ಆರ್ಥಿಕತೆಗೆ ಪ್ರೋತ್ಸಾಹ ನೀಡುವ ಉದ್ದೇಶ: 50 ನೂತನ ಯೋಜನೆ ಘೋಷಿಸಿದ ಯುಎಇ
ಅಬುಧಾಬಿ, ಸೆ.6: ದೇಶದ ಸ್ಪರ್ಧಾತ್ಮಕತೆಯನ್ನು ವರ್ಧಿಸುವ ನಿಟ್ಟಿನಲ್ಲಿ ಹಾಗೂ ಮುಂದಿನ 9 ವರ್ಷಗಳಲ್ಲಿ ವಿದೇಶಿ ನೇರ ಹೂಡಿಕೆಯ ಮೂಲಕ 150 ಬಿಲಿಯನ್ ಡಾಲರ್ ಬಂಡವಾಳ ಆಕರ್ಷಿಸುವ ಉದ್ದೇಶದಿಂದ 50 ನೂತನ ಆರ್ಥಿಕ ಉಪಕ್ರಮಗಳನ್ನು ಆರಂಭಿಸುವ ಯೋಜನೆ ರೂಪಿಸಲಾಗಿದೆ ಎಂದು ಯುಎಇ ಸರಕಾರದ ಮೂಲಗಳು ಹೇಳಿವೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ, ನಿವಾಸಿಗಳನ್ನು ಮತ್ತು ನಿಪುಣ ಕೆಲಸಗಾರರನ್ನು ಆಕರ್ಷಿಸಲು ಹೊಸ ವೀಸಾ ರೂಪಿಸುವುದು ಮುಂತಾದ ಯೋಜನೆಗಳು ಇದರಲ್ಲಿವೆ. ಜೊತೆಗೆ, ಕೈಗಾರಿಕಾ ತಂತ್ರಜ್ಞಾನ ಮತ್ತು ಉನ್ನತ ತಂತ್ರಜ್ಞಾನ ವಲಯದಲ್ಲಿ ಯುಎಇ ಮತ್ತು ಎಮಿರೇಟ್ಸ್ ಅಭಿವೃದ್ಧಿ ಬ್ಯಾಂಕ್ 5 ಬಿಲಿಯನ್ ದಿರ್ಹಮ್ ಮೊತ್ತವನ್ನು ಹೂಡಿಕೆ ಮಾಡಲಿದೆ ಎಂದು ಕೈಗಾರಿಕೆ ಮತ್ತು ಉನ್ನತ ತಂತ್ರಜ್ಞಾನ ಇಲಾಖೆಯ ಸಚಿವ ಸುಲ್ತಾನ್ ಅಲ್ಜಬೆರ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ಕೋವಿಡ್-19 ಸೋಂಕಿನ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಆರ್ಥಿಕತೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಳೆದ ವರ್ಷ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ 50 ವರ್ಷದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಮುಖ ಸ್ಥಾನದಲ್ಲಿ ಗುರುತಿಸಿಕೊಳ್ಳುವ ಗುರಿ ಹೊಂದಲಾಗಿದೆ. ದೇಶದ ಕೈಗಾರಿಕೆಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿರುವುದನ್ನು ಖಾತರಿಪಡಿಸಲಾಗುವುದು ಎಂದು ಉನ್ನತ ತಂತ್ರಜ್ಞಾನ ಇಲಾಖೆಯ ಸಹಾಯಕ ಸಚಿವೆ ಸಾರಾ ಅಲ್ ಅಮೀರಿ ಹೇಳಿದ್ದಾರೆ.