varthabharthi


ಈ ಹೊತ್ತಿನ ಹೊತ್ತಿಗೆ

ಮಣ್ಣಲ್ಲಿ ಅರಳಿದ ಸಣ್ಣ ಸಣ್ಣ ಖುಷಿಗಳು....!

ವಾರ್ತಾ ಭಾರತಿ : 14 Sep, 2021
-ಕಾರುಣ್ಯ

‘ಆನೆ ಸಾಕುವುದು ಕಷ್ಟ’ ಎನ್ನುವ ಮಾತೊಂದಿದೆ. ಆದರೆ ಗೃಹಿಣಿಯೊಬ್ಬಳು ‘ಆನೆ ಸಾಕಲು ಹೊರಟು’ ಅದರಲ್ಲಿ ಯಶಸ್ವಿಯಾದ ಸೂಚನೆಯೊಂದು ದೊರಕಿದೆ. ‘ಆನೆ ಸಾಕಲು ಹೊರಟವಳು’ ಕೃತಿಯ ಮೂಲಕ ಬರಹ ಲೋಕಕ್ಕೆ ಅಧಿಕೃತವಾಗಿ ಕಾಲಿಟ್ಟ ಸಹನಾ ಕಾಂತಬೈಲು, ಬೆನ್ನಿಗೇ ‘ಇದು ಬರಿ ಮಣ್ಣಲ್ಲ’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ದೈನಂದಿನ ಬದುಕಿನ ವಿಸ್ಮಯಗಳನ್ನೇ ಸರಳ ನಿರೂಪಣೆಯ ಮೂಲಕ ಕಟ್ಟಿಕೊಟ್ಟ ಕಾರಣಗಳಿಗಾಗಿ ಈ ಹಿಂದಿನ ಕೃತಿ ದೊಡ್ಡ ಸಂಖ್ಯೆಯ ಓದುಗರನ್ನು ಸೆಳೆದುಕೊಂಡಿತ್ತು. ಒಂದು ಸಣ್ಣ ತೊರೆಯು ಕಾಡು, ಬೆಟ್ಟಗುಡ್ಡಗಳನ್ನು ಹಾದು ಹೋಗಿ, ಇನ್ನೊಂದು ತೊರೆಯ ಜೊತೆಗೆ ಸೇರಿದಂತೆ, ಆನೆ ಸಾಕಲು ಹೊರಟ ಕೃತಿ ಮುಂದುವರಿದು, ‘ಇದು ಬರಿ ಮಣ್ಣಲ್ಲ’ ಕೃತಿಯಾಗಿ ಬೆಳೆದಿದೆ. ಗ್ರಾಮೀಣ ಪ್ರದೇಶದಲ್ಲಿ ಕಾಡು, ಕೃಷಿಯ ನಡುವೆ ಬದುಕು ಸವೆಸುವ ಗೃಹಿಣಿಯನ್ನು ಲೇಖಕಿಯಾಗಿ ಪರಿವರ್ತಿಸಿದ ನಿಸರ್ಗ ಮತ್ತು ಅದರ ಸಣ್ಣ ಸಣ್ಣ ವಿಸ್ಮಯಗಳನ್ನು ಈ ಕೃತಿಯಲ್ಲಿ ನಾವು ಅನುಭವಿಸಬಹುದು. ಹೆಣ್ಣೊಬ್ಬಳು ಗೃಹಿಣಿಯಾಗಿ ಅಡುಗೆ ಮನೆ, ಹಟ್ಟಿ, ಗಂಡ, ಮನೆ, ಮಕ್ಕಳು ಇವುಗಳ ನಡುವೆ ಸಿಲುಕಿಕೊಂಡೂ, ಅದು ತನ್ನ ಪಾಲಿನ ಬಂಧನವಾಗದಂತೆ ನೋಡಿಕೊಳ್ಳುವ ಮಾರ್ಗವಾಗಿ ಲೇಖಕಿ ಬರಹ ಲೋಕವನ್ನು ಆರಿಸಿಕೊಂಡಂತಿದೆ. ಈ ಪ್ರಬಂಧಗಳ ಮೂಲಕ ಬರಹ-ಬದುಕನ್ನು ಅವರು ಸಮನ್ವಯಗೊಳಿಸುವುದನ್ನು ಕಾಣಬಹುದು. ತನ್ನ ಜಗತ್ತಿನ ಸಣ್ಣ ಸಣ್ಣ ಖುಷಿಗಳನ್ನೇ ಬಳಸಿಕೊಂಡು ಅದಕ್ಕೊಂದು ಆಕಾರ ಕೊಡುವ ಪ್ರಯತ್ನ ಮಾಡುತ್ತಾರೆ. ಮಣ್ಣಿನ ಜೊತೆಗೆ ಅವಿನಾಭಾವ ನಂಟನ್ನು ಹೊಂದಿದ ಲೇಖಕಿ, ಆ ಮಣ್ಣಿನ ಮೂಲಕವೇ ಆಕಾಶಕ್ಕೆ ಸುರಂಗ ಕೊರೆಯುವ ಪ್ರಯತ್ನ ಹಲವು ಬರಹಗಳಲ್ಲಿ ಕಾಣ ಸಿಗುತ್ತವೆ.

ಸುಮಾರು 24 ಪ್ರಬಂಧಗಳು ಇಲ್ಲಿವೆ. ವಿಶೇಷವೆಂದರೆ, ಹೆಚ್ಚಿನ ಬರಹಗಳು ಅವರ ಬದುಕಿನ ಸಂಗಾತಿಗಳಾಗಿರುವ ಪ್ರಾಣಿಗಳು ಮತ್ತು ಮರಗಿಡಗಳ ಕುರಿತಂತೆ ಇವೆ. ಆನೆಗಳು, ಜಾನುವಾರುಗಳು, ಊರ ತುಡುಗು ದನಗಳು, ಬೆಕ್ಕು, ಅಜ್ಜಿಯ ಕೃಷಿ ಬುತ್ತಿ, ಕಾಡಿನ ನಡುವೆ ಪಿಸುಗುಡುವ ರೇಡಿಯೊ, ಮಜ್ಜಿಗೆಯ ಜೊತೆಗೆ ಮಥಿಸಿದ ಬದುಕು, ವೆಂಕಟ್ರಮಣ ಭಟ್ಟರ ಪೀಶಕತ್ತಿ, ಜೇನು ಅಭ್ಯಾಗತ, ಅತ್ತೆಯ ಉಪ್ಪಿನಕಾಯಿ ಜಗತ್ತು.....ದಿನ ನಿತ್ಯ ನಾವು ನೋಡಿದ, ಸವಿದ ಸಣ್ಣ ಸಂಗತಿಗಳೂ ಲೇಖಕಿಯ ಮುಗ್ಧ ಕಣ್ಣುಗಳಲ್ಲಿ ಬೆಳೆಯುತ್ತಾ ನಮ್ಮಾಳಗೆ ಹೊಸದಾದ ರೂಪಕವೊಂದನ್ನು ಸೃಷ್ಟಿಸುತ್ತದೆ. ಓದು ಮುಗಿದ ಬಳಿಕವೂ ಆ ರೂಪಕ ಅವ್ಯಕ್ತವಾಗಿ ನಮ್ಮನ್ನು ಸಂತೈಸುತ್ತಿರುತ್ತದೆ.

ರಹಮತ್ ತರೀಕೆರೆ ತಮ್ಮ ಬೆನ್ನುಡಿಯಲ್ಲಿ ಹೇಳುವಂತೆ ‘‘....ಬದುಕಿನಲ್ಲಿ ಸಂಭವಿಸುತ್ತಿರುವ ಪಲ್ಲಟಗಳನ್ನು ಹಳಹಳಿಕೆ ಮತ್ತು ವಿಷಾದವಿಲ್ಲದೆ ಇಲ್ಲಿ ಹಿಡಿದುಕೊಡಲಾಗಿದೆ. ಆತ್ಮ ವಿಮರ್ಶೆಯಿಂದಲೂ ವಿನೋದ ಪ್ರಜ್ಞೆಯಿಂದಲೂ ಕೂಡಿರುವ ಇಲ್ಲಿನ ನಿರೂಪಣೆ ಹೃದ್ಯವಾಗಿದೆ. ಕನ್ನಡ ಸಾಹಿತ್ಯ ಸಂಸ್ಕೃತಿಯು ಗೃಹಿಣಿಯರ ಒಳಜಗತ್ತಿನ ತಳಮಳ ಮತ್ತು ಸಂಭ್ರಮಗಳನ್ನು ಸರಿಯಾಗಿ ಆಲಿಸಬೇಕಾಗಿದೆ’’.

ಸಹನಾ ಕಾಂತಬೈಲು ತುಳಿದ ಮಣ್ಣು ಅತ್ಯಂತ ಫಲವತ್ತಾದುದು. ಅಲ್ಲಿ ಬಿದ್ದ ಬೀಜಗಳು ಗಿಡಮರಗಳಾಗಿ, ಕಾಡುಗಳಾಗಿ ಹಬ್ಬಲಿ.
ಅಹರ್ನಿಶಿ ಪ್ರಕಾಶನ, ಶಿವಮೊಗ್ಗ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 120. ಕೃತಿಯ ಮುಖಬೆಲೆ 120 ರೂಪಾಯಿ. ಆಸಕ್ತರು 94491 74662 ದೂರವಾಣಿಯನ್ನು ಸಂಪರ್ಕಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)