ಚರಿತ್ರೆಯೊಳಗಿನ ಒಂದೆಳೆಯ...
ಕಣ್ಮುಟ್ಟುವತನಕ ಹರಡಿರುವ ಕಸುವುಳ್ಳ ಕಪ್ಪುಮಣ್ಣಿನ ಹೊಲ. ತನಗೆ ತಿಳಿದಾಗ ಬಂದು ಸುರಿದು ಹೋಗುವ ಮಳೆ. ಒಂದಕ್ಕೊಂದು ಜತ್ತು ತಪ್ಪಿದ ಒಗೆತನ. ಆದರೂ ಒಕ್ಕಿದ್ದಕ್ಕೆ ಕಣ ತುಂಬುವ ನೆಲದ ತಾಯ್ತನ. ರೋಣ, ಗಜೇಂದ್ರಗಡ, ನರಗುಂದ, ನವಲಗುಂದದ ಚೌಕಿಯ ಬಾಳೇವು ಇದು. ದಾಂಪತ್ಯವಿರಸದ ಮಕ್ಕಳಂತೆ ಉದ್ವೇಗದ ಏರುಗಚ್ಚಿನಲ್ಲಿರುವ ಜನ. ದುಡಿಮೆ-ವಿರಾಮ, ಪ್ರೀತಿ-ಜಗಳ, ಬಾಂಧವ್ಯ-ದ್ವೇಷ, ಕೂಡುಣ್ಣುವ-ಕೂಡಿ ಕಾದುವ ಎಲ್ಲದರಲ್ಲೂ ಪುಟ್ಟಪೂರಾ ಅನುಭವಿಸಿಯೇನೆಂಬ ತಾದ್ಯಾತ್ಮ. ಜಮೀನ್ದಾರಿಕೆಯ ಅಹಮಿಕೆಯನ್ನೇ ಅಲಕ್ಷ ಮಾಡಿ ಎಲ್ಲರೊಳಗೊಂದಾಗಿ ಬಾಳೇವು ಮಾಡಬೇಕೆಂಬ ಜೀವನವಿವೇಕವನ್ನು ಕಟ್ಟಿಕೊಂಡವರು. ಕಾಡಿನ ಹಸಿರಿಲ್ಲ ಎಂದು ಕೊರಗದೆ, ಸುರೇಪಾನದ ಹಳದಿ ದಿಬ್ಬಣ ನಿಲಿಸಿ, ಸೌಖ್ಯದ ಪದರರೂಪೀ ಸಂರಚನೆಯನ್ನು ನಿರೂಪಿಸಿದ ಜನ. ಬಯಲುಸೀಮೆಯ ಜನ ಬದುಕಿನ ಕಥನವನ್ನು ಈ ಜೀವನ ವೃತ್ತಾಂತ ನೆನಪಿಸುತ್ತದೆ.
ಇದು, ಕೂಡ್ಲೆಪ್ಪ ಎಂಬ ಅಬೋಧ ಹುಡುಗ, ತನ್ನ ಅನಾಥ ಪ್ರಜ್ಞೆಯೊಂದಿಗೆ ಗುದಮುರಿಗಿ ಹಾಕುತ್ತಲೇ ಬಾಳನ್ನು ಕಟ್ಟಿಕೊಂಡ ಕಥೆ. ಬಿರುಬಿಗಿದ ಮಣ್ಣ ಪದರದಿಂದ ಎಳೆಹುಲ್ಲಿನ ದಳಗಳು ತಲೆಯೆತ್ತುವ ಕಥೆ. ಈ ದೇಶದ ಸಾಮಾನ್ಯಾತಿ ಸಾಮಾನ್ಯನ ಬಾಳಸಂಪುಟ. ಲಿಂಗ, ಜಾತಿ, ಕುಲ ಕಷ್ಟಗಳಿಂದಲೂ ‘ವಿಶಿಷ್ಟ’ ಎಂದು ಗುರುತಿಸಿಕೊಳ್ಳಲು ಆಗದವನ ಚರಿತ್ರೆ. ಮನುಷ್ಯ ಬಾಳು ವಿಶಿಷ್ಟವಾಗುವುದು ಅವನದನ್ನು ನಿರ್ವಹಿಸುವ ಬಗೆಯಲ್ಲಿ ಎಂದು ತಿಳಿಸುವ ಟಿಪ್ಪಣಿ. ವ್ಯಕ್ತಿಕಥೆಯೊಂದಿಗೆ ಸಮುದಾಯ ಕಥೆಯನ್ನು ಬೆರೆಸಿದ ಲಾವಣಿ. ಉತ್ತಮ ಜೀವನ ಚರಿತ್ರೆಯ ಸೃಜನಶೀಲ ಬರವಣಿಗೆಯ ಅಂತಃಸತ್ವದ ಸ್ಪರ್ಶದಿಂದಲೇ ಸಾರ್ಥಕವಾಗುತ್ತದೆ. ಆಗ, ಕಾದಂಬರಿ ಮತ್ತು ಜೀವನ ಚರಿತ್ರೆಗಳ ಮಧ್ಯದ ಗೆರೆ ತುಂಬ ತೆಳುವಾದದ್ದು ಮತ್ತು ಕಾಲ್ಪನಿಕವಾದದ್ದೆಂದು ಸಾಬೀತಾಗುತ್ತದೆ. ಮನುಷ್ಯ ಬಾಳಿಗೆ ಎರಗುವ ಆಪತ್ತುಗಳನ್ನು ಲೆಕ್ಕ ಹಾಕಬಹುದು. ಆದರೆ, ಆಪತ್ತುಗಳು ಮನುಷ್ಯ ಸಂವೇದನೆಯನ್ನು ಘಾಸಿಗೊಳಿಸುವ ಮಟ್ಟವನ್ನು ಅಳೆಯುವುದು ಸಾಧ್ಯವೇ? ಬಾಳಿಗೆ ದಿಕ್ಕಾಗಿ ಮನೆಯ ಕೋಳುಗಂಭವಾಗಿದ್ದ ಅವ್ವ, ಅಚಾನಕ್ಕಾಗಿ ಇಲ್ಲವೇ ಆಗಿಬಿಟ್ಟಾಗ ಕೂಡ್ಲೆಪ್ಪಎಳೆ ಹುಡುಗ.
ಆ ಯಾತನೆ ಅವನು ಬೆಳೆದಷ್ಟು ಬೆಳೆಯುತ್ತ, ಬದುಕಿನುದ್ದವನ್ನು ಕಣ್ಣೀರಿನ ಗೀಟುಹಾಕಿ ಅಳೆವ ಪ್ರಯತ್ನ ಮಾಡಿದ ಈ ಜೀವನ ಚರಿತ್ರೆಯಲ್ಲಿ ಅವ್ಯಕ್ತವಾಗಿರುವ ತಾಯಬಿಂಬ ಬಯಲಸೀಮೆಯ ರೈತಾಪಿ ಹೆಂಗಸರ ತ್ರಾಣಕ್ಕೊಂದು ಗುರುತಿನಂತಿದೆ. ಬಾಲಕ ಕೂಡ್ಲೆಪ್ಪನಿಗೆ ಬದುಕು ದಿನದ ಜಾಡಿಗೆ ಬರುತ್ತಿದೆ ಅನ್ನಿಸಿದರೂ ಒಳಗಿನ ತಬ್ಬಲಿತನ ಉಸಿರುಗಟ್ಟಿಸುತ್ತದೆ. ಹೊರಗಾಯ ಮಾಯುತ್ತದೆ. ಮನಸ್ಸಿನ ಗಾಯಕ್ಕಿರುವುದು ಒಂದೇ ಗುಣ. ಅದು ಮರುಮರಳಿ ಕೀವುಗಟ್ಟುವುದು. ಮನೆ ಬೇಸರವಾದಾಗ, ಓದಿನ ಆಸಕ್ತಿಯನ್ನೂ ಕಬಳಿಸಿ ಶಾಲೆ ಬೇಡವೆನಿಸಿದಾಗ ಊರ ಗುಡಿಯಲ್ಲಿ ತಾಯಮಡಿಲಿನಂತೆ ಮಲಗಿರುತ್ತಿದ್ದ ಹುಡುಗನ ಚಿತ್ರ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ. ಬಡತನ ತಪ್ಪನ್ನು ತಿದ್ದಿಕೊಳ್ಳುವ, ಸೋಲನ್ನು ಗೆಲುವಾಗಿಸಿಕೊಳ್ಳುವ ಮರು ಅವಕಾಶವನ್ನು ಕೊಡುವುದಿಲ್ಲ. ಎಂಟನೇ ತರಗತಿಯಲ್ಲಿ ನಪಾಸಾದ ಹುಡುಗ, ಬಾಳೇಗಾರನಾಗಲು ತಾನು ಏನು ಮಾಡಬಲ್ಲೆ ಏನನ್ನು ಸಾಧಿತವಾಗಿಸಿಕೊಳ್ಳಬಲ್ಲೆ ಎಂದು ಕಂಡುಕೊಳ್ಳಲು ನಡೆಸಿದ ಸೆಣಸಾಟದ ಕಥೆಯಿದೆಯಲ್ಲ ಅದು ಹಳ್ಳಿಗಾಡಿನ ಅದೆಷ್ಟೋ ಯುವಕರ ಬಾಳಿನ ರೂಪಕವೂ ಹೌದು. ಆದರೆ, ಸೋಲಿಗೆ ಹೆದರದ, ತಪ್ಪಿನಡೆಯದ, ಅಡ್ಡದಾರಿ, ಸುಲಭದಾರಿ ಹಿಡಿಯದ ಛಾತಿಯಿಂದ ಕೂಡ್ಲೆಪ್ಪನವರ ಬದುಕು ಚರಿತ್ರೆಯಾಗುತ್ತದೆ.
ಕಡೆಗಾಲದ ದಿನಗಳಲ್ಲಿ ಬಾಳನ್ನು ಹಿಂದಿರುಗಿ ನೋಡುವಾಗ ಅವರಿಗೆ, ಒಂದು ಸುಡುಹಗಲು ಹೊಲದಲ್ಲಿ ರೊಟ್ಟಿ ಪಲ್ಲೆ ಹಚ್ಚಿಕೊಟ್ಟ ಅಪರಿಚಿತ ಮುದುಕಿ ನೆನಪಾಗುತ್ತಾಳೆ. ‘‘ನಾವು ಹೊಲ್ಯಾರು. ನಮ್ಮ ಕೈಯ್ಯಾನ ಹೋಳಿಗಿ...’’ ಅನ್ನೋ ಮುಜುಗುರವನ್ನೇ ಮುಂದಿಟ್ಟು ಉಣ್ಣಾಕ ತಂದವನ ಹೋಳಿಗಿಯ ಸಿಹಿ ನೆನಪಾಗುತ್ತದೆ. ಏರುಯೌವನದಲ್ಲಿ ‘‘ನೀನು ಗಂಡು’’ ಎಂದು ನೆನಪಿಸಿ, ಪ್ರೇಮದ ಗಮಲು ಉಕ್ಕಿಸಿ ಜಾತಿಯ ಭಯದ ಸಮಾಜಕ್ಕೆ ಸೊಪ್ಪುಹಾಕಿ ದೂರಾಗಬೇಕಾದ ಪ್ರೇಮಿಕೆ ನೆನಪಾಗುತ್ತಾಳೆ. ಉಂಡಷ್ಟು ಸರಳವಲ್ಲ ಬಾಳು! ಎಂಥ ಗೌರವದ ವಿದಾಯ ಅದು! ಇಬ್ಬರೂ ಅವರವರ ಬದುಕಿಗೆ ಹೊರಳಿಕೊಂಡು ಸಂಸಾರವಂದಿಗರಾದ ಮೇಲೂ ಆಳದಲ್ಲುಳಿದ ಪ್ರೀತಿ ಕದಲದೆ ಕತ್ತಲಾಗದೆ ಉಳಿಯುವುದು! ಅಬ್ಬಾ, ಮನುಷ್ಯ ಒಂದು ಜನ್ಮದಲ್ಲಿ ಅದೆಷ್ಟು ಜನ್ಮಾಂತರಗಳನ್ನು ಕಳೆಯುತ್ತಾನಲ್ಲ! ಇಲ್ಲಿಯ ಖಾಸಗಿತನ, ಮನುಷ್ಯ ಬದುಕಿನ ಇತಿಮಿತಿಯ ಬಗ್ಗೆ ಬೆಳಕು ಹೊಳೆಯಿಸುವಷ್ಟು ಸುಂದರವಾಗಿದೆ.
ಸ್ವಾತಂತ್ರ್ಯ ಪೂರ್ವದ ಗಾಂಧಿ ಸತ್ಯಾಗ್ರಹ, ಸ್ವಾತಂತ್ರ್ಯಾನಂತರದ ಸಮಸಮಾಜದ ಹಕ್ಕೊತ್ತಾಯ - ಚರಿತ್ರೆಯ ಈ ಪುಟಗಳೊಂದಿಗೆ ಕೂಡಿಕೊಂಡಿದೆ ಕೂಡ್ಲೆಪ್ಪನವರ ಬದುಕು. ಇಲ್ಲಿ ಗಾಂಧಿತತ್ವದ ಪ್ರಭಾವದಿಂದ, ಸಮಾಜಕ್ಕೆ ತನ್ನನ್ನು ಅರ್ಪಿಸಿಕೊಳ್ಳಲು ತುಡಿದ, ಅಂಗಿಬಿಚ್ಚಿ ಇನ್ನು ಅಂಗಿ ಧರಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿದ ಹುಡುಗನಿದ್ದಾನೆ. ಅನ್ನ ನೀರಿನ ಪ್ರಶ್ನೆಯಲ್ಲಿ ಶಪಥ ಅಮುಖ್ಯವಾದರೂ ಆ ಬದ್ಧತೆಯೇ ರೈತ ಚಳವಳಿಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡು ರೈತ ಸಂಘದ ತಾಲೂಕಿನ ಮೊದಲ ಅಧ್ಯಕ್ಷನಾಗಿ ಮತ್ತು ಆ ನಂತರವೂ ಶ್ರಮಿಸಿದ ಸಾಧನೆಯ ಪುಟಗಳಿವೆ. ಕೂಡ್ಲೆಪ್ಪನವರಿಗೆ ಹೆಚ್ಚಿನ ಓದು ಸಾಧ್ಯವಾಗಿರಲಿಲ್ಲ. ಓದಿನ ಪ್ರೀತಿ ಕಡಿಮೆಯಾಗಿರಲಿಲ್ಲ. ರೈತ ಚಳವಳಿ ಮತ್ತು ಲಂಕೇಶ್ ಪತ್ರಿಕೆ ಹಳ್ಳಿಯೂರಿನ ರೈತನಲ್ಲಿ ಅನ್ಯಾಯದ ವಿರುದ್ಧದ ಕ್ರಾಂತಿಕಾರಿ ಕೆಲಸಗಳಿಗೆ ಪ್ರೇರೇಪಿಸಿದ ದಾಖಲೆಯಿದು. ಚಳವಳಿಗಳು ವ್ಯಕ್ತಿಗಳಲ್ಲಿ ವ್ಯಕ್ತಿತ್ವವನ್ನು ಮೊಳೆಯಿಸುತ್ತದೆ ಮತ್ತು ಆ ವ್ಯಕ್ತಿತ್ವಗಳೇ ಚಳವಳಿಯ ನಿಜ ಚಹರೆಗಳಾಗುತ್ತವೆ. ನರಗುಂದದ ರೈತ ಬಂಡಾಯ ಅಂದಿನ ಕರ್ನಾಟಕದ ಸರಕಾರವನ್ನೇ ಉರುಳಿಸಿತು. ರೈತರ ನೆತ್ತರಿನ ಬೆಲೆಯನ್ನು ಹೇಳಿತು.
ಸರಿ ಸರಿ ಸರಿ ನೀ ಹಿಂದಕ್ಕ
ರೈತರು ಬಂದೀವಿ ಮುಂದಕ್ಕ
ಈ ಹಾಡಿಗೆ ಕೂಡ್ಲೆಪ್ಪನವರಂತಹ ಅಸಂಖ್ಯರ ಹೆಜ್ಜೆ ಸಪ್ಪಳ ಸಾಥ್ ನೀಡಿತ್ತು. ಎಂ.ಡಿ. ನಂಜುಂಡಸ್ವಾಮಿ, ಕೆ.ಎಸ್. ಪುಟ್ಟಣ್ಣಯ್ಯನವರಂತಹ ಮುಂದಾಳುಗಳಿಗೆ ಬೆನ್ನ ಆಸರೆಯಾದವರ ಕಥೆಯಿದು. ಕೂಡ್ಲೆಪ್ಪನವರ ಬದುಕಿನ ಅಧ್ಯಾಯಗಳನ್ನು ಓದುವಾಗ, ರೈತಸಂಘದಂತಹ ಜನಚಳವಳಿಗಳು ಬಣಗಳಾಗಿ ಒಡೆದು, ಆ ಒಡಕಲಲ್ಲಿ ಆಳುವವರ ಹುನ್ನಾರಗಳು ಬೆಳೆಯದಿದ್ದರೆ... ಕರ್ನಾಟಕದ ಚರಿತ್ರೆ ಬೇರೆಯಾಗಿರುತ್ತಿತ್ತೇನೋ ಅನ್ನಿಸುತ್ತದೆ. ಹಸಿರು ಟಾವೆಲ್ ಸಿಗದಿದ್ದಾಗ ಬಿಳಿ ಟಾವೆಲಿಗೇ ಹಸಿರು ಬಣ್ಣ ಹುಯ್ಯಿಸಿ ಹೆಗಲಿಗೇರಿಸಿಕೊಂಡ ರೈತನ ಕಥೆ - ಚಳವಳಿಗಳು ಈ ನೆಲದ ಜನ ಸಾಮಾನ್ಯರಿಗೆ ಒದಗಿಸಬೇಕಾದ ನ್ಯಾಯದ ಕಡೆ ಸೂಚಿತವಾಗಿದೆ. ಯಾಕೆಂದರೆ ನಾವಿಂದು ಸಂಘಟನೆಯ ಜನ ಚಳವಳಿಯ ಸಂಕೇತಗಳೂ ದುರ್ಬಲಗೊಳ್ಳುತ್ತಿರುವ ಕೆಟ್ಟ ಕಾಲದಲ್ಲಿದ್ದೇವೆ. ರೈತರ ಹೋರಾಟಗಳು ರಾಜಕೀಯ ಪಕ್ಷದ ಹೋರಾಟವಾದದ್ದರ ಸಾಕ್ಷಿಗಳಾಗಿದ್ದೇವೆ. ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಆಗಿ ರೈತರು ಪ್ರಾಣ ಕಳೆದುಕೊಂಡಾಗ ಆಳುವ ಸರಕಾರ ಮತ್ತಷ್ಟು ಗಟ್ಟಿಯಾದದ್ದನ್ನು ನೋಡಿದ್ದೇವೆ. ಪ್ರತಿ ಸಾವನ್ನೂ ಹಣದ ಮೂಲಕ ತೂಗುವ ಪದ್ಧತಿಗೆ ಜನರನ್ನು ಸಿದ್ಧಗೊಳಿಸುವುದಕ್ಕೆ ರಾಜಕಾರಣ ಪಳಗಿದೆ. ಕೊಂದವರೇ ಸತ್ತವರಿಗಾಗಿ ಅಳುವ ನಾಟಕೀಯ ನಡೆ ಚರಿತ್ರೆಯ ಪುಟ ಸೇರಿದೆ.
ಕೂಡ್ಲೆಪ್ಪನವರ ರಾಜಕೀಯ ತಿಳಿವು, ಕೃಷಿ ಜ್ಞಾನಗಳೊಂದಿಗೆ ‘ಲಂಕೇಶ್ ಪತ್ರಿಕೆ’ಯ ಪ್ರಸ್ತಾಪ ಬರುತ್ತದೆ. ಹಳ್ಳಿಯ ರೈತನಲ್ಲಿ ಫುಕುವೋಕನ ಚಿಂತನೆ, ಸುಭಾಷ್ ಪಾಳೇಕರರ ಪ್ರಾಯೋಗಿಕತೆ ಊರಲು ಲಂಕೇಶ್ ಪತ್ರಿಕೆ ಕಾರಣವಾಗಿದೆ. ಕೂಡ್ಲೆಪ್ಪನವರೊಂದಿಗೆ, ಕರ್ನಾಟಕದ ವರ್ತಮಾನದ ಬಗ್ಗೆ ಮಾತನಾಡಿಸಿದ್ದರೆ, ವಿವೇಕದ ಕೊರತೆಯಿಂದ ನಿಶ್ಯಕ್ತಗೊಳ್ಳುತ್ತಿರುವ ನಮಗೆಲ್ಲ ಮದ್ದಿನ ಬೇರು ಸಿಗಬಹುದಿತ್ತೇ? ಎಂದು ಆಸೆಯಾಗುತ್ತದೆ. ಇಂದಿನ ಮತಾಂಧತೆಯನ್ನು ಕೂಡ್ಲೆಪ್ಪಹೇಗೆ ಕಾಣುತ್ತಾರೋ? ಗೊತ್ತಿಲ್ಲ. ಕಾರ್ಲೈಲ್ ಹೇಳುತ್ತಾನೆ- ‘‘ಚರಿತ್ರೆಯೆಂದರೆ ಮತ್ತೇನೂ ಅಲ್ಲ, ಅಸಂಖ್ಯ ಜೀವನ ಚರಿತ್ರೆಗಳ ಸಾರಾಂಶ’’. ಹೌದಲ್ಲವೇ? ಚರಿತ್ರೆಯನ್ನು ಹೀಗೆ ತಿದ್ದಿಕೊಳ್ಳುವ ಅಗತ್ಯವಿದೆ. ಜೀವನ ಚರಿತ್ರೆ ಮಹೋನ್ನತ ಸಾಧನೆ ಮಾಡಿದವರ ಕಥನವೇ? ಹಾಗಿದ್ದರೆ ಮಹೋನ್ನತ ಎಂದರೇನು? ಕಟ್ಟಡ ಕಟ್ಟಲು ಸಿದ್ಧ ಪಡಿಯಚ್ಚಿನ ಕಲ್ಲುಗಳು ಮಾತ್ರ ಸಾಕಾಗದು. ಅವುಗಳನ್ನು ಬೆಸೆಯಲು ಪುಡಿ ಚೂಪುಗಲ್ಲುಗಳೂ ಬೇಕು. ಆ ಚೂಪುಗಲ್ಲುಗಳೂ ಅದೆಷ್ಟೋ ಉಳಿಪೆಟ್ಟು ತಿಂದೇ ಬಂದಿರುವುದು ತಾನೇ? ಜೀವನ ಚರಿತ್ರೆ ಬದುಕಿನ ತಾತ್ವಿಕತೆಗೆ ಕರೆಯುತ್ತಿದೆ. ನಾವೀಗ ವಿಸ್ಮತಿಯನ್ನು ನೀಗಿಕೊಳ್ಳುವ ಜನ ಚರಿತ್ರೆಯ ಮರುಸಂಕಥನದ ಅಗತ್ಯದಲ್ಲಿದ್ದೇವೆ. ಈ ಪುಸ್ತಕ ಅಂತಹ ಪ್ರಯತ್ನ. ರೈತನೊಬ್ಬನ ಬದುಕು, ರೈತಾಪಿತನವೇ ಹಲ್ಲೆಗೊಳಗಾಗುತ್ತಿರುವ, ರೈತರನ್ನು ಕಾರ್ಪೊರೇಟ್ ಗುಲಾಮರಾಗಿಸುವ ಕಾಲದಲ್ಲಿ, ರೈತರು ಜಾತಿಯ ಸಂಕೇತಗಳಾಗುತ್ತಿರುವ ಕಾಲದಲ್ಲಿ ವಿಭಿನ್ನ ಓದು ಸಾಧ್ಯತೆಗಳನ್ನು ತೆರೆಯಲಿ ಎಂದು ಆಶಿಸುತ್ತೇನೆ. ಈ ಎಲ್ಲ ಕಾರಣಗಳಿಗಾಗಿ ಟಿ.ಎಸ್. ಗೊರವರ ಅವರನ್ನು ಅಭಿನಂದಿಸುತ್ತೇನೆ.
ಪುಸ್ತಕ: ಹಸಿರು ಟಾವೆಲ್
(ರೈತನೊಬ್ಬನ ಜೀವನ ಕಥನ)
ಲೇಖಕರು:
ಟಿ.ಎಸ್. ಗೊರವರ
ಬೆಲೆ: 120 ರೂ.
ಸಂಪರ್ಕ: ಸಂಗಾತ ಪುಸ್ತಕ
ಮೊ: 9341757653