ಮೀಸಲಾತಿ ನೀಡದಿದ್ದರೆ ಅ.1ರಿಂದ ಸತ್ಯಾಗ್ರಹ ಹೋರಾಟ: ಪಂಚಮಸಾಲಿ ಪೀಠದ ಶ್ರೀಜಯಮೃತ್ಯುಂಜಯ ಸ್ವಾಮೀಜಿ
ಉಡುಪಿ, ಸೆ.8: ಲಿಂಗಾಯಿತ ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ನೀಡುವ ಬಗ್ಗೆ ಸರಕಾರ ಕೇಳಿದ್ದ ಕಾಲಾವಕಾಶ ಸೆ.15ಕ್ಕೆ ಮುಗಿಯ ಲಿದ್ದು, ಈ ಹಿನ್ನೆಲೆಯಲ್ಲಿ ಅ.1ರವರೆಗೆ ಹಮ್ಮಿಕೊಂಡಿರುವ ಪ್ರತಿಜ್ಞಾ ಪಂಚಾ ಯತ್ ಅಭಿಯಾನದೊಳಗೆ ಮೀಸಲಾತಿ ನೀಡದಿದ್ದರೆ ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಮತ್ತೆ ಸತ್ಯಾಗ್ರಹ ಹೋರಾಟವನ್ನು ನಡೆಸಲಾಗುವುದು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಹಾಪೀಠದ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಅಭಿಯಾನ ಅಂಗವಾಗಿ ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 3 ಕೋಟಿ ಲಿಂಗಾಯಿತ ಜನಸಂಖ್ಯೆ ಇದ್ದು, ಸಮಾಜಕ್ಕೆ ಸಂವಿಧಾನ ಬದ್ಧ ಸವಲತ್ತುಗಳು ಇನ್ನು ಸಿಕ್ಕಿಲ್ಲ. ನಾವು ಕೇವಲ ಮತ ಕೊಡಲು ಹಾಗೂ ಕಂದಾಯ ಕಟ್ಟಲು ಮೀಸಲಾಗಿದ್ದೇವೆ. ಲಿಂಗಾಯತ ಸಮುದಾಯದಲ್ಲಿ 110 ಪಂಗಡಗಳಿದ್ದು ಇದರಲ್ಲಿ 34 ಪಂಗಡಗಳಿಗೆ ‘2ಎ’ ಮೀಸಲಾತಿ ಸೌಲಭ್ಯ ನೀಡಲಾಗಿದೆ. 12 ಪಂಗಡಗಳು ‘3ಬಿ’ ಮೀಸಲಾತಿ ಪಡೆದಿವೆ. ಉಳಿದ ಪಂಗಡಗಳು ಅವಕಾಶ ವಂಚಿತವಾಗಿವೆ ಎಂದರು.
ಉಳಿದ ಎಲ್ಲ ಪಂಗಡಗಳಿಗಬ 2ಎ ಮೀಸಲಾತಿ ಸೌಲಭ್ಯ ದೊರೆಯಬೇಕು. ಈ ಬಗ್ಗೆ ಸರಕಾರವನ್ನು ಆಗ್ರಹಿಸಲಾಗಿದೆ. ಸರಕಾರ ಈ ಕುರಿತು ವರದಿ ನೀಡುವಂತೆ ಹಿಂದುಳಿದ ವರ್ಗದ ಆಯೋಗಕ್ಕೆ ಪತ್ರ ಬರೆದಿದೆ. ಇತ್ತೀಚೆಗೆ ಕೇಂದ್ರ ಸರಕಾರದ ಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯಗಳಿಗೆ ವಹಿಸಿರುವುದ ರಿಂದ ವರದಿಯನ್ನು ಶ್ರೀಘ್ರವಾಗಿ ತರಿಸಿಕೊಂಡು ಲಿಂಗಾಯಿತ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಒದಗಿಸ ಬೇಕು ಎಂದು ಅವರು ಒತ್ತಾಯಿಸಿದರು.
ಯಾವುದೇ ಲಿಂಗಾಯಿತ ಪೀಠಗಳು ರಾಜ್ಯ ಸರಕಾರದ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ಚಳುವಳಿಗಳು ನಡೆಯುವಾಗ ಗೊಂದಲಗಳು ಸಹಜ. ನಮ್ಮ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನಗಳು ಅಸೂಯೆ ಗೊಂಡ ಮನಸುಗಳು ಹಾಗೂ ಕಾಣದ ಕೈಗಳಿಂದ ನಡೆಯು ತ್ತಿವೆ. ಆದರೆ ನ್ಮು ಹೋರಾಟ ನಿಲ್ಲುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಯು.ಸಿ. ನಿರಂಜನ್, ಉಡುಪಿ ಬಸವ ಸಮಿತಿ ಅಧ್ಯಕ್ಷ ಸಿದ್ದರಾಮಣ್ಣ, ಪದಾಧಿಕಾರಿಗಳಾದ ಗಂಗಾಧರ, ಸುರೇಶ್, ಮಲ್ಲಿಕಾರ್ಜುನಪ್ಪ, ಶಂಭುಲಿಂಗ ಶೆಟ್ಟರ್ ಹಾಜರಿದ್ದರು.
ಸಿಎಂಗಿಂತ ಮೀಸಲಾತಿ ಮುಖ್ಯ
ಮುಖ್ಯಮಂತ್ರಿ ಲಿಂಗಾಯುತರೇ ಆಗಬೇಕೆಂಬುದರ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಿಲ್ಲ. ಉಳಿದಂತೆ ಶೇ.90ರಷ್ಟು ಸ್ವಾಮೀಜಿಗಳು ಹೇಳಿಕೆ ನೀಡಿದೆ, ನಾನು ತಟಸ್ಥನಾಗಿದ್ದೆ. ನನಗೆ ಮುಖ್ಯಮಂತ್ರಿ, ಮಂತ್ರಿ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಿಂತ ಬಡ ಮಕ್ಕಳಿಗೆ ಶಿಕ್ಷಣ ಉದ್ಯೋಗ ನೀಡುವ ಮೀಸಲಾತಿ ಮುಖ್ಯ ವಾಗಿದೆ. ಅದಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಹರಿಹರ ಪೀಠದಿಂದ ನಿಮ್ಮ ಹೋರಾಟಕ್ಕೆ ಬೆಂಬಲ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆರಂಭದಲ್ಲಿ ನಮ್ಮೆಂದಿಗೆ ಸೇರಿಕೊಂಡರು. ನಂತರ ಬೇರೆ ಬೇರೆ ಕಾರಣಕ್ಕೆ ದೂರವಾದರು. ಮತ್ತೆ ಬಂದರೆ ಅವರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.