ಕ್ಷಿಪಣಿ ದಾಳಿಯನ್ನು ವಿಫಲಗೊಳಿಸಿದ ಸೌದಿ ಸೇನೆ; 2 ಮಕ್ಕಳಿಗೆ ಗಾಯ
ದುಬೈ, ಸೆ.5: ಸಮೃದ್ಧ ತೈಲನಿಕ್ಷೇಪಗಳಿರುವ ಸೌದಿ ಅರೆಬಿಯಾದ ಪೂರ್ವ ಪ್ರಾಂತ್ಯವನ್ನು ಗುರಿಯಾಗಿಸಿ ನಡೆಸಲಾದ ಕ್ಷಿಪಣಿ ದಾಳಿಯನ್ನು ಪ್ರತಿಬಂಧಿಸಲಾಗಿದ್ದು ಈ ಸಂದರ್ಭ ಕ್ಷಿಪಣಿಯ ಚೂರುಗಳು ಬಡಿದು 2 ಮಕ್ಕಳು ಗಾಯಗೊಂಡಿದ್ದಾರೆ ಹಾಗೂ 14 ಮನೆಗಳಿಗೆ ಅಲ್ಪಪ್ರಮಾಣದ ಹಾನಿಯಾಗಿದೆ ಎಂದು ಸೌದಿ ಅರೆಬಿಯಾದ ರಕ್ಷಣಾ ಇಲಾಖೆ ಹೇಳಿದೆ.
ಇರಾನ್ ಬೆಂಬಲಿತ ಹೌದಿ ಬಂಡುಕೋರರು ಈ ದಾಳಿ ನಡೆಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಆದರೆ ದಾಳಿಯ ಹೊಣೆಯನ್ನು ಇದುವರೆಗೆ ಯಾರೂ ಒಪ್ಪಿಕೊಂಡಿಲ್ಲ ಎಂದು ವರದಿಯಾಗಿದೆ.
ದಮ್ಮಾಮ್ನ ಉಪನಗರದ ಆಗಸದಲ್ಲಿ ಈ ಕ್ಷಿಪಣಿಗಳನ್ನು ತಡೆದು ಧ್ವಂಸಗೊಳಿಸಲಾಗಿದೆ. ಈ ಸಂದರ್ಭ ಕ್ಷಿಪಣಿಯ ಚೂರು ಬಡಿದು ಹಲವು ವಸತಿ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಎಸ್ಪಿಎ ಹೇಳಿದೆ. ಹಲವು ವಸತಿ ಕಟ್ಟಡಗಳ ಕಿಟಕಿ ಮತ್ತು ಬಾಗಿಲುಗಳಿಗೆ ಹಾನಿಯಾಗಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳು ಪ್ರಸಾರ ಮಾಡಿವೆ.
ಕೆಲ ದಿನಗಳ ಹಿಂದೆ ದಕ್ಷಿಣ ಪ್ರಾಂತ್ಯದ ಜಝಾನ್ ಮತ್ತು ನರ್ಜಾನ್ ನಗರಗಳನ್ನು ಗುರಿಯಾಗಿಸಿದ ಕ್ಷಿಪಣಿ ದಾಳಿಯನ್ನೂ ಪ್ರತಿಬಂಧಿಸಲಾಗಿದೆ ಎಂದು ಸೌದಿ ಅರೆಬಿಯಾದ ರಕ್ಷಣಾ ಇಲಾಖೆ ಹೇಳಿದೆ.