ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ನಿಯಮ ಘೋಷಿಸಿದ ಅಬುಧಾಬಿ
ಅಬುಧಾಬಿ, ಆ.14: ಅಬುಧಾಬಿಯನ್ನು ಪ್ರವೇಶಿಸುವ ಯುಇಎ ಪ್ರಜೆಗಳು, ನಿವಾಸಿಗಳು ಹಾಗೂ ಪ್ರವಾಸಿಗರಿಗೆ ಆಗಸ್ಟ್ 15ರಿಂದ ಅನ್ವಯಿಸುವ ಹೊಸ ನಿಯಮಗಳನ್ನು ಅಬುಧಾಬಿಯ ಎಮರ್ಜೆನ್ಸಿ, ಕ್ರೈಸಿಸ್ ಆ್ಯಂಡ್ ಡಿಸಾಸ್ಟರ್ಸ್ (ತುರ್ತುಸ್ಥಿತಿ, ಬಿಕ್ಕಟ್ಟು ಮತ್ತು ವಿಪತ್ತು) ಸಮಿತಿ ಪರಿಷ್ಕರಿಸಿದೆ. ಹಸಿರು ಪಟ್ಟಿಯಲ್ಲಿರುವ ದೇಶಗಳಿಂದ ಬರುವ, ಲಸಿಕೆ ಪಡೆದ ಪ್ರಯಾಣಿಕರು ಅಬುಧಾಬಿಗೆ ಬಂದು ಇಳಿದ ತಕ್ಷಣ ಮತ್ತು ಬಂದ ಬಳಿಕದ 6ನೇ ದಿನ ಪಿಸಿಆರ್ ಪರೀಕ್ಷೆ ನಡೆಸಬೇಕು, ಆದರೆ ಕ್ವಾರಂಟೈನ್ ನ ಅಗತ್ಯವಿಲ್ಲ.
ಇತರ ದೇಶಗಳಿಂದ ಬರುವ ಸಂದರ್ಭ, ಅಬುಧಾಬಿಗೆ ಬಂದು ಇಳಿದ ತಕ್ಷಣ ಪಿಸಿಆರ್ ಪರೀಕ್ಷೆ, 6ನೇ ದಿನ ಪಿಸಿಆರ್ ಪರೀಕ್ಷೆ, 7 ದಿನಗಳ ಕ್ವಾರಂಟೈನ್ ಕಡ್ಡಾಯ.
ಈ ನಿಯಮಾವಳಿಗಳು 'ಅಲ್ಹಾಸ್ನ್ ಆ್ಯಪ್' ಮೂಲಕ ನೋಂದಣಿ ಮಾಡಿಕೊಂಡಿರುವ, ಸಂಪೂರ್ಣ ಲಸಿಕೆ ಪಡೆದಿರುವ ಯುಎಇ ಪ್ರಜೆಗಳು, ನಿವಾಸಿಗಳು ಹಾಗೂ ಪ್ರವಾಸಿಗರಿಗೆ ಅನ್ವಯಿಸುತ್ತದೆ.
ಹಸಿರು ಪಟ್ಟಿಯಲ್ಲಿರುವ ದೇಶಗಳಿಂದ ಆಗಮಿಸುವ, ಲಸಿಕೆ ಪಡೆಯದ ಯುಎಇ ಪ್ರಜೆಗಳು, ನಿವಾಸಿಗಳು ಹಾಗೂ ಪ್ರವಾಸಿಗರು ಬಂದೊಡನೆ ಪಿಸಿಆರ್ ಪರೀಕ್ಷೆ, 6 ಮತ್ತು 9ನೇ ದಿನ ಪಿಸಿಆರ್ ಪರೀಕ್ಷೆ ನಡೆಸಬೇಕು. ಆದರೆ ಕ್ವಾರಂಟೈನ್ನ ಅಗತ್ಯವಿಲ್ಲ. ಇತರ ಪ್ರದೇಶಗಳಿಂದ ಬರುವವರಿಗೆ ಅಬುಧಾಬಿಗೆ ಬಂದು ಇಳಿದೊಡನೆ ಮತ್ತು 9ನೇ ದಿನ ಪಿಸಿಆರ್ ಪರೀಕ್ಷೆ, 10 ದಿನದ ಕ್ವಾರಂಟೈನ್ ಕಡ್ಡಾಯವಾಗಿದೆ.