ನಾಮಕರಣ, ಮರುನಾಮಕರಣದ ಸುತ್ತಮುತ್ತ
ಒಂದು ಭೂ ಪ್ರದೇಶದ ಇತಿಹಾಸಕ್ಕೆ ಜಾತಿ, ಮತ, ಭಾಷೆ ಭೇದವಿಲ್ಲದ ಎಲ್ಲರ ಕೊಡುಗೆಯೂ ಇರುತ್ತದೆ. ಕನ್ನಡ ನಾಡಿಗೆ ಚಾಲುಕ್ಯ, ರಾಷ್ಟ್ರ ಕೂಟ, ಕದಂಬರಂತೆ ಬಹಮನಿ ಸುಲ್ತಾನರ, ಬಿಜಾಪುರದ ಆದಿಲ್‌ಶಾಹಿಗಳ ಕೊಡುಗೆಯೂ ಇದೆ. ಇತಿಹಾಸವನ್ನು ಕೋಮು ಕನ್ನಡಕದಲ್ಲಿ ನೋಡುವವರಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ.
ಭಾರತದಲ್ಲಿ ಈಗ ನಡೆದಿರುವ ನಾಮಕರಣ, ಮರು ನಾಮಕರಣಗಳ ಹಿಂದೆ ಮುಖ್ಯವಾಗಿ ಎರಡು ಅಂಶಗಳು ಕೆಲಸ ಮಾಡುತ್ತಿವೆ.
ಒಂದು, ಪ್ರಭುತ್ವದ ಅಧಿಕಾರ ಸೂತ್ರ ಹಿಡಿದವರು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ವಿನಾಕಾರಣ ಇಂತಹ ವಿವಾದಗಳನ್ನು ಸೃಷ್ಟಿಸುತ್ತಾರೆ. ಇನ್ನೊಂದು, ಅವಕಾಶ ವಂಚಿತರಾದ ರಾಜಕಾರಣಿಗಳು ಹತಾಶೆಯಿಂದ ಇಂತಹ ಕಿತಾಪತಿ ಮಾಡುತ್ತಾರೆ.
ಈಗ ಇಂತಹ ಎರಡೂ ಅವಾಂತರಗಳು ನಡೆದಿವೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಜೀವ್ ಗಾಂಧಿ ಖೇಲ್ ರತ್ನ ಎಂಬ ಹೆಸರಿನ ಪ್ರಶಸ್ತಿಯನ್ನು ಇನ್ನು ಮುಂದೆ ಮೇಜರ್ ಧ್ಯಾನಚಂದ್ ಖೇಲ್ ರತ್ನ ಎಂದು ಬದಲಿಸಲು ಹೊರಟಿದೆ. ಇದು ಸರಕಾರ ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ಜನರ ಗಮನ ಬೇರೆಡೆ ಸೆಳೆಯಲು ನಡೆಸಿರುವ ಮಸಲತ್ತಲ್ಲದೇ ಬೇರೇನೂ ಅಲ್ಲ.
ಇನ್ನು ಕರ್ನಾಟಕದಲ್ಲಿ ‘ಇಂದಿರಾ ಕ್ಯಾಂಟೀನ್’ ಹೆಸರನ್ನು ಬದಲಿಸಿ ‘ಅನ್ನಪೂರ್ಣೇಶ್ವರಿ ಕ್ಯಾಂಟೀನ್’ ಎಂದು ಹೆಸರಿಡಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಮ್ಮದೇ ಪಕ್ಷದ ಸರಕಾರವನ್ನು ಆಗ್ರಹಿಸಿರುವುದು ಹತಾಶೆಯಲ್ಲದೇ ಬೇರೇನೂ ಅಲ್ಲ. ಹೇಗೇಗೋ ಸಿಕ್ಕಿದ್ದ ಮಂತ್ರಿ ಕುರ್ಚಿಯನ್ನು ಕಳೆದುಕೊಂಡ ರವಿ ತಮ್ಮ ಪಕ್ಷದ ರಾಷ್ಟ್ರೀಯ ಹುದ್ದೆ ದೊರೆತಿದ್ದರೂ ಅದು ಅವರ ಆಯ್ಕೆಯಾಗಿರಲಿಲ್ಲ. ಪಕ್ಷದ ಹೇರಿಕೆಯಾಗಿತ್ತು. ಆದರೂ ಅದನ್ನು ಒಪ್ಪಿಕೊಂಡಿದ್ದ ರವಿಗೆ ರಾಜ್ಯದಲ್ಲಿ ಮುಖ್ಯಮಂತ್ರಿಯ ಬದಲಾವಣೆಯಾದಾಗ ಆ ಕುರ್ಚಿಯ ಮೇಲೆ ಕುಳಿತುಕೊಳ್ಳುವ ಆಸೆ ಗರಿಗೆದರಿತ್ತು. ಆದರೆ, ಯಡಿಯೂರಪ್ಪನವರ ಬದಲಿಗೆ ಬಸವರಾಜ ಬೊಮ್ಮಾಯಿ ಯಾವಾಗ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರೋ ಆವಾಗಿನಿಂದ ತೀವ್ರ ಹತಾಶರಾದ ರವಿ ಇಂತಹ ಹತಾಶೆಯಿಂದ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವ ಕಲ್ಲನ್ನು ಜೇನು ಗೂಡಿಗೆ ಎಸೆದರು. ಆದರೆ, ಅಧಿಕಾರದ ಗೂಡಿಗೆ ಅಂಟಿಕೊಂಡ ಜೇನ್ನೊಣಗಳು ಹಾರಿ ಹೋಗಲಿಲ್ಲ. ಇದರಿಂದ ಇನ್ನಷ್ಟು ಹತಾಶರಾದ ರವಿ ಇಂದಿರಾ ಬಾರ್, ನೆಹರೂ ಹುಕ್ಕಾ ಎಂದೆಲ್ಲ ಅರಚಾಡಿ ತಾನು ರಾಷ್ಟ್ರೀಯ ಪದಾಧಿಕಾರಿ ಹುದ್ದೆಗೆ ಯೋಗ್ಯನಲ್ಲ ಎಂದು ತೋರಿಸಿಕೊಟ್ಟರು.
ಹತಾಶ ರಾಜಕಾರಣಿಯ ಇನ್ನೊಂದು ಕೂಗು ಕಲ್ಯಾಣ ಕರ್ನಾಟಕದಲ್ಲಿ ಕೇಳಿ ಬಂದಿದೆ. ಕಲಬುರಗಿ ಜಿಲ್ಲೆಯ ಅಫ್ಝಲಪುರ ಹೆಸರನ್ನು ಬದಲಿಸಿ ಲಕ್ಷ್ಮೀಪುರ ಎಂದು ಮರು ನಾಮಕರಣ ಮಾಡಲು ಮಾಜಿ ಶಾಸಕ, ಹಾಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಬಹಿರಂಗವಾಗಿ ಹೇಳಿದ್ದಾರೆ. ಈವರೆಗೆ ಇಂತಹ ಬೇಡಿಕೆಯನ್ನು ಯಾರೂ ಇಟ್ಟಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆಯವರ ಮೇಲಿನ ಕೋಪದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತ ಮಾಲೀಕಯ್ಯ ಅವರ ಈ ಹೇಳಿಕೆಯ ಹಿಂದೆ ಹತಾಶೆಗಿಂತ ಆರೆಸ್ಸೆಸ್‌ಗೆ ಹತ್ತಿರವಾಗಿ ಸರಕಾರದ ಯಾವುದಾದರೂ ಹುದ್ದೆಯನ್ನು ಪಡೆಯಬೇಕೆಂಬ ಹಂಬಲವಿರುವುದು ಯಾರಿಗಾದರೂ ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದರೆ, ಸೂಫಿ ಸಂತರು, ಶರಣರು ಓಡಾಡಿರುವ ಕಲಬುರಗಿ ಜಿಲ್ಲೆಯ ಜನರು ಇದರ ಬಗ್ಗೆ ತೆಲೆ ಕೆಡಿಸಿಕೊಂಡಿಲ್ಲ.
ಯಾವುದೇ ನಾಮಕರಣ ಅಥವಾ ಮರುನಾಮಕರಣದಿಂದ ದೇಶದ ಇಲ್ಲವೇ ನಾಡಿನ ಅಭಿವೃದ್ಧಿ ಆಗುವುದಿಲ್ಲ. ಭಾರತೀಯ ಹಾಕಿ ಆಟಗಾರರು ಒಲಿಂಪಿಕ್ಸ್‌ನಲ್ಲಿ ಮಾಡಿದ ಸಾಧನೆಯ ಸನ್ನಿವೇಶವನ್ನು ಬಳಸಿಕೊಂಡು ಭಾರತದ ಹಾಕಿಯ ದಂತ ಕಥೆ ಧ್ಯಾನಚಂದ್ ಹೆಸರನ್ನು ಆಳುವ ಪಕ್ಷ ನೆನಪಿಸಿಕೊಂಡು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವುದಕ್ಕೆ ಯಾರದೂ ತಕರಾರಿಲ್ಲ. ಆದರೆ, ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಶಸ್ತಿಯೊಂದರ ಹೆಸರನ್ನು ಬದಲಿಸಿ ಅದಕ್ಕೆ ಧ್ಯಾನಚಂದ್ ಹೆಸರಿಡುವ ಉದ್ದೇಶ ಪ್ರಾಮಾಣಿಕವಾದುದಲ್ಲ. ಹಾಕಿ ಮಾಂತ್ರಿಕ ಧ್ಯಾನಚಂದ್ ಮೇಲೆ ಅಷ್ಟೊಂದು ಅಭಿಮಾನವಿದ್ದರೆ ಭಾರತೀಯ ಹಾಕಿಗೆ ಕಾಯಕಲ್ಪ ನೀಡುವ ಹೊಸ ಯೋಜನೆಗಳನ್ನು ರೂಪಿಸಲು ಕ್ರಮ ಕೈಗೊಳ್ಳಬೇಕಾಗಿತ್ತು. ಅಲ್ಲದೆ ಧ್ಯಾನಚಂದ್ ಹೆಸರಿನ ಪ್ರಶಸ್ತಿಯನ್ನು ಕೇಂದ್ರ ಸರಕಾರ ಈಗಾಗಲೇ ನೀಡುತ್ತಿರುವುದರಿಂದ ಅವರ ಹೆಸರಿನ ಇನ್ನೊಂದು ಪ್ರಶಸ್ತಿಯನ್ನು ನೀಡಲು ಮುಂದಾಗಿರುವುದರ ಒಳ ಉದ್ದೇಶವೇನು ಎಂಬುದು ಜನರಿಗೆ ಗೊತ್ತಾಗಬೇಕು.
ಇಂದಿರಾ ಗಾಂಧಿ ಈ ದೇಶದ ಪ್ರಧಾನಿಯಾಗಿ ಎರಡು ದಶಕಗಳ ಕಾಲ ದಾಖಲೆಯ ಸೇವೆ ಸಲ್ಲಿಸಿದವರು. ಭಾರತಕ್ಕಾಗಿ ಬಲಿದಾನ ಮಾಡಿದವರು. ಅಟಲ್ ಬಿಹಾರಿ ವಾಜಪೇಯಿ ಅವರಂತಹ ಬಿಜೆಪಿಯ ಹಿರಿಯ ನಾಯಕರು ಇಂದಿರಾರನ್ನು ಗೌರವಿಸುತ್ತಿದ್ದರು. ಎಪ್ಪತ್ತರ ದಶಕದಲ್ಲಿ ಬಾಂಗ್ಲಾದೇಶ ಸಮರದಲ್ಲಿ ಭಾರತ ಜಯಶಾಲಿಯಾದಾಗ ಪಾಕ್ ಸೇನೆಯನ್ನು ನಮ್ಮ ಯೋಧರು ಹಿಮ್ಮೆಟ್ಟಿಸಿದಾಗ ಸಂಸತ್ತಿನಲ್ಲಿ ಅಭಿಮಾನದಿಂದ ಅಭಿನಂದಿಸಿದ ಅಟಲ್‌ಜಿ ಇಂದಿರಾ ಗಾಂಧಿಯವರನ್ನು ದುರ್ಗಾಮಾತೆಗೆ ಹೋಲಿಸಿ ವರ್ಣಿಸಿದ್ದರು. ಇದು ರಾಜಕೀಯ ಭಿನ್ನಾಭಿಪ್ರಾಯದ ನಡುವೆಯೂ ಎದುರಾಳಿಯ ಸಾಧನೆ ಮತ್ತು ಸೇವೆಯನ್ನು ಮೆಚ್ಚಿ ಕೊಳ್ಳುವ ಮುತ್ಸದ್ದಿತನ. ಸಿ.ಟಿ. ರವಿ ಅಂತಹವರಿಂದ ಇಂತಹ ಮುತ್ಸದ್ದಿತನ ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ. ಇದರಾಚೆಯೂ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಏಕಕಾಲದಲ್ಲಿ ವಾಜಪೇಯಿ, ತೊಗಾಡಿಯಾ, ದತ್ತಾತ್ರೇಯ ಹೊಸಬಾಳೆ, ಸಿ.ಟಿ.ರವಿ ಅಂತಹ ಅಸ್ತ್ರಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸುತ್ತದೆ ಎಂಬ ಆರೋಪದಲ್ಲಿ ಹುರುಳಿಲ್ಲದಿಲ್ಲ.
ಯಾವುದೇ ಪ್ರಶಸ್ತಿಗೆ ರಾಜಕಾರಣಿಗಳ ಹೆಸರು ಇಡುವುದು ಬೇಡ ಎನ್ನುವುದು ಬಿಜೆಪಿ ಸರಕಾರದ ಇಚ್ಚೆಯಾಗಿದ್ದರೆ, ಅಹಮದಾಬಾದ್‌ನಲ್ಲಿರುವ ಮೊಟೇರಾ ಸ್ಟೇಡಿಯಂಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೆಸರನ್ನಿಟ್ಟಿರುವುದರ ಔಚಿತ್ಯವೇನು? ಈ ಸ್ಟೇಡಿಯಂಗೆ ಮೋದಿಯವರ ಬದಲಾಗಿ ಮಹತ್ಸಾಧನೆ ಮಾಡಿದ ಕ್ರೀಡಾಪಟುವೊಬ್ಬರ ಹೆಸರನ್ನು ಇಡಬಹುದಾಗಿತ್ತಲ್ಲ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.
ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕಡು ಬಡವರ ಹಸಿವು ನೀಗಿಸಲು ‘ಅನ್ನ ಭಾಗ್ಯ’ ಮತ್ತು ‘ಇಂದಿರಾ ಕ್ಯಾಂಟೀನ್’ ಯೋಜನೆಗಳನ್ನು ಜಾರಿಗೆ ತಂದರು. ಆಗ ಹೊಟ್ಟೆ ತುಂಬಿದವರು ಮಾತ್ರವಲ್ಲ ಬಡವರ ಬೆವರು ಮತ್ತು ರಕ್ತ ಹೀರಿ ತಮ್ಮ ತಿಜೋರಿ ತುಂಬಿಕೊಳ್ಳುವವರು ಇದರ ಬಗ್ಗೆ ಅಪಸ್ವರ ತೆಗೆದರು. ಕಡಿಮೆ ದರದ ಊಟ ಸಿಕ್ಕರೆ ಬಡವರು ಸೋಮಾರಿಗಳಾಗುತ್ತಾರೆ ಎಂದು ಹುಯಿಲೆಬ್ಬಿಸಿದರು. ಉಳ್ಳವರ ಈ ಅಸಹನೆಯ ಹಿಂದೆ ತಮಗೆ ಕಡಿಮೆ ಕೂಲಿಗೆ ಕೂಲಿಗಾರರು ಸಿಗುವುದಿಲ್ಲ ಎಂಬ ಅಸಹನೆ ಇತ್ತು. ಅದೇನೇ ಇರಲಿ ಈಗ ಅದರ ಹೆಸರಿನ ಬಗ್ಗೆ ಬಿಜೆಪಿಯ ಹತಾಶ ನಾಯಕರು ವಿವಾದ ಉಂಟು ಮಾಡುತ್ತಿರುವುದು ಸರಿಯಲ್ಲ.
ಹೀಗೆ ಹೆಸರು ಬದಲಿಸಲು ಹೊರಟವರಿಗೆ ಇತಿಹಾಸದ ಅರಿವು ಇಲ್ಲ. ಕಬ್ಬನ್ ಅಂದರೆ ಯಾರೆಂದು ಗೊತ್ತಿಲ್ಲ. ಗೊತ್ತು ಮಾಡಿಕೊಳ್ಳುವ ಆಸಕ್ತಿಯೂ ಇಲ್ಲ. ಕಳೆದ ಶತಮಾನದಲ್ಲಿ ಇಂಗ್ಲೆಂಡ್‌ನಿಂದ ಬೆಂಗಳೂರಿಗೆ ಬಂದ ಕಬ್ಬನ್ ಮೈಸೂರು ಸಂಸ್ಥಾನದಲ್ಲಿ ಕಮಿಷನರ್ ಆಗಿ ಅರವತ್ತು ವರ್ಷ ಸೇವೆ ಸಲ್ಲಿಸಿದರು. ಈತ ಮತ್ತೆ ವಾಪಸ್ ತನ್ನ ದೇಶಕ್ಕೆ ಹೋಗಲೇ ಇಲ್ಲ. ತನ್ನ ಅರವತ್ತು ವರ್ಷಗಳ ಸೇವಾವಧಿಯಲ್ಲಿ ಕಬ್ಬನ್ ಒಂದು ದಿನವೂ ರಜೆಯನ್ನು ತೆಗೆದುಕೊಳ್ಳಲಿಲ್ಲ. ಕಬ್ಬನ್ ಅಧಿಕಾರಾವಧಿಯಲ್ಲಿ ಮೈಸೂರು ಸಂಸ್ಥಾನದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡಿದ್ದು, ಮಾತ್ರವಲ್ಲ ಗ್ರಾಮೀಣ ಪ್ರದೇಶದ ರಸ್ತೆ, ಸೇತುವೆಗಳನ್ನು ನಿರ್ಮಿಸಿದರು. ಈಗ ಬೆಂಗಳೂರಿಗೆ ಬರುವ ಎಲ್ಲರ ಮೆಚ್ಚಿನ ತಾಣವಾದ ಕಬ್ಬನ್ ಪಾರ್ಕ್‌ನ್ನು ಅಭಿವೃದ್ಧಿ ಪಡಿಸಿದ್ದು ಈ ಕಬ್ಬನ್. ರಾಜ್ಯ ಸಚಿವಾಲಯದ ಕಾರ್ಯಶೈಲಿ ಈಗಲೂ ಕಬ್ಬನ್ ರೂಪಿಸಿದ ಮಾದರಿಯಲ್ಲೇ ನಡೆದಿದೆ. ರಾಜ್ಯದ ಆಡಳಿತ ಭಾಷೆ ಕನ್ನಡದಲ್ಲಿ ನಡೆಯಬೇಕು ಎಂದು ಕಬ್ಬನ್ ಆಗಲೇ ಕ್ರಮ ಕೈಗೊಂಡಿದ್ದರು.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್ ಎಂಬ ಬಹು ವಿಸ್ತಾರವಾದ ಉದ್ಯಾನವಿದೆ. ಅದರ ಹೆಸರನ್ನು ಬದಲಿಸಬೇಕೆಂಬ ಅಪಸ್ವರ ಆಗಾಗ ಬರುತ್ತಲೇ ಇದೆ.
ಯಾವುದೇ ಒಂದು ಹೆಸರಿನ ಹಿಂದೆ ಒಂದು ಇತಿಹಾಸ ಇರುತ್ತದೆ. ಇತಿಹಾಸವನ್ನು ಅಳಿಸಿ ಹಾಕುವುದು ಅವಿವೇಕತನದ ಪರಮಾವಧಿ. ಇಂತಹ ಅವಿವೇಕತನ ಎಲ್ಲ ಕಾಲದಲ್ಲೂ ನಡೆದಿದೆೆ. ಬೆಂಗಳೂರು ಸಮೀಪದ ನಂದಿ ಬೆಟ್ಟದಲ್ಲಿ ಕಬ್ಬನ್ ಹೌಸ್ ಎಂಬ ಕಟ್ಟಡವಿತ್ತು.ಅದನ್ನು ಏಕಾಏಕಿ ಬದಲಿಸಿ ಜವಾಹರ್ ಭವನ ಮಾಡಲಾಯಿತು. ಜವಾಹರಲಾಲ್ ನೆಹರೂ ಅವರನ್ನು ಗೌರವಿಸಬಾರದೆಂದಲ್ಲ. ಅಸ್ತಿತ್ವದಲ್ಲಿರುವ ಕಟ್ಟಡದ ಹೆಸರನ್ನು ಬದಲಿಸದೇ ಜವಾಹರಲಾಲ್ ಹೆಸರಿನಲ್ಲಿ ಇನ್ನೊಂದು ಭವನ ನಿರ್ಮಿಸಿದ್ದರೆ ಉಪಯುಕ್ತವಾಗುತ್ತಿತ್ತು.
ಬೆಂಗಳೂರಿನಲ್ಲಿ ಇಂತಹ ಇನ್ನೊಂದು ಅವಾಂತರ ನಡೆದಿದೆ. ಅಲ್ಲಿನ ಮಹಾನಗರ ಪಾಲಿಕೆ ಕೆಲ ವರ್ಷಗಳ ಹಿಂದೆ ಮಹಾನಗರ ಪಾಲಿಕೆ ಬಳಿ ಇರುವ ಹಡ್ಸನ್ ಹೆಸರನ್ನು ತೆಗೆದು ಹಾಕಿ ಕಿತ್ತೂರು ಚೆನ್ನಮ್ಮ ಹೆಸರನ್ನು ಇಡಲಾಯಿತು. ಕಿತ್ತೂರು ರಾಣಿ ಚೆನ್ನಮ್ಮ ನಾಡಿನ ಗೌರವ ಕಾಪಾಡಿದ, ಸ್ವಾಭಿಮಾನ ಎತ್ತಿ ಹಿಡಿದ ಮಹಾತಾಯಿ. ಅವರ ಹೆಸರಿನ ಬಗ್ಗೆ ಯಾರ ಅಭ್ಯಂತರವೂ ಇಲ್ಲ. ಆದರೆ ಅವರ ಹೆಸರಿನ ಭವ್ಯವಾದ ಸ್ಮಾರಕವನ್ನು ಬೆಂಗಳೂರಿನಲ್ಲಿ ನಿರ್ಮಿಸಲಿ ಆದರೆ ಹಡ್ಸನ್ ಹೆಸರನ್ನು ತೆಗೆದು ಹಾಕಿ ಮರು ನಾಮಕರಣ ಮಾಡಿದ್ದು ಸರಿಯಲ್ಲ. ಕರ್ನಾಟಕಕ್ಕೆ ಅದರಲ್ಲೂ ಬೆಂಗಳೂರಿಗೆ ಬ್ರಿಟಿಷ್ ಅಧಿಕಾರಿ ಹಡ್ಸನ್ ನೀಡಿದ ಕೊಡುಗೆ ಇಂದಿನ ಪೀಳಿಗೆಗೆ ಗೊತ್ತಿಲ್ಲ. ಆ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ಕನ್ನಡಕ್ಕಾಗಿ ಡೆಪ್ಯುಟಿ ಚೆನ್ನಬಸಪ್ಪನವರು ಮಾಡಿರುವ ಕೆಲಸವನ್ನೇ ಹಡ್ಸನ್ ಮೈಸೂರು ಸಂಸ್ಥಾನದಲ್ಲಿ ಮಾಡಿದರು.
ಇಂಗ್ಲೆಂಡ್‌ನಿಂದ ಬೆಂಗಳೂರಿಗೆ ಬಂದಾಗ ಹಡ್ಸನ್‌ಗೆ ಕನ್ನಡದ ಒಂದೇ ಒಂದು ಅಕ್ಷರವೂ ಬರುತ್ತಿರಲಿಲ್ಲ. ಆತ ಮೂವತ್ತು ದಿನಗಳಲ್ಲಿ ಕನ್ನಡವನ್ನು ಕಲಿತು ದಾಖಲೆಯನ್ನು ನಿರ್ಮಿಸಿದ. ಆಗ ರಾಜ್ಯದಲ್ಲಿ ಒಂದೇ ಒಂದು ಕನ್ನಡ ಶಾಲೆ ಇಲ್ಲದಿದ್ದಾಗ ತನ್ನ ಸಂಬಳದ ಹಣದಲ್ಲಿ ಉಳಿತಾಯ ಮಾಡಿ 73 ಕನ್ನಡ ಶಾಲೆಗಳನ್ನು ಆರಂಭಿಸಿದ. ಇದರಿಂದ ಹಳ್ಳಿಗಾಡಿನ ಬಡವರ ಮಕ್ಕಳು ತಮ್ಮ ತಾಯ್ನುಡಿಯಲ್ಲಿ ಅಕ್ಷರ ಕಲಿಯುವಂತಾಯಿತು.
ಒಂದು ಭೂ ಪ್ರದೇಶದ ಇತಿಹಾಸಕ್ಕೆ ಜಾತಿ, ಮತ, ಭಾಷೆ ಭೇದವಿಲ್ಲದ ಎಲ್ಲರ ಕೊಡುಗೆಯೂ ಇರುತ್ತದೆ. ಕನ್ನಡ ನಾಡಿಗೆ ಚಾಲುಕ್ಯ, ರಾಷ್ಟ್ರ ಕೂಟ, ಕದಂಬರಂತೆ ಬಹಮನಿ ಸುಲ್ತಾನರ, ಬಿಜಾಪುರದ ಆದಿಲ್‌ಶಾಹಿಗಳ ಕೊಡುಗೆಯೂ ಇದೆ. ಇತಿಹಾಸವನ್ನು ಕೋಮು ಕನ್ನಡಕದಲ್ಲಿ ನೋಡುವವರಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ.
ಈ ನಾಡಿಗೆ ಹೈದರಾಲಿ, ಟಿಪ್ಪು ಸುಲ್ತಾನರು ನೀಡಿದ ಕೊಡುಗೆಯನ್ನು ಸ್ಮರಿಸಿದರೆ ಸಾಕು ಕೆಲವರಿಗೆ ಮೈ ಉರಿಯುತ್ತದೆ. ಆ ಪರಿ ಅವರ ಮೆದುಳಿಗೆ ಕೋಮು ದ್ವೇಷದ ವೈರಸ್ ಅಂಟಿಕೊಂಡಿದೆ. ಬೆಂಗಳೂರಿನ ಲಾಲ್‌ಬಾಗ್ ನೋಡಿದಾಗ ನಮಗೆ ಹೈದರ್, ಟಿಪ್ಪು ನೆನಪಾಗಬೇಕು. ಮೈಸೂರು ರೇಷ್ಮೆ, ಕನ್ನಂಬಾಡಿ ಕಟ್ಟೆ ಕಂಡಾಗ ಟಿಪ್ಪು ನೆನಪಿಗೆ ಬರಬೇಕು. ಆದರೆ ಈಗ ಅವರ ಹೆಸರು ಹೇಳುವುದೇ ಅಪರಾಧವಾಗಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕು ಎಂದು ಗಿರೀಶ್ ಕಾರ್ನಾಡರು ಹೇಳಿದಾಗ ದೊಡ್ಡ ಕೋಲಾಹಲವೇ ನಡೆಯಿತು. ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿರುವುದಕ್ಕೆ ಯಾರ ಆಕ್ಷೇಪವೂ ಇಲ್ಲ. ಆದರೆ ಹೈದರ್, ಟಿಪ್ಪುವನ್ನೂ ನಾವು ಮರೆಯಬಾರದಲ್ಲವೇ? ಕೆಂಪೇಗೌಡ, ಟಿಪ್ಪು ಸುಲ್ತಾನರು ಪರಸ್ಪರ ಎದುರಾಳಿಗಳಲ್ಲ.ಅವರು ಬದುಕಿದ ಕಾಲ ಘಟ್ಟವೇ ಬೇರೆ. ಇಬ್ಬರೂ ಈ ನಾಡಿಗೆ ನೀಡಿರುವ ಕೊಡುಗೆ ಅವಿಸ್ಮರಣೀಯ. ನಾವು ಕೇಳುತ್ತಿರುವುದು ಕೆಂಪೇಗೌಡರ ಹೆಸರು ಬದಲಿಸಬೇಕೆಂದಲ್ಲ. ಈ ನಾಡಿಗೆ ಸಂಬಂಧವಿಲ್ಲದ ಸಾವರ್ಕರ್ ಹೆಸರು ಇಲ್ಲೇಕೆ? ಎಂದು.
ಅದೇನೇ ಇರಲಿ ಜನಸಾಮಾನ್ಯರನ್ನು ನಿರಂತರವಾಗಿ ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಕಡೆಗಣಿಸಿ ರಾಜಕೀಯ ಲಾಭ ಗಳಿಕೆಗಾಗಿ ನಾಮಕರಣ, ಮರು ನಾಮಕರಣದ ರಾಜಕೀಯ ಮಾಡುವುದು ಸರಿಯಲ್ಲ. ಯಾವುದೇ ಸರಕಾರ ತನ್ನದೇ ಆದ ಹೊಸ ಕಾರ್ಯಕ್ರಮ ಅಥವಾ ಯೋಜನೆಯನ್ನು ರೂಪಿಸಿ ಅದನ್ನು ಜಾರಿಗೆ ತಂದು ತನಗೆ ಸರಿ ಕಂಡ ಹೆಸರಿಡಲಿ.
ಆದರೆ, ಅದರ ಬದಲಾಗಿ ಈಗಿರುವ ಯೋಜನೆ, ಕಾರ್ಯಕ್ರಮದ ಹೆಸರು ಬದಲಿಸುವುದು ಸಾಧನೆ ಎಂದು ಕರೆಸಿಕೊಳ್ಳುವುದಿಲ್ಲ. ಸಿದ್ದರಾಮಯ್ಯನವರ ಸರಕಾರ ಬಡವರ ಹಸಿವು ನೀಗಿಸಲು ‘ಇಂದಿರಾ ಕ್ಯಾಂಟೀನ್’ನಂತಹ ಕಾರ್ಯಕ್ರಮ ರೂಪಿಸಿತು. ಆದರೆ ಇರುವುದನ್ನು ಕೆಡವಿ ಅಲ್ಲೊಂದು ಮಂದಿರ ನಿರ್ಮಿಸಲು ಹೊರಟವರಿಗೆ ಹಸಿವು ಎಂದೂ ಆದ್ಯತೆಯ ಕಾರ್ಯಕ್ರಮವಾಗಿಲ್ಲ. ಈಗಲೂ ಕಾಲ ಮಿಂಚಿಲ್ಲ. ನಿಮ್ಮ ಕೈಯಲ್ಲೇ ಅಧಿಕಾರವಿದೆ.
ನೀವೂ ಬಡವರು, ಶ್ರಮಿಕರಿಗಾಗಿ ಹೊಸ ಕಾರ್ಯಕ್ರಮ ರೂಪಿಸಿ ನಿಮಗೆ ಸರಿ ಕಂಡವರ ಹೆಸರಿಡಿ ಅಭ್ಯಂತರವಿಲ್ಲ. ನಾಮಕರಣ, ಮರು ನಾಮಕರಣದ ವಿವಾದದಲ್ಲಿ ಆಡಳಿತದ ಅಂತಃಸತ್ವದ ಸೆಲೆ ಬತ್ತಿ ಹೋಗದಿರಲಿ.