varthabharthi


ಓ ಮೆಣಸೇ

ಓ ಮೆಣಸೇ...

ವಾರ್ತಾ ಭಾರತಿ : 13 Sep, 2021
ಪಿ.ಎ.ರೈ

\ಭಾರತೀಯ ಸಂಗೀತ ಪರಿಕರಗಳಾದ ತಬಲಾ, ತಾಳವಾದ್ಯ, ಪಿಟೀಲು, ತುತ್ತೂರಿ, ಕೊಳಲುಗಳ ಉಲಿಯನ್ನು ವಾಹನಗಳಿಗೆ ಹಾರನ್ ಆಗಿ ಅಳವಡಿಸಲು ನಿಯಮ ರೂಪಿಸಲಾಗುವುದು. -ನಿತಿನ್ ಗಡ್ಕರಿ, ಕೇಂದ್ರ ಸಚಿವ
ಇದು ಕೇವಲ ಮೊದಲ ಹೆಜ್ಜೆ ಮಾತ್ರ. ಮುಂದಿನ ದಿನಗಳಲ್ಲಿ ಈ ಎಲ್ಲ ವಿದೇಶಿ ತಂತ್ರಜ್ಞಾನ ಆಧಾರಿತ ವಾಹನಗಳನ್ನೇ ಸಂಪೂರ್ಣ ನಿಷೇಧಿಸಿ, ರಥ ಮತ್ತು ಕತ್ತೆ, ಕುದುರೆಗಳ ಮೇಲಿನ ಸವಾರಿಯನ್ನು ಮಾತ್ರ ಸಮ್ಮತಿಸಲಾಗುವುದು.


ಐಎಎಸ್ ಅಧಿಕಾರಿಗಳು ತಾವು ಮಾತ್ರ ಪ್ರಾಮಾಣಿಕರು, ಬೇರೆಯವರೆಲ್ಲ ಅಪ್ರಾಮಾಣಿಕರು ಎಂಬ ಮನೋಭಾವದಿಂದ ಹೊರಬರಬೇಕು -ಎಸ್.ಟಿ.ಸೋಮಶೇಖರ್, ಸಚಿವ

ಹಾಗೆಲ್ಲಾ ಹೇಳಿಕೊಳ್ಳುವ ಅಧಿಕಾರ ಇರುವುದು ಪರಮ ಭ್ರಷ್ಟ ಪುಡಾರಿಗಳಿಗೆ ಮಾತ್ರ ಎಂಬುದನ್ನು ಪ್ರಸ್ತುತ ಅಧಿಕಾರಿಗಳು ಒಪ್ಪಿಕೊಳ್ಳಬೇಕು.


ವಿದೇಶಿ ಸಂಸ್ಕೃತಿಯಲ್ಲೇ ಬೆಳೆದು ಬಂದಿರುವ ಕಾಂಗ್ರೆಸ್‌ಗೆ ಸ್ವದೇಶಿ ಚಿಂತನೆಯೇ ಇಲ್ಲ - ನಳಿನ್‌ಕುಮಾರ್ ಕಟೀಲು, ಸಂಸದ
ತಮ್ಮ ಈಸ್ಟ್ ಇಂಡಿಯಾ ಕಂಪೆನಿ ವಿಚಾರಧಾರೆ ಶುದ್ಧ ಸ್ವದೇಶಿ ಎಂದು ಭಾರತೀಯರನ್ನೆಲ್ಲ ನಂಬಿಸುವಲ್ಲಿ ಬಿಜೆಪಿಯವರು ಸಾಧಿಸಿರುವ ಯಶಸ್ಸಿನ ಒಂದಂಶವನ್ನು ಕೂಡ ಸಾಧಿಸಲು ತಮ್ಮಿಂದ ಸಾಧ್ಯವಿಲ್ಲ ಎಂಬುದನ್ನು ಕಾಂಗ್ರೆಸಿಗರು ಸಾವಿರ ಬಾರಿ ಸಾಬೀತು ಪಡಿಸಿದ್ದಾರೆ.


ಸಿಎಂ ನಮ್ಮವರೇ ಆಗಿದ್ದು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಿಕೊಡಲಿದ್ದಾರೆ ಎಂಬ ವಿಶ್ವಾಸವಿದೆ - ವಿನಯ್ ಕುಲಕರ್ಣಿ, ಮಾಜಿ ಸಚಿವ
ನಮ್ಮವರೇ ಅಂತ ನಂಬಿ ಒಬ್ಬರನ್ನು ಪ್ರಧಾನಿಯಾಗಿಸಿ ಪಟ್ಟ ಪಾಡು ಸಾಲದೇ? ಈ ಬಗೆಯ ಹೊಸ ಖಯಾಲಿಗಳನ್ನು ಪೋಷಿಸಲು ಹೊರಟಿರುವಿರಲ್ಲಾ!


ಭಾರತ ನಾನಾ ಕಡೆಗಳಿಂದ ಸತ್ವ ಪರೀಕ್ಷೆಯನ್ನು ಎದುರಿಸುತ್ತಿದ್ದರೂ ಸಮರ್ಥ ಪ್ರಧಾನಿಯನ್ನು ಹೊಂದಿದ್ದೇವೆ ಎಂಬ ತೃಪ್ತಿ ಇದೆ - ಅನಂತ ನಾಗ್, ನಟ
ಹತ್ತಾರು ಕೋಟಿ ಜನಸಂಖ್ಯೆಯನ್ನು ಹಸಿವಿನ ಗುಹೆಗೆ ತಳ್ಳಿ ಅವರೆಂದೂ ಅಲ್ಲಿಂದ ಹೊರಬರದಂತೆ ನೋಡಿಕೊಳ್ಳುವುದಕ್ಕೆ ನಿಜಕ್ಕೂ ಭಾರೀ ಸಮರ್ಥ ಪ್ರಧಾನಿಯೇ ಬೇಕು.


ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಮ್ಮ ದೇಶದ ಕ್ರೀಡಾಪಟುಗಳ ಸಾಧನೆ ಜಗತ್ತ್ತೇ ನಮ್ಮತ್ತ ನೋಡುವಂತೆ ಮಾಡಿದೆ - ಸುನೀಲ್ ಕುಮಾರ್, ಸಚಿವ
ಅವರೆಲ್ಲ ನಮ್ಮತ್ತ ನೋಡಿ ಪ್ರತಿಭೆಗಳನ್ನು ಧ್ವಂಸ ಮಾಡುವ ಅಸಾಮಾನ್ಯ ಪುಡಾರಿಗಳ ದೇಶಕ್ಕೆ ಏಳು ಪದಕಗಳು ಸಿಕ್ಕಿದ್ದು ಹೇಗೆ ಎಂಬುದು ಅವರ ಕುತೂಹಲ.


ನನಗೆ ವಯಸ್ಸಾಯಿತು ಎಂದು ಸೋಮಾರಿತನ ದಿಂದ ಸುಮ್ಮನೆ ಕೂರುವ ವ್ಯಕ್ತಿ ನಾನಲ್ಲ - ದೇವೇಗೌಡ, ಮಾಜಿ ಪ್ರಧಾನಿ
ನಿಮ್ಮಂಥವರು ಸುಮ್ಮನೆ ಕೂರುವುದನ್ನು ಕಾಣಲು ಸಮಾಜಕ್ಕೆ ಒಂದಷ್ಟು ಭಾಗ್ಯ ಬೇಡವೇ?


ಶಿಕ್ಷಕರು ವೃತ್ತಿ ಶ್ರದ್ಧೆಯಿಂದ ಕಲಿಸಿದರೆ ಮಾತ್ರ ಮಕ್ಕಳ ಏಳಿಗೆ ಸಾಧ್ಯ - ಎಸ್.ಅಂಗಾರ, ಸಚಿವ
ಅದಲ್ಲವಾದರೆ ಮಕ್ಕಳು ಸಚಿವರಾಗಬಹುದೇ ಹೊರತು ಮಾನವರಾಗುವ ಸಾಧ್ಯತೆ ಕಡಿಮೆ.


ಸಿಎಂ ಬೊಮ್ಮಾಯಿ ನಾಯಕತ್ವದಲ್ಲೇ ಮುಂದಿನ ವಿಧಾನ ಸಭೆ ಚುನಾವಣೆ ಎದುರಿಸಲಾಗುವುದು ಎಂಬ ಅಮಿತ್ ಶಾ ಹೇಳಿಕೆಗೆ ನನ್ನ ಆಕ್ಷೇಪ ಇಲ್ಲ - ಈಶ್ವರಪ್ಪ, ಸಚಿವ
ಪಕ್ಷದಲ್ಲಿ ನಿಮ್ಮ ಮಾತಿಗೆ ಎಷ್ಟು ಗೌರವ ಇದೆಯೆಂದರೆ, ನೀವು ಆಕ್ಷೇಪಿಸುತ್ತೀರೆಂದು ಗೊತ್ತಾದರೆ, ಮುಂದಿನ ಲೋಕ ಸಭಾ ಚುನಾವಣೆಯನ್ನೂ ಬೊಮ್ಮಾಯಿಯವರ ನೇತೃತ್ವದಲ್ಲಿ ನಡೆಸುತ್ತಾರಂತೆ.


ಮರಳು ಮಾಫಿಯಾ ಜೊತೆ ಪೊಲೀಸರು ಕೈಜೋಡಿಸಬಾರದು- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಯಾವೆಲ್ಲಾ ಬಗೆಯ ಮಾಫಿಯಾ ಜೊತೆ ಕೈಜೋಡಿಸಬೇಕೆಂಬ ಒಂದು ಸವಿಸ್ತಾರ ಪಟ್ಟಿಯನ್ನು ಸರಕಾರವೇ ಕೊಟ್ಟಿರುವಾಗ, ಅಧಿಕಾರಿಗಳಿಗೇಕೆ ಅಧಿಕ ಪ್ರಸಂಗ?


ಹೋರಾಟ ಮಾಡಿ ಜೈಲಿಗೆ ಹೋಗಿದ್ದೇನೆಯೇ ಹೊರತು ಭ್ರಷ್ಟಾಚಾರ, ಗೂಂಡಾಗಿರಿ ಮಾಡಿ ನಾನೆಂದೂ ಜೈಲಿಗೆ ಹೋಗಿಲ್ಲ - ಸಿ.ಟಿ.ರವಿ, ಶಾಸಕ
ನೀವು ಜೈಲು ಶಿಕ್ಷೆ ತಪ್ಪಿಸಿಕೊಂಡ ಆ ಇತರ ಗಂಭೀರ ಅಪರಾಧಗಳಲ್ಲೂ ನಿಮಗೆ ಶಿಕ್ಷೆ ಆಗುವ ದಿನ ಶೀಘ್ರವೇ ಬರಲಿದೆ ಎಂಬ ಆಶಾವಾದ ಸಮಾಜದಲ್ಲಿ ಈಗಲೂ ಜೀವಂತವಿದೆ.


ನಾನು ಲಾಸ್ಟ್ ಬೆಂಚ್ ಸ್ಟೂಡೆಂಟ್, ನೀನು ರಾಜಕಾರಣಿ ಆಗೋದು ಖಂಡಿತ ಎಂದು ನಮ್ಮ ಮೇಷ್ಟ್ರು ಹೇಳುತ್ತಿದ್ದರು -ಎಸ್.ಟಿ.ಸೋಮಶೇಖರ್, ಸಚಿವ
ಅವರು ಹಾಗೆ ಹೇಳಿದ್ದು ಸಮಾಜಕ್ಕೆ ಆಗಲೇ ತಿಳಿದಿದ್ದರೆ ಸಮಾಜವು ತನ್ನ ಆತ್ಮ ರಕ್ಷಣೆಗೆ ಏನಾದರೂ ಸಿದ್ಧತೆ ನಡೆಸುತ್ತಿತ್ತು.


ಬಿಜೆಪಿಯವರು ಕೇವಲ ಹಿಂದೂಗಳು ಮುಂದು ಎಂದರೆ, ಕಾಂಗ್ರೆಸ್‌ನವರು ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತರು ಎಲ್ಲರೂ ಒಂದು ಎನ್ನುತ್ತಾರೆ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಚುನಾವಣೆ ಗೆದ್ದ ಬಳಿಕ ಕಾಂಗ್ರೆಸ್ ಕೂಡ ಒಕ್ಕಲಿಗ, ಲಿಂಗಾಯತ ಎಂದು ಮಾತನಾಡಲು ಶುರು ಮಾಡುತ್ತೆ.


ಬುರ್ಖಾ ಸಂಸ್ಕೃತಿಯನ್ನು ಬೆಂಬಲಿಸುವವರು ತಾಲಿಬಾನಿಗಳು - ಸೊಗಡು ಶಿವಣ್ಣ, ಮಾಜಿ ಸಚಿವ
ಡಬ್ಬಲ್ ಬುರ್ಖಾ ಹಾಕಿಕೊಂಡು ಬನ್ನಿ, ಅರ್ಧಗಂಟೆಯ ಮಟ್ಟಿಗೆ ಸಚಿವ ಸ್ಥಾನ ಕೊಡುತ್ತೇವೆಂದು ಸರಕಾರ ಘೋಷಿಸಿದರೆ ಬೇಡ ಎನ್ನುವ ಒಬ್ಬರಾದರೂ ನಿಮ್ಮಲ್ಲಿದ್ದಾರೆಯೇ?


 ಮುಳುಗುವ ಹಡಗು ತೇಲಿಸುವುದು ಹೇಗೆಂದು ಮಾಜಿ ಪ್ರಧಾನಿ ದೇವೇಗೌಡರಿಗೆ ಗೊತ್ತಿದೆ - ಎಚ್.ಡಿ. ರೇವಣ್ಣ, ಶಾಸಕ
ತೇಲುತ್ತಿದ್ದ ಹಡಗನ್ನು ಮುಳುಗಿಸಿದ ಖ್ಯಾತಿ ಕೂಡ ಅವರಿಗಿದೆ.


ನಾವು ಈಗ ಪರಿವರ್ತನೆಯ ಕಾಲಘಟ್ಟದಲ್ಲಿದ್ದೇವೆ - ನರೇಂದ್ರ ಮೋದಿ, ಪ್ರಧಾನಿ
ಈಗಾಗಲೇ ನರಕದಲ್ಲಿರುವವರನ್ನೇನು ಪರಮ ನರಕಕ್ಕೆ ತಳ್ಳುವ ಇರಾದೆಯೇ?


 ಭಾರತದ ಹಿಂದೂ, ಮುಸ್ಲಿಮರ ಪೂರ್ವಜರು ಒಂದೇ - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಬ್ರಾಹ್ಮಣರದ್ದಷ್ಟೇ ಬೇರೆ ಅಂತೀರಾ?


75 ವರ್ಷಗಳ ನಂತರ ದೇಶದಲ್ಲಿ ಜಾರಿಗೆ ಬಂದಿರುವ ಕ್ರಾಂತಿಕಾರಿ ಸುಧಾರಣೆ ಎಂದರೆ ನೂತನ ಶಿಕ್ಷಣ ನೀತಿ ಮಾತ್ರ- ಅಶ್ವತ್ಥ ನಾರಾಯಣ, ಸಚಿವ
ನೂತನ ಶಿಕ್ಷಣ ನೀತಿಯನ್ನಾದರೂ ಅನುಷ್ಠಾನ ಗೊಳಿಸಲು ಶಾಲೆಗಳನ್ನು ಮೊದಲು ಆರಂಭಿಸ ಬೇಡವೇ?


ಕಾಶ್ಮೀರ ಜನರ ಹಕ್ಕುಗಳ ಬಗ್ಗೆ ಗಮನ ಹರಿಸದ ಮೋದಿ ಸರಕಾರ ಅಫ್ಘಾನಿಸ್ತಾನದ ಜನರ ಹಕ್ಕಿನ ಬಗ್ಗೆ ಕನಿಕರ ತೋರುತ್ತಿರುವುದು ಹಾಸ್ಯಾಸ್ಪದ - ಮೆಹಬೂಬ ಮುಫ್ತಿ, ಪಿಡಿಪಿ ನಾಯಕಿ
ಅವರು ಗಮನ ಹರಿಸಿದರೆಂದ ಮೇಲೆ ಅಫ್ಘಾನಿಸ್ತಾನದಲ್ಲಿ ತೈಲ, ಅನಿಲಗಳ ಬೆಲೆ ಎಲ್ಲಿಗೆ ತಲುಪೀತು?


ಅಫ್ಘಾನಿಸ್ತಾನದಲ್ಲಿ ಈಗಿನ ಬದಲಾವಣೆ ಭಾರತಕ್ಕೆ ಒಳ್ಳೆಯದಲ್ಲ- ಅಸದುದ್ದೀನ ಉವೈಸಿ, ಎಂಐಎಂ ಪಕ್ಷದ ಮುಖ್ಯಸ್ಥ
ಅಂದರೆ ಭಾರತದಲ್ಲಿ ಈಗ ಒಳ್ಳೆಯದೇ ನಡೆಯುತ್ತಿದೆಯೇ?


ಹಡಗು ಮುಳುಗಿದಾಗ ಸಬ್ ಮರೀನ್ ಕೆಲಸ ಮಾಡುತ್ತದೆ- ಎಚ್.ಡಿ. ರೇವಣ್ಣ, ಶಾಸಕ
ನಿಮ್ಮ ಸಬ್‌ಮರೀನ್ ಸಕ್ರಿಯವಾಗಲು ಹಡಗು ಮುಳುಗಿಸುವುದು ಬಿಟ್ಟು ಬೇರಾವ ದಾರಿಯೂ ಇಲ್ಲವೇ?


ಬಿಎಸ್ಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ರಕ್ಷಣೆಗೆ ಹೆಚ್ಚು ಮುತುವರ್ಜಿ ವಹಿಸಲಾಗುವುದು - ಮಾಯಾವತಿ, ಬಿಎಸ್ಪಿ ವರಿಷ್ಠೆ
ದಲಿತರಿಗೆ ತಮ್ಮವರ ಸಂರಕ್ಷಣೆ ಬೇಕಿದ್ದರೆ ಅವರು ಬ್ರಾಹ್ಮಣರ ಸರಕಾರವನ್ನು ರಚಿಸಿಕೊಳ್ಳಲಿ, ಅಲ್ಲವೇ ಮೇಡಂ?


ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಇಬ್ಬರೂ ಸಮಬಲದ ಆರು ಹಲ್ಲಿನ ಹೋರಿಗಳು- ಎಂ. ಚಂದ್ರಪ್ಪ, ಶಾಸಕ
ಆರೆಸ್ಸೆಸ್ ಮನೆಯಲ್ಲಿ ಬೀಜ ಒಡೆಸಿಕೊಂಡ ಹೋರಿಗಳು ಎಂಬ ವದಂತಿಗಳಿವೆ.


ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಸಂಸತ್‌ನ ಒಳಗೆ ಮತ್ತು ಹೊರಗೆ ಎಷ್ಟು ಹೋರಾಟ ಮಾಡಿದರೂ ಬಿಜೆಪಿಗೆ ಸಮಸ್ಯೆ ಯಾಕೆ ಅರ್ಥವಾಗುತ್ತಿಲ್ಲವೋ ಗೊತ್ತಿಲ್ಲ- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
ಎಲ್ಲ ಸಮಸ್ಯೆಗಳಿಗೂ ನೀವೇ ಕಾರಣ ಎಂದು ಈಗಾಗಲೇ ಅವರು ಜನರಿಗೆಲ್ಲಾ ಮನವರಿಕೆ ಮಾಡಿಸಿದ್ದಾರಲ್ಲಾ!


ಸಂತುಷ್ಟ ರೈತರಿಂದ ಮಾತ್ರ ಸಮೃದ್ಧ ಭಾರತ ನಿರ್ಮಾಣ ಸಾಧ್ಯ- ಬಿ.ಸಿ.ಪಾಟೀಲ್, ಸಚಿವ
ಪೊಲೀಸರ ಕೈಯಲ್ಲಿ ತಲೆ ಒಡೆಸಿಕೊಂಡವರೇ ಸಂತುಷ್ಟ ರೈತರೆಂಬ ನಿಮ್ಮ ಪಕ್ಷದ ನಂಬಿಕೆಯನ್ನೂ ತಿಳಿಸಿಬಿಡಿ.


ರಾಜ್ಯದಲ್ಲಿ ಬಿಜೆಪಿ ಸರಕಾರ ಯಾವತ್ತೂ ಮುಂಬಾಗಿಲ ಮೂಲಕ ಅಧಿಕಾರ ಹಿಡಿದಿಲ್ಲ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ನಿಮ್ಮ ಹಾಗೆ ಬಾಗಿಲಲ್ಲಿ ಕೂತು ತೂಕಡಿಸುತ್ತಲಿದ್ದರೆ ಅಧಿಕಾರವೆಲ್ಲಿ ಸಿಗುತ್ತದೆ? 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು