ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾಪಿಡ್ ಕೋವಿಡ್ ಟೆಸ್ಟ್ ಸೌಕರ್ಯ ಕಲ್ಪಿಸಲು ಬಿಸಿಎಫ್ ಆಗ್ರಹ
ಮಂಗಳೂರು, ಆ.14: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಪಿಡ್ ಕೋವಿಡ್ ಟೆಸ್ಟ್ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಬ್ಯಾರೀಸ್ ಕಲ್ಚರಲ್ ಫೋರಂ(ಬಿಸಿಎಫ್) ಒತ್ತಾಯಿಸಿದೆ.
ಕೋವಿಡ್- 19 ಕಾರಣ ಅಂತಾರಾಷ್ಟ್ರೀಯ ವಿಮಾನಯಾನಗಳು ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದರಿಂದ ತೀವ್ರ ತೊಂದರೆ ಗೊಳಗಾದವರು ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು. ಇದೀಗ ಅಂತಾರಾಷ್ಟ್ರೀಯ ವಿಮಾನ ಯಾನಗಳು ಹಂತ ಹಂತವಾಗಿ ಪುನರಾರಂಭಗೊಳ್ಳುತ್ತಿವೆ. ಈ ನಡುವೆ ಯುಎಇ ಕೆಲವೊಂದು ನಿಬಂಧನೆಗಳನ್ನು ಹೊರಡಿಸಿದ್ದು, ಅದರಲ್ಲಿ ಮುಖ್ಯವಾದುದ್ದು 'ಯುಎಇ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ರಾಪಿಡ್ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂಬುದು. ಇದಕ್ಕೆ ಪೂರಕವಾಗಿ ಭಾರತೀಯ ಅನಿವಾಸಿ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ದೇಶದ ಬಹುತೇಕ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ರಾಪಿಡ್ ಕೋವಿಡ್ ಟೆಸ್ಟ್ ಸೌಲಭ್ಯವನ್ನು ಒದಗಿಸುತ್ತಿವೆ. ಆದರೆ ಮಂಗಳೂರು ವಿಮಾನ ನಿಲ್ದಾಣ ಮಾತ್ರ ಈ ಸೌಲಭ್ಯ ಇದುವರೆಗೂ ಆರಂಭಿಸಿಲ್ಲ. ಇದರಿಂದ ಯುಎಇ ಕಡೆಯಿಂದ ಭಾರತೀಯರು ಬರಲು ಹಸಿರು ನಿಶಾನೆ ಇದ್ದರೂ ಅದೆಷ್ಟೋ ಸಮಯದಿಂದ ಯುಎಇಗೆ ಆಗಮಿಸಲು ಕಾತರರಾಗಿರುವ ಅನಿವಾಸಿ ಕನ್ನಡಿಗರ ಪಾಲಿಗೆ ಇದು ಅಡ್ಡಿಯಾಗಿ ಪರಿಣಮಿಸಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಒತ್ತಾಯಿಸಿದ್ದಾರೆ.
ಇತ್ತೀಚೆಗಷ್ಟೇ ಪ್ರಾರOಭವಾದ ನೆರೆ ರಾಜ್ಯ ಕೇರಳದ ಕಣ್ಣೂರಿನ ವಿಮಾನ ನಿಲ್ದಾಣ ಯಾವ ಮಾನ ದಂಡದಿಂದ ಅಳೆದರೂ ಸವಲತ್ತು ಮತ್ತು ಆಧುನಿಕತೆಯಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಸರಿ ಸಾಟಿಯಾಗದು. ಆದರೂ ಎಲ್ಲ ಆಧುನಿಕ ಸೌಕರ್ಯಗಳಿಂದ ಕೂಡಿರುವ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೋವಿಡ್ ರಾಪಿಡ್ ಟೆಸ್ಟ್ ಗೆ ಸೌಲಭ್ಯ ಇಲ್ಲ ಎಂಬುದು ಇದಕ್ಕೆ ಸಂಬಂಧಿಸಿದ ಸರಕಾರಿ ಇಲಾಖೆಗಳ ಕಾರ್ಯ ಕ್ಷಮತೆಯ ಕೊರತೆಯೋ ಅಥವಾ ಅನಿವಾಸಿ ಕನ್ನಡಿಗರ ಬಗ್ಗೆ ನಮ್ಮ ಸರಕಾರ ತಾಳಿರುವ ದಿವ್ಯ ನಿರ್ಲಕ್ಷತೆಯ ಪರಿಣಾಮವೋ ಎಂದು ತಿಳಿಯದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಡಾ.ಬಿ.ಕೆ.ಯೂಸುಫ್, ಈ ಕೊರತೆಯನ್ನು ಶೀಘ್ರವಾಗಿ ನಿವಾರಿಸಲು ಸರಕಾರ ಮುಂದಾಗಬೇಕು. ಯುಎಇಗೆ ವಾಪಸು ಬರಲು ಸಾಧ್ಯವಾಗದೆ ಊರಲ್ಲಿ ಸಿಲುಕಿ ತಮ್ಮ ಉದ್ಯೋಗ ಕಳೆದುಕೊಳ್ಳುವ, ತಮ್ಮ ಉದ್ಯಮಗಳಲ್ಲಿ ನಷ್ಟ ಆಗುವ, ತಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಆಗುವ ಭಯ ಆತಂಕದಲ್ಲಿರುವ ಸಾವಿರಾರು ಅನಿವಾಸಿ ಕನ್ನಡಿಗರ ಸಂದಿಗ್ಧ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೋವಿಡ್-19 ರಾಪಿಡ್ ಟೆಸ್ಟ್ ಸೌಲಭ್ಯವನ್ನು ಒದಗಿಸಬೇಕೆಂದು ಬಿಸಿಎಫ್ ಪೋಷಕರು, ಸಲಹೆಗಾರರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸರ್ವ ಪದಾಧಿಕಾರಿಗಳ ಪರವಾಗಿ ಸಂಸ್ಥೆಯ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಪ್ರಕಟನೆಯ ಮೂಲಕ ಸಂಬಂಧಪಟ್ಟ ಇಲಾಖೆಯನ್ನು ಕೋರಿದ್ದಾರೆ.