ಯುಎಇ ವೀಸಾ ಸುಧಾರಣೆಗಳು: ಉದ್ಯೋಗ ಕಳೆದುಕೊಂಡ ನಂತರವೂ ವಲಸಿಗರು 180 ದಿನಗಳ ತನಕ ಉಳಿದುಕೊಳ್ಳಬಹುದು
ದುಬೈ: ಸಂಯುಕ್ತ ಅರಬ್ ಸಂಸ್ಥಾನದಲ್ಲಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿರುವ ವಲಸಿಗರು ಅಲ್ಲಿ ಉದ್ಯೋಗ ಕಳೆದುಕೊಂಡ ನಂತರದ ಆರು ತಿಂಗಳ ಅವಧಿ ತನಕ ಉಳಿದುಕೊಳ್ಳಬಹುದು ಎಂದು ಅಲ್ಲಿನ ಆಡಳಿತ ರವಿವಾರ ಘೋಚಿಸಿದ ಹೊಸ ಸುಧಾರಣಾ ನೀತಿಗಳು ತಿಳಿಸಿವೆ.
ಸಂಯುಕ್ತ ಅರಬ್ ಸಂಸ್ಥಾನದ ಈಗ ಇರುವ ನಿಯಮಗಳ ಪ್ರಕಾರ ಉದ್ಯೋಗ ಕಳೆದುಕೊಂಡ ವಲಸಿಗರು 30 ದಿನಗಳೊಳಗೆ ದೇಶ ತೊರೆಯಬೇಕಿದೆ. ಆದರೆ ಈ ನಿಯಮದಲ್ಲಿ ಈಗ ಸಡಿಲಿಕೆ ತಂದು ಉದ್ಯೋಗ ಕಳೆದುಕೊಂಡ ನಂತರ ಮೂರರಿಂದ ಆರು ತಿಂಗಳು ಅಲ್ಲಿ ವಾಸಿಸಲು ಅವಕಾಶ ಕಲ್ಪಿಸಲಾಗುವುದು.
ನಿಯಮ ಸಡಿಲಿಕೆಯಿಂದಾಗಿ ಈಗ ಅಲ್ಲಿ ಉದ್ಯೋಗ ಕಳೆದುಕೊಂಡ ವಲಸಿಗರಿಗೆ ಬೇರೆ ಉದ್ಯೋಗ ಹುಡುಕಲು ಸಮಯಾವಕಾಶ ದೊರಕಿದಂತಾಗುತ್ತದೆಯಲ್ಲದೆ ಅರ್ಹರನ್ನು ದೇಶದಲ್ಲಿಯೇ ಉಳಿಸಿಕೊಳ್ಳುವ ಅವಕಾಶವೂ ಸಂಯುಕ್ತ ಅರಬ್ ಸಂಸ್ಥಾನಕ್ಕೆ ದೊರೆಯಲಿದೆ.
"ಈ ಹಿಂದಿನ 30 ದಿನಗಳ ಬದಲು ಈಗ ಉದ್ಯೋಗ ಕಳೆದುಕೊಂಡವರಿಗೆ ದೇಶ ತೊರೆಯಲು 90ರಿಂದ 180 ದಿನಗಳ ಕಾಲಾವಕಾಶವಿದೆ" ಎಂದು ವಿದೇಶ ವ್ಯವಹಾರ ಸಚಿವ ಡಾ ಥನಿ ಬಿನ್ ಅಹ್ಮದ್ ಅಲ್ ಝೆಯೋದಿ ಹೇಳಿದ್ದಾರೆ.
ಸಂಯುಕ್ತ ಅರಬ್ ಸಂಸ್ಥಾನದ ಆಡಳಿತದ `ಪ್ರಾಜೆಕ್ಟ್ಸ್ ಆಫ್ ದಿ 50' ಮುಖ್ಯ ಉದ್ದೇಶ ದೇಶವನ್ನು ಉದ್ಯೋಗ, ಹೂಡಿಕೆ, ಉದ್ಯಮಶೀಲತೆ, ಶಿಕ್ಷಣ ಮತ್ತು ಜೀವನಕ್ಕಾಗಿ ಅತ್ಯುತ್ತಮ ತಾಣವೆಂದು ಬಿಂಬಿಸುವುದಾಗಿದೆ.
ಮೇಲೆ ತಿಳಿಸಿದ ಸುಧಾರಣೆ ಹೊರತಾಗಿ ಅಲ್ಲಿನ ಆಡಳಿತ ಜಾರಿಗೆ ತರಲಿರುವ ಇನ್ನೂ ಕೆಲ ಸುಧಾರಣೆಗಳು ಇಂತಿವೆ.
* ಬಿಸಿನೆಸ್ ಪ್ರವಾಸ ಪರ್ಮಿಟ್ಗಳನ್ನು 3 ತಿಂಗಳುಗಳಿಂದ 6 ತಿಂಗಳುಗಳಿಗೆ ವಿಸ್ತರಿಸುವುದು.
* ನೇರ ಕುಟುಂಬ ಸದಸ್ಯರ ವೀಸಾ ಅಡಿ ಹೆತ್ತವರಿಗೂ ಅವಕಾಶ
* ಮಾನವೀಯತೆಯ ಆಧಾರದಲ್ಲಿ ಒಂದು ವರ್ಷ ಉಳಿದುಕೊಳ್ಳುವಿಕೆ ಅವಧಿ ವಿಸ್ತರಣೆ
* ಹೆತ್ತವರ ರೆಸಿಡೆನ್ಸಿ ಪರ್ಮಿಟ್ ಆಧಾರದಲ್ಲಿ ಮಕ್ಕಳಿಗೆ ಅನುಮತಿ ವಿಸ್ತರಣೆಯನ್ನು 18ರಿಂದ 25 ವರ್ಷಗಳಿಗೆ ಏರಿಸಲಾಗಿದೆ.