ಹಳ್ಳಿಗಾಡಿನ ಅಪ್ಪಟ ಅಪರಂಜಿ ಅರಸು
ಇಂದು ಡಿ.ದೇವರಾಜ ಅರಸು ಜನ್ಮದಿನ
ಚಿಕ್ಕಹೆಜ್ಜೂರು- ನಾಗರಹೊಳೆ ಕಾಡಿನ ಅಂಚಿನಲ್ಲಿರುವ ಪುಟ್ಟ ಹಳ್ಳಿ. ಹುಣಸೂರು ತಾಲೂಕಿಗೆ ಸೇರುವ ಈ ಗ್ರಾಮದ ಮಲ್ಲೇಗೌಡ, ಅವರ ಮಗ ದೊಡ್ಡಬಸಪ್ಪ ಬಹಳ ದೊಡ್ಡ ಜಮೀನ್ದಾರರು. ಸುತ್ತೂರು ಮಠದ ಭಕ್ತರು. ಕೃಷಿಯನ್ನೇ ಮುಖ್ಯ ಕಸುಬನ್ನಾಗಿಸಿಕೊಂಡವರು. ಜೊತೆಗೆ ಗುತ್ತಿಗೆದಾರಿಕೆಯನ್ನೂ ಮಾಡುತ್ತಿದ್ದರು. ಅರಣ್ಯದ ಅಂಚಿನಲ್ಲಿರುವ ಆದಿವಾಸಿಗಳು ಮತ್ತು ಸುತ್ತಲ ಹಳ್ಳಿಗಳಲ್ಲಿ ನಾಯಕರೆಂದೇ ಹೆಸರಾದವರು. ಈ ಕುಟುಂಬಕ್ಕೆ ದೇವರಾಜ ಅರಸರು ಬಹಳ ಆತ್ಮೀಯರಾಗಿದ್ದರು. ಮಲ್ಲೇಗೌಡರ ಮೊಮ್ಮಗ ಸೋಮಶೇಖರ್, ಚಿಕ್ಕಂದಿನಿಂದಲೂ ದೇವರಾಜ ಅರಸರನ್ನು ಬಹಳ ಹತ್ತಿರದಿಂದ ಬಲ್ಲವರು. ಅವರು ಕಂಡ ಅರಸು ಇಲ್ಲಿದೆ.
ಆಸಕ್ತಿ ಕ್ಷೇತ್ರಗಳು ಹಲವು. ಅರಸು ಅವರ ಮನೆಯ ಗೋಡೆಗೆ ಅಂಟಿಕೊಂಡಂತೆಯೇ ಕೊಟ್ಟಿಗೆ ಇತ್ತು. ದೊಡ್ಡ ಕೊಟ್ಟಿಗೆ. ದನಕರುಗಳು ನಮ್ಮಿಂದಿಗೇ ಇರಬೇಕು ಎಂದು ಆಸೆ ಪಡುತ್ತಿದ್ದರು. ಅವರಿಗೆ ಎತ್ತುಗಳನ್ನು ಕಟ್ಟುವುದು, ಮೂಗುದಾರ ಹಾಕುವುದು, ಕಾಯಿಲೆ ಆದಾಗ ಗೊಟ್ಟದಲ್ಲಿ ಔಷಧಿ ಕುಡಿಸುವುದು ಗೊತ್ತಿತ್ತು. ಜೊತೆಗೆ ಆರು ಕಟ್ಟುವುದು, ಸಾಲು ಹೊಡೆಯುವುದು ಬರುತ್ತಿತ್ತು. ಯಾವ ಮಣ್ಣಿಗೆ ಎಂತಹ ಬೆಳೆ ಸೂಕ್ತ, ಆ ಬೆಳೆಗೆ ಬೇಕಾಗುವ ನೀರು ಎಷ್ಟು, ಯಾವ ಮಳೆ ಎಷ್ಟು ದಿನ ಬೀಳುತ್ತದೆ.. ಎಲ್ಲದರ ಅರಿವಿತ್ತು. ದರ್ಗದ ಹತ್ತಿರವಿದ್ದ ಗದ್ದೆಗೆ ಅವರೇ ಮಣೆ ಹೊಡೆದು ಹದ ಮಾಡುತ್ತಿದ್ದರು. ಮುಖ್ಯಮಂತ್ರಿ ಆದಾಗಲೂ ಪ್ರತೀ ತಿಂಗಳು ಕಲ್ಲಹಳ್ಳಿಗೆ ಬರುತ್ತಿದ್ದರು. ಬಂದ ತಕ್ಷಣ ಮನೆಗೆ ಹೋಗುತ್ತಿರಲಿಲ್ಲ. ಕೊಟ್ಟಿಗೆಗೆ ಹೋಗಿ ಹಸುಗಳ ಮೈ ಸವರಿ ಮಾತನಾಡಿಸಿ, ಅವರೇ ಹುಲ್ಲು ಹಾಕಿ, ತುಂಡು ಗೋಡೆ ಮೇಲೆ ಕುಳಿತು ಒಂದು ಸಿಗರೇಟ್ ಸೇದಿ ನಂತರ ಮನೆಯ ಒಳಗೆ ಹೋಗುತ್ತಿದ್ದರು. ನಿಜವಾದ ಒಬ್ಬ ರೈತ ಮುಖ್ಯಮಂತ್ರಿಯಾಗಿದ್ದು ದೇಶದಲ್ಲಿ ಒಬ್ಬರೆ- ಅದು ದೇವರಾಜ ಅರಸು.
ಪ್ರಾಣಿ, ಪಕ್ಷಿ, ಕ್ರಿಮಿ ಕೀಟಗಳ ಬಗ್ಗೆ ಅತೀವ ಆಸಕ್ತಿ ಇತ್ತು. ಅವುಗಳ ಜೀವನಕ್ಕೆ ಸಂಬಂಧ ಪಟ್ಟಂತೆ ಅನುಭವಸ್ಥರೊಂದಿಗೆ ಕುಳಿತು ತಿಳಿದುಕೊಳ್ಳುತ್ತಿದ್ದರು. ಅವರ ಆಸಕ್ತಿ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ. ಎಲ್ಲ ಕ್ಷೇತ್ರಗಳ ಮಾಹಿತಿಯನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ಸಾಲದೆನಿಸಿದಾಗ ಓದುತ್ತಿದ್ದರು. ಕೌಟಿಲ್ಯನ ಅರ್ಥಶಾಸ್ತ್ರವನ್ನು ತಿಂಗಳಿಗೊಮ್ಮೆ ಕಡ್ಡಾಯವಾಗಿ ಓದುತ್ತಿದ್ದರು. ಜೇನು ಸಾಕಣೆ, ಎರೆಹುಳುವಿನ ಅಗತ್ಯತೆ, ಕೃಷಿಯಲ್ಲಿ ಹಕ್ಕಿಗಳ ಪಾತ್ರ ಕುರಿತು ಪುಸ್ತಕಗಳನ್ನು ತರಿಸಿಕೊಂಡಿದ್ದರು. ದೇವರಾಜ ಅರಸು ಹೆಚ್ಚಾಗಿ ಪ್ರೀತಿಸುತ್ತಿದ್ದ ವ್ಯಕ್ತಿಗಳು ಸುಭಾಷ್ಚಂದ್ರ ಬೋಸ್ ಮತ್ತು ವಲ್ಲಭಬಾಯಿ ಪಟೇಲ್. ಇವರಿಬ್ಬರ ಆದರ್ಶಗಳನ್ನು ಪಾಲಿಸುತ್ತಿದ್ದರು. ಅವರಲ್ಲಿ ಅನುಭವ, ಅಧ್ಯಯನ ಎರಡೂ ಇತ್ತು. ಆಯ್ದ ಹಳ್ಳಿಗಳಲ್ಲಿ ದನಗಳ ಜಾತ್ರೆ ನಡೆಯುತ್ತಿತ್ತು. ಜಾತ್ರೆಯಲ್ಲಿ ಅತ್ಯುತ್ತಮ ರಾಸುಗಳಿಗೆ ಬಹುಮಾನ ಕೊಡುವ ಪದ್ಧತಿಯೂ ಇತ್ತು. ದೇವರಾಜ ಅರಸರು ಮಂತ್ರಿಯಾದ ಮೇಲೆ ಬೆಟ್ಟದಪುರದ ಜಾತ್ರೆ ಸಮಾರಂಭಕ್ಕೆ ಅತಿಥಿಯಾಗಿ ಕರೆದಿದ್ದರು. ನಾನೂ ಹೋಗಿದ್ದೆ. ಜಾತ್ರೆ ಅಂದಮೇಲೆ ಅಲ್ಲಿರುವವರು ಹೆಚ್ಚಿನ ಪಾಲು ರೈತರು, ಅವಿದ್ಯಾವಂತರು. ಅವರನ್ನು ಉದ್ದೇಶಿಸಿ ಅರಸು ಭಾಷಣ ಮಾಡಿದರು. ಆ ಭಾಷಣ ಎಷ್ಟು ವೈಜ್ಞಾನಿಕವಾಗಿತ್ತೆಂದರೆ, ‘ಏನ್ರಪ್ಪ ಎಲ್ಲದಕ್ಕೂ ಬಹುಮಾನ ಕೊಡುಸ್ತಿರಿ, ನನಗೆ ಸಂತೋಷ ಆಗ್ತದೆ. ಎತ್ತುಗಳನ್ನು ಚೆನ್ನಾಗಿ ಸಾಕಬೇಕು, ಅವುಗಳಿಗೆ ಶೃಂಗಾರ ಮಾಡಬೇಕು, ಬಹುಮಾನ ಪಡೆದ ರಾಸುಗಳನ್ನು ನೋಡುವುದೇ ಚಂದ. ಎಲ್ಲ ಸರಿ. ಆದರೆ ಈ ಮೇಕೆಗೆ ಬಹುಮಾನ ಯಾಕೆ. ಮೇಕೆ ಒಳ್ಳೆಯ ಮಾಂಸ ಕೊಡುವ ಪ್ರಾಣಿ. ಆದರೆ ಅದು ಒಂದು ಗಿಡಕ್ಕೆ ಬಾಯಿ ಹಾಕಿತು ಅಂದ್ರೆ, ಆ ಗಿಡ ಮೇಲೇಳಲ್ಲ. ಅದರ ಬಾಯಲ್ಲಿ ಅಂತಹ ಪಾಯಿಸನ್ ಇದೆ. ಆಡಿಗೆ ನನ್ನ ಕೈಯಿಂದ ಕೊಡಿಸಬೇಡಿ, ನೀವೇ ಯಾರಾದ್ರು ಕೊಡಿ, ನಾನು ದನಗಳಿಗೆ, ಕುರಿಗಳಿಗೆ ಕೊಡ್ತೀನಿ’ ಎಂದರು. ಮೇಕೆ ಸಾಕೋ ರೈತರಿಗೂ ಈ ಸತ್ಯ ಗೊತ್ತಿರಲಿಲ್ಲ. ಅದು ಅರಸರಿಗೆ ಗೊತ್ತಿತ್ತು. ಆಗಲೇ ಕೆರೆ ತುಂಬಿಸಿದ್ದರು ಅರಸು
ದೇವರಾಜ ಅರಸರ ಜೀವಪರ ಕಾಳಜಿ ಮತ್ತು ದೂರದೃಷ್ಟಿಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅವರು ಮುಖ್ಯಮಂತ್ರಿಯಾಗುವುದಕ್ಕೂ ಮುಂಚೆಯೇ ಹಲವಾರು ಕನಸುಗಳಿದ್ದವು. ಅವೆಲ್ಲವೂ ಜನರ ಹಿತ ಬಯಸುವ, ನಾಡನ್ನು ಸಮೃದ್ಧಗೊಳಿಸುವ ಯೋಜನೆಗಳು. ನಾನು ಖುದ್ದಾಗಿ ಕಂಡಿದ್ದನ್ನು ಹೇಳುವುದಾದರೆ, ಲಕ್ಷ್ಮಣತೀರ್ಥ ನದಿ ನೀರನ್ನು ಸುಮಾರು 500ರಿಂದ 600 ಕೆರೆಗಳಿಗೆ ತುಂಬಿಸಿ, ವ್ಯವಸಾಯಕ್ಕೆ ಬಳಸುವಂತೆ ಜನೋಪಯೋಗಿಯನ್ನಾಗಿಸಿದ್ದು ಮಹತ್ವದ ಕೆಲಸಗಳಲ್ಲೊಂದು. ಮುನಿಕಾಡು ಅರಣ್ಯದಲ್ಲಿ ಹುಟ್ಟುವ ಲಕ್ಷ್ಮಣತೀರ್ಥ ನದಿ ಮಳೆಗಾಲದ ಮೂರು ತಿಂಗಳು ತುಂಬಿ ಹರಿಯುತ್ತದೆ. ಸುಮಾರು 180 ಕಿ.ಮೀ. ಉದ್ದದ ಈ ನದಿ ವೀರಾಜಪೇಟೆ, ಹುಣಸೂರು, ಕೆಆರ್ ನಗರ, ಹೆಗ್ಗಡದೇವನಕೋಟೆ ತಾಲೂಕುಗಳಲ್ಲಿ ಹರಿದು ಕಾವೇರಿ ಸೇರುತ್ತದೆ. ಮಳೆಗಾಲದಲ್ಲಷ್ಟೇ ಕಾಣುವ ಈ ನದಿ, ಮಿಕ್ಕಂತೆ ಸತ್ತಂತಿರುತ್ತದೆ. ಈ ನೀರನ್ನು ಹಿಡಿದಿಟ್ಟುಕೊಂಡು ಜನರ ಅನುಕೂಲಕ್ಕೆ ಬಳಸಿಕೊಳ್ಳುವ ಯಾವ ಯೋಜನೆಗಳೂ ಇರಲಿಲ್ಲ. ಅರಸರು ಶಾಸಕರಾಗಿದ್ದಾಗಲೇ ಈ ನದಿಯ ಬಗ್ಗೆ ತಿಳಿದಿದ್ದರು.
ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುತ್ತಿದ್ದಂತೆ, ವ್ಯರ್ಥವಾಗಿ ಹರಿದು ಹೋಗುವ ನದಿ ನೀರನ್ನು ಕೆರೆ ತುಂಬಿಸುವ- ಒಂದು ಕೆರೆ ತುಂಬಿದ ನಂತರ ಮತ್ತೊಂದು ಕರೆ ತುಂಬಿಸುವಂತಹ ಕೆಲಸಕ್ಕೆ ಕೈಹಾಕಿದರು. ಹೊಸರಾಮನಹಳ್ಳಿ, ಮರದೂರು, ಶಿರಿಯೂರುಗಳಲ್ಲಿ ಏತನೀರಾವರಿ ಘಟಕಗಳನ್ನು ಸ್ಥಾಪಿಸಿದರು. ಮುಂದುವರಿದು ಹನಗೋಡು, ಕಟ್ಟೆಮಳವಾಡಿ, ಶಿರಿಯೂರುಗಳಲ್ಲಿ ಅಣೆಕಟ್ಟುಗಳನ್ನು ಕಟ್ಟಿಸಿದರು. ನಾವು ಕೆರೆ ಹೂಳೆತ್ತುವ, ತುಂಬಿಸುವ ಮಾತನಾಡುತ್ತಿದ್ದೇವೆ. ಅಂಥವರನ್ನು ಅಭಿನವ ಭಗೀರಥರೆಂದು ಹಾಡಿ ಹೊಗಳುತ್ತಿದ್ದೇವೆ. ಅರಸರು ಅದನ್ನು ಆಗಲೇ- 70ರ ದಶಕದಲ್ಲಿಯೇ ಮಾಡಿದ್ದರು. ಮಳೆಗಾಲದಲ್ಲಿ ತುಂಬಿ ಹರಿಯುವ ನದಿ ನೀರನ್ನು ನಾಲ್ಕು ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಸುಮಾರು 600 ಕೆರೆಗಳಿಗೆ ತುಂಬಿಸುವ ಯೋಜನೆ ರೂಪಿಸಿದರು. ಕಾರ್ಯರೂಪಕ್ಕೂ ತಂದರು. ಇಂದು ಈ ನಾಲ್ಕು ತಾಲೂಕುಗಳ ನೂರಾರು ಎಕರೆ ಜಮೀನು ನೀರಾವರಿಯಾಗಿದೆ. ಆ ಭಾಗದ ಕೃಷಿ ಸಮೃದ್ಧವಾಗಿದ್ದು, ರೈತರು ನೆಮ್ಮದಿಯಾಗಿದ್ದಾರೆ. ಅದಕ್ಕೆ ಕಾರಣ ದೇವರಾಜ ಅರಸು.
ಅನುಭವ ದೊಡ್ಡದು ಎಂದ ಅರಸು
ದೇವರಾಜ ಅರಸರಿಗೆ ಎಲ್ಲ ಕ್ಷೇತ್ರಗಳ ಬಗ್ಗೆ ಆಸಕ್ತಿ ಇದ್ದ ಹಾಗೆ, ಎಲ್ಲ ಕ್ಷೇತ್ರಗಳ ಸಾಧಕರ ಪರಿಚಯವೂ ಇತ್ತು. ಅದರಲ್ಲೂ ಸಿನೆಮಾ ಕ್ಷೇತ್ರದ ದಿಗ್ಗಜರೊಂದಿಗೆ ಆತ್ಮೀಯ ಒಡನಾಟವಿತ್ತು. ಡಾ. ರಾಜಕುಮಾರ್ ಕಂಡರೆ ಎಲ್ಲಿಲ್ಲದ ಪ್ರೀತಿ, ಗೌರವ. ಅವರೂ ಅಷ್ಟೇ, ಅರಸರೆಂದರೆ ಸಾಕು ಆತ್ಮೀಯವಾಗಿ ಅಪ್ಪಿಕೊಳ್ಳುತ್ತಿದ್ದರು. ಇದನ್ನು ನಾನು ಇಬ್ಬರಲ್ಲೂ ಕಂಡಿದ್ದೆ. ಇಬ್ಬರಲ್ಲೂ ಒಂದು ಸಮಾನ ಅಂಶವಿತ್ತು. ಅದೇನೆಂದರೆ ಹಳ್ಳಿಗಾಡಿನಿಂದ ಬಂದವರು, ಕಷ್ಟ ಗೊತ್ತಿದ್ದವರು, ಅವಮಾನ-ಹಸಿವುಗಳನ್ನು ಅನುಭವಿಸಿದವರು. ತಮ್ಮ ಸಾಧನೆಗಳ ಮೂಲಕವೇ ಉನ್ನತ ಹುದ್ದೆ ಅಲಂಕರಿಸಿ, ಜನಮನ ಗೆದ್ದವರು. ಕೊನೆಯವರೆಗೂ ಅನುಭವದ ದ್ರವ್ಯವನ್ನು ಆರದಂತೆ ನೋಡಿಕೊಂಡವರು. ಇವರಿಬ್ಬರೂ ಮುಖಾಮುಖಿಯಾದಂತಹ ಒಂದು ಪ್ರಸಂಗವನ್ನು ಹೇಳುತ್ತೇನೆ ಕೇಳಿ.
1976. ದೇವರಾಜ ಅರಸರು ಮುಖ್ಯಮಂತ್ರಿ. ಅದೇ ಸಮಯದಲ್ಲಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ ಚಲನಚಿತ್ರ ನಟ ರಾಜಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿತು. ರಾಜಕುಮಾರರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಮುಖ್ಯಮಂತ್ರಿ ದೇವರಾಜ ಅರಸರನ್ನು ಸಮಾರಂಭದ ಮುಖ್ಯ ಅತಿಥಿಗಳನ್ನಾಗಿ ಕರೆಯಲಾಯಿತು. ನಾನು ಆ ಸಮಾರಂಭದಲ್ಲಿ ಭಾಗಿಯಾಗಿದ್ದೆ. ಸೌಜನ್ಯ, ಸಜ್ಜನಿಕೆ, ಸರಳತೆಯನ್ನೇ ಆವಾಹಿಸಿಕೊಂಡಂತಹ ರಾಜಕುಮಾರ್ ವೇದಿಕೆಯ ಮೇಲೆ ಮಗುವಿನಂತೆ ಕೂತಿದ್ದಾರೆ. ಇತ್ತ ಅಧಿಕಾರದ ಗತ್ತು ಗಾಂಭೀರ್ಯದಿಂದ ಅರಸರು. ಮಾತನಾಡಲು ಎದ್ದು ನಿಂತ ಅರಸರು, ‘ನೀವು, ಈ ಯುನಿವರ್ಸಿಟಿಯವರು, ನಿಮ್ಮ ಘನತೆಗೆ ತಕ್ಕುದಾದ ಕೆಲಸ ಮಾಡಿರುವುದು ಈ ಗೌರವ ಡಾಕ್ಟರೇಟ್ ಪುರಸ್ಕಾರ ಕೊಟ್ಟು. ಅನುಭವವೇ ಬೇರೆ, ಅಕ್ಷರ ಜ್ಞಾನವೇ ಬೇರೆ. ನೀವು ಕೊಡುವುದು- ವಿಶ್ವವಿದ್ಯಾನಿಲಯಗಳು, ಕಾಲೇಜುಗಳು, ಸ್ಕೂಲುಗಳು ಕೊಡುವುದು- ಬರೀ ಅಕ್ಷರ ಜ್ಞಾನವನ್ನು. ಆದರೆ ಅನುಭವ ಎನ್ನುವ ಜ್ಞಾನ ನಮ್ಮ ಹಳ್ಳಿಯಲ್ಲಿದೆ. ನಮ್ಮ ಹಾಡಿಯ ಬುಡಕಟ್ಟಿನ ಜನರಲ್ಲಿದೆ. ಒಬ್ಬ ಟ್ರೈಬಲ್ 10 ಜನ ಐಎಫ್ಎಸ್ ಆಫೀಸರ್ಗಳಿಗೆ ಸಮ. ಅವರ ಜ್ಞಾನ ಅಷ್ಟು ಅಗಾಧ. ಹಳ್ಳಿಯಲ್ಲಿ ಹಿಟ್ಟು-ಉಪ್ಸಾರು ಮಾಡ್ತಾಳಲ್ಲ ಮಹಿಳೆ, ಅದು ಕೂಡ ವಿದ್ಯೆಯೇ, ಜ್ಞಾನವೇ. ಅವರಿಗೆ ಕೊಡಬೇಕು ಡಾಕ್ಟರೇಟು. ಆರು ಕಟ್ಟಿ ನೆಟ್ಟಗೆ ಸಾಲು ಹೊಡಿತಾನಲ್ಲ, ಅವನಿಗೆ ಕೊಡಬೇಕು ಡಾಕ್ಟರೇಟು. ಆದರೆ ನೀವು ಯಾರ್ಯಾರಿಗೋ ಕೊಟ್ಟು ಅದರ ಬೆಲೆಯನ್ನು ಘನತೆಯನ್ನು ಕಡಿಮೆ ಮಾಡುತ್ತಿದ್ದೀರಿ. ಇಂತಹ ಸಂದರ್ಭದಲ್ಲಿ, ನೀವು ಕಲಾವಿದ ರಾಜಕುಮಾರ್ ಅವರಿಗೆ ಕೊಡುತ್ತಿರುವ ಡಾಕ್ಟರೇಟ್ಗೆ ವಿಶೇಷ ಅರ್ಥವಿದೆ. ಇದು ನಿಜಕ್ಕೂ ಹಳ್ಳಿಗಾಡಿನ ಜ್ಞಾನಕ್ಕೆ, ವಿದ್ಯೆಗೆ, ಅನುಭವಕ್ಕೆ ಸಿಕ್ಕಂತಹ ಗೌರವ. ಇಂದು ಡಾಕ್ಟರೇಟಿಗೂ ಒಂದು ಮರ್ಯಾದೆ ಬಂತು’ ಎಂದರು. ಇದು ಅರಸು ಮತ್ತು ರಾಜಕುಮಾರ್ಗೆ ಮಾತ್ರ ಅನ್ವಯಿಸುವ ಮಾತು. ಬಹಳ ದೊಡ್ಡ ಅರ್ಥ ಹೊಮ್ಮಿಸುವ ಮಾತು. ಮಹಾನ್ ಚಿಂತಕರು ಆಡುವ ಮಾತು. ಅಂತಹ ಮಹಾನ್ ಮಾನವತಾವಾದಿಗಳು- ಅರಸು ಮತ್ತು ರಾಜಕುಮಾರ್.