varthabharthi


ಕಾಲಂ 9

ಅಫ್ಘಾನ್ ದುರಂತ: ಅತ್ತ ಅಮೆರಿಕ, ಚೀನಾಗಳು - ಇತ್ತ ತಾಲಿಬಾನಿಗಳು!

ವಾರ್ತಾ ಭಾರತಿ : 25 Aug, 2021
ಶಿವಸುಂದರ್

ಭಾಗ - 1

ಇಂದು ಅಫ್ಘ್ಘಾನ್ ಜನತೆ ಎದುರಿಸುತ್ತಿರುವಷ್ಟು ದಮನ, ಯಾತನೆ, ದ್ರೋಹ ಹಾಗೂ ಹಿಂಸಾಚಾರಗಳನ್ನು ಬೇರೆ ಯಾವುದೇ ದೇಶವೂ ಅನುಭವಿಸಿರಲಾರದು. ಬ್ರಿಟನ್ ಮತ್ತು ಅಮೆರಿಕ ಮಾಡಿದ ದ್ರೋಹ-ದಮನಗಳಿಗೆ ಉಗ್ರವಾದದ ದಮನ ಅಥವಾ ಪ್ರಜಾತಂತ್ರದ ಸ್ಥಾಪನೆಯ ನೆಪವಿದ್ದರೆ, ತಾಲಿಬಾನಿಗಳು ಮಾಡುತ್ತಿರುವ ಬರ್ಬರ ಕ್ರೌರ್ಯಗಳಿಗೆ ಧರ್ಮದ ಹುಸಿಲೇಪನವಿದೆ ಅಷ್ಟೆ.

ಅಫ್ಘಾನಿಸ್ತಾನ- ಭಾರತದಷ್ಟೇ ಸುಂದರವಾದ ದೇಶ. ಸ್ವಾಭಿಮಾನಿಗಳ ದೇಶ. ಭಾರತದಂತೆ ಹಲವಾರು ಧರ್ಮ, ಭಾಷೆ ಹಾಗೂ ಜನಾಂಗಗಳುಳ್ಳ ದೇಶ. ನಮ್ಮಂತೆಯೇ ಇತಿಹಾಸದಲ್ಲಿ ಹಲವಾರು ಸಾಮ್ರಾಜ್ಯಗಳ ದಾಳಿಗೊಳಗಾದ ಹಾಗೂ ಅದರ ವಿರುದ್ಧ ಹೋರಾಡಿ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದ ದೇಶ.

ಅಫ್ಘಾನಿಸ್ತಾನದ ಇತಿಹಾಸವನ್ನು ಆ ದೇಶದ ಜನರೇ ಬರೆಯಲು ಬಿಟ್ಟಿದ್ದರೆ ಅಫ್ಘಾನಿಸ್ತಾನ ಒಂದು ಏಶ್ಯದ ಸುಂದರ ಗುಲಿಸ್ತಾನವಾಗಿ ಅರಳುತ್ತಿತ್ತು.

ಅತ್ತ ದರಿ-ಇತ್ತ ಪುಲಿ

ಆದರೆ 20ನೇ ಶತಮಾನದ ಪ್ರಾರಂಭದಿಂದಲೂ ಆ ದೇಶದಲ್ಲಿ ಮೊದಲು ಬ್ರಿಟಿಷ್ ವಸಾಹತುಶಾಹಿಗಳು, ಆ ನಂತರ ರಶ್ಯ ವಿಸ್ತರಣವಾದ, ಆನಂತರದಲ್ಲಿ ಅಮೆರಿಕ ಸಾಮ್ರಾಜ್ಯವಾದ ಹಾಗೂ ಈಗ ಚೀನಾಗಳು ಅಫ್ಘಾನಿಸ್ತಾನದ ಅಸಹಾಯಕತೆಯನ್ನು ತಮ್ಮ ಸ್ವಾರ್ಥಕ್ಕೆ ಹಾಗೂ ಸಾಮ್ರಾಜ್ಯ ವಿಸ್ತರಣೆಗೆ ಬಳಸಿಕೊಳ್ಳುತ್ತಾ ಸುಂದರ ಅಫ್ಘಾನಿಸ್ತಾನವನ್ನು ಜಗತ್ತಿನ ಅತ್ಯಂತ ಬಡ, ಹಿಂದುಳಿದ ಹಾಗೂ ಮುಗಿಯದ ಹಿಂಸಾಚಾರಗಳಿಗೆ ಬಲಿಯಾಗಿರುವ ಬರ್ಬರತೆಗೆ ದೂಡಿಬಿಟ್ಟವು.

ಹೀಗಾಗಿ ಇಂದು ಅಫ್ಘ್ಘಾನ್ ಜನತೆ ಎದುರಿಸುತ್ತಿರುವಷ್ಟು ದಮನ, ಯಾತನೆ, ದ್ರೋಹ ಹಾಗೂ ಹಿಂಸಾಚಾರಗಳನ್ನು ಬೇರೆ ಯಾವುದೇ ದೇಶವೂ ಅನುಭವಿಸಿರಲಾರದು. ಬ್ರಿಟನ್ ಮತ್ತು ಅಮೆರಿಕ ಮಾಡಿದ ದ್ರೋಹ-ದಮನಗಳಿಗೆ ಉಗ್ರವಾದದ ದಮನ ಅಥವಾ ಪ್ರಜಾತಂತ್ರದ ಸ್ಥಾಪನೆಯ ನೆಪವಿದ್ದರೆ, ತಾಲಿಬಾನಿಗಳು ಮಾಡುತ್ತಿರುವ ಬರ್ಬರ ಕ್ರೌರ್ಯಗಳಿೆ ಧರ್ಮದ ಹುಸಿಲೇಪನವಿದೆ ಅಷ್ಟೆ.

ಹಾಗೆ ನೋಡಿದರೆ ಈ ತಾಲಿಬಾನಿಗಳು ಮತ್ತು ಅವರ ಹಿಂದಿನ ಮುಜಾಹಿದ್ದೀನ್‌ಗಳೂ ಅಫ್ಘಾನಿಸ್ತಾನದ ಸಮಾಜದೊಳಗಿನ ಪ್ರತಿಗಾಮಿ ಶಕ್ತಿಗಳೇ ಆಗಿದ್ದರೂ ಅವರಿಗೆ ಸೈನಿಕ ಬೆಂಬಲ, ತರಬೇತಿ ಕೊಟ್ಟು ಅಫ್ಘ್ಘಾನ್ ರಾಜಕಾರಣದ ವಿಧಿಬರಹ ಬರೆಯುವಂತೆ ಮಾಡಿದವರು ಅಮೆರಿಕ ನೇತೃತ್ವದ ತಥಾಕಥಿತ ಪಾಶ್ಚಿಾತ್ಯ ಪ್ರಜಾತಾಂತ್ರಿಕ ಶಕ್ತಿಗಳೇ..!

ಹೀಗಾಗಿ ಅಫ್ಘಾನಿಸ್ತಾನವನ್ನು ಇಂದಿನ ವಿದ್ಯಮಾನವನ್ನು ಈ ಇತಿಹಾಸಿಕ ಭಿತ್ತಿಯಲ್ಲಿಟ್ಟು ಗ್ರಹಿಸದಿದ್ದರೆ ತಾಲಿಬಾನಿಗಳು ಮತ್ತು ಅಮೆರಿಕಗಳು ಪರಸ್ಪರ ಶತ್ರುಗಳೆಂಬ ಚಾರಿತ್ರಿಕ ಅಪಕಲ್ಪನೆ ಹುಟ್ಟಿಕೊಳ್ಳುತ್ತದೆ. ಅಂತಹ ಅಪಕಲ್ಪನೆಗಳಿಂದಾಗಿಯೇ ತಾಲಿಬಾನಿಗಳು ಅಮೆರಿಕವನ್ನು ಹಿಮ್ಮೆಟ್ಟಿಸಿದ ರಾಷ್ಟ್ರೀಯವಾದಿ ಸಮರಯೋಧರಂತೆ ಕಂಡುಬಿಡುತ್ತಾರೆ ಅಥವಾ ಅಮೆರಿಕದ ಟ್ಯಾಂಕರುಗಳು ಮತ್ತು ಅವರ ಯುದ್ಧ ವಿಮಾನಗಳು ತಾಲಿಬಾನಿಗಳೆಂಬ ಮೂಲಭೂತವಾದಿಗಳನ್ನು ದಮನ ಮಾಡಿ ಅಫ್ಘಾನಿಸ್ತಾನದಲ್ಲಿ ಪ್ರಜಾಸತ್ತೆಯನ್ನು ಸ್ಥಾಪಿಸಲು ಬಂದಿದ್ದ ಪ್ರಜಾತಾಂತ್ರಿಕ ಸಾಧನಗಳೆಂಬಂತೆ ಕಾಣತೊಡಗುತ್ತದೆ. ಆಗ ತಾಲಿಬಾನಿಗಳ ವಿಜಯವನ್ನು ಸಂಭ್ರಮಿಸುವ ಅಥವಾ ಅಮೆರಿಕದವರು ಅಫ್ಘ್ಘಾನಿಸ್ತಾನದಿಂದ ಹಿಂದೆಗೆಯದೆ ಅಲ್ಲಿಯೇ ಬಲವಾಗಿ ನೆಲೆಯೂರಬೇಕಿತ್ತೆಂಬ ತಪ್ಪುನಿಲುವುಗಳನ್ನು ತೆಗೆದುಕೊಳ್ಳುವಂತಾಗುತ್ತದೆ. ವಾಸ್ತವದಲ್ಲಿ ತಾಲಿಬಾನಿಗಳ ಗೆಲುವು ಕೂಡಾ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಮ್ರಾಜ್ಯವಾದಿಗಳ ಗೆಲುವೇ ಆಗಿದೆ. ಅಮೆರಿಕ ಅಥವಾ ಮುಂದೆ ಸಂಭಾವ್ಯ ಚೀನಾ ನಿಯಂತ್ರಣಗಳು ತಾಲಿಬಾನಿಗಳಿಗೆ ಮತ್ತವರ ಬರ್ಬರ ಮೂಲಭೂತವಾದಕ್ಕೆ ದೊರಕುವ ಆಶ್ರಯತಾಣಗಳೇ ಅಗಿವೆ. ಒಬ್ಬರು ಹಿಂದೆ ಸರಿದು ಮತ್ತೊಬ್ಬರು ಮುಂದೆ ಕಾಣಿಸಿಕೊಳ್ಳುವ ಈ ಪಾತ್ರ ಬದಲಾವಣೆಯಲ್ಲಿ ಸೋಲುತ್ತಿರುವವರು ಅಫ್ಘ್ಘಾನ್ ಪ್ರಜೆಗಳೇ ಅಗಿದ್ದಾರೆ. ಆದರೆ ಗೆದ್ದವರೇ ಇತಿಹಾಸ ಬರೆಯುವುದರಿಂದ ಅಫ್ಘ್ಘಾನ್ ಜನರೆಂದರೆ ಇತಿಹಾಸವೇ ಇಲ್ಲದ ಅತ್ಯಂತ ಬರ್ಬರ ಜನರೆಂಬ ಅಭಿಪ್ರಾಯವನ್ನು ಬಿಳಿ ಹಿರಿಮೆಯ ವಸಾಹತುಶಾಹಿಗಳು, ನಮ್ಮ ದೇಶದ ಕಂದು ಕೇಸರಿ ಕೋಮುವಾದಿಗಳು ಪ್ರಚಾರ ಮಾಡುತ್ತಾ ಬಂದಿದ್ದಾರೆ.

ಅಫ್ಘಾನಿಸ್ತಾನ- ಆಧುನಿಕತೆಯ ಗುಲಿಸ್ತಾ

ಹಾಗೆ ನೋಡಿದರೆ, ಇತಿಹಾಸಕಾರರ ಪ್ರಕಾರ ಏಶ್ಯ ಭೂಖಂಡದಲ್ಲಿ ಬ್ರಾಹ್ಮಣವಾದವು ತನ್ನ ವಿಸ್ತರಣೆಗೆ ಬಲು ದೊಡ್ಡ ಸೈನಿಕ ಸೋಲನ್ನು ಅನುಭವಿಸಿದ್ದು ಅಫ್ಘಾನಿಸ್ತಾನದಲ್ಲಿ! ಆ ನಂತರದಲ್ಲಿ ಬೌದ್ಧ ಧರ್ಮಕ್ಕೆ ಬಹುದೊಡ್ಡ ಆಸರೆಯಾಗಿದ್ದ ಅಫ್ಘಾನಿಸ್ತಾನ ನಿಧಾನಕ್ಕೆ ಪ್ರೀತಿಯಾಧಾರಿತ ಸೂಫಿ ಇಸ್ಲಾಮಿನ ಬಹುದೊಡ್ಡ ನೆಲೆಯಾಯಿತು. ಅದೇ ಸಮಯದಲ್ಲಿ ಆ ದೇಶವನ್ನು ಹಾದುಹೋದ ಎಲ್ಲಾ ಧರ್ಮಗಳು ಅಲ್ಲಿನ ಜನರ ಮೇಲೆ ಪ್ರಭಾವ ಬೀರಿ ಶಾಂತಿಯುತ ಸಹಜೀವನವನ್ನೇ ನಡೆಸುತ್ತಿದ್ದವು.

ಆಧುನಿಕ ಕಾಲದಲ್ಲಿ ಭಾರತದಂತೆ ಅಫ್ಘಾನಿಸ್ತಾನದಲ್ಲೂ ಅತಿ ಸಣ್ಣ ಮೇಲ್ ಮಧ್ಯಮ ವರ್ಗ ಹಾಗೂ ರಾಜಕುಟುಂಬದ ಕೆಲವರು ಉದಾರವಾದಿ ವೈಚಾರಿಕತೆಗೆ ಒಡ್ಡ್ಡಿಕೊಂಡು ಅಫ್ಘಾನಿಸ್ತಾನದ ಸಮಾಜದಲ್ಲಿ ಹಲವು ಸುಧಾರಣೆಗಳನ್ನು ತರಲು ಮೇಲಿನಿಂದ ಪ್ರಯತ್ನಗಳನ್ನು ಪ್ರಾರಂಭಿಸಿದ್ದರು. ಭಾರತೀಯರಂತೆ ಅಫ್ಘ್ಘಾನ್‌ನ ಧರ್ಮಿಷ್ಟರು ಮತ್ತು ಒಂದು ವರ್ಗದ ಆಧುನಿಕರಿಬ್ಬರೂ ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ನಿರಂತರ ಹೋರಾಟ ಮಾಡಿದರು. 1911ರಲ್ಲೇ ಅಲ್ಲಿನ ರಾಜ ಅಫ್ಘಾನಿಸ್ತಾನದ ಸಮಾಜದಲ್ಲಿ ದೊಡ್ಡ ಮಟ್ಟದ ಸುಧಾರಣೆ ತರಲು ಪ್ರಾರಂಭಿಸಿದ್ದ. ಆ ನಂತರದಲ್ಲಿ ರಾಜ ಅಮಾನುಲ್ಲಾ ಮತ್ತವನ ಹೆಂಡತಿ ಸುರಯ್ಯಾ ಮಹಿಳಾ ಶಿಕ್ಷಣ, ಅಕ್ಷರತೆ ಇವುಗಳ ಬಗ್ಗೆ ಕ್ರಮಗಳನ್ನು ಕೈಗೊಂಡಿದ್ದರು. ಇವು ಮುಲ್ಲಾಗಳ ಹಾಗೂ ಪಾಳೆಗಾರರ ಕಣ್ಣುಕೆಂಪಾಗಿಸಿತು. 1925ರಲ್ಲಿ ಈ ರಾಜ-ರಾಣಿಯರು ಯೂರೋಪ್ ಪ್ರವಾಸದಲ್ಲಿದಾಗ ಬುರ್ಖಾ ಹಾಕಿಕೊಳ್ಳದೆ ರಾಣಿ ಸುರಯ್ಯೆ (ಪರ)ಪುರುಷ ರಾಜತಾಂತ್ರಿಕರ ಕೈಕುಲುಕುತ್ತಿರುವ ಫೋಟೊಗಳನ್ನು ಬ್ರಿಟಿಷರೇ ಅಫ್ಘಾನಿಸ್ತಾನದ ಮುಲ್ಲಾಗಳಿಗೆ ರವಾನಿಸಿ ಈ ಆಧುನಿಕ ರಾಜರು ಅಧಿಕಾರ ಕಳೆದುಕೊಳ್ಳುವಂತೆ ಮಾಡಿದರು. ಆದರೆ ಇವೆಲ್ಲವೂ ಗ್ರಾಮೀಣ ಮಟ್ಟದಲ್ಲಿ ವಿಸ್ತರಿಸಿದ ಸುಧಾರಣೆಗಳೇನೂ ಆಗಿರಲಿಲ್ಲ. ಹೀಗಾಗಿ ಗ್ರಾಮಿಣ ಅಫ್ಘಾನಿಸ್ತಾನ ಅಂದಿನ ಗ್ರಾಮೀಣ ಭಾರತದಂತೆ ಭೂಮಾಲರ ಹಿಡಿತದಲ್ಲೇ ಉಳಿದುಕೊಂಡಿತ್ತು.

ಸಾಂವಿಧಾನಿಕ ರಾಜಸತ್ತೆಯಿಂದ ಅಫ್ಘಾನ್ ಸಮಾಜವಾದದೆಡೆಗೆ

1923ರಲ್ಲಿ ರಾಜ ಅಮಾನುಲ್ಲಾ ಒಂದು ಸುಧಾರಣವಾದಿ ಸಂವಿಧಾನವನ್ನು ಜಾರಿಗೊಳಿಸಿ ಅಫ್ಘಾನಿಸ್ತಾನವನ್ನು ಒಂದು ಸಾಂವಿಧಾನಿಕ ರಾಜಸತ್ತೆಯನ್ನಾಗಿಸಿದರೆ, 1963ರಲ್ಲಿ ರಾಜ ಜಹೀರ್ ಖಾನ್ ಚುನಾಯಿತ ಸಂಸತ್ತನ್ನು ಹೊಂದುವ ಹೊಸ ಸಂವಿಧಾನವನ್ನು ಜಾರಿಗೊಳಿಸಿದ. ಅದರ ಭಾಗವಾಗಿ ಅಫ್ಘಾನಿಸ್ತಾನದಲ್ಲಿ ಯಾವ ವಿದೇಶಿ ನೆರವಿನ ಅಗತ್ಯವೂ ಇಲ್ಲದೆ ಹೊಸ ಪ್ರಜಾತಂತ್ರದ ಗಾಳಿ ಸ್ವತಂತ್ರವಾಗಿ ಹರಿದಾಡಲು ಪ್ರಾರಂಭಿಸಿತು. ಆದರೆ ಇದೂ ಕೂಡ ದೊಡ್ಡ ಮಟ್ಟದಲ್ಲಿ ಗ್ರಾಮೀಣ ಪ್ರದೇಶವನ್ನು ತಲುಪಲಿಲ್ಲ ಅನ್ನುವುದು ಮತ್ತೊಂದು ವಿಷಯ.

1960ರ ದಶಕದಲ್ಲಿ ಅಫ್ಘಾನಿಸ್ತಾನದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಆಧುನಿಕ ವಿದ್ಯೆ ಪಡೆದ ಸಣ್ಣ ಉನ್ನತ ವಿದ್ಯಾವಂತರ ವರ್ಗವೊಂದು ಹುಟ್ಟಿಕೊಂಡಿತು. ಭಾರತದಲ್ಲಾದಂತೆ ಇದರಲ್ಲಿ ಒಂದು ವರ್ಗ ಸಮಾಜವಾದಿ ಚಿಂತನೆಗೆ ಆಕರ್ಷಿತರಾದರೆ ಒಂದು ವರ್ಗ ಇಸ್ಲಾಮಿನ ಮೂಲಭೂತವಾದಿ ವ್ಯಾಖ್ಯಾನದ ಕಡೆ ಹೊರಳಿಕೊಂಡಿತು.

 ಸಮಾಜವಾದಿ ಚಿಂತನೆಯುಳ್ಳ ಒಂದು ವರ್ಗ ಅಫ್ಘಾನಿಸ್ತಾನದಲ್ಲಿ ಪ್ರಧಾನವಾಗಿ ನಗರಗಳಲ್ಲಿ ನೆಲೆ ಹೊಂದಿದ್ದ ಕಮ್ಯುನಿಸ್ಟ್ ಪಕ್ಷದ ಹುಟ್ಟಿಗೆ ಕಾರಣರಾದರೆ ಕಾಬೂಲಿನ ವಿಶ್ವವಿದ್ಯಾನಿಲಯದ ಅಧ್ಯಾಪಕ ರಬ್ಬಾನಿ ನೇತೃತ್ವದ ಒಂದು ವರ್ಗ ಅದನ್ನು ವಿರೋಧಿಸಿ ತಮ್ಮದೇ ಅದ ಮೂಲಭೂತವಾದಿ ಇಸ್ಲಾಮ್ ವ್ಯಾಖ್ಯಾನದ ಉಗ್ರ ಸಂಘಟನೆಗಳನ್ನು ಕಟ್ಟಿಕೊಂಡರು. ಇವರಿಗೆ ಮುಲ್ಲಾಗಳ, ಗ್ರಾವಿುೀಣ ಭೂಮಾಲಕರ ಬೆಂಬಲವೂ ಇತ್ತು.

1965ರ ವೇಳೆಗೆ ಅನಹಿತ ರತೆಬ್ಜಾದ್ ಎಂಬ ಪ್ರಖ್ಯಾತ ಮಹಿಳಾ ಕಮ್ಯುನಿಸ್ಟ್ ನಾಯಕಿ ಅಫ್ಘ್ಘಾನ್ ಸಂಸತ್ತಿಗೆ ಆಯ್ಕೆಯಾಗಿ ಮಹಿಳಾ ಸ್ವಾತಂತ್ರ್ಯ, ಸಮಾನ ಹಕ್ಕುಗಳು, ಸಾರ್ವತ್ರಿಕ ಶಿಕ್ಷಣ ಮತ್ತು ಭೂ ಹಂಚಿಕೆಯ ಬಗ್ಗೆ ಕಾನೂನು ತರಲು ಪ್ರಯತ್ನಿಸುತ್ತಿದ್ದರೆ ರಬ್ಬಾನಿಯ ಶಿಷ್ಯರಾದ ಮಸೂದ್, ಹಿಕ್ಮತಿಯಾರ್ ಇನ್ನಿತರ ಭಾವೀ ಮುಜಾಹಿದೀನ್-ತಾಲಿಬಾನ್ ನಾಯಕರು ಮಹಿಳೆಯರಿಗೆ ಶಿಕ್ಷಣ ಸಲ್ಲದು ಎಂದು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ಎರಚಲು ಪ್ರಾರಂಭಿಸಿದ್ದರು. ಈ ಹಿಕ್ಮತಿಯಾರ್‌ಗೆ ಈಗ ಹೊಸದಾಗಿ ರಚಿತವಾಗಲಿರುವ ತಾಲಿಬಾನ್ ಸರಕಾರದಲ್ಲೂ ಪ್ರಧಾನ ಪಾತ್ರವಿದೆ.

 1973ರಲ್ಲಿ ದಾವೂದ್ ನೇತೃತ್ವದ ಕ್ಷಿಪ್ರ ಕ್ರಾಂತಿಯಲ್ಲಿ ರಾಜಸತ್ತೆ ಕೊನೆಗೊಂಡು ಅಫ್ಘಾನಿಸ್ತಾನ ಒಂದು ಪ್ರಜಾತಾಂತ್ರಿಕ ಗಣರಾಜ್ಯವಾಗಿ ಘೋಷಿಸಲ್ಪಟ್ಟಿತು. ಇದು ಹಲವಾರು ಜನಪರ ಸುಧಾರಣೆಗಳನ್ನು ಜಾರಿ ಮಾಡಿತು.

 ಈ ಸುಧಾರಣೆಗಳು ಎಡು ಶಕ್ತಿಗಳನ್ನು ಗಟ್ಟಿಗೊಳಿಸಿತು.

ಮೊದಲನೆಯದು ಈ ಸುಧಾರಣೆಗಳು ಇಸ್ಲಾಮ್‌ಗೆ ವಿರುದ್ಧವೆನ್ನುವ ಇಸ್ಲಾಮ್ ಹೆಸರಿನ ಉಗ್ರ ಮೂಲಭೂತವಾದಿ ಶಕ್ತಿಗಳನ್ನು. ಎರಡನೆಯದು ಸುಧಾರಣೆಗಳನ್ನು ಇನ್ನಷ್ಟು ಆಳ ಮತ್ತು ವಿಸ್ತಾರಗೊಳಿಸುವ ಆಶಯವನ್ನು ಹೊತ್ತಿದ್ದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಆಫ್ ಆಫ್ಘಾನಿಸ್ತಾನದಡಿ ಸಂಘಟಿತಗೊಂಡ ಕಮ್ಯುನಿಸ್ಟ್ ರಾಜಕಾರಣವನ್ನು.

ಭೂಮಾಲಕರಿಗೆ, ಅಮೆರಿಕನ್ ಪಿತೂರಿಗೆ ಬಲಿಯಾದ ಅಫ್ಘಾನ್ ಕಮ್ಯುನಿಸ್ಟರು!

ಅದೇ ವೇಳೆಯಲ್ಲಿ ಪಕ್ಕದ ಪಾಕಿಸ್ತಾನದಲ್ಲಿ ಪ್ರಜಾತಾಂತ್ರಿಕ ರಾಜಕಾರಣದ ಯುಗವಳಿದು ಅಮೆರಿಕ ಬೆಂಬಲಿತ ಜಿಯಾ ಉಲ್ ಹಕ್ ನೇತೃತ್ವದ ಸರ್ವಾಧಿಕಾರವು ಪ್ರಾರಂಭವಾಗಿತ್ತು. ಜಿಯಾ ಸರಕಾರ ಅಫ್ಘಾನಿಸ್ತಾನದ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ನೇರ ಬೆಂಬಲ ಮತ್ತು ಆಶ್ರಯ ಕೊಡಲು ಪ್ರಾರಂಭಿಸಿತು. ಅದು ಈವರೆಗೂ ಮುಂದುವರಿದಿದೆ. 1978ರಲ್ಲ್ಲಿ ಕಮ್ಯುನಿಸ್ಟ್ ಕ್ಷಿಪ್ರಕ್ರಾಂತಿ ನಡೆದು ಕಮ್ಯುನಿಸ್ಟ್ ನಾಯಕ ಹಫೀಝುಲ್ ಅಮೀನ್ ನೇತೃತ್ವದ ಕಮ್ಯುನಿಸ್ಟ್ ಸರಕಾರ ಅಧಿಕಾರಕ್ಕೆ ಬಂತು. ಅದು ವಿಸ್ತೃತವಾದ ಭೂ ಸುಧಾರಣೆ, ಭೂ ಹಂಚಿಕೆ, ಬಡ್ಡಿ ದರ ಕಡಿತ, ಸಾರ್ವತ್ರಿಕ ಶಿಕ್ಷಣ, ಮಹಿಳಾ ಸಮಾನತೆ ಇನ್ನಿತರ ಕ್ರಮಗಳನ್ನು ಜಾರಿಗೊಳಿಸಲು ಪ್ರಾರಂಭಿಸಿತು.

18,000ಕ್ಕೂ ಹೆಚ್ಚು ಕಮ್ಯುನಿಸ್ಟ್ ಕಾರ್ಯಕರ್ತರನ್ನು ಹಳ್ಳಿಗಳಿಗೆ ಕಳಿಸಿ ಸಾಕ್ಷರ ಕಾರ್ಯಕ್ರಮವನ್ನು ಕೈಗೊಂಡಿತು. ಇವೆಲ್ಲವೂ ಹಳ್ಳಿಯ ಭೂ ಮಾಲಕರ, ಪಾಳೆಗಾರರ ಹಾಗೂ ಮುಲ್ಲಾಗಳ ಕಣ್ಣನ್ನು ಕೆಂಪಾಗಿಸಿತು. ಹಳ್ಳಿಗಳಲ್ಲಿ ಈ ಅಕ್ಷರ ಕಾರ್ಯಕರ್ತರನ್ನು ಭೂಮಾಲಕರು ಮತ್ತು ಮುಲ್ಲಾಗಳು ವಿರೋಧಿಸಿದರು ಹಾಗೂ ಹಲವಾರು ಪ್ರಮುಖ ಕಮ್ಯುನಿಸ್ಟ್ ನಾಯಕರ ಕೊಲೆಗಳನ್ನು ಮಾಡಿದರು. ಅದೇ ಸಮಯದಲ್ಲಿ ಕಮ್ಯುನಿಸ್ಟ್ ಪಕ್ಷದೊಳಗೆ ಇದ್ದ ಕಲಕ್ ಹಾಗೂ ಪರ್ಚಮ್ ಬಣಗಳ ನಡುವೆಯೂ ತೀವ್ರ ದಾಯಾದಿ ಕಲಹವೂ ಪ್ರಾರಂಭವಾಗಿತ್ತು.

ಆ ಸಮಯದಲ್ಲಿ ಅಫ್ಘ್ಘಾನ್ ಕಮ್ಯುನಿಸ್ಟರು ಈ ಬಿಕ್ಕಟ್ಟಿನಿಂದ ಪಾರಾಗಲು ಸೋವಿಯತ್ ರಶ್ಯದ ಸಹಾಯವನ್ನು ಕೇಳುತ್ತಾರೆ. ಇಲ್ಲಿಂದಾಚೆಗೆ ಅಫ್ಘಾನಿಸ್ತಾನದ ರಾಜಕಾರಣ ಮತ್ತು ಜನರ ಭವಿಷ್ಯ ಅಫ್ಘ್ಘಾನ್ ಜನತೆಗಿಂತ ವಿದೇಶಿ ಬಲಿಷ್ಠ ಹಾಗೂ ಸಾಮ್ರಾಜ್ಯವಾದಿ ಶಕ್ತಿಗಳೇ ನಿರ್ಧರಿಸಲು ಪ್ರಾರಂಭವಾಗುತ್ತದೆ.

ಅಮೆರಿಕ-ರಶ್ಯ ಶೀತಲ ಯುದ್ಧಕ್ಕೆ ರಣರಂಗವಾದ ಅಫ್ಘಾನಿಸ್ತಾನ

1950-1991ರ ಅವಧಿ ಅಮೆರಿಕ ಹಾಗೂ ಸೋವಿಯತ್ ಒಕ್ಕೂಟಗಳ ನಡುವೆ ಶೀತಲ ಯುದ್ಧ ನಡೆಯುತ್ತಿದ್ದ ಕಾಲ. ಅಮೆರಿಕದ ಪ್ರಭಾವಲಯದಲ್ಲಿ ಸೋವಿಯತ್ ಹಸ್ತಕ್ಷೇಪ ಹಾಗೂ ಸೋವಿಯತ್ ಪ್ರಭಾವಲಯದಲ್ಲಿ ಅಮೆರಿಕ ಹಸ್ತಕ್ಷೇಪ ನಡೆಯುತ್ತಾ ಭಾರ, ಅಫ್ಘಾನಿಸ್ತಾನ, ಲ್ಯಾಟಿನ್ ಅಮೆರಿಕ, ಆಫ್ರಿಕಾದ ಬಡದೇಶಗಳು ಈ ಎರಡೂ ಶಕ್ತ ರಾಷ್ಟ್ರಗಳ ನಡುವಿನ ಪ್ರಾಕ್ಸಿ ಯುದ್ಧ ನಡೆಯುವ ರಣರಂಗಗಳಾಗಿ ಬದಲಾದವು. ಅಫ್ಘ್ಘಾನ್ ಕಮ್ಯುನಿಸ್ಟ್ ಪಕ್ಷದ ಕೋರಿಕೆಯಂತೆ ಸೋವಿಯತ್ ಒಕ್ಕೂಟವು ಅಫ್ಘಾನಿಸ್ತಾನವನ್ನು ಪ್ರವೇಶಿಸುತ್ತಿದ್ದಂತೆ ಅಮೆರಿಕವು ಅದರ ವಿರುದ್ಧ ಪ್ರಾಕ್ಸಿ ಯುದ್ಧವನ್ನು ಪ್ರಾರಂಭಿಸಿತು.

ಅಮೆರಿಕ ಸರಕಾರವು ಆಡಳಿತ ರೂಢ ಕಮ್ಯುನಿಸ್ಟ್ ಪಕ್ಷದ ವಿರುದ್ಧವಿದ್ದ ಮುಲ್ಲಾಗಳು, ಭೂಮಾಲಕರು ಹಾಗೂ ಪಾಳೆಗಾರರು ಕಟ್ಟಿಕೊಂಡಿದ್ದ ಮುಜಾಹಿದೀನ್ ಸಂಘಟನೆಗೆ ತನ್ನ ಕೃಪಾಕಟಾಕ್ಷದಲ್ಲಿದ್ದ ಪಾಕಿಸ್ತಾನದಲ್ಲಿ ಆಶ್ರಯ ನೀಡಿ ತರಬೇತಿ, ಹಣಕಾಸು ಸಹಾಯ ಮಾಡಿತು. ಆಗಿನ್ನೂ ಜೈಲಿನಲ್ಲಿದ್ದ ನೆಲ್ಸನ್ ಮಂಡೇಲಾರನ್ನು ಭಯೋತ್ಪಾದಕ ಎಂದಿದ್ದ ಆಗಿನ ಅಮೆರಿಕದ ಅಧ್ಯಕ್ಷ ರೇಗನ್, ಈ ಕೊಲೆಗಡುಕ ಮುಜಾಹಿದೀನ್‌ಗಳನ್ನು ‘‘ಸ್ವಾತಂತ್ರ್ಯ ಹೋರಾಟಗಾರ’’ರೆಂದು ಕರೆದಿದ್ದರು ಹಾಗೂ ಅಮೆರಿಕದ ಭಯೋತ್ಪಾದಕರ ಪಟ್ಟಿಯಲ್ಲಿ ನೆಲ್ಸನ್ ಮಂಡೇಲಾ ಹೆಸರು 2008ರವರೆಗೂ ಇರಿಸಿಕೊಳ್ಳಲಾಗಿತ್ತು!

ಸೋವಿಯತ್ ರಶ್ಯ ಒಂದು ವಿದೇಶಿ ಸೈನ್ಯವಾಗಿದ್ದು ಯಾವ ಕ್ರಾಂತಿಯನ್ನು ರಫ್ತು ಮಾಡಲು ಆಗುವುದಿಲ್ಲ. ಬದಲಿಗೆ ಅದು ವ್ಯತಿರಿಕ್ತ ಪರಿಣಾಮವನ್ನೇ ಬೀರುತ್ತದೆ.

ಒಂದು ಕಡೆ ಕಮ್ಯುನಿಸ್ಟ್ ಪಕ್ಷದ ಸುಧಾರಣೆಗಳು ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಜಾರಿಯೂ ಆಗಿರಲಿಲ್ಲ. ಯಾರು ಫಲಾನುಭವಿ ಬಡವರೋ ಅವರಿಗೆ ಇದರ ಬಗ್ಗೆ ಗೊತ್ತೂ ಇರಲಿಲ್ಲ. ಮತ್ತೊಂದು ಕಡೆ ಈ ಸುಧಾರಣೆಗಳ ವಿರುದ್ಧ ಬಂಡೆದ್ದಿದ್ದ ಭೂಮಾಲಕ, ಪಾಳೆಗಾರಿ, ಮುಲ್ಲಾಗಳ ಕೂಟಕ್ಕೆ ಈ ವಿದೇಶಿ ಸೋವಿಯತ್ ಸೈನ್ಯವು ಸುಧಾರಣೆಗಳ ವಿರುದ್ಧ ಹಾಗೂ ಕಮ್ಯುನಿಸ್ಟರ ವಿರುದ್ಧ ಇಸ್ಲಾಮ್ ಹೆಸರಿನ ಕಟ್ಟರ್ ಮೂಲಭೂತವಾದದಡಿ ಸಂಘಟಿಸಲು ಹೊಸ ಅವಕಾಶ ಒದಗಿಸಿತು.

ಸೋವಿಯತ್ ಸೈನ್ಯ ವಿದೇಶಿ ಆಕ್ರಮಣಕಾರಿ ಸೈನ್ಯ. ಮತ್ತದು ದೈವದ್ರೋಹಿ ಕಮ್ಯುನಿಸ್ಟ್ ಸೈನ್ಯ. ಇವೆರಡು ನೆಲೆಯಲ್ಲಿ ಭೂಮಾಲಕ-ಪಾಳೆಗಾರಿ-ಮುಲ್ಲಾಗಳ ನೇತೃತ್ವದ ಮುಜಾಹಿದೀನ್‌ಗಳಿಗೆ ದೊಡ್ಡ ಬೆಂಬಲ ದೊರಕುತ್ತಾ ಹೋಯಿತು. ಅದೇ ಸಮಯದಲ್ಲಿ ಕಮ್ಯುನಿಸ್ಟ್ ಹಾಗೂ ಸೋವಿಯತ್ ವಿರೋಧಿ ಮುಜಾಹಿದೀನ್‌ಗಳಿಗೆ ಅಮೆರಿಕವು ತನ್ನ ಶೀತಲ ಯುದ್ಧ ನೀತಿಯ ಭಾಗವಾಗಿ ದೊಡ್ಡ ಶಸ್ತ್ರಾಸ್ತ್ರ ಹಾಗೂ ಹಣಕಾಸು ಬೆಂಬಲವನ್ನು, ಪ್ರಚಾರವನ್ನು ನೀಡಿ ಗಟ್ಟಿಗೊಳಿಸಿತು. ಈ ಬಾಡಿಗೆ ಅಮೆರಿಕನ್ ಪೋಷಿತ ಪಡೆಗಳು ಅಫ್ಘ್ಘಾನ್ ಸರಕಾರ ಹಾಗೂ ಸೋವಿಯತ್ ಪಡೆಗಳ ಮೇಲೆ ದಾಳಿಯನ್ನು ಪ್ರಾರಂಭಿಸಿದವು. ಅಫ್ಘ್ಘಾನ್ ದೇಶ ರಕ್ತಸಿಕ್ತವಾಯಿತು.

ಮುಜಾಹಿದೀನ್ ದಿರಿಸಿನಲ್ಲಿ ಅಮೆರಿಕದ ಆಕ್ರಮಣ

ಇದೆಲ್ಲದರ ಪರಿಣಾಮವಾಗಿ ಹಾಗೂ ಅಮೆರಿಕ ಮತ್ತು ರಶ್ಯ ಶೀತಲ ಯುದ್ಧವನ್ನು ನಿಲ್ಲಿಸಲು ಮಾಡಿಕೊಂಡ ಜಾಗತಿಕ ಒಪ್ಪಂದದ ಭಾಗವಾಗಿ ಸೋವಿಯತ್ ಸೈನ್ಯ ಅಫ್ಘಾನಿಸ್ತಾನದಿಂದ ಹಿಂದಿರುಗಿತು. ಆದರೆ ಅಮೆರಿಕ ಮುಜಾಹಿದೀನ್ ಬಂಡುಕೋರರಿಗೆ ನೀಡುತ್ತಿದ್ದ ಬೆಂಬಲವನ್ನು ಮುಂದುವರಿಸಿತು. ಅಮೆರಿಕ ಹಾಗೂ ಪಾಕಿಸ್ತಾನದ ಬೆಂಬಲದೊಂದಿಗೆ ಈ ಮುಜಾಹಿದೀನ್ ಪಡೆಗಳು ಇಡೀ ಅಫ್ಘಾನಿಸ್ತಾನವನ್ನು ಆಕ್ರಮಿಸಿಬಿಟ್ಟವು. ಇದರಿಂದಾಗಿ ಆಗ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ನಜೀಬುಲ್ಲಾ ಸರಕಾರ ಇಸ್ಲಾಮ್‌ವಾದಿಗಳಿಗೆ ಒಪ್ಪಿಗೆಯಾಗುವಂತೆ 1980ರಲ್ಲಿ ರಚಿಸಿದ ಹೊಸ ಸಂವಿಧಾನದಲ್ಲಿದ್ದ ಸಮಾಜವಾದದ ಬಗ್ಗೆ ಇದ್ದ ಎಲ್ಲಾ ಉಲ್ಲೇಖಗಳನ್ನು ತೆಗೆದುಹಾಕಿದರೂ ಉಪಯೋಗವಾಗದೆ 1992ರಲ್ಲಿ ಆತ ರಾಜೀನಾಮೆ ಕೊಡಬೇಕಾಯಿತು.

1192ರಿಂದ 1995ರವರೆಗೆ ಮುಜಾಹಿದೀನ್‌ಗಳ ಸರಕಾರವೇ ಅಧಿಕಾರಕ್ಕೆ ಬಂದಿತು. ಅಮೆರಿಕ ಅದಕ್ಕೆ ಸಂಪೂರ್ಣ ಬೆಂಬಲ ಕೊಟ್ಟಿತು ಮಾತ್ರವಲ್ಲದೆ ಪರೋಕ್ಷ ನಿಯಂತ್ರಣವನ್ನೂ ಇಟ್ಟುಕೊಂಡಿತು. ಅದರೆ ಅದು ದೇಶದ ವಿವಿಧ ಭಾಗಗಳ ಪಾಳೆಗಾರರ ಹಾಗೂ ಭೂಮಾಲಕರ ಸಡಿಲ ಕೂಟವಾಗಿದ್ದರಿಂದ ಅಧಿಕಾರ ಹಾಗೂ ಸಂಪತ್ತಿಗಾಗಿ ಒಳಘರ್ಷಣೆ ಪ್ರಾರಂಭವಾಯಿತು. ಅಪಾರವಾದ ಹಿಂಸಾಚಾರ ಹಾಗೂ ಭ್ರಷ್ಟಾಚಾರಗಳು ಅಫ್ಘಾನಿಸ್ತಾನವನ್ನು ಮತ್ತೊಮ್ಮೆ ಅಸ್ಥಿರತೆಗೆ ದೂಡಿತು.

 (ನಾಳೆಯ ಸಂಚಿಕೆಗೆ ಮುಂದುವರಿಯುವುದು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)