ಐಸಿಸಿ ಟ್ವೆಂಟಿ-20 ವಿಶ್ವಕಪ್: ಭಾರತ ಕ್ರಿಕೆಟ್ ತಂಡ ಪ್ರಕಟ
ವಿರಾಟ್ ಕೊಹ್ಲಿ ನೇತೃತ್ವದ ತಂಡಕ್ಕೆ ಎಂ.ಎಸ್. ಧೋನಿ ಸಲಹೆಗಾರ
ಹೊಸದಿಲ್ಲಿ: ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 15 ಸದಸ್ಯರುಗಳನ್ನು ಒಳಗೊಂಡ ಭಾರತ ಕ್ರಿಕೆಟ್ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಪ್ರಕಟಿಸಿದೆ. ಹಿರಿಯ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಜೊತೆಗೆ ಇಶಾನ್ ಕಿಶನ್, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿಗೆ ಅವಕಾಶ ಕಲ್ಪಿಸಲಾಗಿದೆ.
ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೂರ್ನಿಯಲ್ಲಿ ಭಾರತ ತಂಡದ ಸಲಹೆಗಾರನಾಗಿ ಮುಖ್ಯ ಕೋಚ್ ರವಿ ಶಾಸ್ತ್ರಿಗೆ ನೆರವಾಗಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಟ್ವೀಟಿಸಿದ್ದಾರೆ.
ಐಪಿಎಲ್ ಹಾಗೂ ಭಾರತ ತಂಡದಲ್ಲಿ ಲಭಿಸಿದ್ದ ಅಲ್ಪ ಅವಕಾಶವನ್ನು ಬಳಸಿಕೊಂಡಿದ್ದಕ್ಕೆ ಕಿಶನ್ ಹಾಗೂ ಚಕ್ರವರ್ತಿಗೆ ಅವಕಾಶ ನೀಡಲಾಗಿದೆ.
ಭಾರತದ ಆತಿಥ್ಯದಲ್ಲಿ ನಡೆಯಬೇಕಾಗಿದ್ದ ವಿಶ್ವಕಪ್ ಕೊರೋನ ಕಾರಣಕ್ಕೆ ಯುಎಇ ಹಾಗೂ ಒಮಾನ್ ನಲ್ಲಿ ನಡೆಯಲಿದೆ.
ಟಿ 20 ವಿಶ್ವಕಪ್ ಟೂರ್ನಿಯು ಯುಎಇ ಹಾಗೂ ಒಮಾನ್‌ನಲ್ಲಿ ಒಟ್ಟು 4 ಸ್ಥಳಗಳಾದ ಮಸ್ಕತ್, ದುಬೈ, ಅಬುಧಾಬಿ ಹಾಗೂ ಶಾರ್ಜಾದಲ್ಲಿ ನಡೆಯಲಿದೆ. ಟೂರ್ನಿಯು ಅಕ್ಟೋಬರ್ 17 ರಂದು ಅರ್ಹತಾ ಸುತ್ತಿನೊಂದಿಗೆ ಆರಂಭವಾಗಲಿದೆ. ಅಕ್ಟೋಬರ್ 24 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಭಾರತ ತನ್ನ ಟ್ವೆಂಟಿ-20 ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.
ಅಕ್ಟೋಬರ್ 23 ರಿಂದ ಸೂಪರ್ 12 ಸುತ್ತು ಆರಂಭವಾಗುತ್ತದೆ ಹಾಗೂ ಇದು ನವೆಂಬರ್ 8 ರಂದು ಕೊನೆಗೊಳ್ಳುತ್ತದೆ. ನಾಕೌಟ್ ಸುತ್ತು ನವೆಂಬರ್ 10ರಂದು ಆರಂಭವಾಗಲಿದ್ದು, ಟೂರ್ನಮೆಂಟ್ ನ ಫೈನಲ್ ಪಂದ್ಯವು ನವೆಂಬರ್ 14ರಂದು ನಡೆಯಲಿದೆ.
ಭಾರತದ ವಿಶ್ವಕಪ್ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ರಾಹುಲ್ ಚಹಾರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್ ಹಾಗೂ ಮುಹಮ್ಮದ್ ಶಮಿ.
ಸ್ಟ್ಯಾಂಡ್ ಬೈ ಆಟಗಾರರು : ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್.