varthabharthi


ಪ್ರಚಲಿತ

ದುರ್ಬಲ ಪ್ರತಿಪಕ್ಷ; ಪ್ರಜಾಪ್ರಭುತ್ವದ ದುರಂತ

ವಾರ್ತಾ ಭಾರತಿ : 13 Sep, 2021
ಸನತ್ ಕುಮಾರ್ ಬೆಳಗಲಿ

ಪ್ರಜಾಪ್ರಭುತ್ವ ಉಳಿದರೆ ಬಹುತ್ವ ಭಾರತ ಉಳಿಯುತ್ತದೆ. ಬಹುತ್ವ ಭಾರತ ಉಳಿದರೆ ಸಾಮಾಜಿಕ ನ್ಯಾಯದ ಕನಸು ಸಾಕಾರಗೊಳ್ಳುತ್ತದೆ. ಸದ್ಯ ಭರವಸೆ ಮೂಡಿಸಿರುವ ರೈತ ಆಂದೋಲನ ಜನತಂತ್ರದ ಉಳಿವಿನ ಆಂದೋಲನವಾಗಿ ಹೊಸ ದಾರಿ ತೋರಿಸುವ ಸಾಧ್ಯತೆ ಇದೆ.ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲೂ ಆಡಳಿತ ಪಕ್ಷ ಶೇ.40ಕ್ಕಿಂತ ಜಾಸ್ತಿ ಮತಗಳನ್ನು ಪಡೆಯದಿದ್ದರೂ ಅದರ ಚುನಾಯಿತ ಸದಸ್ಯರ ಸಂಖ್ಯಾಬಲ ಅದಕ್ಕೆ ಅಧಿಕಾರವನ್ನು ನೀಡಿದೆ. ಆದರೆ, ಯಾವ ವಿರೋಧ ಪಕ್ಷಕ್ಕೂ ಲೋಕಸಭೆಯಲ್ಲಿ ಅಧಿಕೃತ ಮಾನ್ಯತೆಗೆ ಬೇಕಾದ ಸ್ಥಾನಗಳು ಲಭಿಸಲೇ ಇಲ್ಲ. 2014ರಿಂದ ಲೋಕಸಭೆಯಲ್ಲಿ ಮಾನ್ಯತೆ ಪಡೆದ ಪ್ರತಿಪಕ್ಷ ನಾಯಕನಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಏಕೈಕ ದೊಡ್ಡ ಪಕ್ಷದ ನಾಯಕನಾಗಿ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅವರನ್ನೇ ಕುತಂತ್ರದಿಂದ ಸೋಲಿಸಲಾಯಿತು. ಅದರ ಕತೆ ಈಗ ಬೇಡ.

ಜಗತ್ತಿನ ಯಾವುದೇ ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಸುರಕ್ಷಿತವಾಗಿ ಇರಬೇಕೆಂದರೆ ಪ್ರತಿಪಕ್ಷ ಪ್ರಬಲವಾಗಿರಬೇಕು. ಅಧಿಕಾರದಲ್ಲಿರುವ ಪಕ್ಷ ಇಲ್ಲವೇ ವ್ಯಕ್ತಿ ತಪ್ಪು ಮಾಡಿದಾಗ, ಅದನ್ನು ಪ್ರಶ್ನಿಸಿ ಸರಿ ದಾರಿಗೆ ತರುವುದು ಪ್ರತಿಪಕ್ಷಗಳಿಂದ ಮಾತ್ರ ಸಾಧ್ಯ. ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಕ್ರಿಯಾಶೀಲತೆಯನ್ನು ಸ್ವಾಗತಿಸುತ್ತಿದ್ದರು.

ಆದರೆ, ಕಳೆದ ಏಳು ವರ್ಷಗಳಿಂದ ಅಂದರೆ 2014ರಿಂದ ಭಾರತದಲ್ಲಿ ಪ್ರತಿಪಕ್ಷಗಳು ಹೆಸರಿಗೆ ಮಾತ್ರ ಇವೆ. ಅವುಗಳ ಪ್ರಾಬಲ್ಯ ಕುಂದಿದೆ. 'ನೋಟು ಅಮಾನ್ಯೀಕರಣ'ದಿಂದ ಹಿಡಿದು ಅನೇಕ ಮಹತ್ವದ ತೀರ್ಮಾನಗಳು ಸಂಸತ್ತಿನ ಹೊರಗೆ ಪ್ರಕಟವಾಗುತ್ತಿವೆ. ಕಾರ್ಮಿಕ ಕಾಯ್ದೆಗೆ ತಂದಿರುವ ತಿದ್ದುಪಡಿ ಸೇರಿದಂತೆ ಹಲವು ವಿಧೇಯಕಗಳು ಸಂಸತ್ತಿನಲ್ಲಿ ಚರ್ಚೆಯಿಲ್ಲದೇ ಅಂಗೀಕಾರಗೊಂಡಿವೆ.

ಇದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಸಂವಿಧಾನದ ಮೂಲಕ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ ಬಾಬಾಸಾಹೇಬರು ಬಯಸಿದ ಪ್ರಜಾಪ್ರಭುತ್ವ ಇದಾಗಿರಲಿಲ್ಲ. ಭಾರತೀಯ ಸಮಾಜದಲ್ಲಿ ಪ್ರಜಾಪ್ರಭುತ್ವ ಬೇರು ಬಿಡದೇ ಕೇವಲ ರಾಜಕೀಯ ಪ್ರಜಾಪ್ರಭುತ್ವ ನಿರರ್ಥಕ ಎಂಬ ಅಂಬೇಡ್ಕರ್ ಅವರ ಮಾತು ಸತ್ಯ ಎಂದು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಾಗಿದೆ.

ಏಕವ್ಯಕ್ತಿಯ, ಏಕಪಕ್ಷದ, ಏಕ ಪರಿವಾರದ ನಿರಂಕುಶ ಆಡಳಿತದಡಿ ಭಾರತೀಯ ಪ್ರಜಾಪ್ರಭುತ್ವ ನಲುಗಿ ಹೋಗುತ್ತಿದೆ. ಇದನ್ನೆಲ್ಲ ದೇಶದ ಜನ ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದಾರೆ. ಭಾರತದಲ್ಲಿ ಇಂತಹ ಪರಿಸ್ಥಿತಿ ಹಿಂದೆಂದೂ ಉಂಟಾಗಿರಲಿಲ್ಲ.

ನೆಹರೂ ಕಾಲದಲ್ಲಿ ಸಮಾಜವಾದಿ ನಾಯಕರಾದ ರಾಮ ಮನೋಹರ್ ಲೋಹಿಯಾ, ಮಧುಲಿಮಯೆ, ಎಸ್.ಎಂ.ಜೋಶಿ ಹಾಗೂ ಕಮ್ಯುನಿಸ್ಟ್ ನಾಯಕ ಎಸ್.ಎ.ಡಾಂಗೆ, ಎ.ಕೆ.ಗೋಪಾಲನ್‌ರಂತಹವರು ಸರಕಾರವನ್ನು ತುದಿಗಾಲಿನ ಮೇಲೆ ನಿಲ್ಲಿಸುತ್ತಿದ್ದರು. ಪ್ರತಿಪಕ್ಷ ನಾಯಕರ ಮಾತುಗಳನ್ನು ಅಂದಿನ ಪ್ರಧಾನಿ ಮತ್ತು ಆಡಳಿತ ಪಕ್ಷದ ಸದಸ್ಯರು ಸಹನೆಯಿಂದ ಆಲಿಸುತ್ತಿದ್ದರು. ಆದರೆ, ಈಗ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇರುವ ಪ್ರತಿಪಕ್ಷ ಸದಸ್ಯರು ಮಾತಾಡಲು ನಿಂತರೆ ಸಾಕು ಆಡಳಿತ ಪಕ್ಷದ ಸದಸ್ಯರು ಕೂಗಾಡಿ ಕೇಕೆ ಹಾಕಿ ಅವರ ಬಾಯಿ ಮುಚ್ಚಿಸುತ್ತಾರೆ. ತಮ್ಮ ಸದಸ್ಯರ ಗಲಾಟೆಯನ್ನು ಪ್ರಧಾನಿ ಮೌನವಾಗಿ ನೋಡುತ್ತಾ ಒಳಗೊಳಗೆ ಖುಷಿ ಪಡುತ್ತಾರೆ. ಆಗ ಸಭಾತ್ಯಾಗ ಪ್ರತಿಪಕ್ಷಗಳಿಗೆ ಅನಿವಾರ್ಯವಾಗುತ್ತದೆ.

ಲೋಕಸಭೆಯಲ್ಲಿ ಮಾನ್ಯತೆ ಪಡೆದ ಅಧಿಕೃತ ವಿರೋಧ ಪಕ್ಷ ಇಲ್ಲದಿರುವುದರಿಂದ ಅಧಿಕಾರದಲ್ಲಿರುವ ಪಕ್ಷ ಆಡಿದ್ದೇ ಆಟವಾಗಿದೆ. ಸರಕಾರ ಸಂಸತ್ತಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಇರುವ ಪ್ರತಿಪಕ್ಷ ಸದಸ್ಯರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಪ್ರತಿಭಟಿಸುವುದಿಲ್ಲವೆಂದಲ್ಲ. ಸರಕಾರದ ಲೋಪದೋಷಗಳ ವಿರುದ್ಧ ಧ್ವನಿ ಎತ್ತುತ್ತಿವೆ. ಆದರೆ ಸರಕಾರ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡುತ್ತಿಲ್ಲ.

ಹಿಂದೆ ಕಮ್ಯುನಿಸ್ಟ್ ನಾಯಕ ಹರ್‌ಕಿಷನ್ ಸಿಂಗ್ ಸುರ್ಜೀತರಂತಹ ಹಿರಿಯ ರಾಜಕೀಯ ಮುತ್ಸದ್ದಿ ಇದ್ದರು. ಅವರು ಎಲ್ಲ ಬಿಜೆಪಿಯೇತರ ಪ್ರತಿಪಕ್ಷಗಳನ್ನು ಒಂದೇ ವೇದಿಕೆಗೆ ತರುವಲ್ಲಿ ಯಶಸ್ವಿಯಾಗಿದ್ದರು. ಸುರ್ಜೀತ್‌ರನ್ನು ಅಂದಿನ ರಾಜಕೀಯ ವಲಯದಲ್ಲಿ ಮತ್ತು ಮಾಧ್ಯಮಗಳಲ್ಲಿ ಚಾಣಕ್ಯ ಎಂದು ವರ್ಣಿಸಲಾಗುತ್ತಿತ್ತು. ಆದರೆ ಸುರ್ಜೀತರ ನಿರ್ಗಮನದ ನಂತರ ಬಿಜೆಪಿಯೇತರ ಕೋಮುವಾದ ವಿರೋಧಿ ಪಕ್ಷಗಳನ್ನು ಒಂದೆಡೆ ತರಬಲ್ಲ ಇನ್ನೊಬ್ಬ ಪ್ರಭಾವಿ ನಾಯಕ ಬರಲಿಲ್ಲ. ಪ್ರತಿಪಕ್ಷಗಳನ್ನು ಒಂದುಗೂಡಿಸಲು ಮಮತಾ ಬ್ಯಾನರ್ಜಿ ಮತ್ತು ಯಶವಂತಸಿನ್ಹಾ ಕೆಲವು ಸಲ ಯತ್ನಿಸಿದರೂ ಏಕತೆ ಸಾಧ್ಯವಾಗಲಿಲ್ಲ.

ಇಂತಹ ನಿರಂಕುಶ ಪ್ರಭುತ್ವಕ್ಕೆ ಕಡಿವಾಣ ಹಾಕಬೇಕೆಂದರೆ ಎಲ್ಲಾ ಪ್ರತಿಪಕ್ಷಗಳು ಒಂದಾಗಬೇಕು. ಒಗ್ಗಟ್ಟಿನಿಂದ ಕಾರ್ಯತಂತ್ರ ರೂಪಿಸಬೇಕು. ಅದು ಕಳೆದ ಏಳು ವರ್ಷಗಳಿಂದ ಸಾಧ್ಯವಾಗುತ್ತಲೇ ಇಲ್ಲ. ಈ ಕುರಿತು ಹಲವಾರು ಸಲ ಸಭೆಗಳು ನಡೆದರೂ ಪ್ರಯೋಜನವಾಗಿಲ್ಲ. ಇದೀಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು 18 ಪ್ರತಿಪಕ್ಷ ನಾಯಕರನ್ನು ಆಹ್ವಾನಿಸಿ ಸಭೆಯನ್ನು ಮಾಡಿದರು.ಆದರೆ ಸಭೆಯ ನಂತರ ಮತ್ತೆ ಯಥಾಸ್ಥಿತಿ ಮುಂದುವರಿದಿದೆ.

 ಈ ಬಾರಿ ಸೋನಿಯಾ ಗಾಂಧಿ ಅವರು ಕರೆದ ಸಭೆಯಲ್ಲಿ ಶರದ್ ಪವಾರ್, ಸ್ಟಾಲಿನ್, ಸೀತಾರಾಮ ಯೆಚೂರಿ, ಉದ್ಧವ್ ಠಾಕ್ರೆ ಮುಂತಾದವರು ಪಾಲ್ಗೊಂಡಿದ್ದರು. ಆದರೆ ಮಾಯಾವತಿಯವರ ನಡೆ ನಿಗೂಢ. ಅಕಸ್ಮಾತ್ ಎಲ್ಲ ಪ್ರತಿಪಕ್ಷ ನಾಯಕರು ಒಂದೆಡೆ ಸೇರಿ ಬಿಜೆಪಿಯನ್ನು ಮಣಿಸಲು ಮುಂದಾದರೂ ಕೆಲ ಪ್ರತಿಪಕ್ಷ ನಾಯಕರನ್ನು ಸಿಬಿಐ, ಜಾರಿ ನಿರ್ದೇಶನಾಲಯದ ಬೆದರಿಕೆ ಹಾಕಿ ಅವರ ಬಾಯಿಗೆ ಹೊಲಿಗೆ ಹಾಕಲಾಗುತ್ತದೆ.

ಯಾರು ಏನೇ ಹೇಳಲಿ ದೇಶದಲ್ಲಿ ಬಿಜೆಪಿಯನ್ನು ಬಿಟ್ಟರೆ ಅತ್ಯಂತ ದೊಡ್ಡ ಪಕ್ಷ ಕಾಂಗ್ರೆಸ್ ಮಾತ್ರ. ಹಳ್ಳಿ ಹಳ್ಳಿಗಳಲ್ಲಿ ಅದರ ಪ್ರಭಾವವಿದೆ. ಅದು ಮುಂದಾದರೆ ಮಾತ್ರ ಪ್ರತಿಪಕ್ಷಗಳನ್ನು ಒಂದು ವೇದಿಕೆಗೆ ತರಲು ಸಾಧ್ಯ. ಪ್ರತಿಪಕ್ಷಗಳು ಒಂದೇ ವೇದಿಕೆಗೆ ಬಂದರೆ ಮಾತ್ರ ಮುಂಬರುವ 2024 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಸಾಧ್ಯ.

ಆದರೆ, ಸ್ವಾತಂತ್ರ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತು ಸ್ವಾತಂತ್ರಾನಂತರ ಸುಮಾರು ಮೂರು ದಶಕಕ್ಕೂ ಹೆಚ್ಚು ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಚಿಂತಾಜನಕವಾಗಿದೆ. ಸಂಸತ್ತಿನಲ್ಲಿ ಅದಕ್ಕೆ ಅಧಿಕೃತ ಪ್ರತಿಪಕ್ಷ ಎಂಬ ಮಾನ್ಯತೆ ಇಲ್ಲ.ಮೂರು ರಾಜ್ಯಗಳಲ್ಲಿ ಸ್ವತಂತ್ರವಾಗಿ ಅಧಿಕಾರದಲ್ಲಿದ್ದರೂ ಆ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಭಿನ್ನಮತದ ಹೊಗೆ ತುಂಬಿಕೊಂಡಿದೆ. ಇದನ್ನೇ ಬಳಸಿಕೊಂಡ ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ರಾಜಕೀಯ ರಂಗದಿಂದಲೇ ಸಂಪೂರ್ಣ ಮಟಾಮಾಯ ಮಾಡಲು ಮಸಲತ್ತು ನಡೆಸಿದೆ.

 ಬಹುತ್ವ ಭಾರತವನ್ನು ಮನುವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡುವ ನಾಗಪುರ ನಿಯಂತ್ರಿತ ಬಿಜೆಪಿ ಸರಕಾರದ ಹುನ್ನಾರವನ್ನು ತಡೆಯಬೇಕಾದರೆ ಎಲ್ಲ ಬಿಜೆಪಿಯೇತರ ಪಕ್ಷಗಳು ಕನಿಷ್ಠ ಕಾರ್ಯಕ್ರಮದ ಆಧಾರದಲ್ಲಿ ಒಂದುಗೂಡುವ ಅಗತ್ಯವಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಮತ್ತು ಸಿಪಿಎಂ ನಡುವೆ ಹೊಂದಾಣಿಕೆ ಅಸಾಧ್ಯ. ಅದೇ ರೀತಿ ಉತ್ತರ ಪ್ರದೇಶದಲ್ಲಿ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್‌ರ ನಡುವೆ ಹೊಂದಾಣಿಕೆ ಸಾಧ್ಯವಿಲ್ಲ. ಹೀಗಾಗಿ ಪ್ರತಿಪಕ್ಷ ಏಕತೆ ಅಷ್ಟು ಸುಲಭವಲ್ಲ.

ಆರಂಭದಲ್ಲಿ ಜನರನ್ನು ಆಕರ್ಷಿಸಿದ್ದ ಪ್ರಧಾನ ಮಂತ್ರಿ ಅವರ 'ಮನ್ ಕಿ ಬಾತ್' ಕ್ರಮೇಣ ಜನರ ತಿರಸ್ಕಾರಕ್ಕೆ ಗುರಿಯಾಗುತ್ತಿದೆ. ಇದರ 68ನೇ ಕಾರ್ಯಕ್ರಮಕ್ಕೆ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಡಿಸ್‌ಲೈಕ್‌ಗಳು ಬಂದಿವೆ. ಡಿಸ್‌ಲೈಕ್‌ಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ದಿಗಿಲುಗೊಂಡ ಬಿಜೆಪಿ ಜನರು ಪ್ರತಿಕ್ರಿಯೆ ಮಾಡದಂತೆ ನಿಷ್ಕ್ರಿಯಗೊಳಿಸಿದೆ.

ಈ ನಡುವೆ ಒಂದು ಆಶಾದಾಯಕ ಬೆಳವಣಿಗೆ ಅಂದರೆ ಪ್ರತಿಪಕ್ಷಗಳು ನಿತ್ರಾಣಗೊಂಡಿದ್ದರೂ ಯಾವುದೇ ಪಕ್ಷಕ್ಕೆ ಸೇರದ ಜನರೇ ನಿಧಾನವಾಗಿ ಮೋದಿ ಸರಕಾರದ ವಿರುದ್ಧ ಸಿಡಿದೇಳುವ ಸೂಚನೆ ನೀಡುತ್ತಿದ್ದಾರೆ. ರೈತರು ಪಕ್ಷಾತೀತವಾಗಿ ಕಳೆದ ಒಂದು ವರ್ಷದಿಂದ ಸುದೀರ್ಘ ಸಂಘರ್ಷವನ್ನು ಆಳುವ ವರ್ಗದ ವಿರುದ್ಧ ನಡೆಸಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಮತ್ತು ಸಂವಿಧಾನದ ಉಳಿವಿಗಾಗಿ ಒಳಗೊಳಗೆ ಕುದಿಯುತ್ತಿರುವ ಜನರೊಂದಿಗೆ ಪ್ರತಿಪಕ್ಷಗಳು ಕೈಗೂಡಿಸಬೇಕಾಗಿದೆ. ಕಾಂಗ್ರೆಸ್-ಬಿಜೆಪಿ ಒಂದೇ ಎಂಬ ಕೆಲ ಅವಿವೇಕಿಗಳ ವಾದ ಅಂತಿಮವಾಗಿ ಫ್ಯಾಶಿಸ್ಟ್ ಶಕ್ತಿಗಳಿಗೆ ಅನುಕೂಲ ಮಾಡಿಕೊಡುತ್ತದೆ. ಕಾಂಗ್ರೆಸ್ ತಪ್ಪುಗಳು ಸಾವಿರಾರು ಇವೆ. ಅದರ ಆರ್ಥಿಕ ನೀತಿ ಉದಾರೀಕರಣಕ್ಕೆ ಚಾಲನೆ ನೀಡಿದ್ದು ನಿಜ. ಆದರೆ ಅದನ್ನೇ ದೊಡ್ಡದು ಮಾಡಿ ದೇಶವನ್ನು ಅಪಾಯದ ಕಂದಕಕ್ಕೆ ತಳ್ಳುವುದು ಬೇಡ.

ಅಧಿಕಾರಕ್ಕೆ ಬರಲು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಬಿಜೆಪಿಗೆ ಈಗ ಅದೇ ತಿರುಗು ಬಾಣವಾಗಿ ಪರಿಣಮಿಸಿದೆ. ಹೆಚ್ಚುತ್ತಿರುವ ನಿರುದ್ಯೋಗ, ಬೆಲೆ ಏರಿಕೆ, ಕೋವಿಡ್ ನಿಭಾಯಿಸುವಲ್ಲಿ ಕಂಡ ವೈಫಲ್ಯಗಳ ವಿರುದ್ಧ ಯುವಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾಪ್ರಭುತ್ವ ಉಳಿದರೆ ಬಹುತ್ವ ಭಾರತ ಉಳಿಯುತ್ತದೆ. ಬಹುತ್ವ ಭಾರತ ಉಳಿದರೆ ಸಾಮಾಜಿಕ ನ್ಯಾಯದ ಕನಸು ಸಾಕಾರಗೊಳ್ಳುತ್ತದೆ. ಸದ್ಯ ಭರವಸೆ ಮೂಡಿಸಿರುವ ರೈತ ಆಂದೋಲನ ಜನತಂತ್ರದ ಉಳಿವಿನ ಆಂದೋಲನವಾಗಿ ಹೊಸ ದಾರಿ ತೋರಿಸುವ ಸಾಧ್ಯತೆ ಇದೆ. ಇಂತಹ ಸನ್ನಿವೇಶದಲ್ಲಿ ಪ್ರತಿಪಕ್ಷಗಳು ಮೈ ಕೊಡವಿ ಮೇಲೆದ್ದು ನಿಲ್ಲಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)