ಯುಎಇಯ ರಾಷ್ಟ್ರೀಯ ಭದ್ರತಾ ಸಲಹೆಗಾರ ನೇತೃತ್ವದ ನಿಯೋಗದಿಂದ ಖತರ್ ಭೇಟಿ
ದೋಹ, ಆ.28: ಯುಎಇಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಶೇಖ್ ತಹ್ನೌನ್ ಬಿನ್ ಝಾಯೆದ್ ಅಲ್ ನಹ್ಯಾನ್ ನೇತೃತ್ವದ ನಿಯೋಗವು ಖತರ್ಗೆ ಭೇಟಿ ನೀಡಿದ್ದು ಖತರ್ನ ದೊರೆ ಶೇಖ್ ತಮೀಮ್ ಬಿನ್ ಹಮದ್ ಅಲ್ಥನಿ ಯುಎಇ ನಿಯೋಗವನ್ನು ಬರಮಾಡಿಕೊಂಡರು ಎಂದು ವರದಿಯಾಗಿದೆ. ಈ ಭೇಟಿಯ ಸಂದರ್ಭ ಸಮಾನ ಹಿತಾಸಕ್ತಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಚರ್ಚಿಸಲಾಗಿದೆ. ಆರ್ಥಿಕ ಮತ್ತು ವ್ಯವಹಾರ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಪಕ್ಷೀಯ ಸಂಬಂಧ ಸುಧಾರಣೆ, ಹೂಡಿಕೆ ಯೋಜನೆಗಳ ಬಗ್ಗೆ ಮುಖಂಡರು ಚರ್ಚಿಸಿದರು ಎಂದು ಮೂಲಗಳು ಹೇಳಿವೆ.
ಯುಎಇಯ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಯೆದ್ ಅಲ್ ನಹ್ಯಾನ್, ದುಬೈಯ ದೊರೆ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್-ಮಕ್ತೂಮ್, ಅಬುಧಾಭಿಯ ಯುವರಾಜ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಶುಭ ಹಾರೈಕೆಯನ್ನು ಈ ಭೇಟಿಯ ಸಂದರ್ಭ ಯುಎಇ ನಿಯೋಗ ಖತರ್ ದೊರೆಗೆ ಸಲ್ಲಿಸಿತು. ಇದಕ್ಕೆ ಕೃತಜ್ಞತೆ ಸಲ್ಲಿಸಿದ ಖತರ್ ದೊರೆ, ಯುಎಇ ದೇಶಗಳೊಂದಿಗಿನ ಸ್ನೇಹ ಸಂಬಂಧ ಖತರ್ ಮತ್ತದರ ಜನತೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.