4ನೆ ವರ್ಷದ ಸಂಭ್ರಮದಲ್ಲಿ ‘ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್’
ಮಂಗಳೂರು, ಆ.26: ನಗರದ ಅಬ್ದುಲ್ ರವೂಫ್ ಬಂದರ್ ಮತ್ತು ಸಂಘಡಿಗರ ಪ್ರಯತ್ನದಿಂದ ಹುಟ್ಟಿಕೊಂಡ ‘ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್’ ನಾಲ್ಕನೇ ವರ್ಷದ ಸಂಭ್ರಮದಲ್ಲಿದ್ದು, ವೈವಿಧ್ಯಮಯ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಸಂಘದ ಗೌರವ ಸಲಹೆಗಾರ ಹುಸೈನ್ ಕಾಟಿಪಳ್ಳ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಮಸ್ಜಿದ್ ಜೀನತ್ ಭಕ್ಷ್ನ ಮಾಜಿ ಅಧ್ಯಕ್ಷ ಸಿ. ಅಬ್ದುಲ್ ಹಮೀದ್ ಸಾಹೇಬ್ರ ಸ್ಮರಣಾರ್ಥ ಲಯನ್ಸ್ ಕ್ಲಬ್ ಸೆಂಚುರಿಯನ್ ಅಧ್ಯಕ್ಷ ಹಾಗೂ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ನ ಮುಖ್ಯಸ್ಥ ಸಾದತ್ ಫರ್ಹಾನ್ ಕೊಡುಗೆಯಾಗಿ ನೀಡಿದ ವಾಟರ್ ಕೂಲರ್ನ್ನು ಆ.30ರಂದು ಮಧ್ಯಾಹ್ನ ಕುದ್ರೋಳಿಯ ಆಟೊರಿಕ್ಷಾ ಪಾರ್ಕ್ನ ಸಮೀಪ ಸಾರ್ವಜನಿಕರಿಗೆ ಸಮರ್ಪಿಸಲಾಗುವುದು ಎಂದರು.
‘ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್’ ಕಳೆದ ಮೂರು ವರ್ಷದಲ್ಲಿ ಅನೇಕ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ 5,000ಕ್ಕೂ ಅಧಿಕ ಯುನಿಟ್ ರಕ್ತವನ್ನು ಸಂಗ್ರಹಿಸಿ ರೋಗಿಗಳಿಗೆ ವಿತರಿಸಿ ನೂರಾರು ಮಂದಿಯ ಜೀವ ಉಳಿಸಿದೆ. ಅನಾರೋಗ್ಯ ಪೀಡಿತ ಅಶಕ್ತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆ. ಅರ್ಹರಿಗೆ ಆರ್ಥಿಕ ಸಹಾಯ ಒದಗಿಸಿದೆ. ಆಹಾರ ಕಿಟ್ಗಳನ್ನು ವಿತರಿಸಿದೆ. ಹೆಣ್ಣುಮಕ್ಕಳ ಮದುವೆಗೆ ಸಹಾಯ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಸೌಹಾರ್ದ ಸಮಾವೇಶಗಳನ್ನು ಆಯೋಜಿಸಿದೆ ಎಂದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರೂಬಿಯಾ ಅಖ್ತರ್ ಮಾತನಾಡಿ ಸೆಪ್ಟೆಂಬರ್ನಲ್ಲಿ ಸಂಸ್ಥೆಯ ಮಳಾ ಘಟಕ ಸ್ಥಾಪನೆ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸ್ಥಾಪಕ ಅಧ್ಯಕ್ಷ ಅಬ್ದುಲ್ ರವೂಫ್ ಬಂದರ್, ಅಧ್ಯಕ್ಷ ತೌಹೀದ್, ಅನೀಸ್ ಬಂದರ್, ನಝೀರ್, ಸಾದಿಕ್, ಅಲಿಷಾ ಉಪಸ್ಥಿತರಿದ್ದರು.