ಸ್ವಾತಂತ್ರದ ವಿಜ್ಞಾನೋತ್ಸವ
ನಾವು ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದು 75 ವರ್ಷಗಳ ಹೊಸ್ತಿಲಲ್ಲಿದ್ದೇವೆ. ಸ್ವಾತಂತ್ರ ದಿನಾಚರಣೆಯ ಅಮೃತ ಮಹೋತ್ಸವದ ಈ ಹೊತ್ತಿನಲ್ಲಿ ಭಾರತದ ವಿಜ್ಞಾನ ಕ್ಷೇತ್ರ ಬೆಳೆದುಬಂದ ಹಾದಿಯತ್ತ ಒಮ್ಮೆ ಗಮನ ಹರಿಸಿದಾಗ ಅಗಾಧ ಬೆಳವಣಿಗೆಗಳು ಗೋಚರಿಸುತ್ತವೆ. ರಾಷ್ಟ್ರೀಯ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆಯನ್ನು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲವಾಗಿದೆ. ಕಳೆದ ಏಳೂವರೆ ದಶಕಗಳಲ್ಲಿ ಹಲವಾರು ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಗಳು ಸಾಮಾನ್ಯ ಜನರ ಜೀವನವನ್ನು ಮುಟ್ಟಿವೆ. ಕಳೆದ ಏಳೂವರೆ ದಶಕಗಳಲ್ಲಿ ಭಾರತವು ಅನೇಕ ಕೃತಕ ಉಪಗ್ರಹಗಳನ್ನು ನಿರ್ಮಿಸಿ ಉಡ್ಡಯನ ಮಾಡಿದೆ. ಇದರ ಪ್ರತಿಫಲದ ಪ್ರತೀಕವಾಗಿ ಇಡೀ ಜಗತ್ತೇ ನಮ್ಮ ಅಂಗೈಯಲ್ಲಿದೆ. ಚಂದ್ರ ಮತ್ತು ಮಂಗಳನನ್ನು ತಲುಪುವ ಕನಸು ನೌಕೆಗಳ ಮೂಲಕ ಯಶಸ್ವಿಯಾಗಿದೆ. ಅನೇಕ ಪರಮಾಣು ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಿಕೊಂಡಿದ್ದೇವೆ. ಪರಮಾಣು ಶಸ್ತ್ರಾಸ್ತ್ರದಂತಹ ಸಾಮರ್ಥ್ಯವನ್ನು ಪಡೆದುಕೊಂಡಿದ್ದೇವೆ. ಕ್ಷಿಪಣಿ ಕ್ಷೇತ್ರದಲ್ಲೂ ನಾವು ಹಿಂದೆ ಬಿದ್ದಿಲ್ಲ. ನಿಸ್ಸಂದೇಹವಾಗಿ ಇವೆಲ್ಲವೂ ಭಾರತೀಯ ವಿಜ್ಞಾನಿಗಳು ಮತ್ತು ತಂತ್ರಜ್ಞರ ಅದ್ಭುತ ಸಾಧನೆಗಳು. ಈ ಎಲ್ಲಾ ಸಾಧನೆಗಳಿಗೆ ಕಾರಣ ಸ್ವಾತಂತ್ರ ಎಂಬುದನ್ನು ಮರೆಯುವಂತಿಲ್ಲ. ವೈಜ್ಞಾನಿಕ ಸಂಶೋಧನೆಗಳು ಕೇವಲ ಪ್ರಯೋಗಶಾಲೆ ಅಥವಾ ಕಡತಗಳಿಗೆ ಮೀಸಲಾಗದೆ ಸಾರ್ವಜನಿಕ ನೀತಿಗಳೊಂದಿಗೆ ಸೇರಿ ಜನಜೀವನದ ಭಾಗವಾದವು. ಆಹಾರ, ಹಾಲು, ಹಣ್ಣು, ತರಕಾರಿ, ಔಷಧಗಳು ಮತ್ತು ಲಸಿಕೆಗಳ ಉತ್ಪಾದನೆಯಲ್ಲಿ ಭಾರತವು ಸ್ವಾವಲಂಬನೆನ್ನು ಸಾಧಿಸಿದೆ. ಕಳೆದ ವರ್ಷದಿಂದ ಜಗತ್ತನ್ನು ತಲ್ಲಣಗೊಳಿಸಿದ ಕೋವಿಡ್ ವೈರಾಣುವಿಗೆ ಭಾರತದ ಲಸಿಕೆಯು ವರದಾನವಾಯಿತು. ಭಾರತದ ಪ್ರತಿಯೊಂದು ವೈಜ್ಞಾನಿಕ ಸಂಶೋಧನೆಯು ಉತ್ತಮ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಬೀರಿದೆ. ಆ ಮೂಲಕ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಾಮಾನ್ಯ ಭಾರತೀಯರ ಜೀವನವನ್ನು ತಲುಪಿದೆ. ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿನ ಬೆಳವಣಿಗೆಗಳು, ಹವಾಮಾನದ ಸಕಾಲಿಕ ಮುನ್ಸೂಚನೆ ಮತ್ತು ಚಂಡಮಾರುತಗಳ ಮುಂಚಿನ ಎಚ್ಚರಿಕೆಯನ್ನು ಸಕ್ರಿಯಗೊಳಿಸಿ ಸಾವಿರಾರು ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿವೆ.
ಇವೆಲ್ಲವೂ ಸ್ವಾತಂತ್ರದ ನಂತರ ವೈಜ್ಞಾನಿಕ ಸಂಶೋಧನೆಯಲ್ಲಿ ಮಾಡಿದ ಹೂಡಿಕೆಯ ಫಲಿತಾಂಶಗಳಾಗಿವೆ. 1947 ಹಾಗೂ ಅದಕ್ಕೂ ಮುಂಚಿನ ದಶಕಗಳಲ್ಲಿ ವೈಜ್ಞಾನಿಕ ಸಂಶೋಧನೆಯಲ್ಲಿನ ಹೂಡಿಕೆಯು ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇಕಡಾ 0.1ರಷ್ಟು ಇತ್ತು. ಸ್ವಾತಂತ್ರದ ಒಂದು ದಶಕದ ನಂತರ ಹೂಡಿಕೆಯ ಪ್ರಮಾಣವು 0.5ಕ್ಕೆ ಏರಿತು. ಈ ಏರಿಕೆಯು ವಿಜ್ಞಾನ ಕ್ಷೇತ್ರದ ತ್ವರಿತ ಬೆಳವಣಿಗೆಗೆ ಕಾರಣವಾಯಿತು. ವಿಜ್ಞಾನಿಗಳಾದ ಶಾಂತಿ ಸ್ವರೂಪ ಭಟ್ನಾಗರ್, ಹೋಮಿ ಜಹಾಂಗೀರ್ ಬಾಬಾ ಮತ್ತು ಪ್ರಶಾಂತ ಚಂದ್ರ ಮಹಾಲನೋಬಿಸ್ ಅವರು ವೈಜ್ಞಾನಿಕ ಸಂಸ್ಥೆಗಳನ್ನು ನಿರ್ಮಿಸುವುದರ ಜೊತೆಗೆ ನೀತಿಗಳನ್ನು ರೂಪಿಸಲು ಸಹಾಯ ಮಾಡಿದರು.
1947ರಲ್ಲಿ ಭಾರತವು ಸುಮಾರು 6 ಮಿಲಿಯನ್ ಟನ್ ಗೋದಿ ಉತ್ಪಾದಿಸುತ್ತಿತ್ತು. ಇದು ಒಟ್ಟು ಬೇಡಿಕೆಯನ್ನು ಪೂರೈಸಲು ಅಸಮರ್ಪಕವಾಗಿತ್ತು. ಇದಕ್ಕಾಗಿ ದೇಶವು ದೊಡ್ಡ ಪ್ರಮಾಣದ ಆಮದುಗಳನ್ನು ಅವಲಂಬಿಸಬೇಕಾಗಿತ್ತು. ಸ್ವಾತಂತ್ರದ ನಂತರದ ವರ್ಷಗಳಲ್ಲಿ ಭೂ ಸುಧಾರಣೆ, ರಸಗೊಬ್ಬರ ಉತ್ಪಾದನೆ, ನೀರಾವರಿ ಸೌಲಭ್ಯಗಳ ಸುಧಾರಣೆಯಂತಹ ತೀವ್ರ ಕೃಷಿ ಕಾರ್ಯಕ್ರಮಗಳಿಂದ 1964ರ ವೇಳೆಗೆ ಗೋಧಿ ಉತ್ಪಾದನೆಯು 12 ಮಿಲಿಯನ್ ಟನ್ಗೆ ಏರಿತು. ಇದರಿಂದ ಎಲ್ಲಾ ಭಾರತೀಯರಿಗೆ ಆಹಾರ ನೀಡಲು ಸಾಧ್ಯವಾಗದಿದ್ದರೂ ಕೃಷಿ ಸಂಶೋಧನೆಯಲ್ಲಿ ಆಶಾದಾಯಕ ಬೆಳವಣಿಗೆಯನ್ನುಂಟು ಮಾಡಿತ್ತು. ಹೊಸ ಹೊಸ ತಳಿಗಳ ಆವಿಷ್ಕಾರಕ್ಕೆ ನಾಂದಿಯಾಯಿತು. ಈ ಆವಿಷ್ಕಾರಗಳಿಂದ ಕೇವಲ ಗೋಧಿ ಬೆಳೆ ಅಲ್ಲದೆ ಇನ್ನಿತರ ಬೆಳೆಗಳಾದ ಜೋಳ, ಮೆಕ್ಕೆಜೋಳ, ಭತ್ತ, ರಾಗಿಯಂತಹ ಅಮೂಲ್ಯ ಬೆಳೆಗಳಲ್ಲೂ ಹೊಸ ತಳಿಗಳ ಆವಿಷ್ಕಾರಕ್ಕೆ ಕಾರಣವಾಯಿತು. ಹೊಸ ತಳಿಗಳಿಂದ ಕಡಿಮೆ ಅವಧಿಯಲ್ಲಿ ಅಧಿಕ ಇಳುವರಿ ದೊರೆಯುಂತಾಯಿತು. 1970ರ ವೇಳೆಗೆ ಗೋಧಿ ಉತ್ಪಾದನೆಯು 20 ದಶಲಕ್ಷ ಟನ್ ಮತ್ತು ಭತ್ತದ ಉತ್ಪಾದನೆಯು 42 ದಶಲಕ್ಷ ಟನ್ಗಳಿಗೆ ಏರಿತು. ಹೀಗೆ ಕ್ರಮೇಣವಾಗಿ ಪ್ರಾರಂಭವಾದ ಹಸಿರುಕ್ರಾಂತಿಯಿಂದ ಮುಂಬರುವ ವರ್ಷಗಳಲ್ಲಿ ಭಾರತವು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು.
ಸ್ವಾತಂತ್ರದ ಸಮಯದಲ್ಲಿ ಭಾರತವು ಆಹಾರ ಪದಾರ್ಥಗಳನ್ನಲ್ಲದೆ ಬೆಣ್ಣೆ ಮತ್ತು ತುಪ್ಪದಂತಹ ಹಾಲಿನ ಉತ್ಪನ್ನಗಳನ್ನೂ ಆಮದು ಮಾಡಿಕೊಳ್ಳುತ್ತಿತ್ತು. 1945ರಲ್ಲಿ ಭಾರತವು ಯುರೋಪಿಯನ್ ಡೈರಿ ಕಂಪೆನಿಗಳಿಂದ 500 ಟನ್ ಬೆಣ್ಣೆ ಮತ್ತು 3,000 ಟನ್ ಶಿಶು ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. 1949ರಲ್ಲಿ ವರ್ಗೀಸ್ ಕುರಿಯನ್ ಅವರ ಆಗಮನದಿಂದ ಹಾಲಿನ ಉತ್ಪನ್ನಗಳಲ್ಲಿ ಗಮನಾರ್ಹ ಅಭಿವೃದ್ಧಿಯಾಯಿತು. ಭಾರತದ ಎಮ್ಮೆ ಹಾಲಿನಿಂದ ಪುಡಿಯನ್ನು ಮಾಡುವ ತಂತ್ರಜ್ಞಾನ ಅಭಿವೃದ್ಧಿಯಾಯಿತು. ಇದರಿಂದ ಡೈರಿ ಉತ್ಪನ್ನಗಳ ಕ್ರಾಂತಿಯು ‘ಶ್ವೇತ ಕ್ರಾಂತಿ’ ಎಂದೇ ಜನಜನಿತವಾಯಿತು. 1950-51ರಲ್ಲಿ ಕೇವಲ 17 ದಶಲಕ್ಷ ಮೆಟ್ರಿಕ್ ಟನ್ನಷ್ಟಿದ್ದ ಹಾಲಿನ ಉತ್ಪಾದನೆಯು ಇಂದು 187 ದಶಲಕ್ಷ ಮೆಟ್ರಿಕ್ ಟನ್ಗೆ ಏರಿಕೆಯಾಗಿದೆ. ವಿಶ್ವದ ಅತಿ ಹೆಚ್ಚು ಹಾಲು ಉತ್ಪಾದನಾ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ದೇಶದ ಹವಾಮಾನಕ್ಕೆ ಹೊಂದಿಕೊಳ್ಳುವಂತಹ ಹೊಸ ತಳಿಗಳ ಜಾನುವಾರುಗಳನ್ನು ಸೃಷ್ಟಿಸಿದ್ದರಿಂದ ಹಾಲಿನ ಉತ್ಪನ್ನಗಳಲ್ಲಿ ಭಾರತವು ಸ್ವಾವಲಂಬನೆ ಗಳಿಸಲು ಸಾಧ್ಯವಾಯಿತು. 1960ರಲ್ಲಿ ವಿಕ್ರಂ ಸಾರಾಭಾಯಿಯವರು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿಯ(ಇಸ್ರೋ) ಅಧ್ಯಕ್ಷರಾದ ನಂತರ ಉಪಗ್ರಹ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವ ಪ್ರಾರಂಭವಾಯಿತು. ಸ್ವದೇಶಿ ಉಪಗ್ರಹಗಳ ತಯಾರಿಕೆಯಲ್ಲಿ ಭಾರತವು ಸ್ವಾವಲಂಬನೆ ಗಳಿಸಿತು. ಗ್ರಾಮೀಣ ಅಭಿವೃದ್ಧಿಗೆ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಬೇಕೆಂಬ ಅವರ ಆಸೆಗೆ ಪೂರಕವಾಗಿ ದೂರ ಸಂವೇದಿ ಉಪಗ್ರಹಗಳನ್ನು ನಿರ್ಮಿಸಲಾಯಿತು. ಇನ್ಸಾಟ್ ಮತ್ತು ಐ.ಎಸ್.ಆರ್. ಸರಣಿಯ ಉಪಗ್ರಹ ಉಡಾವಣೆಯೊಂದಿಗೆ ಬಾಹ್ಯಾಕಾಶ ತಂತ್ರಜ್ಞಾನದ ಶಾಂತಿಯುತ ಬಳಕೆಯನ್ನು ಭಾರತವು ವಿಶ್ವಕ್ಕೆ ತೋರಿಸಿಕೊಟ್ಟಿತು. ಇದರಿಂದ ಗ್ರಾಮೀಣ ಜನರೂ ತಂತ್ರಜ್ಞಾನ ಆಧಾರಿತ ಪರಿಕರಗಳನ್ನು ಬಳಸಲು ಸಾಧ್ಯವಾಯಿತು. ಭಾರತ ನಿರ್ಮಿತ ಕೃತಕ ಉಪಗ್ರಹಗಳ ಸೇವೆಯಿಂದ ಚಂಡಮಾರುತ ಮತ್ತು ಹವಾಮಾನ ಘಟನೆಗಳ ಮುನ್ಸೂಚನೆ ಗ್ರಹಿಸಲು ಸಾಧ್ಯವಾಯಿತು. ಇದರಿಂದ ಅನೇಕ ಅಮಾಯಕ ಜೀವಗಳನ್ನು ಉಳಿಸಲು ಸಾಧ್ಯವಾಯಿತು. 1980ರ ನಂತರ ವಿ-ಸ್ಯಾಟ್ ತಂತ್ರಜ್ಞಾನ ಬಳಕೆಯ ಮೂಲಕ ಬ್ಯಾಂಕಿಂಗ್ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಕ್ಷಿಪ್ರ ಕ್ರಾಂತಿಯಾಯಿತು. ಹಣದ ವಹಿವಾಟು ಹೆಚ್ಚತೊಡಗಿತು. ಒಂದು ಕಾಲಕ್ಕೆ ಔಷಧ ಕ್ಷೇತ್ರದಲ್ಲಿ ಬಿ.ಪಿ. (ಬ್ರಿಟಿಷ್ ಫಾರ್ಮಾಸ್ಯೂಟಿಕಲ್ಸ್) ಹೆಚ್ಚು ಪ್ರಚಲಿತದಲ್ಲಿತ್ತು. ಆದರೆ ಈಗ ಅಲ್ಲಿ ಐ.ಪಿ. (ಇಂಡಿಯನ್ ಫಾರ್ಮಾಸ್ಯೂಟಿಕಲ್ಸ್) ಸ್ಥಾನ ಪಡೆದಿದೆ. ಭಾರತವು ಇಂದು ವಿಶ್ವದ ಔಷಧಾಲಯ ಎನ್ನುವ ಹಂತಕ್ಕೆ ಬೆಳೆದಿದೆ. ಅದಕ್ಕೆ ಸ್ವಾತಂತ್ರ ನಂತರದ ಔಷಧೀಯ ಕ್ಷೇತ್ರದಲ್ಲಿನ ಮಹತ್ತರ ಬೆಳವಣಿಗೆಗಳು ಕಾರಣ. ಔಷಧ ಉದ್ಯಮದ ಮೇಲಿದ್ದ ಬಹುರಾಷ್ಟ್ರೀಯ ಸಂಸ್ಥೆಗಳ ಹಿಡಿತವನ್ನು ಮುರಿಯುವ ಸಲುವಾಗಿ ಕೇಂದ್ರ ಸರಕಾರವು 1954ರಲ್ಲಿ ಹಿಂದೂಸ್ತಾನ್ ಆ್ಯಂಟಿಬಯಾಟೆಕ್ ಲಿಮಿಟೆಡ್ನ್ನು ಸ್ಥಾಪಿಸಿತು. ನಂತರ ಸೋವಿಯತ್ ನೆರವಿನೊಂದಿಗೆ ಇಂಡಿಯನ್ ಡ್ರಗ್ಸ್ ಮತ್ತು ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ನ್ನು ಸ್ಥಾಪಿಸಿತು. ಇವುಗಳು ಮುಂದಿನ ವರ್ಷಗಳಲ್ಲಿ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಸೆಂಟ್ರಲ್ ಡ್ರಗ್ ರಿಸರ್ಚ್ ಇನ್ಸ್ಟಿಟ್ಯೂಟ್ನಂತಹ ರಾಷ್ಟ್ರೀಯ ಪ್ರಯೋಗಾಲಯಗಳ ಜೊತೆಗೆ ಅಗತ್ಯ ಔಷಧೀಯ ಜ್ಞಾನ ಮತ್ತು ಮಾನವ ಸಂಪನ್ಮೂಲ ಉತ್ಪಾದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಇದರಿಂದ ಭಾರತೀಯ ಔಷಧ ಉದ್ಯಮವು ತೀವ್ರವಾಗಿ ಬೆಳೆಯಲು ಸಾಧ್ಯವಾಯಿತು. 1970ರ ಪೆಟೆಂಟ್ ಕಾಯ್ದೆಯಿಂದ ಅನೇಕ ಔಷಧಿಗಳಿಗೆ ಪೆಟೆಂಟ್ ಪಡೆಯಲಾಯಿತು. ಪೆಟೆಂಟ್ನಿಂದಾಗಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಔಷಧಗಳಿಗೆ ಭಾರೀ ಬೇಡಿಕೆ ವ್ಯಕ್ತವಾಯಿತು. ಇಂದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಮಾತ್ರವಲ್ಲದೆ ಅಭಿವೃದ್ಧಿ ಹೊಂದಿದ ದೇಶಗಳಿಗೂ ಭಾರತವು ಕೈಗೆಟುಕುವ ಬೆಲೆಯಲ್ಲಿ ಔಷಧ ಮತ್ತು ಲಸಿಕೆಗಳನ್ನು ಪೂರೈಕೆ ಮಾಡುತ್ತಿದೆ. ದೇಶ ಸ್ವಾತಂತ್ರ ಗಳಿಸಿದ ಸಮಯದಲ್ಲಿ ಇತರ ಕ್ಷೇತ್ರಗಳಂತೆ ಟೆಲಿಕಾಂ ಕ್ಷೇತ್ರವೂ ಬಹುರಾಷ್ಟ್ರೀಯ ಸಂಸ್ಥೆಗಳ ಮೇಲೆ ಅವಲಂಬಿತವಾಗಿತ್ತು. ಅಧಿಕ ವೆಚ್ಚ ಹಾಗೂ ವಿದೇಶಿ ವಿನಿಮಯದ ಕೊರತೆಯಿಂದ ಹೊಸ ತಂತ್ರಜ್ಞಾನ ಬರಲು ಸಾಧ್ಯವಾಗಲೇ ಇಲ್ಲ. 1960ರಲ್ಲಿ ಟೆಲಿಕಾಂ ಸಂಶೋಧನಾ ಕೇಂದ್ರ(ಟಿ.ಆರ್.ಸಿ.)ವನ್ನು ಆರಂಭಿಸಲಾಯಿತು. ಈ ಕೇಂದ್ರದ ಮೊದಲ ಪ್ರಗತಿಯ ಭಾಗವಾಗಿ 1973ರಲ್ಲಿ 100 ಲೈನಿನ ಇಲೆಕ್ಟ್ರಾನಿಕ್ ಸ್ವಿಚ್ನ್ನು ಅಭಿವೃದ್ಧಿ ಪಡಿಸಲಾಯಿತು. ಅದೇ ಸಮಯದಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್(ಟಿ.ಐ.ಎಫ್.ಆರ್.)ನ ವಿಜ್ಞಾನಿಗಳು ಐ.ಐ.ಟಿ. ಬಾಂಬೆಯವರೊಂದಿಗೆ ಸೇನೆಗೆ ಡಿಜಿಟಲ್ ಆಟೋಮ್ಯಾಟೆಡ್ ಇಲೆಕ್ಟ್ರಾನಿಕ್ ಸ್ವಿಚ್ನ್ನು ಅಭಿವೃದ್ಧಿಪಡಿಸಿದರು. 1984ರಲ್ಲಿ ಸರಕಾರವು ಸ್ಯಾಮ್ ಪಿತ್ರೋಡಾ ನೇತೃತ್ವದಲ್ಲಿ ಟಿ.ಆರ್.ಸಿ. ಮತ್ತು ಟಿ.ಐ.ಎಫ್.ಆರ್ನ ವೈಜ್ಞಾನಿಕ ತಂಡಗಳನ್ನು ಒಟ್ಟುಗೂಡಿಸಿ ಟೆಲಿಮ್ಯಾಟಿಕ್ಸ್ ಅಭಿವೃದ್ಧಿ ಕೇಂದ್ರ(ಸಿ-ಡಾಟ್)ವನ್ನು ಸ್ಥಾಪಿಸಿತು. ಇದರಿಂದ ಟೆಲಿಕಾಂ ಕ್ಷೇತ್ರಕ್ಕೆ ಉತ್ತೇಜನ ದೊರೆಯಿತು. ಭಾರತೀಯರು ಅಭಿವೃದ್ಧ್ದಿಪಡಿಸಿದ ಗ್ರಾಮೀಣ ದೂರವಾಣಿ ವಿನಿಮಯದಿಂದ ಗ್ರಾಮೀಣ ಪ್ರದೇಶಗಳಿಗೆ ತ್ವರಿತವಾಗಿ ದೂರ ಸಂಪರ್ಕ ದೊರೆಯುವಂತಾಯಿತು. ನಂತರದ ವರ್ಷಗಳಲ್ಲಿ ಸಿ-ಡಾಟ್ ವಿನಿಮಯವು ಅನೇಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಜನಪ್ರಿಯವಾಯಿತು. ಸ್ವಾತಂತ್ರ ನಂತರದ ದಶಕಗಳಲ್ಲಿ ಭಾರತದಲ್ಲಿ ಡೇಟಾ ಸಂಸ್ಕರಣ ಉದ್ಯಮವು ಬಹುರಾಷ್ಟ್ರೀಯ ಕಂಪೆನಿಗಳಾದ ಐ.ಬಿ.ಎಂ. ಮತ್ತು ಟಿ.ಸಿ.ಎಲ್.ಗಳಿಂದ ಪ್ರಾಬಲ್ಯ ಹೊಂದಿತ್ತು. ಈ ಎರಡೂ ಸಂಸ್ಥೆಗಳ ಡೇಟಾ ಸಂಸ್ಕರಣಾ ಯಂತ್ರಗಳು ಸರಕಾರ, ಸಾರ್ವಜನಿಕ ವಲಯ, ಸಶಸ್ತ್ರ ಪಡೆಗಳು ಹಾಗೂ ಸಂಶೋಧನಾ ಸಂಸ್ಥೆಗಳಲ್ಲಿ ಬಳಕೆಯಲ್ಲಿದ್ದವು. ಈ ಕಂಪೆನಿಗಳು ಹಳೆಯ ಮತ್ತು ಬಿಸಾಡಿದ ಯಂತ್ರಗಳನ್ನು ಭಾರತಕ್ಕೆ ತಂದು ಹೆಚ್ಚಿನ ಬಾಡಿಗೆಗೆ ಗುತ್ತಿಗೆ ನೀಡಿದವು. ಹಳೆಯ ಯಂತ್ರಗಳಿಗೆ ಅಧಿಕ ಮೊತ್ತದ ಬಾಡಿಗೆ ನೀಡುವ ದುರವಸ್ಥೆ ಭಾರತದ್ದಾಗಿತ್ತು. ರಾಷ್ಟ್ರೀಯ ಮಾದರಿ ಸಮೀಕ್ಷೆ, ಪರಮಾಣು ರಿಯಾಕ್ಟರ್ ಅಭಿವೃದ್ಧಿ ಮತ್ತು ಇತರ ಸಂಶೋಧನೆಗಳಂತಹ ಕಾರ್ಯಗಳಿಗೆ ಆಧುನಿಕ ಕಂಪ್ಯೂಟರ್ಗಳ ಅಗತ್ಯವಿತ್ತು. ಬಹುರಾಷ್ಟ್ರೀಯ ಕಂಪೆನಿಗಳ ಏಕಸ್ವಾಮ್ಯತೆಯನ್ನು ಮುರಿದು ಸ್ಥಳೀಯ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ಗಳನ್ನು ಅಭಿವೃದ್ಧಿಪಡಿಸಲು 1970ರಲ್ಲಿ ಇಲೆಕ್ಟ್ರಾನಿಕ್ಸ್ ಇಲಾಖೆಯನ್ನು ಸ್ಥಾಪಿಸಲಾಯಿತು. ಇಲೆಕ್ಟ್ರಾನಿಕ್ಸ್ ಇಲಾಖೆ ಅಭಿವೃದ್ಧಿಪಡಿಸಿದ ಕೌಶಲ್ಯ ಮತ್ತು ಜ್ಞಾನವನ್ನು ಖಾಸಗಿ ಉದ್ಯಮಕ್ಕೆ ವರ್ಗಾಯಿಸಲಾಯಿತು. ಮಾಹಿತಿ ತಂತ್ರಜ್ಞಾನದ ಮೊದಲ ಅನ್ವಯಿಕದ ಭಾಗವಾಗಿ 1986ರಲ್ಲಿ ರೈಲ್ವೆಯಲ್ಲಿ ಪ್ರಯಾಣಿಕರ ಆಸನ ಕಾಯ್ದಿರಿಸುವಿಕೆ ವ್ಯವಸ್ಥೆ ಜಾರಿಗೆ ಬಂದಿತು. ಡಿಜಿಟಲ್ ಗ್ಯಾಜೆಟ್ನ ಅಗತ್ಯವಿಲ್ಲದೆ ರೈಲ್ವೆಯಲ್ಲಿ ಭ್ರಷ್ಟಾಚಾರವನ್ನು ಕಡಿತಗೊಳಿಸಿ ದಕ್ಷತೆಯನ್ನು ಮೂಡಿಸಿತು. ಈ ಯೋಜನೆಯು ಲಕ್ಷಾಂತರ ಜನ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟಿತು. ನಂತರದ ವರ್ಷಗಳಲ್ಲಿ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಕ್ಷೇತ್ರದಲ್ಲಿ ಭಾರತದ ಸಾಧನೆಯು ಇಡೀ ವಿಶ್ವವನ್ನೇ ಬೆರಗುಗೊಳಿಸಿತು.
ಸುಮಾರು 400 ವರ್ಷಗಳ ಬ್ರಿಟಿಷ್ ಆಳ್ವಿಕೆಯಲ್ಲಿ ದೇಶವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಿತ್ತು. ದೇಶ ಸ್ವಾತಂತ್ರಗೊಂಡ ನಂತರ ಆರ್ಥಿಕಾಭಿವೃದ್ಧ್ದಿಗೆ ಹೆಚ್ಚು ಒತ್ತು ನೀಡಬೇಕಾದ ಅಗತ್ಯವಿತ್ತು. ಅದಕ್ಕಾಗಿ ಯೋಜನಾ ವಿಧಾನದ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು 1951ರಿಂದ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದಿತು. ನೀರಾವರಿ, ಕೃಷಿ, ಶಕ್ತಿಯ ಪುನರ್ ಬಳಕೆ, ಸಾರಿಗೆ ಸಂಪರ್ಕ, ಕೈಗಾರಿಕೋದ್ಯಮ ಹೀಗೆ ವಿವಿಧ ವಲಯಗಳನ್ನು ಬಲಪಡಿಸುವ ಹಿನ್ನೆಲೆಯಲ್ಲಿ ನಿಗದಿತ ಪ್ರಮಾಣದ ಬಂಡವಾಳ ಹೂಡುವ ಮೂಲಕ ವಿವಿಧ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಶ್ರಮಿಸಲಾಯಿತು. ಅದರಂತೆ ಐದನೇ ಪಂಚವಾರ್ಷಿಕ ಯೋಜನೆಯಲ್ಲಿ ಮೀನು ಕೃಷಿಕರ ಅಭಿವೃದ್ಧಿ ಯೋಜನೆಗೆ ಒತ್ತು ನೀಡಲಾಯಿತು. ಇದರಿಂದ ಮತ್ಸೋದ್ಯಮದಲ್ಲಿ ಹೊಸ ಸಂಚಲನ ಶುರುವಾಯಿತು. ಮೀನಿನ ಹೊಸ ತಳಿಗಳ ಸೃಷ್ಟಿ, ಸಾಕಣೆ ಮತ್ತು ಮಾರುಕಟ್ಟೆ ವ್ಯವಸ್ಥೆಯಲ್ಲಿ ನವೀನ ತಂತ್ರಗಳನ್ನು ಬಳಸಿಕೊಳ್ಳಲು ಸಾಧ್ಯವಾಯಿತು. ಮೀನಿನ ಜೊತೆಗೆ ಇತರ ಸಮುದ್ರ ಉತ್ಪನ್ನಗಳಾದ ಸಿಗಡಿ, ಸಿಂಪಿ, ಕಡಲಕಳೆ, ಮುತ್ತುಗಳು ಮುಂತಾದವುಗಳ ಅಭಿವೃದ್ಧ್ದಿಗೆ ಹೆಚ್ಚು ಒತ್ತು ನೀಡಲಾಯಿತು. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಅಡಿಯಲ್ಲಿ ಮತ್ಸ ಮತ್ತು ಇನ್ನಿತರ ಕಡಲ ಉತ್ಪನ್ನಗಳ ಅಭಿವೃದ್ಧಿಗೆ ಹೊಸ ತಂತ್ರಜ್ಞಾನವನ್ನು ಬಳಸಲು ಸಾಧ್ಯವಾಯಿತು. ಭಾರತದ ಸ್ವಾತಂತ್ರದ ಸಮಯದಲ್ಲಿ ದೇಶದ ಸಾಕ್ಷರತಾ ಪ್ರಮಾಣ ಶೇ. 12 ಆಗಿತ್ತು. ಶೇ. 80 ಬಡತನವಿತ್ತು. ಇದರಿಂದ ದೇಶ ಆರ್ಥಿಕ ಮುಗ್ಗಟ್ಟನ್ನು ಅನುಭವಿಸುವಂತಾಗಿತ್ತು. ಈಗ ದೇಶದ ಆರ್ಥಿಕತೆ ರೂ. 7.43 ಲಕ್ಷಕೋಟಿಯಾಗಿದೆ. ಆರ್ಥಿಕತೆಯಲ್ಲಿ ದೇಶವು ಏಳನೇ ಸ್ಥಾನದಲ್ಲಿದೆ. ಇದಕ್ಕೆಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಯೇ ಕಾರಣ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಾರೆ. ಸಂವಿಧಾನದಲ್ಲಿ ಉಲ್ಲೇಖಿತವಾದ ವೈಜ್ಞಾನಿಕ ಮನೋಭಾವದ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಪ್ರಜೆಯ ಸುಧಾರಣೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವನ್ನು ಬಳಸಿಕೊಳ್ಳಲಾಯಿತು. ಮಾಹಿತಿ ತಂತ್ರಜ್ಞಾನ ಮತ್ತು ಸಾಫ್ಟ್ವೇರ್ ಕ್ಷೇತ್ರದಲ್ಲಂತೂ ದೇಶವು ಸ್ವಾತಂತ್ರಗಳಿಸಿದ ನಂತರ ಅಭಿವೃದ್ಧಿ ಪರ್ವ ಪ್ರಾರಂಭವಾಯಿತು ಎನ್ನಬಹುದು. ಸ್ವಾತಂತ್ರದ ನಂತರ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಬಂಡವಾಳ ಹೂಡುವಿಕೆ ಅಧಿಕವಾಗಿದ್ದರ ಫಲವಾಗಿ ಇಂದು ದೇಶವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಂಚೂಣಿಯಲ್ಲಿದೆ. ಇಡೀ ವಿಶ್ವಕ್ಕೆ ಅಗತ್ಯವಾದ ಸಾಫ್ಟ್ ವೇರ್ ಜ್ಞಾನವನ್ನು ನೀಡಲು ಭಾರತ ಸಜ್ಜಾಗಿದೆ. ದೇಶವು ಇಂದು ವಿದ್ಯುತ್ ಕ್ಷೇತ್ರದಲ್ಲೂ ಸ್ವಾವಲಂಬನೆ ಸಾಧಿಸಿದೆ. ಅನೇಕ ಶಾಖೋತ್ಪನ್ನ ಕೇಂದ್ರಗಳು, ಅಣೆಕಟ್ಟುಗಳು, ಪವನ ವಿದ್ಯುತ್ ಕೇಂದ್ರಗಳು, ಸೋಲಾರ್ ವಿದ್ಯುತ್ ಕೇಂದ್ರಗಳು ಅಸ್ತಿತ್ವಕ್ಕೆ ಬಂದಿದ್ದು ಅವುಗಳ ಮೂಲಕ ದೇಶಕ್ಕೆ ಅಗತ್ಯವಿರುವ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅತಿಯಾದ ಅವಲಂಬನೆ ತಪ್ಪಿಸುವ ಸಲುವಾಗಿ ದೇಶೀಯವಾಗಿ ಬಯೋಫ್ಯೂಯಲ್ ಉತ್ಪಾದನೆಯತ್ತ ಚಿತ್ತ ಹರಿಸಿದೆ. ಇದರ ಭಾಗವಾಗಿ ಅಲ್ಲಲ್ಲಿ ಬಯೋಫ್ಯೂಯಲ್ ಉತ್ಪಾದನಾ ಕಾರ್ಯ ಪ್ರಾರಂಭವಾಗಿದೆ ಮುಂದಿನ ವರ್ಷಗಳಲ್ಲಿ ಇದು ಅಭಿವೃದ್ಧಿಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇಂದು ದೇಶವು ಪ್ರತಿ ಕ್ಷೇತ್ರದಲ್ಲೂ ಅಭಿವೃದ್ಧಿ ಸಾಧಿಸಿದೆ ಮತ್ತು ಸಾಧಿಸುತ್ತಿದೆ. ಇದಕ್ಕೆಲ್ಲಾ ಕಾರಣ ವಿಜ್ಞಾನ ಮತ್ತು ತಂತ್ರಜ್ಞಾನದ ಅನ್ವಯಿಕ ಬಳಕೆ ಎನ್ನುವುದನ್ನು ಮರೆಯುವಂತಿಲ್ಲ. ಸಾಗರದ ಆಳದಿಂದ ಬಾಹ್ಯಾಕಾಶದವರೆಗಿನ ಎಲ್ಲಾ ಕ್ಷೇತ್ರಗಳಲ್ಲೂ ಭಾರತವು ಅದ್ವಿತೀಯ ಸಾಧನೆಗೈಯುತ್ತಿದೆ. ಕ್ವಾಟಂ ಕಂಪ್ಯೂಟಿಂಗ್ನಿಂದ ಆಧುನಿಕ ಕೃತಕ ಬುದ್ಧಿಮತ್ತೆವರೆಗೂ, 2ಜಿ ಯಿಂದ 5ಜಿ ವರೆಗೂ ಸಂಪರ್ಕ ಜಾಲ ಯೋಜನೆ ವಿಸ್ತರಿಸಿದೆ. ಒಂದು ಕಾಲಕ್ಕೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಹಿಂದುಳಿದಿದ್ದ ನಾವು ಇಂದು ಚಂದ್ರನ ನೆಲದ ಮೇಲೆ ಭಾರತದ ತ್ರಿವರ್ಣ ಧ್ವಜ ನೆಡುವ ಹಂತಕ್ಕೆ ಬೆಳೆದುನಿಂತಿದ್ದೇವೆ. ಇದು ವಿಜ್ಞಾನ ಮತ್ತು ತಂತ್ರಜ್ಞಾನದ ಹೆಮ್ಮೆ ಅಲ್ಲವೇ? ಸಾಧಿಸಿದುದು ಅಲ್ಪವಾದರೂ ಸಾಧಿಸಬೇಕಾದುದು ಅಗಾಧವಾಗಿದೆ. ಮುಂಬರುವ ವರ್ಷಗಳಲ್ಲಿ ಸೂಕ್ತ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿಗಳಿಂದ ಇನ್ನಷ್ಟು ಸಾಧನೆಗೈಯುವ ಪಣ ತೊಡೋಣ.