ಭಾರತಾಂಬೆಯ ಮಲಮಕ್ಕಳು
ಯಾಕೆ? ಹಾಗಾದರೆ ಇವರೆಲ್ಲ ಯಾರು? ಇವರು ಈ ನಾಡಿನ ಪ್ರಜೆಗಳಲ್ಲವೇ? ಭಾರತಾಂಬೆಯ ಮಕ್ಕಳಲ್ಲವೇ? ಸರಕಾರದ ಮತ್ತು ಈ ಸಮಾಜದ ವರ್ತನೆ ನೋಡಿದರೆ ಅಲ್ಲ ಅನಿಸುತ್ತದೆ. ಇವರಿಗೆಲ್ಲ ಬೇರೆ ತಾಯಿಯೇನೂ ಇಲ್ಲ. ಆದರೂ ಇವರು ಭಾರತಾಂಬೆಯ ಮಲಮಕ್ಕಳು!
ಭಾರತದ ಚರಿತ್ರೆಯಲ್ಲಿ ಇದೂ ಒಂದು ಘಟ್ಟ. ಕೋವಿಡ್ ಬಂತು, ಇಡೀ ವಿಶ್ವ ತತ್ತರಿಸಿತು. ಇದೇನು ಎತ್ತ ಎಂಬ ಗಂಧಗಾಳಿಯಿಲ್ಲದ ನಮ್ಮ ನೇತಾರರು ಹಿಂದು ಮುಂದು ಯೋಚಿಸದೆ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದರು- ಕೇವಲ ನಾಲ್ಕು ಗಂಟೆಗಳ ಮುನ್ಸೂಚನೆ ನೀಡಿ! (2020ರ ಮಾರ್ಚ್ 24). ನಮ್ಮ ‘ವಿಶ್ವಗುರು’ ಪ್ರಧಾನಿ ರಾತ್ರಿ 8 ಗಂಟೆಗೆ ದೇಶದ ಮುಂದೆ (ಅಂದರೆ ಟಿವಿಯಲ್ಲಿ) ಬಂದರು; ‘‘ಇಂದು ನಡುರಾತ್ರಿಯಿಂದ ದೇಶಾದ್ಯಂತ ಲಾಕ್‌ಡೌನ್’’ ಎಂದರು. ಲಾಕ್‌ಡೌನ್ ಅಂದರೆ ಏನು? ‘ಇದೂ ಕರ್ಫ್ಯೂ ಥರನೇ’’ ಎಂದು ಸ್ಪಷ್ಟಪಡಿಸಿದರು. ಈ ಒಂದು ಘೋಷಣೆಯಿಂದಾಗಿ ದುಡಿದುಣ್ಣುತ್ತಿದ್ದ ಕೋಟ್ಯಂತರ ಕಾರ್ಮಿಕರು ದೇಶದ ಉದ್ದಗಲ ಒಂದೇ ಏಟಿಗೆ ನಿರುದ್ಯೋಗಿಗಳಾದರು. ಅರ್ಥವ್ಯವಸ್ಥೆಯ ಚಕ್ರ ಒಮ್ಮಿಂದೊಮ್ಮೆಲೇ ಸ್ತಬ್ಧವಾಯಿತು. ಪರಿಣಾಮವಾಗಿ ‘ಲಾಕ್‌ಡೌನ್ ಮುಗಿಯುವಷ್ಟರಲ್ಲಿ ಭಾರತದಲ್ಲಿ ಎರಡು ಕೋಟಿ ಜನ ಉದ್ಯೋಗ ಕಳೆದುಕೊಳ್ಳುತ್ತಾರೆ’ ಎಂಬ ವರದಿಗಳು ಬಂದವು. ‘ಅಂದಾಜು 40 ಕೋಟಿ ಜನ ದೇಶದಲ್ಲಿ ಕಡುಬಡತನದ ಕೂಪಕ್ಕೆ ಜಾರುತ್ತಾರೆ’ ಎಂದು ಐಎಂಎಫ್ ಎಚ್ಚರಿಸಿತು. ಮೊದಲ ಅಲೆ ಬಂದು ಹೋಗಿ, ಈಗ ಎರಡನೇ ಅಲೆಯೂ ಬಂತು. ಮೂರನೇ ಅಲೆ ಬರಲು ತುದಿಗಾಲಲ್ಲಿ ನಿಂತಿದೆ ಎಂಬ ವರದಿಗಳಿವೆ. ಹೀಗಿರುವಾಗ ದಿನದಿನ ದುಡಿದುಣ್ಣುವವರು ಹೀಗೆ ಏಕಾಏಕಿ ತಬ್ಬಲಿಗಳಾದಾಗ ಏನು ತಿನ್ನಬೇಕು? ಎಲ್ಲಿ ತಂಗಬೇಕು? ಅದಕ್ಕೇ ಅಂದು ಕೋಟ್ಯಂತರ ಜನ ರಸ್ತೆಗಿಳಿದರು. ಬಸ್ಸಿಲ್ಲ, ರೈಲಿಲ್ಲ. ಯಾವ ಚಟುವಟಿಕೆಯೂ ಇಲ್ಲ. ತಂತಮ್ಮ ಊರುಗಳಿಗೆ ನಡೆದೇ ಹೊರಟರು. ಸಾಧ್ಯವಿದ್ದವರು ಸೈಕಲ್ ಏರಿದರು. ಸಾವಿರಾರು ಕಿಲೋಮೀಟರ್‌ಗಳು. ಹಾಗೆ ಹೊರಟವರು ನೂರಾರು ಸಂಖ್ಯೆಯಲ್ಲಿ ದಾರಿಯಲ್ಲೇ ಸಾವಿಗೀಡಾದರು. ಎಷ್ಟೋ ಮಂದಿ ಹಸಿವಿಗೆ ಬಲಿಯಾದರು. ಹೋಗಲಿ ಅವರ ಈ ಕಾಲ್ನಡಿಗೆ ಯಾತ್ರೆಯಾದರೂ ನಿರಾತಂಕವಾಗಿತ್ತೇ?...
ಹೇಗಿದ್ದರೂ ರೈಲುಗಳಿಲ್ಲ ಎಂದು ನಂಬಿ, ದಾರಿ ತಪ್ಪಲಾರದೆಂದು- ರೈಲು ಹಳಿಗಳ ಗುಂಟ- ಹೊರಟು ರಾತ್ರಿಯಾದಾಗ ಹಳಿಗಳ ಮೇಲೆಯೇ ಮಲಗಿದ್ದ ನತದೃಷ್ಟರ ಮೇಲೆ ರೈಲು ಹರಿದುಹೋಯಿತು. ಇನ್ನು ಸಿಕ್ಕ ಸಿಕ್ಕ ಕಡೆ ಪೊಲೀಸರು ಹಿಡಿದು ಬಾರಿಸಿದರು. ರಾಜ್ಯ ದಾಟಿ ಇನ್ನೊಂದು ರಾಜ್ಯದ ಗಡಿಗೆ ಬಂದಾಗ ಅವರನ್ನು ತಡೆದರು, ಹಿಂಸಿಸಿದರು. ಶುದ್ಧೀಕರಣದ ಹೆಸರಿನಲ್ಲಿ ಜಾನುವಾರುಗಳಂತೆ ಮೈ ಮೇಲೆ ಕೀಟನಾಶಕ ಸ್ಪ್ರೇ ಮಾಡಿದರು... ಹೀಗೆ ದಿಕ್ಕೆಟ್ಟು ರಸ್ತೆಗೆ ಬಿದ್ದವರು ಒಟ್ಟು ಎಷ್ಟು ಜನ?
‘ಅಂಕಿ-ಅಂಶಗಳಿಲ್ಲ’ ಎಂದಿತು ಸರಕಾರ.
ಹೋಗಲಿ ಬೀದಿ ಹೆಣವಾಗಿ ಸತ್ತವರೆಷ್ಟು ಜನ?
ಮತ್ತೆ ‘ಅಂಕಿ-ಅಂಶಗಳಿಲ್ಲ’ ಎಂದಿತು ಸರಕಾರ.
ಯಾಕೆ? ಹಾಗಾದರೆ ಇವರೆಲ್ಲ ಯಾರು? ಇವರು ಈ ನಾಡಿನ ಪ್ರಜೆಗಳಲ್ಲವೇ? ಭಾರತಾಂಬೆಯ ಮಕ್ಕಳಲ್ಲವೇ? ಸರಕಾರದ ಮತ್ತು ಈ ಸಮಾಜದ ವರ್ತನೆ ನೋಡಿದರೆ ‘ಅಲ್ಲ’ ಅನಿಸುತ್ತದೆ. ಇವರಿಗೆಲ್ಲ ಬೇರೆ ತಾಯಿಯೇನೂ ಇಲ್ಲ. ಆದರೂ ಇವರು ಭಾರತಾಂಬೆಯ ಮಲಮಕ್ಕಳು!
ವಿನೋದ್ ಕಾಪ್ರಿ ಎಂಬ ಪತ್ರಕರ್ತ ಮತ್ತು ಚಿತ್ರನಿರ್ದೇಶಕ. ಈತ ಲಾಕ್‌ಡೌನ್ ಆರಂಭವಾದಾಗ ಏಳು ಜನ ಕಟ್ಟಡ ಕಾರ್ಮಿಕರ ಊಟ ತಿಂಡಿ, ವಸತಿ ನೋಡಿಕೊಳ್ಳುತ್ತಿದ್ದ. ಆದರೆ ಅನಿರ್ದಿಷ್ಟ ಕಾಲ ಈತನನ್ನೇ ಅವಲಂಬಿಸಲು ಸಂಕೋಚಗೊಂಡ ಆ ಏಳು ಮಂದಿ ಉತ್ತರ ಪ್ರದೇಶದ ಘಾಝಿಯಾಬಾದಿನಿಂದ ಸೈಕಲ್ ಏರಿ 1,232 ಕಿಲೋಮೀಟರ್ ದೂರದ ತಮ್ಮ ಊರಿಗೆ ಹೊರಟುಬಿಟ್ಟರು. ಅವರೂರು ಎಂದರೆ ಬಿಹಾರದ ಸಹರ್ಸಾ ಜಿಲ್ಲೆ. ಅವರು ಹೊರಟ ಮರುದಿನ ವಿನೋದ್ ಕಾಪ್ರಿ ಗಾಡಿ ತೆಗೆದುಕೊಂಡು ಕ್ಯಾಮೆರಾ ಹಿಡಿದು ಅವರನ್ನು ಹಿಂಬಾಲಿಸಿದ. ಅವರು ತಮ್ಮೂರು ತಲುಪುವವರೆಗೆ- ಒಟ್ಟು ಏಳು ದಿನ ಅವರ ಯಾತ್ರೆಯನ್ನು ದಾಖಲು ಮಾಡುತ್ತ ಹೋದ. ಅವನು ಚಿತ್ರಿಸಿದ 86 ನಿಮಿಷಗಳ ಆ ದಾಖಲೆ- ಯಾವ ಸುದ್ದಿ ವಾಹಿನಿಯೂ ತೋರದ- ಭಾರತಾಂಬೆಯ ಮಲಮಕ್ಕಳ ಪಾಡನ್ನು ಚಿತ್ರಿಸುತ್ತದೆ. (‘1,232 ಕಿಲೋಮೀಟರ್’ ಎಂಬ ಆ ಸಾಕ್ಷಚಿತ್ರವನ್ನು ಆಸಕ್ತರು ಡಿಸ್ನಿ ಹಾಟ್‌ಸ್ಟಾರ್ ಒಟಿಟಿ ವೇದಿಕೆಯಲ್ಲಿ ನೋಡಬಹುದು.) ಆ ಏಳು ಜನರಲ್ಲಿ ಬಿಎ ಪಾಸ್ ಮಾಡಿದವನೂ ಇದ್ದಾನೆ, ಪ್ರಾಥಮಿಕ ಹಂತದಲ್ಲೇ ಶಾಲೆ ತೊರೆದವರೂ ಇದ್ದಾರೆ. ಆದರೆ ಎಲ್ಲರೂ ಬದುಕಲೇಬೇಕೆಂಬ ಛಲ ಹೊತ್ತವರು. ಕಷ್ಟ ನಷ್ಟಗಳಿಗೆ ಎದೆಗುಂದದವರು. ಕೈಯಲ್ಲಿ ಬಿಡಿಗಾಸು. ಏನಾದರೂ ತಿನ್ನಲು ಸಿಕ್ಕಿದರೆ ತಿನ್ನುತ್ತಾರೆ. ಇಲ್ಲದಿದ್ದರೆ ಹಾಗೇ ಸೈಕಲ್ ತುಳಿಯುತ್ತಾರೆ. ಅವರ ಪಾಡು ಭೀಕರವಾದದ್ದು. ಅಷ್ಟಾದರೂ ಅವರ ಹಟ ಇಂಗಿಲ್ಲ. ಎಲ್ಲಿಯಾದರೂ ಸೈಕಲ್ ಪಂಕ್ಚರ್ ಆಯಿತೆನ್ನಿ. ಇಡೀ ದೇಶವೇ ಬಂದ್ ಆಗಿರುವಾಗ ಪಂಕ್ಚರ್ ಅಂಗಡಿ ಎಲ್ಲಿ ಸಿಗಬೇಕು? ಊಟ ಮಾಡಲು ಹೊಟೇಲಾದರೂ ಎಲ್ಲಿದೆ? ಒಮ್ಮೆ ಒಬ್ಬನ ಸೈಕಲ್ ಪಂಕ್ಚರ್ ಆಗಿಯೇ ಬಿಟ್ಟಿತು. ಅಲ್ಲಿಂದ ಎರಡು ಗಂಟೆ ಉರಿಬಿಸಿಲಿನಲ್ಲಿ ಸೈಕಲ್ ತಳ್ಳಿಕೊಂಡೇ ಹೋದರು! ಅಲ್ಲಿ ಅಂಗಡಿಯವನು ಸೈಕಲ್ ಟ್ಯೂಬ್ ಬದಲಾಯಿಸಬೇಕು ಎಂದ. ಅದನ್ನೆಲ್ಲಿಂದ ತರುವುದು? ಕಡೆಗೆ ಯಾರೋ ಹೋಮ್ ಗಾರ್ಡ್ ಪುಣ್ಯಾತ್ಮ ಎಲ್ಲಿಂದಲೋ ಸಂಪಾದಿಸಿಕೊಂಡು ತಂದು ಕೊಟ್ಟ! ಹಾಗಾಗಿ ಬಚಾವ್. ಇವರು ಹೆದ್ದಾರಿಗಳನ್ನು ಆದಷ್ಟೂ ತಪ್ಪಿಸುತ್ತ ಮೊಬೈಲ್ ಜಿಪಿಎಸ್ ನೆಚ್ಚಿ ಒಳದಾರಿಗಳಲ್ಲೇ ಸಾಗಿದರು. ಯಾಕೆ? ಯಾಕೆಂದರೆ ಹೆದ್ದಾರಿಗಳಲ್ಲಿ ಪೊಲೀಸರ ಕಾಟ! ‘‘ಪೊಲೀಸರು ಹೊಡೆಯುತ್ತಾರೆ. ಬಾಯಿಗೆ ಬಂದಂಗೆ ಬೈಯುತ್ತಾರೆ.... ಬ್ರಿಜ್‌ಘಾಟ್ ಸೇತುವೆ ಮೇಲೆ ಪೊಲೀಸರು ಯಾರನ್ನೂ ಬಿಡ್ತಿರಲಿಲ್ಲ. ಸೈಕಲ್ ಮೇಲೆ ಹೋದರೂ ಅಷ್ಟೇ, ನಡಕೊಂಡು ಹೋದರೂ ಅಷ್ಟೇ. ಕೂಲಿ ಕೆಲಸಗಾರರು ಅಂದ್ರೆ ಅವರು ಮನುಷ್ಯರ ಥರನೇ ನೋಡಲ್ಲ. ನಾವೆಲ್ಲ ಪಂಜರದಲ್ಲಿ ಕೂಡಿ ಹಾಕಿದ ಪ್ರಾಣಿಗಳ ಥರ..’’ ಎಂದು ಲೊಚಗುಟ್ಟುತ್ತಾನೆ ರಿತೇಶ್.
ರಾಂಬಾಬು ಮಾತಂತೂ ಇನ್ನೂ ಮನನಯೋಗ್ಯವಾಗಿದೆ- ‘‘ಇದು ಶ್ರೀಮಂತರು ತಂದಿಟ್ಟ ರೋಗ ಸ್ವಾಮಿ, ಆದರೆ ಅನುಭವಿಸೋದು ಬಡವರು.’’
ದಿನವಿಡೀ ಕ್ಷಣವೂ ವ್ಯರ್ಥಮಾಡದೆ ಸೈಕಲ್ ತುಳಿಯುತ್ತಾರೆ. ಪ್ರತಿ ದಿನ 70ರಿಂದ 100 ಕಿಲೋಮೀಟರ್ ಕ್ರಮಿಸುತ್ತಾರೆ. ದಣಿದು ರಾತ್ರಿ ಯಾವುದಾದರೂ ಪಾರ್ಕಿನಲ್ಲಿ ಮಲಗಲು ಟವೆಲ್ ಹಾಸಿಕೊಂಡರೆ ಪೊಲೀಸರು ಬಂದು ಲಾಠಿ ಬೀಸುತ್ತಾರೆ. ಯಾಕೆ? ಇವರು ಹೀಗೆ ಬೀದಿಪಾಲಾಗಿರುವುದು ಸರಕಾರದ ತೀರ್ಮಾನದಿಂದಲ್ಲವೇ? ಇವರ ಸಮಸ್ಯೆ ದೇಶದ ಸಮಸ್ಯೆ ಅಲ್ಲವೇ? ಇವರು ಬದುಕಬಾರದೇ? ಇವರನ್ನೆಲ್ಲ ಸಲಹುವುದು ದೇಶದ, ನಮ್ಮನ್ನು ಆಳುವವರ ಜವಾಬ್ದಾರಿ ಅಲ್ಲವೇ?
ಈ ಪ್ರಶ್ನೆಗಳಿಗೆ ಸಿಗುವ ನಿರ್ದಾಕ್ಷಿಣ್ಯ ಉತ್ತರ- ಅಲ್ಲ! ಯಾಕೆಂದರೆ ಇವರು ಎಷ್ಟೆಂದರೂ ಭಾರತಾಂಬೆಯ ಮಕ್ಕಳಲ್ಲ, ಮಲಮಕ್ಕಳು!
‘‘ಈ ದೇಶದಲ್ಲಿ ಬಡವರಿಗೆ ಜಾಗ ಇಲ್ಲ ಸ್ವಾಮಿ.... ನಾವು ದಿನ ದಿನ ದುಡಿದು ತಿನ್ನೋರು. ನಮಗೆ ಕೆಲಸ ಇಲ್ಲ ಅಂದ್ರೆ ಊರಲ್ಲಿರೋ ನಮ್ಮಮ್ಮನ ಕತೆಯೇನು? ನನ್ನ ಮಕ್ಕಳು ಏನು ತಿನ್ನಬೇಕು? ನಮ್ಮ ಹೊಟ್ಟೆ ತುಂಬೋದು ಹೇಗೆ?
ಆದರೆ ನೀವು ಹೀಗೆ ಸಾವಿರಾರು ಕಿಲೋಮೀಟರ್ ಸೈಕಲ್ ಮೇಲೆ ಹೊರಟುಬಿಟ್ರಲ್ಲ, ಅಪಾಯ ಇಲ್ವಾ? ಎಂದು ಕೇಳಿದರೆ ‘‘ಅಪಾಯ ಇದೆ ಅಂತ ಗೊತ್ತು. ಆದರೆ ನಮ್ಮ ಹತ್ರ ಬೇರೆ ದಾರಿ ಏನಿದೆ? ನಮ್ಮ ಅಕ್ಕಪಕ್ಕದವರ ಕಷ್ಟ ನೋಡೋಕ್ಕಾಗ್ತಿರಲಿಲ್ಲ. ಒಬ್ಬ ಸತ್ತೇಹೋದ. ನಾನೂ ಹೆಚ್ಚೂಕಮ್ಮಿ ಆಗಿ ಸತ್ತೇಹೋದ್ರೆ ಅಪ್ಪ ಅಮ್ಮಂಗೆ ನನ್ನ ಮುಖನೂ ಸಿಕ್ಕಲ್ಲ. ಅದಕ್ಕೆ ಇಲ್ಲೇ ಇದ್ದು ಅನಾಥ ಹೆಣವಾಗಿ ಸಾಯೋ ಬದಲು ಹೊರಟೇಬಿಡೋಣ ಅಂತ. ದಾರೀಲಿ ಏನಾದ್ರೂ ಸಿಕ್ರೆ ತಿಂದು ಜೀವ ಉಳಿಸಿಕೊಂಡು ಹೋಗೋದು, ಇಲ್ಲಾಂದ್ರೆ ದಾರೀಲೇ ಸತ್ರೂ ಪರವಾಗಿಲ್ಲ ಅಂತ...’’
ಮೂರನೇ ದಿನ ಸಂಜೆ ಕತ್ತಲಾದ ಮೇಲೆ ಒಬ್ಬ ತಲೆ ತಿರುಗಿ ಸೈಕಲ್ ಸಮೇತ ದಾರಿಯಲ್ಲೇ ಬಿದ್ದುಬಿಟ್ಟ....
ಇನ್ನೊಮ್ಮೆ ರಿತೇಶ್ ತನ್ನ ತಾಯಿಗೆ ವೀಡಿಯೊ ಕಾಲ್ ಮಾಡಿ- ‘‘ಏನೂ ಚಿಂತೆ ಮಾಡಬೇಡಮ್ಮ, ನಾನು ಬರ್ತಾ ಇದ್ದೀನಿ’’ ಎಂದು ಧೈರ್ಯ ಹೇಳುತ್ತಿದ್ದಾನೆ. ಆದರೆ ಆ ತಾಯಿ ‘‘ನಿನ್ನೆಯಿಂದ ನೀನು ಏನೂ ತಿಂದೇ ಇಲ್ಲ. ಚಿಂತೆ ಮಾಡಬೇಡ ಅಂದ್ರೆ ಹೆಂಗಪ್ಪ?’’ ಎಂದು ಕಣ್ಣೀರುಗರೆಯುತ್ತಿದ್ದಾಳೆ...
ಎಲ್ಲೋ ಲಾರಿ ಹತ್ತಿ ತುಸು ದೂರ ಕ್ರಮಿಸಿ, ಏನೇನೋ ಪಾಡು ಪಟ್ಟು ಕಡೆಗೂ ಏಳು ದಿನಗಳ ನಂತರ ತಮ್ಮೂರು ತಲುಪಿದ ಈ ತಂಡಕ್ಕೆ ಅಲ್ಲಿ 14 ದಿನಗಳ ಕ್ವಾರಂಟೈನ್. ‘‘ಹೋಗಲಿ ಬಿಡಿ ಸಾರ್. ಆ ಶ್ರೀರಾಮ 14 ವರ್ಷ ವನವಾಸವನ್ನೇ ಅನುಭವಿಸಿದ. ನಾವು ಬರೀ 14 ದಿನ...’’ ಎಂದು ಉದ್ಗರಿಸಿ ನಸುನಕ್ಕರು!
ಹೀಗೆಯೇ ಕಾಲ್ನಡಿಗೆಯಲ್ಲಿ ಊರು ದಾರಿ ಹಿಡಿದ ಮತ್ತೊಬ್ಬ ಹೆಣ್ಣುಮಗಳು ತಲೆಯಲ್ಲಿ ಗಂಟು ಹೊತ್ತು ‘‘ನನ್ನ ಗಂಡ ದಾರಿಯಲ್ಲೇ ತೀರಿಕೊಂಡ’’ ಎಂದು ಗೊಳೋ ಅಳುತ್ತಿದ್ದಾಳೆ....
ದೇಶದಲ್ಲಿ ಹೀಗೆ ಕೆಲಸ ಊರು ಬಿಟ್ಟು ತಮ್ಮ ಊರಿನ ಹಾದಿ ಹಿಡಿದ ವಲಸೆ ಕಾರ್ಮಿಕರೆಷ್ಟು ಮಂದಿ? ಮೊದಲು ‘‘ಡೇಟಾ ಇಲ್ಲ’’ ಅನ್ನುತ್ತಿದ್ದ ಸರಕಾರ ಕಳೆದ ವಾರ ಸಂಸತ್ತಿನಲ್ಲಿ ಕೊಟ್ಟ ಉತ್ತರ- ‘‘ಮೊದಲ ಅಲೆಯಲ್ಲಿ ಒಂದು ಕೋಟಿ ಹದಿನಾಲ್ಕು ಲಕ್ಷ ಜನ; ಎರಡನೇ ಅಲೆಯಲ್ಲಿ ಐದು ಲಕ್ಷಕ್ಕಿಂತ ತುಸು ಜಾಸ್ತಿ.’’ ಆದರೆ ಮೊದಲ ಅಲೆ ಸಂದರ್ಭದಲ್ಲಿ ಒಟ್ಟು ಮೂರು ಕೋಟಿಗೂ ಹೆಚ್ಚು ಜನ ‘ಮಲಮಕ್ಕಳು’ ಗುಳೆ ಹೊರಟರು ಎಂದು ದಾಖಲಿಸುತ್ತದೆ ಆ ಸಾಕ್ಷಚಿತ್ರ. ನಮ್ಮ ಪ್ರಧಾನಿ ಮೋದಿಯವರು ಒಮ್ಮೆ- ‘‘ಸಂಪತ್ತು ಸೃಷ್ಟಿಸುವವರನ್ನು ದೇಶ ಗೌರವದಿಂದ ಕಾಣಬೇಕು’’ ಎಂದು ಅಪ್ಪಣೆ ಕೊಟ್ಟಿದ್ದರು. ಸಂಪತ್ತು ಸೃಷ್ಟಿಸುವವರು ಎಂದರೆ ಯಾರು? ಅವರ ಲೆಕ್ಕಾಚಾರವೇ ಬೇರೆ- ಅವರ ಪ್ರಕಾರ ಅಂಬಾನಿ, ಅದಾನಿಗಳೇ ನಮ್ಮ ದೇಶದ ‘ಸಂಪತ್ತಿನ ಸೃಷ್ಟಿಕರ್ತರು!’ ಅವರು ಆ ಹೇಳಿಕೆ ಕೊಟ್ಟ ಕೆಲವೇ ದಿನಗಳಲ್ಲಿ ಸಂಪತ್ತಿನ ನಿಜ ಸೃಷ್ಟಿಕರ್ತರಾದ ಈ ಎಲ್ಲ ಕಾರ್ಮಿಕರು ಬೀದಿಪಾಲಾದದ್ದು ಆಕಸ್ಮಿಕವಲ್ಲ. ಈ ವಲಸೆ ಕಾರ್ಮಿಕರ ಸಂಕಟ ಮಲಮಕ್ಕಳ ಪಾಡನ್ನು ಮುನ್ನೆಲೆಗೆ ತಂದಿದ್ದು ನಿಜವಾದರೂ, ನಮ್ಮ ಪಟ್ಟಿ ಅಷ್ಟು ಸೀಮಿತವಲ್ಲ! ಮೋದಿಯವರ ವಾದ ಏನಾದರೂ ಇರಲಿ. ದೇಶದಲ್ಲಿ ಇಂದು ಮಕ್ಕಳಿಗಿಂತ ಮಲಮಕ್ಕಳ ಸಂಖ್ಯೆಯೇ ಹೆಚ್ಚು. ಬೇಕಾದರೆ ಪಟ್ಟಿ ಮಾಡಿ ನೋಡಿ:
- ಎಲ್ಲ ಬಡವರು
-ರೈತರು
- ದಲಿತರು - ಅಲ್ಪಸಂಖ್ಯಾತರು - ಅಸಂಖ್ಯ ತಬ್ಬಲಿ ಜಾತಿಗಳ ಜನ..
ಪಟ್ಟಿ ಬೆಳೆಯುತ್ತದೆ. ಇವರೆಲ್ಲರೂ ಮಲಮಕ್ಕಳೇ. ಅದನ್ನು ಗುರುತಿಸುವುದು ಹೇಗೆಂದರೆ, ಯಾವುದೇ ಕಾರಣವಿಲ್ಲದೆ ಈ ಪಟ್ಟಿಯಲ್ಲಿರುವ ಜನರ ಮೇಲೆ ಹತ್ಯೆಯೂ ಸೇರಿದಂತೆ ಯಾವುದೇ ಬಗೆಯ ದೌರ್ಜನ್ಯ ನಡೆದರೂ ಈ ಸಮಾಜ ಅವರ ನೆರವಿಗೆ ಬರುವುದಿಲ್ಲ. ಅದೇ ಅಳತೆಗೋಲು.
ಪೂನಾ ಒಪ್ಪಂದದ ಸಮಯದಲ್ಲಿ ಅಂಬೇಡ್ಕರ್, ‘‘ಬಾಪೂಜಿ, ಐ ಛಿ ್ಞಟ ಞಟಠಿಛ್ಟ್ಝಿಚ್ಞ- ನನಗೊಂದು ತಾಯ್ನಡೇ ಇಲ್ಲ’’ ಎಂದು ಉದ್ಗರಿಸಿದ್ದರು. ಈ ಮಲಮಕ್ಕಳಿಗೂ ಅಷ್ಟೇ: ತಾಯ್ನಡಿಲ್ಲ. ಅಂಬೇಡ್ಕರ್ ರೂಪಿಸಿದ ಸಂವಿಧಾನ ಎಲ್ಲರಿಗೂ ರಾಜಕೀಯ ಸ್ವಾತಂತ್ರ್ಯ ಕೊಟ್ಟಿತು. ‘ಒಬ್ಬ ವ್ಯಕ್ತಿ ಒಂದು ವೋಟು, ಒಂದು ವೋಟು ಒಂದು ಮೌಲ್ಯ’ ಎಂಬ ತತ್ವದ ಮೂಲಕ ಸಮಾನತೆ ಸಾಧಿಸಲೆತ್ನಿಸಿತು. ಆದರೆ ಸ್ವತಃ ಅಂಬೇಡ್ಕರ್ ‘‘ಇಂದು ರಾಜಕೀಯ ಸ್ವಾತಂತ್ರ್ಯ ಲಭಿಸಿದೆ. ಆದರೆ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಇನ್ನೂ ದೂರವೇ ಇದೆ’’ ಎಂದು ಪ್ರವಾದಿಯಂತೆ ನೀಡಿದ ಎಚ್ಚರಿಕೆಯನ್ನು ಈ ದೇಶ ಮರೆತೇಹೋಯಿತು.
ಹಾಗಾಗಿಯೇ ಸಿದ್ದಲಿಂಗಯ್ಯನವರ ಪದ್ಯ ಮತ್ತೆ ಮತ್ತೆ ನಮ್ಮ ಮುಂದೆ ಸವಾಲಿನಂತೆ ಎದ್ದು ಬರುತ್ತಲೇ ಇದೆ:
ಯಾರಿಗೆ ಬಂತು, ಎಲ್ಲಿಗೆ ಬಂತು ನಲವವತ್ತೇಳರ ಸ್ವಾತಂತ್ರ್ಯ...?