ಇಲ್ಲಿ ನಡೆಯುವುದೇ ಬೇರೆ...ಅಲ್ಲಿ ನಡೆಯುವುದೇ ಬೇರೆ...!
‘‘ಹಿಂಸೆ...ಪತ್ರಕರ್ತರ ಕೊಲೆ...ಅಮಾಯಕರ ಹತ್ಯೆ’’ ಚೌಕೀದಾರರು ಜೋರು ಜೋರಾಗಿ ಮಾತನಾಡುತ್ತಿರುವುದು ಕೇಳಿ ಪತ್ರಕರ್ತ ಎಂಜಲು ಕಾಸಿಗೆ ರೋಮಾಂಚನವಾಯಿತು. ಚೌಕೀದಾರರು ಕೊನೆಗೂ ದೇಶವನ್ನು ಗಮನಿಸುತ್ತಿದ್ದಾರೆ ಎಂದು ಖುಷಿ ಖುಷಿಯಿಂದ ಅವರ ಮುಂದೆ ಮುಂದೆ ನಿಂತ.
‘‘ಚೌಕೀದಾರರೇ....ಕೊನೆಗೂ ಭಾರತದ ಕಾನೂನು ವ್ಯವಸ್ಥೆಯ ಬಗ್ಗೆ ಬಾಯಿ ತೆರೆದು ಮಾತನಾಡಿದರಲ್ಲ....ಇದರ ವಿರುದ್ಧ ಏನು ಕ್ರಮ ತೆಗೆದುಕೊಳ್ಳಲಿದ್ದೀರಿ?’’ ಕೇಳಿದ.
ಚೌಕೀದಾರರು ಒಮ್ಮೆಲೆ ಕಣ್ಣು ಕೆಂಡ ಮಾಡಿದರು ‘‘ನಾನು ಭಾರತದ ಬಗ್ಗೆ ಮಾತನಾಡುತ್ತಿಲ್ಲ....ಪಕ್ಕದ ಅಫ್ಘಾನಿಸ್ತಾನದ ಬಗ್ಗೆ ಮಾತನಾಡುತ್ತಿದ್ದೇನೆ...’’
ಕಾಸಿ ಒಮ್ಮೆ ಪೆಚ್ಚಾದ. ‘‘ಆದರೆ ಹಿಂಸೆ, ಪತ್ರಕರ್ತರ ಕೊಲೆ, ಅಮಾಯಕರ ಹತ್ಯೆ ಇವೆಲ್ಲ ನಡೆಯುತ್ತಿರುವುದು ಭಾರತದಲ್ಲಿ ಅಲ್ಲವೆ?’’ ಕಾಸಿ ಅರ್ಥವಾಗದೆ ಮತ್ತೊಮ್ಮೆ ಕೇಳಿದ.
‘‘ನೋಡಿ....ನಮ್ಮ ನೆರೆಯ ರಾಷ್ಟ್ರದಲ್ಲಿ ಹಿಂಸೆ, ಉಗ್ರವಾದ ನಡೆಯುತ್ತಿದ್ದರೆ ಅದರಿಂದ ಭಾರತಕ್ಕೆ ಅಪಾಯವಿದೆ...ಆದುದರಿಂದ ಅಫ್ಘಾನಿಸ್ತಾನದಲ್ಲಿ ಕಾನೂನು ವ್ಯವಸ್ಥೆ ಸುಧಾರಣೆಯಾಗಬೇಕು. ಹಾಗೆಯೇ ಅಲ್ಲಿ ಪ್ರಜಾಸತ್ತಾತ್ಮಕವಾದ ಆಡಳಿತ ಬರಬೇಕು...’’ ಚೌಕೀದಾರರು ಭಾಷಣ ಬಿಗಿದರು.
‘‘ಹಾಗಾದರೆ ಭಾರತದಲ್ಲಿ ಕಾನೂನು ಸುಧಾರಣೆಯಾಗುವ ಅಗತ್ಯವಿಲ್ಲವೇ?’’ ಕಾಸಿ ಗೊಂದಲದಿಂದ ಕೇಳಿದ.
‘‘ನೀವು ಕಾಂಗ್ರೆಸ್‌ನ ಎಂಜಲು ತಿಂದು ಬಂದಿದ್ದೀರಿ. ನೋಡಿ..ಅಫ್ಘಾನಿಸ್ತಾನದಲ್ಲಿರುವುದು ಉಗ್ರಗಾಮಿ ಸರಕಾರ...’’ ಚೌಕೀದಾರರು ಉಗ್ರವಾಗಿ ಘೋಷಿಸಿದರು.
‘‘ಸಾಧ್ವಿ ಪ್ರಜ್ಞಾಸಿಂಗ್ ನಿಮ್ಮ ಸರಕಾರದೊಳಗೆ ಇದ್ದಾರಲ್ಲ....ಸಾರ್...’’ ಕಾಸಿ ನೆನಪಿಸಿದ.
‘‘ಮೊನ್ನೆ ಮೊನ್ನೆ ಅಲ್ಲಿ ಪತ್ರಕರ್ತರ ಮೇಲೆ ದಾಳಿ ನಡೆದಿದೆ..ಹತ್ಯೆ ನಡೆದಿದೆ.’’ ಚೌಕೀದಾರ್ ಅಫ್ಘಾನಿಸ್ತಾನದ ಪತ್ರಕರ್ತರ ಮೇಲೆ ಕಾಳಜಿ ವಹಿಸಿದರು.
‘‘ಭಾರತದಲ್ಲೂ ಪತ್ರಕರ್ತರ ಮೇಲೆ ಐಟಿ ದಾಳಿ ನಡೆಯುತ್ತಿದೆಯಲ್ಲ ಸಾರ್....ಗೌರಿ ಲಂಕೇಶ್ ಹತ್ಯೆ ಭಾರತದಲ್ಲೇ ನಡೆದಿರುವುದಲ್ಲವೇ?’’
ಕಾಸಿ ಮತ್ತೆ ಕೆಣಕಿದ.
‘‘ಭಾರತದಲ್ಲಿ ನಡೆದ ಹತ್ಯೆ ಬೇರೆ...ಅಫ್ಘಾನಿಸ್ತಾನದಲ್ಲ್ಲಿ ನಡೆದ ಹತ್ಯೆ ಬೇರೆ...ಒಂದರ ಜೊತೆ ಒಂದು ಹೋಲಿಸಲಾಗುವುದಿಲ್ಲ.’’ ಚೌಕೀದಾರರು ಸ್ಪಷ್ಟೀಕರಣ ನೀಡಿದರು.
‘‘ಅಂದರೆ....’’ ಕಾಸಿ ಅರ್ಥವಾಗದೆ ಕೇಳಿದ.
‘‘ಭಾರತದಲ್ಲಿ ರಾಷ್ಟ್ರೀಯ ಕಾರಣಗಳಿಗಾಗಿ ಹತ್ಯೆ ನಡೆಯುತ್ತವೆ. ಆದರೆ ತಾಲಿಬಾನ್‌ಗಳು ಭಯೋತ್ಪಾದನಾ ಕಾರಣಗಳಿಗೆ ಹತ್ಯೆ ಮಾಡುತ್ತಾರೆ. ಅಲ್ಲಿನ ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ....’’ ಚೌಕೀದಾರರು ಅಫ್ಘಾನಿಸ್ತಾನದ ಮಹಿಳೆಯರ ಕುರಿತಂತೆ ಚಿಂತೆಗೀಡಾದರು.
‘‘ಭಾರತದಲ್ಲಿ ಭೀಕರ ಅತ್ಯಾಚಾರಗಳು ನಡೆದಿವೆಯಲ್ಲ. ಮಹಿಳೆಯರ ಮೇಲೆ, ಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಅವರನ್ನು ಭೀಕರವಾಗಿ ಕೊಲ್ಲಲಾಗುತ್ತಿದೆ....’’ ಕಾಸಿ ನೆನಪಿಸಿದ.
‘‘ಅದು ಬೇರೆ...ಇದು ಬೇರೆ....ಅವರು ತ್ರಿವಳಿ ತಲಾಖ್ ಹೇಳಿ ದೌರ್ಜನ್ಯ ಮಾಡುತ್ತಾರೆ....’’ ಚೌಕೀದಾರರು ಹೇಳಿದರು. ‘‘ಇಲ್ಲಿ ತಲಾಕ್ ಹೇಳದೆಯೇ ಪತ್ನಿಯನ್ನು ನಡು ನೀರಲ್ಲಿ ಬಿಡುತ್ತಾರೆ ಸಾರ್...’’ ಕಾಸಿ ಉತ್ತರಿಸಿದ.
ಚೌಕೀದಾರರಿಗೆ ಯಾವುದೋ ನೆನಪು ಒತ್ತರಿಸಿ ಬಂತು. ‘‘ನೋಡಿ, ತಾಲಿಬಾನ್ ಸರಕಾರದಲ್ಲಿ ಎಲ್ಲರೂ ಗಡ್ಡಧಾರಿಗಳೇ ಇದ್ದಾರೆ....’’
‘‘ಸಾರ್...ನಮ್ಮ ಸರಕಾರದೊಳಗೂ ಒಬ್ಬರು ಗಡ್ಡ ಬಿಟ್ಟಿದ್ದಾರೆ....’’
‘‘ಆದ್ರೆ ಅವರ ಸರಕಾರದಲ್ಲಿ ಒಬ್ಬರಾದರೂ ಪ್ಯಾಂಟ್ ಸೂಟ್ ಹಾಕಿದ್ದಾರ?...ಟೈ ಕಟ್ಟಿದ್ದಾರ? ಜೊತೆಗೆ ಕೈಯಲ್ಲಿ ಕೋವಿ ಹಿಡಿದಿದ್ದಾರೆ...’’
‘‘ನಮ್ಮಲ್ಲಿ ಕೈಯಲ್ಲಿ ತ್ರಿಶೂಲ ಹಿಡೀತಾರೆ ಸಾರ್....’’ ಕಾಸಿ ಉತ್ತರಿಸಿದ.
‘‘ಪಿಎಚ್‌ಡಿ , ಸಂಶೋಧನೆ ಎಲ್ಲ ಬೇಡ ಅಂತಾರೆ ಅವರು...’’ ಚೌಕೀದಾರರು ಹೇಳಿದರು.
‘‘ನಮ್ಮಲ್ಲಿ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳನ್ನು ನಕ್ಸಲರು ಎಂದು ಸರಕಾರ ಹೇಳುತ್ತದೆ ಸಾರ್...’’
‘‘ನಮ್ಮದು ಬೇರೆ...ಅವರದು ಬೇರೆ....ನಮ್ಮದು ರಾಷ್ಟ್ರೀಯವಾದ...ಅವರದು ಉಗ್ರವಾದ....ತಾಲಿಬಾನ್‌ಗಳು ಬುದ್ಧನ ಮೂರ್ತಿಗಳನ್ನು ಒಡೆದು ಹಾಕಿದ್ದಾರೆ ಗೊತ್ತಲ್ಲ?’’
‘‘ನಮ್ಮವರು ಮಸೀದಿಯನ್ನೇ ಒಡೆದು ಹಾಕಿದ್ದಾರೆ ಸಾರ್...ಇನ್ನೂ ಅವರಿಗೆ ಶಿಕ್ಷೆಯಾಗಿಲ್ಲ....ಬದಲಿಗೆ ಅದನ್ನು ವಿಜಯೋತ್ಸವವಾಗಿ ಆಚರಿಸ್ತಾರೆ...’’
‘‘ಅದು ಬೇರೆ...ಇದು ಬೇರೆ....ಅಲ್ಲಿ ಮಸೀದಿಯೇ ಇರಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅಂದ ಮೇಲೆ ಒಡೆಯುವುದು ಎಲ್ಲಿ ಬಂತು....ಅಫ್ಘಾನಿಸ್ತಾನದಲ್ಲಿ ಪುಸ್ತಕಗಳನ್ನೆಲ್ಲ ಬ್ಯಾನ್ ಮಾಡ್ತಾರಂತೆ...’’
‘‘ಪುಸ್ತಕಗಳು ನಮ್ಮಲ್ಲೂ ಬ್ಯಾನ್ ಆಗಿವೆ ಸಾರ್....ಮೊನ್ನೆ ಒಂದು ಪುಸ್ತಕವನ್ನು ನಿಮ್ಮವರೆಲ್ಲ ಸೇರಿ ಸುಟ್ಟು ಹಾಕಿದ್ರು ನೋಡಿ....’’
‘‘ಅದು ಬೇರೆ ...ಇದು ಬೇರೆ....ದೇಶದ ಸಂಸ್ಕೃತಿಗೆ ವಿರೋಧವಾದದ್ದಷ್ಟೇ ನಾವು ಬ್ಯಾನ್ ಮಾಡ್ತೇವೆ...’’
‘‘ಅದು ಅವರ ಸಂಸ್ಕೃತಿ ಸಾರ್...ಅದಕ್ಕೆ ಅವರು ಬ್ಯಾನ್ ಮಾಡಿರಬೇಕು....’’ ಕಾಸಿ ಉತ್ತರಿಸಿದ.
‘‘ಆದರೆ ಮುಲ್ಲಾಗಳು ದೇಶವನ್ನು ಆಳುವುದು ಸರಿಯೇ?’’ ಚೌಕೀದಾರರು ಮತ್ತೆ ಕೇಳಿದರು.
‘‘ನಮ್ಮಲ್ಲಿ ಯೋಗಿಗಳು, ಸಾಧ್ವಿಗಳು ಮುಖ್ಯಮಂತ್ರಿಯಾಗಿಲ್ವೆ ಸಾರ್? ಹಾಗೆಯೇ ಯೋಗಿಯೊಬ್ಬರು ನಿಮ್ಮ ಹುದ್ದೆಗೆ ಈಗಾಗಲೇ ಕಣ್ಣಿಟ್ಟಿದ್ದಾರೆ....’’
‘‘ಅಲ್ಲಿ ವಿಮಾನದಲ್ಲಿ ನೇತಾಡಿಕೊಂಡು ಹೋಗಿ ಸತ್ತದ್ದು ಗೊತ್ತಿದೆಯಾ ನಿಮಗೆ?’’ ಚೌಕೀದಾರರು ಪ್ರಶ್ನಿಸಿದರು.
‘‘ಇಲ್ಲಿ ವಲಸೆ ಕಾರ್ಮಿಕರ ಮೇಲೆಯೇ ರೈಲು ಹತ್ತಿದ್ದು ನಿಮಗಿನ್ನೂ ಗೊತ್ತೇ ಇಲ್ಲವಲ್ಲ ಸಾರ್....’’ ‘‘ನೋಡ್ರೀ....ತಾಲಿಬಾನ್‌ಗಳು ಮಾಡಿದ ಹತ್ಯಾಕಾಂಡಗಳ ಬಗ್ಗೆ ನೀವು ಮರೆತೇ ಬಿಟ್ಟಿದ್ದೀರಲ್ಲ?’’
‘‘ಗುಜರಾತ್ ಹತ್ಯಾಕಾಂಡ, ದಿಲ್ಲಿ ಹತ್ಯಾಕಾಂಡಗಳನ್ನೆಲ್ಲ ಮಾಡಿರುವುದು ತಾಲಿಬಾನ್‌ಗಳ ಸಾರ್....?’’ ಕಾಸಿ ಆತಂಕದಿಂದ ಕೇಳಿದ.
‘‘ಏ ಅದು ಬೇರೆ...ಇದು ಬೇರೆ...ಇಲ್ಲಿ ನಡೆದಿರುವುದು ಹತ್ಯಾಕಾಂಡಗಳಲ್ಲ. ಅದು ಸಾಂಸ್ಕೃತಿಕ ಪುನರುತ್ಥಾನದ ಭಾಗವಾಗಿದೆ. ನಮ್ಮ ಆತ್ಮಾಭಿಮಾನದ ಸಂಕೇತವಾಗಿದೆ. ನಿಮಗೆ ಗೊತ್ತಾ? ಅಫ್ಘಾನಿಸ್ತಾನದಲ್ಲಿ ಉಸಿರಾಡುವುದಕ್ಕೂ ತಾಲಿಬಾನ್‌ಗಳ ಅನುಮತಿ ಬೇಕು....ಗೊತ್ತಾ?’’
‘‘ಇಲ್ಲಿ ಉಸಿರಾಡುವುದಕ್ಕೆ ಆಕ್ಸಿಜನ್ ಸಿಲಿಂಡರ್‌ಗಳೇ ಆಸ್ಪತ್ರೆಗಳಲ್ಲಿ ಇಲ್ಲವಂತೆ ಸಾರ್...’’
‘‘ಅಲ್ಲಿ ಮಕ್ಕಳಿಗೆ ಓದುವುದಕ್ಕೆ ಶಾಲೆಗಳೇ ಇಲ್ಲ’’ ಚೌಕೀದಾರ್ ಗಡ್ಡ ಸವರಿದರು.
‘‘ಕೊರೋನ ಹೆಸರಿನಲ್ಲಿ ಇಲ್ಲಿಯೂ ಶಾಲೆಗಳನ್ನೆಲ್ಲ ಮುಚ್ಚಲಾಗಿದೆಯಲ್ಲ ಸಾರ್...’’ ಕಾಸಿ ಕೇಳಿದ. ‘‘ನೋಡಿ...ಇಡೀ ವಿಶ್ವ ಕೊರೋನದಿಂದ ತತ್ತರಿಸಿದೆ. ಅವರಿನ್ನೂ ಲಾಕ್‌ಡೌನ್ ಮಾಡಿಯೇ ಇಲ್ಲ.....ನಮ್ಮ ದೇಶದಲ್ಲಿ ನಾವು ಅದೆಷ್ಟು ಲಾಕ್‌ಡೌನ್ ಮಾಡಿದೆವು....’’
‘‘ಸಾರ್...ನಮ್ಮ ದೇಶದ ಲಾಕ್‌ಡೌನ್‌ನ್ನು ಅವರಿಗೆ ರಫ್ತು ಮಾಡಿದರೆ...ನಮಗೆ ಆದಾಯ ಬರಬಹುದಲ್ಲಾ ಸಾರ್....’’
ಈಗ ಚೌಕೀದಾರ್ ಖುಷಿಯಾದರು ‘‘ಹೌದು....ಈ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ. ಹಾಗೆಯೇ ನನ್ನ ಎಲ್ಲ ‘ಮಂಕಿ ಬಾತ್’ಗಳನ್ನು ಅವರಿಗೆ ರಫ್ತು ಮಾಡಲಿದ್ದೇವೆ. ಮಂಕಿ ಬಾತ್‌ಗಳನ್ನು ಆಡಿ ತಾಲಿಬಾನ್ ಮುಖ್ಯಸ್ಥರು ಅಲ್ಲಿನ ಜನರನ್ನು ಖುಷಿಪಡಿಸಲಿ. ಹಾಗೆಯೇ ಅವರೊಳಗಿನ ಉಗ್ರವಾದವನ್ನು ಆಮದು ಮಾಡಿಕೊಂಡು, ಬದಲಿಗೆ ನಮ್ಮುಳಗಿನ ಉಗ್ರವಾದವನ್ನು ಅವರಿಗೆ ರಫ್ತು ಮಾಡುವ ಉದ್ದೇಶವಿದೆ...’’
ಕಾಸಿ ಇನ್ನೂ ಹೆಚ್ಚು ತಲೆಓಡಿಸಿ ಹೇಳಿದ ‘‘ಸಾರ್...ಇಲ್ಲಿರುವ ಎಲ್ಲ ರಾಜಕಾರಣಿಗಳನ್ನು ಅಲ್ಲಿಗೆ ರಫ್ತು ಮಾಡಿ, ಅಲ್ಲಿರುವ ಖನಿಜಗಳನ್ನು ಆಮದು ಮಾಡಿಕೊಂಡರೆ ದೇಶಕ್ಕೆ ಹೆಚ್ಚು ಲಾಭವಲ್ಲವೆ?’’
ಚೌಕೀದಾರ್ ಒಮ್ಮೆಲೆ ವೌನವಾದರು. ಅವರು ಸಿಟ್ಟುಗೊಂಡಿದ್ದಾರೆ ಎನ್ನುವುದು ಕಾಸಿಯ ಅರಿವಿಗೆ ಬರುತ್ತಲೇ...ಮೆಲ್ಲಗೆ ಅಲ್ಲಿಂದ ಕಾಲು ಕಿತ್ತ.