ಮುಂಬೈಯಲ್ಲಿ ಕನ್ನಡಿಗ ಪಾನ್‌ವಾಲಾಗಳು
‘‘ವೀಳ್ಯಕ್ಕೆ ಕತ್ತ, ಸುಣ್ಣ ಹಚ್ಚುವುದು ಒಂದು ಕಲೆ. ಕೆಲವರು ಅದು ಕೆಳಮಟ್ಟದ ಕೆಲಸ ಎಂದು ಭಾವಿಸುತ್ತಾರೆ. ವೀಳ್ಯ ಜಗಿಯುವುದು ನಮ್ಮ ಭಾರತೀಯ ಪರಂಪರೆ. ಈಗ ಜಾಗತೀಕರಣದಿಂದ ಪಾಶ್ಚಾತ್ಯರ ಮೌತ್ ಫ್ರೆಶ್ನರ್ ನೆಪದಲ್ಲಿ ಚೂಯಿಂಗ್ ಗಮ್ ಮೊದಲಾದವು ಸೇರಿಕೊಂಡಿದೆ. ನಮ್ಮ ಪಾರಂಪರಿಕ ರೀತಿಯ ವೀಳ್ಯದೆಲೆ ಮೌತ್ ಫ್ರೆಶ್ನರ್ ಮೂಲೆ ಸೇರಿದೆ. ಯಾರಿಗೂ ಬೇಡವಾಗಿದೆ’’ ಎನ್ನುವ, ಈ ಕ್ಷೇತ್ರದಲ್ಲಿರುವ ಹಿರಿಯ ಜೀವದ ಅನುಭವದ ಮಾತನ್ನು ನಾವು ಗಮನಿಸಬೇಕು.
ಇದು 1947ರ ಮುಂಬೈಯ ದಿನಗಳ ಕತೆ. ಕೋಟೆ ಪರಿಸರದ ಮೋದಿ ಸ್ಟ್ರೀಟ್‌ನಲ್ಲಿ ಪಠಾಣ್ ಓರ್ವರ ಪಾನ್-ಬೀಡಿ ಶಾಪ್ ಕ್ರಿಯಾಶೀಲವಾಗಿತ್ತು. ಆಗ ಅಲ್ಲೇ ವಾಸಕ್ಕಿದ್ದು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸಕ್ಕಿದ್ದ ಸುರತ್ಕಲ್, ಹೆಜಮಾಡಿಯ ವಾಮನ್ ಶ್ರೀಯಾನ್ ಆ ಅಂಗಡಿಯನ್ನು ತಾನು ನಡೆಸಲು ತೆಗೆದುಕೊಂಡರು. ವಾಮನ್ ಶ್ರೀಯಾನ್ ಅವರ ಈ ಪಾನ್-ಬೀಡಿ ಶಾಪ್‌ನಲ್ಲಿ ಕೆಲಸಕ್ಕಿದ್ದವರು ಐತಪ್ಪಪಾಲನ್. ವಾಮನ್ ಶ್ರೀಯಾನ್ ಬ್ಯಾಂಕ್‌ನಿಂದ ಮಧ್ಯಾಹ್ನ ಊಟದ ಸಂದರ್ಭ ಅಂಗಡಿಗೆ ಬಂದು ಪಾಲನ್ ಅವರಿಗೆ ಬಿಡುವು ಕೊಟ್ಟು ಮತ್ತೆ ಅವರು ಹಿಂದಿರುಗಿ ಬಂದೊಡನೆ ತಮ್ಮ ಬ್ಯಾಂಕ್ ಕೆಲಸಕ್ಕೆ ತೆರಳುತ್ತಿದ್ದರು. ಊರಿನಿಂದ ಬರುತ್ತಿದ್ದ ಸಂಬಂಧಿಕರಿಗೆ ನೆರೆಹೊರೆಯವರಿಗೆ ವಾಮನ್ ಶ್ರಿಯಾನ್ ತಮ್ಮಲ್ಲಿ ಆಸರೆ ನೀಡುತ್ತಿದ್ದರು. ರಾತ್ರಿ ಮಲಗಲು ತಮ್ಮ ಬ್ಯಾಂಕು, ಮೋದಿ ಸ್ಟ್ರೀಟ್‌ನ ಕಾಲುದಾರಿ, ಅವರ ಬೀಡಿ ಶಾಪ್‌ನ ಹಿಂಬದಿ ಇದ್ದ ಅಲ್ಪಸ್ವಲ್ಪಜಾಗಗಳಲ್ಲಿ ವ್ಯವಸ್ಥೆಯಾಗುತ್ತಿತ್ತು. ವಾಮನ್ ಶ್ರೀಯಾನ್ ಅವರ ಮಗ ಪ್ರಕಾಶ್ ಶ್ರೀಯಾನ್, ‘‘ಇಂಡೋ-ಪಾಕ್ ಯುದ್ಧ ನಡೆಯುತ್ತಿದ್ದಾಗ ನೆವಲ್ ಡಾಕ್ ಯಾರ್ಡ್‌ನಿಂದ ಫೈರಿಂಗ್ ಆಗುತ್ತಿತ್ತು. ಆಗ ರಾತ್ರಿ ವಿದ್ಯುತ್ ಕಡಿತಗೊಳಿಸಲಾಗುತ್ತಿತ್ತು. ನಾವು ಕತ್ತಲೆಯಲ್ಲಿ ಹೆದರಿ ಮುದುರಿಕೊಂಡು ಆಕಾಶದಲ್ಲಿ ಹಾರಾಡುತ್ತಿರುವ ವಿಮಾನಗಳನ್ನು ನೋಡಿಕೊಂಡು ನಿದ್ದೆಯಿಲ್ಲದ ರಾತ್ರಿ ಕಳೆಯುತ್ತಿದ್ದೆವು. ಸೈರನ್ ಪೂರ್ಣ ಪ್ರಮಾಣದಲ್ಲಿ ನಿಂತ ಮೇಲೆ ನಾವು ದೀರ್ಘ ನಿಟ್ಟುಸಿರು ಬಿಡುತ್ತಿದ್ದೆವು’’ ಎಂದು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
ಅಂದಿನ ದಿನಗಳಲ್ಲಿ ಪಾನ್-ಬೀಡಿ ಶಾಪ್‌ಗಳಲ್ಲಿ ವೀಳ್ಯದೆಲೆ, ಅಡಿಕೆ, ಹೊಗೆಸೊಪ್ಪುಗಳಲ್ಲದೆ ಬೀಡಿಗಳೂ ಸಿಗುತ್ತಿದ್ದವೆಂದು ಶ್ರೀಯಾನ್ ಹೇಳುತ್ತಾರೆ. 1975ರಲ್ಲಿ ವಾಮನ್ ಶ್ರೀಯಾನ್ ಅವರು ತಮ್ಮಲ್ಲಿ ಕೆಲಸಕ್ಕಿದ್ದ ಐತಪ್ಪಪಾಲನ್ ಅವರಿಗೆ ಆ ಅಂಗಡಿ ನಡೆಸಲು ಕೊಟ್ಟರು. ಪ್ರಾಮಾಣಿಕವಾಗಿ ದುಡಿಯುತ್ತಿದ್ದ ಐತಪ್ಪನವರು ಅಂದಿನಿಂದ ಆ ಅಂಗಡಿ ನಡೆಸ ತೊಡಗಿದ್ದರು. ಮುಂದೆ ಐತಪ್ಪನವರ ಮಗ ಪುರಂದರ್ ‘ನವ ಭಾರತ್ ಬೀಡಿ ಶಾಪ್’ನ್ನು ವ್ಯವಸ್ಥಿತವಾಗಿ ನಡೆಸತೊಡಗಿದ್ದರು. ಇವರ ಕಾಲದಲ್ಲಿ ಪಾನ್-ಬೀಡಿ ವ್ಯವಹಾರ ವಿವಿಧ ಹಂತಗಳನ್ನು ದಾಟಿ ಮುಂದೆ ಬಂದಿತ್ತು. ತಂಬಾಕು, ಬೋಲಾ, ಚಾಲು, ಮೀಟಾ ಮಸಾಲಾ, ಸಾದಾ ಮಸಾಲ ಇತ್ಯಾದಿ ಬಗೆಗಳು ಸೇರಿಕೊಂಡವು. ಹಿಂದೆ ಆಣೆ, ಪೈಸೆಗಳಲ್ಲಿ ದೊರೆಯುತ್ತಿದ್ದ ಪಾನ್‌ಗೆ, ಪುರಂದರ್ ಅವರ ಕಾಲಾವಧಿಯಲ್ಲಿ ಸಾದಾ ರೂ. 2.50, ಮೀಟಾ ಮಸಾಲಾ ರೂ. 3.00, ಬೋಲಾ ರೂ. 150, ‘ಮಸಾಲ-120’ಕ್ಕೆ 220 ರೂ., ‘ಮಸಾಲಾ-300’ಕ್ಕೆ ರೂ.350ರವರೆಗೆ ಬೆಲೆ ಬಂತು. ಮುಂದೆ ಮಹಾರಾಷ್ಟ್ರ ಸರಕಾರದ ವಿವಿಧ ಧೋರಣೆಗಳಿಂದ ಕಂಗೆಟ್ಟ ಪುರಂದರ ಅವರು 2014ರವರೆಗೆ ನಡೆಸುತ್ತಿದ್ದ ಅಂಗಡಿಯನ್ನು ವಾಮನ್ ಶ್ರೀಯಾನ್ ಅವರ ಪುತ್ರ ಪ್ರಕಾಶ್ ಶ್ರೀಯಾನ್ ಅವರಿಗೆ ಒಪ್ಪಿಸಿಬಿಟ್ಟರು.
ಸುಮಾರು 71 ವರ್ಷಗಳ ಕೆಳಗೆ ಕಾರ್ವಾಸ್ಟ್ರೀಟ್ (ಈಗಿನ ಶಹೀದ್ ಭಗತ್ ಸಿಂಗ್ ರೋಡ್)ನಲ್ಲಿದ್ದ ‘ಶ್ರೀಯಾನ್ ಪಾನ್ ಶಾಪ್’ ಅನ್ನು ನಡೆಸುತ್ತಿದ್ದವರು ಚೆನ್ನಪ್ಪಶ್ರೀಯಾನ್. ‘‘ನಮ್ಮಲ್ಲಿ ಊರಿನಿಂದ ಬರುತ್ತಿದ್ದ ಸಂಬಂಧಿಕರು, ಪರಿಚಯಸ್ಥರು ಉಳಿದುಕೊಳ್ಳುತ್ತಿದ್ದರು, ರಾತ್ರಿ ಸ್ನಾನ ಹಾಗೂ ಮಲಗುವುದಕ್ಕೆ (ಸುಮಾರು 25 ಮಂದಿ) ನಾನು ಇವರನ್ನು ಕರೆದುಕೊಂಡು ಬಲ್ಲಾರ್ಡ್ ಪಿಯರ್‌ನಲ್ಲಿದ್ದ ಆಫೀಸೊಂದಕ್ಕೆ ಹೋಗುತ್ತಿದ್ದೆ. ಅಂದು ಪಾನ್ ಶಾಪ್‌ನಲ್ಲಿ ಈಗಿನಂತಲ್ಲ ಒಳ್ಳೆಯ ವ್ಯವಹಾರ ಆಗುತ್ತಿತ್ತು. ಅಂದು ಪಾನ್, ಬೀಡಿಯ ಜೊತೆಗೆ ಊರಿನಿಂದ ಬರುತ್ತಿದ್ದ ನಶ್ಯವನ್ನೂ ನಾವು ಮಾರುತ್ತಿದ್ದೆವು. ಈಗ ಮಸಾಲೆಯುಕ್ತ ಪಾನ್‌ಗಳು ಬಂದಿವೆ’’ ಎಂದು ತಮ್ಮ ಅಂದಿನ ದಿನಗಳ ನೆನಪನ್ನು ಚೆನ್ನಪ್ಪಶ್ರೀಯಾನ್ ಅವರ ಮಗ ಸುರೇಶ್ ಶ್ರೀಯಾನ್ ನಮ್ಮ ಮುಂದಿಡುತ್ತಾರೆ.
ಅಕ್ಬರ್‌ಅಲಿ ಶಾಪ್ ಎದುರಿಗಿದ್ದ ಕೋಟೆ ಪರಿಸರದ ಇನ್ನೊಂದು ಹಳೆಯ ಪಾನ್ ಶಾಪ್ ‘ಐಡಿಯಲ್ ಪಾನ್-ಬೀಡಿ ವರ್ಕ್ಸ್(1950)’. ಶೇಸಪ್ಪರಾಮ ಕೋಟ್ಯಾನ್ ಅವರ ಈ ಅಂಗಡಿ ತೊಂಭತ್ತರ ದಶಕದವರೆಗೂ ಮುಂಚೂಣಿಯಲ್ಲಿತ್ತು. ಕಾವ್‌ಜಿ ಪಟೇಲ್ ಸ್ಟ್ರೀಟ್‌ನಲ್ಲಿ 1985ರವರೆಗೆ ಕಾರ್ಯನಿರ್ವಹಿಸುತ್ತಿದ್ದ ‘ಶ್ರೀಯಾನ್ ಬೀಡಿ ಶಾಪ್’ ಕನ್ನಡಿಗರ ಹಿರಿಯ (1957) ಪಾನ್ ಶಾಪ್‌ಗಳಲ್ಲಿ ಒಂದು. ಮೊದಲು ಬಾಂಡುಪ್ ಪರಿಸರದಲ್ಲಿ ಹೊಟೇಲ್ ನಡೆಸುತ್ತಿದ್ದ ನಾರಾಯಣ ಶ್ರೀಯಾನ್ ಅವರು ಹೊಟೇಲ್ ಉದ್ಯಮ ತಮ್ಮ ಕೈಲಾಗದ ಕೆಲಸವೆಂದು ಅದನ್ನು ಮುಚ್ಚಿ ಪ್ರಾರಂಭಿಸಿದ್ದೇ ‘ಶ್ರೀಯಾನ್ ಬೀಡಿ ಶಾಪ್’. ಮೂಲತಃ ಕಾಡಿಪಟ್ಣ-ಪಡುಬಿದ್ರಿ ಯವರಾದ ನಾರಾಯಣ ಶ್ರೀಯಾನ್ ಶ್ರಮಜೀವಿ. ಇವರ ಏಳುಬೀಳುಗಳಿಗೆ ಸಾಕ್ಷಿಯಾಗಿದ್ದ ಮಗ ದೇವದಾಸ್ ನಾರಾಯಣ ಶ್ರೀಯಾನ್ ಓರ್ವ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ದೇಹದಾರ್ಢ್ಯ ಪಟು. ‘ಮಿಸ್ಟರ್ ಬಾಂಬೆ’ ‘ಮಿಸ್ಟರ್ ಮಹಾರಾಷ್ಟ್ರ’ ಪುರಸ್ಕಾರಕ್ಕೂ ಪಾತ್ರರಾದವರು ದೇವದಾಸ್.
ಸಿವ್‌ರಿಯಲ್ಲಿನ ಕಾರ್ಖಾನೆಯೊಂದರಲ್ಲಿ ಕಾರ್ಮಿಕರಾಗಿದ್ದ ರಾಜು ಶೆಟ್ಟಿ ಮೂಲತಃ ಅವಿಭಜಿತ ದಕ್ಷಿಣಕನ್ನಡದವರು. ಕಾರ್ಮಿಕರಾಗಿದ್ದ ಸಂದರ್ಭದಲ್ಲೇ ಮುಲುಂಡ್ ಪೂರ್ವದಲ್ಲಿ ತೆರೆದ (1958) ‘ವಿಹಾರ ರಿಫ್ರೆಶ್‌ಮೆಂಟ್ ಪಾನ್ ಶಾಪ್’ ಹಾಗೂ ‘ಅಜಿತ್ ಪಂಜಾಬ್ ಹೊಟೇಲ್’ನ ಇನ್ನೊಂದು ಬಗಲಿಗಿದ್ದ ಪಾನ್ ಶಾಪ್‌ಗಳು ಅಂದಿನ ದಿನಗಳಲ್ಲಿ ರಾಜುಶೆಟ್ಟಿ ಅವರಿಗೆ ಹೊಟೇಲ್‌ಗಿಂತ ಲಾಭದಾಯಕವಾಗಿ ಕಂಡವು. ರಾಜು ಶೆಟ್ಟಿ ಅವರ ಹಿರಿಯ ಮಗ ಶೇಖರ್ ಆರ್. ಶೆಟ್ಟಿ ತಮ್ಮ ತಂದೆಯವರಿಗೆ ಸಹಾಯಕನಾಗಲು ಬಾಲ್ಯದಲ್ಲೇ ಮುಂಬೈಗೆ ಬಂದವರು. ಮುಂದೆ ಅವರ ತಮ್ಮ ಸೀತಾರಾಮ್ ಆರ್. ಶೆಟ್ಟಿಯವರೂ ಮುಂಬೈಗೆ ಬಂದು ಇಲ್ಲಿ ಅಣ್ಣನ ಜತೆ ಪಾನ್ ಶಾಪ್‌ಗಳಲ್ಲಿ ಸಹಕರಿಸಿದ್ದರು. ಬೆಳಗ್ಗೆ ಶಾಲೆ-ಕಾಲೇಜುಗಳಿಗೆ ಹೋಗಿ, ಪಾನ್‌ಶಾಪ್‌ನಲ್ಲೇ ಕಳೆಯುತ್ತಾ ಬೆಳೆದು ಮುಂದೆ ಅಣ್ಣ ತಮ್ಮಂದಿರಿಬ್ಬರೂ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿ ಗುರುತಿಸಲ್ಪಟ್ಟರು. ಶೇಖರ್ ಶೆಟ್ಟಿ ಅವರು ಮುಲುಂಡ್ ಪಶ್ಚಿಮದಲ್ಲಿ ‘ಗಿರಿರಾಜ್ ಹೊಟೇಲ್’ನ ಮಾಲಕ. ಆದರೂ ಅಂದಿನ ಆ ದಿನಗಳನ್ನು, ಪಾನ್‌ಶಾಪ್ ಅನ್ನು ಮರೆತಿಲ್ಲ. ಆ ಎರಡರಲ್ಲಿ ಒಂದು ಪಾನ್ ಶಾಪ್ ಅನ್ನು ಈಗ ಅವರ ಸಹೋದರಿಯರ ಮಕ್ಕಳು ನೋಡಿಕೊಳ್ಳುತ್ತಿದ್ದಾರೆ. ಅಂದಿನ ದಿನಗಳನ್ನು ನೆನೆವ ಶೇಖರ್ ಶೆಟ್ಟಿ ಪಾನ್ ಒಂದಕ್ಕೆ 3-4 ಪೈಸೆಗಳಿದ್ದುದನ್ನು ವಿವರಿಸುತ್ತಾರೆ.
ಒಡಂಬೆಟ್ಟುಗುತ್ತು ನಾರಾಯಣ ಶೆಟ್ಟಿಯವರು ಘಾಟ್ಕೋಪರ್‌ನಲ್ಲಿ ನಡೆಸುತ್ತಿದ್ದ, ಈಗ ಅವರ ಮಗ ನೋಡಿಕೊಳ್ಳುತ್ತಿರುವ ಮಹೇಶ್ ಪಾನ್-ಬೀಡಿ ಶಾಪ್ ಸುಮಾರು ಅರುವತ್ತು ವರ್ಷಗಳ ಇತಿಹಾಸ ಹೊಂದಿದೆ. ಸುಮಾರು 50 ವರ್ಷಗಳ ಹಿಂದೆ ಪ್ರಾರಂಭಗೊಂಡ ‘ನಿತಿನ್ ಪಾನ್-ಬೀಡಿ ಶಾಪ್’ ವಿದ್ಯಾವಿಹಾರ್ ಪರಿಸರದಲ್ಲಿ ಜನಪ್ರಿಯವಾಗಿತ್ತು. ಮೂಲತ ಸುರತ್ಕಲ್, ಹಳೆಯಂಗಡಿಯವರಾದ ಆನಂದ ಕೋಟ್ಯಾನ್ ಶ್ರಮಜೀವಿ. ಸರಕಾರದ ಧೋರಣೆಯಿಂದ ಬೇಸತ್ತ ಕೋಟ್ಯಾನ್ ಅವರು ಸುಮಾರು ಹತ್ತು ವರ್ಷಗಳ ಹಿಂದೆ ಪಾನ್ ಶಾಪ್ ಅನ್ನು ಸ್ಥಗಿತಗೊಳಿಸಿ ಜನರಲ್ ಸ್ಟೋರ್ ತೆರೆದಿದ್ದಾರೆ.
ಅಂದೇರಿ ಪರಿಸರದಲ್ಲಿ ಜನಪ್ರಿಯ ಸಮಾಜ ಸೇವಕರಾಗಿರುವ ಬಾಬು ಕೆ. ಪೂಜಾರಿ ಅವರದ್ದು ನಂದಿಕೂರು ಬಾಬುತೋಟ ಮನೆ. ತುಂಬಿದ, ಸಾಗುವಳಿಯ ಮನೆ. ಅನಿವಾರ್ಯವಾಗಿ ಮುಂಬೈಗೆ ಬಂದ ಬಾಬು ಪೂಜಾರಿ ತಾಜ್ ಮಹಲ್ ಬಳಿ ಇದ್ದ ಚಿಕ್ಕ ಹೊಟೇಲೊಂದರಲ್ಲಿ ನೀರು ಕೊಡುವುದು, ಸ್ವಚ್ಛ ಮಾಡುವುದು, ವೈಟರ್ ಇತ್ಯಾದಿ ಕೆಲಸಗಳಿಂದ ಕೊನೆಗೆ ಮ್ಯಾನೇಜರ್‌ರಾಗಿ ಅಲ್ಲಿಂದ ಬದುಕಿನ ಹೆಜ್ಜೆ ಹುಡುಕುತ್ತಾ ಅಂಧೇರಿಯಲ್ಲಿ ತಮ್ಮದೇ ಆದ ಪಾನ್ ಅಂಗಡಿ (1970)ಯನ್ನು ತೆರೆದರು. ‘ದುರ್ಗಾ ಪಾನ್ ಶಾಪ್’ನ ಬಾಬು ಕೆ. ಪೂಜಾರಿ ಅವರು ‘‘ಪಾನ್ ಗೆ ಅಂದು 13ಪೈಸೆ. ಶುದ್ಧ ಹೊಗೆಸೊಪ್ಪುಸೇರಿಸಿದ್ದಕ್ಕೆ 15 ಪೈಸೆ. ಅಂದು ಸಾವಿರ ಸಾವಿರ ವೀಳ್ಯದೆಲೆಗಳು ಖರ್ಚಾಗುತ್ತಿದ್ದವು. ಅಂದಿನ ದಿನಗಳಲ್ಲಿ ಗುಟ್ಕಾ ಮೊದಲಾದವುಗಳು ಇರುತ್ತಿರಲಿಲ್ಲ’’ ಎಂದು ಹೇಳುತ್ತಾರೆ. ಊರಿನಲ್ಲಿ ಆರ್‌ಸಿಸಿ ಮನೆ ಮಾಡಿದ್ದಲ್ಲದೆ, ಸೊಸೆಯಂದಿರನ್ನು ಮುಂಬೈಗೆ ಕರೆಸಿ ಅವರಿಗೆ ಮದುವೆ ಇತ್ಯಾದಿ ಶುಭ ಕಾರ್ಯಗಳನ್ನು ಮಾಡಿದ್ದ ಹಿರಿಜೀವ, ದೈವಭಕ್ತ ಬಾಬು ಕೆ. ಪೂಜಾರಿ. ಬಿಲ್ಲವರ ಅಸೋಸಿಯೇಶನ್ ಅಂಧೇರಿ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದ ಇವರು ಈಗ ಸಲಹೆಗಾರರಾಗಿದ್ದಾರೆ.
‘‘ಜಯ ಸುವರ್ಣರ ಕೃಪೆಯಿಂದಾಗಿ ‘ಜಯಪ್ರಕಾಶ್ ಹೊಟೇಲ್‌ನ ಪಕ್ಕದಲ್ಲಿ ಪಾನ್ ಶಾಪ್ ತೆರೆವ ಭಾಗ್ಯ ನನಗೆ ದೊರೆತಿತ್ತು. ಜಯ ಸುವರ್ಣರ ಮನೆಯೇ ನನಗೆ ಆಸರೆಯಾಗಿತ್ತು’’ ಎಂದು ಹೇಳುವ ಹಿರಿಜೀವ ಜಯರಾಮ್ ಎಸ್. ಸುವರ್ಣ ಇಂದು ಮುಂಬೈ ಮತ್ತು ತನ್ನ ಊರಾದ ಅಡ್ವೆಯಲ್ಲಿ ನಿವೃತ್ತಿ ಜೀವನ ಸಾಗಿಸುತ್ತಿದ್ದಾರೆ. ಈಗ ‘ಸಾಯಿನಾಥ್ ಪಾನ್ ಶಾಪ್’ ನೋಡಿಕೊಳ್ಳುವವರು ಜಯರಾಮ್ ಅವರ ಮಗ ದಯಾನಂದ ಸುವರ್ಣ. ಪ್ರಾರಂಭದಲ್ಲಿ (1971) ಬನರಾಸ್ ಪಾನ್‌ಗೆ 25ಪೈಸೆ, ವಿಲ್ಸ್ ಸಿಗರೇಟ್‌ಗೆ ಹನ್ನೆರಡು ಆಣೆ ಇತ್ತು’’ ಎಂದು ಸುವರ್ಣ ಅವರು ಹೇಳಿದರೆ, ಅವರ ಮಗ ದಯಾನಂದ ‘‘ಮೀಟಾಪಾನ್ 30ರಿಂದ 40ರೂ., ನಾರ್ಮಲ್‌ಗೆ 40ರಿಂದ 50ರೂ., ಸಾದಾಗೆ 20ರಿಂದ 25 ರೂ. ಆಗಿದೆ’’ ಅನ್ನುತ್ತಾರೆ. ಜುಹು ಪರಿಸರದಲ್ಲಿ ದಿನವೊಂದರಲ್ಲಿ 2,000ದಿಂದ 5,000ರೂ. ವರೆಗೆ ಪಾನ್ ಮಾರಾಟಗೊಳ್ಳುವುದನ್ನು ಉಲ್ಲೇಖಿಸುತ್ತಾರೆ.
ಕಾರ್ಕಳ, ಮುಜೂರಿನವರಾದ ಜಯಶೆಟ್ಟಿ ಅವರು ಬೇರೆಡೆ ಕೆಲಸಕ್ಕಿದ್ದು ಸುಮಾರು 27 ವರ್ಷಗಳಿಂದ ಪಾನ್ ಶಾಪ್ ನಡೆಸುತ್ತಿದ್ದಾರೆ. ಈಗ ಸುಮಾರು 12 ವರ್ಷಗಳಿಂದ ‘ವಿಸವ ಪಾನ್-ಬೀಡಿ ಶಾಪ್’ ಅನ್ನು ಖುದ್ದಾಗಿ ನಡೆಸುತ್ತಿದ್ದಾರೆ.ಮಾಟುಂಗ ಕರ್ನಾಟಕ ಸಂಘದ ಪಶ್ಚಿಮದಲ್ಲಿದ್ದ ರವಿಯವರ ‘ಕಟೀಲು ಪಾನ್ ಶಾಪ್’ ಹೆಸರುವಾಸಿಯಾಗಿದೆ. ಕಲಾಪೋಷಕರಾದ ಅವರು ಪ್ರತಿವರ್ಷ ನಾಟಕ, ಯಕ್ಷಗಾನ ಆಡಿಸುತ್ತಿದ್ದರು. ವಾಶಿ ನವಿ ಮುಂಬೈಯಲ್ಲಿರುವ ಸುಧಾಕರ ಕೃಷ್ಣಶೆಟ್ಟಿಯವರ ‘ಗುರುಕೃಪ ಪಾನ್-ಬೀಡಿ ಜನರಲ್ ಸ್ಟೋರ್’ ಇನ್ನೊಂದು ಪ್ರತಿಷ್ಠಿತ ಹೆಸರು. ಮೂಲತಃ ಪೆರ್ಡೂರಿನವರಾದ ಇವರು ಮುಂಬೈಗೆ ಆಗಮಿಸಿ ಈಗಾಗಲೇ 40 ವರ್ಷಗಳು ಸಂದಿವೆ.
ಡೊಂಬಿವಿಲಿಯಲ್ಲಿ ‘ಮಹಾರಾಷ್ಟ್ರ ಪಾನ್-ಬೀಡಿ ಶಾಪ್’ ನಡೆಸುತ್ತಿದ್ದ ಆನಂದ ಹೆಗ್ಡೆಯವರು ಕಷ್ಟಜೀವಿ. ಈಗ ಅಂಗಡಿ ಬಿಟ್ಟು ಬೆಂಗಳೂರಿನಲ್ಲಿ ತಮ್ಮ ‘ಸಿಎ’ ಮಗಳ ಮನೆಯಲ್ಲಿ ನಿವೃತ್ತ ಬದುಕು ಸಾಗಿಸುತ್ತಿದ್ದಾರೆ. ಮಿಲಿಟರಿ ಸೇರಲೆಂದು ನಾಸಿಕ್ ಕ್ಯಾಂಪ್‌ನಲ್ಲಿದ್ದ ಜಯಶೆಟ್ಟಿ ಅಲ್ಲಿನ ವ್ಯವಸ್ಥೆಗೆ ಸಡ್ಡು ಹೊಡೆದು ಹೊರ ಬಂದವರು. ಪ್ರಾರಂಭದಲ್ಲಿ ಟೈಲರಿಂಗ್ ಮಾಸ್ಟರ್ ಆಗಿದ್ದ ಅವರು ತನಗೆ ಹೊಂದುವ ವೃತ್ತಿ ಇದಲ್ಲ ಎಂದರಿತು ಕಳೆದ ಸುಮಾರು 25-30ವರ್ಷಗಳಿಂದ ‘ಗುರುಕೃಪಾ ಪಾನ್-ಬೀಡಿ’ ಅಂಗಡಿ ನಡೆಸುತ್ತಿದ್ದಾರೆ. ಪರಿಶ್ರಮಿ ಜಯಶೆಟ್ಟಿ ಹಲವಾರು ಧಾರ್ಮಿಕ, ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸರಕಾರದ ಧೋರಣೆಯಿಂದಾಗಿ ಇತ್ತೀಚೆಗೆ ಪಾನ್-ಬೀಡಿ ಶಾಪ್ ಮುಚ್ಚಿ ಅದನ್ನು ಜನರಲ್ ಸ್ಟೋರ್ ಆಗಿ ಪರಿವರ್ತಿಸಿದ್ದಾರೆ. ‘ರಾಘವೇಂದ್ರ ಪಾನ್ ಶಾಪ್’ ನಡೆಸುತ್ತಿರುವ ಇನ್ನೋರ್ವ ಜಯ ಶೆಟ್ಟಿ, ಕಳೆದ 20-25ವರ್ಷಗಳಿಂದ ಈ ಕ್ಷೇತ್ರದಲ್ಲಿದ್ದಾರೆ.
ಇಲ್ಲಿನ ಪಾನ್ ಶಾಪ್‌ಗಳಿಗೆ ವೀಳ್ಯದೆಲೆ ಹೆಚ್ಚಾಗಿ ಕೋಲ್ಕತಾ ಕಡೆಯಿಂದ ಬರುತ್ತಿದೆ. ಮಸ್ಜಿದ್ ಬಂದರ್‌ನ ಮಂಡಿಗೆ ಬಂದು ಅಲ್ಲಿಂದ ಮುಂಬೈಯಾದ್ಯಂತ ವಿತರಣೆಗೊಳ್ಳುತ್ತದೆ. ಕಲ್ಕ್ಕತ್ತಾ, ಕಲ್ಕ್ಕತ್ತಾ ಸಾದ, ಬನರಾಸ್, ಬನರಾಸ್ ಸಾದ ಇವು ಬಹು ಬೇಡಿಕೆಯವು. ಜೋಡಿಯಾಗಿರುವ ಮಘಯಿ, ದೊಡ್ಡ ಎಲೆ ದೇಸಿ, ಚುಟ್ಟಾ ಎಂದು ಹೇಳುವ ಪೂನಾ ಎಲೆ (ಇದು ಮುಖ್ಯವಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತದೆ.) ಇತ್ಯಾದಿ ಬಗೆಗಳಿವೆ. ಎಲೆಯಂತೆ ತಂಬಾಕಿನಲ್ಲೂ ವಿವಿಧ ಬಗೆ ಇರುತ್ತದೆ. ಇದರಲ್ಲಿ ‘ಎಸಲ್ ಹೊಗೆಸೊಪ್ಪು’ ಹೆಚ್ಚಾಗಿ ಆಂಧ್ರ ವಾಯು (ವೃಷಣ ಬಾವು) ಕಾಯಿಲೆಗೆ ಆಯುರ್ವೇದ ಮದ್ದಾಗಿ ಬಳಸಲಾಗುತ್ತದೆ ಎಂದು ಪುರಂದರ್ ಅವರು ಮಹತ್ವದ ಮಾಹಿತಿ ಒದಗಿಸುತ್ತಾರೆ. ಅಡಿಕೆಯಲ್ಲಿ ಕಚ್ಚಾ ಪೂಲ್, ಪಕ್ಕಾ ಪೂಲ್, ಕತ್ರಿ ಪೂಲ್ ಇತ್ಯಾದಿ ಬಗೆಗಳಿವೆ. ಇನ್ನೊಂದು ಕಡಿಮೆ ಪ್ರಮಾಣದಲ್ಲಿ ಮಾರಾಟವಾಗುವ, ವಯಸ್ಸಾದವರು ಸೇವಿಸುವ ಬುಕ್ಕಾ ಸುಪಾರಿಯೂ ಇದೆ. ಹಿಂದೆ ಇದ್ದ ವ್ಯವಹಾರಕ್ಕೂ ಈಗಿನ ವ್ಯವಹಾರಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಈಗ ಗುಟ್ಕಾ ಇತ್ಯಾದಿ ಸೇರಿಕೊಂಡಿದೆ. ಗುಟ್ಕಾ ಮಹಾರಾಷ್ಟ್ರದಲ್ಲಿ ನಿಷೇಧ ಇದ್ದರೂ ಗುಟ್ಟಾಗಿ ಮಾರಾಟವಾಗುತ್ತಿದೆ. ಒಂದೊಮ್ಮೆ ಪೈಸೆ ಲೆಕ್ಕದಲ್ಲಿ ಮಾರಾಟವಾಗುತ್ತಿದ್ದ ಪಾನ್, ಬೀಡಿ, ಸಿಗರೇಟಿನ ದರ ಇಂದು ಗಗನಕ್ಕೇರಿದೆ. ‘‘ಇನ್ನ್ನು ನಮ್ಮವರು ಈ ಕಾರ್ಯಕ್ಕೆ ಬರುವುದು ಅಸಾಧ್ಯ. ಹೊಸಪೀಳಿಗೆ ವಿದ್ಯಾವಂತರಾಗಿ ಈ ವ್ಯವಹಾರವನ್ನು ನಗಣ್ಯವಾಗಿ ಕಾಣುತ್ತಿದೆ. ಇದು ಒಂದು ಕಲೆ ಎಂಬುದನ್ನು ಮರೆತಿದ್ದಾರೆ. ಈಗ ಈ ಕ್ಷೇತ್ರದಲ್ಲಿ ಭಯ್ಯಿ, ಪಠಾಣ್‌ರದ್ದೇ ಸಾಮ್ರಾಜ್ಯ’’ ಎಂದು ಹಿರಿಯರಾದ ಜಯಶೆಟ್ಟಿ ಹೇಳುತ್ತಾರೆ