varthabharthi


ವಿಶೇಷ-ವರದಿಗಳು

ನಿಫಾ ವೈರಸ್‌ ಕೋವಿಡ್‌ ಗಿಂತ ಅಪಾಯಕಾರಿಯೇಕೆ? ನಾವು ಮಾಡಬೇಕಾಗಿರುವುದೇನು?

ಜನರು ನಿಫಾ ವೈರಸ್‌ ಗೆ ಹೆದರಬೇಕೆ? ಮಂಗಳೂರಿನ ಖ್ಯಾತ ವೈದ್ಯರ ಅಭಿಪ್ರಾಯ ಹೀಗಿದೆ...

ವಾರ್ತಾ ಭಾರತಿ : 12 Sep, 2021
-ಇಸ್ಮಾಯೀಲ್‌ ಝೌರೆಝ್‌

ಮಂಗಳೂರು: ಈಗಾಗಲೇ ಕೇರಳ ರಾಜ್ಯವು ಕೋವಿಡ್‌-19 ಪ್ರಕರಣಗಳ ಕಾರಣದಿಂದ ಭಾರೀ ತೊಂದರೆ ಅನುಭವಿಸುತ್ತಿದೆ. ಕೋವಿಡ್‌ ನಿಂದಾಗುವ ಸಾವುಗಳನ್ನು ನಿಯಂತ್ರಿಸಲು ಪಿಣರಾಯಿ ವಿಜಯನ್‌ ನೇತೃತ್ವದ ರಾಜ್ಯ ಸರಕಾರವು ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ. ಈ ನಡುವೆ ಕೋವಿಡ್‌ ಸಾಂಕ್ರಾಮಿಕವನ್ನು ಹತೋಟಿಗೆ ತರುವುದರೊಂದಿಗೆ ಇನ್ನೊಂದು ಸಾಂಕ್ರಾಮಿಕವನ್ನೂ ನಿಭಾಯಿಸಬೇಕಾದ ಪರಿಸ್ಥಿತಿ ಸರಕಾರಕ್ಕೆ ಎದುರಾಗಿದೆ.

ಈಗಾಗಲೇ ಸಾಂಕ್ರಾಮಿಕ ಪೀಡಿತವಾಗಿರುವ ಬದುಕಿನ ಕುರಿತು ಹಾಗೂ ಸಾಂಕ್ರಾಮಿಕವನ್ನು ಎದುರಿಸಲು ಸರಕಾರ ಮಾತ್ರವಲ್ಲ ಜನರೂ ಚಿಂತೆಗೀಡಾಗಿದ್ದಾರೆ. ಈ ಜೀವಭಯದ ಪರಿಸ್ಥಿತಿಯ ಮಧ್ಯೆಯೇ ಕೇರಳದ ಜನತೆ ಮತ್ತು ಸರಕಾರವು ತಮ್ಮ ನೆರೆಯ ರಾಜ್ಯಗಳು ಗಡಿ ಭಾಗದಲ್ಲಿ ಅನುಸರಿಸುತ್ತಿರುವ ಕಠಿಣ ಕ್ರಮಗಳಿಂದಾಗಿ ಇನ್ನಷ್ಟು ಚಿಂತೆಗೀಡಾಗಿದೆ. ನಿಫಾ ವೈರಸ್‌ ಪ್ರಕರಣ ಪತ್ತೆಯಾದ ಬಳಿಕವಂತೂ ದೇವರ ಸ್ವಂತ ನಾಡಿನ ಪರಿಸ್ಥಿತಿ ಬಿಗಡಾಯಿಸಿದೆ.

ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡವು ಅಕ್ಟೋಬರ್‌ ತಿಂಗಳ ಅಂತ್ಯದವರೆಗೆ ಜಿಲ್ಲೆ ಮತ್ತು ಕೇರಳದ ನಡುವಿನ ಸಂಚಾರವನ್ನು ನಿಷೇಧಿಸಿದೆ. ಇದು ತಮ್ಮ ದೈನಂದಿನ ಹೊಟ್ಟೆಪಾಡಿಗೆ ಮಂಗಳೂರನ್ನು ಆಶ್ರಯಿಸಿದ್ದ ಹಲವಾರು ಬಡ ಮತ್ತು ಮಧ್ಯಮ ವರ್ಗದವರ ಪಾಲಿಗೆ ಆತಂಕವಾಗಿ ಮಾರ್ಪಟ್ಟಿದೆ.

ಈ ಎಲ್ಲಾ ವಿಚಾರಗಳ ನಡುವೆ ನಿಫಾ ವೈರಸ್‌ ಕುರಿತು ಜನರು ಗೊಂದಲಕ್ಕೊಳಗಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳು ಮತ್ತು ಆನ್‌ ಲೈನ್‌ ವೇದಿಕೆಗಳಿಂದ ಹರಿದಾಡಿರುವ ಹಲವಾರು ಅನಧಿಕೃತ ಸಂದೇಶಗಳು ಜನರನ್ನು ಇನ್ನೂ ಚಿಂತಾಕ್ರಾಂತರಾಗುವಂತೆ ಮಾಡಿದೆ. ನಿಫಾ ವೈರಸ್‌ ಕುರಿತಾದಂತೆ ಸುಳ್ಳು ಮಾಹಿತಿಗಳು ಜನರಿಂದ ಜನರಿಗೆ ಹರಡುತ್ತಲೇ ಇದೆ. 

ಜನರಿಗೆ ನಿಫಾ ವೈರಸ್‌ ಕುರಿತು ಇರುವ ಗೊಂದಲಗಳು, ಅದರ ಅಪಾಯಗಳು ಮತ್ತು ಇನ್ನಿತರ ವಿಚಾರಗಳನ್ನು ಅರಿಯುವ ಸಲುವಾಗಿ ವಾರ್ತಾಭಾರತಿಯು ಕೆಎಂಸಿ ಆಸ್ಪತ್ರೆಯ ಔಷಧ ವಿಭಾಗದ ಹಿರಿಯ ವೈದ್ಯರಾಗಿರುವ ಡಾ. ಹಾರೂನ್‌ ಹುಸೈನ್‌ (ಎಂ.ಡಿ, ಎಂಬಿಬಿಎಸ್)‌ ರನ್ನು ಸಂದರ್ಶಿಸಿ ಮಾತುಕತೆ ನಡೆಸಿದ್ದು, ಈ ಕೆಳಗಿನಂತಿದೆ.

ಪ್ರಶ್ನೆ: ನಿಫಾ ವೈರಸ್‌ ಕುರಿತಾದಂತೆ ಜನರು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ಮೂಲಭೂತ ಅಂಶಗಳು ಯಾವುವು?

ಉತ್ತರ: ನಿಫಾ ವೈರಸ್‌ ಅನ್ನು 1999ರಲ್ಲಿ ಮಲೇಶಿಯಾ ಮತ್ತು ಸಿಂಗಾಪುರ್‌ ನಲ್ಲಿ ಹಂದಿಗಳು ಮತ್ತು ಮನುಷ್ಯರಲ್ಲಿ ಪತ್ತೆ ಹಚ್ಚಲಾಯಿತು. ನಿಫಾ ವೈರಸ್‌ ಮುಖ್ಯವಾಗಿ ಪ್ರಾಣಿಗಳಲ್ಲಿ ಮತ್ತು ಬಾವಲಿಗಳಲ್ಲಿ ಕಂಡು ಬರುತ್ತದೆ. ಇನ್ನೂ ವರ್ಗೀಕರಿಸಿ ಹೇಳಬೇಕಾದರೆ, ಫ್ರುಟ್ಸ್‌ ಬ್ಯಾಟ್‌ (ಹಣ್ಣಿನ ಬಾವಲಿಗಳು) ಎಂದು ನಾವು ಕರೆಯುತ್ತೇವೆ. ಹೆಸರೇ ಸೂಚಿಸುವಂತೆ ಈ ಬಾವಲಿಗಳು ಹಣ್ಣನ್ನು ಅವಲಂಬಿಸಿರುತ್ತವೆ. ಇವುಗಳು ಹಣ್ಣಿನ ಒಂದು ಭಾಗವನ್ನು ತಿಂದು ಉಳಿದ ಭಾಗವನ್ನು ಹಾಗೆಯೇ ಬಿಟ್ಟಿರುತ್ತದೆ. ಇದರ ಉಳಿದ ತಿಂದವರಿಗೆ ಈ ವೈರಸ್‌ ಹರಡುತ್ತದೆ. ಈ ವೈರಸ್‌ ಕೂಡಾ ಕೋವಿಡ್‌ ನಂತೆಯೇ ಹರಡುತ್ತದೆ. ಹಂದಿಗಳು ಈ ವೈರಸ್‌ ನ ಮುಖ್ಯ ಸಂಪರ್ಕ ಸೇತುವೆಯಾಗಿದ್ದು, ಹಂದಿಗಳಿಂದ ಮನುಷ್ಯರಿಗೆ ರೋಗ ಹರಡುತ್ತದೆ.

ರೋಗಪೀಡಿತ ಪ್ರಾಣಿಗಳು ಹಂದಿಗಳೊಂದಿಗೆ ನಾವು ಸಂಪರ್ಕವಿರಿಸದೇ ಇದ್ದಲ್ಲಿ ಈ ವೈರಸ್‌ ಅನ್ನು ತಡೆಯಬಹುದಾಗಿದೆ. ಹಾಗೆಯೇ ಮರಗಳ ಕೊಂಬೆಗಳಿಂದ ಸಂಗ್ರಹಿಸಿಕೊಳ್ಳುವ ಶೇಂದಿಯನ್ನೂ ಸಂಸ್ಕರಿಸದೇ ಕುಡಿಯುವುದು ಉತ್ತಮವಲ್ಲ. ಸೋಂಕಿಗೊಳಗಾಗಿರುವ ಹಣ್ಣಿನ ಬಾವಲಿಗಳು ಸೋಂಕನ್ನು ಹಂದಿಯ ಮೂಲಕ ಮನುಷ್ಯರಿಗೆ ತಲುಪಿಸುತ್ತದೆ. ಸೋಂಕಿರುವ ಪ್ರಾಣಿಯೊಂದಿಗೆ ಸಮೀಪವಾಗಿದ್ದು, ಅದರ ದೇಹದ್ರವಗಳ ಮೂಲಕ (ಮೂತ್ರ, ಲಾಲಾರಸ) ಮನುಷ್ಯರಿಗೆ ಹರಡುತ್ತದೆ. ಇದು ಮನುಷ್ಯರಿಗೆ ಹರಡಲು ಪ್ರಾರಂಭವಾದರೆ ಬಳಿಕ ಸಾಂಕ್ರಾಮಿಕವಾಗಿ ಮಾರ್ಪಡುತ್ತದೆ.

ಪ್ರಶ್ನೆ: ಜನರು ಈ ವೈರಸ್‌ ನ ಕುರಿತಾದಂತೆ ಭಯಪಡುವ ಅವಶ್ಯಕತೆ ಇದೆ ಎಂದು ನೀವು ಭಾವಿಸುತ್ತೀರಾ?

ಉತ್ತರ: ಇದರ ಬಗ್ಗೆ ಭಯಪಡಬೇಕಾದ ಅಗತ್ಯವಿಲ್ಲ. ನಾವೀಗ ʼಗ್ಲೋಬಲ್‌ ವಿಲೇಜ್‌ʼ ನಲ್ಲಿ ಜೀವಿಸುತ್ತಿದ್ದೇವೆ. ಆದ್ದರಿಂದ ಹರಡುವ ಅಪಾಯಗಳು ಹೆಚ್ಚಾಗಿವೆ. ಜನರು ಪದೇ ಪದೇ ಪ್ರಯಾಣಿಸುತ್ತಲೇ ಇರುತ್ತಾರೆ. ಇಂದು ಭಾರದಲ್ಲಿರುವ ವ್ಯಕ್ತಿ ನಾಳೆ ಭೂಮಿಯ ಇನ್ನೊಂದು ಭಾಗದಲ್ಲಿರುತ್ತಾನೆ. ಆದ್ದರಿಂದ ಅದು ಹರಡುತ್ತದೆ. ಉತ್ತಮ ಸಲಹೆಯೇನೆಂದರೆ ನಮ್ಮ ಪ್ರಯಾಣದ ಯೋಜನೆಗಳನ್ನು ಮುಂದೂಡುವುದು ಮತ್ತು ಮುಖ್ಯವಾಗಿ ಸಾಹಸಗಳನ್ನು ಕೈಬಿಟ್ಟು ಯುವಕರು ಈ ಕುರಿತು ಕಾಳಜಿ ವಹಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಸಡ್ಡೆ ಮನೋಭಾವ ಹೊಂದಿರಬಾರದು.

ಪ್ರಶ್ನೆ: ಮುಂದೆ ಇದು ಕೋವಿಡ್‌ ನಂತೆಯೇ ಒಂದು ಸಾಂಕ್ರಾಮಿಕವಾಗಿ ಮಾರ್ಪಡಬಹುದೇ? ಹೌದು ಎಂದಾದರೆ ನಾವು ಇದನ್ನೂ ಒಳಗೊಂಡು ಜೀವಿಸುವುದು ಎಷ್ಟು ಕಷ್ಟ?

ಉತ್ತರ: ಬಹುಶಃ ಇಲ್ಲ. ಇದುವರೆಗೆ ಸರಕಾರ ಈ ಬಗ್ಗೆ ಉತ್ತಮ ಕಾಳಜಿ ವಹಿಸಿ ಜಾಗರೂಕತೆ ತೋರುತ್ತಿದೆ. ಉತ್ತಮ ಟ್ರ್ಯಾಕಿಂಗ್‌ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಜನರ ಸುರಕ್ಷತೆಯನ್ನು ಖಚಿತಪಡಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಆದರೆ ಇದು ಎರಡೂ ಕಡೆಯ ಪ್ರಯತ್ನವಾಗಬೇಕು. ನಾವು ಪರಿಸ್ಥಿತಿಯನ್ನು ನಿಯಂತ್ರಿಸಬೇಕಾದರೆ ಅದರಲ್ಲಿ ಜನರ ಪಾತ್ರ ಮಹತ್ತರವಾಗಿದೆ. ಏಕಪಕ್ಷೀಯ ಪ್ರಯತ್ನಗಳು ನಾವು ಬಯಸಿದ ಫಲಿತಾಂಶ ನೀಡುವುದಿಲ್ಲ. ಜನರು ತಮ್ಮ ಅನಗತ್ಯ ಪ್ರಯಾಣ ಯೋಜನೆಗಳನ್ನು ಕೈಬಿಡಬೇಕು ಮತ್ತು ಅಧಿಕಾರಿಗಳು ಸೂಚಿಸಿದ ಎಲ್ಲ ನಿಯಮಗಳನ್ನು ಪಾಲಿಸಬೇಕು.

ಪ್ರಶ್ನೆ: ಒಂದೇ ಸಂದರ್ಭದಲ್ಲಿ ಜನರು ಕೋವಿಡ್‌ ಹಾಗೂ ನಿಫಾ ಕುರಿತಾದಂತೆ ಹೇಗೆ ಜಾಗರೂಕರಾಗಿರಬೇಕು?

ಉತ್ತರ: ಇತಿಹಾಸದಲ್ಲಿ, ನಿಫಾ ವೈರಸ್‌ ಭುಗಿಲೆದ್ದಾಗ ಸಾವಿನ ಪ್ರಮಾಣವು ತುಂಬಾ ಹೆಚ್ಚಾಗಿದೆ. 100 ಜನರು ಸೋಂಕಿಗೊಳಗಾದರೆ ಅದರಲ್ಲಿ 70 ಜನರು ಸಾವಿಗೀಡಾಗುತ್ತಾರೆ. ಕೋವಿಡ್‌ ನಲ್ಲಿ ಇದರ ಪ್ರಮಾಣ ತುಂಬಾ ಕಡಿಮೆ. ಈಗಾಗಲೇ ಇದಕ್ಕೆ ಲಸಿಕೆಗಳನ್ನೂ ಕಂಡುಹಿಡಿಯಲಾಗಿದೆ. ಆದರೆ ನಿಫಾ ವೈರಸ್‌ ಗೆ ಜಗತ್ತಿನ ಎಲ್ಲೂ ಲಸಿಕೆ ಕಂಡುಹಿಡಿಯಲಾಗಿಲ್ಲ.

ಪ್ರಶ್ನೆ: ಜನರಲ್ಲಿ ನಿಫಾ ವೈರಸ್‌ ಲಕ್ಷಣಗಳು ಕಂಡು ಬಂದರೆ ಅಥವಾ ಸೋಂಕಿತರಾದರೆ ಅವರು ಮಾಡಬೇಕಾಗಿರುವುದು ಏನು?

ಉತ್ತರ: ಸೋಂಕನ್ನು ಖಚಿತಪಡಿಸಲು ದೇಶದಲ್ಲಿ ಎರಡು ಅಥವಾ ಮೂರು ಕೇಂದ್ರಗಳು ಮಾತ್ರ ಇವೆ. ಒಂದು ವೇಳೆ ಇದು ದೃಢಪಟ್ಟರೆ ಆ ವ್ಯಕ್ತಿಯ ಪ್ರಯಾಣದ ಇತಿಹಾಸವನ್ನು ಪರಿಶೀಲಿಸುವುದು ಅತಿಮುಖ್ಯವಾಗಿದೆ. ಕೋವಿಡ್‌ ಪ್ರಕರಣಗಳಂತೆಯೇ ವ್ಯಕ್ತಿಯ ಸಂಪರ್ಕಕ್ಕೆ ಬಂದವರನ್ನು ಐಸೋಲೇಶನ್‌ ನಲ್ಲಿ ಇರಿಸಬೇಕು ಹಾಗೂ ವೈದ್ಯಕೀಯ ನಿಗಾದಲ್ಲಿರಿಸಬೇಕು. "ಮುನ್ನೆಚ್ಚರಿಕೆಯು ಗುಣಮುಖವಾಗುವುದಕ್ಕಿಂತ ಉತ್ತಮ" ಎಂಬ ಹೇಳಿಕೆಯಂತೆ, ಯಾವಾಗ ಒಂದು ಸಾಂಕ್ರಾಮಿಕ ಸ್ಫೋಟಗೊಳ್ಳುತ್ತದೆಯೋ ಆಗ ನಾವು ನಮಗಿರುವ ಕೆಲ ಸಾಮಾನ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೋವಿಡ್‌ ನಂತೆಯೇ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಶುಚಿತ್ವ ಇತ್ಯಾದಿ.

ಹೆಚ್ಚು ಮುಖ್ಯವಾದದ್ದು ಏನೆಂದರೆ ರೋಗ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗೂ ಈ ಕುರಿತು ಹೇಳಿಕೊಳ್ಳಲು ಹೆದರಬಾರದು. ರೋಗ ಲಕ್ಷಣಗಳನ್ನು ನಿರ್ಲ್ಯಕ್ಷಿಸುವ ಮೂಲಕ ಅವರು ತಪ್ಪು ಮಾಡುತ್ತಿದ್ದಾರೆ ಎಂಬುವುದನ್ನು ಅರಿತಿರಬೇಕು. ಅವರದನ್ನು ನಿರ್ಲ್ಯಕ್ಷಿಸಿದರೆ ಸಂಪೂರ್ಣ ಸಮುದಾಯವೇ ಅಪಾಯ ಎದುರಿಸಬೇಕಾಗುತ್ತದೆ. ಆದ್ದರಿಂದ ಅವರು ಜವಾಬ್ದಾರಿಯುತವಾಗಿ ವರ್ತಿಸಿ ಸಂಬಂಧಪಟ್ಟವರೊಂದಿಗೆ ಮಾಹಿತಿ ನೀಡಬೇಕು.

ಪ್ರಶ್ನೆ: ಸಾಮಾಜಿಕ ಮಾಧ್ಯಮಗಳಲ್ಲಿ ನಿಫಾ ವೈರಸ್‌ ಕುರಿತು ಹರಡುತ್ತಿರುವ ಎಲ್ಲಾ ವರದಿಗಳು ಸತ್ಯವೇ?

ಉತ್ತರ: ಇಲ್ಲ. ಜನರು ಸಾಮಾಜಿಕ ಮಾದ್ಯಮವನ್ನು ಮಾಹಿತಿ ಮಾಧ್ಯಮವನ್ನಾಗಿ ಬಳಸುವುದು ನಿಲ್ಲಿಸಬೇಕು. ಮಾಧ್ಯಮ ಸಂಸ್ಥೆಗಳು ಮತ್ತು ಸರ್ಕಾರಿ ವೆಬ್‌ಸೈಟ್‌ಗಳು ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುತ್ತಿವೆ ಮತ್ತು ಜನರು ಯಾವುದೇ ಮಾಹಿತಿಗಾಗಿ ಅವುಗಳನ್ನೇ ಅನುಸರಿಸಬೇಕು. ಸಾಮಾಜಿಕ ಮಾಧ್ಯಮಗಳಿಂದ ಮಾಹಿತಿ ಪಡೆದುಕೊಳ್ಳುವ ಬದಲು ವೈದ್ಯರನ್ನು ಭೇಟಿಯಾಗಬೇಕು. ನಿಫಾ ವೈರಸ್‌ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಆದರೆ ಸೋಂಕಿತನನ್ನು ಚುಚ್ಚಿದ ಸೊಳ್ಳೆ ಬಳಿಕ ಇನ್ನೋರ್ವ ವ್ಯಕ್ತಿಗೆ ಚುಚ್ಚಿದರೆ ನಿಫಾ ಹರಡುತ್ತದೆ ಎಂದು ಸಾಮಾಜಿಕ ತಾಣಗಳಲ್ಲಿ ವರದಿಯಾಗಿದೆ. ಈ ವರದಿ ಆಧಾರರಹಿತ ಮತ್ತು ಸುಳ್ಳು. ಇದು ಜನರಲ್ಲಿ ಭಯ ಹರಡುತ್ತದೆ. ಅದನ್ನು ನಿಲ್ಲಿಸಬೇಕು.ಸಮರ್ಪಕ ಮಾಧ್ಯಮಗಳನ್ನು ಮತ್ತು ಸರಕಾರಿ ಮಾಹಿತಿಗಳನ್ನು ಮಾತ್ರ ಅನುಸರಿಸಬೇಕು.

ಡಾ. ಹಾರೂನ್‌ ಹುಸೈನ್‌ ರವರು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಹಿರಿಯ ವೈದ್ಯರಾಗಿದ್ದಾರೆ. ಅವರು ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ನಿರ್ವಹಣೆ, ಜ್ವರ, ಸೋಂಕು, ವಯಸ್ಕರಲ್ಲಿ ರೋಗನಿರೋಧಕತೆ, ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಆರೋಗ್ಯ ಸಲಹೆ, ಎದೆ ನೋವು, ಮತ್ತು ಮುನ್ನೆಚ್ಚರಿಕಾ ಹೃದ್ರೋಗ ವಿಭಾಗಗಳಲ್ಲಿ ಪರಿಣತಿ ಹೊಂದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)