varthabharthi


ಮುಂಬೈ ಸ್ವಗತ

ಮುಂಬೈ ಕನ್ನಡಿಗರ ಹೆಮ್ಮೆಯ ಪ್ರತೀಕ ಮತ್ತೆ ತಲೆಯೆತ್ತಿ ನಿಲ್ಲಲಿ

ವಾರ್ತಾ ಭಾರತಿ : 10 Sep, 2021
ದಯಾನಂದ ಸಾಲ್ಯಾನ್

ಕಟ್ಟಡ ಪುನರ್ ನಿರ್ಮಾಣಕ್ಕೆ ಒಪ್ಪಿಗೆ ಪಡೆದು 5ವರ್ಷಗಳ ನಂತರ ಅಂದರೆ 2019ರಲ್ಲಿ ಕಟ್ಟಡ ಕೆಡವಲಾಯಿತು. ಸದಸ್ಯರ ಮಾತನ್ನು ಮೀರಿ ಸಂಘದ ನಿಯಮಾವಳಿಗಳ ವಿರುದ್ಧ ಕೇವಲ 2-3ಮಂದಿ ಕಾರ್ಯಕಾರಿ ಸಮಿತಿ ಸದಸ್ಯರ ನಿರ್ದೇಶನದಂತೆ ನಡೆದರೆ ಏನಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಕರ್ಣಾಟಕ ಸಂಘ ನಮ್ಮ ಕಣ್ಣೆದುರಿಗಿದೆ. ಈ ಎರಡು ವರ್ಷಗಳಲ್ಲಿ ಸಂಘದ ಕಟ್ಟಡ ಮೇಲೆದ್ದು ಬರಲೇ ಇಲ್ಲ.


‘‘ಕರ್ನಾಟಕ ಸಂಘದ ಸದಸ್ಯ ಸಂಪತ್ತನ್ನು ಹೆಚ್ಚಿಸಲು ನಿಮ್ಮ ಸಹಕಾರ ಅಗತ್ಯ ಬೇಕಾಗಿದೆ. ನೀವು ಸದಸ್ಯರಲ್ಲವಾದರೆ ಇಂದೇ ಸದಸ್ಯರಾಗಿ ಸಂಘದ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ.’’ ಮಹಾನಗರದ ಪ್ರತಿಷ್ಠಿತ ಸಂಸ್ಥೆಯೊಂದರ ವಾರ್ಷಿಕ ಸ್ಮರಣ ಸಂಚಿಕೆಯೊಂದರಲ್ಲಿ 1968ರಲ್ಲಿ ಪ್ರಕಟಗೊಂಡ ಕರ್ನಾಟಕ ಸಂಘ, ಮುಂಬೈ ಇದರ ಜಾಹೀರಾತೊಂದರ ತುಣುಕಿದು. ಈ ಜಾಹೀರಾತಿನಲ್ಲಿ ಕರ್ನಾಟಕ ಸಂಘವು ಸಮಸ್ತ ಕನ್ನಡಿಗರ ಸಂಘಟನೆಯಾಗಬೇಕು; ಮುಂಬೈ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುವ ಸಂಸ್ಥೆಯಾಗಬೇಕೆಂಬ ನಿಲುವು ಇದ್ದದ್ದು ಸ್ಪಷ್ಟ. ಎಸ್.ಕೆ. ರಾವ್ ಅವರಂತಹ ನಿಸ್ವಾರ್ಥ ಗೌರವಾನ್ವಿತ ವ್ಯಕ್ತಿಗಳಿಂದ ಪೋಷಣೆಗೊಂಡ ಕರ್ನಾಟಕ ಸಂಘ ಮುಂಬೈ ಕನ್ನಡಿಗರ ಆತ್ಮ ದೇಗುಲ.

ಸದಾನಂದ ಶೆಟ್ಟಿಯವರು ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದಾಗ ಕಚೇರಿಯ ಮುಖ್ಯ ಅಧಿಕಾರಿಯೋರ್ವ ಬಹುದೊಡ್ಡ ಮೊತ್ತವನ್ನು ಗುಳುಂ ಮಾಡಿದ್ದ. ಆಗ ಆತನನ್ನು ಹಿಡಿದು ಆತನಿಂದ ಆದಷ್ಟು ಮೊತ್ತವನ್ನು ಹಿಂದಕ್ಕೆ ಪಡೆದಿದ್ದರು. ಆದರೆ ಬಾಕಿ ಇದ್ದ ಸುಮಾರು 70 ಸಾವಿರ ರೂ. ಮೊತ್ತವನ್ನು (ಅಂದಿನ ದಿನದಲ್ಲಿ ಇದು ಬಹು ದೊಡ್ಡ ಮೊತ್ತ) ಸಮಿತಿ ಸದಸ್ಯರು ಹಾಗೂ ಅಧ್ಯಕ್ಷರು ಕೂಡಾ ದೊಡ್ಡ ಮೊತ್ತವನ್ನು ಸೇರಿಸಿ ಸಂಘಕ್ಕೆ ಹಾನಿಯಾಗದಂತೆ ನೋಡಿಕೊಂಡಿದ್ದರು. ಅದು ಕಚೇರಿ ಅಧಿಕಾರಿ ನುಂಗಿದ ಹಣ; ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಅಧ್ಯಕ್ಷರು ಹಾಗೂ ಸಮಿತಿ ನುಣುಚಿಕೊಳ್ಳ ಬಹುದಿತ್ತು.ಆದರೆ ಅಂದಿನ ಸಮಿತಿ ಸದಸ್ಯರು ಹಾಗೂ ಅಧ್ಯಕ್ಷರಿಗೆ ಸಂಘದ ಮೇಲಿದ್ದ ನಿಷ್ಠೆ, ಅವರಿಗಿರುವ ಜವಾಬ್ದಾರಿ, ಬದ್ಧತೆ, ಪ್ರಾಮಾಣಿಕತೆಗಳನ್ನು ಎತ್ತಿ ತೋರಿಸುತ್ತದೆ. ಅಂತಹ ಧೀಮಂತ ಅಧ್ಯಕ್ಷರನ್ನು, ಕಾರ್ಯಕಾರಿ ಸಮಿತಿ ಕಟ್ಟಿದ ಕರ್ನಾಟಕ ಸಂಘವು ಇಂದು ಚೈತನ್ಯದ ಚಿಲುಮೆ ಆಗಬೇಕಿತ್ತು. ಕಳೆದ ಕೆಲವು ಸಮಯದಿಂದ ಕೊರೋನದಿಂದಾಗಿ ಮುಂಬೈ ಕನ್ನಡಿಗರು ತತ್ತರಿಸುತ್ತಿರುವಾಗ ಇಲ್ಲಿನ ಬಹುತೇಕ ಸಂಘಟನೆಗಳು, ಅದರಲ್ಲೂ ‘ಅಭಿನಯ ಮಂಟಪ’ದಂತಹ ಹಣಕಾಸಿನ ವಿಷಯದಲ್ಲಿ ಬಡ ಸಂಘಟನೆ ಅನಿಸಿಕೊಂಡವುಗಳು ಕೂಡ ಇಲ್ಲಿನ ಕನ್ನಡಿಗರ ಪರವಾಗಿ ನಿಂತು ಅವರಿಗೆ ಅಗತ್ಯ ವಸ್ತುಗಳನ್ನು ನೀಡುವಲ್ಲಿ ಮುಂದಾದವು. ಆದರೆ ಕರ್ನಾಟಕ ಸಂಘ ಕನ್ನಡಿಗರ ನೆರವಿಗೆ ಬರಲು ಅಸಾಧ್ಯವಾಯಿತು ಏಕೆ?

ಕರ್ನಾಟಕ ಸಂಘವು ಕನ್ನಡಿಗರಿಂದ ದೂರ ಸರಿಯುತ್ತಿರುವ ಬಗ್ಗೆ ಈ ಶತಮಾನದ ಪ್ರಾರಂಭದಲ್ಲೇ ಚರ್ಚೆಗಳು ನಡೆಯುತ್ತಾ ಬರುತ್ತಿವೆ. ಸಂಘದ ವಾರ್ಷಿಕ ಮಹಾಸಭೆಗಳಲ್ಲೂ ಚರ್ಚೆಯಾಗುತ್ತಾ ಬಂದಿದೆ. 2007ರ ಆಗಸ್ಟ್ ತಿಂಗಳಲ್ಲಿ ಪತ್ರಿಕೆಯೊಂದು ಹೊರತಂದಿದ್ದ ವಿಶೇಷ ಪುರವಣಿಯಲ್ಲಿ ‘‘ದೂರಸಾಗುತ್ತಿರುವ ಕರ್ನಾಟಕ ಸಂಘ’’ ಎಂದು ಉಲ್ಲೇಖಿಸಲ್ಪಟ್ಟಿದೆ. 2008ರ ಮೇ 15ರಂದು ಸಂಘದ ಸದಸ್ಯರೊಬ್ಬರು ಪತ್ರಿಕೆಗಳಿಗೆ ಹಾಗೂ ಸದಸ್ಯ ಬಂಧುಗಳಿಗೆ ಕಳುಹಿಸಿದ್ದ ಪತ್ರದಲ್ಲಿ ಸದಸ್ಯ ನೋಂದಾವಣಿಯಲ್ಲಿ ಆಗುತ್ತಿರುವ ಅಪ್ರಾಮಾಣಿಕತೆಯನ್ನು ಹಾಗೂ ಕೆಲವೊಂದು ಅವ್ಯವಹಾರಗಳನ್ನು ಬೊಟ್ಟು ಮಾಡಲಾಗಿದೆ.

1998ರಲ್ಲಿ ಕಾರ್ಯಕಾರಿ ಸಮಿತಿಗಾಗಿ ನಡೆದ ಚುನಾವಣೆ ಸಂದರ್ಭವು ಸಂಘದ ಬಹುಮುಖ್ಯ ತಿರುವುಗಳಲ್ಲಿ ಒಂದಾಗಿತ್ತು. ಅಂದು ರಾಜಕೀಯ ಬಣಗಳಂತೆ ಎರಡು ಬಣಗಳು ಹುಟ್ಟಿಕೊಂಡು ಆತಂಕಗಳಿಗೆ ಕಾರಣವಾಗಿತ್ತು. ಆಗ ಇನ್ಯಾವುದೇ ಸಂಘಗಳಲ್ಲಿ ಸಕ್ರಿಯ ಸದಸ್ಯರಾಗಿರದಂತಹ ಕರ್ನಾಟಕ ಸಂಘದ ಹಿರಿಯ ಸದಸ್ಯರಾದ ಯಶವಂತ ಚಿತ್ತಾಲ, ಬಿ.ಎ. ಸನದಿ, ಡಾ.ಜಿ.ಡಿ. ಜೋಶಿ, ಡಾ. ವಿಶ್ವನಾಥ್ ಕಾರ್ನಾಡ್, ಯು.ವಿ. ರಾವ್, ಪ್ರಾ. ಸೀತಾರಾಮ್ ಆರ್. ಶೆಟ್ಟಿ ಅವರ ತಂಡವು ಎರಡೂ ತಂಡಗಳ ನಡುವಿನ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿತ್ತು. ಆ ಸಮಸ್ಯೆ ಪರಿಹರಿಸಿದ ನಂತರ ಶೆಟ್ಟಿಯವರು ಅಂದಿನ ಸಮಸ್ಯೆಗೆ ಕಾರಣರಾದ ಇಬ್ಬರು ವ್ಯಕ್ತಿಗಳ ಬಗ್ಗೆ ಬರೆಯುತ್ತಾ ಅಂದು ಅವರಿಗಿದ್ದ ಸಂಘದ ಬಗೆಗಿನ ‘ನಿಷ್ಠೆ, ಪ್ರೀತಿ’ಯನ್ನು ಗುರುತಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಸಮಸ್ಯೆಗಳಿಂದ ಆಡಳಿತಾತ್ಮಕ ತೊಂದರೆ ಉಂಟಾಗುವುದೆಂದು ಅರಿತು ಸಂಘದ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಲು ಮುಂದಾದರು.ಮುಂದೆ ಯಾವುದೇ ರೀತಿಯ ಎರಡು ತಂಡಗಳಾಗುವುದನ್ನು ತಡೆಯಲು ಹಾಗೂ ತಾಂತ್ರಿಕ ದೋಷ ನಿವಾರಣೆಗಾಗಿ ವಿಶೇಷವಾಗಿ ನಿಯಮಾವಳಿಯಲ್ಲಿ ಬದಲಾವಣೆ ಮಾಡಲಾಯಿತು.

ರವಿ ರಾ. ಅಂಚನ್, ಎಚ್.ಬಿ.ಎಲ್. ರಾವ್, ಜಿ.ಟಿ. ಆಚಾರ್ಯ ಮೊದಲಾದವರನ್ನೊಳಗೊಂಡ ಸಮಿತಿಯು ಸಿದ್ಧಪಡಿಸಿದ್ದ ಸಂಘದ ನಿಯಮಾವಳಿಯ ಕರಡು ಪ್ರತಿಯು ಮಾರ್ಚ್ 5 ಮತ್ತು 11, 2000ದಂದು ಜರುಗಿದ ವಿಶೇಷ ಮಹಾಸಭೆಯಲ್ಲಿ ಅನುಮೋದನೆಗೊಂಡು, ಅದೇ ವರ್ಷ ಎಪ್ರಿಲ್ 9 ಹಾಗೂ ಆಗಸ್ಟ್ 27ರಂದು ನಡೆದ ವಿಶೇಷ ಮಹಾಸಭೆಯಲ್ಲಿ ಸ್ವೀಕೃತಗೊಂಡಿತ್ತು. ಸಂಘದ ಆಡಳಿತ ಹಾಗೂ ಮತದಾನದ ವಿಧಾನವನ್ನೊಳಗೊಂಡ ಈ ನಿಯಮಾವಳಿಗಳನ್ನು ಮಾರ್ಚ್ 17, 2001ರಲ್ಲಿ ‘ಅಸಿಸ್ಟಂಟ್ ಚ್ಯಾರಿಟಿ ಕಮಿಶನರ್ ಆಫ್ ಗ್ರೇಟರ್ ಮುಂಬೈ’ ಇಲ್ಲಿ ದಾಖಲೆಗೊಂಡು ಸ್ವೀಕೃತವಾಗಿದೆ. ಸಂಘದ ಈ ನಿಯಮಾವಳಿಗಳಲ್ಲಿ ಕ್ರಮ ಸಂಖ್ಯೆ 18ಬಿ ಮತ್ತು 18ಡಿಯಲ್ಲಿ ಇರುವಂತೆ 2 ಅವಧಿಗೆ ಅಂದರೆ 3-3 ವರ್ಷ (ಒಟ್ಟು 6 ವರ್ಷಗಳು) ಸಮಿತಿಯಲ್ಲಿದ್ದವರು ಸತತ ಮೂರನೇ ಸಲ ಅಧ್ಯಕ್ಷ ಅಥವಾ ಕಾರ್ಯಕಾರಿ ಸಮಿತಿಗೆ ಸ್ಪರ್ಧಿಸುವಂತಿಲ್ಲ. ಇದನ್ನೇ ‘ಶೆಡ್ಯೂಲ್ಡ್-3’ರಲ್ಲಿ ಕೊನೆಯ ಕಾಲಂನಲ್ಲಿ ಬಿಡಿಸಿ ವಿವರಿಸಲಾಗಿದೆ. ಆದರೆ ಕಳೆದ ಸುಮಾರು ಇಪ್ಪತ್ತು ವರ್ಷಗಳ ಅವಧಿಯ ಪದಾಧಿಕಾರಿಗಳ ವಿವರಗಳನ್ನು ಗಮನಿಸಿದರೆ ಈ ಅಂಶ ಕೇವಲ ಇಬ್ಬರಿಗೆ ಸಂಘದಲ್ಲಿ ಅನ್ವಯಿಸದೆ ಇರುವುದನ್ನು ನಾವು ಗಮನಿಸಬಹುದು. ಈ ಬಗ್ಗೆ ಕಳೆದ 17-18ವರ್ಷಗಳಿಂದ ಮಹಾಸಭೆಯಲ್ಲಿ ಚರ್ಚೆಗಳಾಗುತ್ತ ಬಂದಿವೆ. ಸಂಘದ ‘ಎಲೆಕ್ಷನ್ ಪ್ಯಾನಲ್’ಗೆ 20.5.2016ರಂದು ಈ ಬಗ್ಗೆ ಸಂಘದ ಸದಸ್ಯ (ಬಿ248)ರೋರ್ವರು ಬರೆದ ಪತ್ರ ಹಾಗೂ 2.6.2016ರಂದು ಬರೆದ ಇನ್ನೊಂದು ಪತ್ರವನ್ನು ಗಮನಿಸಬಹುದು. ಎಚ್. ಬಿ.ಎಲ್. ರಾವ್ ಅವರು ಪತ್ರಿಕೆಯೊಂದರಲ್ಲಿ ಬರೆದಿರುವ ‘ಕರ್ನಾಟಕ ಸಂಘವು ದಂತಕತೆ ಆಗದಿರಲಿ’ ಎಂಬ ಬರಹದಲ್ಲಿಯೂ ‘‘ಕೆಲವೇ ವ್ಯಕ್ತಿಗಳು ಎರಡು ದಶಕಗಳಿಂದ ಸಮಿತಿಯಲ್ಲಿದ್ದು ಸಂಘದ ಕಾರ್ಯನಿರ್ವಹಣೆ ಮಾಡುವುದು ಮತ್ತು ಇತರ ಸದಸ್ಯರು ಸಮಿತಿಗೆ ಬರಲು ವಾಮಮಾರ್ಗದ ಮುಖಾಂತರ ತಡೆಹಿಡಿಯುವುದು’’ (12.6.2018)ಎಂದು ಉಲ್ಲೇಖಿಸಿದ್ದಾರೆ. ಅದೇ ತಿಂಗಳಲ್ಲಿ ಸೀಮಂತೂರು ಚಂದ್ರಹಾಸ ಸುವರ್ಣರು ಪ್ರಕಟಿಸಿದ ಪತ್ರದಲ್ಲಿಯೂ ಇದನ್ನು ಉಲ್ಲೇಖಿಸಲಾಗಿದೆ.

ಮುಂಬೈ ಉಪನಗರಗಳಲ್ಲಿರುವ ಗೋರೆಗಾಂವ್ ಕರ್ನಾಟಕ ಸಂಘ, ಡೊಂಬಿವಲಿ ಕರ್ನಾಟಕ ಸಂಘ, ನವಿಮುಂಬೈ ಕನ್ನಡ ಸಂಘ ಮೊದಲಾದ ಆಯಾ ಭಾಗಕ್ಕೆ ಸಂಬಂಧಿಸಿದ, ಆದರೆ ಒಟ್ಟು ಮುಂಬೈ ಕನ್ನಡಿಗರ ಬಗ್ಗೆ ಸ್ಪಂದಿಸುವ ಈ ಸಂಸ್ಥೆಗಳಲ್ಲೂ ತಲಾ ಮೂರರಿಂದ ನಾಲ್ಕು ಸಾವಿರದವರೆಗೆ ಸದಸ್ಯ ಸಂಪತ್ತು ಇದೆ. ಆದರೆ ಮುಂಬೈಯ ಪ್ರತಿಷ್ಠಿತ, ಮುಂಬೈ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎನಿಸಿರುವ ಕರ್ನಾಟಕ ಸಂಘದ ಸದಸ್ಯ ಸಂಪತ್ತು (2018-2019ರ ವಾರ್ಷಿಕ ವರದಿ) ಒಟ್ಟು 3,490. ಹಲವಾರು ವರ್ಷಗಳಿಂದ ಮುಂಬೈ ಕನ್ನಡಿಗರು ತಮಗೆ ಈ ಸಂಘದಲ್ಲಿ ಸದಸ್ಯತನಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಧ್ವನಿ ಎತ್ತುತ್ತಿದ್ದಾರೆ. ಈ ಬಗ್ಗೆ 2008ರಲ್ಲಿ ಸದಸ್ಯರೋರ್ವರು ಬರೆದ ಪತ್ರ, ಎಚ್.ಬಿ.ಎಲ್. ರಾವ್ ಹಾಗೂ ಚಂದ್ರಹಾಸ ಸುವರ್ಣ ಅವರು ಪತ್ರಿಕೆಯಲ್ಲಿ ಬರೆದ ಬರಹಗಳು ಎತ್ತಿ ಹೇಳಿವೆ. 2018ರಲ್ಲಿ ನಡೆದ ಚುನಾವಣೆ ಸಂದರ್ಭ ಚುನಾವಣಾ ಅಧಿಕಾರಿಗಳಲ್ಲಿ ಓರ್ವರಾಗಿದ್ದ ಜಿ.ಟಿ. ಆಚಾರ್ಯ ಅವರು ಮಹಾಸಭೆಗೆ ಒಪ್ಪಿಸಿರುವ ವರದಿ ಪ್ರಕಾರ ‘‘ಕಳೆದ ಇಪ್ಪತ್ತು ವರ್ಷಗಳಲ್ಲಿ ಸೇರ್ಪಡೆಗೊಂಡ ಸದಸ್ಯರಲ್ಲಿ ಬಹಳಷ್ಟು ಮಂದಿಗೆ ಕೇವಲ ಚುನಾವಣೆ ಹಾಗೂ ವಾರ್ಷಿಕ ಮಹಾಸಭೆ ಉದ್ದೇಶ ಇಟ್ಟುಕೊಂಡು ಕಾನೂನುಬಾಹಿರವಾಗಿ ಸದಸ್ಯತನ ನೀಡಲಾಗಿದೆ.’’ ಎಂದು ಉಲ್ಲೇಖಿಸಿದ್ದಾರೆ. ‘‘ಕಳೆದ ಹಲವಾರು ವರ್ಷಗಳ ಲೆಕ್ಕಪತ್ರ ಹಾಗೂ ಸದಸ್ಯರ ನೇಮಕಾತಿಯ ಬಗ್ಗೆ ವಿಶೇಷ ಸಮಿತಿ ರಚಿಸಿ ಆ ಸಮಿತಿಯಿಂದ ಪರಿಶೀಲಿಸಬೇಕಾಗಿದೆ’’ ಎಂದು ಸಂಘಕ್ಕೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

24.8.2014ರ ಸಂದರ್ಭ ಸಂಘದ ಸಾಂಸ್ಕೃತಿಕ ಭವನಕ್ಕೆ 37ರ ಹರೆಯ. ಅಂದು ನಡೆದ ವಿಶೇಷ ಮಹಾಸಭೆಯಲ್ಲಿ ಕಟ್ಟಡ ಪುನರ್‌ನಿರ್ಮಾಣಕ್ಕೆ ಕಾರ್ಯ ಕಾರಿ ಸಮಿತಿ ಒಪ್ಪಿಗೆ ಕೋರಲಾಗಿತ್ತು. ಆದರೆ ಸದಸ್ಯರ ತಕರಾರು ಇದ್ದದ್ದು ಸಂಘದ ಆರ್ಥಿಕ ಪರಿಸ್ಥಿತಿಯ ಬಗ್ಗೆ. ಸಮಿತಿ ಅಂದು ಕಟ್ಟಡ ನಿರ್ಮಾಣದ ವೆಚ್ಚ ಸುಮಾರು 28 ಕೋಟಿ ರೂ. ಎಂದು ಅಂದಾಜಿಸಿತ್ತು. ಸಂಘದಲ್ಲಿ ಹಣ ಒಟ್ಟಾಗಲಿ, ಈಗ ಕಟ್ಟಡ ಸುದೃಢವಾಗಿದೆ, ಮಳೆ ನೀರು ಸೋರಿಕೆ ತಡೆಗಟ್ಟಲು ಇತ್ತೀಚೆಗೆ ಹಲವು ವಿಧಾನಗಳಿವೆ ಎಂದು ವಿವರಿಸಲಾಗಿತ್ತು. 2014ರ ಮಹಾಸಭೆಯಲ್ಲಿ ಒಪ್ಪಿಗೆ ಪಡೆದ ಕಾರ್ಯಕಾರಿ ಸಮಿತಿ, ಡಿಸೆಂಬರ್ 2015ರಲ್ಲಿ ‘‘ಮಾರ್ಚ್ 2016ರಿಂದ ಸಭಾಗೃಹ ಮುಚ್ಚಲ್ಪಡುತ್ತಿದೆ’’ ಎಂದು ಹೇಳಿಕೆ ನೀಡಿತ್ತು. ಜನವರಿ ತಿಂಗಳಲ್ಲಿ ಕಟ್ಟಡದ ನಕಾಶೆಯನ್ನು ಕಟ್ಟಡದ ಆವರಣದಲ್ಲಿ ಜೋಡಿಸಲಾಗಿತ್ತು. ಕಟ್ಟಡ ನಿರ್ವಹಣೆ ಹಾಗೂ ಕಚೇರಿಯ ಬಹಳಷ್ಟು ಸಿಬ್ಬಂದಿ ವರ್ಗವನ್ನು ತೆರವುಗೊಳಿಸಲಾಗಿತ್ತು. ಮೇ 15ರ ಹೊತ್ತಿಗೆ ಸಂಘದ ಸಭಾಗೃಹವನ್ನು ಎಲ್ಲಾ ರೀತಿಯಿಂದಲೂ ಮುಚ್ಚಲಾಯಿತು. ಆದರೆ ಕಟ್ಟಡದಲ್ಲಿದ್ದ ಕೆನರಾ ಬ್ಯಾಂಕ್, ಸಂಘದ ಕಚೇರಿ ಹಾಗೂ ಕಿರು ಸಭಾಗೃಹಗಳು ವ್ಯವಸ್ಥಿತ ರೀತಿಯಲ್ಲಿದ್ದವು. ಕಿರು ಸಭಾಗೃಹದಲ್ಲಿ ಸಂಘದ ನಾಟಕ ರಿಹರ್ಸಲ್, ಕಲಾಭಾರತಿ ಕಾರ್ಯಕ್ರಮಗಳು ಯಾವುದೇ ತಡೆಯಿಲ್ಲದೆ 2018ರ ವರೆಗೆ ನಡೆಯುತ್ತಿತ್ತು. ಹೀಗಿರುವಾಗ ಜೂನ್ 25.2017ರಲ್ಲಿ ಸಂಘದ ಕಿರು ಸಭಾಗೃಹದಲ್ಲಿ ಜರುಗಿದ ಮಹಾಸಭೆಯಲ್ಲಿ ‘‘ಸಭಾಗೃಹ ಮುಚ್ಚಳ ಮುಚ್ಚಬಾರದಿತ್ತು, ಅದರಿಂದ ಸಂಘಕ್ಕೆ ಒಂದಿಷ್ಟು ಹಣ ಜಮಾವಣೆ ಆಗುತ್ತಿತ್ತು, ಹಣ ಒಟ್ಟುಗೂಡದೆ ನಾವು ಸಭಾಗೃಹ ಕೆಡಹುವುದು ಬೇಡ’’ ಎಂಬ ಸದಸ್ಯರ ಕಳಕಳಿಯ ಕೇಳಿಕೆಗೆ ಕಿವಿಗೊಡದೆ ‘‘ಕಳೆದ ವರ್ಷದ ಜುಲೈ ತಿಂಗಳಲ್ಲಿ ಮಳೆ ಬಂದು ಕಟ್ಟಡದ ಮೇಲ್ಛಾವಣಿ ಕುಸಿದಿದೆ. ಆದ್ದರಿಂದ ಸಭಾಗೃಹ ಮುಚ್ಚಲಾಗಿದೆ’’ ಎಂದು ಕಾರ್ಯದರ್ಶಿ ಅಂದು ಸ್ಪಷ್ಟೀಕರಣ ನೀಡಿದ್ದರು. ಕಟ್ಟಡ ಕೆಡವಲು ಒಪ್ಪಿಗೆ ಸಿಕ್ಕಿದ್ದು 2014ರಲ್ಲಿ, ಸಂಘದ ಸಭಾಗೃಹ ಮುಚ್ಚಲ್ಪಟ್ಟಿದ್ದು ಮೇ 15. 2016, ಮಳೆ ಬಂದು ಮೇಲ್ಛಾವಣಿ ಬಿದ್ದದ್ದು (ಮೇಲ್ಛಾವಣಿ ಅಲ್ಲ ಕೇವಲ ಫಾಲ್ ಸೀಲಿಂಗ್ ಬಿದ್ದದ್ದು) ಜುಲೈ 2016ಕ್ಕೆ. ಕಾರ್ಯದರ್ಶಿ ಅವರ ಹೇಳಿಕೆಗೂ ಈ ಘಟನೆಗಳಿಗೂ ಯಾವುದೇ ಹೊಂದಾಣಿಕೆ ಆಗುತ್ತಿರಲಿಲ್ಲ.

ಸಭೆಯಲ್ಲಿ ಸೇರಿದ್ದ ಸದಸ್ಯರ ಹಾಗೂ ಎಚ್.ಬಿ.ಎಲ್. ರಾವ್, ಚಂದ್ರಹಾಸ ಸುವರ್ಣ ಮೊದಲಾದವರು ಪತ್ರಿಕೆಯಲ್ಲಿ ಬರೆದ ಅಭಿಪ್ರಾಯದಂತೆ ಸಂಘದಲ್ಲಿ ಕಟ್ಟಡ ನಿರ್ಮಾಣಕ್ಕೆ ಅಷ್ಟೊಂದು ದೊಡ್ಡ ಮೊತ್ತ ಇರಲಿಲ್ಲ. (2018ರ ಲೆಕ್ಕಪತ್ರದಲ್ಲಿ 2ಕೋಟಿ 32ಲಕ್ಷ ರೂ., 2019ರಲ್ಲಿ 3ಕೋಟಿ 6ಲಕ್ಷ ರೂ. ಆಗಿತ್ತು.) ಕಟ್ಟಡ ಪುನರ್ ನಿರ್ಮಾಣಕ್ಕೆ ಒಪ್ಪಿಗೆ ಪಡೆದು 5ವರ್ಷಗಳ ನಂತರ ಅಂದರೆ 2019ರಲ್ಲಿ ಕಟ್ಟಡ ಕೆಡವಲಾಯಿತು. ಸದಸ್ಯರ ಮಾತನ್ನು ಮೀರಿ ಸಂಘದ ನಿಯಮಾವಳಿಗಳ ವಿರುದ್ಧ ಕೇವಲ 2-3ಮಂದಿ ಕಾರ್ಯಕಾರಿ ಸಮಿತಿ ಸದಸ್ಯರ ನಿರ್ದೇಶನದಂತೆ ನಡೆದರೆ ಏನಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಕರ್ನಾಟಕ ಸಂಘ ನಮ್ಮ ಕಣ್ಣೆದುರಿಗಿದೆ. ಈ ಎರಡು ವರ್ಷಗಳಲ್ಲಿ ಸಂಘದ ಕಟ್ಟಡ ಮೇಲೆದ್ದು ಬರಲೇ ಇಲ್ಲ. ಕೇವಲ ಶೋರ್ ಪೈಲಿಂಗ್ ಆಗಿದೆ. ಅದಕ್ಕೆ ರಕ್ಷಣಾ ಗೋಡೆ(ವಾಟರ್‌ಪ್ರೂಫ್) ಇನ್ನೂ ಆಗಿಲ್ಲ.
ಸಂಘದ ಹಿರಿಮೆ-ಗರಿಮೆಯನ್ನು ಗಮನಿಸಿ ಸಂಘದಲ್ಲಿ ಸಂಘ ಹಾಗೂ ದಾನಿಗಳು (ಸುಮಾರು 11) ನೀಡಿದ ಒಟ್ಟು ಹದಿನೈದು ದತ್ತಿ ನಿಧಿ ಇದೆ. 2016ರಿಂದ ಎಲ್ಲ

ದತ್ತಿನಿಧಿ ಕಾರ್ಯಕ್ರಮಗಳು ನಿಷ್ಕ್ರಿಯಗೊಂಡಿವೆ. 2018ರವರೆಗೆ ಸಂಘದ ಕಿರು ಸಭಾಗೃಹ ಹಾಗೂ ಆನಂತರ ಕೊರೋನ ಪ್ರಾರಂಭವಾಗುವ ತನಕ ಬೇರೆ ಸಭಾಗೃಹದಲ್ಲಿ ಕಲಾಭಾರತಿ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆದ ದಾಖಲೆಗಳು ನಮಗೆ ಸಿಗುತ್ತವೆ. ಆದರೆ ಈ ಮಧ್ಯೆ ಡಾ. ಸುನೀತಾ ಎಂ. ಶೆಟ್ಟಿ ನೀಡಿದ್ದ ದತ್ತಿ ಕಾರ್ಯಕ್ರಮವೊಂದನ್ನು ಬಿಟ್ಟರೆ ಯಾವುದೇ ದತ್ತಿ ಕಾರ್ಯಕ್ರಮ ನಡೆದಿಲ್ಲ. ಈ ದತ್ತಿನಿಧಿಗಳು ಒಂದು ನಿಶ್ಚಿತ ಉದ್ದೇಶಕ್ಕಾಗಿ ನೀಡಿದವುಗಳು. ಡಾ ಸುನೀತಾ ಎಂ. ಶೆಟ್ಟಿ ಅವರು ತಮಗೆ ‘ಅತ್ತಿಮಬ್ಬೆ ಪ್ರಶಸ್ತಿ’ ಸಿಕ್ಕಾಗ ದೊರೆತ 1ಲಕ್ಷ ಹಣಕ್ಕೆ ತಮ್ಮ ಕೈಯಿಂದ ಸೇರಿಸಿ ನೀಡಿದ 1ಲಕ್ಷ 85ಸಾವಿರ ರೂ., ಸದಾನಂದ ಸುವರ್ಣರು ಹಿಂದೆ ಮಾಡುತ್ತಿದ್ದ ಕಾರಂತೋತ್ಸವ ನಿರಂತರವಾಗಿ ನಡೆಯುತ್ತಿರಬೇಕು ಎಂದು ನೀಡಿದ ಒಟ್ಟು 2ಲಕ್ಷ ರೂ.ಗೂ ಮೀರಿದ ನಿಧಿ ಇತ್ಯಾದಿಗಳನ್ನು ಗಮನಿಸಬೇಕು. ಇವರೆಲ್ಲ ತಾವು ಕಷ್ಟಪಟ್ಟು ಗಳಿಸಿದ ಒಂದು ಭಾಗದಿಂದ ಕೊಟ್ಟ ಹಣ. ದತ್ತಿನಿಧಿ ಕಾರ್ಯಕ್ರಮ ಆಗದಿರಬಹುದು; ಅದಕ್ಕೆ ನಾವು ಹಲವು ಕಾರಣಗಳನ್ನು ಕೊಡಬಹುದು; ಆದರೆ ನಿರ್ದಿಷ್ಟ ಉದ್ದೇಶಕ್ಕಾಗಿ ನೀಡಿದ ದತ್ತಿ ನಿಧಿ ಕಾರ್ಯಕ್ರಮ ಆ ವರ್ಷ ಜರುಗದಿದ್ದರೆ, ಅದರಿಂದ ದೊರಕುವ ಬ್ಯಾಂಕ್ ಬಡ್ಡಿಯ ಲೆಕ್ಕ ಕಡೇಪಕ್ಷ ಲೆಕ್ಕಪತ್ರದಲ್ಲಿ ಜರೂರಾಗಿ ಬರಬೇಕು. ಈ ಬಗ್ಗೆ ಸಂಘದ ಲೆಕ್ಕ ಪರಿಶೋಧಕರನ್ನು ವಿಚಾರಿಸಿದರೆ ಅವರು ನೀಡುವ ಮಾಹಿತಿ ‘‘ಒಂದು ಉದ್ದೇಶಕ್ಕಾಗಿ ಇಟ್ಟ ದತ್ತಿನಿಧಿ ಕಾರ್ಯಕ್ರಮ ಆ ವರ್ಷ ಜರುಗದಿದ್ದರೆ ಬ್ಯಾಂಕಿನಿಂದ ಬರುವ ಬಡ್ಡಿ ದಾನಿಗಳು ನೀಡಿದ ದತ್ತಿನಿಧಿಗೆ ಸೇರಬೇಕು. ಅದನ್ನು ಯಾವುದೇ ಕಾರಣಕ್ಕೂ ಇತರ ಖರ್ಚು ವೆಚ್ಚದಲ್ಲಿ ತೋರಿಸಬಾರದು’’ ಎಂದಾದರೆ ಆ ಹಣ ಈಗ ಎಲ್ಲಿ ಹೋಗಿದೆ? ಆ ಹಣ ಮಾಯವಾಗಲು ಯಾರು ಕಾರಣರೋ ಅವರು ಈ ಮೊತ್ತವನ್ನು ತಮ್ಮ ಕೈಯಿಂದ ಭರಿಸಬೇಕಲ್ಲವೇ?

ಮುಂಬೈ ಕನ್ನಡಿಗರೇ, ಕರ್ನಾಟಕ ಸಂಘ ಮುಂಬೈ ಕನ್ನಡಿಗರ ಹೆಮ್ಮೆಯ, ಗೌರವದ ಪ್ರತೀಕ. ಕರ್ನಾಟಕ ಸಂಘದ 2-3 ಪದಾಧಿಕಾರಿಗಳ ಕೈಯಲ್ಲಿ ಸಂಘ ನಲುಗುತ್ತಿದೆ ಎಂದರೆ ಮುಂಬೈ ಕನ್ನಡಿಗರಿಗೆ ಅವಮಾನ. ಕನ್ನಡ ಭಾಷೆ, ಸಂಸ್ಕೃತಿಗೆ ಮಾಡಿದ ಅವಮಾನ. ಯಾವತ್ತೂ ಸಂಘಕ್ಕಿಂತ ವ್ಯಕ್ತಿ ದೊಡ್ಡವನಲ್ಲ. ವ್ಯಕ್ತಿಗಳ ಜೊತೆ ನಮ್ಮ ಸಂಬಂಧ ಬೇರೆ, ಸಂಘದ ಸಂಬಂಧ ಬೇರೆ. ಅವರು ನಮಗೆಷ್ಟೇ ಆತ್ಮೀಯರಾದರೂ ಸಂಘಕ್ಕೆ ನಾವು ನಿಷ್ಠರಾಗಿರಬೇಕು. ಕಳೆದ ಹಲವಾರು ವರ್ಷಗಳಿಂದ ಸಮಿತಿ ಸದಸ್ಯರಾಗಿದ್ದವರ ಅಥವಾ ಸದ್ಯದ ಸಮಿತಿ ಸದಸ್ಯರ ಜೊತೆ ಸಂಪರ್ಕಿಸಿ ಮಾತುಕತೆ ನಡೆಸಿದರೆ ನಮಗೆ ದೊರೆಯುವ ಉತ್ತರ ಈ ಎಲ್ಲ ಸಂಗತಿಗಳಿಗೆ ಪೂರಕವಾಗಿರುತ್ತದೆ. ಮಹಾನಗರದಾದ್ಯಂತ ಇರುವ ಎಲ್ಲಾ ಅರ್ಹ ಕನ್ನಡಿಗರು ಕರ್ನಾಟಕ ಸಂಘದ ಸದಸ್ಯರಾಗಬೇಕು. ನಿಯಮಾವಳಿಗಳ ಉಲ್ಲಂಘನೆ ಮಾಡಿ ಕಳೆದೆರಡು ದಶಕಗಳಿಂದ ತಮ್ಮ ಆಸ್ತಿ ಎಂದು ಭಾವಿಸಿರುವ ಆಘಾತಕಾರಿ ಮನಸ್ಸುಗಳನ್ನು ಸಂಘದಿಂದ ದೂರವಿಡಬೇಕು. ಕನ್ನಡಿಗರೇ, ಕರ್ನಾಟಕ ಸಂಘ ಮತ್ತೆ ತಲೆಯೆತ್ತಿ ಎದ್ದು ನಿಲ್ಲಬೇಕು. ಇದು ಕನ್ನಡ ಸಂಸ್ಕೃತಿಯ ಪ್ರತೀಕವಾಗಿ ಮುಂಬೈ ಕನ್ನಡಿಗರ ಆಶಯಕ್ಕೆ ಸ್ಪಂದಿಸುವ ಸರ್ವ ಕನ್ನಡಿಗರ ಕೇಂದ್ರ ಆಗಬೇಕು. ನಿಯಮಾವಳಿಯ ಶೆಡ್ಯೂಲ್ಡ್-3 ಚ್ಯಾರಿಟಿ ಕಚೇರಿಯಲ್ಲೇ ಸಿಗುತ್ತದೆ. ಆದ್ದರಿಂದ ಜಾತಿ, ಮತ, ಧರ್ಮಗಳನ್ನು ಮರೆತು ಮುಂಬೈ ಕನ್ನಡಿಗರೆಲ್ಲ ಒಂದಾಗಿ ಕನ್ನಡದ ಆಸ್ತಿಯನ್ನು ಮತ್ತೊಂದಿಷ್ಟು ಬಲದೊಂದಿಗೆ ಗಟ್ಟಿಯಾಗಿ ಕಟ್ಟೋಣ. ವ್ಯಕ್ತಿಗೆ ನಿಷ್ಠನಾಗಿ 1 ಲಕ್ಷ ರೂ. ಕೊಡುವುದಕ್ಕಿಂತ ನೂರು-ಸಾವಿರ ಕೊಟ್ಟು ಸಂಘಕ್ಕೆ ನಿಷ್ಠರಾಗಿ ಸಂಘದ ಸಾಂಸ್ಕೃತಿಕ ಭವನದ ಅಡಿಗಲ್ಲಾಗೋಣ. ಮುಂಬೈಯಲ್ಲಿ ಎಲ್ಲರನ್ನೂ ಒಂದುಗೂಡಿಸಿ ನಡೆದರೆ ಅಸಾಧ್ಯವಾದುದು ಯಾವುದೂ ಇಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)