varthabharthi


ನಿಮ್ಮ ಅಂಕಣ

ಪ್ರತಿಕ್ರಿಯೆ

ವಿಜ್ಞಾನ-ತಂತ್ರಜ್ಞಾನಗಳು ಜನವಿರೋಧಿಯಲ್ಲ

ವಾರ್ತಾ ಭಾರತಿ : 15 Sep, 2021
ವಿ.ಎನ್. ಲಕ್ಷ್ಮೀನಾರಾಯಣ

ಇತ್ತೀಚಿನ ನಡಹಳ್ಳಿ ವಸಂತ ಅವರ ಲೇಖನ (ವಾ.ಭಾ.ಸೆ.9) ವಿವರಗಳಲ್ಲಿ ಸಂಗತವಾಗಿದೆ. ಅದರ ಶೀರ್ಷಿಕೆಯಿಂದಾಗಿ ಲೇಖಕರು ‘ವಿಜ್ಞಾನ ವಿರೋಧಿ’ ನಿಲುವನ್ನು ಹೊಂದಿರಬಹುದೆಂಬ ತಪ್ಪುಅಭಿಪ್ರಾಯ ಬರುತ್ತದೆ.

ಬುಡಕಟ್ಟು ಸಮಾಜದ ಕಾಲದಿಂದ ಹಿಡಿದು ಇತ್ತೀಚಿನ ಕಾರ್ಪೊರೇಟ್ ಬಂಡವಾಳ ಪ್ರಾಬಲ್ಯದ ದಿನಗಳಲ್ಲೂ ವಿಜ್ಞಾನಕ್ಕಿರುವ ಮೂಲ ಅರ್ಥ ಒಂದೇ. ವಸ್ತುಸ್ಥಿತಿಯನ್ನು ಆಧರಿಸಿದ ಯಾವುದೇ ಅನುಭವವನ್ನು ತಾರ್ಕಿಕವಾಗಿ, ವೈಚಾರಿಕವಾಗಿ ಮತ್ತು ಪುರಾವೆಗಳ ಸಹಿತ ಯಾರಾದರೂ ಪರೀಕ್ಷಿಸಿ ನೋಡಬಹುದಾದ ಕ್ರಮದಲ್ಲಿ ಮಂಡಿಸುವ ಯಾವುದೇ ನಿರಪೇಕ್ಷ ತೀರ್ಮಾನ, ವೈಜ್ಞಾನಿಕ ತೀರ್ಮಾನ ಎನಿಸಿಕೊಳ್ಳುತ್ತದೆ. ಹೀಗಾಗಿ ವಿಜ್ಞಾನ ಎನ್ನುವುದು ಒಂದು ಪಠ್ಯವಲ್ಲ ಅಥವಾ ಜ್ಞಾನಸಂಗ್ರಹವಲ್ಲ. ವಸ್ತುಪ್ರಪಂಚವನ್ನು ನಿರ್ದಿಷ್ಟ ಕಾಲದ, ನಿರ್ದಿಷ್ಟ ಸಾಮಾಜಿಕ ಹಿನ್ನೆಲೆಯಲ್ಲಿ ಅರ್ಥಮಾಡಿಕೊಂಡು ಸಾಧ್ಯವಿದ್ದಷ್ಟೂ ನಿಖರವಾಗಿ ವಿವರಿಸುವ ಒಂದು ವೈಚಾರಿಕ ವಿಧಾನ. ಇದಕ್ಕೆ ಹೊರತಾದ, ಕೇವಲ ವ್ಯಕ್ತಿಗತ ಪ್ರಯೋಜನ, ವೈಯಕ್ತಿಕ ಅನುಭವ, ನಂಬಿಕೆ, ಊಹೆ, ಅಭಿಪ್ರಾಯಗಳನ್ನು ಆಧರಿಸಿದ ತೀರ್ಮಾನಗಳನ್ನು ಅನುಭವವಾದಿ (ಎಂಪಿರಿಕಲ್) ತೀರ್ಮಾನಗಳೆನ್ನುತ್ತೇವೆಯೇ ಹೊರತು, ವಿಜ್ಞಾನ ಎನ್ನುವುದಿಲ್ಲ.

ಬದುಕಿನ ಸಂದರ್ಭದಲ್ಲಿ ಸಿಗುವ ಅನುಭವಗಳನ್ನು ವೈಚಾರಿಕ ವಿಧಾನದಲ್ಲಿ ಪರಿಷ್ಕರಿಸಿ ನಿತ್ಯ ಜೀವನದಲ್ಲಿ ಬಳಸಿಕೊಳ್ಳುವ ಯಾವುದೇ ಸಲಕರಣೆ-ಸಾಧನಗಳನ್ನು ಆವಿಷ್ಕರಿಸಿಕೊಳ್ಳುವ ಕಲೆಯನ್ನು ತಂತ್ರಜ್ಞಾನ ಎಂದು ಕರೆಯುತ್ತಾ ಬಂದಿದ್ದೇವೆ. ಆದಿಮಾನವರು ನೆಲಕೆರೆದು ಬೀಜ ಬಿತ್ತುತ್ತಿದ್ದ ಚೂಪುಕೋಲು, ಬೇಟೆಗೆ ಬಳಸುತ್ತಿದ್ದ ಚೂಪುಗಲ್ಲಿನಿಂದ ಹಿಡಿದು, ಮಧ್ಯಯುಗದ ಕೃಷಿಸಲಕರಣೆಯಾದ ನೇಗಿಲು, ರಕ್ಷಣೆ-ಆಕ್ರಮಣಕ್ಕೆ ಬಳಸುವ ಬಂದೂಕು, ಸಂಗೀತವಾದ್ಯ, ಆಧುನಿಕ ಕಾಲದ ರೈಲು, ಬಸ್ಸು, ವಿಮಾನ, ಕಂಪ್ಯೂಟರ್, ರೊಬೋಟ್, ರಾಕೆಟ್ಟುಗಳವರೆಗೆ ಆಯಾ ಕಾಲದಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿ, ಜೀವನದ ಮಟ್ಟವನ್ನು ಸುಧಾರಿಸುವಂತೆ ಆವಿಷ್ಕರಿಸಿದ ಎಲ್ಲಾ ವಸ್ತುಗಳೂ ಆಯಾ ಕಾಲದ ತಂತ್ರಜ್ಞಾನದ ಫಲಗಳೇ. ಅವುಗಳ ಹಿಂದಿರುವ ಆಲೋಚನಾ ವಿಧಾನ, ಅವುಗಳ ಸೃಷ್ಟಿಗೆ ಆಧಾರವಾದ ಪ್ರತಿಭೆ-ಬುದ್ಧಿವಂತಿಕೆ-ಜ್ಞಾನಗಳೂ ಈಗ ನಾವು ವೈಜ್ಞಾನಿಕವೆಂದು ಕರೆಯುವ ವೈಚಾರಿಕ ವಿಧಾನದಲ್ಲಿ ರೂಪಗೊಂಡ ತಿಳುವಳಿಕೆಯೇ. ಕಾವ್ಯ, ಸಾಹಿತ್ಯ, ಚಿತ್ರಕಲೆ, ತತ್ವಶಾಸ್ತ್ರ ಮುಂತಾದವುಗಳು ಆಯಾ ಕಾಲದ ವಸ್ತುಗಳನ್ನು, ಮನುಷ್ಯರ ಭಾವನೆಗಳನ್ನು, ಜೀವನಾನುಭವವನ್ನು ಆಧರಿಸಿ, ಹಿಗ್ಗಿಸಿ ಅಥವಾ ವಿಸ್ತರಿಸಿ ಮಾಡಿದ ಕಲ್ಪನೆಗಳು. ಆದರೆ ಅವೇ ವಸ್ತುಗಳಲ್ಲ, ಮನುಷ್ಯರ ಮಾನಸಿಕ ಸೃಜನಕ್ರಿಯೆಗಳ ಫಲವಾದ ಕೃತಿಗಳು. ಅವು ಭೌತಿಕ ವಸ್ತುಗಳಾಗಿರದೆ, ಮಾನಸಿಕ ಕ್ರಿಯೆಗಳಾದ ಊಹೆ, ಕಲ್ಪನೆ, ವ್ಯಕ್ತಿಗತ ಅನುಭವ ಮತ್ತು ನಂಬಿಕೆಗಳನ್ನು ಹೆಚ್ಚಾಗಿ ಆಧರಿಸಿ ರೂಪುಗೊಳ್ಳುವುದರಿಂದ ಅವುಗಳನ್ನು ವಿಜ್ಞಾನವೆನ್ನುವುದಿಲ್ಲ. ಆದರೆ, ಜನರ ಬದುಕಿಗೆ ನಿರುಪಯುಕ್ತವೆಂದು ತಿರಸ್ಕರಿಸುವುದಿಲ್ಲ. ಹಾಗಿದ್ದರೂ ಅವುಗಳ ಮೂರ್ತರೂಪವನ್ನು ಭೌತಿಕವಾಗಿ ಸೃಷ್ಟಿಸಲು ಮತ್ತು ಆಸ್ವಾದಿಸಲು ಸೂಕ್ತ ತಂತ್ರಜ್ಞಾನ ಹಾಗೂ ವೈಜ್ಞಾನಿಕ ದೃಷ್ಟಿ ಬೇಕೇ ಬೇಕು. ಪುಸ್ತಕ, ಚಿತ್ರ ಮತ್ತು ಶಿಲ್ಪಕಲಾಕೃತಿ, ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ ಗೊಮ್ಮಟೇಶ್ವರನ ಸುಂದರ ಮೂರ್ತಿ, ಬೇಲೂರು-ಹಳೆಬೀಡು ದೇವಸ್ಥಾನಗಳ ಕಲಾಕುಸುರಿ, ತಾಜ್‌ಮಹಲ್‌ನ ಅಳತೆಬದ್ಧ ಸೌಂದರ್ಯ ಇವುಗಳಿಗೆ ಆಧಾರ ವೈಜ್ಞಾನಿಕ ದೃಷ್ಟಿ ಮತ್ತು ಕಲ್ಲು-ಅಳತೆ-ವಾಸ್ತುಶಿಲ್ಪಗಳ ತಂತ್ರಜ್ಞಾನಗಳೇ.

ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಸಸ್ಯಶಾಸ್ತ್ರ, ಗಣಿತ, ಮನೋವಿಜ್ಞಾನ ಖಗೋಳವಿಜ್ಞಾನ, ಅಣುವಿಜ್ಞಾನ ಮುಂತಾದ ಜ್ಞಾನಶಿಸ್ತುಗಳಲ್ಲಿ ಪರಿಣಿತರಾದವರನ್ನು ಮಾತ್ರ ವಿಜ್ಞಾನಿಗಳೆಂದೂ, ಚರಿತ್ರೆ, ಸಾಹಿತ್ಯ, ಕಲೆ, ಸಮಾಜಶಾಸ್ತ್ರ, ಅರ್ಥಶಾಸ್ತ್ರ ಮುಂತಾದ ಜ್ಞಾನ ಶಿಸ್ತುಗಳಲ್ಲಿ ಪರಿಣಿತರಾದವರನ್ನು ವಿಜ್ಞಾನಿಗಳಲ್ಲವೆಂದೂ ಪರಿಗಣಿಸುವ ಅವೈಜ್ಞಾನಿಕ ಮತ್ತು ತಪ್ಪು ವಿಧಾನ ಬಹಳ ಹಿಂದಿನಿಂದಲೂ ವಿಶ್ವದಾದ್ಯಂತ ರೂಢಿಯಲ್ಲಿದೆ. ತಮ್ಮ ತಮ್ಮ ವಿಷಯಗಳಲ್ಲಿ ಮಾತ್ರ ವೈಜ್ಞಾನಿಕ ವಿಧಾನವನ್ನು ಬಳಸಿ, ಅವುಗಳ ಪರಿಧಿಯ ಹೊರಗೆ ಯಾವುದೇ ಸಾಮಾನ್ಯವ್ಯಕ್ತಿಯಷ್ಟೇ ಅಥವಾ ಅವರಿಗಿಂತಲೂ ಹೆಚ್ಚು ಅವೈಜ್ಞಾನಿಕವಾಗಿ ಯೋಚಿಸುವ, ತೀರ್ಮಾನಿಸುವ, ವಿಜ್ಞಾನದ ಹೆಸರಿನಲ್ಲಿ ಅಂತಹ ತೀರ್ಮಾನಗಳಿಂದ ಜನರನ್ನು ಪ್ರಭಾವಿಸುವ ‘ವಿಜ್ಞಾನಿ’ಗಳು ವಿಜ್ಞಾನಪ್ರಪಂಚದಲ್ಲಿ ಹೇರಳವಾಗಿದ್ದಾರೆ. ಹಾಗೆಯೇ ವೈಜ್ಞಾನಿಕ ವಿಧಾನವನ್ನು ‘ಮಾನವೀಯ ಶಾಸ್ತ್ರ’ಗಳಲ್ಲಿ ಅವು ಸಾಧ್ಯಮಾಡುವಷ್ಟು ವೈಜ್ಞಾನಿಕ ವಿಧಾನವನ್ನು ಬಳಸಿ ಆ ಮಟ್ಟಿನ ನಿಖರ ತೀರ್ಮಾನಗಳನ್ನು ಕೊಡುವ ವೈಜ್ಞಾನಿಕ ಚಿಂತಕರು ನಮ್ಮ ನಡುವೆ ಇದ್ದರೂ ಅವರನ್ನು ಸಾಮಾನ್ಯವಾಗಿ ವಿಜ್ಞಾನಿಗಳೆಂದು ಯಾರೂ ಗುರುತಿಸುವುದಿಲ್ಲ. ಮನುಷ್ಯರು ಪ್ರಕೃತಿಯನ್ನು ವಸ್ತುವಾಗಿ ಪರಿಗಣಿಸಿ ಮಾಡುವ ವೈಜ್ಞಾನಿಕ ಅಧ್ಯಯನ ಶಿಸ್ತುಗಳನ್ನು ಒಟ್ಟಾರೆಯಾಗಿ ‘ನಿಸರ್ಗ ವಿಜ್ಞಾನ’ ಅಥವಾ ವಸ್ತು ವಿಜ್ಞಾನವೆಂದೂ, ಮನುಷ್ಯರನ್ನೇ ಅಧ್ಯಯನವಸ್ತುವಾಗಿ ಪರಿಗಣಿಸಿ ಅವರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಂಬಂಧಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಜ್ಞಾನಶಿಸ್ತುಗಳನ್ನು ಒಟ್ಟಾರೆಯಾಗಿ ‘ಮಾನವ ವಿಜ್ಞಾನ’ವೆಂದೂ ಕರೆಯುತ್ತಾರೆ. ವಿಜ್ಞಾನವೆಂದಾಗ ಇವೆರಡೂ ಅದರಲ್ಲಿ ಸೇರಿವೆ ಎಂದು ತಿಳಿದರೆ ಅದು ಪೂರ್ಣಾರ್ಥದಲ್ಲಿ ವಿಜ್ಞಾನವಾಗುತ್ತದೆ. ‘ವಿಜ್ಞಾನದ ಅಹಂಕಾರ’ ಎಂಬ ಶೀರ್ಷಿಕೆಯು ಅವೈಜ್ಞಾನಿಕ ದೃಷ್ಟಿಯ ‘ವಿಜ್ಞಾನಿಗಳು’ ಅನುಸರಿಸುವ ವಿಜ್ಞಾನವನ್ನೇ ನಿಜವಾದ ವಿಜ್ಞಾನವೆಂದು ತಪ್ಪಾಗಿ ಗ್ರಹಿಸಿ ನಡಹಳ್ಳಿಯವರ ಲೇಖನಕ್ಕೆ ಕೊಟ್ಟ ಶೀರ್ಷಿಕೆಯಾಗಿದೆ.

 ತಂತ್ರಜ್ಞಾನದ ಬಗ್ಗೆ ನಡಹಳ್ಳಿಯವರು ಎತ್ತುವ ಆಕ್ಷೇಪದಲ್ಲಿ ಬಹುಶಃ ಅವರು ಗಣನೆಗೆ ತೆಗೆದುಕೊಳ್ಳದ ಒಂದು ಮುಖ್ಯ ಅಂಶವಿದೆ. ಬಲಿಷ್ಠರು ದುರ್ಬಲರನ್ನು ತಮ್ಮ ಗುಲಾಮರನ್ನಾಗಿಸಿ ತಮ್ಮ ಬದುಕಿನ ಆಧಾರಗಳಿಗಾಗಿ ಅವರ ಸೃಜನಶಕ್ತಿಯನ್ನು ದುಡಿಸಿಕೊಳ್ಳಲು ಆರಂಭಿಸಿದ ಕಾಲದಿಂದಲೂ ಕಂಡುಬರುವ ಅಂಶ ಅದು. ಯಾವುದೇ ಸೃಷ್ಟಿಯು ಭೂಮಿಯನ್ನು ಬಳಸಿಕೊಂಡು ಮನುಷ್ಯರು ತಮ್ಮ ಸೃಜನಶಕ್ತಿಯನ್ನು ವಸ್ತು-ಚಿಂತನೆಗಳನ್ನಾಗಿ ಪರಿವರ್ತಿಸುವ ಕ್ರಿಯೆಗಳ ಫಲವೇ ಆಗಿದೆ. ಆದರೆ ಬಲಿಷ್ಠರು ಭೂಮಿಯನ್ನು ಆಯಾ ಕಾಲದ ದುರ್ಬಲರ ಸೃಜನಶಕ್ತಿಯನ್ನು, ಅವರು ಸೃಷ್ಟಿಸಲು ಬಳಸುವ ಉಪಕರಣಗಳನ್ನು ತಮ್ಮ ವಶದಲ್ಲಿರಿಸಿಕೊಂಡು ದುರ್ಬಲರನ್ನು ಆಳುವುದರಿಂದ ಬಲಿಷ್ಠರ ಧೋರಣೆ-ಆಲೋಚನೆಗಳೇ ದುರ್ಬಲರ ಧೋರಣೆ-ಆಲೋಚನೆಗಳು ಎಂಬಂತಾಗಿದೆ. ಭೂಮಿ ಹಾಗೂ ದುರ್ಬಲರ ಸೃಜನಶಕ್ತಿಯ ಫಲಗಳಾದ ವಸ್ತು, ಚಿಂತನೆ ಹಾಗೂ ಆವಿಷ್ಕಾರಗಳನ್ನು ತಮ್ಮ ವಶದಲ್ಲಿರಿಸಿಕೊಂಡು ಅವುಗಳ ಬಳಕೆ-ಪ್ರಯೋಜನಗಳನ್ನು ಬಳಸಿಕೊಂಡು ದುರ್ಬಲರ ಜೀವನ ಹಸನಾಗುವಂತೆ ಮಾಡುವ ಬದಲು ಬರೀ ತಮ್ಮ ಸುಖ-ಲೋಲುಪತೆಗಾಗಿ ಬಳಸಿಕೊಳ್ಳುವುದು ಇಂದಿಗೂ ನಡೆದಿದೆ. ಹೀಗೆ ವಿಜ್ಞಾನ-ತಂತ್ರಜ್ಞಾನಗಳ ಲಾಭಗಳು ಎಲ್ಲರಿಗೂ ಸಿಗುವ ಬದಲು, ಅವುಗಳ ಮೇಲಿನ ಬಲಿಷ್ಠರ ಹಿಡಿತದಿಂದಾಗಿ ಹೊರನೋಟಕ್ಕೆ ಜನವಿರೋಧಿಯಾಗಿರುವಂತೆ, ಮಾನವೀಯತೆಗೆ ಕುರುಡಾಗಿರುವಂತೆ ತೋರುತ್ತವೆ.

ಜನವಿರೋಧಿಯಾಗಿರುವುದು ವಿಜ್ಞಾನ-ತಂತ್ರಜ್ಞಾನಗಳಲ್ಲ, ಅವುಗಳನ್ನು ತಮ್ಮ ವಶದಲ್ಲಿರಿಸಿಕೊಂಡು, ನಿಯಂತ್ರಿಸುವ ಬಲಿಷ್ಠರು. ಒಂದು ಕಾಲದಲ್ಲಿ ನಗ್ನವಾಗಿದ್ದ ದುರ್ಬಲರ ಮೇಲಿನ ಬಲಾತ್ಕಾರ ಆಧುನಿಕ ಕಾಲಗಳಲ್ಲಿ ಕಾನೂನು, ಸಂವಿಧಾನ ಮುಂತಾದ ರೂಪಗಳ ಹಿಂದೆ ಅಡಗಿಕೊಂಡಿದೆ. ಇತರ ಮನುಷ್ಯರಂತೆ ವಿಜ್ಞಾನಿಗಳೂ ದುರ್ಬಲರ ಗುಂಪಿಗೆ ಸೇರಿರುವುದರಿಂದ ಅವರ ಆಲೋಚನೆ-ಅಭಿಪ್ರಾಯಗಳು ಬಲಿಷ್ಠರ ಧೋರಣೆ- ನಿಲುವುಗಳನ್ನು ತಮ್ಮದಾಗಿಸಿಕೊಳ್ಳದಿದ್ದರೆ ಅಥವಾ ಬೆಂಬಲಿಸದಿದ್ದರೆ ಅವರಿಗೆ ಉಳಿಗಾಲವಿರುವುದಿಲ್ಲ. ಬಲಿಷ್ಠರ ನಿಲುವನ್ನು ಬೆಂಬಲಿಸಿ ಅವರ ದಾರಿಯನ್ನು ತುಳಿಯುವ ವಿಜ್ಞಾನಿ-ತಂತ್ರಜ್ಞಾನಿಗಳಿಗೆ ಹಣಸಹಾಯ, ಪದವಿ, ಬಿರುದು ಬಾವಲಿಗಳು, ಸ್ಥಾನಮಾನಗಳು ಸಿಗುತ್ತವೆ. ವಿರೋಧಿಸಿದರೆ ಹಣಸಹಾಯದ ನಿರಾಕರಣೆಯ ಜೊತೆಗೆ ನಾನಾ ಬಗೆಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಭಾವಂತರಾಗಿದ್ದೂ ಅವಕಾಶವಂಚಿತರಾಗಿ ಮೂಲೆಗುಂಪಾಗಬೇಕಾಗುತ್ತದೆ. ಈ ಕಾರಣಕ್ಕಾಗಿಯೇ, ದುರ್ಬಲರಲ್ಲಿನ ಬಹಳಷ್ಟು ಜನ ಚಿಂತಕರು, ಸಾಹಿತಿಗಳು, ಕಲಾವಿದರು ಮತ್ತು ವಿಜ್ಞಾನಿ-ತಂತ್ರಜ್ಞಾನಿಗಳು, ಬಲಿಷ್ಠರನ್ನು ಬೆಂಬಲಿಸುತ್ತಾರೆ. ಸದಾ ಅವರ ಕೃಪಾದೃಷ್ಟಿಯಲ್ಲಿರಲು ಬಯಸುತ್ತಾರೆ. ಅವರು ಕೊಡಮಾಡುವ ಹಣ-ಸಾಧನ-ಸೌಲಭ್ಯಗಳನ್ನು ಬಳಸಿಕೊಂಡು ಅವರ ಆಣತಿ-ನಿರೀಕ್ಷೆ-ನಿರ್ಧಾರಗಳಿಗನುಸಾರವಾಗಿ ದುರ್ಬಲರಿಗೆ ಮಾರಕವಾದ ಆವಿಷ್ಕಾರ-ಸಂಶೋಧನೆಗಳಲ್ಲಿ ತೊಡಗುತ್ತಾರೆ. ಜೀವಮಾರಕವಾದ ಯಾವುದೇ ಕಾಲದ ಯುದ್ಧಗಳು ಆಯಾ ಕಾಲದ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳ ಸಹಯೋಗವಿಲ್ಲದೆ ನಡೆಯುವುದು ಸಾಧ್ಯವೇ ಇಲ್ಲ. ಬಲಿಷ್ಠರು ಮತ್ತು ವಿಜ್ಞಾನ-ತಂತ್ರಜ್ಞಾನಗಳ ನಡುವೆ ಇರುವ ಒಳಸಂಬಂಧಗಳ ಯಾವ ಪರಿವೆಯೂ ಇಲ್ಲದೆ ಹೊರಗಿನಿಂದ ನೋಡುವವರಿಗೆ ವಿಜ್ಞಾನ-ತಂತ್ರಜ್ಞಾನಗಳೇ ಸಗಟಾಗಿ ಮಾನವತೆಗೆ ಮಾರಕವಾಗಿರುವಂತೆ, ಜನವಿರೋಧಿಯಾಗಿರುವಂತೆ ತೋರುತ್ತವೆ.

ಮನುಷ್ಯರ ಜೀವನಾಧಾರ ಅಗತ್ಯಗಳಾದ ಆಹಾರ, ವಸ್ತ್ರ, ವಸತಿ, ವಿದ್ಯೆ, ಔಷಧಿ ಮತ್ತು ನಾನಾ ವಿಧದ ಸೌಲಭ್ಯಗಳ ಸೃಷ್ಟಿಯ ಹಿಂದೆ ಮತ್ತು ನಿತ್ಯನೂತನವಾದ ಆವಿಷ್ಕಾರಗಳ ಹಿಂದೆ ವಿಜ್ಞಾನ ಮತ್ತು ತಂತ್ರಜ್ಞಾನಗಳ ಮಹತ್ತರ ಪಾತ್ರವಿದೆ. ವಸ್ತು ಮತ್ತು ಸೌಲಭ್ಯಗಳನ್ನು ಎಲ್ಲಾ ಮನುಷ್ಯರ ಬಳಕೆಗಾಗಿ, ಪ್ರಯೋಜನಗಳಿಗಾಗಿ ಸೃಷ್ಟಿಸದೆ, ವ್ಯಾಪಾರಕ್ಕಾಗಿ, ಲಾಭಗಳಿಕೆಗಾಗಿ ಸೃಷ್ಟಿಸುವಂತೆ ಸೃಜನಶೀಲರ ಮೇಲೆ ಬಲಿಷ್ಠರು ಹಾಕುವ ಒತ್ತಡದಿಂದಾಗಿ, ಸೃಜನಕ್ರಿಯೆಯ ಮೇಲಿನ ಅವರ ಹಿಡಿತದಿಂದಾಗಿ ವಿಜ್ಞಾನ-ತಂತ್ರಜ್ಞಾನಗಳೇ ಆಧುನಿಕ ಕಾಲದ ದುರ್ಬಲರ ಅಥವಾ ಜನಸಾಮಾನ್ಯರ ಬದುಕಿಗೆ ಮಾರಕವಾದ ಅಥವಾ ಅನಪೇಕ್ಷಿತವಾದ ಚಟುವಟಿಕೆಗಳಲ್ಲಿ ತೊಡಗಿರುವಂತೆ ಭಾಸವಾಗುತ್ತದೆ.

ನಮ್ಮ ಪೂರ್ವಿಕರಿಗೆ ಹೋಲಿಸಿದರೆ, ಆಧುನಿಕ ಕಾಲದ ಜನರ ಸರಾಸರಿ ಆಯಸ್ಸು ಹೆಚ್ಚಾಗಿದೆ. ಯಾವ ಚಕ್ರವರ್ತಿಯೂ ಅನುಭವಿಸಲಾಗದಿದ್ದ ನವಿರಾದ ವಸ್ತ್ರಗಳು, ತಿನಿಸುಗಳು, ಹಣ್ಣು ತರಕಾರಿಗಳು ಇಂದು ವಿಶ್ವದ ಯಾವ ಭಾಗಕ್ಕೆ ಹೋದರೂ ಸಿಗುತ್ತವೆ. ಮರಳುಗಾಡಿನಲ್ಲೂ ಶುದ್ಧೀಕರಿಸಿದ ನೀರು ದೊರೆಯುತ್ತದೆ. ಆಹಾರದ ವೈವಿಧ್ಯ ಮತ್ತು ಸಮೃದ್ಧಿ ಯಾವಕಾಲದಲ್ಲೂ ಇಷ್ಟು ಅಗಾಧ ಪ್ರಮಾಣದಲ್ಲಿರಲಿಲ್ಲ. ಮಕ್ಕಳ ಹೆರಿಗೆಯಲ್ಲಿ ಸಾಯುತ್ತಿದ್ದ ಎಳೆ ಪ್ರಾಯದ ಹೆಣ್ಣುಮಕ್ಕಳ ಸಂಖ್ಯೆ ತುಂಬಾ ಗಣನೀಯವಾಗಿ ಕಡಿಮೆಯಾಗಿದೆ. ನೆಗಡಿಯಾದರೆ ಸಾವನ್ನಪ್ಪುತ್ತಿದ್ದ ಕಾಲ ಹೋಗಿದೆ. ವರ್ಷಕ್ಕೊಂದು ಸಲ ತಪ್ಪದೆ ದಾಳಿಯಿಟ್ಟು ನೂರಾರು ಜನರ ಪ್ರಾಣತೆಗೆದುಕೊಳ್ಳುತ್ತಿದ್ದ, ಅಂಗವಿಕಲರನ್ನಾಗಿ ಮಾಡುತ್ತಿದ್ದ ಸಿಡುಬು, ಪ್ಲೇಗು, ಮಲೇರಿಯಾ, ಕಾಲರಾ ಮುಂತಾದ ಸಾಂಕ್ರಾಮಿಕ ಮತ್ತು ಮಾರಣಾಂತಿಕ ಜಾಡ್ಯಗಳು ಇಂದು ಇಲ್ಲವೇ ಇಲ್ಲವೆನ್ನುವಷ್ಟು ಕಾಣದಾಗಿವೆ. ಕೆಲವರಿಗೆ ಮಾತ್ರ ಸಿಗುತ್ತಿದ್ದ ಶಿಸ್ತುಬದ್ಧಜ್ಞಾನ ಇಂದು ಯಾರಿಗೆ ಬೇಕಾದರೂ ಲಭ್ಯವಿದೆ. ಇವೆಲ್ಲದರ ಹಿಂದೆ ವಿಜ್ಞಾನ-ತಂತ್ರಜ್ಞಾನಗಳ ಆವಿಷ್ಕಾರಗಳಿವೆ.

ಆದರೆ, ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಬಲಿಷ್ಠರ ಹಿಡಿತದಲ್ಲಿರುವುದರಿಂದ ವಿಜ್ಞಾನ-ತಂತ್ರಜ್ಞಾನಗಳ ಜೀವಪೋಷಕ ಫಲಗಳು ದುರ್ಬಲರಿಗೆ ದೊರೆಯುವುದಿಲ್ಲ. ಇದಕ್ಕಾಗಿ ಇವುಗಳ ಮೇಲೆ ಹಿಡಿತವಿಟ್ಟುಕೊಂಡಿರುವ ಬಲಿಷ್ಠರನ್ನು ಹೊಣೆಮಾಡುವ ಬದಲು ವಿಜ್ಞಾನ-ತಂತ್ರಜ್ಞಾನಗಳನ್ನು ಹೊಣೆಮಾಡುವ ಕ್ರಮ ನಾವು ಬದುಕುವ ಸಮಾಜವು ಹೇಗೆ ಸಂಘಟಿತವಾಗಿದೆ ಮತ್ತು ಯಾರ ನಿಯಂತ್ರಣದಲ್ಲಿದೆ ಎಂಬುದರ ಬಗ್ಗೆ ಇರುವ ಅಜ್ಞಾನದ ಫಲ. ಕೋವಿಡ್ ಜಾಡ್ಯದ ಹಿಂದು-ಮುಂದಿನ ಜ್ಞಾನವು ವಿಜ್ಞಾನದ ಫಲ. ಕೋವಿಡ್ ಸೂಕ್ಷ್ಮಾಣುಗಳನ್ನು ಮನುಷ್ಯ ಜೀವನಕ್ಕೆ ಮಾರಕವಾದ ಜೀವಿಯೆಂದು ಪರಿಶೋಧಿಸಿ, ತಮ್ಮ ಪ್ರಾಣವನ್ನೇ ಒತ್ತೆಯಾಗಿರಿಸಿ ಪರಿಹಾರಕ್ಕಾಗಿ ಹೆಣಗುತ್ತಿರುವ ಪರಿಣಿತರ ದೃಷ್ಟಿಕೋನ ಮತ್ತು ಆಲೋಚನಾ ಕ್ರಮಗಳನ್ನು ರೂಪಿಸುತ್ತಿರುವುದು ವಿಜ್ಞಾನ- ತಂತ್ರಜ್ಞಾನಗಳು. ಅದನ್ನು ನಿಯಂತ್ರಿಸಲು ಆವಿಷ್ಕರಿಸಲಾದ ಲಸಿಕೆಗಳು ತಂತ್ರಜ್ಞಾನದ ನೇರ ಕೊಡುಗೆ. ಕೋವಿಡ್ ಸಂದರ್ಭದಲ್ಲಿ ಈಗಲೂ ಆಗುತ್ತಿರುವ ನರಳಿಕೆ, ಸಾವು-ನೋವುಗಳು, ದುರ್ಬಲರ ಜೀವನ ಮಟ್ಟದ ಕುಸಿತ, ಆರ್ಥಿಕ ಕಷ್ಟನಷ್ಟಗಳು, ಬಡತನ-ಹಸಿವು-ನಿರುದ್ಯೋಗಗಳು ಮತ್ತು ಕೋವಿಡ್‌ನಿಂದ ಹುಟ್ಟಿದ ತೊಂದರೆಗಳಿಗೆ ನೇರ ಕಾರಣ ವಿಜ್ಞಾನ-ತಂತ್ರಜ್ಞಾನಗಳಲ್ಲ, ಬದಲು, ಕೋವಿಡ್ ಜಾಡ್ಯವನ್ನೂ, ಅದರ ಪರಿಹಾರೋಪಾಯಗಳ ಲಭ್ಯತೆ-ಅಲಭ್ಯತೆಗಳನ್ನು ತಮ್ಮ ಲಾಭಕ್ಕಾಗಿ ನಿಯಂತ್ರಿಸುತ್ತಿರುವ ಬಲಿಷ್ಠರು ಮತ್ತು ಅವರ ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿಗಳು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)