ಮುಂಬೈ ಕನ್ನಡಿಗರ ಹೆಮ್ಮೆಯ ‘ಕರ್ನಾಟಕ ಸಂಘ, ಮಾಟುಂಗ’
ಸಂಘಕ್ಕೆ ಒಂದು ಸ್ವಂತ ಕಟ್ಟಡದ ಅವಶ್ಯಕತೆ ಇದೆ ಅನ್ನಿಸಿದ್ದು; ಆ ಕನಸಿಗೆ ರೆಕ್ಕೆ ಮೂಡಿದ್ದು ಬೆಳ್ಳಿ ಸಂಭ್ರಮಾಚರಣೆಯ ಆ ಸಂಭ್ರಮದಲ್ಲಿ. ಅಂದಿನ ಅಧ್ಯಕ್ಷರಾದ ಎ. ಕೆ. ಹಫೀಝ್ಕಿ, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಎಲ್ಲರೂ ಅಂದು ಜಾತಿ, ಮತ, ಧರ್ಮ ಭೇದ ಎಣಿಸದೆ, ವ್ಯಕ್ತಿಗಿಂತ ಸಂಘ ದೊಡ್ಡದು ಎಂಬ ಭಾವನೆಯಿಂದ ಒಂದಾಗಿ ಸಂಘದ ಉನ್ನತಿಗಾಗಿ ಕಟಿಬದ್ಧರಾಗಿ ನಿಂತರು. ಮಾಜಿ ಅಧ್ಯಕ್ಷರಾಗಿದ್ದ ಜಸ್ಟಿಸ್ ಲೋಕೂರ್ ನಾರಾಯಣ ರಾಯರು ಹಾಗೂ ಇನ್ನಿತರ ಧೀಮಂತ ವ್ಯಕ್ತಿಗಳ ಪರಿಶ್ರಮದಿಂದಾಗಿ ಮುಂದಿನ ದಿನಗಳಲ್ಲಿ ಮುಂಬೈ ಕನ್ನಡಿಗರ ಸಾಂಸ್ಕೃತಿಕ ಕೇಂದ್ರವಾಗಿ ಪರಿಣಮಿಸಿದ ‘ವಿಶ್ವೇಶ್ವರಯ್ಯ ಸ್ಮಾರಕ ಮಂದಿರ’ಕ್ಕೆ ಬೇಕಾಗಿದ್ದ ಸ್ಥಳ ದೊರೆಯಿತು.
ಬಹುಭಾಷೆ, ಬಹುಸಂಸ್ಕೃತಿಯ ಮುಂಬೈ ನಗರದಲ್ಲಿ ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿ ಹುಟ್ಟಿಕೊಂಡ ಅಂಗಸಂಸ್ಥೆಗಳು ಹಲವಾರು. ಅವುಗಳಲ್ಲಿ ಮುಂಚೂಣಿಯಲ್ಲಿದ್ದ ಮಾದರಿ ಸಂಸ್ಥೆ ‘ಕರ್ನಾಟಕ ಸಂಘ, ಮಾಟುಂಗ’. 1933ರಲ್ಲಿ ಬರೀ ಕನ್ನಡಿಗರ ಕೂಟವಾಗಿ ಹುಟ್ಟಿದ ಕರ್ನಾಟಕ ಸಂಘವು ಸರ್. ಎಂ. ವಿಶ್ವೇಶ್ವರಯ್ಯ ಸ್ಮಾರಕ ಕಟ್ಟಡ ಸಂಕೀರ್ಣದ ಮೂಲಕ ಮುಂಬೈ ಕನ್ನಡಿಗರ ಸಾಂಸ್ಕೃತಿಕ ಕೇಂದ್ರವಾಗಿ ಕನ್ನಡಿಗರ ಹೆಮ್ಮೆಯ ತಾಣವಾಯಿತು. ಜೂನ್ 4, 1933ರಲ್ಲಿ ಕರ್ನಾಟಕ ಸಂಘ ರೂಪುಗೊಂಡಾಗ ಕನ್ನಡ ನುಡಿಯ ಕುರಿತ ಅಭಿಮಾನದಿಂದ ಒಂದಾದ ಕರ್ನಾಟಕ ಸಂಘದ ಕಾರ್ಯಕರ್ತರು ಸಂಘಕ್ಕೆ ಸ್ವಂತ ಕಟ್ಟಡದ ಕನಸನ್ನೂ ಕಂಡಿರಲಿಲ್ಲ. ಆಗ ಅವರಿಗೆ ಅಗತ್ಯವೆನಿಸಿದ್ದು ತಮ್ಮ ಸದಸ್ಯರು ಬಂದು ನಿರಾಳವಾಗಿ ಕುಳಿತು ಕನ್ನಡ ಪತ್ರಿಕೆಗಳನ್ನು ಓದುವ ಅವಕಾಶವಿರುವ ಒಂದು ವಾಚನಾಲಯ. ಸಂಘವು ಜನ್ಮತಾಳಿದ್ದು ಗಿರ್‌ಗಾಂ ಪ್ರದೇಶದ ‘ಸಂಜಗಿರಿ ಸದನ’ ಎಂಬ ಕಟ್ಟಡವೊಂದರ ಕಿರುಕೋಣೆಯಲ್ಲಿ. ಪ್ರಾರಂಭದ ದಿನಗಳಲ್ಲಿ ಸಂಘವು ಎಲ್ಲ ಕನ್ನಡಿಗರೂ ಮೆಚ್ಚಿಕೊಂಡು ಆಚರಿಸ ತೊಡಗಿದ್ದ ನಾಡಹಬ್ಬದ ವ್ಯವಸ್ಥೆ; ಎಲ್ಲ ಸಂಘಗಳು ತಮ್ಮ ಅಸ್ತಿತ್ವವನ್ನು ಸಾರಲೆಂದು ವರ್ಷಕ್ಕೊಮ್ಮೆ ಆಚರಿಸುವ ವಾರ್ಷಿಕ ದಿನಾಚರಣೆ ಇವಿಷ್ಟರಲ್ಲೇ ತನ್ನನ್ನು ತೊಡಗಿಸಿಕೊಳ್ಳುತ್ತಿತ್ತು. ಅಂದಿನ ಪ್ರಾಮಾಣಿಕ, ನಿಸ್ವಾರ್ಥ ಅಧ್ಯಕ್ಷರು, ಪದಾಧಿಕಾರಿಗಳ ತುಡಿತದ ಪರಿಣಾಮ ನಗರದ ಕನ್ನಡ ರಂಗಭೂಮಿಯ ಚಿನ್ನದ ಹಬ್ಬ (1957), 1935ರಲ್ಲಿ ಎನ್. ಎಸ್. ಸುಬ್ಬರಾವ್ ಅಧ್ಯಕ್ಷತೆಯಲ್ಲಿ ಹಾಗೂ 1951ರಲ್ಲಿ ಮ. ಗೋವಿಂದ ಪೈ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಎರಡು ಮಹತ್ವದ ಸಾಹಿತ್ಯ ಸಮ್ಮೇಳನಗಳಿಗೆ ಮುತುವರ್ಜಿಯಿಂದ ಸಹಯೋಗ ನೀಡಿತ್ತು. 1946ರಲ್ಲಿ ಅಂದಿನ ಮುಂಬೈ ರಾಜ್ಯದ ಮುಖ್ಯಮಂತ್ರಿ ಬಿ.ಜಿ. ಖೇರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಏಕೀಕರಣ ಸಮ್ಮೇಳನದಲ್ಲೂ ಕರ್ನಾಟಕ ಸಂಘವು ಮಹತ್ವದ ಪಾತ್ರ ವಹಿಸಿತ್ತು.
ನಿಧಾನವಾಗಿ ಬೀಳುತ್ತಾ, ಏಳುತ್ತಾ ಮುಂದೆ ಸಾಗುತ್ತಿದ್ದ ಕರ್ನಾಟಕ ಸಂಘ ಬೆಳ್ಳಿಹಬ್ಬದ ಸಂಭ್ರಮಕ್ಕೆ ಕಾಲಿಟ್ಟಿತು. ಆದರೆ ಆ ಸಂಭ್ರಮಾಚರಣೆ ನಡೆದದ್ದು ನಾಲ್ಕು ವರ್ಷಗಳ ನಂತರ 1962ರಲ್ಲಿ. ಕೋಟೆ ಪರಿಸರದ ಕ್ರಾಸ್ ಮೈದಾನದಲ್ಲಿ ನಿರ್ಮಿಸಿದ್ದ ಸಭಾಮಂಟಪದಲ್ಲಿ ಸಂಪನ್ನಗೊಂಡು, ಭವ್ಯವಾದ ಸಾಂಸ್ಕೃತಿಕ ಮೇಳವಾಗಿ ಪರಿಣಮಿಸಿದ್ದ ಈ ಸಮಾರಂಭವನ್ನು ಮಹಾರಾಷ್ಟ್ರದ ಅಂದಿನ ರಾಜ್ಯಪಾಲ ಡಾ. ಪಿ. ಸುಬ್ಬರಾಯನ್ ಉದ್ಘಾಟಿಸಿದ್ದರು. ಸಂಘಕ್ಕೆ ಒಂದು ಸ್ವಂತ ಕಟ್ಟಡದ ಅವಶ್ಯಕತೆ ಇದೆ ಅನ್ನಿಸಿದ್ದು; ಆ ಕನಸಿಗೆ ರೆಕ್ಕೆ ಮೂಡಿದ್ದು ಬೆಳ್ಳಿ ಸಂಭ್ರಮಾಚರಣೆಯ ಆ ಸಂಭ್ರಮದಲ್ಲಿ. ಅಂದಿನ ಅಧ್ಯಕ್ಷರಾದ ಎ. ಕೆ. ಹಫೀಝ್ಕಿ, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಎಲ್ಲರೂ ಅಂದು ಜಾತಿ, ಮತ, ಧರ್ಮ ಭೇದ ಎಣಿಸದೆ, ವ್ಯಕ್ತಿಗಿಂತ ಸಂಘ ದೊಡ್ಡದು ಎಂಬ ಭಾವನೆಯಿಂದ ಒಂದಾಗಿ ಸಂಘದ ಉನ್ನತಿಗಾಗಿ ಕಟಿಬದ್ಧರಾಗಿ ನಿಂತರು. ಮಾಜಿ ಅಧ್ಯಕ್ಷರಾಗಿದ್ದ ಜಸ್ಟಿಸ್ ಲೋಕೂರ್ ನಾರಾಯಣ ರಾಯರು ಹಾಗೂ ಇನ್ನಿತರ ಧೀಮಂತ ವ್ಯಕ್ತಿಗಳ ಪರಿಶ್ರಮದಿಂದಾಗಿ ಮುಂದಿನ ದಿನಗಳಲ್ಲಿ ಮುಂಬೈ ಕನ್ನಡಿಗರ ಸಾಂಸ್ಕೃತಿಕ ಕೇಂದ್ರವಾಗಿ ಪರಿಣಮಿಸಿದ ‘ವಿಶ್ವೇಶ್ವರಯ್ಯ ಸ್ಮಾರಕ ಮಂದಿರ’ಕ್ಕೆ ಬೇಕಾಗಿದ್ದ ಸ್ಥಳ ದೊರೆಯಿತು.
ಆದರೆ ಸ್ವಂತ ಕಟ್ಟಡದ ಕನಸು ಸುಲಭದ ತುತ್ತಾಗಿರಲಿಲ್ಲ. ಅದಕ್ಕಾಗಿ ಶ್ರಮಿಸಿದ ಹಿರಿಯರು ಕ್ರಮಿಸಿದ್ದು ಕಲ್ಲುಮುಳ್ಳಿನ ಹಾದಿಯನ್ನು. 1965ರಲ್ಲಿ ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ವಿ.ಪಿ. ನಾಯಕ್ ಕಟ್ಟಡದ ಶಂಕುಸ್ಥಾಪನೆ ಮಾಡಿದ್ದರು. ಅಂದು ಆ ಕಟ್ಟಡದ ಒಟ್ಟು ಮೊತ್ತ 6 ಲಕ್ಷ ರೂ. (ಇಂದಿನ 6 ಕೋಟಿ ರೂ.) ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಸ್ಮಾರಕ ಯೋಜನೆಯಲ್ಲಿ ಯು. ಶ್ರೀನಿವಾಸ ಮಲ್ಯ ಸ್ಮಾರಕ ಸಭಾಗ್ರಹ, ಮುಂಬೈ ಕನ್ನಡಿಗರ ಮಧ್ಯವರ್ತಿ ಗ್ರಂಥಾಲಯ, ಕರ್ನಾಟಕದ ವಿಚಾರ ತಿಳಿವಳಿಕೆ ನೀಡುವ ವಾರ್ತಾಕೇಂದ್ರ ಇವೆಲ್ಲವೂ ಸೇರಿತ್ತು. ಅಂದಿನ ಅಧ್ಯಕ್ಷರ ಕಾಲಾವಧಿ ಮುಗಿದು ವರದರಾಜ ಆದ್ಯರು 1969ರಲ್ಲಿ ಅಧ್ಯಕ್ಷರಾದ ನಂತರ ಕುಂಟುತ್ತಾ ಸಾಗುತ್ತಿದ್ದ ಕಾರ್ಯಕ್ಕೆ ಹೊಸ ತಿರುವು ಸಿಕ್ಕಿತು. ಸುಮಾರು 40 ಲಕ್ಷ ರೂ. ಹೊಸ ಮೊತ್ತದ ಕಟ್ಟಡದ ಹೊಸ ನಕ್ಷೆಯೊಂದಿಗೆ ವಿಶೇಷ ಮಹಾಸಭೆ ಮಂಜೂರು ನೀಡಿತ್ತು. ಪ್ರಾಮಾಣಿಕತೆ, ಶುದ್ಧ ಮನಸ್ಸು ಇದ್ದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಎಲ್ಲರೂ ಕೂಡಿ ಕಟ್ಟಿದ ವಿಶ್ವೇಶ್ವರಯ್ಯ ಸ್ಮಾರಕ ಮಂದಿರ ಉದಾಹರಣೆಯಾಗಿ ಸಾಕ್ಷಿಯಾಗಿ ತಲೆಯೆತ್ತಿ ನಿಂತಿತ್ತು. ನಮ್ಮ ಹಿರಿಯರು ಡಬ್ಬಿ ಹಿಡಿದುಕೊಂಡು ಸಂಜೆ ಹಾಗೂ ರಜಾ ದಿನಗಳಲ್ಲಿ ಮಾಟುಂಗಾ ಹಾಗೂ ಆಸುಪಾಸುಗಳಲ್ಲಿ ಹಣಕ್ಕಾಗಿ ಪರದಾಡಿದ್ದಾರೆ. ಅಧ್ಯಕ್ಷರಾಗಿದ್ದ ವರದರಾಜ ಆದ್ಯರು ತಮ್ಮ ವಲಯಕ್ಕೆ ಸೇರಿದ ಮಾತ್ರವಲ್ಲದೆ ಹಲವು ಮೂಲಗಳಿಂದ ಸಹಾಯ ಯಾಚಿಸತೊಡಗಿದ್ದರು. ಅಂದಿನ ಕಚೇರಿಯಲ್ಲಿ ಕಾರ್ಯದರ್ಶಿಯಾಗಿದ್ದ ಶಾಂತಾ ಶರದ್‌ರಾವ್, ‘‘ಕರ್ನಾಟಕ ಸಂಘದ ಕಟ್ಟಡ ನಿಧಿಗೆ ಯಾವ ಮೂಲಗಳಿಂದಲೂ ಸಹಾಯ ದೊರಕುತ್ತಿದ್ದರೂ ತುದಿಗಾಲಲ್ಲಿ ನಿಂತು ಆ ಸಹಾಯ ಪಡೆಯಲು ಸಿದ್ಧರಾಗುತ್ತಿದ್ದರು. ಅಂದಿನ ದಿನಗಳಲ್ಲಿ ಸಹಾಯಯಾಚಿಸಿ ಐನೂರಕ್ಕೂ ಹೆಚ್ಚು ಕೋರಿಕೆ ಪತ್ರಗಳನ್ನು ನಾನು ಟೈಪ್ ಮಾಡಿದ್ದೇನೆ’’ ಎಂದು ವಿವರಿಸುತ್ತಾರೆ. ಆರ್ಥಿಕ ಅಡಚಣೆ ಮತ್ತೂ ಕಾಡಿದಾಗ ಕೊಡುಗೈ ದಾನಿ ಗುಜರಾತಿ ಪಿ. ಜೆ. ಪಠೇಲ್ ಅವರನ್ನು ಕನ್ನಡ ಸಂಘದ ತಂಡ ಸಂಪರ್ಕಿಸಿ ಸಂಘದಲ್ಲಿ ಅವರನ್ನು ವಿಶೇಷವಾಗಿ ಸೇರಿಸಿಕೊಂಡು ಅವರ ತಂದೆ ಜವೇರ್ ಭಾಯ್ ಪಟೇಲರ ಹೆಸರನ್ನು ಸಭಾಗೃಹಕ್ಕೆ ಇರಿಸಲಾಯಿತು. ಹೀಗೆ ನಗರದ ಹೃದಯಭಾಗದಲ್ಲಿನ ಕರ್ನಾಟಕ ಸಂಘದ ಹವಾನಿಯಂತ್ರಿತ ಸಭಾಗೃಹ 775 ಆಸನ ವ್ಯವಸ್ಥೆ, ಆಧುನಿಕ ರಂಗಭೂಮಿಗೆ ಅಗತ್ಯವಿರುವ ದೀಪ ವ್ಯವಸ್ಥೆ ಎಲ್ಲವನ್ನೂ ಹೊಂದಿತು. ಕೆಳಗಿನ ‘ಮಿನಿಹಾಲ್’ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರವಲ್ಲದೆ ಮದುವೆ ಇತ್ಯಾದಿ ಕಾರ್ಯಕ್ರಮಗಳಿಗೂ ಸೂಕ್ತವಾಗಿ ಮೂಡಿ ಬಂತು. ನವೆಂಬರ್ 6, 1977ರಂದು ಆಗಿನ ಕರ್ನಾಟಕದ ರಾಜ್ಯಪಾಲರಾಗಿದ್ದ ಗೋವಿಂದ ನಾರಾಯಣ ಅವರು ಈ ಸುಸಜ್ಜಿತ ವಿಶ್ವೇಶ್ವರಯ್ಯ ಸ್ಮಾರಕ ಮಂದಿರದ ಉದ್ಘಾಟನೆ ಮಾಡಿದ್ದರು. ಹೀಗೆ ಕನ್ನಡಿಗರ ಸಾಂಸ್ಕೃತಿಕ ಕೇಂದ್ರವೊಂದು ಹುಟ್ಟಿಕೊಂಡ ಕೆಲವೇ ವರ್ಷಗಳಲ್ಲಿ (1983) ಕರ್ನಾಟಕ ಸಂಘವು ಐವತ್ತರ ಸಂಭ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಂಡಿತು. ಮೂರನೇ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದ ಶಿಸ್ತಿನ ಸಿಪಾಯಿ, ರಾತ್ರಿಶಾಲೆಯಲ್ಲಿ ಕಲಿತು ಮುಂದೆ ಬಂದಿದ್ದ ಸದಾನಂದ ಶೆಟ್ಟಿಯವರು ಚಿನ್ನದ ಹಬ್ಬದ ಆಚರಣಾ ಸಮಿತಿಯ ಅಧ್ಯಕ್ಷರಾಗಿ ಸಂಘದ ಅಧ್ಯಕ್ಷ ಆದ್ಯರೊಂದಿಗೆ ಹಾಗೂ ಎಲ್ಲ ಪದಾಧಿಕಾರಿಗಳ ಜೊತೆ ಸೇರಿ ಐವತ್ತರ ನೆನಪನ್ನು ಮುಂಬೈಯಾದ್ಯಂತ ಅವಿಸ್ಮರಣೀಯಗೊಳಿಸುವಲ್ಲಿ ಯಶಸ್ವಿಯಾದರು. ಅವರ ಕಾರ್ಯವೈಖರಿಯನ್ನು ಕಂಡ ಕನ್ನಡ ಸಾಹಿತ್ಯ ಪರಿಷತ್ತು ಸದಾನಂದ ಶೆಟ್ಟಿಯವರನ್ನು ತನ್ನ ಕಾರ್ಯಕಾರಿ ಸಮಿತಿಯಲ್ಲಿ ಮುಂಬೈ ಪ್ರತಿನಿಧಿಯನ್ನಾಗಿ ನೇಮಿಸಿತ್ತು. ಜೂನ್ 4ರಂದು ಚಿನ್ನದ ಹಬ್ಬದ ಉದ್ಘಾಟನೆ ಮಾಡಿದವರು ಕರ್ನಾಟಕದ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು. ಅಂದಿನ ಸಮಿತಿ, ಉಪ ಸಮಿತಿಗಳಲ್ಲಿ ವರದರಾಜ ಆದ್ಯ, ಯಶವಂತ ಚಿತ್ತಾಲ, ಎಚ್.ಎಸ್. ರಾವ್, ಎ.ಎಸ್.ಕೆ. ರಾವ್, ವಾಸುದೇವ ಕಾಣೆಮಾರ್, ಎಲ್.ಎಂ. ಪಾಟೀಲ್, ವಿ.ಎನ್. ಸುಗಂಧಿ, ಸದಾನಂದ ಎ. ಶೆಟ್ಟಿ, ವ್ಯಾಸರಾಯ ಬಲ್ಲಾಳ, ಕೆ.ಜೆ. ರಾವ್, ಎಂ.ಆರ್. ಪುಂಜ, ಆರ್.ವಿ. ಮೂರ್ತಿ, ಚಿದಂಬರ ದೀಕ್ಷಿತ್, ಎ.ಕೆ. ಹಫೀಝ್ಕಾ, ಜಸ್ಟಿಸ್ ಎಂ. ಆರ್. ಜಹಾಗೀರದಾರ, ಎಂ.ವಿ. ಕಾಮತ್, ಗಿರೀಶ್ ಕಾರ್ನಾಡ್, ಎಂ.ಆರ್. ಪೈ, ಎಫ್.ಎಂ. ಪಿಂಟೋ, ಶರದ್ ಎ. ರಾವ್, ವಿಠಲ ಶೆಟ್ಟಿ, ಬಿ.ಎನ್. ಶ್ರೀಕೃಷ್ಣ, ಜಿ. ಸುಬ್ಬಣ್ಣ, ಬಿ.ಎ. ಸನದಿ, ಎಂ. ರಾಮಚಂದ್ರ ಹೆಗಡೆ, ಕೆ.ಕೆ. ಸುವರ್ಣ, ಜಿ.ವಿ. ಶೆಟ್ಟಿಗಾರ್, ಎ. ನರಸಿಂಹ, ವಾಸು ಕೆ. ಪುತ್ರನ್, ಕರುಣಾಕರ ಪುತ್ರನ್, ಕೆ.ಜೆ. ರಾವ್, ಕೆ.ಟಿ.ವೇಣುಗೋಪಾಲ್, ಡಿ.ಕೆ. ಮೆಂಡನ್, ವಸಂತ ಕಲಕೋಟಿ, ಜಿ.ವಿ. ಕುಲಕರ್ಣಿ, ರವಿ ರಾ. ಅಂಚನ್, ಎನ್.ಸಿ. ದೇಸಾಯಿ, ಡಾ. ಎಸ್.ಎಸ್. ಬ್ಯಾತನಾಳ, ಸುನೀತಿ ಉದ್ಯಾವರ, ಭಾರತಿ ಕೊಡ್ಲೇಕರ್, ವಾಣಿ ಉಚ್ಚಿಲ್, ಜಿ.ಡಿ. ಜೋಶಿ, ಮಾಯಾ ಪಾಟೀಲ್, ಮಿತ್ರಾ ವೆಂಕಟ್ರಾಜ, ಸುನೀತಾ ಎಂ. ಶೆಟ್ಟಿ, ಕಿಶೋರಿ ಬಲ್ಲಾಳ್, ಶ್ರೀಪತಿ ಬಲ್ಲಾಳ್, ಸೌಮ್ಯಲತಾ ಶೆಟ್ಟಿ -ಹೀಗೆ ಕೆಲವಷ್ಟೇ ಹೆಸರುಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಒಂದು ಕಾರ್ಯಕಾರಿ ಸಮಿತಿಗಿದ್ದ ಬದ್ಧತೆ, ಪ್ರಾಮಾಣಿಕತೆ, ಎಲ್ಲರನ್ನು ಒಟ್ಟು ಸೇರಿಸುವಿಕೆಯಿಂದಾಗಿ ಕರ್ನಾಟಕ ಸಂಘವು ಸಾಂಸ್ಕೃತಿಕ ಕೇಂದ್ರದಿಂದ ಮುಂಬೈ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಲು ಮುಂದಡಿಯಿಟ್ಟಿತು.
ಚಿನ್ನದ ಹಬ್ಬಕ್ಕಾಗಿ ಹಮ್ಮಿಕೊಂಡ ಸಾಂಸ್ಕೃತಿಕ, ಸಾಹಿತ್ಯ ಗೋಷ್ಠಿ, ಜನಪದ, ನಾಟಕ, ನೃತ್ಯ ಇತ್ಯಾದಿ ಕಾರ್ಯಕ್ರಮಗಳಲ್ಲಿ ಕಲಾವಿದರ ತಂಡಗಳನ್ನು, ಕೇವಲ ಬೆಂಗಳೂರು ಅಥವಾ ಕರ್ನಾಟಕದಿಂದ ಮಾತ್ರ ಆಹ್ವಾನಿಸದೆ ಮುಂಬೈ ಕನ್ನಡಿಗರಿಗೂ ಅಷ್ಟೇ ಅವಕಾಶ ನೀಡಿದ್ದನ್ನು ನಾವು ಗಮನಿಸತಕ್ಕದ್ದು. ಉದಾಹರಣೆಗೆ ಚಿನ್ನದ ಹಬ್ಬದ ನಿಮಿತ್ತ ಆ ವರ್ಷ ಪ್ರಯೋಗ ಕಂಡ 9 ನಾಟಕಗಳಲ್ಲಿ ಮುಂಬೈ ಕನ್ನಡಿಗರ ವಿವಿಧ ತಂಡಗಳಿಂದ ಪ್ರಯೋಗ ಕಂಡ ನಾಟಕಗಳ ಸಂಖ್ಯೆ 5. ಆ ವರ್ಷದ ನವರಾತ್ರಿ ಸಾಂಸ್ಕೃತಿಕ ಉತ್ಸವದ ಅಂಗವಾಗಿ ರಾಮನಿರಂಜನ ಝನ್‌ಝ್‌ನ್‌ವಾಲಾ ಕಾಲೇಜಿನ ವಿದ್ಯಾರ್ಥಿಗಳ ‘ಮಧು ಕೈಟಭ’ ಯಕ್ಷಗಾನ ಪ್ರಸಂಗವನ್ನು ನಾವು ಮರೆಯುವಂತಿಲ್ಲ. ಹೀಗೆ ಎಲ್ಲರನ್ನೂ ಎಲ್ಲವನ್ನೂ ಒಗ್ಗೂಡಿಸಿ ನಡೆದ ಕರ್ನಾಟಕ ಸಂಘ ಮಾಟುಂಗ, ಕೆ.ಟಿ. ವೇಣುಗೋಪಾಲರ ಒಂದು ಲೇಖನದ ಪ್ರೇರಣೆಯಿಂದ ‘ಕರ್ನಾಟಕ ಸಂಘ ಮುಂಬೈ’ಯಾಗಿ ಗುರುತಿಸಿಕೊಂಡಿತು.
ಚಿನ್ನದ ಹಬ್ಬದ ಸಂದರ್ಭ ಸಂಘ ಹಾಗೂ ಸದಸ್ಯರ ಜತೆ ಸ್ನೇಹ ಸೇತು ವೊಂದು ನಿರ್ಮಾಣವಾಗಬೇಕು ಎಂಬ ನಿಟ್ಟಿನಲ್ಲಿ ಹಬ್ಬದ ಉದ್ಘಾಟನೆ (ಜೂನ್ 4)ಸಂದರ್ಭ ಡಾ. ಲಲಿತಾ ರಾವ್ ಸಂಘದ ದ್ವೈಮಾಸಿಕ ಪತ್ರಿಕೆ ‘ಸಂಬಂಧ’ ಬಿಡುಗಡೆಗೊಳಿಸಿದ್ದರು. ಸುಮಾರು ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚು ಬಹು ಅಮೂಲ್ಯ ಗ್ರಂಥಗಳ, ಹೊಸ ತಾಂತ್ರಿಕ ವ್ಯವಸ್ಥೆಯಿಂದ ರೂಪುಗೊಂಡ ಗ್ರಂಥಾಲಯವು ಪಠ್ಯಪುಸ್ತಕ ಸಮಿತಿಗೆ ಸಂಬಂಧಿಸಿದ ಕೆಲಸಗಳಿಗಾಗಲಿ, ಸ್ನಾತಕೋತ್ತರ ಸಂಶೋಧನೆಗಾಗಲಿ, ಸಾಹಿತ್ಯ ಸಂಶೋಧನೆಗಾಗಲಿ ಆಕರ ಗ್ರಂಥಗಳ ನಿಧಿಯೆನಿಸಿ ಆಸಕ್ತರನ್ನು ಸೆಳೆದಿದೆ. ತನ್ನ ಪ್ರಕಟನಾ ವಿಭಾಗದಿಂದ ಜಸ್ಟಿಸ್ ಲೋಕೂರ್ ನಾರಾಯಣರಾಯರ ಜೀವನಚಿತ್ರ, ಶ್ರೀರಂಗರ ನಾಟಕ ‘ಜರಾಸಂಧಿ’, ಗ್ರಂಥಾಲಯ ತಂತ್ರದ ಬಗೆಗಿನ ಬಹುಮುಖ್ಯ ಗ್ರಂಥ, ಮುಂಬೈ ಕನ್ನಡಿಗರ ಡಿರೆಕ್ಟರಿ, ಸಂಪಾದಿತ ವಿವಿಧ ಲೇಖಕರ ಕಥಾ ಸಂಕಲನ, ಕೃತಿಗಳ ಮೂಲಕ ಬೆಳಕಿಗೆ ಬಾರದ ಕವಿಗಳ ಸಂಪಾದಿತ ಕವಿತಾ ಸಂಕಲನ ಹೀಗೆ ಹಲವಾರು ಕೃತಿಗಳ ಮೂಲಕ ಪ್ರಕಟನಾ ಕಾರ್ಯದಲ್ಲಿ ತನ್ನ ಕೈಲಾದ ಮಹತ್ವದ ಕಾರ್ಯ ಮಾಡಿದೆ.
ಕರ್ನಾಟಕ ಸಂಘವು ಹಲವಾರು ಶಾಲೆಗಳ ಸ್ಥಾಪನೆಯಲ್ಲೂ ಮುಂಚೂಣಿಯ ಪಾತ್ರ ವಹಿಸಿ ಮುಂದೆ ಅಂತಹ ಶಾಲೆಗಳನ್ನು ಮನಪಾ ಸುಪರ್ದಿಗೆ ಒಪ್ಪಿಸಿದೆ. ಇಲ್ಲಿನ ಶೈಕ್ಷಣಿಕ ತೊಂದರೆಗಳ ಕುರಿತ ‘ಶಿಕ್ಷಕರ ಸಮ್ಮೇಳನ’ವನ್ನೂ ಹಮ್ಮಿಕೊಂಡಿದ್ದು ಮಾತ್ರವಲ್ಲದೆ ಕಳೆದ ಶತಮಾನದ ಆದಿ-ಈ ಶತಮಾನದ ಪ್ರಾರಂಭದಲ್ಲಿ ಹಮ್ಮಿಕೊಂಡ ಎರಡು ದಿನಗಳ ಕನ್ನಡ ಮನಪಾ ಹಾಗೂ ರಾತ್ರಿ ಶಾಲೆ ಕಾಲೇಜುಗಳ ಶಿಕ್ಷಣ ಶಿಕ್ಷಣ ನೀತಿ, ಎದುರಿಸಿದ್ದ ತಾಂತ್ರಿಕ ತೊಂದರೆ ಇತ್ಯಾದಿಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿರುವುದನ್ನು ಗಮನಿಸಬೇಕು.
ಈ ಹಿಂದೆ ಮಹಾನಗರದುದ್ದಕ್ಕೂ ಓಣಿ, ಗಲ್ಲಿ-ಗಲ್ಲಿಗಳಲ್ಲಿ, ರಸ್ತೆಗಳ ಬದಿಗಳಲ್ಲಿ ರಾತ್ರಿಯಿಡೀ ಯಕ್ಷಗಾನ ಬಯಲಾಟಗಳು ನಡೆಯುತ್ತಿದ್ದವು. ಮುಂದೆ ಷಣ್ಮುಖಾನಂದ ಸಭಾಗೃಹ, ಗಡ್ಕರಿ ಸಭಾಗೃಹಗಳಲ್ಲಿ ಯಕ್ಷಗಾನಗಳು (ಊರಿಂದ ಬರುವ ಮೇಳಗಳಿಂದ) ಜರುಗತೊಡಗಿದ್ದವು. ಅಲ್ಲಿ ಉಂಟಾದ ಕೆಲವನ್ನು ತೊಂದರೆಗಳಿಂದಾಗಿ ಮುಂದೆ ಖಾಯಂ ಆಗಿ ಮಳೆಗಾಲದ 6 ತಿಂಗಳು ಕರ್ನಾಟಕ ಸಂಘದ ಸಭಾಗೃಹದಲ್ಲಿ ರಾತ್ರಿಯಿಡೀ ಯಕ್ಷಗಾನಗಳು ಜರುಗುತ್ತಿದ್ದವು. ರಾತ್ರಿ ಕ್ಯಾಂಟೀನ್, ಹೊಟೇಲ್‌ಗಳು ಬಂದ್ ಆದ ಕೂಡಲೇ ನಮ್ಮವರ ಓಟ ಕರ್ನಾಟಕ ಸಂಘದತ್ತ. ಅಷ್ಟೊಂದು ಸೆಳೆತವನ್ನು ಯಾವುದೇ ಬಿಂಕಗಳಿಲ್ಲದೆ ರೂಪಿಸಿದ ಶ್ರೇಯ ಈ ಕನ್ನಡದ ಸಾಂಸ್ಕೃತಿಕ ಭವನಕ್ಕಿತ್ತು.
ಕರ್ನಾಟಕ ನಾಟಕ ಅಕಾಡಮಿಗಳ ನೆರವಿನಿಂದ ಹಲವಾರು ನಾಟಕ ಉತ್ಸವಗಳನ್ನು ಯಶಸ್ವಿಯಾಗಿ ಆಯೋಜಿಸಿದ ಹೆಗ್ಗಳಿಕೆ ಕರ್ನಾಟಕ ಸಂಘಕ್ಕಿದೆ. ಬಿ.ವಿ. ಕಾರಂತ, ಜಿ.ಬಿ. ಜೋಶಿ, ಚಂದ್ರಶೇಖರ ಕಂಬಾರ ಮೊದಲಾದವರ ರಂಗಪ್ರಯೋಗ ಮಾತ್ರವಲ್ಲ ನಾಟಕದ ಬಗ್ಗೆ ವಿಶಿಷ್ಟ ಗೋಷ್ಠಿಗಳನ್ನೂ ಆಯೋಜಿಸುತ್ತ ಬಂದಿದೆ. ಮುಖ್ಯವಾಗಿ ಸ್ಥಳೀಯ ರಂಗ ಕಲಾವಿದರ ತಂಡಗಳು ಅಂದು ಪ್ರಯೋಗ ಕಾಣುವುದಕ್ಕೆ ಸಹಕಾರಿಯಾಗಿತ್ತು. ಕಿರು ಸಭಾಗೃಹದಲ್ಲಿ ಲೇಖಕರ ಕೃತಿ ಬಿಡುಗಡೆಗೆ ಉಚಿತವಾಗಿ ಸಭಾಗೃಹ ಸಿಗುತ್ತಿತ್ತು. ಇಲ್ಲಿ ನಾಟಕಗಳ ಬೆಳವಣಿಗೆಯ ಉದ್ದೇಶದಿಂದ ವಿವಿಧ ನಾಟಕ ತಂಡಗಳಿಗೆ ಅವಕಾಶ ನೀಡಿದ್ದನ್ನು ನಾವು ಮರೆಯುವಂತಹದ್ದಲ್ಲ. ಹಿಂದೆ ಮುಂಬೈಯಾದ್ಯಂತ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಏಕಾಂಕ ನಾಟಕ ಸ್ಪರ್ಧೆಗಳು ನಡೆಯುತ್ತಿದ್ದವು. ಅಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದ ದಿನೇಶ್ ಕುಡ್ವರವರು ಸಮಿತಿಯಲ್ಲಿದ್ದಾಗ ಅಂತಹದ್ದೇ ಸ್ಪರ್ಧೆಯನ್ನು ಆಯೋಜಿಸುವ ಯೋಜನೆಯನ್ನು ಮನಸ್ಸಿನಲ್ಲೇ ರೂಪಿಸಿಕೊಂಡಿದ್ದರು. 1994ರಲ್ಲಿ ಕುವೆಂಪು ನಿಧನದ ಕೆಲವೇ ತಿಂಗಳುಗಳಲ್ಲಿ ಕುವೆಂಪು ಹೆಸರಿನಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವ ರೂಪುರೇಷೆಯನ್ನು ಮಾಡಿದವರು ದಿನೇಶ್ ಕುಡ್ವ. ಅವರ ಜತೆಗಿದ್ದು ಸಹಕರಿಸಿದವರು ರಂಗನಟ ಮೋಹನ್ ಮಾರ್ನಾಡ್. ಪ್ರಾರಂಭದ ವರ್ಷ ಕುವೆಂಪುರವರ ಮಹಾಕಾವ್ಯ, ಕಾವ್ಯಗಳ ವಾಚನ, ಭಾಷಣ, ಕುವೆಂಪುರವರ ನಾಟಕದ ಒಂದು ಭಾಗವನ್ನು ಆಯ್ದು ರಂಗಪ್ರಸ್ತುತಿ ಪಡಿಸುವುದಿತ್ತು. ಮುಂಬೈ ವಿವಿ ಕನ್ನಡ ವಿಭಾಗ, ಆರ್.ಜೆ. ಕಾಲೇಜ್, ಸೋಮಯ್ಯ ಕಾಲೇಜು ಹಾಗೂ ಕನ್ನಡ ಭವನ ಹೀಗೆ ಹೆಚ್ಚಿನ ಸಂಘಟನೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಮುಂದೆ ಇದರ ಪ್ರೇರಣೆಯಿಂದ ಕುಡ್ವ ಇದನ್ನು ‘ಕುವೆಂಪು ಏಕಾಂಕ ನಾಟಕ ಸ್ಪರ್ಧೆ’ಯಾಗಿ ರೂಪಿಸುವ ಸಲಹೆಯನ್ನಿತ್ತು, ಒಪ್ಪಿಗೆ ಪಡೆದು ಅವರು ಹಾಗೂ ಮಾರ್ನಾಡ್ ಇಬ್ಬರೂ ಸೇರಿ ಇದಕ್ಕಾಗಿ ಸಜ್ಜಾದರು. ಆದರೆ ಎಲ್ಲೋ ಒಂದು ಕಡೆ ಲೋಪ ಉಂಟಾಗಿ ಮುಂಬೈ ಕನ್ನಡಿಗರಿಗಾಗಿ ಏರ್ಪಡಿಸಿದ್ದ ಕುವೆಂಪು ಏಕಾಂಕ ನಾಟಕ ಸ್ಪರ್ಧೆ ರಾಷ್ಟ್ರಮಟ್ಟದ ಸ್ಪರ್ಧೆಯಾಗಿ ಮಾರ್ಪಾಡಾಯಿತು. ಮುಂದೆ ದಿನೇಶ್ ಅವರ ಜತೆ ಗಿರಿಧರ ಕಾರ್ಕಳ, ರಾಜು ಶ್ರೀಯಾನ್ ಸೇರಿ ಸಂಘಕ್ಕೆ ಯಾವ ರೀತಿಯಿಂದಲೂ ಹೊರೆಯಾಗದ ರೀತಿ ಸ್ಪರ್ಧೆಗೆ ಅನುವು ಮಾಡಿಕೊಟ್ಟರು.
ರವಿ ರಾ. ಅಂಚನ್ ಅಧ್ಯಕ್ಷರಾಗಿ (2001-04)ಕಾರ್ಯನಿರ್ವಹಿಸಿದ್ದ ಸಂದರ್ಭ ಹಿಂದಿನ ಹಿರಿಯರ ತ್ಯಾಗ ಬಲಿದಾನ ಪ್ರಾಮಾಣಿಕತೆ ಬದ್ಧತೆ ಎಲ್ಲವನ್ನು ಅರಿತು ಸಂಘ ಆರ್ಥಿಕವಾಗಿಯೂ ಬಲಿಷ್ಠವಾಗಬೇಕೆಂದು ಪಣತೊಟ್ಟರು. ಅವರಿದ್ದ ಮೂರು ವರ್ಷ ಅದನ್ನು ಸಾಧಿಸಿ ತೋರಿಸಿದ್ದರು. ಕ್ರಿಯಾಶೀಲ ಮನಸ್ಸಿನ ರವಿ ರಾ. ಅಂಚನ್ ಸಂಘವು ಮುಂಬೈಯ ಸರ್ವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಆಗಬೇಕೆಂದು ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದರು. ಆದರೆ ಎಲ್ಲೋ ಏನೋ ಸರಿಯಿಲ್ಲ ಎಂದರಿತ ರವಿ ರಾ. ಅಂಚನ್ ಮುಂದಿನ ಸಮಿತಿಯಿಂದ ಹೊರ ಬಂದರು. ಸಂಘಕ್ಕೆ ಹೊಸ ಆಯಾಮ ಕೊಡುವಲ್ಲಿ ಯಶಸ್ವಿಯಾದ ರವಿ ರಾ. ಅಂಚನ್ ಅವರ ಊಹೆ ಭವಿಷ್ಯದಲ್ಲಿ ನಿಜವಾಗಿ ಪರಿಣಮಿಸಿತು. ಸಂಘ ಅವರು ಕಂಡಿದ್ದ ಪ್ರಾತಿನಿಧಿಕ ಸಂಸ್ಥೆಯಾಗಲಿಲ್ಲ. ಕೇವಲ ಕನ್ನಡಿಗರ ಸಾಂಸ್ಕೃತಿಕ ಕೇಂದ್ರವಾಗಿ ಉಳಿಯಿತು. ಮುಂದಿನ ಅಂಕಣದಲ್ಲಿ ಅದನ್ನು ಬರೆಯುವೆ.