ ಬೆನ್ನೆಲುಬಾಗಿ ನಿಂತು ಸಂಘಕ್ಕೆ ಗೆಲುವನ್ನು ದೊರಕಿಸಿಕೊಟ್ಟವರು ಮೊಯ್ದಿನ್. ಈ ಸಂಘದಲ್ಲಿ ದೀರ್ಘಕಾಲ ಹಲವು ಹುದ್ದೆಗಳಲ್ಲಿದ್ದು ಸಂಘದ ಏಳಿಗೆಗಾಗಿ ದುಡಿದಿದ್ದಾರೆ. ಹಲವರು ಕನ್ನಡ, ತುಳು ಸಂಘಗಳೊಂದಿಗೆ ಕ್ರಿಯಾಶೀಲರಾಗಿರುವ ಬಿ. ಮೊಯ್ದಿನ್ ಮುನ್ಕೂರು ತುಳು ಕನ್ನಡ ಉರ್ದು ಭಾಷೆಗಳಲ್ಲಿ ನಿರಂತರವಾಗಿ ಕವಿತೆಗಳನ್ನು ರಚಿಸುತ್ತಾ ಬಂದಿದ್ದಾರೆ.

ಸುಮಾರು 95 ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿರುವ ಕರ್ನಾಟಕ ಆರ್ಯ ಸಮಾಜದ ಇಂದಿನ ಉಪಾಧ್ಯಕ್ಷರಾಗಿರುವ ಎಚ್. ಸುಧಾಕರ ಪೂಜಾರಿ, ಅರಾಟೆ ಮೂಲತಃ ಕುಂದಾಪುರದವರು. ಬ್ರಿಟಿಷ್ ಇನ್ವೆಸ್ಟ್‌ಮೆಂಟ್ ಕಂಪೆನಿ ಹಾಗೂ ಅಮಿತಾಬ್ ಬಚ್ಚನ್ ಮತ್ತು ಆತನ ಸಹೋದರ ಅಜಿತಾಬ್ ಬಚ್ಚನ್ ನಡುವೆ ಉಂಟಾದ ವಿವಾದವು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಅರಾಟೆ ಎಚ್. ಸುಧಾಕರ ಪೂಜಾರಿ ಅವರು ತಾನು ಕೆಲಸ ಮಾಡುತ್ತಿದ್ದ ಲಾ ಕಂಪೆನಿಯಿಂದ ಬ್ರಿಟಿಷ್ ಇನ್ವೆಸ್ಟ್‌ಮೆಂಟ್ ಕಂಪೆನಿ ಪರವಾಗಿ ವಾದಿಸಲು ಕಳುಹಿಸಿಕೊಟ್ಟಾಗ ಎಲ್ಲರೂ ಅಮಿತಾಬ್ ಪರ ಗೆಲುವು ಬರಬಹುದು ಎಂದು ನಂಬಿದ್ದರು. ಆದರೆ ಸುಧಾಕರ್ ಎಲ್ಲರ ಊಹೆ ಯನ್ನೂ ಬುಡಮೇಲು ಮಾಡಿ ಬ್ರಿಟಿಷ್ ಇನ್ವೆಸ್ಟ್ ಮೆಂಟ್ ಕಂಪೆನಿಗೆ ಚಾರಿತ್ರಿಕ ಗೆಲುವನ್ನು ತಂದುಕೊಟ್ಟರು. ಹೀಗೆ ಎಎನ್ ಝಡ್ ಗ್ರಿನ್ಡ್‌ಲೇಸ್ ಬ್ಯಾಂಕ್‌ಗೆ ಸುಮಾರು ಐನೂರು ಕೋಟಿ ರೂ. ಮೊತ್ತದ ನ್ಯಾಷನಲ್ ಹೌಸಿಂಗ್ ಬೋರ್ಡ್ ವಿರುದ್ಧದ ದಾವೆಯನ್ನು ಗೆಲ್ಲಿಸಿಕೊಟ್ಟ ಗೌರವಕ್ಕೆ ಪಾತ್ರರಾದವರು ಅರಾಟೆ. ಹಲವು ಕಂಪೆನಿಗಳಲ್ಲಿ ತೊಡಗಿಸಿಕೊಂಡಿದ್ದ ಇವರು ಈಗ ತಮ್ಮದೇ ಆದ ಸ್ವಂತ ಲಾ ಕಂಪೆನಿಗಳನ್ನು ಮುನ್ನಡೆಸುತ್ತಿದ್ದಾರೆ. ಪ್ರತಿಷ್ಠಿತ ವಿದ್ಯಾ ಸಂಸ್ಥೆ ಹೊಂದಿರುವ ಚೆಂಬೂರು ಕರ್ನಾಟಕ ಸಂಘದಲ್ಲಿ ಕಳೆದ ಸುಮಾರು 6 ವರ್ಷಗಳಿಂದ ಅಧ್ಯಕ್ಷರಾಗಿ ಸಂಘವನ್ನು ಮಾತ್ರವಲ್ಲದೆ ಅದರ ಆಶ್ರಯದಲ್ಲಿರುವ ಶಾಲೆ ಹಾಗೂ ಮಹಾವಿದ್ಯಾನಿಲಯದ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ವಿದ್ಯಾನಿಲಯದಲ್ಲಿ ಬೆಳಗ್ಗಿನ ಲಾ ಕಾಲೇಜು ಆರಂಭಿಸಿದ್ದು (2017) ಹಾಗೂ ಬಾರ್ ಕೌನ್ಸಿಲ್‌ನಿಂದ ಮಾನ್ಯತೆ ಹೊಂದಿರುವ ಸೈಬರ್ ಕ್ರೈಮ್ ಮತ್ತು ಮಾನವಹಕ್ಕು ವಿಷಯದಲ್ಲಿ ಸ್ನಾತಕೋತ್ತರ ತರಗತಿ ಪ್ರಾರಂಭಿಸಿದ್ದು (2021) ಕೇವಲ ಕನ್ನಡಿಗರು ಮಾತ್ರವಲ್ಲ ಇಡೀ ಮುಂಬೈಯೇ ಹೆಮ್ಮೆ ಪಡಬೇಕಾದ ಸಂಗತಿ. ಓರ್ವ ನ್ಯಾಯವಾದಿಯಾಗಿ ಅವರು ಗೈದ ಮಹಾನ್ ಸಾಧನೆ ಅನ್ನಬಹುದು. ಸಾಹಿತ್ಯ, ಸಂಸ್ಕೃತಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದ ಇವರು, ತಮ್ಮ ಅಜ್ಜಿ ಅರಾಟೆ ನಾಗಮ್ಮ ಸೇಸಪ್ಪಪೂಜಾರಿ ಅವರ ನೆನಪಿನಲ್ಲಿ ಮುಂಬೈಯಲ್ಲಿ ಕನ್ನಡದ ಕೈಂಕರ್ಯ ಮಾಡಿದ ತುಳು ಮಹನೀಯರಿಗೆ ರೂ. 30,000 ಮೊತ್ತದ ಪ್ರಶಸ್ತಿಯನ್ನು ನೀಡುತ್ತಿದ್ದಾರೆ.

ಮುಂಬೈಯ ನ್ಯಾಯಾಲಯಗಳಲ್ಲಿ ಅಪರಾಧ ಪ್ರಕರಣಗಳ ಅಪರಾಧಿಗಳಿಗೆ ಶಿಕ್ಷೆ ಆಗುವಲ್ಲಿ ನಮ್ಮ ಕನ್ನಡಿಗರ ಪಾಲು ಮಹತ್ವದ್ದು. ಟಾಡಾ, ಪೋಟಾ, ಎಂ.ಸಿ.ಒ. ಮೊದಲಾದ ಆ್ಯಕ್ಟ್‌ಗಳಲ್ಲಿ ಪರಿಣತಿ ಹೊಂದಿರುವವರು ರೋಹಿಣಿ ಸಾಲ್ಯಾನ್. 1982ರಿಂದ 2007ರವರೆಗೆ ಸರಕಾರ ನಿಯೋಜಿತ ನ್ಯಾಯವಾದಿ (ಪಬ್ಲಿಕ್ ಪ್ರಾಸಿಕ್ಯೂಟರ್)ಯಾಗಿ ಕಾರ್ಯನಿರ್ವಹಿಸಿದ್ದ ಇವರು, ಅಂದಿನ ದಾವೆಗಳಲ್ಲಿ ಇನ್ನೂ ಬಾಕಿ ಉಳಿದಿರುವ ಕೆಲವೊಂದು ದಾವೆಗಳಲ್ಲಿ ಇಂದೂ ತೊಡಗಿಕೊಂಡಿದ್ದಾರೆ. ಎಂ.ಸಿ.ಒ. ಕಾನೂನಿನಿಂದಾಗಿ ಇಡೀ ರಾಜ್ಯದ ಅಪರಾಧ ಜಗತ್ತಿನಲ್ಲಿ ಸುಧಾರಣೆಯಾದದ್ದನ್ನು ಗುರುತಿಸುವ ಸಾಲ್ಯಾನ್, ಘಾಟ್ಕೋಪರ್ ಸ್ಫೋಟ ಪ್ರಕರಣ ಮೊದಲಾದ ಬಹುಮುಖ್ಯ ಹಾಗೂ ಅಷ್ಟೇ ಅಪಾಯಕಾರಿಯಾದ ದಾವೆಗಳಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಕ್ಸಲೈಟ್ ಮೊದಲಾದ ಇನ್ನೂ ಕೆಲವೊಂದು ದಾವೆಗಳು ಬಾಕಿ ಇವೆ. ಮೂಲತಃ ಮಂಗಳೂರಿನವರಾದ ರೋಹಿಣಿ ಸಾಲ್ಯಾನ್ ಬಿಲ್ಲವರ ಅಸೋಸಿಯೇಶನ್ ಮೊದಲಾದ ಸಂಘ, ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದವರು. ಸದ್ಯ ಭಾರತ್ ಕೋ ಆಪರೇಟಿವ್ ಬ್ಯಾಂಕಿನ ಜೊತೆ ಕಾರ್ಯಾಧ್ಯಕ್ಷರಾಗಿದ್ದಾರೆ.

ಕ್ರೈಂ ಪ್ರಕರಣಗಳ ದಾವೆಗಳಲ್ಲಿ ವಿಶೇಷ ಅನುಭವ ಹೊಂದಿರುವ ಸರಕಾರ ನಿಯೋಜಿತ ಪ್ರಕಾಶ್ ಎಲ್. ಶೆಟ್ಟಿ ಕಳೆದ ಸುಮಾರು ನಲವತ್ತೆರಡು ವರ್ಷಗಳಿಂದ ನ್ಯಾಯವಾದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳೆಯದಾದ ‘ಜೈನ್ ಪೀಠ’ದ ಪ್ರಕರಣ ನಿರ್ವಹಿಸಿದ್ದಾರೆ. ಮುಂಬೈಯಲ್ಲಿ ಪಾಕಿಸ್ತಾನಕ್ಕೆ ದಾಖಲೆಗಳ ರವಾನೆ ಪ್ರಕರಣದಲ್ಲಿ ಆರೋಪಿಗೆ 7 ವರ್ಷಗಳ ಕಠಿಣ ಸಜೆ ದೊರಕಿಸಿದ ಪ್ರಕರಣ ಭಾರತದಲ್ಲೇ ಎರಡನೆಯದ್ದು. ಇದರ ಮುಖ್ಯ ರೂವಾರಿ ಪ್ರಕಾಶ್ ಶೆಟ್ಟಿ. ಮೋಜಾವಾಲಾ ಪ್ರಕರಣ, ಕಮಲಾ ಮಿಲ್ ಪ್ರಕರಣ, 2006ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣ (ಇನ್ನೂ ನಡೆಯುತ್ತಿದೆ), ನಾಂದೇಡ್ ಕೇಸ್, ಲಶ್ಕರೆ ತಯ್ಯಿಬಾ ಪ್ರಕರಣಗಳು; ತೆಲಂಗಾಣದ ಕಾರ್ಪೊರೇಟರ್ ಹತ್ಯೆ ಪ್ರಕರಣದಲ್ಲಿ ಐದು ಮಂದಿಯಲ್ಲಿ ಮೂರು ಮಂದಿಗೆ ತಲಾ ಹತ್ತು ವರ್ಷಗಳ ಶಿಕ್ಷೆ ಕೊಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದವರು ಪ್ರಕಾಶ್ ಶೆಟ್ಟಿ. 2011ರ ಗುರುಪೂರ್ಣಿಮೆಯ ದಿನದಂದು ನಡೆದ ರೈಲ್ವೇ ಸ್ಫೋಟ ಕೇಸ್ ಈಗಲೂ ನಡೆಯುತ್ತಿದೆ. ಭೀಮಾ ಕೋರೆಗಾಂವ್‌ನ ಎಲ್ಗಾರ್ ಪರಿಷತ್ ಪ್ರಕರಣ ಬಹಳಷ್ಟು ಸುದ್ದಿಯಲ್ಲಿದ್ದು ಆ ಪ್ರಕರಣವನ್ನು ನಿರ್ವಹಿಸುತ್ತಿರುವವರು ಪ್ರಕಾಶ್ ಶೆಟ್ಟಿ. ಟಾಡಾ, ಮೋಕ ಅಡಿಯಲ್ಲಿದ್ದ ಹಲವಾರು ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಗರಿಮೆ ಇವರದ್ದು. ಪ್ರತಿಷ್ಠಿತ ಬಾಂಬೆ ಬಂಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿ ಗುರುದೇವಾ ಸೇವಾ ಬಳಗದ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಇವರು, ಇಲ್ಲಿನ ಹಲವಾರು ಸಂಘ, ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವಾರು ಬಿಡಿ ಲೇಖನಗಳನ್ನು ಬರೆಯುತ್ತಾ ಬಂದಿರುವ ಪ್ರಕಾಶ್ ಓರ್ವ ಸಾಹಿತ್ಯಪ್ರೇಮಿ. ಈಗಾಗಲೇ ಇವರ ‘ಟ್ವಿಟರ್ ಸಾಹಿತ್ಯ’ ಇಲ್ಲಿನ ಸಾಹಿತ್ಯಪ್ರಿಯರಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದು ಅಚ್ಚಿನ ಮನೆಯಿಂದ ಹೊರಬರಲು ಕಾಯುತ್ತಿದೆ.

‘‘ಆತ್ಮ ನಿಮ್ಮ ಕನ್ನಡಿ. ದೇವರು ನಮ್ಮಳಗೆ ಇದ್ದಾನೆ’’ ಎಂದು ದಾರ್ಶನಿಕನ ಮಾತುಗಳನ್ನಾಡುವ ನ್ಯಾಯವಾದಿ ಮಹೇಶ್ ಕೋಟ್ಯಾನ್ ಕಳೆದ ಸುಮಾರು 25-30 ವರ್ಷಗಳಿಂದ ಕ್ರಿಮಿನಲ್ ಲಾಯರ್ ಆಗಿದ್ದಾರೆ. ಪ್ರಾರಂಭದಲ್ಲಿ ಬಹಳಷ್ಟು ವರ್ಷ ಹತ್ಯೆ ಪ್ರಕರಣಗಳ ದಾವೆಗಳನ್ನು ನಿರ್ವಹಿಸುತ್ತಿದ್ದ ಮಹೇಶ್ ಅವರಿಗೆ ಒಂದು ಹತ್ಯೆ ಪ್ರಕರಣವು ಅವರ ಒಟ್ಟು ಜೀವನವನ್ನು, ಯೋಚನಾ ಲಹರಿಯನ್ನೂ ಬದಲಿಸಿತ್ತು. ಅಂದಿನಿಂದ ಯಾವುದೇ ಹತ್ಯೆ ಪ್ರಕರಣ ದಾವೆಗಳನ್ನು ಅವರು ತೆಗೆದುಕೊಳ್ಳುವುದಿಲ್ಲ. ಅವರು ದಿಲ್ಲಿ, ಅಲಹಾಬಾದ್, ಬೆಂಗಳೂರು, ಒಡಿಶಾ, ರಾಜಸ್ಥಾನ, ಹೈದರಾಬಾದ್ ಹೀಗೆ ದೇಶಾದ್ಯಂತವಲ್ಲದೆ ಇಂಡೋನೇಶ್ಯ, ಜಕಾರ್ತಾ, ನೆದರ್‌ಲ್ಯಾಂಡ್, ಜರ್ಮನಿ, ಲಂಡನ್ ಮೊದಲಾದ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನ್ಯಾಯವಾದಿ ಎಂಬುವುದು ನಮ್ಮ ಹೆಮ್ಮೆ. ಮೂಲತಃ ಅವಿಭಜಿತ ದಕ್ಷಿಣ ಕನ್ನಡದ ಉದ್ಯಾವರದವರಾದ ಮಹೇಶ್ ಇತ್ತೀಚೆಗೆ ಆರ್ಥಿಕ ಅವ್ಯವಹಾರ, ಕಾರ್ಪೊರೇಶನ್ ದಾವೆಗಳನ್ನು ನಿರ್ವಹಿಸುತ್ತಿದ್ದಾರೆ. ‘‘ಎಲ್ಲ ಕಾನೂನುಗಳಿಗಿಂತ ಮೇಲ್ಮಟ್ಟದಲ್ಲಿ ಇನ್ನೊಂದು ಏನೋ ಇದೆ. ಅದೇ ಲಾ ಆಫ್ ಕರ್ಮ. ಆದ್ದರಿಂದ ನಾವೆಂದೂ ನಮ್ಮ ಆತ್ಮಕ್ಕೆ ವಂಚಿಸಲಾರೆವು’’ ಎನ್ನುವ ಮಹೇಶ್ ಅಪರೂಪದಲ್ಲಿ ಅಪರೂಪದ ವ್ಯಕ್ತಿ. ದೇಶ ವಿದೇಶಗಳಲ್ಲಿ ಶಾಖೆಗಳನ್ನು ಹೊಂದಿರುವ ಅಂತರ್ ರಾಷ್ಟ್ರಮಟ್ಟದ ಸಂಸ್ಥೆ ‘ಎಂ. ವಿ. ಕಿಣಿ ಆ್ಯಂಡ್ ಕಂಪೆನಿ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದವರು ಎಂ. ವಿ. ಕಿಣಿಯವರು. ಬೆಸ್ಟ್, ಏರ್ ಇಂಡಿಯಾ, ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ, ಎಚ್‌ಡಿಎಫ್, ಎಲ್ ಆ್ಯಂಡ್ ಟಿ, ಎಸ್‌ಬಿಐ, ಕ್ಯಾಪಿಟಲ್ ಮುಚ್ಯುವಲ್ ಮೊದಲಾದ ಪ್ರತಿಷ್ಠಿತ ಕಂಪೆನಿಗಳ ಪರವಾಗಿ ವಾದಿಸುತ್ತಿರುವ ಈ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಏಳನೇ ಸ್ಥಾನವನ್ನು ಅಲಂಕರಿಸಿರುವುದು ಎಂ. ವಿ. ಕಿಣಿ ಅವರ ಕಾರ್ಯವೈಖರಿಗೆ ಸಾಕ್ಷಿ.

ಸುನಂದಾ ಅಮೀನ್ ಬೇಂಗ್ರೆಯವರು ಮುಂಬೈಯ ಮೊದಲ ಮೊಗವೀರ ಮಹಿಳಾ ನ್ಯಾಯವಾದಿ ಎಂದು ಗುರುತಿಸಲ್ಪಟ್ಟರೆ, ಗೋಪಾಲ್ ಎಸ್. ಕರ್ಕೇರ ಮುಂಬೈಯ ಮೊಗವೀರರಲ್ಲಿ ಮೊದಲ ಪುರುಷ ನ್ಯಾಯವಾದಿಯಾಗಿ ಗುರುತಿಸಲ್ಪಡುತ್ತಾರೆ. ಎಲ್ಲ ರಂಗಗಳಂತೆ ನ್ಯಾಯ ವಿಭಾಗದಲ್ಲೂ ಮೊಗವೀರರಿಗೆ ಇಲ್ಲಿ ಉನ್ನತ ಸ್ಥಾನ ಇದೆ. ಮಹಾರಾಷ್ಟ್ರ ಸರಕಾರದ ವಕೀಲರಾಗಿ 1965ರಿಂದ ವಕೀಲಿ ವೃತ್ತಿ ಮಾಡುತ್ತಿದ್ದ ಜಿ. ಕೆ. ಕರ್ಕೇರ (ಗಂಗಾಧರ ಕರ್ಕೇರ) ಮೊಗವೀರ ರಾತ್ರಿ ಶಾಲೆಯ ಹಳೆವಿದ್ಯಾರ್ಥಿ. ನ್ಯಾಯಾಲಯ ಹಾಗೂ ವಕೀಲರ ವಲಯದಲ್ಲಿ ಗೌರವಕ್ಕೆ ಪಾತ್ರರಾಗಿದ್ದ ಇವರು ಮೊಗವೀರ ಕೋ ಆಪರೇಟಿವ್ ಬ್ಯಾಂಕಿನ ಕಾರ್ಯಾಧ್ಯಕ್ಷರಾಗಿ ಜನಪರ ಸೇವೆಯಲ್ಲಿ ಬಹಳಷ್ಟು ದುಡಿದಿದ್ದಾರೆ. ಕನ್ನಡ ಭವನ ಸೊಸೈಟಿಯ ಉಪಾಧ್ಯಕ್ಷರಾಗಿ ಪ್ರತಿಷ್ಠಿತ ಬಿಪಿನ್ ಮೆಮೋರಿಯಲ್ ಫುಟ್ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿಯೂ ಮಹತ್ವದ ದೇಣಿಗೆ ನೀಡಿದ್ದಾರೆ. ಹಲವಾರು ಕಾನೂನು ವಿದ್ಯಾನಿಲಯಗಳಲ್ಲಿ ಅಧ್ಯಾಪನ ಮಾಡಿ ಕಾನೂನು ವಿದ್ಯಾರ್ಥಿಗಳ ನೆಚ್ಚಿನ ಗುರು ಎನಿಸಿಕೊಂಡಿದ್ದವರು.

ನ್ಯಾಯವಾದಿಗಳಾಗಿ ಗುರುತಿಸಲ್ಪಟ್ಟಿದ್ದ ಪಿ.ಎಸ್. ಕರ್ಕೇರ, ಎಸ್.ಆರ್. ಪಣಂಬೂರು ಹಲವಾರು ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದರು. 1971ರಿಂದ ಹೈಕೋರ್ಟ್‌ನ ನ್ಯಾಯವಾದಿಯಾಗಿದ್ದ ಎನ್.ಎಂ. ಅಮೀನ್ ಎತ್ತರದ ವ್ಯಕ್ತಿತ್ವ ಹೊಂದಿದ್ದವರು. ಇಲ್ಲಿ ತುಳು ಸಂಘ ಸ್ಥಾಪಿಸಿ ವಿಶ್ವವಿದ್ಯಾನಿಲಯದಲ್ಲಿ ತುಳು ಪೀಠ ಮಾಡಲೆಂದು ಬಹಳಷ್ಟು ಶ್ರಮಿಸಿದ್ದಾರೆ. ಕಾನೂನಿಗೆ ಸಂಬಂಧಪಟ್ಟ ಸುಮಾರು 8 ಮಹತ್ವದ ಕೃತಿಗಳನ್ನು ನೀಡಿರುವ ಸಂಜೀವ ಕಾಂಚನ್ ಮುಂಬೈಯಲ್ಲಿ ಉನ್ನತ ಸ್ಥಾನ ಹೊಂದಿದ್ದವರು. ಸಿದ್ಧಾರ್ಥ ಕಾಲೇಜು, ಕೆ. ಸಿ. ಕಾಲೇಜು, ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪನ ಮಾಡುತ್ತಿದ್ದ ಸಂಜೀವ ಕಾಂಚನ್ ಓರ್ವ ಆದರ್ಶ ಸಮಾಜ ಸೇವಕರೂ ಹೌದು. ‘ಸಿಟಿಜನ್ ಆರ್ಗನೈಜೇಶನ್ ಫಾರ್ ಪಬ್ಲಿಕ್ ಒಪಿನಿಯನ್’ ಎಂಬ ಮಹತ್ವದ ಸಂಘಟನೆ ಹುಟ್ಟುಹಾಕಿದ್ದ ಇವರು, ಮೊಗವೀರ ಚೇಂಬರ್ ಆಫ್ ಕಾಮರ್ಸ್ ಇದರ ಸಂಯೋಜಕರಾಗಿದ್ದರು. ಮಹಾರಾಷ್ಟ್ರ ಸರಕಾರದಿಂದ ಪ್ರಥಮ ಮೊಗವೀರ ಮಹಿಳಾ ನೋಟರಿಯಾಗಿ ನಿಯುಕ್ತಿಗೊಂಡವರು ಕಸ್ತೂರಿ ಗಂಗಾಧರ ಕರ್ಕೇರ ಮುಂಬೈಯ ಫ್ಯಾಮಿಲಿ ಕೋರ್ಟ್ ಬಾಂದ್ರದಲ್ಲಿ ಹಿರಿಯ ನ್ಯಾಯವಾದಿ.
ಮೂಲತ ವಿಜಯಪುರದವರಾದ ಸಿದ್ದರಾಮೇಶ್ವರ ಹಟ್ಕರ್‌ಕರ್ ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಕಾನೂನು ಕ್ಷೇತ್ರದಲ್ಲಿ ಕಾರ್ಯ ನಿರತರಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಸಿವಿಲ್ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಜನರಲ್ ಮ್ಯಾನೇಜರ್ ಆಗಿ ಅನುಭವ ಹೊಂದಿದ್ದ ಹಟ್ಕರ್‌ಕರ್, ಓಂಕಾರ್ ಡೆವಲಪರ್ಸ್ ವಿರುದ್ಧದ ಮಹತ್ವದ ದಾವೆಯಲ್ಲಿ ತೊಡಗಿದ್ದಾರೆ. ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಹಟ್ಕರ್‌ಕರ್, ಇತ್ತೀಚೆಗೆ ಮುಂಬೈ ಕನ್ನಡಿಗರಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದಾರೆ.

ಸಿವಿಲ್ ಹಾಗೂ ಕಾರ್ಪೊರೇಟ್‌ನಲ್ಲಿ ವಿಶೇಷ ಪರಿಣತಿ ಹೊಂದಿರುವ ಜೆ.ಸಿ. ಪೂಜಾರಿ, ಬಿ.ಎಂ. ಕೋಟ್ಯಾನ್, ಎಂ.ಎಂ ವರ್ಮಾ, ರವಿ ಕೋಟ್ಯಾನ್, ಅರುಣಾ ಪೈ, ಬಾರ್ ಕೌನ್ಸಿಲ್ ಅಧ್ಯಕ್ಷರಾಗಿದ್ದ ಆರ್.ಜಿ. ಶೆಟ್ಟಿ, ಪ್ರಭಾಕರ ದೇವಾಡಿಗ, ಆರ್.ವಿ. ಶೆಟ್ಟಿ, ಶಶಿಧರ್ ಉಳಿಯಾರಗೋಳಿ-ಕಾಪು, ಎಂ.ಡಿ. ರಾವ್, ಶಂಕರ್ ಎ. ಶ್ರೀಯಾನ್, ಬಿ.ಜಿ. ಶೆಟ್ಟಿ, ಎಂ. ಸುಂದರ ಪೂಜಾರಿ, ಆರ್.ಎಂ. ಭಂಡಾರಿ, ರಾಘವ ಎಂ., ಮಹಿಳಾ ಯಕ್ಷಗಾನ ರಂಗದಲ್ಲಿ ಮುಂಬೈಯಲ್ಲಿ ಕ್ರಾಂತಿ ಮಾಡಿದ ಗೀತಾ ಭಟ್, ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಕವಿ ಆರ್. ಎಸ್. ದೇವಾಡಿಗ (ಸುತ), ಸಂಘಟಕ ಸುಧಾಕರ ಅಂಚನ್ ಮೊದಲಾದ ಕನ್ನಡಿಗರ ಸಾಧನೆಯನ್ನು ನಾವು ನೆನೆಯಲೇಬೇಕು.
ಹಲವಾರು ಯಕ್ಷಗಾನ ಸಮ್ಮೇಳನಗಳು, ತುಳುಪರ್ಬಗಳು, ಸಾಹಿತ್ಯ ಸಮಾವೇಶಗಳ ಹಿಂದಿನ ಶಕ್ತಿ ಎಚ್.ಬಿ.ಎಲ್. ರಾವ್, ತಾವು ವೃತ್ತಿಯಿಂದ ನಿವೃತ್ತರಾದ ನಂತರ ಕಾನೂನು ಕ್ಷೇತ್ರಕ್ಕೆ ಬಂದಿರುವ ವಸಂತ ಕಲ್ಕೋಟಿ, ಡಾ. ವಿಶ್ವನಾಥ್ ಕಾರ್ನಾಡ್, ಜಿಎಸ್‌ಟಿ/ಸಿಎಸ್‌ಟಿಯಲ್ಲಿ ವಿಶೇಷ ಪರಿಣತಿ ಹೊಂದಿರುವ ರಾಜಾ ವಿ. ಸಾಲ್ಯಾನ್ ಇವರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ದುಡಿದವರು.

ಇಲ್ಲಿನ ಕಾರ್ಮಿಕ ವರ್ಗದವರ ಪರವಾಗಿ ಆಪದ್ಬಾಂಧವನಾಗಿ ದುಡಿದವರ ದೊಡ್ಡ ಪಟ್ಟಿಯೇ ಇದೆ. ನ್ಯಾಯವಾದಿಗಳಾದ ಅತಿಕಾರಬೆಟ್ಟು ಮಹಾಬಲ ಶೆಟ್ಟಿ, ಪದ್ಮನಾಭ ಶೆಟ್ಟಿ, ಶ್ರೀಧರ್ ಪೂಜಾರಿ ಮೊದಲಾದವರು ಅವರಲ್ಲಿ ಮುಖ್ಯರು.

ಹರ್ಷದ್ ಮೆಹ್ತಾ ಪ್ರಕರಣದ ಬ್ಯಾಂಕ್ ಆಫ್ ಕರಾಡ್‌ನ ಬಹುಕೋಟಿ ವಂಚನೆಯ ದಾವೆಯಲ್ಲಿ ಸುಂದರ್ ಭಂಡಾರಿಯವರನ್ನು ಆರ್‌ಬಿಐ ವಾದಿಸುವುದಕ್ಕೆ ನೇಮಿಸಿದ್ದು ಅವರ ಘನತೆಗೆ ಸಾಕ್ಷಿ. ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಧಾರ್ಮಿಕ ಕೈಂಕರ್ಯಗಳಲ್ಲೂ ತನ್ನ ಸೇವೆ ಸಲ್ಲಿಸುತ್ತಿದ್ದಾರೆ. ಫರ್ದೀನ್ ಖಾನ್ ಪ್ರಕರಣ, ಇತ್ತೀಚೆಗಿನ ರಿಯಾ ಚಕ್ರವರ್ತಿ-ಸುಶಾಂತ್ ಪ್ರಕರಣಗಳಲ್ಲಿ ಮುಖ್ಯ ನಾರ್ಕೋಟಿಕ್ ಆಗಿರುವ ಶೇಖರ್ ಭಂಡಾರಿ ನ್ಯಾಯವಾದಿಗಳಲ್ಲಿ ಎತ್ತರ ಸ್ಥಾನದಲ್ಲಿರುವ ಇನ್ನೋರ್ವ ಕನ್ನಡಿಗ. ಸುಮಾರು 28 ವರ್ಷಗಳಿಂದ ಕ್ರಿಮಿನಲ್ ಪ್ರಕರಣಗಳನ್ನು ನಿರ್ವಹಿಸುತ್ತಿದ್ದ ಇವರು ಈಗ ಎನ್‌ಡಿಪಿಎಸ್ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಂಡಾರಿ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಇವರು ಆ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಮುಂಬೈಯಲ್ಲಿ ತಮ್ಮ ಇಡೀ ಕುಟುಂಬವೇ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸುತ್ತಿರುವ ಕುಟುಂಬಗಳಿವೆ. ನ್ಯಾಯವಾದಿ ಪಿಯೂಸ್ ವಾಸ್ ಕಳೆದ ಸುಮಾರು ಮೂವತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ಮೇರಮಜಲು, ಮಂಗಳೂರಿನವರಾದ ಇವರ ಪತ್ನಿ ಜೆನೆವೀವ್ ಪಿ. ವಾಸ್, ಮಕ್ಕಳಾದ ಡೆರಿಲ್ ವಾಸ್, ಜೈಸನ್ ವಾಸ್, ಸೊಸೆ ಚೈತಾಲಿ ಡಿ. ವಾಸ್, ಪಿಯೋನಾ ನಝ್ರತ್ ಇವರೆಲ್ಲರೂ ನ್ಯಾಯವಾದಿಗಳಾಗಿದ್ದಾರೆ. ಸಂಘಟಕಿ ಅಮಿತಾ ಎಸ್. ಭಾಗವತ್, ‘ಹವ್ಯಕ’ದ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಭಾಗವತ್‌ರಲ್ಲದೆ ಅವರ ಮಗನೂ ನ್ಯಾಯವಾದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ ‘ನಾವು ಒಂದು ಕೇಸ್ ತೆಗೆದುಕೊಂಡಾಗ ಅದರದ್ದೇ ಗುಂಗಿನಲ್ಲಿರುತ್ತೇವೆ. ಹಲವು ಒತ್ತಡಗಳು ಇರುತ್ತವೆ, ನಾವು ನ್ಯಾಯಾಲಯದಿಂದ ಹೊರಬಂದ ನಂತರ ಪ್ರಶಾಂತತೆಯನ್ನು ಬಯಸುತ್ತೇವೆ’’ ಎಂದು ರೋಹಿಣಿ ಸಾಲ್ಯಾನ್ ಹೇಳುವ ಮಾತುಗಳು ಅರ್ಥಪೂರ್ಣವಾಗಿವೆ. ಮುಂಬೈ ಕನ್ನಡಿಗ ವಕೀಲರು ಒಂದರ್ಥದಲ್ಲಿ ಕತ್ತಿಯ ನಡುವೆ ಬದುಕುತ್ತಿದ್ದಾರೆ. ಆದರೂ ಖಾಸಗಿ ಬದುಕಿನಲ್ಲಿ ತಮ್ಮಿಳಗೆ ತಾವೇ ಸಂವಾದ ನಡೆಸುತ್ತಾರೆ. ಆದ್ದರಿಂದಲೇ ಇವರನ್ನು ಮಾತನಾಡಿಸುವಾಗ ಇವರ ಆಂತರ್ಯದಲ್ಲಿ ಕನ್ನಡತನದ ಅಂತಃಕರಣವನ್ನು ನಾವು ಗುರುತಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)