ಯುಎಇಯಲ್ಲಿ ಮುಂದಿನ ವರ್ಷ ಪ್ರಥಮ ಜಾಗತಿಕ ಮಾಧ್ಯಮ ಸಮ್ಮೇಳನ
ಅಬುಧಾಬಿ, ಆ.15: ವ್ಯೆಹಾತ್ಮಕ ಸಹಕಾರ ಸಂಬಂಧಗಳ ಬಗ್ಗೆ ಸಮಾಲೋಚಿಸುವ ಉದ್ದೇಶದ ಪ್ರಪ್ರಥಮ ಜಾಗತಿಕ ಮಾಧ್ಯಮ ಸಮಾವೇಶ ‘ಕಾಂಗ್ರೆಸ್ ಫಾರ್ ಮೀಡಿಯಾ 2022’ ಮುಂದಿನ ವರ್ಷ ಯುಎಇಯಲ್ಲಿ ನಡೆಯಲಿದೆ ಎಂದು ಅಲ್ಲಿನ ಸರಕಾರಿ ಸುದ್ಧಿಸಂಸ್ಥೆ ‘ವ್ಯಾಮ್’ ವರದಿ ಮಾಡಿದೆ.
ಉಪಯುಕ್ತ ಮತ್ತು ವಿಶ್ವಾಸಾರ್ಹ ವಿಷಯಗಳನ್ನು ಒದಗಿಸುವ ಮೂಲಕ ಮಾನವಕುಲಕ್ಕೆ ಸೇವೆ ಸಲ್ಲಿಸುವುದು, ಮತ್ತು ಸಮುದಾಯಗಳಿಗೆ ನೆರವಾಗುವ ಸಹಕಾರ ಸಂಬಂಧವನ್ನು ಮಾಧ್ಯಮಗಳ ನಡುವೆ ಸ್ಥಾಪಿಸುವ ಉದ್ದೇಶದ ಸಮಾವೇಶ ಇದಾಗಿದೆ ಎಂದು ವರದಿ ಹೇಳಿದೆ. ಅಬುಧಾಬಿಯಲ್ಲಿ ಮುಂದಿನ ವರ್ಷದ ನವೆಂಬರ್ 15ರಿಂದ 17ರವರೆಗೆ ನಡೆಯಲಿರುವ ಈ ಸಮ್ಮೇಳನದಲ್ಲಿ ಮಾಧ್ಯಮ ವಿಚಾರಸಂಕಿರಣ ಮತ್ತು ವಸ್ತುಪ್ರದರ್ಶನ ಇರುತ್ತದೆ.
ವ್ಯಾಮ್ ಹಾಗೂ ಅಬುಧಾಬಿ ನ್ಯಾಷನಲ್ ಎಕ್ಸಿಬಿಷನ್ಸ್ ಕಂಪೆನಿ ಜಂಟಿಯಾಗಿ ಈ ಸಮ್ಮೇಳನ ಆಯೋಜಿಸಲಿದೆ. ಮಾಧ್ಯಮ ಸಂವಹನ, ಕೃತಕ ಬುದ್ಧಿಮತ್ತೆ, ಪ್ರಾದೇಶಿಕ ಮಾಧ್ಯಮ ಕ್ಷೇತ್ರದಲ್ಲಿ ಆಗಿರುವ ಹೊಸ ಬದಲಾವಣೆ, ನಾವೀನ್ಯತೆ ಮುಂತಾದ ಪ್ರಮುಖ ವಿಷಯಗಳ ಕುರಿತು ಸಂವಾದದ ಜೊತೆಗೆ, ಪತ್ರಿಕೋದ್ಯಮ, ಸಾಮಾಜಿಕ ಮಾಧ್ಯಮ, ಸಾಂಪ್ರದಾಯಿಕ ಮಾಧ್ಯಮಗಳ ಬಗ್ಗೆ ವಿಶೇಷ ಗೋಷ್ಟಿಗಳೂ ನಡೆಯಲಿವೆ ಎಂದು ವರದಿ ಹೇಳಿದೆ.