varthabharthi


ಈ ಹೊತ್ತಿನ ಹೊತ್ತಿಗೆ

ಅಕ್ಕಯ್ ಪದ್ಮಶಾಲಿ ಮುಂದಿಡುವ 'ಸ್ತ್ರೀ ವಾದ'

ವಾರ್ತಾ ಭಾರತಿ : 10 Sep, 2021
ಕಾರುಣ್ಯಾ

ಬಾಲ್ಯದಲ್ಲಿ ಶಾಲೆಯಲ್ಲಿ ಜಾತಿಗಳನ್ನು ಅಲ್ಲಗಳೆಯುವ ಭಾಗವಾಗಿ ಮೇಷ್ಟ್ರುಗಳು ಹೇಳಿಕೊಡುತ್ತಿದ್ದರು 'ಜಗತ್ತಿನಲ್ಲಿರುವುದು ಎರಡೇ ಜಾತಿ. ಒಂದು ಗಂಡು, ಇನ್ನೊಂದು ಹೆಣ್ಣು'. ಮೇಷ್ಟ್ರು ಹೇಳಿದ್ದು ಪೂರ್ತಿ ನಿಜ ಅಲ್ಲ ಎನ್ನುವುದನ್ನು ನಮಗೆ ಪರಿಚಯ ಮಾಡಿಕೊಡುವುದು ಅಕ್ಕಯ್ ಪದ್ಮಶಾಲಿ ಅವರ ಆತ್ಮಕಥನ 'ಅಕ್ಕಯ್'. ಡಾ. ಡೊಮಿನಿಕ್ ಡಿ. ಅವರು ನಿರೂಪಣೆ ಮಾಡಿರುವ ಈ ಕಥನ, ಕನ್ನಡದ ಪಾಲಿಗೆ ಅಪರೂಪದ ಕೃತಿ.


ತೃತೀಯ ಲಿಂಗಿಯರ ಬದುಕನ್ನು ಈ ಹಿಂದೆ ಮೂರನೆಯವರು ಬರೆದು ಓದಬೇಕಾಗಿತ್ತು. ಅದು ಒಂದೋ ವೈದ್ಯಕೀಯ ಭಾಷೆಯಲ್ಲಿರುತ್ತಿತ್ತು. ಇಲ್ಲವಾದರೆ ಅನುಕಂಪದ ನೆಲೆಯಲ್ಲಿ ಬರೆದವುಗಳಾಗಿದ್ದವು. ಅನಕ್ಷರಸ್ಥರೂ, ಸಮಾಜದ ಮುಖ್ಯವಾಹಿನಿಗೆ ಅಸ್ಪಶ್ಯರೂ ಆಗಿದ್ದ ತೃತೀಯ ಲಿಂಗಿಯರ ಜಗತ್ತನ್ನು ನಾಗರಿಕ ಸಮಾಜಕ್ಕೆ ಇತ್ತೀಚಿನವರೆಗೂ ಮುಟ್ಟುವುದಕ್ಕೆ ಸಾಧ್ಯವಾಗಿಲ್ಲ. ಯಾವಾಗ ತಮ್ಮ ಒಳಗಿನ ದುಮ್ಮಾನಗಳನ್ನು ಸ್ವತಃ ತೃತೀಯ ಲಿಂಗಿಯರೇ ಬರೆಯಲು ಶುರು ಹಚ್ಚಿದರೋ, ಆಗ ಸಮಾಜ ಆ ಸಮುದಾಯವನ್ನು ಗಂಭೀರವಾಗಿ ನೋಡುವುದಕ್ಕೆ ಆರಂಭಿಸಿತು. ಇಂದು ತೃತೀಯ ಲಿಂಗಿಯರಲ್ಲಿ ಕವಿಗಳು, ಕತೆಗಾರರು, ಹೋರಾಟಗಾರರು ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡ ದೊಡ್ಡ ಸಂಖ್ಯೆಯ ಜನರಿದ್ದಾರೆ. ತಮ್ಮ ಆತ್ಮಕಥೆಗಳನ್ನು ತಾವೇ ಬರೆದುಕೊಂಡು ಸುದ್ದಿಯಾಗುತ್ತಿದ್ದಾರೆ. ಅಕ್ಕಯ್ ಪದ್ಮಶಾಲಿ ಅವರ ಆತ್ಮಕಥನ ಹಲವು ಕಾರಣಗಳಿಂದ ತುಸು ವಿಭಿನ್ನವೆನಿಸುತ್ತದೆ. ಇಲ್ಲಿ, ತನ್ನ ಸಮುದಾಯವನ್ನು, ಸಂಪೂರ್ಣ ಅಮಾಯಕ ಲೋಕವೆಂದು ಎಲ್ಲೂ ಅಕ್ಕಯ್ ಬಣ್ಣಿಸುವುದಿಲ್ಲ. ಈಗಾಗಲೇ ಸರ್ವರಿಗೂ ಒಪ್ಪಿತವಾಗಿರುವ ಸಮಾಜದಲ್ಲಿದ್ದಂತೆಯೂ ಇಲ್ಲೂ ಪುರುಷ ಪ್ರಧಾನ ವ್ಯವಸ್ಥೆಗಳಿವೆೆ, ಅಸಮಾನತೆಗಳಿವೆ, ಶೋಷಣೆಗಳಿವೆ, ವೌಢ್ಯಗಳಿವೆ, ಕ್ರೌರ್ಯಗಳಿವೆ ಎಂಬುದನ್ನು ವಿವರಿಸಲು ಅವರು ಹಿಂದೇಟು ಹಾಕುವುದಿಲ್ಲ.

ಅಕ್ಕಯ್ ಪದ್ಮಶಾಲಿ ಅವರ ಬದುಕಿನ ಮೂರು ಹಂತದ ವಿಭಿನ್ನ ಹೋರಾಟಗಳನ್ನು ಇಲ್ಲಿ ಗುರುತಿಸಬಹುದು. ಒಂದು ಜಗತ್ತಿನ ಕಣ್ಣಿಗೆ ಗಂಡಿನಂತೆ ಕಂಡರೂ, 'ನಾನು ಹೆಣ್ಣು' ಎನ್ನುವುದನ್ನು ಪರಿಚಯಿಸಿ, ಆ ಬದುಕಿಗಾಗಿ ಕುಟುಂಬ ಮತ್ತು ಸಮಾಜದೊಂದಿಗೆ ನಡೆಸಬೇಕಾಗಿದ್ದ ಹೋರಾಟ. ಆಕೆ ಮನೆಯೊಳಗಿನ ಹತ್ತು ಹಲವು ಸಂಘರ್ಷಗಳನ್ನು ಗೆದ್ದು ಸಮಾಜಕ್ಕೆ ಕಾಲಿಡುತ್ತಾಳೆ. ಅಕ್ಕಯ್ ಪಾಲಿಗೆ ಸಮಾಜಕ್ಕೆ ಕಾಲಿಡುವುದು ಎಂದರೆ ತನ್ನ ನಿಜವಾದ ಸಮುದಾಯವಾಗಿರುವ 'ಹಿಝ್ರೆ' ಲೋಕಕ್ಕೆ ಪ್ರವೇಶಿಸುವುದು. ಆದರೆ ಅಲ್ಲಿಯೂ ತನ್ನ ಅಸ್ತಿತ್ವಕ್ಕಾಗಿ ಹೋರಾಡಬೇಕಾಗುತ್ತದೆ. ಅಲ್ಲಿರುವ ಅಸಮಾನತೆಗಳ ವಿರುದ್ಧ, ವೌಢ್ಯಗಳ ವಿರುದ್ಧ ಆಕೆ ಗುದ್ದಾಡಬೇಕಾಗುತ್ತದೆ. ತನ್ನದೇ ಸಮುದಾಯವೆಂದು ಅಲ್ಲಿರುವ ಕಂದಾಚಾರಗಳನ್ನು, ಕ್ರೌರ್ಯಗಳನ್ನು ಅವರು ಒಪ್ಪಿಕೊಳ್ಳುವುದಿಲ್ಲ. ಮೂರನೇ ಹಂತದಲ್ಲಿ, ಸಾಮಾಜಿಕ ಹೋರಾಟಗಾರ್ತಿಯಾಗಿ ತನ್ನ ಹಕ್ಕುಗಳಿಗಾಗಿ ಸರಕಾರದ ಜೊತೆಗೆ, ವ್ಯವಸ್ಥೆಯ ಜೊತೆಗೆ ತಿಕ್ಕಾಟ ನಡೆಸಬೇಕಾಗುತ್ತದೆ. ಈ ಸಂದರ್ಭದಲ್ಲಿಯೂ ಅವರಿಗೆ ಹತ್ತು ಹಲವು ಸವಾಲುಗಳು ಎದುರಾಗುತ್ತವೆ.

ಆಕೆಯನ್ನು ತುಳಿಯುವುದಕ್ಕಾಗಿ ಅವರೊಳಗಿನ ಸಂಗಾತಿಗಳೇ ಹೊಂಚು ಹಾಕುತ್ತಿರುತ್ತಾರೆ. ಹಿಝ್ರಾರ ಬದುಕನ್ನು ಮೇಲೆತ್ತುವುದಕ್ಕಾಗಿ ಅಸ್ತಿತ್ವದಲ್ಲಿರುವ ಸಾಮಾಜಿಕ ಸಂಘಟನೆಗಳೊಳಗಿರುವ ರಾಜಕೀಯವನ್ನೂ ಅವರು ಗೆಲ್ಲಬೇಕಾಗುತ್ತದೆ. ಹೀಗೆ ಈ ಮೂರು ಹಂತದ ಹೋರಾಟಗಳನ್ನು ಅಕ್ಕಯ್ ಪದ್ಮಶಾಲಿ ಅವರ ಆತ್ಮಕಥನ ತೆರೆದಿಡುತ್ತದೆ. ಆ ಹೋರಾಟಗಳೇ ಅಕ್ಕಯ್ ಅವರನ್ನು ಬೆಳೆಸುತ್ತಾ, ಮುಂದೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತದೆ. ಕಥನದಲ್ಲಿ ಆಕೆಯ ಬಾಲ್ಯ, ಅಲ್ಲಿ ಆಕೆ ಎದುರಿಸಿದ ಲೈಂಗಿಕ ದೌರ್ಜನ್ಯಗಳನ್ನು ಓದಿ ಎದೆ ಝಲ್ಲೆನಿಸುತ್ತದೆ. ಆಕೆಗಾದ ಅನ್ಯಾಯದಲ್ಲಿ ಸಭ್ಯ ಸಮಾಜದ ಭಾಗೀದಾರಿಕೆಯಿರುವುದನ್ನು ಕೃತಿ ಹೇಳುತ್ತದೆ. ಹೆಣ್ಣಿನ ಮೇಲೆ ನಡೆದ ಅತ್ಯಾಚಾರಗಳು ಸುದ್ದಿಯಾಗುತ್ತವೆಯಾದರೆ, ಒಬ್ಬ ತೃತೀಯ ಲಿಂಗಿಯ ಮೇಲೆ ನಡೆಯುತ್ತಲೇ ಇರುವ ಬರ್ಬರ ಅತ್ಯಾಚಾರಗಳು ಯಾಕೆ ಸಮಾಜದಲ್ಲಿ ಸುದ್ದಿಯಾಗುವುದಿಲ್ಲ? ಎಂಬ ಪ್ರಶ್ನೆಯನ್ನು ಈ ಕೃತಿ ಕೇಳುತ್ತದೆ. ಹಿಝ್ರೆ ಸಮುದಾಯದ ನೋವು, ನಲಿವು, ಪ್ರತಿಭಟನೆಯ ಧ್ವನಿಯೂ ಸ್ತ್ರೀವಾದದ ಭಾಗವೇ ಅಲ್ಲವೇ? ಇಂದಿನ ನಗರ ಕೇಂದ್ರಿತ ಸ್ತ್ರೀವಾದದಲ್ಲಿ ಹೆಣ್ಣು ತನಗೆ ಗಂಡು ಅನುಭವಿಸುತ್ತಿರುವ ಹಕ್ಕುಗಳು ಬೇಕು ಎಂದು ತಹತಹಿಸುವಾಗ ಇಲ್ಲಿ, ದೈಹಿಕವಾಗಿ ಗಂಡಾಗಿ ಹುಟ್ಟಿದವನು ಸಮಾಜ ತನ್ನನ್ನು ಪರಿಪೂರ್ಣವಾಗಿ ಹೆಣ್ಣಾಗಿ ಒಪ್ಪಿಕೊಳ್ಳಬೇಕು ಎಂದು ನಡೆಸುವ ಹೋರಾಟವೂ ಸ್ತ್ರೀವಾದದ ತೆಕ್ಕೆಯೊಳಗೆ ಸೇರಿಕೊಳ್ಳಬೇಕು ಎನ್ನುವುದನ್ನು ಕೃತಿ ಆಳದಲ್ಲಿ ಒತ್ತಾಯಿಸುವುದು ಅನುಭವಕ್ಕೆ ಬರುತ್ತದೆ. ಬಹುರೂಪಿ ಪ್ರಕಾಶನ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ.

268 ಪುಟಗಳ ಈ ಕೃತಿಯ ಮುಖಬೆಲೆ 300 ರೂಪಾಯಿ. ಆಸಕ್ತರು 70191 82729 ದೂರವಾಣಿಯನ್ನು ಸಂಪರ್ಕಿಸಬಹುದು. -ಕಾರುಣ್ಯ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)