varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 6 Sep, 2021
ಪಿ.ಎ.ರೈ

ಬಿಜೆಪಿ ಬಗ್ಗೆ ನಾನು ಯಾವತ್ತೂ ಮೃದು ಧೋರಣೆ ತಳೆದಿಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಅವರು ಅನುಮತಿಸಿದರೆ ಅವರ ಪಾದ ತೊಳೆಯುವುದೇ ನಿಮ್ಮ ದೃಢ ಧೋರಣೆ ಎಂಬುದು ಗೊತ್ತಿದ್ದರೂ ಅವರು ಅವಕಾಶ ಕೊಡುತ್ತಿಲ್ಲವಲ್ಲಾ!


ಇನ್ನು ಮುಂದೆ ಪ್ರತಿ ಬುಧವಾರ ವಿಶೇಷ ಲಸಿಕೆ ಉತ್ಸವ ನಡೆಸಿ ಸುಮಾರು 10 ಲಕ್ಷ ಲಸಿಕೆ ನೀಡಲಾಗುವುದು - ಡಾ.ಸುಧಾಕರ್, ಸಚಿವ
ಉತ್ಸವದ ಹೆಸರಲ್ಲಿ ಜನ ಜಂಗುಳಿ ಹೆಚ್ಚಿಸಿದಷ್ಟು ಲಸಿಕೆಗೆ ಬೇಡಿಕೆ ಹೆಚ್ಚ ಬಹುದು.


ಅಲ್ಪಸಂಖ್ಯಾತರನ್ನು ಓಲೈಸುವ ಕಾಂಗ್ರೆಸ್‌ಗೆ ಮುಸ್ಲಿಮರು ನಾಯಕರಾಗುವುದು ಬೇಡ - ಅಸದುದ್ದೀನ್ ಉವೈಸಿ, ಎಐಎಂಐಎಂ ಅಧ್ಯಕ್ಷ
ನಿಮ್ಮ ಪಕ್ಷಕ್ಕೆ ನಿಮ್ಮ ಕುಟುಂಬದ ಹೊರಗಿನವರು ನಾಯಕರಾಗಬಹುದೇ?


2023ರ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಗೆಲ್ಲುವುದೇ ನಮ್ಮ ಮುಂದಿನ ಗುರಿ - ಅರುಣ್ ಸಿಂಗ್, ರಾಜ್ಯ ಬಿಜೆಪಿ ಉಸ್ತುವಾರಿ
ಅದರೊಂದಿಗೆ ಜನರಿಗೇನಾದರೂ ಉಪಕಾರ ಮಾಡುವ ಒಂದೆರಡು ಉಪಗುರಿಗಳನ್ನೂ ಇಟ್ಟುಕೊಂಡರೆ ಒಳ್ಳೆಯದಲ್ಲವೇ ಸಾರ್?


ತಿಹಾರ್ ಜೈಲಿಗೆ ಹೋಗಿ ಬಂದಿರುವ ಡಿ.ಕೆ.ಶಿವಕುಮಾರ್ ಅವರಿಗೆ ಕಾನೂನಿನ ಅರಿವಿಲ್ಲ - ನಳಿನ್‌ಕುಮಾರ್ ಕಟೀಲು, ಸಂಸದ
ಆದ್ದರಿಂದ ನೀವು, ಕಾನೂನು ಕಲಿಯಲು ಬೇರೆ ಯಾವ ಜೈಲನ್ನು ಆರಿಸಿಕೊಂಡಿರುವಿರಿ?


ಹೊಸ ಶಿಕ್ಷಣ ನೀತಿಯಿಂದ ಭಾರತ ವಿಶ್ವ ಗುರುವಾಗಲು ಸಾಧ್ಯ - ಡಾ.ಅಶ್ವತ್ಥನಾರಾಯಣ, ಸಚಿವ
ಬೆಲೆ ಏರಿಕೆ, ಭ್ರಷ್ಟಾಚಾರ, ಬೀದಿ ಹಿಂಸೆ ಇತ್ಯಾದಿಯಲ್ಲಿ ಈಗಾಗಲೇ ವಿಶ್ವಗುರುವಾಗಿದ್ದೇವಲ್ಲಾ! ಇನ್ನಾವ ರಂಗ ಬಾಕಿ ಇದೆ ಡಾಕ್ಟ್ರೇ?


ತಾಲಿಬಾನ್‌ಗೆ ಎಲ್ಲ ದೇಶಗಳೂ ಸಕ್ರಿಯ ಮಾರ್ಗದರ್ಶನ ನೀಡಬೇಕು - ವಾಂಗ್ ಯೂ, ಚೀನಾ ವಿದೇಶಾಂಗ ಸಚಿವ
ಅಂತಃಕಲಹವನ್ನು ಪಾಕಿಸ್ತಾನ, ಬೀದಿ ಹಿಂಸೆ ಮತ್ತು ಭ್ರಷ್ಟಾಚಾರವನ್ನು ಭಾರತ, ಸರ್ವಾಧಿಕಾರವನ್ನು ಚೈನಾ, ಅನ್ಯದೇಶಗಳ ಮೇಲೆ ಬಾಂಬ್ ಮಳೆ ಸುರಿಸುವುದನ್ನು ಅಮೆರಿಕ, ಮೂಲಭೂತ ಹಕ್ಕುಗಳ ಹರಣವನ್ನು ಸೌದಿ ಅರೇಬಿಯಾ ಹೀಗೆ ಒಂದೊಂದು ದೇಶವೂ ತನ್ನ ಪರಿಣತಿಯನ್ನು ತಾಲಿಬಾನ್ ಜೊತೆ ಹಂಚಿಕೊಳ್ಳಲಿ.


ಆರೆಸ್ಸೆಸ್ ಎನ್ನುವುದು ತಾಲಿಬಾನ್ ಅಲ್ಲ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ತಾಲಿಬಾನ್‌ಗಳು ಇದನ್ನು ಕೇಳಿ ಆರೋಪ ಮುಕ್ತವಾದೆವೆಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿರಬಹುದು.


ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಪ್ರಧಾನಿಯಾಗುವ ಸಾಮರ್ಥ್ಯವಿದೆ - ಕೆ.ಸಿ.ತ್ಯಾಗಿ, ಜೆಡಿಯು ಪ್ರ.ಕಾರ್ಯದರ್ಶಿ
ಅಸಾಮರ್ಥ್ಯವೇ ಸಾಮರ್ಥ್ಯವಾಗಿ ಮೊರೆಯುತ್ತಿರುವ ದೇಶದಲ್ಲಿ ಹೀಗೆಲ್ಲ ಹೇಳಿ ನಿತೀಶ್ ಅವರ ಅವಕಾಶಕ್ಕೆ ಕೊಡಲಿ ಹಾಕಬೇಡಿ.


ಸೇವೆಗೆ ಇನ್ನೊಂದು ಹೆಸರೇ ಬಿಜೆಪಿ - ಸುನೀಲ್ ಕುಮಾರ್, ಸಚಿವ
ಸಂಶಯ ಉಳ್ಳವರು ಅದಾನಿ, ಅಂಬಾನಿಗಳನ್ನು ಕೇಳಿ ನೋಡಲಿ.


ನನ್ನ (ರಾಜೀನಾಮೆ) ನಿರ್ಧಾರದ ಬಗ್ಗೆ ಪ್ರಧಾನಿ ಮೋದಿ ಆಡಿದ ಮಾತನ್ನು ಫ್ರೇಮ್ ಹಾಕಿಸಿ ಮನೆಯಲ್ಲಿಟ್ಟಿದ್ದೇನೆ - ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಭದ್ರವಾಗಿಡಿ ಸಾರ್. ಮೋದಿಯವರ ಮಾತೆಂದ ಮೇಲೆ ಅದು ಯಾವಾಗ ಮಾಯವಾಗಿ ಬಿಡುತ್ತದೆ ಎಂದು ಹೇಳಲಿಕ್ಕೆ ಬರಲ್ಲ.


ನಾನು ಯಾವತ್ತೂ ಅಧಿಕಾರ, ಹುದ್ದೆ ಅರಸಿ ಹೋದವನಲ್ಲ -ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ಅವೆಲ್ಲಾ ನಿಮ್ಮನ್ನು ಅರಸಿ ಬಂದಾಗಲೂ ನೀವು ಅಡಗಿ ಕೂತಿರುತ್ತೀರಂತೆ, ಹೌದೇ?


ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸುವ ಮೂಲಕ ಕೋವಿಡ್ ಸೋಂಕು ನಿಯಂತ್ರಿಸಬಹುದು - ಅಂಗಾರ, ಸಚಿವ
ಯಾವ ತರದ ಪರೀಕ್ಷೆ ಸಾರ್? ಭೌತಿಕ, ಆಧ್ಯಾತ್ಮಿಕ ಅಥವಾ ಆನ್ ಲೈನ್?


ಭಾರತವನ್ನು ಸರಕಾರಿ ಬೆಂಬಲಿತ ತಾಲಿಬಾನ್ಗಳು ಆಕ್ರಮಿಸಿಕೊಂಡಿದ್ದಾರೆ -ರಾಕೇಶ್ ಟಿಕಾಯತ್, ಬಿಕೆಯು ಮುಖಂಡ
ಹಾಗಾದರೆ ಕೆಲವರು ತಾಲಿಬಾನ್ ಬೆಂಬಲಿತ ಸರಕಾರ ಎಂದು ಕರೆಯುತ್ತಿದ್ದಾರಲ್ಲ, ಯಾಕೆ?


ಇನ್ನು ಮುಂದೆ ಕಾಂಗ್ರೆಸ್‌ನವರು ಸುಳ್ಳು ಹೇಳಿ ಮತದಾರರನ್ನು ವಂಚಿಸುವುದು ಸಾಧ್ಯವಿಲ್ಲ - ಭೈರತಿ ಬಸವರಾಜು, ಸಚಿ
ಏಕೆಂದರೆ ಸುಳ್ಳಿನಲ್ಲಿ ಅವರಿಗಿಂತ ಸಾವಿರ ಪಟ್ಟು ಹೆಚ್ಚು ಪರಿಣತರಾದವರು ರಂಗದಲ್ಲಿದ್ದಾರೆ.


ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ನಿಲ್ಲುವುದಕ್ಕೆ ನಾನು ಬಿಡುವುದಿಲ್ಲ - ಎಂ.ಬಿ.ಪಾಟೀಲ್, ಮಾಜಿ ಸಚಿವ
ಅದನ್ನು ಸದಾ ನಿದ್ರಾವಸ್ಥೆಯಲ್ಲೇ ಇಟ್ಟಿರುತ್ತೀರಾ?


ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ಸಂಘಟನೆಯ ನೇತೃತ್ವದಲ್ಲಿ ಆಡಳಿತ ಬದಲಾವಣೆಯಾಗುತ್ತಿರುವುದು ಭಾರತಕ್ಕೆ ಸವಾಲಿನ ಅಂಶ - ರಾಜನಾಥ್‌ಸಿಂಗ್, ಕೇಂದ್ರ ಸಚಿವ
ಹಿಂಸೆಯನ್ನೇ ಮಾರ್ಗವಾಗಿಸಿಕೊಂಡಿರುವವರು ದೇಶದ ಆಡಳಿತದ ಮೇಲೆ ಸ್ವಾಧೀನ ಸ್ಥಾಪಿಸಿಕೊಂಡಿರುವುದು ಭಾರತದ ಪಾಲಿಗೆ ಇನ್ನೂ ದೊಡ್ಡ ಸವಾಲು.


ಬಿಜೆಪಿಯಲ್ಲಿ ಹೈಕಮಾಂಡ್‌ಗೆ ಹಣ ನೀಡಿ ಮಂತ್ರಿಗಿರಿ ಪಡೆಯುವ ಪರಿಪಾಠವಿಲ್ಲ -ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಹೌದು, ಅಲ್ಲಿ ಇನ್ನೂ ಬಹಳಷ್ಟನ್ನು ಕೊಡಬೇಕಾಗುತ್ತದೆ ಎಂಬುದು ಅನುಭವಸ್ಥರ ಮಾತು.


ಮಥುರಾ ನಗರದಲ್ಲಿ ಮದ್ಯ - ಮಾಂಸ ಮಾರಾಟ ನಿಷೇಧಿಸಲಾಗಿದ್ದು, ಇನ್ನು ಮುಂದೆ ಮಾರಾಟಗಾರರು ಹಾಲಿನ ವ್ಯಾಪಾರ ಪ್ರಾರಂಭಿಸಬಹುದು - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಹಿಂಸೆ, ಭ್ರಷ್ಟಾಚಾರ, ಬೆಲೆಯೇರಿಕೆ ನಿಲ್ಲಿಸಲಾಗದ ನಿಮ್ಮನ್ನು ಕಾಡಿಗೆ ಕಳಿಸಿ ತಪೋನಿರತರಾಗಿಸಲು ಜನತೆ ನಿರ್ಧರಿಸಿದ್ದಾರೆ.


ರಾಮನು ಎಲ್ಲಿ ಇರುತ್ತಾನೆಯೋ ಅಲ್ಲಿಯೇ ಅಯೋಧ್ಯೆ ಇರುತ್ತದೆ - ರಾಮನಾಥ್ ಕೋವಿಂದ್, ರಾಷ್ಟ್ರಪತಿ
ಕೈಗೊಂಬೆಗಳಿದ್ದಲ್ಲಿ ರಾಷ್ಟ್ರಪತಿ ಇದ್ದೇ ಇರುತ್ತಾರೆ ಎಂದಂತಾಯಿತು.


ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬರುತ್ತಿರುವುದು ಸೂಟುಕೇಸ್ ಕೊಂಡೊಯ್ಯಲು - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಒಂದೆರಡನ್ನು ನಿಮಗೆ ಕೊಟ್ಟು ಹೋದರೆ ಮತ್ತೆ ಆಕ್ಷೇಪ ಇಲ್ಲ ತಾನೇ?


ಅಡುಗೆ ಅನಿಲ ಬೆಲೆ ಏರಿಕೆಗೆ ತಾಲಿಬಾನ್ ಸಮಸ್ಯೆ ಕಾರಣ - ಅರವಿಂದ ಬೆಲ್ಲದ್, ಬಿಜೆಪಿ ಶಾಸಕ
ನಮ್ಮ ಮೋದಿ ಸರಕಾರ, ದೇಶದ ಆರ್ಥಿಕ ನೀತಿಯನ್ನು ನಿರ್ಧರಿಸುವ ಹೊಣೆಯನ್ನು ತಾಲಿಬಾನ್‌ಗೆ ಔಟ್ ಸೋರ್ಸ್ ಮಾಡಿಬಿಟ್ಟಿದೆಯೇ?


ಕಾಲ ಕೂಡಿ ಬಂದರೆ, ನಾನು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ನಿಮ್ಮ ಕಾರು ಚಾಲಕರು, ಅಡುಗೆಯವರು ಮತ್ತು ಗೇಟು ಕಾಯುವವರು ಕೂಡಾ ಇದನ್ನೇ ಹೇಳುತ್ತಿದ್ದಾರೆ.


ಜಿ.ಟಿ.ದೇವೇಗೌಡರು ಜೆಡಿಎಸ್ ಪಕ್ಷ ತೊರೆದರೆ ಜೆಡಿಎಸ್‌ಗೆ ಭಾರೀ ನಷ್ಟವಾಗಲಿದೆ - ವೈ.ಎಸ್.ವಿ.ದತ್ತ, ಮಾಜಿ ಶಾಸಕ
ಸದ್ಯದ ಸ್ಥಿತಿಯಲ್ಲಿ ಸಾಕ್ಷಾತ್ ಎಚ್. ಡಿ. ದೇವೇಗೌಡರು ಬೇರೆ ಪಕ್ಷಕ್ಕೆ ಹೋದರೂ ದೊಡ್ಡ ಸಮಸ್ಯೆ ಇಲ್ಲ.


ಪಕ್ಷವಿದ್ದರೆ ತಾನೇ ಲಾಭ - ನಷ್ಟದ ಲೆಕ್ಕಾಚಾರ? ಇಂದಿನ ರಾಜಕಾರಣದಲ್ಲಿರುವ ಕೆಟ್ಟ ವ್ಯವಸ್ಥೆಗೆ ಬೇಸತ್ತು ರಾಜಕೀಯದಿಂದ ದೂರ ಸರಿದಿದ್ದೇನೆ - ಶಂಕರ್ ಬಿದರಿ, ನಿವೃತ್ತ ಪೊಲೀಸ್ ಮಹಾನಿರ್ದೇಶಕ
ಕೆಟ್ಟ ವ್ಯವಸ್ಥೆ ಪೊಲೀಸ್ ಇಲಾಖೆಯಲ್ಲೂ ಇತ್ತಲ್ಲವೇ ? ನಿಮ್ಮ ನಿವೃತ್ತಿಗೆ ಅದು ಕಾರಣ ಆಗಿರಬಹುದೇ ?


ಚುನಾವಣೆಯಲ್ಲಿ ಗೆದ್ದರೂ, ಸೋತರೂ ಪಕ್ಷದಲ್ಲೇ ಇರುತ್ತೇವೆ ಎನ್ನುವ ನಿಷ್ಠರಿಗೆ ಮಾತ್ರ ಟಿಕೆಟ್ ನೀಡಲಾಗುವುದು - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಟಿಕೆಟ್ ಕೇಳುವವರು ಯಾರಾದರೂ ಎಂದಾದರೂ ಸಿಕ್ಕಾಗ ಈ ನಿಬಂಧನೆಗಳನ್ನು ತಿಳಿಸಿ


ರಾಜ್ಯ ಹಾಗೂ ಹಾಸನ ಜಿಲ್ಲೆ ಬಿಜೆಪಿ ಲೂಟಿಕೋರರ ಕೈಯಲ್ಲಿದೆ - ಎಚ್.ಡಿ.ರೇವಣ್ಣ, ಶಾಸಕ
ಲೂಟಿಕೋರರು ನಿಮ್ಮ ಪಾಲನ್ನು ಇನ್ನ್ನೂ ಕೊಟ್ಟಿಲ್ಲ ಎಂದು ಕಾಣುತ್ತದೆ.


ನಾನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವಾಗ ಕಣ್ಣೀರು ಹಾಕಿದ್ದನ್ನು ತಪ್ಪಾಗಿ ಅರ್ಥೈಸಬೇಡಿ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಚಿಂತಿಸಬೇಡಿ. ಪದೇ ಪದೇ ದಿಲ್ಲಿಯಲ್ಲಿ ಕಣ್ಣೀರು ಹರಿಯುವುದನ್ನು ಕಂಡವರು ಈಗ ಯಾವ ಕಣ್ಣೀರನ್ನೂ ಸೀರಿಯಸ್ಸಾಗಿ ಪರಿಗಣಿಸುವುದಿಲ್ಲ.


ದೇಶದ ಮದ್ರಸಾಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಿದ್ದಾರೆ - ಸಿ.ಟಿ.ರವಿ, ಶಾಸಕ
ಸದಾ ತಾಲಿಬಾನಿಗಳನ್ನು ಮೀರಿ ಮಾತನಾಡುವ ನೀವು ಕಲಿತ ಮದ್ರಸಾ ಯಾವುದೆಂಬುದನ್ನೂ ತಿಳಿಸಿ ಬಿಡಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು